ಅವಲೋಕನ
ಗಣೇಶ್ ಭಟ್, ವಾರಣಾಸಿ
ಭಾರತವು ಒಕ್ಕೂಟ ವ್ಯವಸ್ಥೆಯ ಆಡಳಿತವನ್ನು ಹೊಂದಿದ ದೇಶವಾಗಿದೆ. ಕೇಂದ್ರ ಸರಕಾರ, ರಾಜ್ಯ ಸರಕಾರ ಹಾಗೂ ಸ್ಥಳೀಯ
ಸರಕಾರಗಳು (ಮುನಿಸಿಪಲ್ ಕಾರ್ಪೋರೇಶನ್/ ಪಂಚಾಯತ್) ಸಂವಿಧಾನವು ಹಾಕಿಕೊಟ್ಟ ಅಧಿಕಾರ ಹಾಗೂ ಮಿತಿಯ ಗೆರೆಯೊಳಗೆ ಸ್ವಾಯತ್ತ ಆಡಳಿತವನ್ನು ನಡೆಯಿಸುತ್ತಿವೆ. ಕೇಂದ್ರ ಸರಕಾರಗಳು ಹಾಗೂ ರಾಜ್ಯ ಸರಕಾರಗಳಿಗೆ ಕಾನೂನನ್ನು ರೂಪಿಸುವ ಅಧಿಕಾರವಿದೆ.
ರಕ್ಷಣಾ ವ್ಯವಹಾರ, ವಿದೇಶಾಂಗ ನೀತಿ, ಆರ್ಥಿಕ ನೀತಿ ನಿರೂಪಣೆ ಮೊದಲಾದ ವಿಚಾರಗಳು ಕೇಂದ್ರ ಸರಕಾರದ ಜವಾಬ್ದಾರಿ ಗಳಾದರೆ, ರಾಜ್ಯದ ಕಾನೂನು ಸುವ್ಯವಸ್ಥೆ, ಆರ್ಥಿಕತೆ, ಆರೋಗ್ಯ ಸುವ್ಯವಸ್ಥೆ, ನೀರಾವರಿ, ರಸ್ತೆ ಮೊದಲಾದ ವಿಷಯಗಳ ನಿರ್ವಹಣೆಯನ್ನು ರಾಜ್ಯ ಸರಕಾರಗಳು ಮಾಡುತ್ತವೆ. ಸ್ಥಳೀಯ ಅವಶ್ಯಗತೆಗಳಿಗೆ ಅನುಸಾರವಾಗಿ ಯೋಜನೆಗಳನ್ನು ರೂಪಿಸಿ
ಅವುಗಳನ್ನು ಜನರಿಗೆ ತಲುಪಿಸುವ ಜವಾಬ್ದಾರಿ ಸ್ಥಳೀಯಾಡಳಿತ ಸರಕಾರಗಳದ್ದಾಗಿವೆ.
ಕೇಂದ್ರ ಹಾಗೂ ರಾಜ್ಯ ಸರಕಾರಗಳ ನಡುವಿನ ಶಾಸಕಾಂಗ ಸಂಬಂಧಗಳು ಭಾರತೀಯ ಸಂವಿಧಾನದ ೧೧ನೇ ಅಧ್ಯಾಯದ ೨೪೫ ರಿಂದ ೨೫೫ನೇ ವಿಧಿಗಳ ಮೇಲೆ ನಿರೂಪಿಸಲ್ಪಟ್ಟಿವೆ. ಕೇಂದ್ರ ಹಾಗೂ ರಾಜ್ಯಗಳ ನಡುವಿನ ಆಡಳಿತಾತ್ಮಕ ಸಂಬಂಧ ಗಳನ್ನು ಸಂವಿಧಾನದ ೧೧ನೇ ಅಧ್ಯಾಯದ ೨೫೬ ಹಾಗೂ ೨೫೭ನೇ ವಿಧಿಗಳ ಪ್ರಕಾರ ನಿರೂಪಿಸಲಾಗಿದೆ.
ಸಂವಿಧಾನದ ೨೬೮ ರಿಂದ ೨೯೨ರವರೆಗಿನ ವಿಧಿಗಳು ಕೇಂದ್ರ ಹಾಗೂ ರಾಜ್ಯಗಳ ನಡುವಿನ ಆರ್ಥಿಕ ಸಂಬಂಧಗಳಿಗೆ ರೂಪುರೇಷೆಗಳನ್ನು ಕೊಡುತ್ತದೆ. ಒಟ್ಟಿನಲ್ಲಿ ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಹಾಗೂ ರಾಜ್ಯಗಳ ನಡುವೆ ಸಂಘರ್ಷ ವಾಗುವ ಸಾಧ್ಯತೆ ಇಲ್ಲ. ಒಂದು ವೇಳೆ ಅಂತಹ ಸಂಘರ್ಷವೇರ್ಪಟ್ಟರೂ ಅದನ್ನು ನ್ಯಾಯಾಲಯಗಳ ಮುಖಾಂತರ ಪರಿಹರಿಸಿಕೊಳ್ಳುವ ಅವಕಾಶವೂ ಇದೆ.
ಆದರೆ ಇತ್ತೀಚೆಗಿನ ದಿನಗಳಲ್ಲಿ ಭಾರತದಲ್ಲಿ ಕೇಂದ್ರ ಸರಕಾರವು ರಾಜ್ಯ ಸರಕಾರಗಳ ಮೇಲೆ ತನ್ನ ನೀತಿಗಳನ್ನು ಹೇರುತ್ತಿದೆ. ಸಾಂವಿಧಾನಿಕ ಸಂಸ್ಥೆಗಳನ್ನು ಬಲಹೀನಗೊಳಿಸಲಾಗುತ್ತಿದೆ, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯು ಅಪಾಯದಲ್ಲಿದೆ ಎಂದೆ ರೀತಿಯ ಆರೋಪಗಳನ್ನು ಕೆಲವು ರಾಜಕೀಯ ಪಕ್ಷಗಳು ಮಾಡುತ್ತಿವೆ. ಇತ್ತೀಚೆಗೆ ಶಿವಸೇನೆಯ ಸಂಸದ ಹಾಗೂ ವಕ್ತಾರ ಸಂಜಯ್ ರಾವೂತ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಭಾರತ ದೇಶವೂ ಸೋವಿಯತ್ ರಷ್ಯಾದಂತೆ ನುಚ್ಚು ನೂರಾಗಲಿದೆ ಎಂದು ಶಿವಸೇನೆಯ ಮುಖವಾಣಿ ಪತ್ರಿಕೆಯ ಮೂಲಕ ಹೇಳಿಕೆಯನ್ನು ಕೊಟ್ಟಿದ್ಧಾರೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರ ಸರಕಾರವು ಪಶ್ಚಿಮ ಬಂಗಾಲ ರಾಜ್ಯದ ಆಂತರಿಕ ವ್ಯವಹಾರ ಗಳಲ್ಲಿ ತಲೆತೂರಿಸುತ್ತಿದೆ ಎಂದು ಆರೋಪ ಮಾಡುತ್ತಾರೆ. ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿ ಭಾರತದಲ್ಲೀಗ ಪ್ರಜಾಪ್ರಭುತ್ವ ವ್ಯವಸ್ಥೆಯಿಲ್ಲ, ಭಾರತದಲ್ಲಿ ಪ್ರಜಾಪ್ರಭುತ್ವ ಇದೆಯೆನ್ನುವುದು ಕೇವಲ ಭ್ರಮೆ ಎಂದು ಹೇಳುತ್ತಾರೆ. ಕೇಂದ್ರ ಸರಕಾರ ಹಾಗೂ ದೆಹಲಿಯ ಲೆಫ್ಟಿನೆಂಟ್ ಜನರಲ್‌ಗಳು ದೆಹಲಿ ರಾಜ್ಯ ಸರಕಾರವನ್ನು ಸರಿಯಾಗಿ ಕೆಲಸ ಮಾಡಲು ಬಿಡುತ್ತಿಲ್ಲ ಎಂದು ಆರೋಪ ಮಾಡುತ್ತಿರುತ್ತಾರೆ ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ.
ಕೇಂದ್ರ ಸರಕಾರವು ತನಿಖಾ ಸಂಸ್ಥೆಗಳ ಮೂಲಕ ಕೇರಳ ಸರಕಾರವನ್ನು ಬಲಹೀನಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿಕೆ ಕೊಟ್ಟಿದ್ದಾರೆ. ಮೇಲಿನ ರಾಜಕೀಯ ನಾಯಕರ ಹೇಳಿಕೆಗಳನ್ನು ನಂಬಿದರೆ ಭಾರತದಲ್ಲಿ ಕೇಂದ್ರ ಸರಕಾರವು ಸರ್ವಾಡಳಿತವನ್ನು ಮಾಡುತ್ತಿದೆಯೇನೋ ಎನ್ನುವ ಭಾವನೆ ಮೂಡಬಹುದು. ಆದರೆ ಈ ಎಲ್ಲಾ ಹೇಳಿಕೆಗಳು ಕೇವಲ ರಾಜಕೀಯ ಪ್ರೇರಿತ ಹೇಳಿಕೆಗಳೇ ಹೊರತು ಬೇರೇನಲ್ಲ.
ಹಾಗೆ ನೊಡಿದರೆ ಕೆಲವು ರಾಜ್ಯ ಸರಕಾರಗಳು ಕೇಂದ್ರದ ಯೋಜನೆಗಳನ್ನು ಧಿಕ್ಕರಿಸುತ್ತಿವೆ, ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಬಹುಮತದಿಂದ ಅನುಮೋದನೆಗೊಂಡ ಕಾಯಿದೆಗಳನ್ನೂ ತಮ್ಮ ರಾಜ್ಯದಲ್ಲಿ ಜಾರಿಗೊಳಿಸುವುದಿಲ್ಲ ಎಂದು ಹೇಳುತ್ತಿವೆ. ಉದಾಹರಣೆಗೆ ಕೇಂದ್ರ ಸರಕಾರವು ರೈತರ ಹಿತಾಸಕ್ತಿಯಿಂದ ಜಾರಿಗೊಳಿಸಿರುವ ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ
ಯೋಜನೆಯನ್ನು ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರಕಾರವು ಇನ್ನೂ ರಾಜ್ಯದಲ್ಲಿ ಅನುಷ್ಠಾನಗೊಳಿಸಿಲ್ಲ.
ಇದರ ಪರಿಣಾಮವಾಗಿ ಆ ರಾಜ್ಯದ ಸುಮಾರು ೭೦ ಲಕ್ಷ ಸಂಖ್ಯೆಯ ರೈತರಿಗೆ ವಾರ್ಷಿಕವಾಗಿ ಸಿಗುವ ತಲಾ ೬ ಸಾವಿರ ರುಪಾಯಿ ಗಳು ತಪ್ಪಿ ಹೋಗಿದೆ. ಪಶ್ಚಿಮ ಬಂಗಾಲದ ರೈತರಿಗೆ ಒಟ್ಟಾಗಿ ಸುಮಾರು ೪೨೦೦ ಕೋಟಿ ರುಪಾಯಿಗಳಷ್ಟು ನಷ್ಟವಾಗಿದೆ. ರೈತನ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಸಂದಾಯವಾಗುವ ಈ ಯೋಜನೆಯು ತನ್ನ ರಾಜ್ಯ ಸರಕಾರದ ಮೂಲಕ ಸಂದಾಯವಾಗ ಬೇಕು ಎನ್ನುವುದು ಮಮತಾ ಹಠ. ಬಡವರಿಗೆ ವಾರ್ಷಿಕವಾಗಿ ರುಪಾಯಿ ಐದು ಲಕ್ಷದವರೆಗಿನ ಉಚಿತ ಚಿಕಿತ್ಸೆ ನೀಡುವ ಪ್ರಧಾನ್ ಮಂತ್ರಿ ಆಯುಷ್ಮಾನ್ ಭಾರತ್ ಯೋಜನೆಯ ಕ್ರೆಡಿಟ್ ಅನ್ನು ಪ್ರಧಾನ ಮಂತ್ರಿ ತೆಗೆದುಕೊಳ್ಳುತ್ತಿದ್ಧಾರೆ ಎಂದು ಆರೋಪಿಸಿ ಮಮತಾ ಪಶ್ಚಿಮ ಬಂಗಾಳದಲ್ಲಿ ಈ ಯೋಜನೆಯು ಜಾರಿಯಾಗುವುದನ್ನು ತಡೆಹಿಡಿದಿದ್ಧಾರೆ.
ಇದೇ ರೀತಿ ಕೇಂದ್ರದ ಬಹುತೇಕ ಯೋಜನೆಗಳನ್ನು ಪಶ್ಚಿಮ ಬಂಗಾಳದಲ್ಲಿ ಹೆಸರು ಬದಲಿಸಿ ಜಾರಿ ಮಾಡಲಾಗಿದೆ. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯನ್ನು ಅಲ್ಲಿ ಬಾಂಗ್ಲಾರ್ ಗ್ರಾಮೀಣ್ ಸಡಕ್ ಯೋಜನಾ, ಪ್ರಧಾನ್ ಮಂತ್ರಿ ಆವಾಸ್ ಯೋಜನೆಯನ್ನು ಬಾಂಗ್ಲಾರ್ ಗೃಹ ಪ್ರಕಲ್ಪ, ಬೇಟಿ ಬಚಾವೋ, ಬೇಟೀ ಪಡಾವೋ ಯೋಜನೆಯನ್ನು ಕನ್ಯಾಶ್ರೀ ಎಂದೂ ಬದಲಿಸಲಾಗಿದೆ.
ಶಾರದಾ ಚಿಟ್ ಫಂಡ್ ಹಗರಣದ ಆರೋಪಿಯಾಗಿರುವ ಬಂಗಾಳದ ಪೋಲಿಸ್ ಅಧಿಕಾರಿ ರಾಜೀವ್ ಕುಮಾರ್ ಅನ್ನು ಸಿಬಿಐ
ತನಿಖೆಯಿಂದ ರಕ್ಷಿಸಲು ಸರ್ವ ಪ್ರಯತ್ನವನ್ನೂ ಮಾಡುತ್ತಿರುವ ಮಮತಾ, ರಾಜೀವ್ ಕುಮಾರ್ ಮೇಲಿನ ಸಿಬಿಐ ವಿಚಾರಣೆಯ ವಿರುದ್ಧ ಅಹೋರಾತ್ರಿ ಧರಣಿಯನ್ನೂ ಮಾಡಿದ್ದಾರೆ. ಬಿಜೆಪಿಯೇತರ ರಾಜಕೀಯ ಪಕ್ಷಗಳು ಅದರಲ್ಲೂ ಪ್ರತಿ ಪಕ್ಷಗಳು ಆಡಳಿತ ನಡೆಯಿಸುತ್ತಿರುವ ಕೇರಳ,ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಛತ್ತೀಸ್‌ಗಢ, ಜಾರ್ಖಂಡ್ ಹಾಗೂ ಪಂಜಾಬ್ ರಾಜ್ಯಗಳು ಸಿಬಿಐ ತನಿಖೆಯ ಸಾಮಾನ್ಯ ಸಮ್ಮತಿಯನ್ನು ರದ್ದುಪಡಿಸಿಕೊಂಡಿವೆ.
ಸಿಬಿಐ ತನಿಖಾ ಸಂಸ್ಥೆಯ ಮೇಲಿನ ಅಪನಂಬಿಕೆಯೇ ಈ ರಾಜ್ಯಗಳ ಈ ನಡೆಯ ಹಿಂದಿರುವ ಕಾರಣವಾಗಿದೆ. ಆದರೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನಿರ್ದೇಶನದ ಆಧಾರದಲ್ಲಿ ನಡೆಯುವ ಸಿಬಿಐ ತನಿಖೆಯನ್ನು ನಿರ್ಬಂಧಿಸುವ ಹಕ್ಕು ರಾಜ್ಯಗಳಿಗೆ ಇಲ್ಲ. ಕೇರಳದಲ್ಲಿ ನಡೆದ ಚಿನ್ನಕಳ್ಳ ಸಾಗಾಣಿಕೆಯ ಪ್ರಕರಣದ ತನಿಖೆ ನಡೆಯಿಸಿರುವುದು, ದೇಶದ ವಿವಿಧ ಭಾಗಗಳಲ್ಲಿ ನಡೆದ
ಭ್ರಷ್ಟಾಚಾರ ಪ್ರಕರಣ, ಭೂಹಗರಣ ಹಾಗೂ ಆರ್ಥಿಕ ಅವ್ಯವಹಾರಗಳ ತನಿಖೆ ನಡೆಯಿಸುವುದನ್ನು ಆಂತರಿಕ ವಿಷಯಗಳ
ಮೇಲಿನ ಹಸ್ತಕ್ಷೇಪ ಎಂದು ಆರೋಪಿಸುವುದರಲ್ಲಿ ಅರ್ಥವಿಲ್ಲ.
ರಾಜ್ಯ ಸರಕಾರಗಳು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿ ಕೆಲಸ ಮಾಡುತ್ತಿರುವುದಕ್ಕೆ ಇನ್ನೊಂದು ಉದಾಹರಣೆ ನಟ ಸುಶಾಂತ್ ಸಿಂಗ್ ರಾಜ್‌ಪೂತ್ ಸಾವಿನ ವಿಚಾರಣೆಗೆ ಬಂದ ಬಿಹಾರದ ಪೋಲಿಸ್ ಅಧಿಕಾರಿಯನ್ನು ಮಹಾರಾಷ್ಟ್ರ ಸರಕಾರ ನಡೆಸಿಕೊಂಡ ರೀತಿ. ಸುಶಾಂತ್ ಸಿಂಗ್‌ನ ಅನುಮಾನಾಸ್ಪದ ಸಾವಿನ ತನಿಖೆ ನಡೆಯಿಸಲು ೨೦೨೦ರ ಆಗ ೨ರಂದು ಬಿಹಾರದ ಐಪಿಎಸ್ ಅಽಕಾರಿ ವಿನಯ್ ತಿವಾರಿ ಮುಂಬಯಿಗೆ ವಿಮಾನದ ಮೂಲಕ ಬಂದಿಳಿದರು. ಆದರೆ ಕರೋನಾ ನೆಪವೊಡ್ಡಿ ಬೃಹನ್ ಮುಂಬೈ ಕಾರ್ಪೋರೇಶನ್‌ನ ಅಧಿಕಾರಿಗಳು ಐಪಿಎಸ್ ತಿವಾರಿಯವರನ್ನು ಬಲವಂತವಾಗಿ ಕ್ವಾರಂಟೈನ್‌ನಲ್ಲಿ ಇಟ್ಟರು.
ತಿವಾರಿ ಅವರ ಸುಶಾಂತ್ ಸಾವಿನ ತನಿಖೆಯನ್ನು ತಡೆಗಟ್ಟುವುದೇ ಮಹಾರಾಷ್ಟ್ರ ಸರಕಾರದ ಈ ನಡೆಯ ಹಿಂದಿನ ಕಾರಣ ವಾಗಿತ್ತು. ಮಹಾರಾಷ್ಟ್ರ ಸರಕಾರದ ಈ ಕೆಲಸ ಒಕ್ಕೂಟ ವ್ಯವಸ್ಥೆಗೆ ಭೂಷಣವೇ? ಕೆಲವು ರಾಜಕೀಯ ಪಕ್ಷಗಳು ತಮ್ಮ ರಾಜಕೀಯ ಹಿನ್ನಡೆಗೆ ಸಾಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗವನ್ನು ಟೀಕಿಸಲೂ ಹಿಂಜರಿಯಲಿಲ್ಲ.
ಕಳೆದ ಆರೇಳು ವರ್ಷಗಳಲ್ಲಿ ಚುನಾವಣೆಯನ್ನು ಸೋತ ರಾಜಕೀಯ ಪಕ್ಷಗಳು ಇವಿಎಂ ದುರ್ಬಳಕೆಯಾಗಿದೆ ಎಂದು ಆರೋಪಿಸುವುದು ಸರ್ವೇ ಸಾಮಾನ್ಯವಾಗಿದೆ. ರಾಷ್ಟ್ರೀಯ ಕಾಂಗ್ರೆಸ್ ಪಕ್ಷ, ಆಮ್ ಆದ್ಮಿ ಪಕ್ಷ, ಆರ್‌ಜೆ ಡಿ, ಜೆಡಿಎಸ್, ಕಮ್ಯುನಿ ಪಕ್ಷಗಳು, ತೃಣಮೂಲ ಕಾಂಗ್ರೆಸ್ ಮೊದಲಾದ ಪಕ್ಷಗಳು ತಮ್ಮ ಪಕ್ಷದ ಚುನಾವಣಾ ಸೋಲಿಗೆ ಇವಿಎಂಗಳ ಟ್ಯಾಂಪರಿಂಗೇ ಕಾರಣವಾಗಿದೆ ಎಂದು ಆರೋಪಿಸಿವೆ.
ಇವಿಎಂ ಎಂದರೆ ಎವೆರಿ ವೋಟ್ ಫಾರ್ ಮೋದಿ ಎಂದು ರಾಹುಲ್ ಗಾಂಧಿಯವರು ಬಹಳಷ್ಟು ಬಾರಿ ಹೇಳಿದ್ದಾರೆ. ಭಾರತೀಯ ಜನತಾ ಪಕ್ಷವು ಮತಯಂತ್ರವನ್ನು ದುರ್ಬಳಕೆ ಮಾಡಿಕೊಂಡು ಚುನಾವಣೆಗಳನ್ನು ಗೆಲ್ಲುತ್ತಿದೆ ಎನ್ನುವುದು ಇವರೆಲ್ಲರ ಆರೋಪ. ಆದರೆ ಚುನಾವಣಾ ಆಯೋಗವು ಇವಿಎಂಗಳನ್ನು ಭೇದಿಸಲು ಸವಾಲನ್ನು ಹಾಕಿ ಅವಕಾಶವನ್ನು ಕೊಟ್ಟಾಗ ಕಾಂಗ್ರೆಸ್ ಸೇರಿದಂತೆ ಪ್ರಮುಖ ರಾಜಕೀಯ ಪಕ್ಷಗಳು ಇವಿಎಂ ಹ್ಯಾಕಥಾನ್ ಕಾರ್ಯಕ್ರಮದಲ್ಲಿ ಭಾಗ
ವಹಿಸಲೇ ಇಲ್ಲ. ಆದರೆ ನಂತರವೂ ಈ ಪಕ್ಷಗಳು ತಮ್ಮ ಆರೋಪವನ್ನು ಬಿಡಲಿಲ್ಲ. ವಿವಿಪ್ಯಾಟ್ ಅನ್ನು ಅಳವಡಿಸಿದರೂ ಪ್ರತಿಪಕ್ಷಗಳ ಆರೋಪ ನಿಂತಿಲ್ಲ. ಇಲೆಕ್ಟ್ರಾನಿಕ್ ವೋಟಿಂಗ್ ಮತಯಂತ್ರಗಳ ಬದಲು ಬ್ಯಾಲೆಟ್ ಪೇಪರ್ ವೋಟಿಂಗ್ ಮಾಡಬೇಕೆಂದು ಕಾಂಗ್ರೆಸ್ ಸೇರಿದಂತೆ ಕೆಲವು ರಾಜಕೀಯ ಪಕ್ಷಗಳು ಒತ್ತಾಯಿಸುತ್ತಿದ್ದವು.
ಆದರೆ ಇತ್ತೀಚೆಗೆ ನಡೆದ ಗ್ರೇಟರ್ ಹೈದರಾಬಾದ್ ಮುನಿಸಿಪಲ್ ಕಾರ್ಪೋರೇಶನ್ ಚುನಾವಣೆಗಳು ಕರೋನಾ ಕಾರಣದಿಂದ
ಬ್ಯಾಲೆಟ್ ಪೇಪರ್ ಮುಖಾಂತರ ನಡೆದಿದ್ದು ಈ ಚುನಾವಣೆ ಯಲ್ಲೂ ಭಾರತೀಯ ಜನತಾ ಪಕ್ಷವು ಭಾರೀ ಮುನ್ನಡೆಯನ್ನು ಸಾಧಿಸಿ ಬಿಜೆಪಿಯು ಗೆಲ್ಲುತ್ತಿರುವುದು ಮತಯಂತ್ರ ದುರ್ಬಳಕೆಯ ಮೂಲಕವಲ್ಲ ಎಂಬುದನ್ನು ಸಾಬೀತು ಪಡಿಸಿದೆ. ಮೊನ್ನೆ ಮೊನ್ನೆ ಕರ್ನಾಟಕದಲ್ಲಿ ನಡೆದ ಪಂಚಾಯತ್ ಚುನಾವಣೆಗಳಲ್ಲೂ ಬ್ಯಾಲೆಟ್ ಪೇಪರ್‌ಗಳ ಮೂಲಕ ಮತದಾನ ನಡೆದಿದ್ದು ಈ ಚುನಾವಣೆಯಲ್ಲೂ ಬಿಜೆಪಿ ಭಾರೀ ಮುನ್ನಡೆಯನ್ನು ಸಾಧಿಸಿರುವುದು ಮತಯಂತ್ರದ ಮೇಲೆ ಮಾಡಲಾಗುತ್ತಿರುವ ಆರೋಪ ಸುಳ್ಳೆಂದು ಸಾಬೀತುಪಡಿಸಿದೆ.
ಕೇಂದ್ರ ಸರಕಾರ ಕೃಷಿಕರ ಕಲ್ಯಾಣಕ್ಕೆ ಲೋಕಸಭೆ ಹಾಗೂ ರಾಜ್ಯ ಸಭೆಗಳಲ್ಲಿ ಬಹುಮತದ ಮೂಲಕ ಜಾರಿಗೆ ತಂದಿರುವ ಕೃಷಿ ವಿಧೇಯಕವನ್ನು ವಿರೋಽಸಿ ಪಂಜಾಬ್‌ನ ಕೆಲವು ರೈತ ಸಂಘಟನೆಗಳು ದೆಹಲಿಯ ಗಡಿಗಳಲ್ಲಿ ಧರಣಿ ಮಾಡುತ್ತಿವೆ. ವಿಶೇಷ ವೇನೆಂದರೆ ಈ ಧರಣಿಯಲ್ಲಿ ಭಾಗವಹಿಸುತ್ತಿರುವ ಕೆಲವು ವ್ಯಕ್ತಿಗಳು ಪ್ರತ್ಯೇಕ ಖಾಲಿಸ್ತಾನದ ಪರವಾಗಿ ಮಾತನಾಡುತ್ತಿದ್ದಾರೆ, ಜೈಲಿನಲ್ಲಿರುವ ಉಮರ್ ಖಾಲಿದ್‌ನಂತಹ ದೇಶದ್ರೋಹಿಗಳನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ.
ದೆಹಲಿಯ ವಾಯುಮಾಲಿನ್ಯಕ್ಕೆ ಪಂಜಾಬ್‌ನಲ್ಲಿ ರೈತರು ಕೃಷಿ ತ್ಯಾಜ್ಯಕ್ಕೆ ಬೆಂಕಿ ಇರಿಸುವುದೇ ಕಾರಣ ಎಂದು ಆರೋಪಿಸಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಈಗ ಕೃಷಿ ತ್ಯಾಜ್ಯಗಳನ್ನು ಸುಡುವುದನ್ನು ನಿಷೇಧಿಸಿರುವ ಕೃಷಿ ವಿಧೇಯಕವನ್ನು ರಾಜಕೀಯ ಲಾಭಕ್ಕಾಗಿ ವಿರೋಧಿಸುತ್ತಿದ್ದಾರೆ. ವಿವಿಧ ದೇಶಗಳಲ್ಲಿ ಈಗಾಗಲೇ ಕರೋನಾ ವ್ಯಾಕ್ಸಿನೇಶನ್ ಆರಂಭವಾಗಿದ್ದು ಭಾರತದಲ್ಲಿ ಯಾವಾಗ ಕರೋನಾ ಲಸಿಕೆ ಆರಂಭವಾಗಲಿದೆ ಮೋದೀಜೀ? ಎಂದು ಟ್ವೀಟರ್‌ನಲ್ಲಿ ೨೦೨೦ರ ಡಿ.೨೩ರಂದು ರಾಹುಲ್ ಗಾಂಧಿ ಪ್ರಧಾನಿಯನ್ನು ಪ್ರಶ್ನಿಸಿದ್ದರು.
ಆದರೆ ಇದೀಗ ಕೇಂದ್ರ ಸರಕಾರವು ದೇಶೀಯ ಕಂಪನಿಯಾದ ಭಾರತ್ ಬಯೋಟೆಕ್ ಹಾಗೂ ಐಸಿಎಂಆರ್ ಜತೆಯಾಗಿ ತಯಾರಿಸಿರುವ ಕರೋನಾ ವಿರುದ್ಧದ ವ್ಯಾಕ್ಸಿನ್ ಕೋವ್ಯಾಕ್ಸಿನ್‌ನ ತುರ್ತು ಸಂದರ್ಭದ ಬಳಕೆಗೆ ಅನುಮತಿಯನ್ನು ಕೊಟ್ಟಿರುವು ದನ್ನು ಆಕ್ಷೇಪಿಸಿರುವ ರಾಹುಲ್ ಗಾಂಧಿ ಅವರ ಪಕ್ಷದ ನಾಯಕರಾದ ಶಶಿ ತರೂರ್ ಹಾಗೂ ಜೈರಾಮ್ ರಮೇಶ್ ಕೋವ್ಯಾಕ್ಸಿನ್‌ನ ದಕ್ಷತೆಯನ್ನೇ ಪ್ರಶ್ನಿಸುತ್ತಿzರೆ! ಉತ್ತರಪ್ರದೇಶದ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ತಾನು ಬಿಜೆಪಿ ಸರಕಾರವು
ಬಿಡುಗಡೆ ಮಾಡಿರುವ ವ್ಯಾಕ್ಸಿನ್ ಅನ್ನು ಸ್ವೀಕರಿಸುವುದಿಲ್ಲ ಎಂದಿದ್ದಾರೆ.
ಪಾಂಡಿಚೆರಿಯಲ್ಲಿ ಕಾಂಗ್ರೆಸ್ ಪಕ್ಷದ ಆಡಳಿತವಿದ್ದರೂ ಅಲ್ಲಿನ ಸರಕಾರವು ಸುಪ್ರೀಂ ಕೋರ್ಟ್ ಆದೇಶದ ಹೊರತಾಗಿಯೂ ಅಲ್ಲಿನ ಸ್ಥಳೀಯ ಸಂಸ್ಥೆಗಳಿಗೆ ಕಳೆದ ೧೦ ವರ್ಷಗಳಿಂದ ಚುನಾವಣೆ ನಡೆಸಿಲ್ಲ! ನಮ್ಮ ಒಕ್ಕೂಟ ವ್ಯವಸ್ಥೆ ಸರಿಯಿಲ್ಲ ಎಂದು ದೂರುವರೂ ಇವರೇ. ಕಳೆದ ಐದಾರು ವರ್ಷಗಳಲ್ಲಿ ದೇಶದಲ್ಲಿ ಇಂದಿರಾ ಗಾಂಧಿ ಕಾಲದಂತೆ ತುರ್ತು ಪರಿಸ್ಥಿತಿ ಜಾರಿ ಆಗಿಲ್ಲ, ವಿರೋಧ ಪಕ್ಷಗಳು ಆಳ್ವಿಕೆ ನಡೆಯಿಸುತ್ತಿರುವ ರಾಜ್ಯ ಸರಕಾರಗಳ ವಿಸರ್ಜನೆ ಆಗಿಲ್ಲ, ವಿರೋಧ ಪಕ್ಷಗಳ ನಾಯಕರನ್ನು ಮೀಸಾ ಕಾಯಿ ದೆಯಲ್ಲಿ ಜೈಲಿಗಟ್ಟಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿಲ್ಲ, ಮಾಧ್ಯಮ ಹಾಗೂ ಪತ್ರಿಕಾ ಸ್ವಾತಂತ್ರ್ಯಕ್ಕೆ ಕೊರತೆ ಯಾಗಿಲ್ಲ. ಆದರೂ ಕೇಂದ್ರವು ಒಕ್ಕೂಟ ವ್ಯವಸ್ಥೆಯನ್ನು ಉಲ್ಲಂಘಿಸುತ್ತಿದೆ ಎನ್ನುವ ಆರೋಪ ಮಾತ್ರ ನಿಂತಿಲ್ಲ