Thursday, 12th December 2024

ಸರಕಾರಗಳ ಹಗ್ಗಜಗ್ಗಾಟಕ್ಕೆ ಜನರು ಬಲಿಯಾಗಬೇಕೇ ?

ವಿಶ್ಲೇಷಣೆ

ಗಣೇಶ್ ಭಟ್, ವಾರಣಾಸಿ

ಭಾರತೀಯ ಸಂವಿಧಾನದ ಒಂದನೇ ವಿಧಿಯು, ಭಾರತವು ರಾಜ್ಯಗಳ ಒಕ್ಕೂಟವಾಗಿದೆ ಎಂದು ಹೇಳಿದೆ. ಸಂವಿಧಾನವು ಕೇಂದ್ರ ಹಾಗೂ ರಾಜ್ಯ ಸರಕಾರ ಗಳಿಗೆ ನಿರ್ದಿಷ್ಟ ಅಧಿಕಾರಗಳನ್ನು ಹಂಚಿಕೆ ಮಾಡಿದೆ. ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಪನ್ಮೂಲಗಳ ಹಂಚಿಕೆಯು ನಿರ್ದಿಷ್ಟ ಸೂತ್ರದಡಿ ನಡೆಯುತ್ತದೆ. ಭಾರತದಲ್ಲಿ ರಾಜ್ಯಗಳು ಸ್ವಾಯತ್ತ ಆಡಳಿತ ವ್ಯವಸ್ಥೆಯನ್ನು ಹೊಂದಿವೆ.

ರಾಜ್ಯಗಳ ವಾರ್ಷಿಕ ಬಜೆಟ್ ನಿರೂಪಣೆ, ಹಂಚಿಕೆ, ಕಾನೂನು-ಸುವ್ಯವಸ್ಥೆಯ ನಿರ್ವಹಣೆ ಇತ್ಯಾದಿಯಲ್ಲಿ ಕೇಂದ್ರವು ಹಸ್ತಕ್ಷೇಪ ಮಾಡುವಂತಿಲ್ಲ. ಆದರೆ, ರಾಜ್ಯಗಳು ಕೂಡ ಒಕ್ಕೂಟದ ತತ್ವಗಳನ್ನು ಪಾಲಿಸಲು ಬದ್ಧವಾಗಿರ ಬೇಕು. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷವು ಸ್ವಪಕ್ಷವಾಗಿರಲಿ, ವಿಪಕ್ಷವಾಗಿರಲಿ, ರಾಜ್ಯಗಳು ಕೇಂದ್ರದ ಜತೆ ಸಮನ್ವಯವನ್ನು ಕಾಪಾಡಿಕೊಳ್ಳಲೇಬೇಕು. ರಾಜಕೀಯ ಕಾರಣಗಳಿಗೋಸ್ಕರ ಪ್ರತ್ಯೇಕತೆಯ ಕೂಗು ಹಾಕುವುದು, ವಿಚ್ಛಿದ್ರ ಕಾರಿ ಶಕ್ತಿಗಳನ್ನು ಪ್ರೋತ್ಸಾಹಿಸುವುದು ದೇಶದ ಒಕ್ಕೂಟ ವ್ಯವಸ್ಥೆಗೆ ಅಪಾಯಕಾರಿ.

ಇತ್ತೀಚೆಗೆ ೫ ರಾಜ್ಯಗಳ ಚುನಾವಣಾ ಫಲಿತಾಂಶಗಳು ಪ್ರಕಟವಾದ ನಂತರ, ‘ಉತ್ತರ ಭಾರತ-ದಕ್ಷಿಣ ಭಾರತ’ ಎಂಬ ‘ದೇಶಭಂಜನಾ ವಾದ’ವನ್ನು ಹರಿಯ ಬಿಟ್ಟಿರುವುದು, ತಮಿಳುನಾಡಿನ ಸಂಸದರೊಬ್ಬರು ‘ಉತ್ತರ ಭಾರತದವರು ಗೋಮೂತ್ರ ರಾಜ್ಯದವರು’ ಎಂದಿರುವ ಪ್ರಕರಣ ಮೊದಲಾದವು, ಕೆಲವು ರಾಜಕೀಯ ಪಕ್ಷಗಳು ಹೇಗೆ ರಾಜಕೀಯ ಕಾರಣಗಳಿಂದಾಗಿ ದೇಶದ ಒಕ್ಕೂಟ ವ್ಯವಸ್ಥೆಗೆ ಅಪಾಯಕಾರಿಯಾಗಿ ಪರಿಣಮಿಸುತ್ತಿವೆ ಎಂಬುದಕ್ಕೆ ಸಾಕ್ಷಿ ಯಾಗಿವೆ.

ಕೇಂದ್ರ ಸರಕಾರವು ಜನವಿರೋಧಿ ಯೋಜನೆಯೊಂದನ್ನು ಜಾರಿ ಮಾಡಿದಲ್ಲಿ ಅದನ್ನು ರಾಜ್ಯಗಳು ವಿರೋಧಿಸಬಹುದು. ಆದರೆ ಕೇಂದ್ರವು ಜನರ ಅಭಿವೃದ್ಧಿಗೆ ರೂಪಿಸಿದ ಯೋಜನೆಗಳನ್ನು ವಿರೋಧಿಸುವುದು ಅಥವಾ ಅವನ್ನು ರಾಜ್ಯಗಳು ಜಾರಿಮಾಡದಿರುವುದು ದೇಶದ ಪಾಲಿಗೆ ಅಪಾಯಕಾರಿ. ೨೦೧೪ರ ಮೊದಲು ಅಧಿಕಾರದಲ್ಲಿದ್ದ ಯುಪಿಎ ಸರಕಾರವು ಜಾರಿಮಾಡಿದ್ದ ಉದ್ಯೋಗಖಾತ್ರಿ ಯೋಜನೆಯನ್ನು ಅಂದು ಬಿಜೆಪಿ ಅಥವಾ ಎನ್‌ಡಿಎ
ಆಳ್ವಿಕೆಯಿದ್ದ ರಾಜ್ಯಗಳು ತಮ್ಮಲ್ಲಿ ಜಾರಿಮಾಡಿದ್ದವು.

ಜವಾಹರ್ ನಗರ ಮತ್ತು ಗ್ರಾಮೀಣ ರೋಜ್‌ಗಾರ್‌ನಂಥ ಯೋಜನೆಗಳನ್ನೂ ಯಥಾವತ್ತಾಗಿ ಜಾರಿಮಾಡಿದ್ದವು. ಆದರೆ ಇಂದು, ಕೇಂದ್ರ ಸರಕಾರವು ಜಾರಿಗೆ ತಂದ ಯೋಜನೆಗಳು ಮತ್ತು ಕಾನೂನನ್ನು ಕೆಲ ವಿಪಕ್ಷಗಳು ತಮ್ಮ ಆಡಳಿತವಿರುವ ರಾಜ್ಯಗಳಲ್ಲಿ ಜಾರಿಗೆ ತರುತ್ತಿಲ್ಲ. ಇದರಿಂದ ನಷ್ಟವಾಗು ವುದು ಆ ರಾಜ್ಯಗಳ ಜನರಿಗೇ. ಅವರ ಅಭಿವೃದ್ಧಿಯಾಗದಿದ್ದಲ್ಲಿ ದೇಶವು ಅಭಿವೃದ್ಧಿಯಾಗುವುದಾದರೂ ಹೇಗೆ? ದೇಶದ ವಸತಿರಹಿತರಿಗೆ ಮನೆ ಕಟ್ಟಿಸಿ ಕೊಡುವ ಉದ್ದೇಶದೊಂದಿಗೆ ಕೇಂದ್ರ ಸರಕಾರವು ಪ್ರಧಾನಮಂತ್ರಿ ಆವಾಸ್ ಯೋಜನೆಯನ್ನು ಜಾರಿಮಾಡಿದೆ. ಮನೆಯಿಲ್ಲದವರಿಗೆ ಹಾಗೂ ಕಚ್ಚಾ ಮನೆಯನ್ನು ಹೊಂದಿದವರಿಗೆ ಮನೆ ಕಟ್ಟಿಸಲು ಈ ಯೋಜನೆಯಡಿ ೨.೬೫ ಲಕ್ಷ ರುಪಾಯಿಗಳ ಸಬ್ಸಿಡಿಯೊಂದಿಗೆ ೧೨ ಲಕ್ಷ ರು.ವರೆಗೆ ಸಾಲ ನೀಡಲಾಗು ತ್ತದೆ.

ಆದರೆ ಕೇರಳದ ಕಮ್ಯುನಿಸ್ಟ್ ಸರಕಾರವು ಈ ಯೋಜನೆಯ ಹೆಸರನ್ನು ‘ಲೈಫ್ ಭವನ್ ಯೋಜನೆ’ ಎಂದು ಬದಲಾಯಿಸಿತು. ಕೇಂದ್ರದಿಂದ ನೀಡಲಾಗುವ ೨.೬೫ ಲಕ್ಷ ರು.ಗಳಿಗೆ ಕೇರಳ ಸರಕಾರವು ೧.೩೫ ಲಕ್ಷ ರು. ಸೇರಿಸಿ ಒಟ್ಟು ೪ ಲಕ್ಷ ರು. ನೀಡುವ ಯೋಜನೆ ಇದಾಗಿದೆ. ಆದರೆ ಇದರಲ್ಲಿ ಬ್ಯಾಂಕ್ ಸಾಲದ ಸೌಲಭ್ಯವಿಲ್ಲ. ಮನೆಯ ವಿಸ್ತೀರ್ಣವು ೪೨೦ ಚದರಡಿಗಿಂತ ದೊಡ್ಡದಾಗುವಂತೆಯೇ ಇಲ್ಲ ಎನ್ನುವ ಷರತ್ತನ್ನುಕೇರಳ ಸರಕಾರವು ಫಲಾನುಭವಿಗಳ ಮೇಲೆ ವಿಧಿಸಿತು.

ವಿಸ್ತೀರ್ಣವು ೪೨೦ ಚದರಡಿಗಳನ್ನು ಮೀರಿದರೆ ಅನುದಾನಕ್ಕೆ ಕತ್ತರಿ ಹಾಕಲಾಗುತ್ತಿತ್ತು. ಬಡವರು ಬಡವರಾಗಿಯೇ ಉಳಿಯಬೇಕು ಎನ್ನುವಂತಿತ್ತು
ಕೇರಳದ ಈ ಯೋಜನೆ. ಕಳೆದ ೨ ವರ್ಷಗಳ ಹಿಂದಿನವರೆಗೆ ಕೇರಳ ಸರಕಾರದ ಆರ್ಥಿಕ ಸಂಕಷ್ಟದ ನಡುವೆ ಈ ಯೋಜನೆಯು ಹೇಗೋ ಕುಂಟುತ್ತಾ
ಸಾಗುತ್ತಿತ್ತು. ಆದರೆ ಅಲ್ಲಿ ಕಳೆದ ೨ ವರ್ಷಗಳಿಂದ ಹೊಸದಾಗಿ ಯಾವೊಬ್ಬ ಫಲಾನುಭವಿಗೂ ‘ಲೈಫ್ ಭವನ’ವನ್ನು ಮಂಜೂರು ಮಾಡಲಾಗಿಲ್ಲ. ನೂರಾರು ಫಲಾನುಭವಿಗಳು ಈ ಯೋಜನೆಯಡಿ ಹೊಸ ಮನೆ ಕಟ್ಟಿಸಲು ತಮ್ಮ ಮುರುಕಲು ಮನೆಗಳನ್ನು ಮುರಿದು ಕೇರಳ ಸರಕಾರದಿಂದ
ಬಿಡುಗಡೆಯಾಗುವ ಹಣಕ್ಕಾಗಿ ಕಾಯುತ್ತಿದ್ದಾರೆ.

ಪಟ್ಟಣಂತಿಟ್ಟ ಜಿಲ್ಲೆಯ ಲಾಟರಿ ಟಿಕೆಟ್ ಮಾರಾಟಗಾರನೊಬ್ಬ ತನ್ನ ಹಳೆಯ ಮನೆಯನ್ನು ಮುರಿದು, ಈ ಯೋಜನೆಯ ಹಣಕ್ಕಾಗಿ ಕಾದು ಬೇಸತ್ತು ಕೊನೆಗೆ ಆತ್ಮಹತ್ಯೆಗೆ ಶರಣಾದ. ೨೦೨೧ರಲ್ಲಿ ಕೇಂದ್ರ ಸರಕಾರವು ಪ್ರಧಾನಮಂತ್ರಿ ಆವಾಸ್ ಯೋಜನೆಗೆಂದು ಕೇರಳಕ್ಕೆ ಬಿಡುಗಡೆ ಮಾಡಿದ್ದ ೧೯೫.೮೨
ಕೋಟಿ ರು. ಬಳಕೆಯಾಗದೆ ವಾಪಸ್ ಹೋಗಿದೆ ಎಂದಿತ್ತು ಸಿಎಜಿ ವರದಿ. ಕೃಷಿಕರ ನೆರವಿಗೆಂದು ಕೇಂದ್ರ ಸರಕಾರ ರೂಪಿಸಿದ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಜಾರಿಯಲ್ಲೂ ಕೇರಳ ಸರಕಾರ ಹಿಂದೇಟು ಹಾಕಿತ್ತು. ಈ ಯೋಜನೆಯ ಬಗ್ಗೆ ಕೇರಳದ ಕೃಷಿ ಇಲಾಖೆಯ ಅಧಿಕಾರಿಗಳು ಜನರಿಗೆ ಮಾಹಿತಿ ಕೊಡುತ್ತಲೇ ಇರಲಿಲ್ಲ.

ಕೇಂದ್ರವು ೨೦೧೬ರಲ್ಲೇ ಈ ಯೋಜನೆಯನ್ನು ಜಾರಿಮಾಡಿತ್ತಾದರೂ, ಕೇರಳದಲ್ಲಿ ಇದು ಜಾರಿಯಾಗಿದ್ದು ತೀರಾ ಇತ್ತೀಚೆಗೆ. ಕಾಸರಗೋಡು ಭಾಗದ ಕೃಷಿಕರ ಒತ್ತಡಕ್ಕೆ ಮಣಿದು, ಅಲ್ಲಿನ ಪ್ರಧಾನ ಬೆಳೆಯಾದ ಅಡಕೆಯನ್ನು ವಿಮಾ ಪಟ್ಟಿಗೆ ಸೇರಿಸಲಾಗಿದೆ. ೨೦೨೨ರಲ್ಲಿ ಈ ಜಿಲ್ಲೆಯ ನೂರಾರು ಅಡಕೆ ಕೃಷಿಕರು ಪ್ರಧಾನಮಂತ್ರಿ ಹವಾಮಾನಾ ಧಾರಿತ ಬೆಳೆ ವಿಮೆಯನ್ನು ಮಾಡಿಸಿಕೊಂಡರು. ಆ ವರ್ಷದ ಜುಲೈ-ಆಗಸ್ಟ್‌ನಲ್ಲಿ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಅಡಕೆ ತೋಟಗಳು ಕೊಳೆ/ಮಹಾಳಿ ರೋಗಕ್ಕೆ ತುತ್ತಾಗಿ ಕೃಷಿಕರು ಶೇ.೪೦-೫೦ರಷ್ಟು ಬೆಳೆನಾಶವನ್ನು ಅನುಭವಿಸಬೇಕಾಯಿತು. ಆದರೆ ಈ ಭಾಗದ ಹವಾಮಾನ ಇಲಾಖೆಯ ಅಧಿಕಾರಿಗಳು ‘ಸಾಮಾನ್ಯ ಮಳೆ’ ಎಂದು ವರದಿ ಸಲ್ಲಿಸಿದ್ದರಿಂದಾಗಿ ಆ ವರ್ಷಕ್ಕೆ ಜಿಲ್ಲೆಯ ಅಡಕೆ ಕೃಷಿಕರಿಗೆ ಯಾವುದೇ ವಿಮೆ ಪರಿಹಾರ ಸಿಗದು ಎನ್ನಲಾಗಿದೆ. ಪರಿಹಾರಕ್ಕೆಂದು ಕಾಯುತ್ತಿದ್ದ ಕೃಷಿಕರು ಕೇರಳದ ಕೃಷಿ ಇಲಾಖೆಯ ಬೇಜವಾಬ್ದಾರಿಯಿಂದಾಗಿ ನಿರಾಸೆಪಡುವಂತಾಗಿದೆ, ಅಪಾರ ನಷ್ಟ ಅನುಭವಿಸುವಂತಾಗಿದೆ.

ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿಯವರ ಸರಕಾರವು ಕೇಂದ್ರದ ಯೋಜನೆಗಳನ್ನು ಜಾರಿ ಮಾಡುವ ವಿಷಯದಲ್ಲಿ ತೀರಾ ಅಸಹಕಾರ ತೋರುವ ಮತ್ತೊಂದು ವ್ಯವಸ್ಥೆಯಾಗಿದೆ. ಕೇಂದ್ರ ಸರಕಾರವು ಕೃಷಿಕರಿಗೆ ವಾರ್ಷಿಕವಾಗಿ ನೀಡುವ ೬,೦೦೦ ರು. ಆರ್ಥಿಕ ನೆರವಿನ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು ತಮ್ಮ ರಾಜ್ಯದಲ್ಲಿ ಜಾರಿಯಾಗದಂತೆ ತಡೆಹಿಡಿದಿದ್ದಾರೆ ಮಮತಾ. ಇದರಿಂದಾಗಿ ಅಲ್ಲಿನ ೭೦ ಲಕ್ಷ ರೈತರು ಸದರಿ ನಿಧಿ ಯಿಂದ ವಂಚಿತರಾಗಿದ್ದಾರೆ.

ಬಡವರಿಗೆ ವರ್ಷಕ್ಕೆ ೫ ಲಕ್ಷ ರು.ನಷ್ಟು ಮೊತ್ತದ ಉಚಿತ ವೈದ್ಯಕೀಯ ವಿಮೆ ಕೊಡಮಾಡುವ ಆಯುಷ್ಮಾನ್ ಭಾರತ್ ಯೋಜನೆಯ ಜಾರಿಗೂ ಮಮತಾ ಬಿಡುತ್ತಿಲ್ಲ ಎಂದರೆ ಅವರ ರಾಜಕೀಯ ವೈಷಮ್ಯದ ಪರಿಯನ್ನು ಅರ್ಥಮಾಡಿಕೊಳ್ಳಬಹುದು! ಫಸಲ್ ಬಿಮಾ ಯೋಜನೆಯೂ ಅಲ್ಲಿ ಜಾರಿಯಾಗಿಲ್ಲ. ಕೇಂದ್ರದ ಪ್ರಧಾನಮಂತ್ರಿ ಆವಾಸ್ ಯೋಜನೆಯ ಹೆಸ ರನ್ನು ‘ಬಂಗ್ಲಾರ್ ಆವಾಸ್ ಯೋಜನಾ’ ಎಂದೂ, ಸ್ವಚ್ಛ ಭಾರತ ಅಭಿಯಾನದ ಹೆಸರನ್ನು ‘ನಿರ್ಮಲ್ ಬಾಂಗ್ಲಾ’ ಎಂದೂ ಬದಲಿಸಿದೆ ಮಮತಾ ಸರಕಾರ. ಬಿಆರ್‌ಎಸ್ ಪಕ್ಷದ ಸರಕಾರವೂ ಹಿಂದೆ ತೆಲಂಗಾಣದಲ್ಲಿ ಫಸಲ್ ಬಿಮಾ ಯೋಜನೆ ಯನ್ನು ತಡೆಹಿಡಿದಿತ್ತು.

ಉದ್ಧವ್ ಠಾಕ್ರೆ ನೇತೃತ್ವದ ‘ಮಹಾವಿಕಾಸ್ ಅಘಾಡಿ’, ಬಿಜೆಪಿಯ ಮೇಲಿನ ರಾಜಕೀಯ ದ್ವೇಷಕ್ಕೆ ರಾಜ್ಯದ ಹಿತಾಸಕ್ತಿಯನ್ನೇ ಬಲಿಕೊಟ್ಟಿದ್ದಿದೆ. ಅದು ತನ್ನ ಅಧಿಕಾರಾವಧಿಯಲ್ಲಿ, ಭಾರತ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಅಹಮದಾಬಾದ್-ಮುಂಬೈ ನಡುವಿನ ಬುಲೆಟ್ ಟ್ರೇನ್ ಯೋಜನೆಯು ಯಾವುದೇ ಪ್ರಗತಿ ಸಾಧಿಸದಂತೆ ತಡೆಹಿಡಿಯುವಲ್ಲಿ ಯಶಸ್ವಿಯಾಗಿತ್ತು. ಎಲ್ಲ ಕೆಲಸಗಳೂ ನಿರೀಕ್ಷೆಯಂತೆ ನಡೆದಿದ್ದರೆ ಈ ತಿಂಗಳೊಳಗೆ ಬುಲೆಟ್ ಟ್ರೇನ್
ಓಡಾಟ ಶುರುವಾಗಬೇಕಿತ್ತು. ಆದರೆ, ೨೦೧೯ರ ನವೆಂಬರ್ ನಿಂದ ೨೦೨೨ರ ಜೂನ್‌ವರೆಗೆ ಅಽಕಾರದಲ್ಲಿದ್ದ ಉದ್ಧವ್ ಸರಕಾರವು ಈ ಯೋಜನೆಯ ಕಾಮಗಾರಿಗೆ ಮಹಾರಾಷ್ಟ್ರದಲ್ಲಿ ಅಗತ್ಯವಿದ್ದ ಭೂಮಿ ಒದಗಿಸದೆ, ಯೋಜನೆ ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲು ಕಾರಣವಾಗಿತ್ತು. ತರುವಾಯ ಅಧಿಕಾರಕ್ಕೆ ಬಂದ ಶಿಂದೆ ಸರಕಾರವು ಭೂಸ್ವಾಧೀನಕ್ಕೆ ಸಹಕರಿಸಿದ್ದರಿಂದ ಯೋಜನೆಗಿದ್ದ ಅಡೆತಡೆಗಳು ನಿವಾರಣೆಯಾಗಿದ್ದು, ೨೦೨೬ರಲ್ಲಿ ಬುಲೆಟ್ ಟ್ರೇನ್ ಸೇವೆ ಶುರು ವಾಗಲಿದೆ.

ದೆಹಲಿ ಮತ್ತು ಮೀರತ್ ನಗರಗಳ ನಡುವೆ ‘ರೀಜನಲ್ ರ‍್ಯಾಪಿಡ್ ಟ್ರಾನ್ಸಿಟ್ ಸಿಸ್ಟಂ’ ಹೆಸರಿನ ವೇಗದ ರೈಲುಸಂಚಾರ ಯೋಜನೆಯು ಕಾರ್ಯಗತ ಗೊಳ್ಳುತ್ತಿದೆ. ೯೧,೦೦೦ ಕೋಟಿ ರು. ವೆಚ್ಚದ ಈ ಯೋಜನೆಯನ್ನು ಕೇಂದ್ರ ಸರಕಾರ, ಉತ್ತರ ಪ್ರದೇಶ, ಹರಿಯಾಣ, ದೆಹಲಿ ಹಾಗೂ ರಾಜಸ್ಥಾನ ಸರಕಾರ
ಗಳು ಒಟ್ಟಾಗಿ ಕಾರ್ಯಗತಗೊಳಿಸಬೇಕಿದ್ದು, ದೆಹಲಿ ರಾಜ್ಯ ಸರಕಾರವು ತನ್ನ ಪಾಲಾದ ೬,೧೯೯ ಕೋಟಿ ರು.ಗಳನ್ನು ಈ ಯೋಜನೆಗೆ ಒದಗಿಸಬೇಕಿದೆ. ಆದರೆ, ತನ್ನ ಬಳಿ ಹಣವಿಲ್ಲ ಎನ್ನುವ ಮೂಲಕ ದೆಹಲಿಯ ಆಮ್ ಆದ್ಮಿ ಸರಕಾರವು ತನ್ನ ಜವಾಬ್ದಾರಿಯಿಂದ ನುಣಚಿಕೊಳ್ಳಲು ಯತ್ನಿಸಿತು.

ಕೊನೆಗೆ ಈ ಪ್ರಕರಣದಲ್ಲಿ ಮಧ್ಯ ಪ್ರವೇಶಿಸಿದ ಸುಪ್ರೀಂ ಕೋರ್ಟ್, ‘ಜಾಹೀರಾತುಗಳ ಪ್ರಕಟಣೆಗೆ ದೆಹಲಿ ಸರಕಾರದ ಬಳಿ ಹಣವಿದೆಯಾದರೆ, ಈ ಯೋಜನೆಗೇಕಿಲ್ಲ?’ ಎಂದು ಖಾರವಾಗಿ ಪ್ರಶ್ನಿಸಿ, ದೆಹಲಿಯ ಪಾಲನ್ನು ಶೀಘ್ರವಾಗಿ ನೀಡುವಂತೆ ಕೇಜ್ರಿವಾಲ್ ಸರಕಾರಕ್ಕೆ ಆದೇಶಿಸಿದೆ. ಮನೆಮನೆಗೆ ನಲ್ಲಿ ನೀರನ್ನು ಒದಗಿಸುವ ‘ಜಲ್‌ಜೀವನ್’ ಯೋಜನೆಯ ಜಾರಿಯಲ್ಲೂ ಪಶ್ಚಿಮ ಬಂಗಾಳ, ರಾಜಸ್ಥಾನ, ಜಾರ್ಖಂಡ್‌ನಂಥ ರಾಜ್ಯಗಳು ಹಿಂದೆ ಬೀಳಲು ಕೇಂದ್ರದ ಬಗ್ಗೆ ಅವಕ್ಕಿರುವ ಅನಾದರವೇ ಕಾರಣ. ಕೇಂದ್ರದ ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್‌ಇಪಿ) ಜಾರಿಯ ವಿಷಯದಲ್ಲಿ ಕರ್ನಾಟಕ ಸರಕಾರವು ವರ್ತಿಸಿದ ರೀತಿಯೂ ಇದಕ್ಕೆ ಮತ್ತೊಂದು ಉದಾಹರಣೆ.

ಶೇ.೭.೬ರ ಅಭಿವೃದ್ಧಿ ದರದೊಂದಿಗೆ, ಜಾಗತಿಕವಾಗಿ ಅತಿವೇಗವಾಗಿ ಬೆಳೆಯುತ್ತಿರುವ ದೇಶವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಭಾರತ. ಆದರೆ ಅಭಿವೃದ್ಧಿ ಮತ್ತು ಜನಕಲ್ಯಾಣ ಯೋಜನೆಗಳ ವಿಷಯದಲ್ಲಿ ‘ರಿವರ್ಸ್ ಗೇರ್’ ಹಾಕುತ್ತಿರುವ ಕೆಲವೊಂದು ರಾಜ್ಯಗಳು ತಮ್ಮ ದ್ವೇಷ ರಾಜಕಾರಣವನ್ನು ಬದಿಗಿರಿಸಿ ದ್ದಿದ್ದರೆ ಅವೂ ಅಭಿವೃದ್ಧಿ ಹೊಂದಿ, ದೇಶವೂ ಇನ್ನೂ ಹೆಚ್ಚಿನ ವೇಗದ ಜಿಡಿಪಿ ಅಭಿವೃದ್ಧಿ ದರವನ್ನು ಸಾಧಿಸುವಂತಾಗುತ್ತಿತ್ತು.

(ಲೇಖಕರು ಹವ್ಯಾಸಿ ಬರಹಗಾರರು)