Saturday, 14th December 2024

ಸರಕಾರಿ ಶಾಲೆಗಳ ಸ್ಥಿತಿಗತಿ

ಉದ್ಯೋಗದ ನಿಮಿತ್ತ ಪ್ರತಿದಿನವೂ ಬಸ್‌ನಲ್ಲಿ ಬೆಂಗಳೂರು ನಗರದ ಹೊರವಲಯದೆಡೆಗೆ ಪ್ರಯಾಣಿಸುವವರು ನಾವು. ಆ ದೂರದ ಹಾದಿಯಲ್ಲಿ ಸಹಪ್ರಯಾಣಿಕರೆಲ್ಲರೂ ಸುಮಾರಾಗಿ ದಿನವೂ ಕಾಣುವ ಮುಖಗಳೇ. ಅವರ ಪೈಕಿ ಓರ್ವ ಸರಕಾರಿ ಶಾಲಾ ಶಿಕ್ಷಕಿಯೊಂದಿಗೆ ಮಾತನಾಡುತ್ತಿದ್ದಾಗ,  ಅಲ್ಲಿನ ಸ್ಥಿತಿಗತಿ ಬಗ್ಗೆ ಒಂದಿಷ್ಟು ತಿಳಿಯಿತು. ಆಕೆ ಕಾರ್ಯನಿರ್ವಹಿಸುತ್ತಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದರಿಂದ ಐದನೇ ತರಗತಿ ಯವರೆಗೆ ಸಾಕಷ್ಟು ಮಕ್ಕಳಿ ದ್ದಾರೆ.

ಶಾಲೆಯಲ್ಲಿ ಮೂಲಭೂತ ಸೌಕ ರ್ಯಗಳಿಲ್ಲ, ಮಕ್ಕಳ ಶೌಚಾಲಯದ ಚಾವಣಿ ಸೋರುತ್ತದೆ. ಚರಂಡಿ ನೀರು ಶಾಲೆಯ ಒಳಗೆ ಬರುತ್ತದೆ. ಅದನ್ನು ತಡೆಗಟ್ಟಲು ಈ ಶಿಕ್ಷಕಿ ಮಕ್ಕಳ ಜತೆ ಸೇರಿ ತಮ್ಮ ಸ್ವಂತ ಖರ್ಚಿನಲ್ಲಿ ಹೂದೋಟ ಮಾಡಿ ದ್ದಾರೆ. ಮಕ್ಕಳಿಗೆ ಮಧ್ಯಾಹ್ನ ಊಟ ಮಾಡಲು ಸೂಕ್ತ ಜಾಗವಿಲ್ಲ, ಕುಳಿತುಕೊಳ್ಳಲು ಬೆಂಚ್ ಇಲ್ಲ. ಯಾರೋ ಕೊಟ್ಟ ಜಮಖಾನದ ಮೇಲೆ ಕುಳಿತು ಪಾಠ ಕೇಳುತ್ತಾರೆ. ವಾರ್ಷಿಕ ಅನುದಾನವೆಂದು ಆ ಶಾಲೆಗೆ ೫,೦೦೦ ರುಪಾಯಿ ಸಿಗುತ್ತದೆ. ಅದು ಯಾವ ಮೂಲೆಗೆ ಎಂಬುದನ್ನು ನೀವೇ ಊಹಿಸಿಕೊಳ್ಳಿ. ಯಾವುದೇ ಸಂಘ-ಸಂಸ್ಥೆಗಳು, ಎನ್‌ಜಿಒಗಳು ಅನುದಾನ ನೀಡಲು ಮುಂದೆ ಬರುತ್ತಿಲ್ಲ. ನೂರು ಮಕ್ಕಳಿಗಿಂತ ಮೇಲ್ಪಟ್ಟು ಇದ್ದರೆ ಮಾತ್ರ ಅನುದಾನ ಕೊಡುವರಂತೆ. ಬೋರ್ಡ್ ಮೇಲೆ ಬರೆಯಲು ಬೇಕಾಗುವ ಸೀಮೆಸುಣ್ಣವನ್ನೂ ಆ ಶಿಕ್ಷಕಿ ಸ್ವಂತ ಖರ್ಚಿನಲ್ಲಿ ತರುತ್ತಾರಂತೆ. ನೋಟ್ ಪುಸ್ತಕ, ಪೆನ್ಸಿಲ್ ಎಲ್ಲವನ್ನೂ ಯಾರಾದರೂ ಅನುದಾನ ಕೊಟ್ಟಲ್ಲಿ, ಶಿಕ್ಷಕಿ ಅದನ್ನು ಶಿಸ್ತಿನಿಂದ ಬಳಸಿ ವರ್ಷದ ತನಕ ನಾಜೂಕಾಗಿ ಉಪಯೋಗಿಸುತ್ತಾರಂತೆ.

ಸರಕಾರಿ ಅಧಿಕಾರಿಗಳು ತೋರಿಕೆಗೆ ನಗರ ಪ್ರದೇಶಗಳಲ್ಲಿರುವ ಸರಕಾರಿ ಶಾಲೆಗಳಲ್ಲಿ ಕೆಲವು ಸೌಕರ್ಯಗಳನ್ನು ನೀಡಿ, ಮಾಧ್ಯಮಗಳಲ್ಲಿ ಪೋಸು ಕೊಟ್ಟು ‘ಸರಕಾರಿ ಶಾಲೆಗಳಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸಲಾಗಿದೆ’ ಎನ್ನುತ್ತಾರೆ. ಆದರೆ ಇವರ ನಿಜವಾದ ಹೂರಣ ತಿಳಿಯುವುದು ನಗರ ಪ್ರದೇಶಗಳಿಂದ ದೂರವಿರುವ ಶಾಲೆಗಳನ್ನು ನೋಡಿದಾಗ. ಶಿಕ್ಷಕಿಯರು ಎಷ್ಟೆಷ್ಟೋ ದೂರದಿಂದ ಪ್ರಯಾಣ ಮಾಡಿ ಇಂಥ ಶಾಲೆಗಳಿಗೆ ಬಂದು ಮಕ್ಕಳಿಗೆ ಬೋಧಿಸು ತ್ತಾರೆ. ಮಕ್ಕಳೂ ಶ್ರದ್ಧೆಯಿಂದ ಕಲಿಯುತ್ತಾರೆ. ಆದರೆ ಸರಕಾರಿ ಶಾಲೆಗಳನ್ನು ಸರಕಾರವೇ ಕಡೆಗಣಿಸುತ್ತಿದೆ ಎನಿಸುತ್ತಿದೆ. ಎಷ್ಟೋ ಶಾಲೆಗಳಲ್ಲಿ ಶೌಚಾಲ ಯಗಳೇ ಇಲ್ಲದ ಕಾರಣ ಮಕ್ಕಳು ಬಯಲುಶೌಚಕ್ಕೆ ಹೋಗುವಂಥ ಪರಿಸ್ಥಿತಿಯಿದೆ. ಇದು ಯಾವುದೋ ಹಳ್ಳಿಯ ಚಿತ್ರಣವಲ್ಲ; ರಾಜ್ಯದ ರಾಜಧಾನಿಯ ಹತ್ತಿರವಿರುವ ಕೆಲ ಶಾಲೆಗಳ ವ್ಯಥೆಯಿದು. ಹೀಗಿದ್ದಲ್ಲಿ ಮಕ್ಕಳು ಸರಕಾರಿ ಶಾಲೆಗಳಲ್ಲಿ ಕಲಿಯಲು ಯಾಕೆ ಬರುತ್ತಾರೆ ಹೇಳಿ? ತಂದೆ-ತಾಯಿಯರೂ  ಕಷ್ಟಪಟ್ಟಾದರೂ, ಸಾಲ-ಸೋಲ ಮಾಡಿಯಾದರೂ ಖಾಸಗಿ ಶಾಲೆಗಳಿಗೆ ಲಕ್ಷಗಟ್ಟಲೆ ಹಣ ಪೀಕಲು ಸಿದ್ಧರಾಗುತ್ತಾರೆ.

ತಮ್ಮ ಮುಂದಿನ ತಲೆಮಾರಿನವರೂ ಕುಳಿತು ತಿಂದು ತೇಗುವಷ್ಟು ಆಸ್ತಿಪಾಸ್ತಿ ಮಾಡಿಕೊಂಡು ಸರಕಾರಿ ಹಣದಲ್ಲಿ ಸುಖಸಂಸಾರ ನಡೆಸುವ ಪುಢಾರಿಗಳು ಒಮ್ಮೆಯಾದರೂ ಸರಕಾರಿ ಶಾಲೆಗಳಿಗೆ ಭೇಟಿ ನೀಡಲಿ. ಅಲ್ಲಿಯ ಶಿಕ್ಷಕ-ಶಿಕ್ಷಕಿಯರು ಅದೆಷ್ಟು ಕಷ್ಟಪಡುತ್ತಾರೆ, ತಮಗೆ ಸಿಗುವ ಪುಡಿಸಂಬಳದಲ್ಲೇ ಒಂದಷ್ಟು ಹಣವನ್ನುಞಞ ಶಾಲೆಯ ಅಭಿವೃದ್ಧಿಗೆ ಹೇಗೆ ವಿನಿಯೋಗಿಸುತ್ತಿದ್ದಾರೆ ಎಂಬುದನ್ನು ಅವರೊಮ್ಮೆನೋಡಲಿ. ಇಡೀ ವರ್ಷಕ್ಕೆ ನೀಡುವ ೫,೦೦೦ ರು. ಅನುದಾನವು, ಈ ಪುಢಾರಿಗಳು ಧರಿಸುವ ಚಪ್ಪಲಿಯ ಖರ್ಚಿಗಿಂತ ಕಡಿಮೆ ಎನಿಸುವ ದಿಲ್ಲವೇ? ಇದ್ಯಾವ ನ್ಯಾಯ ಹೇಳಿ? ಎಷ್ಟೋ ರಾಜಕಾರಣಿಗಳುತಮ್ಮದೇ ಖಾಸಗಿ ಶಾಲೆಯನ್ನು ತೆರೆದು ಲಕ್ಷಗಟ್ಟಲೆ ಶುಲ್ಕವನ್ನುವಸೂಲಿ ಮಾಡುವಾಗ, ಸರಕಾರಿ ಶಾಲೆಗಳಿಗೆ ಸಾಕಷ್ಟು ಅನುದಾನ
ನೀಡಲು ಏನು ಕಷ್ಟ? ವೋಟುಹಾಕಿ ಕೆಟ್ಟೆವೆಂದು ಈಗ ಕೈ ಕೈ ಹಿಸುಕಿಕೊಳ್ಳುವ ನಾವು, ನಮ್ಮ ಮೂಗುದಾರವನ್ನು ಅವರ ಕೈಗೆ ಕೊಟ್ಟು ಕುಳಿತಂತಿದೆ. ಸರಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ನಗರದ ಹೊರವಲಯದಲ್ಲಿರುವ ಸರಕಾರಿ ಶಾಲೆಗಳ ಅಭಿವೃದ್ಧಿಗೆ ಗಮನ ಕೊಡು ವಂತಾಗಲಿ.