Thursday, 12th December 2024

ದೂಪದ ಎಲೆಯಿಂದ ಗೊರಬು ತಯಾರಿ !

ಶಶಾಂಕಣ

shashidhara.halady@gmail.com

ಮಳೆಗಾಲಕ್ಕೆ ಸಂಬಂಧಿಸಿದಂತೆ ಭಲೇಮಜ ಎನಿಸುವ ಒಂದು ಪ್ರಸಂಗದೊಂದಿಗೆ ಈ ಬರಹ ಆರಂಭಿಸುತ್ತೇನೆ. ನನ್ನ ಪ್ರಾಥಮಿಕ ಶಾಲಾ ಕೊಠಡಿಯಲ್ಲಿ, ಆ ಮಳೆಗಾಲದ ಒಂದು ದಿನ, ಜಾಗದ ಕೊರತೆ ಎದುರಾಗಿ, ಮಕ್ಕಳು ಕುಳಿತುಕೊಳ್ಳಲು ಸಾಕಷ್ಟು ತೊಂದರೆಯಾಯಿತು! ಹೇಗೆಂದು ಕೇಳುವಿರಾ? ಅದೊಂದು ಏಕೋಪಾಧ್ಯಾಯ ಶಾಲೆ.

ನಮ್ಮ ಮನೆಯಿಂದ ಸುಮಾರು ಒಂದೂವರೆ ಕಿ.ಮೀ. ದೂರದಲ್ಲಿ, ಹಾಡಿ-ಹಕ್ಕಲಿನ ಮಧ್ಯೆ ಇದ್ದೊಂದು ಪುಟ್ಟ ಬೆಳಾರ ಜಾಗದಲ್ಲಿದ್ದ ಆ ಶಾಲೆಗೆ ಗೋರಾಜಿ ಶಾಲೆ ಎಂಬ ಹೆಸರು; ಆದರೆ ಶಾಲೆಯ ಫಲಕದಲ್ಲಿ ‘ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹುಯ್ಯಾರು’ ಎಂದು ಬರೆಯಲಾಗಿತ್ತು!
ಹುಯ್ಯಾರು ಎಂಬುದು ನಮ್ಮ ಹಳ್ಳಿಗೆ ತಾಗಿಕೊಂಡ ಗ್ರಾಮ. ಆ ಶಾಲೆಯು ಕೆಲವು ವರ್ಷ ಮುದೂರಿ ದೇವಾಲಯದ ಹೆಬ್ಬಾಗಿಲಿನಲ್ಲೂ, ಇನ್ನು ಕೆಲವು ವರ್ಷ ಗೋರಾಜೆಯಲ್ಲೂ ನಡೆಯುತ್ತಿತ್ತು – ಏಕೆಂದರೆ ಅದಕ್ಕೆ ಸ್ವಂತ ಕಟ್ಟಡವೇ ಇರಲಿಲ್ಲ!

ತಾತ್ಕಾಲಿಕವಾಗಿ ಗುಡಿಸಲಿನಲ್ಲೋ, ಗೋರಾಜಿ ಮಯ್ಯರ ಮನೆಯ ಪೌಳಿಯಲ್ಲೋ, ದೇವಸ್ಥಾನದ ಹೆಬ್ಬಾಗಿಲಿನಲ್ಲೋ ಅಂದು ನಡೆಯುತ್ತಿದ್ದ ಆ ಶಾಲೆಗೆ, ಈಗ ಸ್ವಂತ ಮತ್ತು ಸಾಕಷ್ಟು ಅನುಕೂಲ ಇರುವ ಕಟ್ಟಡವಿದೆ; ಅದು ಬೇರೆ ಮಾತು. ನಾನು ಆ ಶಾಲೆಗೆ ಹೋಗುತ್ತಿದ್ದಾಗ ಅದು ಏಕೋ
ಪಾಧ್ಯಾಯ ಶಾಲೆ ಮತ್ತು ಏಕ ಕೊಠಡಿಯ ಶಾಲೆ! ಅಂದರೆ ಒಂದೇ ಕೊಠಡಿಯಲ್ಲಿ ನಾಲ್ಕು ತರಗತಿಗಳು ನಡೆಯಬೇಕಾದ ಅನಿವಾರ್ಯತೆ. ಛಾವಣಿ ಯಾಗಿ ಹುಲ್ಲಿನ ಮಾಡು, ತೆಂಗಿನ ಮಡಲಿನಿಂದ ತಯಾರಿಸಿದ ಬಾಗಿಲು, ಮಣ್ಣಿನ ನೆಲ, ಗೋಡೆ; ಅದೇ ಪುಟ್ಟ ಜಾಗದಲ್ಲಿ ಹತ್ತಾರು ಪುಟಾಣಿ ಬೆಂಚುಗಳನ್ನಿಟ್ಟಿದ್ದರು; ನಾಲ್ಕೂ ತರಗತಿಯ ಮಕ್ಕಳು ಆ ಮರದ ಬೆಂಚುಗಳನ್ನು ಹಂಚಿಕೊಂಡು, ಒಂದೇ ಕೊಠಡಿಯಲ್ಲಿ ಕುಳಿತು, ಒಬ್ಬರೇ ಅಧ್ಯಾಪಕರ ಪಾಠಗಳನ್ನು ಕೇಳುವ ಕ್ರಮ. ನಮಗೆ ಆಗ ಮುಖ್ಯೋಪಾಧ್ಯಾಯರು, ತರಗತಿ ಅಧ್ಯಾಪಕರು, ಪಿ.ಇ.ಟೀಚರ್ ಎಲ್ಲವೂ ಆಗಿದ್ದವರು ಚೇರ್ಕಿ ಸುಬ್ರಾಯ ಭಟ್ ಎಂಬ ಮಹನೀಯರು.

ಮಳೆಗಾಲದ ಸಮಯದಲ್ಲಿ ಆ ಶಾಲೆಯಲ್ಲಿ ನಡೆಯುತ್ತಿದ್ದ ಮೋಜಿನ ಪ್ರಸಂಗ ಎಂದರೆ, ಆ ಏಕ ಕೊಠಡಿಯ ಶಾಲೆಯ ಅರ್ಧಭಾಗವು ಕೊಡೆಗಳಿಂದ ತುಂಬಿಹೋಗುವ ಸಂದರ್ಭ! ಅದಕ್ಕೆ ಇನ್ನೂ ಮಜ ಬರಬೇಕಾದರೆ, ಆಗಾಗ ಬಿರುಸಾಗಿ ಬೀಸುವ ಗಾಳಿಯ ಸಹಕಾರ ಬೇಕು; ಮಳೆ ಸಹಿತ
ಬಿರುಸಾದ ಗಾಳಿ ಬೀಸಿದಾಗ, ಅಲ್ಲಿದ್ದ ಕೊಡೆಗಳೆಲ್ಲವೂ ಅತ್ತಿತ್ತ ಹಾರಿ, ಕೊಠಡಿಯ ಮುಕ್ಕಾಲು ಭಾಗವನ್ನೇ ತುಂಬಿಕೊಳ್ಳುತ್ತಿದ್ದವು! ಏಕೆ ಮತ್ತು ಹೇಗೆ ಗೊತ್ತೆ? ಅವೆಲ್ಲವೂ ‘ಓಲಿಕೊಡೆ’ಗಳು!

ಪ್ರತಿಯೊಂದು ಓಲಿಕೊಡೆಯನ್ನು ಶಾಲೆಯ ಒಳಗೆ, ನೆಲದ ಮೇಲೆ ಇಡಲು ಸುಮಾರು ಎರಡು ಅಡಿ ಜಾಗ ಬೇಕಿತ್ತು. ನಾವು ಸುಮಾರು ಇಪ್ಪತ್ತು
ಮಕ್ಕಳು ಮಳೆಯ ರಕ್ಷಣೆಗಾಗಿ ತಂದು ಆ ಓಲಿಕೊಡೆಗಳನ್ನು ಶಾಲೆಯ ಒಳಗೆ ಇಟ್ಟಾಗ, ಅರ್ಧ ಕೊಠಡಿಯೇ ತುಂಬಿಹೋಗುತ್ತಿತ್ತು! ಶಾಲೆಯ ಹೊರಗೆ ಆ ಕೊಡೆಗಳನ್ನು ಇಡುವುದು ಕಷ್ಟ – ಗಾಳಿ ಬಲವಾಗಿ ಬೀಸಿದರೆ ಆ ಕೊಡೆಗಳೆಲ್ಲಾ ಹಾರಿಹೋಗುತ್ತವೆ! ಸರಿ, ಇಪ್ಪತ್ತು ಓಲಿಕೊಡೆಗಳನ್ನು ಒಳಗಿಟ್ಟರೆ ಕೊಠಡಿಯ ಅರ್ಧ ಭಾಗ ತುಂಬಿಹೋಗುತ್ತೆ ಎಂದಿರಿಲ್ಲಾ, ಇನ್ನುಳಿದ ಮಕ್ಕಳು ತಂದ ಕೊಡೆಗಳನ್ನು ಎಲ್ಲಿ ಇಡುತ್ತಿದ್ದರು ಎಂದು ನೀವು ಕೇಳಬಹುದು. ಆ ಗುಡಿಸಲು ಶಾಲೆಗೆ ಬರುತ್ತಿದ್ದ ಎಷ್ಟೋ ಮಕ್ಕಳು ಕೊಡೆಯನ್ನೇ ತರುತ್ತಿರಲಿಲ್ಲ – ಏಕೆಂದರೆ ಅವರ ಮನೆಯ ಎಲ್ಲಾ ಮಕ್ಕಳಿಗೆ ಓಲಿಕೊಡೆಯನ್ನು ಸಹ ಕೊಡಿಸುವಷ್ಟು ಚೈತನ್ಯ ಅವರ ಹೆತ್ತರವರಿಗೆ ಇರಲಿಲ್ಲ! ಹಾಗಿದ್ದರೆ ಆ ಮಕ್ಕಳು ಮಳೆಗಾಲದಲ್ಲಿ ಶಾಲೆಗೆ ಬರುತ್ತಿದ್ದುದಾದರೂ ಹೇಗೆ? ಅದನ್ನು ಆಮೇಲೆ ಹೇಳುತ್ತೇನೆ.

ಇಷ್ಟು ಓದುವಷ್ಟರಲ್ಲಿ ನಿಮಗೆ ‘ಓಲಿಕೊಡೆ’ ಎಂದರೇನು ಎಂಬ ಸ್ಥೂಲ ಕಲ್ಪನೆ ಮೂಡಿರ ಬಹುದು. ‘ಓಲಿ’ (ಓಲೆ, ವಾಲೆ) ಎಂದರೆ ಎಲೆ. ಹಣೆಮರದ (ತಾಳೆಮರ, ತಾಟಿನಿಂಗು) ಎಲೆ ಗಳನ್ನು ಮುಂಚಿತವಾಗಿಯೇ ಕತ್ತರಿಸಿ, ಒಣಗಿಸಿ, ಅದನ್ನು ಒಪ್ಪವಾಗಿ ಹೊದ್ದಿಸಿ ಕೊಡೆ ತಯಾರಿಸುತ್ತಿದ್ದರು. ಆ ಕೊಡೆಗೆ ಒಂದರಿಂದ ಎರಡು ಅಡಿ ಉದ್ದ ಬೆತ್ತದ ಜಲ್ಲು ಅಥವಾ ಹಿಡಿಕೆ; ಅದೇ ಬೆತ್ತವನ್ನು ಸೀಳಿ ಮಾಡಿದ ತೆಳ್ಳನೆಯ ಪಟ್ಟಿಗಳಂತಹ ರಚನೆಯಿಂದ ತಯಾರಿಸಿದ ವೃತ್ತಾಕಾರದ ಕೊಡೆಯ ಪಂಜರ; ಅದರ ಮೇಲೆ ಒಣಗಿಸಿದ, ಬಿಳಿ ಬಣ್ಣದ ತಾಳೆ ಎಲೆಗಳನ್ನು ಭದ್ರವಾಗಿ ಹೊದಿಸಲಾಗುತ್ತಿತ್ತು. ಹಿಂದಿನ ಕಾಲದಲ್ಲಿ ಕಾವ್ಯಗಳನ್ನು ಬರೆಯಲು ಉಪಯೋಗಿಸುತ್ತಿದ್ದುದು ಸಹ ಇದೇ ತಾಳೆಗರಿಗಳು; ಸೂಕ್ತವಾಗಿ ರಕ್ಷಿಸಿ ಇಟ್ಟರೆ, ಈ ತಾಳೆಗರಿಗಳು ಹಲವು ವರ್ಷ ಬಾಳಿಕೆ ಬರುತ್ತವೆ.

ಓಲಿಕೊಡೆಯ ಮೇಲೆ ಭದ್ರವಾಗಿ ಬಿಗಿದ ತಾಳೆಗರಿಗಳು, ಅದೆಷ್ಟೇ ಮಳೆ ಬಂದರೂ, ಕೊಳೆಯದೆ, ನಲುಗದೇ, ಕೊಡೆ ಹಿಡಿದವರ ತಲೆ – ಮೈಯನ್ನು ಬೆಚ್ಚಗಿಡುತ್ತವೆ. ಜೂನ್ ಮೊದಲ ದಿನದಿಂದ ಶಾಲೆ ಆರಂಭವಾಗುವ ಸಮಯಕ್ಕೆ ಸರಿಯಾಗಿ, ನಮ್ಮೂರಲ್ಲಿ ಮಳೆಗಾಲದ ಆರಂಭ! ಈ ವರ್ಷ (೨೦೨೩) ಅದೇಕೋ, ಜೂನ್ ಮೂರನೆಯ ವಾರ ಕಳೆದರೂ ದಟ್ಟ ಮಳೆಗಾಲ ಆರಂಭವಾಗಿಲ್ಲ. ಇಲ್ಲವಾದರೆ, ಸಾಮಾನ್ಯವಾಗಿ ನಮ್ಮೂರಿನಲ್ಲಿ
ಜೂನ್ ಒಂದನೇ ತಾರೀಕಿನಂದು ಇತ್ತ ಶಾಲೆಯೂ ಆರಂಭ, ಅತ್ತ ಮಳೆಗಾಲವೂ ಆರಂಭ.

ಅದಕ್ಕೆ ಒಂದು ವಾರದ ಮುಂಚಿತವಾಗಿಯೇ, ಶಾಲೆಗೆ ಹೋಗುವ ಮಕ್ಕಳಿಗೆ ಓಲಿಕೊಡೆ ತರಿಸಬೇಕಿತ್ತು. ನಾನು ನಾಲ್ಕನೆಯ ತರಗತಿಯಲ್ಲಿದ್ದಾಗ, ಒಂದು ಭಾನುವಾರದಂದು, ಆರು ಕಿ.ಮೀ. ದೂರದಲ್ಲಿ ಪ್ರತಿವಾರ ನಡೆಯುವ ಗೋಳಿಅಂಗಡಿ ಸಂತೆಯಿಂದ ಒಂದು ರುಪಾಯಿ ನಾಲ್ಕಾಣೆ
ಬೆಲೆಯ ಒಂದು ಓಲಿಕೊಡೆಯನ್ನು ನಮ್ಮ ಅಮ್ಮಮ್ಮ ತರಿಸಿದ್ದರು. ‘ಎಂಥದೇ ಜಡಿ ಮಳೆ ಬಂದರೂ, ಈ ಕೊಡೆಯೊಳಗೆ ನೀರು ಬರುವುದಿಲ್ಲ, ಅಷ್ಟು ಗಟ್ಟಿ ಈ ಓಲಿಕೊಡೆ’ ಎಂದು ಆ ಬೆತ್ತದ ಜಲ್ಲಿನ ಕೊಡೆಯ ಕುರಿತು ಶಿಫಾರಸು ಮಾಡುತ್ತಿದ್ದರು. ಓಲಿಕೊಡೆಯ ಪ್ರತಿಸ್ಪರ್ಧಿ ‘ಅರಿವೆ ಕೊಡೆ’ (ಅರಿವೆ ಎಂದರೆ ಬಟ್ಟೆ; ಈಗ ಬಳಕೆಯಲ್ಲಿರುವ ಕೊಡೆ) ಹಿಡಿದು, ನಮ್ಮೂರಿನಲ್ಲಿ ಸುರಿವ ದಪ್ಪ ಹನಿಯ ಜಡಿಮಳೆಯಲ್ಲಿ ನಡೆದರೆ, ಸಣ್ಣ ಸಣ್ಣ ನೀರಿನ ಹನಿಗಳು ಆ ಬಟ್ಟೆಯನ್ನು ತೂರಿ ಒಳಗೆ ಬಂದು, ಕೊಡೆ ಹಿಡಿದವರ ತಲೆಯ ಮೇಲೆ ಕೂರುತ್ತಿದ್ದವು! ಅಂಥಾ ಜಡಿಮಳೆಯಲ್ಲಿ ಅರಿವೆ ಕೊಡೆ ಹಿಡಿದು ಕಾಲು ಗಂಟೆ ನಡೆದರೆ, ತಲೆ ಮುಖದ ಮೇಲೆಲ್ಲಾ ಆ ತುಂತುರು ನೀರಿನ ಸ್ನಾನ.

ಅಷ್ಟು ಜೋರಾಗಿ ಮಳೆ ಬೀಳುವ ಊರು ನಮ್ಮೂರು. ಇಂಥಾ ಬಿರುಸಾದ ಗಾಳಿ ಮಳೆಯನ್ನು ಎದುರಿಸಲು ಓಲಿಕೊಡೆಯೇ ಪ್ರಶಸ್ಥ ಎಂದು ನನಗೆ
ಆ ಕೊಡೆಯನ್ನು ಕೊಡಿಸಿದ್ದರು. ಅರಿವೆ ಕೊಡೆಗೆ ಹೋಲಿಸಿದರೆ ಓಲಿಕೊಡೆಯ ಬೆಲೆಯೂ ಕಡಿಮೆ – ಅದೂ ಸಹ ಓಲಿಕೊಡೆಯ ಜನಪ್ರಿಯತೆಗೆ ಒಂದು
ಕಾರಣ. ಮಕ್ಕಳೆಲ್ಲಾ ಗೋರಾಜಿ ಶಾಲೆಯ ಒಳಗೆ ಓಲಿಕೊಡೆಯನ್ನು ಹರವಿ ಇಟ್ಟರೆ, ಅರ್ಧ ಕೊಠಡಿ ಫುಲ್ ಆಗುತ್ತಿತ್ತು ಎಂದೆನಲ್ಲಾ – ಅದು ಬಿರುಸು
ಮಳೆಯ ಆಷಾಢದ ದಿನಗಳು. ಆ ಗುಡಿಸಲಿಗೆ ಮೋಟುಗೋಡೆ; ಬಿರುಸಾದ ಗಾಳಿ ಬೀಸಿದರೆ, ಶಾಲೆಯ ಒಳಗೂ ಗಾಳಿಯ ಆರ್ಭಟ. ಆಗ
ಓಲಿಕೊಡೆಗಳೆಲ್ಲಾ ಬುರ್ ಎಂದು ಅತ್ತಿತ್ತ ಹಾರುತ್ತಿದ್ದವು.

ಬೆಳಗಿನಿಂದಲೂ ಮಳೆ ಸುರಿಯುತ್ತಲೇ ಇರುವ ದಿನಗಳಲ್ಲಿ ಎಷ್ಟೋ ಮಕ್ಕಳು ಶಾಲೆಗೆ ಬರುತ್ತಲೇ ಇರಲಿಲ್ಲ – ಕಡಿಮೆ ಬೆಲೆಯ ಓಲಿ ಕೊಡೆಯನ್ನು ಸಹ ಖರೀದಿಸಲು ಸಾಧ್ಯವಾಗ ದಂತಹ ಅವೆಷ್ಟೋ ಕುಟುಂಬಗಳು ನಮ್ಮೂರಿನಲ್ಲಿದ್ದವು. ಬೆಳಗಿನಿಂದಲೂ ದಪ್ಪಹನಿಯ ಮಳೆ ಸುರಿಯುತ್ತಲೇ ಇದ್ದರೆ, ತೋಡುಗಳೆಲ್ಲಾ ಕೆಂಪನೆಯ ನೀರಿನಿಂದ ತುಂಬಿಹೋಗುತ್ತವೆ, ಗದ್ದೆ ಅಂಚಿನ ದಾರಿಯೇ ನೀರಿನಲ್ಲಿ ಮುಳುಗಿಹೋಗುತ್ತದೆ, ಆಗ ಮಕ್ಕಳನ್ನು ಶಾಲೆಗೆ ಕಳಿಸಲು ಕೆಲವು ಮನೆಯವರು ಹಿಂಜರಿಯುತ್ತಿದ್ದರು. ಮಳೆಯ ರಭಸ ಕಡಿಮೆ ಇದ್ದ ದಿನ, ಕೊಡೆ ಇಲ್ಲದೇ ಇದ್ದ ಮಕ್ಕಳು ‘ಮರಸಣಿಗೆ ಎಲೆ’ಯನ್ನೇ ಹಿಡಿದು ಬರುತ್ತಿದ್ದುದೂ ಉಂಟು! ಒಂದೂವರೆಯಿಂದ ಎರಡು ಅಡಿ ಅಗಲ ಬೆಳೆಯುವ ದಪ್ಪನಾದ ಮರಸಣಿಗೆ ಎಲೆಯನ್ನು ತಲೆಗೆ ಅಡ್ಡಲಾಗಿ
ಹಿಡಿದರೆ, ಮಳೆಯಿಂದ ಸ್ವಲ್ಪ ರಕ್ಷಣೆ ಸಾಧ್ಯ; ಆದರೆ ಮೈ, ಬಟ್ಟೆ ಒದ್ದೆಯಾಗುವುದು ಇದ್ದದ್ದೇ.

ಮರಸಣಿಗೆ ಎಲೆಗಳು ಗದ್ದೆಯಂಚಿನಲ್ಲಿ, ತೋಟದ ಅಂಚಿನಲ್ಲಿ ಬೆಳೆಯುತ್ತಿದ್ದವು; ಆದರೆ ಒಮ್ಮೆ ಕತ್ತರಿಸಿದರೆ ಒಂದೆರಡು ದಿನ ಉಪಯೋಗಿಸಿದ
ನಂತರ, ಅವು ಮುದ್ದೆಯಾಗುತ್ತಿದ್ದವು. ಕೆಲವು ದೊಡ್ಡವರು ಸಹ ಮರಸಣಿಗೆ ಎಲೆ ಹಿಡಿದು, ಮಳೆಯಿಂದ ರಕ್ಷಣೆ ಪಡೆಯುವ ಪದ್ಧತಿ ಇತ್ತು. ಗೊರಬಿನ ಆಶ್ರಯದಲ್ಲೂ, ದೊಡ್ಡವರ ಜತೆ ಕೆಲವು ಮಕ್ಕಳು ಶಾಲೆಗೆ ಬರುತ್ತಿದ್ದುದುಂಟು! ಓಲೆಕೊಡೆಗೆ ಹೊದಿಸಿರುವ ಬಿಳಿ ಬಣ್ಣದ ತಾಳೆಗರಿಗಳು ಹಲವು ವರ್ಷ ಬಾಳಿಕೆ ಬರುತ್ತವೆ.ಓಲಿಕೊಡೆಗೆ ಎದುರಾಗುವ ಒಂದೇ ಅಪಾಯವೆಂದರೆ, ಮಳೆಗಾಲ ಮುಗಿದ ನಂತರ ಕೊಟ್ಟಿಗೆಯ ಮೂಲೆಯಲ್ಲೋ, ಅಟ್ಟದಲ್ಲೋ
ಅದನ್ನಿಟ್ಟಾಗ, ವರಲೆ (ಗೆದ್ದಲು) ತಿನ್ನುವುದುಂಟು. ಅದರಿಂದ ಬಚಾವಾಗಲು, ಓಲಿ ಕೊಡೆಯ ಎರಡೂ ಮೇಲ್ಮೈಗೆ ಡಾಮರನ್ನು ಕಾಯಿಸಿ
ಹಚ್ಚುತ್ತಿದ್ದರು.

ಆದರೆ ಡಾಮರು ಬಳಿದ ಓಲಿಕೊಡೆ ಹಿಡಿದು ಶಾಲೆಗೆ ಹೋಗಲು ನಮಗೆಲ್ಲಾ ತುಸು ಸಂಕೋಚ, ತುಸು ರೇಜಿಗೆ. ನಾಲ್ಕನೆಯ ತರಗತಿ ಪಾಸಾದ ನಂತರ, ಐದನೆಯ ತರಗತಿಗೆ ನಾನು ಹಾಲಾಡಿಯ ಹಳೆಪೇಟೆಯಲ್ಲಿದ್ದ ಸರಕಾರಿ ಶಾಲೆಗೆ ಸೇರಿದೆ; ಆಗ ಒಂದು ‘ಅರಿವೆ ಕೊಡೆ’ ಕೊಡಿಸಿದರು
– ಕಪ್ಪು ಬಟ್ಟೆಯ ಆ ಕೊಡೆಗೆ ಸ್ಟೀಲ್ ಬಣ್ಣದ ಒಂದು ಜಲ್ಲು, ಪ್ಲಾಸ್ಟಿಕ್ ವಿನ್ಯಾಸದ ಹಿಡಿಕೆ : ಆ ಸುಂದರ ಕೊಡೆಯನ್ನು ಬಿಡಿಸಿಕೊಂಡು ನಡೆಯಲು
ಹೆಮ್ಮೆ ಎನಿಸುತ್ತಿತ್ತು. ಆದರೇನು ಮಾಡುವುದು – ಆ ಹೊಸ ಶಾಲೆ ನಮ್ಮ ಮನೆಯಿಂದ ಮೂರು ಕಿ.ಮೀ. ದೂರದಲ್ಲಿತ್ತು; ಜಡಿಮಳೆ ಸುರಿದ ದಿನ,
ಶಾಲೆಯ ದಾರಿಯಲ್ಲಿ ಮುಕ್ಕಾಲು ಗಂಟೆ ನಡೆಯುವಾಗ, ಕೊಡೆಯ ಬಟ್ಟೆಯ ಮೇಲ್ಮೈ ಮೇಲೆ ಬಿದ್ದ ದಪ್ಪ ಹನಿಯ ನೀರಿನ ಒಂದಂಶವು
ತುಂತುರಿನ ರೀತಿಯಲ್ಲಿ ಒಳಗೆ ಬಂದು, ತಲೆಯ ಮೇಲೆ ಮುಖದ ಮೇಲೆ ಕೂರುತ್ತಿತ್ತು.

ಮನೆಗೆ ಬರುವಾಗ ಮೈ, ಮುಖ, ತಲೆ ಎಲ್ಲಾ ಒದ್ದೆ! ನಮ್ಮೂರಿನ ಜಡಿಮಳೆ ಎದುರಿಸಲು ಅರಿವೆಕೊಡೆಗಿಂತಾ, ಓಲಿಕೊಡೆಯೇ ಶ್ರೇಷ್ಠ ಎಂದು
ಅಮ್ಮಮ್ಮ ಏಕೆ ಹೇಳುತ್ತಿದ್ದರು ಎಂದು ಐದನೆಯ ತರಗತಿಯಲ್ಲಿ ಅರ್ಥವಾಯಿತು. ಶ್ರಾವಣ ಬಂದಂತೆಲ್ಲಾ ನಮ್ಮೂರಿನಲ್ಲಿ ಮಳೆ ಸ್ವಲ್ಪ ಸ್ವಲ್ಪವೇ ಕಡಿಮೆಯಾಗುತ್ತಾ ಹೋಗುತ್ತದೆ. ಆಷಾಢದಲ್ಲಿ ದಿನವಿಡೀ ಸುರಿವ ಮಳೆಯು, ಶ್ರಾವಣದ ಕೊನೆ ಬಂದಂತೆ, ಸಂಜೆಯೋ ಬೆಳಗ್ಗೆಯೋ ಸುರಿದೀತು, ಅಥವಾ ದುಂಬು (ತುಂತುರು) ಮಳೆಗೆ ಸೀಮಿತವಾದೀತು. ನಡುನಡುವೆ ಆರೆಂಟು ದಿನ ಹೊಳವಾಗುತ್ತದೆ. ಬಿರುಸಾದ ಮಳೆ ಸುರಿವ ಕಾರು, ಆಷಾಢ ತಿಂಗಳಿನಲ್ಲಿ ಮಳೆಗೆ ಹೆದರಿ ಮನೆಯೊಳಗೆ ಕುಳಿತುರುವಂತಿ ಲ್ಲವಲ್ಲ, ಆ ಕಾಲದಲ್ಲೇ ಬತ್ತದ ನಾಟಿ ಆಗಬೇಕು.

ಅಂತಹ ಸಂದರ್ಭದಲ್ಲಿ ನಮ್ಮೂರಿನವರು ಮಳೆ ಎದುರಿಸಲು ಬಳಸುತ್ತಿದ್ದ ಇತರ ‘ಆಯುಧ’ ಗಳೆಂದರೆ ಗೊರಬು, ಕಂಬಳಿ ಕುಪ್ಪೆ ಮತ್ತು ಗೋಣಿ
ಕುಪ್ಪೆ. ಸಂಪೂರ್ಣ ಸ್ಥಳೀಯ ನೈಸರ್ಗಿಕ ವಸ್ತುಗಳನ್ನೇ ಬಳಸಿ ತಯಾರಿಸುತ್ತಿದ್ದ ಗೊರಬು, ಅಂದು ಸಾಕಷ್ಟು ಜನಪ್ರಿಯ. ಬತ್ತದ ಅಗೆ ಕೀಳಲು, ಅದನ್ನು ಗದ್ದೆಯಲ್ಲಿ ನಾಟಿ ಮಾಡಲು ಗಂಟೆ ಗಟ್ಟಲೆ ಗದ್ದೆಯಲ್ಲೇ ನಿಲ್ಲಬೇಕಾದ ಸಂದರ್ಭದಲ್ಲಿ, ಮಳೆ ಯಿಂದ ರಕ್ಷಣೆ ಪಡೆಯಲು ಗೊರಬು ಅತ್ಯುತ್ತಮ.
ಮೂರು ಅಡಿ ಉದ್ದ, ಎರಡು ಅಡಿ ಅಗಲವಿರುವ ಗೊರಬನ್ನು ತಲೆಗೆ ತಾಗಿಸಿಕೊಂಡು ಹೊದ್ದರೆ, ಎಂಥಾ ಜಡಿಮಳೆ ಬಂದರೂ ಭಯವಿಲ್ಲ. ಬೆತ್ತದ
ಕಡ್ಡಿಗಳನ್ನು ಒಪ್ಪವಾಗಿ ಜೋಡಿಸಿ ಗೊರಬಿನ ಪಂಜರ ತಯಾರಿಸುತ್ತಾರೆ; ಒಂದು ಹದಕ್ಕೆ ಬೇಯಿಸಿದ ದೂಪದ ಎಲೆಗಳನ್ನು ಆ ಬೆತ್ತದ ಪಂಜರಕ್ಕೆ ಒಪ್ಪವಾಗಿ ಜೋಡಿಸಿ, ಒಂದೆರಡು ದಿನ ಒಣಗಿಸಿದರೆ, ಗೊರಬು ಸಿದ್ಧ. ಕೃಷಿ ಕಾರ್ಮಿಕರಿಗೆ ಮಳೆಯಿಂದ ರಕ್ಷಣೆ ನೀಡುವ ಉತ್ತಮ ಸಾಧನವಿದು. ಒಂದು ಮಳೆಗಾಲ ಕಳೆದ ನಂತರ, ಗೊರಬಿಗೆ ಹಚ್ಚಿದ ಎಲೆಗಳು ಪುಡಿಯಾಗುವುದರಿಂದ, ಮರುವರ್ಷ ಪುನಃ ಎಲೆಗಳನ್ನು ಸಿಕ್ಕಿಸ ಬೇಕು.

ಈಚಿನ ವರ್ಷಗಳಲ್ಲಿ, ಎಲೆಗಳ ಬದಲು ಬಣ್ಣ ಬಣ್ಣದ ಪ್ಲಾಸ್ಟಿಕ್ ಹಾಲೆಗಳನ್ನು ಗೊರಬಿಗೆ ಹೊದಿಸುವ ಪರಿಪಾಠ ಜನಪ್ರಿಯವಾಗಿದೆ. ನಮ್ಮ ಹಳ್ಳಿಯ ಕೃಷಿಕರು ಮಳೆಯನ್ನು ಎದುರಿಸಲು ಉಪಯೋಗಿಸುವ ಪ್ರಮುಖ ಸಾಧನ ವೆಂದರೆ ‘ಕಂಬಳಿ ಕೊಪ್ಪೆ’. ಗದ್ದೆ ಹೂಟಿ ಮಾಡು ವಾಗ, ಅಗೆಯನ್ನು ಅಗೇಡಿಯಿಂದ ನಾಟಿ  ಮಾಡುವ ಗದ್ದೆಗೆ ಸಾಗಿಸುವಾಗ, ಹಾಡಿ ಗುಡ್ಡೆ ಯಲ್ಲಿ ನಡೆಯುವಾಗ, ಗಂಟಿ ಮೇಯಿಸುವಾಗ, ಮಳೆಬರುವಾಗ ಸಣ್ಣಪುಟ್ಟ ಕೆಲಸ ಮಾಡುವಾಗ, ಕಂಬಳಿ ಕೊಪ್ಪೆಯನ್ನು ಧರಿಸಿದರೆ, ತಲೆ ಮೈ ಸೊಂಟದ ತನಕ ಬೆಚ್ಚಗಿರುತ್ತದೆ. ಈಚಿನ ವರ್ಷಗಳಲ್ಲಿ ಪ್ಲಾಸ್ಟಿಕ್ ಹಾಳೆಗಳು ಬಳಕೆಗೆ ಬಂದು ಗೊರಬು, ಕಂಬಳಿಕೊಪ್ಪೆಗಳು ಹಿನ್ನೆಲೆಗೆ ಸರಿದಿವೆ. ಹಾಗೆಯೇ ಇಂದಿನ ಶಾಲಾ ಮಕ್ಕಳಿಗೆ ರೈನ್ ಕೋಟುಗಳು ಬಹಳ ಇಷ್ಟ.