Saturday, 14th December 2024

ಶುಭ ನುಡಿಯೇ ಶಕುನದ ಹಕ್ಕಿ; ಶುಭ ನುಡಿಯೇ !

ವಿದ್ಯಮಾನ

ವಿನಾಯಕ ವೆಂ. ಭಟ್ಟ, ಅಂಬ್ಲಿಹೊಂಡ

ನೆರೆರಾಷ್ಟ್ರಗಳು ಆರ್ಥಿಕವಾಗಿ ಕುಸಿದು ಮತ್ತೆ ಮೇಲೇರಲು ಹೆಣಗುತ್ತಿರುವಾಗ ಭಾರತ ಮಾತ್ರ ಸಮಾಧಾನಕರ ಸ್ಥಿತಿಯಲ್ಲಿರುವ ಈ ಕಾಲದಲ್ಲಿ, ‘ಬಾಂಗ್ಲಾದಲ್ಲಾಗಿದ್ದು ನಮ್ಮಲ್ಲಿಯೂ ಆಗಲಿದೆ’ ಎಂದು ಅಪಶಕುನವಾಡಿಬಿಡುವ ಮಹಾನುಭಾವರಿಗೆ ಏನನ್ನೋಣ? ಅವರದ್ದು, ಭಾರತದಲ್ಲೂ ಹೀಗೊಂದು ಅಲ್ಲೋಲ-ಕಲ್ಲೋಲ ಸೃಷ್ಟಿಯಾಗಿಬಿಡಬಹುದು ಎಂಬ ಕಳವಳವೋ, ಹೀಗೇ ಆಗಲಿ ಎಂಬ ಆಶಯವೋ?

ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮತಿಸಿದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಥ್ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತಾಡಿದ ಐವಾನ್ ಡಿಸೋಜಾ ಅವರು, ‘ರಾಜ್ಯಪಾಲರು ಕೇಂದ್ರ ಸರಕಾರದ ದಾಳದಂತೆ ವರ್ತಿಸುತ್ತಿದ್ದಾರೆ’ ಎಂದು ಆರೋಪಿಸುತ್ತಾ, ‘ರಾಜ್ಯಪಾಲರು ರಾಜೀನಾಮೆ ನೀಡುವವರೆಗೂ ಅಥವಾ ಕೇಂದ್ರ ಸರಕಾರ ಅವರನ್ನು
ಸ್ಥಳಾಂತರಿಸುವವರೆಗೂ ಅವರ ವಿರುದ್ಧ ಪಕ್ಷದಿಂದ ನಡೆಯುತ್ತಿರುವ ಆಂದೋಲನ ಮುಂದುವರಿಯುತ್ತದೆ; ಒಂದೊಮ್ಮೆ ಅವರನ್ನು ಕೇಂದ್ರ ಸರಕಾರ ಕೆಳಗಿಳಿಸದಿದ್ದರೆ ಅಥವಾ ಅವರಾಗೇ ರಾಜೀನಾಮೆ ಕೊಡದಿದ್ದರೆ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅನುಭವಿಸಿದ ಪರಿಣಾಮವನ್ನು ಗೆಹ್ಲೋಥ್ ಅವರೂ ಅನುಭವಿಸಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ’ ಎಂದರು.

ಇನ್ನೊಬ್ಬ ಮಹಾನುಭಾವರು, ‘ಬಾಂಗ್ಲಾದೇಶದ ಪ್ರಧಾನಿಗೆ ಬಂದ ಪರಿಸ್ಥಿತಿ, ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೂ ಸದ್ಯದಲ್ಲೇ ಬರಲಿದೆ’ ಎಂದು ನಾಲಿಗೆ ಹರಿಬಿಟ್ಟರು. ‘ಬಾಂಗ್ಲಾದಂತೆ ನಮ್ಮಲ್ಲೂ ಆಗಲಿಕ್ಕಿದೆ’ ಎಂದು ಹೇಳುವುದು ಈಗ ದೇಶಾದ್ಯಂತ ಒಂಥರಾ ಖಯಾಲಿ ಆಗಿಬಿಟ್ಟಿದೆ.
‘ಹಿಂದುಳಿದ ವರ್ಗದ ನಾಯಕ ಎರಡನೇ ಬಾರಿಗೆ ಮುಖ್ಯಮಂತ್ರಿ ಆಗಿರುವುದನ್ನು ವಿರೋಧಪಕ್ಷಗಳಿಗೆ ಸಹಿಸಿಕೊಳ್ಳಲಾಗುತ್ತಿಲ್ಲ’ ಎನ್ನುವವರಿಗೆ, ಹಿಂದುಳಿದ ವರ್ಗದಿಂದ ಬಂದ ರಾಜ್ಯಪಾಲರನ್ನು ಮತ್ತು ಪ್ರಧಾನಮಂತ್ರಿಗಳನ್ನು ಏಕವಚನದಲ್ಲಿ ದೂಷಿಸುವಾಗ ಜಾತಿಯ ನೆನಪೇ ಆಗುವುದಿಲ್ಲ.

ಮೋದಿ ಮತ್ತು ಗೆಹ್ಲೋಥ್ ಅವರ ಕುರಿತು ಇವರೆಲ್ಲ ಏನಾದರೂ ಹೇಳಿಕೊಳ್ಳಲಿ; ಆದರೆ, ಬಾಂಗ್ಲಾದಲ್ಲಾದಂಥ ಹಿಂಸಾತ್ಮಕ ರಾಜಕೀಯ ವಿಪ್ಲವಗಳು ಭಾರತದಲ್ಲೂ ಆಗಿ ಅರಾಜಕತೆ ಉಂಟಾಗುತ್ತದೆ ಎನ್ನುವವರಿಗೆ, ೧೪೦ ಕೋಟಿಯಷ್ಟು ಜನಸಂಖ್ಯೆ ಹೊಂದಿರುವ ಮತ್ತು ವೈರಿದೇಶಗಳಿಂದ
ಸುತ್ತುವರಿಯಲ್ಪಟ್ಟಿರುವ ಭಾರತದ ಆರ್ಥಿಕ, ಸಾಮಾಜಿಕ ಸ್ಥಿತಿ ಮತ್ತು ಭದ್ರತೆಯ ಕಥೆ ಏನಾಗಬಹುದು ಎನ್ನುವ ಕನಿಷ್ಠ ಕಲ್ಪನೆಯಾದರೂ ಇರಬೇಕು ತಾನೆ? ವಿಧಾನಸೌಧದ ಮೆಟ್ಟಿಲಿನ ಮೇಲೆಯೇ ನಿಂತು ರಾಜಕಾರಣಿಗಳ ಬೆಂಬಲಿಗರ ಗುಂಪೊಂದು ಪಾಕಿಸ್ತಾನಕ್ಕೆ ಜಯಕಾರ ಹಾಕಿದ್ದು, ರಾಮಮಂದಿರ ಉದ್ಘಾಟನೆಯ ವೇಳೆ ಬೆಂಗಳೂರಿನಿಂದ ಅಯೋಧ್ಯೆಗೆ ತೆರಳುವ ರೈಲಿನ ಮೇಲೂ ಗೋಧ್ರಾ ಮಾದರಿಯ ದಾಳಿಯಾಗಿ ದೊಡ್ಡ ಹತ್ಯಾಕಾಂಡ ನಡೆಯಲಿದೆ ಎಂದು ಜನರಲ್ಲಿ ಭಯ ಹುಟ್ಟಿಸಿದ್ದ ಬಿ.ಕೆ.ಹರಿಪ್ರಸಾದರ ಹೇಳಿಕೆ ನಮ್ಮ ನೆನಪಿನಲ್ಲಿನ್ನೂ ಹಸಿರಾಗಿರುವಾಗಲೇ ಇನ್ನೊಂದು ಅಪಶಕುನದ ವಕ್ತವ್ಯ ಬಂದಿದೆ.

ಜೀವನದಲ್ಲಿ ನಾಲ್ಕು ಒಳ್ಳೆಯ ಮಾತಾಡಲಿಕ್ಕೆ ಇವರಿಗೆಲ್ಲಾ ದಾರಿದ್ರ್ಯವೇಕೆ? ಇವರ ಬಾಯಿಂದ ಪದೇಪದೆ ಅಪಶಕುನದ ಮಾತೇ ಏಕೆ ಹೊಮ್ಮಬೇಕು?
ಇಂಥವರನ್ನು ನೋಡಿಯೇ ವರಕವಿ ಬೇಂದ್ರೆಯವರು, ‘ನಟ್ಟಿರುಳಿನ ನೆರಳಿನಲ್ಲಿ ನೊಂದಜೀವ ಮಲಗಿರಲಾಗಿ, ಸವಿಗನಸು ಕಾಣುವಾಗ ಗೂಗೆಯೊಂದು ಘೂಕ್ಕೆನುತಿತ್ತ, ಶುಭ ನುಡಿಯೆ, ಶುಭ ನುಡಿಯೆ ಶಕುನದ ಹಕ್ಕಿ’ ಎಂದು ಹೇಳಿದ್ದಿರಬೇಕು. ಹಗಲು, ಮನುಷ್ಯನನ್ನು ಹಿಂಡಬಹುದಾದ ಸಮಯವಾದರೆ, ಇರುಳು ಆತನಿಗೆ ನೆಮ್ಮದಿಯ ನಿದ್ರೆ ಕೊಡುವ ಸಮಯ. ನೊಂದಜೀವವು ಈ ನಟ್ಟಿರುಳ ನೆರಳಿನಲ್ಲಿ ನೆಮ್ಮದಿಯನ್ನು ಪಡೆದು ಸವಿಗನಸು ಕಾಣುತ್ತಿರು ವಾಗ, ಅಪಶಕುನದ ಹಕ್ಕಿಯೆಂದೇ ಕರೆಸಿಕೊಳ್ಳುವ ಗೂಬೆಯೊಂದರ ಚೀತ್ಕಾರದ ಧ್ವನಿ, ನೊಂದು ಮಲಗಿದವನನ್ನು ಎಚ್ಚರಿಸಿ, ಅವನಿಗೆ ಅಪಶಕುನದ ಸೂಚನೆಯಾಗಿ ಕಾಡುತ್ತದೆ. ಹಾಗಾಗಿ, ಈ ಗೂಬೆಯ ಚೀತ್ಕಾರದಿಂದ ಏನೂ ತೊಂದರೆಯಾಗುವುದಿಲ್ಲ ಎನ್ನುವ ಶುಭನುಡಿಯನ್ನು ಎಲೈ ಶಕುನದ ಹಕ್ಕಿಯೇ ನೀನಾದರೂ ಹೇಳು ಎನ್ನುತ್ತಾರೆ ವರಕವಿ.

ಕೋವಿಡ್‌ನ ದುಃಸ್ವಪ್ನ ಕಳೆದು, ಶಾಹೀನ್ ಬಾಗ್ ಅನ್ನು ದಾಟಿ, ರೈತ ಹಿತಾಸಕ್ತಿಯನ್ನೂ ಮೀರಿ ಬೆಳೆದಿದ್ದ ರೈತಹೋರಾಟವನ್ನು ಸಂಭಾಳಿಸಿ, ಅನೇಕ ಆಂತರಿಕ ಒಡಕುಗಳ ಮಧ್ಯದಲ್ಲೇ ಜಾಗತಿಕ ವಿಪ್ಲವಗಳಿಗೆ ವಿರುದ್ಧವಾಗಿ ನಾವು ಗಟ್ಟಿಯಾಗಿ ನಿಂತಿದ್ದೇವೆ; ಸುತ್ತಮುತ್ತಲಿನ ಎಲ್ಲಾ ದೇಶಗಳೂ
ಆರ್ಥಿಕವಾಗಿ ಕುಸಿದು ಮತ್ತೆ ಮೇಲೇರಲು ಏದುಸಿರು ಬಿಡುತ್ತಿರುವಾಗ ಭಾರತ ಮಾತ್ರ ಸಾಮಾಜಿಕವಾಗಿ, ಆರ್ಥಿಕವಾಗಿ ಸಮಾಧಾನಕರ ಸ್ಥಿತಿಯಲ್ಲಿರುವ ಈ ಕಾಲದಲ್ಲಿ, ‘ಬಾಂಗ್ಲಾದಲ್ಲಾಗಿದ್ದು ನಮ್ಮಲ್ಲಿಯೂ ಆಗಲಿದೆ’ ಎಂದು ಸುಲಭವಾಗಿ ಅಪಶಕುನವಾಡಿಬಿಡುವ ಮಹಾನುಭಾವರಿಗೆ ಏನನ್ನೋಣ? ಅವರದ್ದು, ಭಾರತದಲ್ಲೂ ಹೀಗೊಂದು ಅಲ್ಲೋಲ-ಕಲ್ಲೋಲ ಸೃಷ್ಟಿಯಾಗಿಬಿಡಬಹುದು ಎಂಬ ಕಳವಳವೋ ಅಥವಾ ಹೀಗೇ ಆಗಲಿ ಎಂಬ ಆಶಯವೋ ಎಂಬುದು ಸ್ಪಷ್ಟವಾಗಿ ತಿಳಿಯುತ್ತಿಲ್ಲ.

ಕೇವಲ ತಮ್ಮ ನಾಯಕರುಗಳನ್ನು ಮೆಚ್ಚಿಸುವ ಉದ್ದೇಶದಿಂದ ದೇಶದ ಹಿತಾಸಕ್ತಿಯ ವಿರುದ್ಧ ಮಾತಾಡುವ ಇವರ ಮನಸ್ಥಿತಿಯನ್ನು ಸಾರ್ವಜನಿಕರು ಇಂದಲ್ಲಾ ನಾಳೆ ಧಿಕ್ಕರಿಸದಿರಲಾರರು. ಹಾಗೆ ನೋಡಿದರೆ, ಇಂಥ ಬೇಜವಾಬ್ದಾರಿಯ ಮಾತುಗಳಿಂದ ಇವರ ನಾಯಕರುಗಳಿಗೆ ಮತ್ತು ಪಕ್ಷಕ್ಕೆ ಇನ್ನಷ್ಟು ಮುಜುಗರವಾಗುತ್ತದೆಯೇ ಹೊರತು, ಅನುಕೂಲವಂತೂ ಸರ್ವಥಾ ಆಗುವುದಿಲ್ಲ. ಇಂಥ ರಾಜಕೀಯ ದಂಗೆ, ಹಿಂಸಾಚಾರಗಳಿಂದಾಗಿ ಉಂಟಾಗುವ ಅರಾಜಕತೆಯಿಂದ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ದೇಶ ಅನುಭವಿಸಬಹುದಾದ ದೂರಗಾಮಿ ದುಷ್ಪರಿಣಾಮಗಳ ಅರಿವು, ಸಾರ್ವಜನಿಕ ಜೀವನದಲ್ಲಿರುವ ಇವರುಗಳಿಗೆ ಕಿಂಚಿತ್ತಾದರೂ ಇರಬೇಕಲ್ಲವೇ? ಕೋವಿಡ್ ಮಹಾಮಾರಿಯು ಜಗತ್ತನ್ನು ಆವರಿಸುವ ಮೊದಲು, ಪ್ರಪಂಚದ ಅನೇಕ ಕಡೆ ಅಶಾಂತಿ ಹೊಗೆಯಾಡುತ್ತಿದ್ದಾರೂ, ಈ ಸಾಂಕ್ರಾಮಿಕ ರೋಗದ ಪರಿಣಾಮ ತಗ್ಗತೊಡಗಿದಂತೆ ಈ ತರಹದ ದಂಗೆಗಳು ಜಗತ್ತಿನಾದ್ಯಂತ ಮತ್ತೆ ತಲೆಯೆತ್ತತೊಡಗಿದವು.

ಕೋವಿಡ್‌ನ ಆಘಾತದಿಂದ ಜಗತ್ತಿನ್ನೂ ಆರ್ಥಿಕವಾಗಿ ಪೂರ್ತಿಯಾಗಿ ಚೇತರಿಸಿಕೊಂಡಿಲ್ಲ. ಸಾಲದೆಂಬಂತೆ, ವಿವಿಧೆಡೆ ನಡೆಯುತ್ತಿರುವ ವಿವಿಧ ಸಂಘರ್ಷಗಳಿಂದಾಗಿ ಜಾಗತಿಕ ಅರ್ಥವ್ಯವಸ್ಥೆಯ ಬೆಳವಣಿಗೆಯು ಮೂರು ಮೆಟ್ಟಿಲು ಹತ್ತಿ ಆರನ್ನು ಇಳಿದ ಹಾಗಾಗಿದೆ. ಕಳೆದ ವರ್ಷಾರಂಭದಲ್ಲಿ ಉಕ್ರೇನ್ ಮೇಲಿನ ರಷ್ಯಾದ ಆಕ್ರಮಣ ಮತ್ತು ಗಾಜಾಪಟ್ಟಿಯಲ್ಲಿ ಧ್ವನಿಸುತ್ತಿರುವ ಮರಣಮೃದಂಗ ಇವು, ಚೇತರಿಸಿಕೊಳ್ಳುತ್ತಿದ್ದ ವಿಶ್ವ ಆರ್ಥಿಕತೆಗೆ ದೊಡ್ಡ ಹೊಡೆತವನ್ನೇ ನೀಡಿದವು. ಹೀಗೆ ವೈಶ್ವಿಕವಾಗಿ ಆರ್ಥಿಕ ಕುಸಿತದ ಬಿಸಿ ಅನುಭವಿಸುತ್ತಿರುವ ಜನತೆಯು ತನ್ನ ಹತಾಶೆಯನ್ನೇ ದಂಗೆ, ಸಾಮಾಜಿಕ ಸಂಘರ್ಷಗಳ ಮೂಲಕ ಬಹಿರಂಗಪಡಿಸುತ್ತಿದೆ ಎನ್ನಬಹುದೇನೋ!

ಇತ್ತೀಚಿನ ಅಧ್ಯಯನವೊಂದರ ಪ್ರಕಾರ, ಜಗತ್ತಿನ ಆರ್ಥಿಕ ಪ್ರಗತಿಗೆ ತಡೆಯುಂಟುಮಾಡಬಹುದಾದ ಅಗ್ರಗಣ್ಯ ೧೦ ಅಪಾಯಗಳಲ್ಲಿ ‘ರಾಜಕೀಯ ವಿಪ್ಲವಗಳು ಮತ್ತು ಹಿಂಸಾಚಾರಗಳು’ ಸೇರಿವೆ. ಜಾಗತಿಕ ಅಪಾಯ ನಿರ್ವಹಣಾ ತಜ್ಞರ ಪ್ರಕಾರ, ಇತ್ತೀಚಿನ ವರ್ಷಗಳಲ್ಲಿ ಜಾಗತಿಕವಾಗಿ ನಡೆದ ಸರಕಾರ-ವಿರೋಧಿ ಪ್ರತಿಭಟನೆಗಳಲ್ಲಿ ಅರ್ಧಕ್ಕಿಂತ ಹೆಚ್ಚಿನವು ನೇರವಾಗಿ ಅಥವಾ ಪರೋಕ್ಷವಾಗಿ ಆರ್ಥಿಕ ಸಮಸ್ಯೆಗಳಿಂದ ಪ್ರಚೋದಿಸಲ್ಪಟ್ಟಂಥವು; ತಮ್ಮ ಆರ್ಥಿಕ ಭವಿಷ್ಯದ ಬಗ್ಗೆ ಸಾರ್ವಜನಿಕ ವಿಶ್ವಾಸವು ಅಲುಗಾಡುತ್ತಿರುವುದರಿಂದ ಇಂಥ ಸಾಮಾಜಿಕ ಅಶಾಂತಿಯು ಸಂಭವಿಸುತ್ತದೆ ಎನ್ನಲಾಗುತ್ತಿದೆ.

ಬಾಂಗ್ಲಾದ ಪ್ರಸಕ್ತ ಸ್ಥಿತಿಯನ್ನು ಗಮನಿಸುವುದಾದರೆ, ಮೀಸಲಾತಿಯ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗಳು ಭುಗಿಲೆದ್ದ ನಂತರ ದೇಶವು ತೀವ್ರ ರಾಜಕೀಯ ಬಿಕ್ಕಟ್ಟಿಗೆ ಸಿಲುಕಿತು. ವಿದೇಶಿ ಶಕ್ತಿಗಳೂ ಈ ದಂಗೆಯ ಹಿಂದಿವೆ ಎನ್ನುವುದು ಅಲ್ಲಿನ ವಿಚಾರವಾದಿಗಳ ಅಭಿಪ್ರಾಯ. ಪ್ರತಿಭಟನಾಕಾರರ ಕೈ ಮೇಲಾಗುತ್ತಿದ್ದಂತೆ ಅಲ್ಲಿನ ಸೇನೆ ತನ್ನ ಪ್ರಧಾನಿಗೆ ರಕ್ಷಣೆ ನೀಡುವ ಬದಲು, ಪ್ರಧಾನಿ ಸ್ಥಾನಕ್ಕೆ ರಾಜೀನಾಮೆಯಿತ್ತು ಭಾರತಕ್ಕೆ ಪಲಾಯನ ಮಾಡುವಂತೆ
ಸೂಚಿಸಿತು. ಸಾವಿರಾರು ಪ್ರತಿಭಟನಾಕಾರರು ಪ್ರಧಾನಿ ನಿವಾಸಕ್ಕೆ ನುಗ್ಗಿ ಲೂಟಿಮಾಡಿದರು, ಹಲವಾರು ಪೊಲೀಸ್ ಠಾಣೆಗಳು ಮತ್ತು ಇತರ ಸಾರ್ವ ಜನಿಕ ಆಸ್ತಿಪಾಸ್ತಿಗಳನ್ನು ನಿರ್ದಯವಾಗಿ ಧ್ವಂಸಗೊಳಿಸಿದರು. ಅವರು ಕಂಡಕಂಡಲ್ಲಿ ಬೆಂಕಿ ಹಚ್ಚಿದ, ವಾಹನಗಳನ್ನು ಹಾನಿಗೊಳಿಸಿದ, ಹಸೀನಾ
ಅವರ ತಂದೆ ಶೇಖ್ ಮುಜಿಬುರ್ ರೆಹಮಾನ್ ಅವರ ಪ್ರತಿಮೆಯನ್ನು ನೆಲಸಮಗೊಳಿಸಿದ, ಅಲ್ಲಿನ ಅಲ್ಪಸಂಖ್ಯಾತರುಗಳನ್ನು ವಿನಾಕಾರಣ ಹಿಂಸಿಸಿದ ಮತ್ತು ಬೀದಿಬೀದಿಗಳಲ್ಲಿ ಹೆಣಗಳನ್ನು ತಲೆಕೆಳಗಾಗಿ ನೇತುಹಾಕಿದ ಭಯಾನಕ ದೃಶ್ಯಗಳು ಅಲ್ಲಿನ ಹಿಂಸಾಚಾರದ ತೀವ್ರತೆಗೆ ಸಾಕ್ಷಿ.

ಬಾಂಗ್ಲಾ ಹಿಂಸಾಚಾರದಲ್ಲಿ ೬೫೦ ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದ್ದರೂ, ಸಾವಿರಾರು ಜನರ ಮಾರಣಹೋಮವಾಗಿದೆ ಎನ್ನಲಾಗುತ್ತದೆ (ಸತ್ತವರಲ್ಲಿ ಹೆಚ್ಚಿನವರು ಅಲ್ಪಸಂಖ್ಯಾತರಾದ ಹಿಂದೂಗಳು). ಜಾಗತಿಕವಾಗಿ ಆರ್ಥಿಕ ಮತ್ತು ರಾಜಕೀಯ ಸ್ಥಿತಿಗತಿಗಳು ಅತ್ಯಂತ ಗೊಂದಲಮಯ ವಾಗಿರುವ ಈ ಸನ್ನಿವೇಶದಲ್ಲಿ, ಬಾಂಗ್ಲಾದಲ್ಲಿನ ಹಿಂಸಾತ್ಮಕ ಆಂದೋಲನವು ಅರಾಜಕತೆ ಯನ್ನು ಹುಟ್ಟುಹಾಕಿ ದೇಶದ ಅರ್ಥವ್ಯವಸ್ಥೆಗೆ ಮರ್ಮಾಘಾತ ನೀಡಿತು. ಅರ್ಥವ್ಯವಸ್ಥೆಯ ಕುಸಿತವನ್ನು ತಡೆದು, ಕಾನೂನು-ಸುವ್ಯವಸ್ಥೆಯನ್ನು ಮರುಸ್ಥಾಪಿಸಲು ಅಲ್ಲಿನ ಮಧ್ಯಂತರ ಸರಕಾರ ಹರಸಾಹಸ ಪಡುತ್ತಿದೆ.

ಅಲ್ಲಿನ ಯುವವಿದ್ಯಾರ್ಥಿಗಳು ನಡೆಸಿದ್ದಾರೆ ಎನ್ನಲಾಗುತ್ತಿರುವ ಈ ಹಿಂಸಾಚಾರಕ್ಕೆ ದೇಶ ಭಾರಿ ಬೆಲೆ ತೆರಬೇಕಾಗುತ್ತದೆ ಮತ್ತು ಇದು ಬಾಂಗ್ಲಾದ ಬೆಳೆಯು ತ್ತಿರುವ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಅಲ್ಲಿನ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ ಹೇಳಿದೆ. ಬಾಂಗ್ಲಾದೇಶದ ರಫ್ತುಗಳಲ್ಲಿ ಸುಮಾರು ೮೫ ಪ್ರತಿಶತವನ್ನು ಉತ್ಪಾದಿಸುವ, ಪ್ರವರ್ಧಮಾನಕ್ಕೆ ಬರುತ್ತಿರುವ ಸಿದ್ಧ ಉಡುಪು ವಲಯವು ಈಗ ಸಂಪೂರ್ಣವಾಗಿ ನೆಲಕಚ್ಚಿದೆ.

ವಿಶ್ವದ ಅಗ್ರಗಣ್ಯ ಬ್ರ್ಯಾಂಡ್‌ಗಳಿಗೆ ಸಿದ್ಧ ಉಡುಪುಗಳನ್ನು ಪೂರೈಸುವ ಅನೇಕ ಕಾರ್ಖಾನೆಗಳು ದುಷ್ಕರ್ಮಿಗಳ ದಾಳಿಯಿಂದಾಗಿ ಈಗ ಮುಚ್ಚಲ್ಪಟ್ಟಿವೆ
ಮತ್ತು ಲಕ್ಷಾಂತರ ಜನ ನಿರುದ್ಯೋಗಿಗಳಾಗಿ ಬೀದಿಗೆ ಬಂದಿದ್ದಾರೆ. ದೇಶದ ಯುವಕರನ್ನು ಅದಾಗಲೇ ಕಾಡುತ್ತಿದ್ದ ಈ ನಿರುದ್ಯೋಗ ಸಮಸ್ಯೆಯೇ ಬಾಂಗ್ಲಾದಲ್ಲಿ ವಿದ್ಯಾರ್ಥಿಗಳ ನೇತೃತ್ವದಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಯ ಹಿಂದಿನ ಪ್ರಮುಖ ಕಾರಣವೆನ್ನಲಾಗುತ್ತದೆ. ಯಾವುದೇ ರಾಷ್ಟ್ರದಲ್ಲಿ
ನಡೆಯುವ ಇಂಥ ಹಿಂಸಾಚಾರಗಳು ಅಲ್ಲಿನ ಆರ್ಥಿಕ ಚಟುವಟಿಕೆಗಳ ಮೇಲೆ ಮಾರಕ ಪರಿಣಾಮ ಉಂಟುಮಾಡುವುದು ಮತ್ತು ಮಾನವ ಉತ್ಪಾದಕ ತೆಯ ಮೇಲೂ ಗಂಭೀರ ಪರಿಣಾಮ ಬೀರುವುದು ಸಹಜವೇ ಆಗಿದೆ.

೧೯೭೧ರ ಯುದ್ಧದಲ್ಲಿ ಭಾಗವಹಿಸಿದ ಅಲ್ಲಿನ ಸೈನಿಕರ ಕುಟುಂಬಗಳಿಗೆ ಸರಕಾರಿ ಉದ್ಯೋಗಗಳಲ್ಲಿ ಶೇ.೩೦ರಷ್ಟು ಮೀಸಲಾತಿ ನೀಡುವ ಕೋಟಾ ವ್ಯವಸ್ಥೆಯೇ ಈ ಪ್ರತಿಭಟನೆಗಳಿಗೆ ಪ್ರಚೋದಿಸಿತು; ಈ ಕೋಟಾವನ್ನು ರದ್ದುಪಡಿಸಿ, ಅದರ ಬದಲಿಗೆ ಅರ್ಹತೆ ಆಧರಿತ ವ್ಯವಸ್ಥೆಯನ್ನು ಜಾರಿಗೆ ತರಬೇಕೆಂಬುದು ಪ್ರತಿಭಟನಾಕಾರರ ಮುಖ್ಯ ಬೇಡಿಕೆಯಾಗಿತ್ತು. ಭಾರತದಲ್ಲಿ ಸ್ವಾತಂತ್ರ್ಯ ಬಂದ ೭೫ ವರ್ಷಗಳ ನಂತರವೂ ಜಾತಿ ಜನಗಣತಿಯ ಕುರಿತು, ಮೀಸಲಾತಿಯ ಕೆನೆಪದರಗಳ ಕುರಿತು ಮತ್ತು ಮೀಸಲಾತಿಯನ್ನು ಶೇ.೫೦ಕ್ಕಿಂತ ಹೆಚ್ಚಿಸಬೇಕು ಎಂದು ನಮ್ಮ ಕೆಲವು ಪಕ್ಷಗಳು ಹಾಗೂ ರಾಜಕಾರಣಿಗಳು ಒಂದೇ ಸಮನೆ ವರಾತ ಹಚ್ಚಿಕೊಂಡು ಸರಕಾರವನ್ನು ಆಗ್ರಹಿಸುತ್ತಿರುವ ಈ ಕಾಲಘಟ್ಟದಲ್ಲಿ, ನಮ್ಮಲ್ಲಿನ ವಿದ್ಯಾರ್ಥಿಗಳೂ ಸಂಘಟಿತ ರಾಗಿ ಬಾಂಗ್ಲಾದ ಯುವಕರ ಮಾದರಿಯಲ್ಲಿ, ‘ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಜಾತಿ ಆಧರಿತ ಮೀಸಲಾತಿಯನ್ನು ತೆಗೆದುಹಾಕಬೇಕು; ಅದರ
ಬದಲಿಗೆ, ಕೇವಲ ಅರ್ಹತೆ ಆಧರಿತ ವ್ಯವಸ್ಥೆಯನ್ನು ಜಾರಿಗೆ ತರಬೇಕು’ ಎಂದು ಹಠಹಿಡಿದು ಹಿಂಸಾತ್ಮಕ ಆಂದೋಲನಕ್ಕಿಳಿದರೆ ಏನಾಗಬಹುದು? ಬಾಂಗ್ಲಾದಲ್ಲಾದಂತೆ ಭಾರತ ದಲ್ಲೂ ದಂಗೆಯ ಸ್ಥಿತಿ ನಿರ್ಮಾಣವಾಗಬೇಕು ಎಂದು ಬಯಸುವವರೇ ಈಗ ಹೇಳಿ, ನಿಮಗೆ ನಮ್ಮ ದೇಶದಲ್ಲಿ ಅರ್ಹತೆ ಆಧರಿತ ವ್ಯವಸ್ಥೆ ಒಪ್ಪಿಗೆಯೇ? ಎಚ್ಚರಾದ ಪೆಚ್ಚುಮನವು ಹುಚ್ಚೆದ್ದು ಹರಿಯುತಿರಲು ನಿದ್ದೆಯಿಲ್ಲ, ಆಕಳಿಸಿದರೂ ಹಲ್ಲಿಯೊಂದು ಲೊಟಗುಡತಿತ್ತ,
ಶುಭನುಡಿಯೆ ಶುಭನುಡಿಯೆ ಶಕುನದ ಹಕ್ಕಿ’ ಎಂದಿದ್ದಾರೆ ಬೇಂದ್ರೆಯವರು. ಗೋಡೆಯ ಮೇಲಿನ ಹಲ್ಲಿಯು ಲೊಚಗುಟ್ಟಿದಂತೆ, ದೇಶದ ವಿರುದ್ಧ ಅಪಶಕುನ ನುಡಿಯುವ ಹಕ್ಕಿಗಳು ಮತ್ತು ಹಲ್ಲಿಗಳ ನಡುವೆ, ಭಾರತದ ಪರ ಶುಭನುಡಿಯುವ ಹಕ್ಕಿಯನ್ನು ಹುಡುಕಲು ಯತ್ನಿಸೋಣ!

(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)