Thursday, 14th November 2024

ನೀತಿಬೋಧೆಯ ಚಿತ್ರಗೀತೆ ಕಗ್ಗಕ್ಕಿಂತ ಕಮ್ಮಿಯೇನಲ್ಲ

ತಿಳಿರು ತೋರಣ

ಶ್ರೀವತ್ಸ ಜೋಶಿ

‘ಅಸ್ಪೃಶ್ಯನಂತೆ ಕಂಡರು…’ ಎಂಬ ಅವರ ಮಾತಿನಲ್ಲಿರುವ ನೋವನ್ನು ನಾವು ಗಮನಿಸಬೇಕು. ಆ ನೋವು ಲಘು ಬಗೆಯದಲ್ಲ ಗಾಢವಾದುದು, ಮತ್ತು ಅದು ದೊಡ್ಡರಂಗೇಗೌಡರೊಬ್ಬರದೇ ಅಲ್ಲ, ಬಹುಶಃ ಸಿನಿಮಾ ಸಾಹಿತಿಗಳೆಲ್ಲರೂ ಆ ನೋವನ್ನು ಅನುಭವಿಸಿದವರೇ.

ಅದೂ ಕನ್ನಡ ಒಂದೇ ಅಂತಲ್ಲ, ಎಲ್ಲ ಭಾರತೀಯ ಭಾಷೆಗಳ ಚಿತ್ರರಂಗಕ್ಕೂ ಈ ಮಾತು ಅನ್ವಯಿಸುತ್ತದೆ. ಕೆಲ ದಿನಗಳ ಹಿಂದೆ
‘ವಿಜಯವಾಣಿ’ ದಿನಪತ್ರಿಕೆಯಲ್ಲಿ ಕವಿ ದೊಡ್ಡರಂಗೇಗೌಡರ ಸಂದರ್ಶನವೊಂದನ್ನು ಓದುತ್ತಿದ್ದೆ. ಹಾವೇರಿಯಲ್ಲಿ ನಡೆಯ ಲಿರುವ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಅವರು ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಆ ಸಂದರ್ಶನ ಪ್ರಕಟವಾಗಿತ್ತು.

‘ಗೀತ ರಚನೆಕಾರನೆಂಬ ಕಾರಣಕ್ಕೆ ಅಸ್ಪೃಶ್ಯನಂತೆ ಕಂಡರು’ ಎಂಬ ತಲೆಬರಹ ವಿಶೇಷವಾಗಿ ನನ್ನ ಗಮನ ಸೆಳೆಯಿತು.
ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿರುವ ಬಗ್ಗೆ ಅನಿಸಿಕೆ, ಕನ್ನಡ ಭಾಷೆ, ಸಂಸ್ಕೃತಿ, ಅಳಿವು – ಉಳಿವಿನ ಬಗ್ಗೆ ಅವರ ನಿಲುವು…
ಇತ್ಯಾದಿ ಮಾಮೂಲಿ ಸರಕಿನ ಜತೆಗೆ, ‘ಸಿನಿಮಾ ಸಾಹಿತ್ಯದಿಂದಲೇ ನೀವು ಜನರಿಗೆ ಹೆಚ್ಚು ಹತ್ತಿರವಾದಿರಿ ಅಲ್ಲವೇ?’ ಎಂಬ ಸಂದರ್ಶಕರ ಪ್ರಶ್ನೆಗೆ ದೊಡ್ಡರಂಗೇಗೌಡರ ಉತ್ತರದಿಂದ ಒಂದು ವಾಕ್ಯವನ್ನು ತಲೆಬರಹವಾಗಿಸಿದ್ದರು. ಆ ಉತ್ತರ ನಿಜಕ್ಕೂ ತುಂಬ ಹೃದಯಸ್ಪರ್ಶಿ ಯಾಗಿ ಇತ್ತು.

ಅದನ್ನಿಲ್ಲಿ ಯಥಾವತ್ತಾಗಿ ದಾಖಲಿಸುತ್ತಿದ್ದೇನೆ, ಈ ಅಂಕಣ ಬರಹಕ್ಕೆ ಅದೊಂಥರ ಅಡಿಪಾಯವೂ ಆಗಿರುವುದರಿಂದ. ‘ಹೌದು. 60 ವರ್ಷದಿಂದ ನಾನು ಸಾಹಿತ್ಯಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದೇನೆ. ಆದರೂ ಜನಸಾಮಾನ್ಯರು ನನ್ನನ್ನು ಸಿನಿಮಾ ಸಾಹಿತ್ಯದ ಮೂಲಕವೇ ಹೆಚ್ಚು ಹತ್ತಿರವಾಗಿಸಿಕೊಂಡರು. ಬಸ್‌ನಲ್ಲಿ ಹೋಗುವಾಗ ಸ್ಥಳ ಬಿಟ್ಟು ಕೊಟ್ಟವರಿದ್ದಾರೆ, ಕರೆದು ಚಹಾ – ತಿಂಡಿ
ಕೊಡಿಸಿದವರಿದ್ದಾರೆ. ಅಷ್ಟು ಪ್ರೀತಿ ತೋರಿಸಿದ್ದಾರೆ. ಇನ್ನೊಂದೆಡೆ ವಿಮರ್ಶಕರು, ಸಿನಿಮಾ ಸಾಹಿತಿ ಎಂಬ ಕಾರಣಕ್ಕೆ ಅಸ್ಪೃಶ್ಯ ನಂತೆ ನನ್ನನ್ನು ಕಂಡಿದ್ದಾರೆ.

ಸಿನಿಮಾ ಸಾಹಿತ್ಯ ಬರೆಯುವುದು ಎಂದರೆ ಕೀಳು ಮಟ್ಟದ್ದು, ದೊಡ್ಡರಂಗೇಗೌಡ ತನ್ನನ್ನು ಮಾರಿಕೊಂಡಿದ್ದಾನೆ ಎಂದವರಿದ್ದಾರೆ. ಅವರಿಗೆ ತಿಳಿಸಲು ಬಯಸುವುದೇನೆಂದರೆ, ಸಿನಿಮಾ ಸಾಹಿತ್ಯದಿಂದ ದೊಡ್ಡರಂಗೇಗೌಡ ದುಡ್ಡು ಮಾಡಿಲ್ಲ. ಹಾಗೇ ಮಾಡಲು ಮುಂದಾಗಿದ್ದರೆ ಕೋಟ್ಯಧೀಶನಾಗಿರುತ್ತಿದ್ದೆ, ಇಂದಿಗೂ ಬಸ್‌ನಲ್ಲಿ ಪ್ರಯಾಣಿಸುವಂತಿರಲಿಲ್ಲ. ಇಂಥದ್ದನ್ನು ಬರೆದುಕೊಡಿ ಎಂದು ಮನೆಗೆ ಬಂದವರೆಲ್ಲರನ್ನೂ ಗೌರವಿಸಿ ಬರೆದುಕೊಟ್ಟಿದ್ದೇನೆ.’ ದೊಡ್ಡರಂಗೇಗೌಡರ ಆ ನೋವು ಅರ್ಥವಾಗುವಂಥದ್ದೇ.

ಏಕೆಂದರೆ ಚಿತ್ರಗೀತೆ ಯಾವತ್ತಿಗೂ ಸಾಹಿತ್ಯಿಕ ಮೌಲ್ಯವುಳ್ಳದ್ದಲ್ಲ, ಉತ್ತಮ ಕಲಾಕೃತಿ ಎಂದು ಕರೆಸಿಕೊಳ್ಳುವ ಯೋಗ್ಯತೆ ಅದಕ್ಕಿಲ್ಲ, ಅದೇನಿದ್ದರೂ ಅಗ್ಗದ ಮನೋರಂಜನೆಗೆಂದು ರಚಿತವಾದದ್ದು… ಕೀಳು ಮಟ್ಟದ್ದು… ಫಡಪೋಶಿ… ಅಂತೆಲ್ಲ ಮಡಿವಂತಿಕೆ ಬಹುಕಾಲ ದಿಂದ ಬಂದಿರುವಂಥದ್ದೇ. ಹಾಗಾಗಿಯೇ ಚಿತ್ರಗೀತೆ ಬರೆದವನು ತನ್ನ ಪ್ರತಿಭೆಯ ಸರ್ವಸ್ವವನ್ನೇ ಧಾರೆಯೆರೆದು ಉತ್ಕೃಷ್ಟ ಮಟ್ಟದಲ್ಲೇ ಬರೆದಿದ್ದರೂ ಆತನನ್ನು ‘ಸಾಹಿತಿ’ ಎಂದು ಪರಿಗಣಿಸಲು ಶಿಷ್ಟ ಸಮಾಜ ಒಪ್ಪುವುದಿಲ್ಲ.

ಪ್ರಶಸ್ತಿ ಗೌರವ ಬಿರುದುಬಾವಲಿಗಳನ್ನು ಕೊಡುವುದಿಲ್ಲ. ಶಿಷ್ಟ ಸಮಾಜ ಅಂದರೆ ಯಾರು? ತಮ್ಮನ್ನು ತಾವೇ ‘ಸ್ವರ್ಗದಿಂದ ಇಳಿದುಬಂದವರು’ ಎಂಬಂತೆ ಪ್ರತಿಬಿಂಬಿಸಿಕೊಳ್ಳು ವವರು. ಇಂಗ್ಲಿಷ್‌ನಲ್ಲಿ ಹೇಳುವುದಾದರೆ ‘ಎಲೀಟ್’ ವರ್ಗದವರು. ಆಕಾಶವಾಣಿಯ ಆರಂಭಿಕ ವರ್ಷಗಳಲ್ಲಿ, ಅಂದರೆ ೧೯೪೦ರಿಂದ ೫೦ರ ದಶಕದ ಕೊನೆಯವರೆಗೂ, ಚಿತ್ರಗೀತೆಗಳ ಪ್ರಸಾರ ಇಲ್ಲದಿದ್ದದ್ದು ಇದೇ ಕಾರಣದಿಂದ.

‘ಚಿತ್ರಗೀತೆಗಳನ್ನು ರೇಡಿಯೊದಲ್ಲಿ ಪ್ರಸಾರ ಮಾಡುವುದು ಸಂಸ್ಕೃತಿಗೆ ಧಕ್ಕೆ ತಂದಂತೆ’ ಎಂದು ನಿರ್ದಾಕ್ಷಿಣ್ಯದ ನಿಲುವು
ತಳೆದಿದ್ದರು. ಆಗಿನ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಬಿ.ವಿ.ಕೇಸ್ಕರ್. ‘ಶಾಸ್ತ್ರೀಯ ಸಂಗೀತ, ಮತ್ತು ಒಟ್ಟಾರೆ ಯಾಗಿ
ಭಾರತೀಯತೆಯನ್ನು ಬಿಂಬಿಸುವ ಜ್ಞಾನಪೂರ್ಣ ಕಾರ್ಯಕ್ರಮಗಳು ಮಾತ್ರ ಆಕಾಶವಾಣಿಯಲ್ಲಿ ಪ್ರಸಾರ ವಾಗಬೇಕು’ ಎಂಬುದು ಅಂದಿನ ನಿಯಮವಾಗಿತ್ತು.

ಚಿತ್ರ ನಿರ್ಮಾಪಕರು ಹಾಡುಗಳನ್ನು ಪ್ರಸಾರ ಮಾಡಲು ಕೇಳಿಕೊಂಡರೂ ಆಕಾಶವಾಣಿಯಲ್ಲಿ ಆಗ ಅವುಗಳಿಗೆ ಸ್ಥಾನ ದೊರಕಲಿಲ್ಲ. ಪಕ್ಕದ ದ್ವೀಪರಾಷ್ಟ್ರದಲ್ಲಿ ‘ಶ್ರೀಲಂಕಾ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್’ ಇದರ ಪೂರ್ಣ ಲಾಭ ಪಡೆಯಿತು. ಮುಖ್ಯವಾಗಿ ಹಿಂದಿ ಮತ್ತು ಕ್ರಮೇಣ ಇತರ ಭಾರತೀಯ ಭಾಷೆಗಳ ಚಿತ್ರಗೀತೆಗಳನ್ನು ಮನೋರಂಜನೆಗಾಗಿ ಪ್ರಸಾರ ಮಾಡಿತು. ವಾಣಿಜ್ಯೀಕರಣದ ಮಾರ್ಗವನ್ನು ಕಂಡುಕೊಂಡಿತು. ಆಮೇಲೆ ಪಾಠ ಕಲಿತ ಭಾರತ ಸರಕಾರವು ಚಿತ್ರಗೀತೆಗಳ ಪ್ರಸಾರಕ್ಕಾಗಿಯೇ ವಿವಿಧ ಭಾರತಿ ಸೇವೆಯನ್ನು ಆರಂಭಿಸಿತು. ಇದೆಲ್ಲ ಈಗ ಇತಿಹಾಸ.

ಆದರೆ ಚಿತ್ರಗೀತೆ, ಚಿತ್ರಸಾಹಿತ್ಯ, ಮತ್ತು ಚಿತ್ರಸಾಹಿತಿಗಳ ಬಗ್ಗೆ ಆ ಒಂದು ತಲೆಮಾರಿನವರು ರೂಢಿಸಿಕೊಂಡ ಮಡಿವಂತಿಕೆ ಗಟ್ಟಿಯಾಗಿ ಬೇರೂರಿತು. ಈಗೀಗ ಅದು ಸ್ವಲ್ಪ ಸಡಿಲವಾಗಿರಬಹುದಾದರೂ ನಿರ್ನಾಮವಂತೂ ಆಗಿಲ್ಲ. ಹಾಗಿದ್ದರೆ ಚಿತ್ರಗೀತೆ ನಿಜಕ್ಕೂ ಫಡಪೋಶಿಯೇ? ಖಂಡಿತ ಅಲ್ಲ! ನಮ್ಮಂಥ ಶ್ರೀಸಾಮಾನ್ಯರಿಗಂತೂ ಅಂಥದೊಂದು ಭಾವನೆ ಲವಲೇಶವೂ ಇಲ್ಲ. ಏಕೆಂದರೆ ನಾವೆಲ್ಲ ಚಿತ್ರಗೀತೆಗಳನ್ನು ಕೇಳಿಕೊಂಡೇ ಬೆಳೆದವರು. ಅವುಗಳ ಒರಿಜಿನಲ್ ರೂಪ ಸಾಕಾಗದಿದ್ದರೆ ಅಣಕವಾಡು ಗಳನ್ನೂ ಸೃಷ್ಟಿಸಿ ಮನಸ್ಸಿಗೆ ಮುದ ತಂದುಕೊಂಡವರು.

ಅಥವಾ ಯಾರಿಗೆ ಗೊತ್ತು, ಚಿತ್ರಗೀತೆಗಳು ಜನಸಾಮಾನ್ಯರನ್ನು ಇಷ್ಟೊಂದು ಖುಷಿಪಡಿಸಿರುವುದರಿಂದಲೇ ‘ಎಲೀಟ್’ ವರ್ಗದವರಿಗೆ, ತಮ್ಮನ್ನು ತಾವು ಸರಸ್ವತೀ ಪುತ್ರರು ಎಂದುಕೊಂಡವರಿಗೆ, ಅವು ಚೀಪ್ ಅಂತನಿಸುವುದೂ ಇರಬಹುದು. ನಿಜ, ಕಾಳು – ಜೊಳ್ಳು ಇದ್ದದ್ದೇ. ಇದುವರೆಗೆ ಬರೆಯಲ್ಪಟ್ಟ ಪ್ರತಿಯೊಂದು ಚಿತ್ರಗೀತೆಯೂ ಒಂದು ಅತ್ಯಮೂಲ್ಯ ಮುತ್ತು – ರತ್ನ, ಗೌರವಾರ್ಹವಾದುದು ಎಂದೆಲ್ಲ ಹುಚ್ಚು ತರ್ಕ ಇದಲ್ಲ. ಆದರೆ ಆಸಕ್ತಿಯಿಂದ ಹುಡುಕಿ ನೋಡಿದರೆ, ಮತ್ತಷ್ಟು ಸೂಕ್ಷ್ಮವಾಗಿ ಗಮನಿಸುತ್ತ ಹೋದರೆ, ಸಾರ್ವಕಾಲಿಕ ಶ್ರೇಷ್ಠ ಮೌಲ್ಯವುಳ್ಳ, ಅನರ್ಘ್ಯ ರತ್ನ ಎಂದೇ ಪರಿಗಣಿಸಬಹುದಾದ ಚಿತ್ರಗೀತೆಗಳು ಅವೆಷ್ಟಿಲ್ಲ!

ಒಂದು ಚಿಕ್ಕ ಉದಾಹರಣೆಯ ಮೂಲಕ ವಿವರಿಸುತ್ತೇನೆ: ಕಳೆದ ಭಾನುವಾರ ಇಂಗ್ಲೇಂಡ್‌ನ ಕನ್ನಡ ಬಳಗದವರು ಅಂತರಜಾಲ
ರೇಡಿಯೊದಲ್ಲಿ ಸಾಪ್ತಾಹಿಕ ಕನ್ನಡ ಪ್ರಸಾರದಲ್ಲಿ ಒಂದು ವಿಶಿಷ್ಟ ಕಾರ್ಯಕ್ರಮ ಸಾದರಪಡಿಸಿದರು. ಅದರ ಶೀರ್ಷಿಕೆ ‘ಚಿತ್ರಗೀತೆ
ನೀತಿಗೀತೆ; ಸಿನಿಮಾ ಸಂಗೀತ ಜೀವನದ ಇಂಗಿತ’. ಬದುಕಿಗೆ ಅತ್ಯಮೂಲ್ಯ ನೀತಿಸಂದೇಶ ಸಾರುವ, ಪ್ರಾತಿನಿಧಿಕ ಸ್ಯಾಂಪಲ್
ಎಂದು ಆಯ್ದ ಹನ್ನೆರಡು ಕನ್ನಡ ಚಿತ್ರಗೀತೆಗಳು, ಮತ್ತು ಪ್ರತಿಯೊಂದು ಚಿತ್ರಗೀತೆಗೂ ಕನ್ನಡದಲ್ಲೇ ಚಿಕ್ಕದೊಂದು ವ್ಯಾಖ್ಯಾನ. ಹಾಡುಗಳನ್ನು ಸಂಗ್ರಹಿಸಿ, ಸಂಕಲಿಸಿ, ನಿರೂಪಣೆಯೊಂದಿಗೆ ಪ್ರಸಾರ ಮಾಡುವ ಹೊಣೆ ಹೊತ್ತವರು ನರಹರಿ ಜೋಶಿ.

ಅವರು ನನ್ನ ಖಾಸಾ ಅಣ್ಣ, ಮೂರು ದಶಕಗಳಿಂದ ಬ್ರಿಟನ್ ಪ್ರಜೆ. ಈಗ ಹವ್ಯಾಸಕ್ಕೆಂದು ಅಲ್ಲಿ ವಾರಕ್ಕೊಮ್ಮೆ ಹಿಂದಿ ಭಾಷೆಯಲ್ಲಿ ಮಾಹಿತಿ – ರಂಜನ್ ಎಂಬ ರೇಡಿಯೊ ಕಾರ್ಯಕ್ರಮ ನಡೆಸುವವರು. ರೇಡಿಯೊ ಪ್ರಸಾರದ ತಂತ್ರಜ್ಞಾನ ಅಷ್ಟಿಷ್ಟು ತಿಳಿದವರಾದ್ದರಿಂದ ಕನ್ನಡ ಬಳಗದವರು ಅವರನ್ನು ಕೇಳಿಕೊಂಡರು. ವ್ಯಾಖ್ಯಾನಗಳ ಮೂಲಕ ಕಾರ್ಯಕ್ರಮದ ಮೌಲ್ಯ ವರ್ಧನ ಮಾಡಿದವರು ಡಾ. ವೈಶಾಲಿ ದಾಮ್ಲೆ ಮತ್ತು ಡಾ.ಗಿರಿಧರ ಹಂಪಾಪುರ. ಇಬ್ಬರದೂ ವೈದ್ಯ ವೃತ್ತಿ, ಕನ್ನಡ ಭಾಷೆ ಸಂಸ್ಕೃತಿ ಸುಗಂಧದ ಪ್ರಸರಣ ಪ್ರವೃತ್ತಿ.

ಕಾರ್ಯಕ್ರಮದಲ್ಲಿ ಅಳವಡಿಸಿಕೊಂಡಿದ್ದ ಕನ್ನಡ ಚಿತ್ರಗೀತೆಗಳು ಯಾವುವೆನ್ನುತ್ತೀರಾ? ‘ಆಗದು ಎಂದು ಕೈಕಟ್ಟಿ ಕುಳಿತರೆ…’
(ಬಂಗಾರದ ಮನುಷ್ಯ), ‘ತುತ್ತು ಅನ್ನ ತಿನ್ನೋಕೆ ಬೊಗಸೆ ನೀರು ಕುಡಿಯೋಕೆ…’(ಜಿಮ್ಮಿಗಲ್ಲು), ‘ಇಲ್ಲೇ ಸ್ವರ್ಗ ಇಲ್ಲೇ ನರಕ
ಮೇಲೇನಿಲ್ಲ ಸುಳ್ಳು…’ (ನಾಗರಹೊಳೆ), ‘ಆಡಿಸಿ ನೋಡು ಬೀಳಿಸಿ ನೋಡು…’ (ಕಸ್ತೂರಿನಿವಾಸ), ‘ಬಾನಿಗೊಂದು ಎಲ್ಲೆ ಎಲ್ಲಿದೆ…’
(ಪ್ರೇಮದ ಕಾಣಿಕೆ), ‘ಬೇಡುವೆನು ವರವನ್ನು ಕೊಡೆ ತಾಯಿ ಜನ್ಮವನು…’ (ಜೋಗಿ), ‘ನಾನೇ ಎಂಬ ಭಾವ ನಾಶವಾಯಿತು…’
(ದೇವರ ದುಡ್ಡು), ‘ಗುಡಿಯಲಿರುವ ಶಿಲೆಗಳೆಲ್ಲ ದೇವರಂತೆ…’ (ಮಕ್ಕಳ ಭಾಗ್ಯ), ‘ಮಾನವ ಮೂಳೆ ಮಾಂಸದ ತಡಿಕೆ…’
(ಭಕ್ತಕುಂಬಾರ), ‘ಗೋಪಿಲೋಲ ಹೇ ಗೋಪಾಲ ಈ ಜಗವೆಲ್ಲ ನಿನ್ನದೇ ಜಾಲ…’ (ನಾರಿ ಮುನಿದರೆ ಮಾರಿ), ‘ಬೆಳುವಲದ
ಮಡಿಲಲ್ಲಿ…’(ಬೆಳುವಲದ ಮಡಿಲಲ್ಲಿ), ಮತ್ತು ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ಆಗಿ ‘ಧರಣಿಮಂಡಲ ಮಧ್ಯದೊಳಗೆ
ಮೆರೆಯುತಿಹ…’(ತಬ್ಬಲಿಯು ನೀನಾದೆ ಮಗನೆ).

ಇದರಲ್ಲೇನಿದೆ ವಿಶೇಷ? ಈ ಎಲ್ಲ ಚಿತ್ರಗೀತೆಗಳನ್ನೂ ನಾವೆಲ್ಲ ಎಷ್ಟು ಬಾರಿ ಕೇಳಿದ್ದೇವೋ ಲೆಕ್ಕವಿಲ್ಲ! ಹಾಂ, ಬರೀ ಮನೋ ರಂಜನೆ ಗಾಗಿ ಅಥವಾ ಕಾಲಕ್ಷೇಪಕ್ಕಾಗಿ ಹಾಡು ಕೇಳುವುದಕ್ಕೂ, ಹಾಡಿನ ಸಾಹಿತ್ಯವನ್ನು ಸೂಕ್ಷ್ಮವಾಗಿ ಗಮನಿಸಿ ಅದರಲ್ಲಿರುವ ಪದ ಪದದ ಅರ್ಥ ಮತ್ತು ನೀತಿಬೋಧೆಯನ್ನು ಗಮನಿಸಿ ಕೇಳುವುದಕ್ಕೂ ತುಂಬ ವ್ಯತ್ಯಾಸವಿದೆ. ಒಂದೆರಡು ವ್ಯಾಖ್ಯಾನಗಳ ಸಾರಾಂಶದಿಂದ ನಿಮಗೆ ಮನದಟ್ಟಾಗಬಹುದು.

‘ಆಗದು ಎಂದು ಕೈಕಟ್ಟಿಕುಳಿತರೆ…’ ಹಾಡನ್ನೇ ತೆಗೆದುಕೊಳ್ಳಿ. ಇದರ ಒಂದೊಂದು ಸಾಲು ಕೂಡ ಬದುಕಿಗೆ ಪಾಠವೇ. ಮನಸೊಂದಿದ್ದರೆ ಮಾರ್ಗವು ಉಂಟು… ವ್ಹೇರ್ ದೆರ್ ಈಸ್ ಎ ವಿಲ್ ದೆರ್ ಈಸ್ ಎ ವೇ. ಕೈಕೆಸರಾದರೆ ಬಾಯ್ಮೊಸರೆಂಬ ಹಿರಿಯರ ಅನುಭವ ಸತ್ಯ. ಕಾಯಕವೇ ಕೈಲಾಸ ಎಂದು ಬಸವಣ್ಣ ಹೇಳಿದ್ದೂ ಅದನ್ನೇ. ಅಷ್ಟೇಅಲ್ಲ, ಈ ಪಾಠಗಳನ್ನು ಕನ್ನಡಿಗರಿಗೆ ಆಪ್ತವೆನಿಸುವಂತೆ ಹೇಳಿದ ರೀತಿ ಅನನ್ಯ. ಕೆತ್ತಲಾಗದು ಕಗ್ಗಲ್ಲೆಂದು ಎದೆಗುಂದಿದ್ದರೆ ಶಿಲ್ಪಿ… ಆ ಶಿಲ್ಪಿಗಳ ರಚನೆಗಳಾದರೂ ಯಾವುವು? ಗೊಮ್ಮಟೇಶ, ಬೇಲೂರು, ಹಳೆಬೀಡು!

ಅಂತೆಯೇ ವಿಶ್ವೇಶ್ವರಯ್ಯ ನವರ ಶ್ರಮದ ಫಲ ಕನ್ನಂಬಾಡಿ ಅಣೆಕಟ್ಟು. ಕರ್ನಾಟಕದ್ದೇ ಉದಾಹರಣೆಗಳು ಕನ್ನಡಿಗರಿಗೆಲ್ಲ ಸುಲಭಗ್ರಾಹ್ಯ. ಹಾಡಿನ ಸಂದೇಶ ಮನಸ್ಸಿನಲ್ಲಿ ಅಚ್ಚಳಿಯದೇ ನಿಂತಿದೆಯಾದರೆ ಈಗ ಹೇಳಿ: ಇದರ ರಚನೆಕಾರ ಆರ್.ಎನ್. ಜಯಗೋಪಾಲ್ ಪ್ರಾತಃಸ್ಮರಣೀಯರೇ ಅಥವಾ ಅಸ್ಪೃಶ್ಯ ಎಂದು ಪರಿಗಣಿಸಬೇಕಾದವರೇ? ‘ಇಲ್ಲೇ ಸ್ವರ್ಗ ಇಲ್ಲೇ ನರಕ…’ ಇದಕ್ಕೆ ವ್ಯಾಖ್ಯಾನ ಏಕೆ ಬೇಕು, ಚರಣ ಗಳನ್ನೊಮ್ಮೆ ನಿಧಾನವಾಗಿ ಓದಿಕೊಂಡರೂ ಸಾಕು: ‘ಕಪ್ಪು ಬಿಳುಪು ಬಣ್ಣ ಹೇಗೊ ಹಗಲು ರಾತ್ರಿ ಹಾಗೆ, ನಗುವು ಅಳುವು ಎರಡೂ ಉಂಟು ಬೇಡ ಅಂದ್ರೆ ಹೇಗೆ? ಬಂದಾಗ ನಗುವೇ ಹೋದಾಗ ಮಾತ್ರ ಕಣ್ಣೀರೆಕೊ ಕಾಣೆ ಕಸಿದುಕೊಳ್ಳುವ ಹಕ್ಕು ಎಂದು ಕೊಟ್ಟೋನ್ಗೇನೆ ತಾನೇ? ಬಿಸಿಲಿಗೆ ಕರಗುವ ಮಂಜೇನಲ್ಲ ಕಷ್ಟ ನಷ್ಟ ಎಲ್ಲ, ಎದುರಿಸಬೇಕು ಧೈರ್ಯದಿಂದ ಬೇರೆ ದಾರಿ ಇಲ್ಲ, ಬೆಟ್ಟ ಕೊರೆದು ದಾರಿ ಮಾಡಿ ನೀರು ನುಗ್ಗೋ ಹಾಗೆ ಮುಂದೆ ನುಗ್ಗಿ ಹೋದ್ರೆ ತಾನೇ ದಾರಿ ಕಾಣೊದ್ ನಮ್ಗೆ’.

ಎಷ್ಟು ಸರಳವಾದ ರೀತಿಯಲ್ಲಿ ಎಷ್ಟು ಗಾಢವಾದ ಸಂದೇಶ! ಕಷ್ಟ ಕಾರ್ಪಣ್ಯಗಳಲ್ಲಿ, ಸಮಸ್ಯೆಗಳ ಸುಳಿಯಲ್ಲಿ ಸಿಕ್ಕಿಕೊಂಡಿರುವ ಎಂಥವರಿಗಾದರೂ ಸಮಾಧಾನ ಒದಗಿಸಿ ಬದುಕಿನ ದಿಕ್ಕನ್ನೇ ಬದಲಾಯಿಸಬಲ್ಲ ಶಕ್ತಿಯನ್ನು ಈ ಪದಗಳಲ್ಲಿ ತುಂಬಿದ ಚಿ.ಉದಯಶಂಕರ್, ಮಹಾ ತತ್ತ್ವಜ್ಞಾನಿ ದಾರ್ಶನಿಕರಿಗಿಂತ ಯಾವುದರಲ್ಲಿ ಕಡಿಮೆ? ‘ಬಾನಿಗೊಂದು ಎಲ್ಲೆ ಎಲ್ಲಿದೆ…’ ಹಾಡಿನ ‘ಹುಟ್ಟು ಸಾವು ಬಾಳಿನಲ್ಲಿ ಎರಡು ಕೊನೆಗಳು… ಬಯಸಿದಾಗ ಕಾಣದಿರುವ ಎರಡು ಮುಖಗಳು…’ ಈ ಸಾಲು, ಭಗವದ್ಗೀತೆಯ ‘ಜಾತಸ್ಯ ಹಿ ಧ್ರುವೋ ಮೃತ್ಯುರ್ಧ್ರುವಂ ಜನ್ಮ ಮೃತಸ್ಯ ಚ| ತಸ್ಮಾದಪರಿಹಾರ್ಯೇಧಿ ರ್ಥೇ ನ ತ್ವಂ ಶೋಚಿತುಮರ್ಹಸಿ’ ಶ್ಲೋಕಕ್ಕೆ ಕನ್ನಡ – ಕನ್ನಡಿ! ಮತ್ತೊಮ್ಮೆ ಚಿ.ಉದಯಶಂಕರ್, ಗಾಢ ತತ್ತ್ವವನ್ನು ಸರಳ ಪದಗಳಲ್ಲಿ ತಿಳಿಸುವ ಅಕ್ಷರ ಗಾರುಡಿ!

ಅದೇ ರೀತಿ ‘ನಾನೇ ಎಂಬ ಭಾವ ನಾಶವಾಯಿತು…’ ಹಾಡಿನ ‘ಹೆಂಡತಿ ಮಕ್ಕಳು ಬಂಧುಬಳಗ ರಾಗಭೋಗಗಳ ವೈಭೋಗ… ಕಾಲನು ಬಂದು ಬಾ ಎಂದಾಗ ಎಲ್ಲವೂ ಶೂನ್ಯ ಚಿತೆಯೇರಿದಾಗ… ಎಲ್ಲ ಶೂನ್ಯ, ಉಳಿಯುವುದೊಂದೇ ದಾನ – ಧರ್ಮ ತಂದ ಪುಣ್ಯ’ ಸಾಲಿನಲ್ಲಿ, ಭಕ್ತಕುಂಬಾರ ಹೇಳುವ ‘ಬರುವಾಗ ಬೆತ್ತಲೆ ಹೋಗುವಾಗ ಬೆತ್ತಲೆ ಬಂದುಹೋಗುವ ನಡುವೆ ಬರೀ ಕತ್ತಲೆ… ಭಕ್ತಿಯ ಬೆಳಕು ಬಾಳಿಗೆ ಬೇಕು…’ ಸಾಲಿನಲ್ಲಿ ಹುಣಸೂರು ಕೃಷ್ಣಮೂರ್ತಿಯವರು ತತ್ತ್ವeನ ತುಂಬಿಸಿದ್ದು ಅದ್ಯಾವ ಮೋಡಿ!

ಹೇಳಹೊರಟರೆ ಇನ್ನೂ ಎಷ್ಟೋ ಒಳ್ಳೊಳ್ಳೆಯ ಚಿತ್ರಗೀತೆಗಳು ನೆನಪಿಗೆ ಬರುತ್ತವೆ. ‘ಕರುಳಿನ ಕರೆ’ ಚಿತ್ರದ ಶಿಶುಗೀತೆಯೇ
ಎನ್ನಬಹುದಾದ ‘ಅ ಆ ಇ ಈ ಕನ್ನಡದ ಅಕ್ಷರಮಾಲೆ…’ ಇದರ ಸಾಲುಸಾಲಲ್ಲೂ ನೀತಿಬೋಧೆ: ‘ಇದ್ದವರೆಲ್ಲ ಇಲ್ಲದವರಿಗೆ ನೀಡಲೇ ಬೇಕು, ಈಶ್ವರನಲ್ಲಿ ಎಂದೂ ನಂಬಿಕೆ ಇಡಬೇಕು… ಉಪ್ಪು ತಿಂದ ಮನೆಗೆ ಎರಡು ಬಗೆಯಬೇಡ, ಊರಿಗೆ ದ್ರೋಹ ಮಾಡಿ
ಬದುಕಲೆಣಿಸಬೇಡ… ಒಂದೇ ತಾಯಿ ಮಕ್ಕಳು ನಾವು ಒಂದುಗೂಡಬೇಕು, ಓದನು ಕಲಿತು ದೇಶದ ಸೇವೆಗೆ ನಿಲ್ಲಬೇಕು…’ ಹೀಗೆ ಮಕ್ಕಳಿಗೆ ನೀತಿ ಹೇಳುವ ಗೀತೆಗಳು ತುಂಬ ಇವೆ.

‘ಕೇಳಿದ್ದು ಸುಳ್ಳಾಗಬಹುದು ನೋಡಿದ್ದು ಸುಳ್ಳಾಗ ಬಹುದು…’(ರಾಮ ಲಕ್ಷ್ಮಣ), ‘ಗುಟ್ಟೊಂದ ಹೇಳುವೆ ಪುಟಾಣಿ ಮಕ್ಕಳೇ, ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ…’(ಪರೋಪಕಾರಿ), ‘ಬುದ್ಧಿಮಾತ ಕೇಳಿ ಓ ಮುದ್ದು ಮಕ್ಕಳೇ…’(ಒಲವು ಮೂಡಿದಾಗ)
ಇತ್ಯಾದಿ. ದೊಡ್ಡವರಿಗೆ ಉಪದೇಶದಂಥವು: ‘ನಿಲ್ಲು ನಿಲ್ಲೇ ಪತಂಗ ಬೇಡಬೇಡ ಬೆಂಕಿಯ ಸಂಗ…’(ಎಡಕಲ್ಲು ಗುಡ್ಡದ ಮೇಲೆ),
‘ಯೌವನದ ಹೊಳೆಯಲ್ಲಿ ಈಜಾಟ ಆಡಿದರೆ…’ (ಸಂಘರ್ಷ), ‘ನಗಬೇಡ ನಗಬೇಡ ಅವನ ನೋಡುತ ನೀನು ನಕ್ಕರೆ…’(ಬಡವರ
ಬಂಧು), ‘ನಿನ್ನ ನೀನು ಮರೆತರೇನು ಸುಖವಿದೆ…’(ದೇವರ ಕಣ್ಣು), ‘ಈ ದೇಹ ಮೂರು ದಿನ ಅಲ್ಲವೇನೋ…’(ಭೂಕೈಲಾಸ),
‘ಕೂಡಿ ಬಾಳೋಣ ಎಂದೆಂದೂ ಸೇರಿ ದುಡಿಯೋಣ…’(ಗಿರಿಕನ್ಯೆ), ‘ಈ ಭೂಮಿ ಬಣ್ಣದ ಬುಗುರಿ…’(ಮಹಾಕ್ಷತ್ರಿಯ), ‘ಬೊಂಬೆ
ಆಡ್ಸೋನು ಮೇಲೆ ಕುಂತೋನು ನಮ್ಗೆ ನಿಮ್ಗೆ ಯಾಕೆ ಟೆನ್ಷನ್ನು…’(ಡ್ರಾಮಾ).

ನೆನಪಿಗೆ ಬಂದ ಕೆಲವನ್ನಷ್ಟೇ ದಾಖಲಿಸಿದ್ದೇನೆ, ಸಮುದ್ರದಿಂದ ತಂಬಿಗೆಯಲ್ಲಿ ನೀರು ತುಂಬಿಸಿ ತಂದಂತೆ. ಕನ್ನಡೇತರ ಭಾಷೆಗಳ ಹಾಡುಗಳನ್ನೂ ಸೇರಿಸಿದರೆ, ಮೊದಲ ಸಾಲನ್ನಷ್ಟೇ ಬರೆದು ಪಟ್ಟಿ ಮಾಡಿದರೂ ದೊಡ್ಡ ಗ್ರಂಥವೇ ಆದೀತು! ಅಷ್ಟಾದರೂ ವಿಪರ್ಯಾಸ ಏನು ಗೊತ್ತೇ? ಒಬ್ಬ ಭಾಷಣಕಾರ ತನ್ನ ಭಾಷಣದಲ್ಲಿ, ಅಥವಾ ಒಬ್ಬ ಲೇಖಕ ತನ್ನ ಪ್ರಬಂಧದಲ್ಲಿ ‘ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತಣಿಂದೆತ್ತ ಸಂಬಂಧವಯ್ಯ… ಅಲ್ಲಮಪ್ರಭುಗಳು ವಚನದಲ್ಲಿ ಹೇಳಿರುವಂತೆ’ ಎಂದು ಉಲ್ಲೇಖಿಸಲು ತೋರುವ ಧೈರ್ಯ ಅಭಿಮಾನಗಳನ್ನು ‘ಮಾಮರವೆಲ್ಲೋ ಕೋಗಿಲೆ ಎಲ್ಲೋ ಏನೀ ಸ್ನೇಹ ಸಂಬಂಧ…
ಚಿ.ಉದಯಶಂಕರ್ ಚಿತ್ರಗೀತೆಯಲ್ಲಿ ಹೇಳಿರುವಂತೆ’ ಅಂತ ಉಲ್ಲೇಖಿಸಲು ತೋರಲಾರ!

‘ದೀಪವು ನಿನ್ನದೇ ಗಾಳಿಯೂ ನಿನ್ನದೇ ಆರದಿರಲಿ ಬೆಳಕು… ಕೆ. ಎಸ್. ನರಸಿಂಹಸ್ವಾಮಿಯವರು ಹೇಳಿರುವಂತೆ’ ಎಂದು ಉಲ್ಲೇಖಿಸುವಾತ ‘ನೀನೇ ಉರಿಸಿದ ದೀಪ ಗಳನ್ನು ನೀನೇ ಆರಿಸಿ ನೋಡುವೆಯಾ… ಗೀತಪ್ರಿಯ ಹೇಳಿರುವಂತೆ’ ಎಂದು ಉಲ್ಲೇಖಿಸಲಾರ! ‘ಕಗ್ಗದಲ್ಲಿ ಡಿವಿಜಿಯವರು ಹೇಳಿದಂತೆ…, ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದಂತೆ… ಅಂತೆಲ್ಲ ಕೋಟಿಸ ಬಲ್ಲವನು ಚಿತ್ರಗೀತೆಗಳ ಆದರ್ಶ ಸಾಲುಗಳನ್ನು ಕೋಟಿಸಲಾರ. ಏಕೆ ಹೀಗೆ? ಬೆಳ್ಳಾವೆ ನರಸಿಂಹ ಶಾಸ್ತ್ರಿಯವರಿಂದ ಹಿಡಿದು ಆರ್. ನಾಗೇಂದ್ರರಾವ್, ಎಚ್.ಎಲ್. ಎನ್.ಸಿಂಹ, ಸೋರಟ್ ಅಶ್ವತ್ಥ್, ಕು.ರ.ಸೀತಾರಾಮ ಶಾಸ್ತ್ರಿ, ಕಣಗಾಲ್ ಪ್ರಭಾಕರ ಶಾಸ್ತ್ರಿ, ಎಸ್.ಕೆ.ಕರೀಂ ಖಾನ್, ಸಿ.ವಿ.ಶಿವಶಂಕರ್, ಎಂ.ಎನ್.ವ್ಯಾಸರಾವ್, ಶ್ಯಾಮಸುಂದರ ಕುಲಕರ್ಣಿ, ವಿಜಯನಾರಸಿಂಹ, ಹಂಸಲೇಖ, ವಿ.ಮನೋಹರ್, ಕೆ.ಕಲ್ಯಾಣ್, ಕವಿರಾಜ್, ನಾಗೇಂದ್ರಪ್ರಸಾದ್, ಯೋಗರಾಜ ಭಟ್‌ವರೆಗಿನ ಎಷ್ಟೆಲ್ಲ ಶ್ರೇಷ್ಠ ಚಿತ್ರಸಾಹಿತಿಗಳು ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸಿದವ ರಿದ್ದರೂ, ಅವರನ್ನೆಲ್ಲ ಸಾರಸ್ವತ ಲೋಕವೇಕೆ ಗೌರವಿಸುವುದಿಲ್ಲ? ಮೊದಲೆಲ್ಲ ಆಕಾಶವಾಣಿಯಲ್ಲಾದರೂ ಚಿತ್ರಗೀತೆ ಪ್ರಸಾರದ ವೇಳೆ ಸಾಹಿತಿಯ ಹೆಸರನ್ನು ತಪ್ಪದೇ ಹೇಳಬೇಕೆಂಬ ನಿಯಮವಿತ್ತು.

ಈಗಿನ ಎಫ್.ಎಂ ವಾಹಿನಿಗಳಲ್ಲಿ ಕಿರುಚುವ ಆರ್‌ಜೆಗಳು ತಮ್ಮತಮ್ಮ ಹೆಸರನ್ನು ಬೇಕಿದ್ದರೆ ಐದು ನಿಮಿಷಕ್ಕೊಮ್ಮೆ ಉಸುರು ತ್ತಿರುತ್ತಾರೆಯೇ ವಿನಾ ಹಾಡು ಪ್ರಸಾರಿಸುವಾಗ ಅದನ್ನು ಬರೆದವರ ಹೆಸರು ಹೇಳುವ ಕ್ರಮವಿಲ್ಲ. ಅಂದರೆ ಅವರೆಲ್ಲ ಅಸ್ಪೃಶ್ಯ ರಷ್ಟೇ ಅಲ್ಲ ಅವಾಚ್ಯರು ಕೂಡ? ಇದ್ದುದರಲ್ಲಿ ಎ.ಆರ್.ಮಣಿಕಾಂತ್ ಅವರ ಕೆಲಸವನ್ನು ಶ್ಲಾಘಿಸಬೇಕು. ಅವರು ವಿಜಯ ಕರ್ನಾಟಕ ಮತ್ತು ಕನ್ನಡಪ್ರಭ ಪತ್ರಿಕೆಗಳಲ್ಲಿ ವಾರವಾರ ಬರೆದ ‘ಹಾಡು ಹುಟ್ಟಿದ ಸಮಯ’ ಅಂಕಣದ ಮೂಲಕ ಈ ಎಷ್ಟೋ ಚಿತ್ರಸಾಹಿತಿಗಳನ್ನು, ಅವರ ಬದುಕಿನ ದುರ್ಭರ ಪರಿಸ್ಥಿತಿಗಳನ್ನು, ಅಂಥ ಪರಿಸ್ಥಿತಿಗಳಲ್ಲೂ ಉತ್ಕೃಷ್ಟ ಹಾಡುಗಳು ಹುಟ್ಟಿಬಂದ ವಿವರಗಳನ್ನು ಜನಸಾಮಾನ್ಯರಿಗೆ ತಿಳಿಸಿದರು.

ಹಾಗೆಯೇ, ಎನ್.ಎಸ್. ಶ್ರೀಧರಮೂರ್ತಿ, ಡಾ.ಕೆ. ಪುಟ್ಟಸ್ವಾಮಿಯವರಂಥ ಒಬ್ಬಿಬ್ಬರು ಕನ್ನಡ ಸಿನಿಮಾ ಬಗ್ಗೆಯೇ ಬರೆಯು ವವರು, ಚಿದಂಬರ ಕಾಕತ್ಕರ್ ರಂಥ ‘ಹಳೇ ಚಿತ್ರಗೀತೆಗಳ ಹುಚ್ಚ’ರು ಬ್ಲಾಗ್ ಬರಹಗಾರರು ಮಾತ್ರ ಚಿತ್ರಸಾಹಿತಿಗಳ ಬಗ್ಗೆ ಆಗಾಗ ಅಭಿಮಾನ ವ್ಯಕ್ತಪಡಿಸುವರು.  ಅದೇ ಪುಣ್ಯ.

ನನಗನಿಸುವಂತೆ, ಕಸ್ತೂರಿನಿವಾಸ ಚಿತ್ರದ ‘ಆಡಿಸಿ ನೋಡು ಬೀಳಿಸಿ ನೋಡು’ ಹಾಡಿನಲ್ಲಿ ಬರುವ ‘ಮೈಯನೇ ಹಿಂಡಿನೊಂದರೂ ಕಬ್ಬು ಸಿಹಿಯ ಕೊಡುವುದು, ತೇಯುತಲಿದ್ದರೂ ಗಂಧದ ಪರಿಮಳ ತುಂಬಿ ಬರುವುದು, ತಾನೇ ಉರಿದರೂ ದೀಪವು ಮನೆಗೆ ಬೆಳಕ ತರುವುದು…’ ಸಾಲು ಪ್ರತಿಯೊಬ್ಬ ಚಿತ್ರಸಾಹಿತಿಯ ಬಗ್ಗೆಯೂ ಹೇಳಿರುವಂತಿದೆ ಅಲ್ಲವೇ? ಅಂದ ಹಾಗೆ ನಿಮ್ಮ ಅತ್ಯಂತ
ಇಷ್ಟದ ನೀತಿಬೋಧೆಯ ಕನ್ನಡ ಚಿತ್ರಗೀತೆ ಯಾವುದು? ಅದನ್ನು ಬರೆದ ಚಿತ್ರಸಾಹಿತಿ ಯಾರು? ತಿಳಿಸಿ.