ನೆನಪಿನ ದೋಣಿ
ಯಗಟಿ ರಘು ನಾಡಿಗ್
ಗೋವಿಂದೇಗೌಡರ ಕುರಿತಾದ ಈ ಸಾಲುಗಳಿಗೆ ಒಡ್ಡಿಕೊಳ್ಳುವುದಕ್ಕೂ ಮುನ್ನ ಪುಣ್ಯಕೋಟಿ ಗೋವನ್ನು ಒಮ್ಮೆ ನೆನಪಿಸಿಕೊಂಡುಬಿಡಿ ಅಥವಾ ಹಾಲುಗೆನ್ನೆಯ ಹಸುಳೆಯ ಅಬೋಧ ಕಂಗಳಲ್ಲಿ ತುಳುಕುವ ಮುಗ್ಧತೆಯನ್ನು ಒಮ್ಮೆ ಕಲ್ಪಿಸಿಕೊಂಡುಬಿಡಿ. ಇವೆರಡರ ಸಂಗಮವೇ ಆಗಿದ್ದವರು ಗೋವಿಂದೇಗೌಡರು. ಅವರ ಮಾತು ಮತ್ತು ಕೃತಿಗಳಲ್ಲಿ ಸರಳತೆ-ಸಜ್ಜನಿಕೆ ಕೆನೆಗಟ್ಟಿರುತ್ತಿತ್ತು.
‘ರಾಜಕೀಯ ಮತ್ತು ಪ್ರಾಮಾಣಿಕತೆ ಜತೆಜತೆಯಾಗಿ ಹೆಜ್ಜೆ ಹಾಕಲು ಸಾಧ್ಯವಿಲ್ಲ; ರಾಜಕಾರಣಿಯು ತನ್ನ ಕೈಗೆ ಭ್ರಷ್ಟಾಚಾರದ ಮಸಿಯನ್ನು ಮೆತ್ತಿಕೊಳ್ಳ ದಿರುವುದು ವಿರಳಾತಿವಿರಳ’ ಎಂಬ ಗ್ರಹಿಕೆ ನಮ್ಮಲ್ಲಿದೆ. ಇದೇನೂ ಆ ಕಾಶದಿಂದ ಇದ್ದಕ್ಕಿದ್ದಂತೆ ಉಲ್ಕೆಯಂತೆ ಉದುರಿದ ಅಭಿಪ್ರಾಯವಲ್ಲ, ಬಹಳ ಕಾಲದಿಂದಲೂ ನಮ್ಮೊಳಗೆ ಚಾಲ್ತಿಯಲ್ಲಿರುವಂಥದ್ದು. ನಮ್ಮ ತಥಾ ಕಾಥಿತ ಜನನಾಯಕರು ಈ ಗ್ರಹಿಕೆಗೆ ಕಾಲಾನುಕಾಲಕ್ಕೆ ಗ್ರಾಸ ವನ್ನು ಒದಗಿಸುತ್ತಲೇ ಬಂದಿದ್ದಾರೆ.
ಹೀಗಾಗಿ, ‘ರಾಜಕೀಯ’ ಮತ್ತು ‘ರಾಜಕಾರಣಿ’ ಎಂಬೆರಡು ಶಬ್ದಗಳನ್ನು ಕೇಳಿಸಿಕೊಂಡಾಕ್ಷಣ, ಮೇಲೆ ಉಲ್ಲೇಖಿಸಿರುವ ಗ್ರಹಿಕೆಯನ್ನು ಅನೇಕರು ಮತ್ತೊಮ್ಮೆ ಮೆಲುಕುಹಾಕಿದರೆ ಆದೇನೂ ಅಚ್ಚರಿಯಲ್ಲ. ಆದರೆ, ಕರ್ನಾಟಕದ ರಾಜಕಾರಣದ ಆಗಸದಲ್ಲಿ ಮಿಂಚಿ ಮರೆಯಾದ ಎರಡು ತಾರೆಗಳು ಈ ಗ್ರಹಿಕೆಗೆ ಅಪವಾದ ಎಂಬಂತೆ ನಡೆದುಕೊಂಡಿವೆ. ಇದು ರಾಜ್ಯದ ಜನರ ಪೂರ್ವಜನ್ಮ ಸುಕೃತವೇ ಇರಬೇಕು! ರಾಜ್ಯ ರಾಜಕಾರಣದ ‘ಅಪೂರ್ವ
ಗೌಡದ್ವಯರು’ ಎಂದು ಹೆಮ್ಮೆಯಿಂದ ಹೇಳ ಬಹುದಾದ ಎಚ್.ಜಿ.ಗೋವಿಂದೇಗೌಡರು ಮತ್ತು ಶಾಂತವೇರಿ ಗೋಪಾಲಗೌಡರೇ ಆ ಎರಡು ತಾರೆಗಳು.
ಗೋವಿಂದೇಗೌಡರ ಕುರಿತಾದ ಈ ಸಾಲುಗಳಿಗೆ ಒಡ್ಡಿಕೊಳ್ಳುವುದಕ್ಕೂ ಮುನ್ನ ಪುಣ್ಯಕೋಟಿ ಗೋವನ್ನು ಒಮ್ಮೆ ನೆನಪಿಸಿಕೊಂಡುಬಿಡಿ ಅಥವಾ ಹಾಲುಗೆನ್ನೆಯ ಹಸುಳೆಯ ಅಬೋಧ ಕಂಗಳಲ್ಲಿ ತುಳುಕುವ ಮುಗ್ಧತೆಯನ್ನು ಒಮ್ಮೆ ಕಲ್ಪಿಸಿಕೊಂಡು ಬಿಡಿ.
ಇವೆರಡರ ಸಂಗಮವೇ ಆಗಿದ್ದವರು ಗೋವಿಂದೇ ಗೌಡರು. ಅವರ ಮಾತು ಮತ್ತು ಕೃತಿಗಳಲ್ಲಿ ಸರಳತೆ-ಸಜ್ಜನಿಕೆ ಕೆನೆಗಟ್ಟಿರುತ್ತಿತ್ತು. ಹೀಗಾಗಿ ‘ಮಲೆನಾಡ ಗಾಂಧಿ’ ಎಂದೇ ಅವರು ಜನಜನಿತರಾಗಿದ್ದರು. ಇದು ಗೌಡರು ದುಡ್ಡು ಕೊಟ್ಟು ಖರೀದಿಸಿದ ಬಿರುದಲ್ಲ, ಪ್ರಭಾವ ಬೀರಿ ದಕ್ಕಿಸಿಕೊಂಡ ಹಣೆ ಪಟ್ಟಿಯಲ್ಲ; ಅವರ ಅಭಿಮಾನಿಗಳು, ಅಪ್ತೇಷ್ಟರು ಇಟ್ಟ ‘ಪ್ರೀತಿಪೂರ್ವಕ ಅಡ್ಡಹೆಸರು’!
ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ತಾಲೂಕಿನ ಕಾನೂರು ಗ್ರಾಮದ ಹಿಣಚಿ ಎಂಬಲ್ಲಿ ೧೯೨೬ರ ಮೇ ೨೫ರಂದು ಜನಿಸಿದ ಗೋವಿಂದೇಗೌಡರು, ಐದು ದಶಕಗಳ ತಮ್ಮ ಸಾರ್ವಜನಿಕ ಜೀವನದಲ್ಲಿ ‘ಮಲೆನಾಡ ಗಾಂಧಿ’ ಎಂಬ ತಮಗಿದ್ದ ಪ್ರೀತಿಪೂರ್ವಕ ಅಡ್ಡಹೆಸರಿಗೆ ಸಂಚಕಾರ ತಂದುಕೊಳ್ಳಲಿಲ್ಲ, ನಯಾಪೈಸೆ ಲಂಚವನ್ನು ಮುಟ್ಟಲಿಲ್ಲ ಎಂಬುದು ಹೆಮ್ಮೆಯ ಸಂಗತಿ. ಇದಕ್ಕೆ ಬಹುತೇಕ ಕಾರಣವಾಗಿದ್ದು ಅಂದಿನ ‘ನಿಜವಾದ’ ಸ್ವಾತಂತ್ರ್ಯ ಹೋರಾಟ ಗಾರರಲ್ಲಿ ಅವರು ಒಬ್ಬರೆ ನಿಸಿಕೊಂಡಿದ್ದು.
ಹೌದು, ಇಂಟರ್‌ಮೀಡಿಯೆಟ್ ಓದುವಾಗಲೇ ‘ಕ್ವಿಟ್ ಇಂಡಿಯಾ’ ಮತ್ತು ‘ಮೈಸೂರು ಚಲೋ’ ಚಳವಳಿಗಳ ಸೆಳೆತಕ್ಕೆ ಸಿಲುಕಿ ಅಲ್ಲಿ ಹೆಜ್ಜೆಗುರುತು ಮೂಡಿಸಿದವರು, ಸೆರೆವಾಸ ಅನುಭವಿಸಿದವರು ಗೋವಿಂದೇಗೌಡರು. ನಂತರ ಜೀವನೋಪಾಯಕ್ಕೆಂದು ಪುಟ್ಟದೊಂದು ಅಂಗಡಿ ಇಟ್ಟುಕೊಂಡಿದ್ದ ಗೌಡರು ಒಂದಿಷ್ಟು ಅವಽಗೆ ಶಾಲಾ ಶಿಕ್ಷಕ ವೃತ್ತಿಯಲ್ಲಿ ನಿರತರಾಗಿದ್ದೂ ಇದೆ. ನಂತರ ಅವರನ್ನು ರಾಜಕೀಯ ಕ್ಷೇತ್ರ ಕೈಬೀಸಿ ಕರೆಯಿತು. ಇದು ಕೂಡ
ಒಂದರ್ಥದಲ್ಲಿ ಬಯಸದೇ ಬಂದ ಭಾಗ್ಯವೇ ಅಥವಾ ಇದನ್ನು ‘ಬಲವಂತದ ಮಾಘಸ್ನಾನ’ ಎಂದರೂ ಸರಿಯೇ! ಅದಕ್ಕೆ ಕಾರಣವಾಗಿದ್ದು ಅವರ ಗೆಳೆಯರು.
ರಾಜಕೀಯದಿಂದ ಮಾರುದೂರವಿದ್ದ ಗೌಡರನ್ನು ೧೯೫೨ ರಲ್ಲಿ ಅವರ ಗೆಳೆಯರೆಲ್ಲ ಒತ್ತಾಯಪೂರ್ವಕವಾಗಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಪುರಸಭೆಗೆ ಅವಿರೋಧವಾಗಿ ಆಯ್ಕೆಮಾಡಿಸಿ ಅಧ್ಯಕ್ಷ ಗಾದಿಯನ್ನೂ ಕೊಡಿಸಿಬಿಟ್ಟರು. ಇದು ರಾಜಕೀಯ ಜೀವನದಲ್ಲಿನ ಅವರ ಮೊದಲ ‘ವಾಮನ’ ಚರಣ. ಪುರಸಭೆಯ ಮತ್ತೊಂದು ಅವಧಿಗೂ ಗೌಡರು ಆಯ್ಕೆಯಾದಾಗ ಆ ಹೆಜ್ಜೆ ಗಟ್ಟಿಯಾಗಿ ‘ತ್ರಿವಿಕ್ರಮ’ನಾಗುವ ಎಲ್ಲಾ ಲಕ್ಷಣಗಳನ್ನೂ ತೋರಿತು. ನಂತರ ಕೊಪ್ಪ ತಾಲೂಕು ಅಭಿವೃದ್ಧಿ ಮಂಡಳಿಯಲ್ಲಿ, ವ್ಯವಸಾಯೋತ್ಪನ್ನ ಮಾರಾಟ ಸಮಿತಿಯಲ್ಲಿ ಸೇವೆ ಸಲ್ಲಿಸಿದ ಗೌಡರ ರಾಜಕೀಯ ಬದುಕಿಗೆ ತಿರುವು ಸಿಕ್ಕಿದ್ದು ೧೯೮೩ರಲ್ಲಿ. ಆಗ ನಡೆದ ರಾಜ್ಯ ವಿಧಾನಸಭಾ ಚುನಾವಣೆಗೆಂದು ಶೃಂಗೇರಿ ಕ್ಷೇತ್ರದಿಂದ ಜನತಾ ಪಕ್ಷದ ವತಿಯಿಂದ ಸ್ಪರ್ಧಿಸಿ ಗೆದ್ದ
ಗೋವಿಂದೇಗೌಡರು, ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ಸಂಪುಟದಲ್ಲಿ ಪ್ರಾಥಮಿಕ ಮತ್ತು ವಯಸ್ಕರ ಶಿಕ್ಷಣ ಸಚಿವರೂ ಆದರು. ತರುವಾಯದ ಎಸ್.ಆರ್. ಬೊಮ್ಮಾಯಿ ಯವರ ಸರಕಾರದಲ್ಲಿ ಕಾರ್ಮಿಕ ಮತ್ತು ಕೈಗಾರಿಕಾ ಖಾತೆಯ ಸಚಿವಗಿರಿ ದಕ್ಕಿತು.
ಈ ಅಧಿಕಾರಾವಧಿಗಳಲ್ಲಿ ಗೋವಿಂದೇ ಗೌಡರು ದಕ್ಷತೆಯಿಂದ ಕಾರ್ಯನಿರ್ವಹಿಸಿದರೂ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ (೧೯೮೯) ಶೃಂಗೇರಿಯ ಮತದಾರರು ಅದ್ಯಾಕೋ ಗೌಡರ ಕೈಹಿಡಿಯಲಿಲ್ಲ. ಅದು ಸಹಜವೇ, ಪ್ರಖರ ಸೂರ್ಯನಿಗೂ ಒಮ್ಮೊಮ್ಮೆ ಗ್ರಹಣ ಸಂಭವಿಸುವುದುಂಟು! ಆದರೆ ೧೯೯೪ರಲ್ಲಿ ‘ಗ್ರಹಣ’ ಬಿಟ್ಟು ಶೃಂಗೇರಿ ಕ್ಷೇತ್ರದಿಂದ ವಿಧಾನಸಭೆಗೆ ಗೌಡರು ಆಯ್ಕೆಯಾದರು. ಅಷ್ಟು ಹೊತ್ತಿಗೆ ‘ಜನತಾಪಕ್ಷ’ವು ಒಡೆದು ‘ಜನತಾದಳ’ ವಾಗಿತ್ತು. ೧೯೯೪ರಿಂದ ೧೯೯೯ರವರೆಗೆ ಎಚ್.ಡಿ.ದೇವೇಗೌಡರು ಮತ್ತು ಜೆ.ಎಚ್. ಪಟೇಲರ ಸಂಪುಟಗಳಲ್ಲಿ ಗೋವಿಂದೇ ಗೌಡರಿಗೆ ಶಿಕ್ಷಣ ಸಚಿವಗಿರಿ ಒಲಿದುಬಂತು. ಆ ಅವಧಿಯನ್ನು ಸೇವಾಸಾರ್ಥಕ್ಯದ ಒಂದು ಕಾಲಘಟ್ಟವನ್ನಾಗಿಸಿದ್ದು ಗೋವಿಂದೇಗೌಡರ ಹೆಗ್ಗಳಿಕೆ.
ಕಾರಣ, ಶಿಕ್ಷಕರ ನೇಮಕಾತಿಯಲ್ಲಿ ತಾಂಡವವಾಡುತ್ತಿದ್ದ ಲಂಚಗುಳಿತನ ಮತ್ತು ಭ್ರಷ್ಟಾಚಾರಕ್ಕೆ ಇತಿಶ್ರೀ ಹಾಡಿದರು ಗೋವಿಂದೇಗೌಡರು. ಅದು
ವರೆಗೂ ಜಿಲ್ಲಾ ಮಟ್ಟದಲ್ಲಿ ನಿರ್ವಹಿಸಲ್ಪಡುತ್ತಿದ್ದ ಶಿಕ್ಷಕರ ಆಯ್ಕೆ ಪ್ರಕ್ರಿಯೆಗೆ ಗೋವಿಂದೇಗೌಡರು ಬ್ರೇಕ್ ಹಾಕಿ, ಮೆರಿಟ್ ಹಾಗೂ ರೋಸ್ಟರ್ ಪದ್ಧತಿ ಯಲ್ಲಿ ಈ ಕಾರ್ಯಭಾರವನ್ನು ಸಂಪನ್ನಗೊಳಿಸಿದ್ದರ ಜತೆಗೆ, ಸೇವೆ ಸಲ್ಲಿಸಲು ಬಯಸುವ ಸ್ಥಳದ ಅಯ್ಕೆಗೆ ಸಂಬಂಧಿಸಿ ವಿಕಲಚೇತನರು ಹಾಗೂ ಮಹಿಳೆಯರಿಗೆ ಮೊದಲ ಆದ್ಯತೆ ನೀಡಿದ್ದರು. ಮಾತ್ರವಲ್ಲ, ಮಹಿಳಾ ಅಭ್ಯರ್ಥಿಗಳಿಗೆ ಶೇ.೫೦ರ ಮೀಸಲಾತಿಯೂ ದಕ್ಕಿತು.
ಗೋವಿಂದೇ ಗೌಡರು ಹಮ್ಮಿಕೊಂಡ ಈ ಎಲ್ಲ ವಿನೂತನ ಉಪಕ್ರಮ ಗಳಿಂದಾಗಿ ಒಂದು ಲಕ್ಷಕ್ಕೂ ಹೆಚ್ಚು ಯೋಗ್ಯ ಮತ್ತು ಸಮರ್ಥ ಅಭ್ಯರ್ಥಿಗಳ ಬಾಳು ಬಂಗಾರವಾಯಿತು (ಇದು ಉತ್ಪ್ರೇಕ್ಷೆಯಲ್ಲ, ಗೋವಿಂದೇಗೌಡರ ಸಚಿವಗಿರಿ ಅವಧಿಯಲ್ಲಿ ಹೀಗೆ ಶಿಕ್ಷಕ ಹುದ್ದೆ ಗಿಟ್ಟಿಸಿಕೊಂಡು ಸಾರ್ಥಕ್ಯ ಭಾವ ಕಂಡುಕೊಂಡ ಅನೇಕರು ತಮ್ಮ ಮನೆಯಲ್ಲಿನ ದೇವಾನುದೇವತೆಗಳ ಪಟಗಳ ಜತೆಗೆ ಗೋವಿಂದೇಗೌಡರ ಫೋಟೋವನ್ನೂ ಇಟ್ಟು ಶ್ರದ್ಧಾಭಕ್ತಿಯನ್ನು ತೋರುತ್ತಿರುವುದಿದೆ). ರಾಜ್ಯ ಮತ್ತು ರಾಷ್ಟ್ರ ರಾಜಕಾರಣದ ವಿವಿಧ ಕಾಲಘಟ್ಟಗಳಲ್ಲಿ, ವಿವಿಧ ಸ್ತರಗಳಲ್ಲಿ ಅಧಿಕಾರವನ್ನು ಅನುಭವಿಸಿದವರು,
ತಾವು ಗದ್ದುಗೆಯ ಸುಖ ಕಂಡಿದ್ದು ಸಾಲದೆಂಬಂತೆ ತಮ್ಮ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳನ್ನೂ ಈ ರಾಜಕೀಯದ ಅಡುಂಬೊಲದಲ್ಲಿ ವಿಹರಿಸಲು ಬಿಡುವುದಿದೆ. ಅದಕ್ಕಾಗಿ ಸಾಮ-ದಾನ-ಭೇದ-ದಂಡ ಎಂಬ ಚತುರೋಪಾಯಗಳನ್ನೂ ಮಾಡುವುದಿದೆ.
ಸ್ವತಃ ಮುಂದಕ್ಕೆ ಬಾಗಿ ಬೂಟು ಹಾಕಿಕೊಳ್ಳಲಾಗದಿದ್ದರೂ, ಯಾರೊಬ್ಬರ ನೆರವಿಲ್ಲದೆ ನಾಲ್ಕು ಹೆಜ್ಜೆಯನ್ನು ಸ್ವತಂತ್ರವಾಗಿ ಇಡಲಾಗದಿದ್ದರೂ, ಒಟ್ಟಾರೆ ಯಾಗಿ ದೇಹವೇ ಸಹಕರಿಸದಿದ್ದರೂ ರಾಜಕೀಯ ಸಿಂಹಾಸನದ ವ್ಯಾಮೋಹದಿಂದ ಇನ್ನೂ ಮುಕ್ತರಾಗದ, ಚುನಾವಣಾ ರಾಜಕೀಯದಿಂದ ನಿವೃತ್ತರಾಗದ ಸಾಕಷ್ಟು ರಾಜಕಾರಣಿಗಳನ್ನು ಈ ದೇಶ ಕಾಣುತ್ತಲೇ ಬಂದಿದೆ. ಈ ವಿಷಯದಲ್ಲಿ ವಿಭಿನ್ನತೆ ಮೆರೆದು ಮೇಲ್ಪಂಕ್ತಿಯಾದವರು ಗೋವಿಂದೇ ಗೌಡರು. ‘ವಿದ್ಯಾರ್ಹತೆಯ ಅಗತ್ಯವಿಲ್ಲದ, ನಿವೃತ್ತಿಯ ಹಂಗಿಲ್ಲದ ಕಾರ್ಯಕ್ಷೇತ್ರ’ ಎಂದೇ ಅವರಿವರು ಅಡಿಕೊಳ್ಳುವ ರಾಜಕಾರಣ ದಿಂದ ೧೯೯೯ರಲ್ಲಿ ಅವರು ನಿವೃತ್ತರಾಗಿದ್ದೇ ಇದಕ್ಕೆ ಸಾಕ್ಷಿ.
‘ಮುಂಬರುವ ಪೀಳಿಗೆಗೂ ರಾಜಕೀಯದಲ್ಲಿ ಜಾಗ ಮಾಡಿ ಕೊಡಬೇಕು’ ಎಂದು ಹೇಳಿಕೊಂಡೇ ಸಕ್ರಿಯ ರಾಜಕಾರಣಕ್ಕೆ ಶುಭವಿದಾಯ ಘೋಷಿಸಿದ ಅಪರೂಪದ ಆತ್ಮ, ಪುಣ್ಯಾತ್ಮ ಗೋವಿಂದೇಗೌಡರು! ೨೦೧೬ರ ಜನವರಿ ೬ರಂದು ಇಹಲೋಕ ಯಾತ್ರೆಯನ್ನು ಮುಗಿಸಿದ ಕರ್ನಾಟಕ ರಾಜಕಾರಣದ ಈ
‘ಧ್ರುವತಾರೆ’, ಈಗ ಅಭಿಮಾನಿಗಳ ನೆನಪಿನ ಆಗಸದಲ್ಲಿ ಸದಾ ಮಿನುಗುವ ನಕ್ಷತ್ರ.
* * *
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಖಾಡಕ್ಕಿಳಿದ ಭಾರತದ ಚುನಾವಣಾ ಆಯೋಗದ ಅಧಿಕಾರಿಗಳು ವಿವಿಧೆಡೆ ಕಾರ್ಯಾಚರಣೆ ನಡೆಸಿ, ಮೂಟೆಮೂಟೆಯಷ್ಟು ಹಣದ ಕಂತೆಗಳನ್ನು ವಶಪಡಿಸಿಕೊಂಡಿದ್ದು/ಕೊಳ್ಳುತ್ತಿರುವುದು ದಿನ ಬೆಳಗಾದರೆ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಸಾಲ
ದೆಂಬಂತೆ, ‘ನಿಕ್ಕರ್’ನಿಂದ ಮೊದಲ್ಗೊಂಡು ‘ಕುಕ್ಕರ್’ವರೆಗಿನ ಬಗೆಬಗೆಯ ಕೊಡುಗೆಗಳ ಆಮಿಷ ತೋರಿಸುವವರು, ಚುನಾವಣೆಯ ಹಿಂದಿನ ರಾತ್ರಿ ಜನರಿಗೆ ಹೆಂಡವನ್ನು ಹಂಚಿ ಅವರು ಅದರ ಮತ್ತಿನಲ್ಲಿ ಇರುವಾಗಲೇ ಮತಯಂತ್ರದಲ್ಲಿ ತಮ್ಮ ಪರವಾಗಿ ‘ಜನಮತ’ ಒತ್ತಿಸಿಕೊಂಡು ಪ್ರಜಾಪ್ರಭುತ್ವದ
ಮುಖವಾಡದ ಹಿಂದೆ ತಮ್ಮ ಹಿತಾಸಕ್ತಿಯ ಬೇಳೆ ಬೇಯಿಸಿ ಕೊಳ್ಳುವವರು ನಮ್ಮಲ್ಲೇನೂ ಕಮ್ಮಿಯಿಲ್ಲ. ಇಂಥ ವರನ್ನೆಲ್ಲ ನೋಡಿದಾಗ ‘ಮಲೆನಾಡ ಗಾಂಧಿ’ ಎಚ್.ಜಿ. ಗೋವಿಂದೇ ಗೌಡರು ಅದ್ಯಾಕೋ ನೆನಪಾದರು. ಮತ್ತೋರ್ವ ‘ರಾಜಕೀಯ ತಾರೆ’ ಶಾಂತವೇರಿ ಗೋಪಾಲಗೌಡರ ಕುರಿತಾಗಿ ಮುಂದೊಮ್ಮೆ ಅವಲೋಕಿಸೋಣ.
(ಲೇಖಕರು ಪತ್ರಕರ್ತರು)