ತನ್ನಿಮಿತ್ತ
ಟಿ.ಎಂ.ಸತೀಶ್
ಗೋಪಾಲಕೃಷ್ಣ ಅವರು ಕೇವಲ ಅಂಕಿ-ಅಂಶ ಪರಿಣತರಷ್ಟೇ ಅಲ್ಲ, ಹೆಸರಾಂತ ಸ್ಕೋರರ್ ಕೂಡ. ಉದ್ದನೆಯ ಸ್ಕೋರ್ ಕಾರ್ಡ್ ರಿಜಿಸ್ಟರ್‌ನಲ್ಲಿ ಅವರು ಅಧಿಕೃತವಾಗಿ ಕ್ರಿಕೆಟ್ ಸ್ಕೋರ್ ದಾಖಲಿಸುತ್ತಿದ್ದರು. ಈ ಕಾಯಕದಲ್ಲೂ ಅವರು 50 ವರ್ಷ ಪೂರೈಸಿದ ಸಾಧನೆ ಮಾಡಿದ್ದಾರೆ. ಹಲವು ಹೆಸರಾಂತ ಪತ್ರಿಕೆಗಳಿಗೆ ನಿರಂತರವಾಗಿ ಮಾಹಿತಿಯ ಕಣಜವಾಗಿ ಕಾರ್ಯ ನಿರ್ವಹಿಸಿರುವ ಗೋಪಾಲಕೃಷ್ಣ, ಕ್ರಿಕೆಟ್ ತಾರೆಯರ ಬಗ್ಗೆ ಪುಸ್ತಕ ಬರೆದಿರುವ ನೂರಾರು ಲೇಖಕರಿಗೆ ಅಂಕಿ-ಅಂಶ ಒದಗಿಸಿದ್ದಾರೆ.
ಈಗ ನಮಗೆ ಯಾವುದೇ ಮಾಹಿತಿ, ಅಂಕಿ ಅಂಶ ಬೇಕೆಂದರೂ ನಾವು, ನೀವೆಲ್ಲರೂ ತಕ್ಷಣ ಗೂಗಲ್‌ನಲ್ಲಿ ಹುಡುಕುತ್ತೇವೆ. ಆದರೆ, ೧೫-೨೦ ವರ್ಷಗಳ ಹಿಂದೆ
ಇಂಟರ್‌ನೆಟ್, ಈ ಗೂಗಲ್ ಸರ್ಚ್ ಅವಕಾಶ ಎಲ್ಲರಿಗೂ ಇಲ್ಲದಿದ್ದ ಕಾಲದಲ್ಲಿ, ಗೂಗಲ್‌ನಂತೆಯೇ ತ್ವರಿತವಾಗಿ ಇಂತಹ ಮಾಹಿತಿ ಒದಗಿಸುವ ಪರಿಣತರೇ
ಇರುತ್ತಿದ್ದರು.
ಆಗ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳಿರುವ ಭಾರತದಲ್ಲಿ ಕ್ರಿಕೆಟ್‌ಗೆ ಸಂಬಂಧಿಸಿದ ದಾಖಲೆಗಳ ಅಂಕಿ-ಅಂಶ ಒದಗಿಸುವವರಂತೂ, ಕ್ರೀಡಾ ವರದಿಗಾರರ ಪಾಲಿಗೆ ಕಲ್ಪವೃಕ್ಷ, ಕಾಮಧೇನುವೇ ಆಗಿದ್ದರು. ಅದು ರಣಜಿ ಪಂದ್ಯವೇ ಇರಲಿ, ವಿವಿಧ ದೇಶಗಳ ನಡುವಿನ ಟೆಸ್ಟ್ ಪಂದ್ಯವೇ ಆಗಿರಲಿ, ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವೇ ಇರಲಿ, ವಿಶ್ವಕಪ್ ಹಣಾಹಣಿಯೇ ಆಗಿರಲಿ, ಕ್ರೀಡಾ ವರದಿಗಾರರ ಗ್ಯಾಲರಿಯಲ್ಲಿ ಸದಾ ಇದ್ದು ನೀಡುತ್ತಿದ್ದ ದಾಖಲೆಯ ವಿವರಗಳು, ಕ್ರಿಕೆಟ್ ಕಾಮೆಂಟರಿಯೇಟರ್‌ಗಳಿಗೆ ಮತ್ತು ಪತ್ರಕರ್ತರಿಗೆ ಮಾಹಿತಿಯ ಮೂಲ ಸೆಲೆಯಾಗಿತ್ತು.
ಕ್ರಿಕೆಟ್ ದಂತ ಕತೆ, ಕಪಿಲ್ ದೇವ್ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಅನುರಾಸಿರಿ ವಿಕೆಟ್ ಉರುಳಿಸಿ, 431 ವಿಕೆಟ್‌ಗಳಿಸುವ ಮೂಲಕ ಸರ್ ರಿಚರ್ಡ್ ಹ್ಯಾಡ್ಲಿ ದಾಖಲೆ ಸರಿಗಟ್ಟಿದರು. ಕ್ರೀಡಾಂಗಣದಲ್ಲಿ ಸಂಭ್ರಮ ಮನೆ ಮಾಡಿತ್ತು. ಕ್ರಿಕೆಟ್ ಪ್ರೇಮಿಗಳು ಎದ್ದು ನಿಂತು ಕೇಕೆ ಹಾಕುತ್ತಾ ಸಂಭ್ರಮಿಸುತ್ತಿದ್ದರು. ಪತ್ರಕರ್ತರಿಗೆ ಹ್ಯಾಡ್ಲಿ ಎಷ್ಟು ಪಂದ್ಯದಲ್ಲಿ ಈ ಸಾಧನೆ ಮಾಡಿದರು, ಕಪಿಲ್ ದೇವ್ ಎಷ್ಟು ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ.
ಬೇರೆ ಯಾವ ಯಾವ ದೇಶಗಳ ಬೌಲರ್‌ಗಳು ಎಷ್ಟು ವಿಕೆಟ್ ಪಡೆದಿದ್ದಾರೆ. ರಿಚರ್ಡ್ ಹ್ಯಾಡ್ಲಿ ದಾಖಲೆಯನ್ನು ಎಷ್ಟು ವರ್ಷಗಳ ನಂತರ ಮುರಿಯಲಾಯಿತು. ಹೀಗೆ, ನೂರಾರು ರೀತಿಯ ಮಾಹಿತಿಯನ್ನು ಅಂಕಿ ಅಂಶ ಪರಿಣತರು, ನೇರ ವೀಕ್ಷಕ ವಿವರಣೆಕಾರರಿಗೆ, ಪತ್ರಕರ್ತ ರಿಗೆ ಒದಗಿಸುತ್ತಿದ್ದರು. ಅಂತಹ ಅಂಕಿ-ಅಂಶ ಪರಿಣತರಲ್ಲಿ ಕನ್ನಡಿಗ ಎಚ್.ಆರ್. ಗೋಪಾಲಕೃಷ್ಣ ಅವರೂ ಒಬ್ಬರು.
ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲೂಕು, ಹಿರಿಸಾವೆಯಲ್ಲಿ ರಾಮಸ್ವಾಮಿ ಮತ್ತು ಲಕ್ಷ್ಮೀದೇವಿ ಅವರ ಪುತ್ರನಾಗಿ 1946ರ ಆಗ 12ರಂದು ಜನಿಸಿದ ಗೋಪಾಲಕೃಷ್ಣ, ಓದಿದ್ದು ಎಲೆಕ್ಟ್ರಿಕಲ್ ಎಂಜಿನಿಯರಿಂಗ್. ವೃತ್ತಿ ಮಾಡಿದ್ದು ಬ್ಯಾಂಕರ್ ಆಗಿ. ಆದರೆ ಇವರ ಪ್ರವೃತ್ತಿ, ಹವ್ಯಾಸ, ಆಸಕ್ತಿ ಎಲ್ಲವೂ ಕ್ರಿಕೆಟ್ ಮೇಲಿತ್ತು. ಹೀಗಾಗಿಯೇ ಕ್ರಿಕೆಟ್‌ಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನೂ ಸಂಗ್ರಹಿಸುತ್ತಿದ್ದರು. ನೆನಪಿನಲ್ಲಿಟ್ಟುಕೊಳ್ಳುತ್ತಿದ್ದರು. ದಾಖಲು ಮಾಡುತ್ತಿದ್ದರು.
1973-74ರಲ್ಲಿ ಮೊದಲಿಗೆ ಭಾರತ- ವೆಸ್ಟ್ ಇಂಡೀಸ್ ಟೆಸ್ಟ್ ನಿಂದ, ಕ್ರಿಕೆಟ್ ಅಂಕಿ ಅಂಶ ರಂಗಕ್ಕೆ ಧುಮುಕಿದರು. ಕ್ರಿಕೆಟ್ ರಂಗದ ಅಂದಿನ ಧ್ರುವತಾರೆ ಗಳಾಗಿದ್ದ ಕರ್ನಾಟಕದ ಇ.ಎ.ಎಸ್. ಪ್ರಸನ್ನ, ಬಿ.ಎಸ್. ಚಂದ್ರಶೇಖರ್, ಜಿ. ಆರ್. ವಿಶ್ವನಾಥ್, ಬ್ರಿಜೆಶ್ ಪಟೇಲ, ಎಸ್.ಎಂ.ಎಚ್. ಕಿರ್ಮಾನಿ ಇವರೆಲ್ಲರ ಸಾಧನೆಯ ಸಂಪೂರ್ಣ ವಿವರ ಗೋಪಾಲ ಕೃಷ್ಣ ಅವರ ಬಳಿ ಸಿದ್ಧವಾಗಿರುತ್ತಿತ್ತು.
ಕಿರ್ಮಾನಿ ಹಿಡಿದ ಕ್ಯಾಚ್ ಎಷ್ಟನೆಯದು. ಯಾವ ಯಾವ ರಾಷ್ಟ್ರದ ವಿರುದ್ಧ ಎಷ್ಟು ಕ್ಯಾಚ್ ಹಿಡಿದಿದ್ದಾರೆ ಎಂದು ಪತ್ರಕರ್ತರು ಕೇಳಿದರೆ ತಕ್ಷಣ ಉತ್ತರ ಸಿಗು ತ್ತಿದ್ದುದು ಗೋಪಾಲಕೃಷ್ಣರಿಂದ. ಪ್ರಸನ್ನ, ಬಿ.ಎಸ್. ಚಂದ್ರಶೇಖರ್ ಎಷ್ಟು ವಿಕೆಟ್ ಪಡೆದಿದ್ದಾರೆ, ಯಾವ ಯಾವ ರಾಷ್ಟ್ರದ ವಿರುದ್ಧ ಎಷ್ಟು ವಿಕೆಟ್ ಪಡೆದಿದ್ದಾರೆ. ಈವರೆಗೆ ಅವರು ಮಾಡಿರುವ ಓವರ್ ಗಳೆಷ್ಟು, ಅವರು ತಮ್ಮ ಮಾಂತ್ರಿಕ ಬೌಲಿಂಗ್‌ನಿಂದ ಎಷ್ಟು ಪಂದ್ಯ ಗೆಲ್ಲಿಸಿದ್ದಾರೆ. ಎಷ್ಟು ಬಾರಿ 5 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ… ಹೀಗೆ ಯಾವುದೇ ಅಂಕಿ – ಅಂಶ ಬೇಕಾದರೂ ಪತ್ರಕರ್ತರು ಸಂಪರ್ಕಿಸುತ್ತಿದ್ದುದು ಗೋಪಾಲಕೃಷ್ಣರನ್ನು.
ಪಂದ್ಯ ನಡೆಯುವ ವೇಳೆ ಪತ್ರಕರ್ತರ ಗ್ಯಾಲರಿಯ ಇರುತ್ತಿದ್ದ ಗೋಪಾಲಕೃಷ್ಣ, ಸುನಿಲ್ ಗವಾಸ್ಕರ್, ಗುಂಡಪ್ಪ ವಿಶ್ವನಾಥ್, ವೆಂಗಸರ್ಕಾರ್.. ಶತಕ ಸಿಡಿಸಿದರೆ, ಅದು ಅವರ ಎಷ್ಟನೇ ಶತಕ, ಎಷ್ಟು ಟೆಸ್ಟ್ ಪಂದ್ಯಗಳಲ್ಲಿ ಅವರು ಈ ಶತಕ ಸಾಧನೆ ಮಾಡಿದ್ದಾರೆ. ಅವರು ಈವರೆಗೆ ಗಳಿಸಿರುವ ರನ್ ಎಷ್ಟು, ಯಾವ ಯಾವ ರಾಷ್ಟ್ರದ ವಿರುದ್ಧ ಎಷ್ಟೆಷ್ಟು ಶತಕ ಬಾರಿಸಿದ್ದಾರೆ, ಬೇರೆ ಯಾವ ದೇಶದ ಯಾವ ಯಾವ ಆಟಗಾರರು ಎಷ್ಟು ಎಷ್ಟು ರನ್ ಸಿಡಿಸಿದ್ದಾರೆ.
ಎಷ್ಟು ಶತಕ ಬಾರಿಸಿದ್ದಾರೆ.. ಹೀಗೆ ಹಲವು ಬಗೆಯ ಮಾಹಿತಿಯನ್ನು ಪತ್ರಕರ್ತರ ಅವಶ್ಯಕತೆಗೆ ಅನುಗುಣವಾಗಿ ಒದಗಿಸುತ್ತಿದ್ದರು. ಅವರು ಅಂಕಿ-ಅಂಶ ಪರಿಣತ ರಷ್ಟೇ ಅಲ್ಲ, ಹೆಸರಾಂತ ಸ್ಕೋರರ್ ಕೂಡ. ಉದ್ದನೆಯ ಸ್ಕೋರ್ ಕಾರ್ಡ್ ರಿಜಿಸ್ಟರ್‌ನಲ್ಲಿ ಅವರು ಅಧಿಕೃತವಾಗಿ ಕ್ರಿಕೆಟ್ ಸ್ಕೋರ್ ದಾಖಲಿಸುತ್ತಿದ್ದರು. ಈ ಕಾಯಕದಲ್ಲೂ ಅವರು 50 ವರ್ಷ ಪೂರೈಸಿದ ಸಾಧನೆ ಮಾಡಿದ್ದಾರೆ. ಹಲವು ಹೆಸರಾಂತ ಪತ್ರಿಕೆಗಳಿಗೆ ನಿರಂತರವಾಗಿ ಮಾಹಿತಿಯ ಕಣಜವಾಗಿ ಕಾರ್ಯ ನಿರ್ವಹಿಸಿರುವ ಗೋಪಾಲಕೃಷ್ಣ, ಕ್ರಿಕೆಟ್ ತಾರೆಯರ ಬಗ್ಗೆ ಪುಸ್ತಕ ಬರೆದಿರುವ ನೂರಾರು ಲೇಖಕರಿಗೆ ಅಂಕಿ-ಅಂಶ ಒದಗಿಸಿದ್ದಾರೆ. ಹೀಗಾಗಿಯೇ ಇವರನ್ನು ನಡೆದಾಡುವ ಕ್ರಿಕೆಟ್ ವಿಶ್ವಕೋಶ ಎಂದು ಪತ್ರಕರ್ತರು ಕರೆಯುತ್ತಿದ್ದರು.
1973-74ರಲ್ಲಿ ಕ್ರಿಕೆಟ್ ರಂಗಕ್ಕೆ ಕಾಲಿಟ್ಟ ಗೋಪಾಲಕೃಷ್ಣ, ಅಲ್ಲಿಂದೀಚೆಗೆ ಹಿಂತಿರುಗಿ ನೋಡಲೇ ಇಲ್ಲ. ಈವರೆಗೆ ಅವರು 105 ಅಂತಾರಾಷ್ಟ್ರೀಯ ಪಂದ್ಯ ಗಳಿಗೆ, 38 ಟೆಸ್ಟ್ ಪಂದ್ಯಗಳಿಗೆ, 61 ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಗೆ, 6 ಟಿ-20 ಕ್ರಿಕೆಟ್ ಪಂದ್ಯಗಳಿಗೆ ಅಧಿಕೃತವಾಗಿ ಅಂಕಿ-ಅಂಶ ಪರಿಣತ ರಾಗಿ ಸೇವೆ ಸಲ್ಲಿಸಿದ್ದಾರೆ. 100ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಗೆ ಅಧಿಕೃತ ಸ್ಕೋರರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಅಷ್ಟೇ ಅಲ್ಲದೆ ಸ್ಪೋರ್ಟ್ ಸ್ಟಾರ್ ಸೇರಿದಂತೆ ಹಲವು ಪತ್ರಿಕೆ ನಿಯತ ಕಾಲಿಕಗಳಿಗೆ ಲೇಖನಗಳನ್ನೂ ಬರೆದಿದ್ದಾರೆ. ಕ್ರಿಕೆಟ್‌ಗೆ ಸಂಬಂಧಿಸಿದ ವೆಬ್ ಪೋರ್ಟಲ್ ಗಳಿಗೂ ಕೊಡುಗೆ ನೀಡಿದ್ದಾರೆ.
ಪ್ರಶಸ್ತಿ- ಪುರಸ್ಕಾರ: ಇವರ ಈ ಐದು ದಶಕಗಳ ಸಾಧನೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ದಸರಾ ಕ್ರೀಡಾ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು
ಸಂದಿವೆ. ಗೋಪಾಲಕೃಷ್ಣ ಅವರಿಗೆ ಈಗ 75 ವರ್ಷ. ನಮ್ಮ ಶುಭಾಶಯ.