Thursday, 12th December 2024

ಎಲ್ಲೆಡೆ ಸರಕಾರಿ ಬಸ್ಸುಗಳಿರಲಿ

ಅನೀಶ್ ಬಿ.ಕೊಪ್ಪ

‘ಶಕ್ತಿ’ ಯೋಜನೆ ಜಾರಿಯಾದ ದಿನದಂದೇ ಆಕಸ್ಮಿಕವಾಗಿ ಪಟ್ಟಣದ ಮಾರುಕಟ್ಟೆಗೆ ಹೋಗಿದ್ದೆ. ಈ ಯೋಜನೆಯ ಬಗ್ಗೆ ಜನರಲ್ಲಿ ಚರ್ಚೆಯೂ ನಡೆಯುತ್ತಿತ್ತು. ಸೊಪ್ಪು ಮಾರುತ್ತಿದ್ದ ವೃದ್ಧೆಯೊಬ್ಬರ ಬಳಿ, ‘ಅಜ್ಜಿ, ನಿಮಗಿನ್ನು ಅನುಕೂಲವಾಯ್ತಲ್ವಾ?’ ಎಂದು ಕೇಳಿದ ನನಗೆ ಅವರ ಉತ್ತರ ಅಚ್ಚರಿ ತಂದಿತು.

‘ಶಕ್ತಿ ಯೋಜನೆ ಇರಲಿ, ಇಲ್ಲದಿರಲಿ. ನಮ್ಮ ಹಳ್ಳಿಯಿಂದ ಈ ಪಟ್ಟಣಕ್ಕೆ ಬಸ್ಸಿನಲ್ಲಿ ಸಂಚರಿಸುವ ಅವಕಾಶವನ್ನು ಕಳೆದುಕೊಂಡು ಮೂರ್ನಾಲ್ಕು ವರ್ಷಗಳೇ ಕಳೆದವು’ ಎಂದರು. ಆ ಮಲೆನಾಡ ಮಹಿಳೆಯ ಮಾತಿನ ಒಳಾರ್ಥ ಅರಿವಾಯಿತು. ಕಾರಣ, ಮಲೆನಾಡಿನ ಸಂಚಾರ ಕೊಂಡಿಯಾಗಿದ್ದ ಸಹಕಾರ ಸಾರಿಗೆಯು ತನ್ನ ಸೇವೆ ನಿಲ್ಲಿಸಿ ಮೂರೂವರೆ ವರ್ಷಗಳೇ ಉರುಳಿದವು. ಗ್ರಾಮೀಣ ಭಾಗದ ಜನರಿಗೆ ಕಡಿಮೆ ದರದಲ್ಲಿ ಸಂಚಾರ ಸೇವೆ ನೀಡುವುದರೊಂದಿಗೆ, ಹಳ್ಳಿ-ಪಟ್ಟಣದ ನಡುವಿನ ಸಂಪರ್ಕ ಸೇತುವಾಗಿ ಸಹಕಾರ ಸಾರಿಗೆ ಕಾರ್ಯನಿರ್ವಹಿಸುತ್ತಿತ್ತು.

ಸಹಕಾರ ತತ್ತ್ವದಡಿ ಕಾರ್ಯನಿರ್ವಹಿಸುವ ಮೊಟ್ಟ ಮೊದಲ ಸಾರಿಗೆ ಸಂಸ್ಥೆ ಎಂಬ ಪ್ರಸಿದ್ಧಿ ದೇಶದಲ್ಲಷ್ಟೇ ಅಲ್ಲದೆ ಏಷ್ಯಾ ಖಂಡದಲ್ಲೇ ಈ ಸಂಸ್ಥೆಗಿತ್ತು. ಕಾರ್ಮಿಕರೇ ಮಾಲೀಕರಾಗಿ ೬ ಬಸ್‌ಗಳಿಂದ ೭೫ ಬಸ್‌ಗಳವರೆಗೆ ಅಭಿವೃದ್ಧಿಯಾಗಿದ್ದು ಸೋಜಿಗವೇ ಸರಿ. ಆದರೆ ಇಂದು ಕೊಪ್ಪದಲ್ಲಿರುವ ಸಹಕಾರ ಸಾರಿಗೆಯ ಮುಖ್ಯ ಕಚೇರಿಯ ಸುತ್ತಮುತ್ತ ಈ ಬಸ್ಸುಗಳು ತುಕ್ಕುಹಿಡಿದ ಸ್ಥಿತಿಯಲ್ಲಿ ಸ್ತಬ್ಧವಾಗಿದ್ದು, ಸಂಚಾರಿ ಸೇವಾವಲಯದಲ್ಲಿನ ಸಹಕಾರದ ಕೊಂಡಿ ಕಳಚಿದಂತಾಗಿದೆ.

ಸರಕಾರದ ಕಾನೂನು, ವಿಮೆ, ಕೊನೆಗೆ ಕೋವಿಡ್ ಸಂಬಂಽತ ಲಾಕ್‌ಡೌನ್ ಸೇರಿದಂತೆ ನಾನಾ ಕಾರಣಗಳಿಂದ ಸಂಸ್ಥೆಗೆ ಬೀಗ ಬಿದ್ದಿದೆ. ಪುನಶ್ಚೇತನಕ್ಕಾಗಿ ಸರಕಾರದ ಬಾಗಿಲು ಬಡಿದರೂ ಇದುವರೆಗೆ ಸಹಕಾರ ಸಿಕ್ಕಿಲ್ಲ. ಈ ಕಾರಣದಿಂದಾಗಿ, ಕಾಫಿನಾಡಿನ ಪ್ರತಿ ಪಟ್ಟಣಕ್ಕೆ ಹೊಂದಿಕೊಂಡಂತೆ ೫-೧೦ ಕಿ.ಮೀ. ವ್ಯಾಪ್ತಿಯಲ್ಲಿರುವ ಜನರಿಗೆ ದೈನಂದಿನ ಕೆಲಸಕ್ಕೆ ಪಟ್ಟಣಕ್ಕೆ ಬಂದು-ಹೋಗಿ ಮಾಡಲು ನೂರಾರು ರುಪಾಯಿ ಖರ್ಚುಮಾಡಬೇ ಕಾದ ಸ್ಥಿತಿ ಎದುರಾಗಿದೆ. ಇನ್ನು ರಾಜ್ಯದ ಅನೇಕ ಜಿಲ್ಲೆಗಳ ಗ್ರಾಮೀಣ ಭಾಗಗಳಲ್ಲೂ ಸರಕಾರಿ ಬಸ್ಸುಗಳ ಸಂಖ್ಯೆ ಹೇಳಿಕೊಳ್ಳು ವಷ್ಟೇನೂ ಇಲ್ಲ.

ಕೆಲವೆಡೆಯಂತೂ ಖಾಸಗಿ ಬಸ್ಸುಗಳು, ಟೆಂಪೊಗಳು ಸರಕಾರಿ ಬಸ್ಸಿಗಿಂತ ಹೆಚ್ಚು ಹಣವನ್ನು ಪ್ರಯಾಣಿಕರಿಂದ ವಸೂಲು ಮಾಡುತ್ತಿವೆ. ರಾಜ್ಯದ ಸರಕಾರಿ ಸಾರಿಗೆ ವ್ಯವಸ್ಥೆಯ ೪ ಸಾರಿಗೆ ನಿಗಮಗಳ ವ್ಯಾಪ್ತಿಯಲ್ಲಿ ೧೮,೬೦೯ ಬಸ್ಸುಗಳು ‘ಶಕ್ತಿ’ ಯೋಜನೆಗೆ ಲಭ್ಯವಿವೆ ಎನ್ನಲಾಗಿದ್ದು, ಪ್ರತಿದಿನ ೪೧.೮ ಲಕ್ಷ ಮಹಿಳೆಯರು ಪ್ರಯಾಣಿಸುತ್ತಾರೆಂಬ ಲೆಕ್ಕಾಚಾರವಿದೆ. ಇಷ್ಟಾಗಿಯೂ ಶಕ್ತಿ ಯೋಜನೆಯ ಪ್ರಯೋಜನವು ರಾಜ್ಯದ ಮೂಲೆಮೂಲೆಗೂ ಸಮನಾಗಿ ಹಂಚಿಕೆಯಾಗುವಲ್ಲಿ ಒಂದಿಷ್ಟು ಅಡೆತಡೆಗಳು ಎದುರಾಗುತ್ತಿವೆ. ಸರಕಾರಿ ಬಸ್ಸುಗಳ ನೋಟ ಮತ್ತು ಸದ್ದಿನ ಅನುಭವವೇ ಇಲ್ಲದ ಹಳ್ಳಿಗಳೂ ಸಾಕಷ್ಟಿವೆ. ಇಂಥ ಊರುಗಳಿಗೆ ಗ್ರಾಮೀಣ ಸಾರಿಗೆ ಬಸ್‌ಗಳನ್ನು ವ್ಯವಸ್ಥೆ ಮಾಡಿ, ಮಹಿಳೆಯರ ಕನಸಿನ ರೆಕ್ಕೆಗೆ ಬಲ ತುಂಬಿ, ಅವರ ಔದ್ಯೋಗಿಕ ನೆಲೆಗಟ್ಟನ್ನು ಭದ್ರಗೊಳಿಸಲು ಸರಕಾರ ಮುಂದಾಗಬೇಕಿದೆ.

ಇದರಿಂದ ಮಹಿಳೆಯರಿಗೆ ಮಾತ್ರವಲ್ಲದೆ ದೈನಂದಿನ ವ್ಯವಹಾರಕ್ಕೆ ಪಟ್ಟಣಕ್ಕೆ ತೆರಳಬೇಕಾದ ಗ್ರಾಮಸ್ಥರು ಹಾಗೂ ಕೂಲಿಕಾರ್ಮಿಕರಿಗೂ ಬಹಳ ಪ್ರಯೋಜನವಾಗುತ್ತದೆ. ಶುರುವಿನಲ್ಲಿ ಪ್ರತಿದಿನ ಮುಂಜಾನೆ ಹಾಗೂ ಸಂಜೆ/ ರಾತ್ರಿ ಹಳ್ಳಿಗೆ ಒಂದೊಂದು ಬಸ್ ಸಂಚರಿಸಿದರೂ ಮಹದುಪಕಾರ ವಾಗತ್ತದೆ. ಪ್ರೌಢಶಿಕ್ಷಣ ಹಾಗೂ ಉನ್ನತ ವ್ಯಾಸಂಗದೆಡೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮೀಣ ವಿದ್ಯಾರ್ಥಿಗಳು ಮುಖ ಮಾಡುವಂತಾಗಿ ಯುವಶಕ್ತಿಯು ವಽಸುವಲ್ಲಿಯೂ ಇಂಥ ಸರಕಾರಿ ಸಾರಿಗೆ ವ್ಯವಸ್ಥೆ ಮಹತ್ತರ ಪಾತ್ರವನ್ನು ವಹಿಸುತ್ತದೆ.

ಕಾರಣ, ಇಂಥ ಪೂರಕ ಸೌಲಭ್ಯವಿಲ್ಲದೆ ಹಳ್ಳಿಗಳ ಬಹಳಷ್ಟು ಪ್ರತಿಭಾವಂತರು ಶಿಕ್ಷಣವನ್ನು ಅರ್ಧಕ್ಕೇ ಮೊಟಕುಗೊಳಿಸುವಂತಾಗಿದೆ. ಸರಕಾರದ
ವತಿಯಿಂದ ನೀಡಲಾಗುತ್ತಿದ್ದ ಉಚಿತ ಬೈಸಿಕಲ್ ಸೌಲಭ್ಯವೂ ಇಲ್ಲದ ಕಾರಣ, ಖಾಸಗಿ ವಾಹನಗಳಿಗೆ ಬಾಡಿಗೆ ರೂಪದಲ್ಲಿ ವರ್ಷಕ್ಕೆ ಸಾವಿರಾರು ರುಪಾಯಿ ಹಣವನ್ನು ನೀಡಿ ಶಿಕ್ಷಣ ಪಡೆಯುವುದು ಗ್ರಾಮೀಣ ವಿದ್ಯಾರ್ಥಿಗಳಿಗೆ ಕಷ್ಟವಾಗುತ್ತಿದೆ. ಆದ್ದರಿಂದ ಹಳ್ಳಿಗಳಿಗೂ ಸರಕಾರಿ ಬಸ್ಸುಗಳ ಸೇವೆ ವಿಸ್ತರಣೆಯಾದಲ್ಲಿ ಈ ಎಲ್ಲ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಸರಕಾರ ಈ ನಿಟ್ಟಿನಲ್ಲಿ ಮನಸ್ಸು ಮಾಡಲಿ.