Sunday, 15th December 2024

ಜಿಪಿಟಿ ದಾಳಿಗೆ ಮದುವೆ ಛತ್ರ ಆಗಲಿವೆ ಕಾಲೇಜುಗಳು !

ಸುಪ್ತ ಸಾಗರ

rkbhadti@gmail.com

ಹುಟ್ಟಿ ಇನ್ನೂ ನೆಟ್ಟಗೆ ಮೂರು ತಿಂಗಳೂ ಆಗಿರದ ಈ ಕೃತಕ ಬುದ್ಧಿಮತ್ತೆಯ ತಾಣ, ಗೂಗಲ್‌ಗೆ ಟಕ್ಕರ್ ನೀಡಿದರೂ ಅಚ್ಚರಿ ಇಲ್ಲ. ಸದ್ಯಕ್ಕೆ ವೆಬ್‌ಸೈಟ್‌ಗೆ ಹೋಗಿ ನೋಂದಾಯಿಸಿಕೊಳ್ಳಬೇಕಾದಂಥ ಕೆಲವು ಮಿತಿಗಳಿವೆಯಾದರೂ ಇದರ ಓಪನ್‌ಎಐನ ಪರಿವ್ಯಾಪ್ತಿ ಅಚ್ಚರಿಯನ್ನು ಹುಟ್ಟಿಸದಿರಲಾರದು.

ಜಗತ್ತು ನಾವು ಯೋಚಿಸುವುದಕ್ಕಿಂತ ವೇಗವಾಗಿ ಬದಲಾಗುತ್ತಿದೆ. ಹಾಗನ್ನಿಸಿದ್ದು, ಮಗಳು ಇಪ್ಪತ್ತ ನಾಲ್ಕು ಗಂಟೆಯೂ ಮೊಬೈಲ್ ಹಿಡಕೊಂಡು ಕುಳಿತಿದ್ದಾಗ. ಎದೆಯೆತ್ತರಕ್ಕೆ ಬೆಳೆ ದವಳು, ಗದರುವಂತಿಲ್ಲ. ಪ್ರಶ್ನಿಸಿದರೆ ಏನಂದುಕೊಂಡು ಬಿಡುತ್ತಾಳೋ ಎಂಬ ಹಳಹಳಿ.

ಹಾಗೆಂದು ಸುಮ್ಮನೆ ಕೂರುವಂತಿಲ್ಲ. ಸಾಲದ್ದಕ್ಕೆ ಪದವಿಯ ಪೈನಲ್‌ನಲ್ಲಿದ್ದಾಳೆ, ಮುಂದೆ ವೈಲ್ಡ್‌ಲೈಫೈ ಫೆಲೋಶಿಪ್ ಅಂತೆಲ್ಲ ಮಾತಾಡುತ್ತಿರುವವಳು. ಮನೆಯಲ್ಲಿ ಒಬ್ಬಳೇ. ಸೆಮಿ ಸ್ಟರ್‌ನ ಪರೀಕ್ಷೆಗಳು ಹತ್ತಿರ ಬರುತ್ತಿದ್ದಂತೆಯಂತೂ ಮೊಬೈಲ್ ಬಿಟ್ಟು ಕ್ಷಣವೂ ಅಗಲಿರ ಲಾರದ ಸ್ಥಿತಿ. ಈಗೀಗಂತೂ ಬೆಳಗಿನ ಜಾವಕ್ಕೆಲ್ಲ ಎದ್ದು ತನ್ನ ರೂಮ್‌ನ ಬಾಗಿಲು ಹಾಕಿ ಕೊಂಡು ಮೊಬೈಲ್ ನೋಡುತ್ತಲೇ ಇರುತ್ತಾಳೆ. ತಡರಾತ್ರಿ ಹನ್ನೆರಡು, ಒಂದಕ್ಕೆ ನಾನು ಕೆಲಸ ಮುಗಿಸಿ ಮನೆಗೆ ಹೋದಾಗಲೂ ಆಕೆಯ ರೂಮ್‌ನ ದೀಪ ಉರಿಯುತ್ತಲೇ ಇರುತ್ತದೆ.

ಹಾಗೆ ಬಾಗಿಲ ಸಂದಿನಲ್ಲಿ ಕಳ್ಳತನದಿಂದ (ಹೆತ್ತವರು ಹಾಗೆ ಮಾಡಬಾರದು ಎಂಬುದು ಗೊತ್ತಿದ್ದೂ) ಇಣುಕಿ ನೋಡಿದರೆ ಮತ್ತದೇ ಹಾಸಿಗೆಗೆ ಒರಗಿ ಕೂತು ಮೊಬೈಲ್ ಆರಾಧನೆ. ಬಾತ್‌ರೂಮ್, ರೆಸ್ಟ್‌ರೂಮ್ ಗೂ ಮೊಬೈಲ್ ಅಂಟಿಕೊಂಡೇ ಹೋಗುತ್ತದೆ. ಆಗಾಗ ಏನೋ ಚಾಟ್ ಮಾಡುತ್ತಿದ್ದಂತೆ ಅನಿಸಿತು, ಸೂಕ್ಷ್ಮವಾಗಿ ಗಮನಿಸಿದಾಗ. ದಿನದಿಂದ ದಿನಕ್ಕೆ ನನ್ನದೆ ಬಡಿತ ಹೆಚ್ಚುತ್ತಲೇ ಇದೆ; ನಾವೂ ಅದೇ ಹದಿವಯಸ್ಸು ದಾಟಿ ಬಂದವ ರಲ್ಲವೇ? ಆದರೆ ಆಗ ಮೊಬೈಲ್ ಹಾಗಿರಲಿ, ಲ್ಯಾಂಡ್ ಲೈನ್‌ಗಳೂ ನಮ್ಮಂಥ ಕೆಳಮಧ್ಯಮ ವರ್ಗದ ಎಲ್ಲಿಂದ ದಕ್ಕಬೇಕು? ಆದರೆ ಈಗ ಸ್ಮಾರ್ಟ್ ಫೋನ್‌ಗಳ ಯುಗ.

ನನಗೆ ನೆನಪಿರುವಂತೆ ಆಕೆ, ಐದೋ, ಆರನೆಯ ತರಗತಿಯಲ್ಲಿದ್ದಾಗಲೋ ನಾನೇ ಆಕೆಯ ಬರ್ತ್‌ಡೆಗೆ ಸ್ಮಾರ್ಟ್ ಫೋನ್ ಗಿಫ್ಟ್ ಮಾಡಿದ್ದೆ; ಎಲ್ಲರಿಗಿಂತ ನನ್ನ ಮಗಳು ಫಾರ್ವರ್ಡ್ ಆಗಿರಬೇಕೆಂಬ ಅಹಮಿಕೆಯಲ್ಲಿ. ಈಗ ಅದೆಲ್ಲ ‘ಡಬ್ಬಾ’ ಫೋನ್‌ಗಳು. ಮೊಬೈಲ್ ಫೋನ್ ತಂತ್ರಜ್ಞಾನ ಅದೆಷ್ಟೋ ಬದಲಾಗಿದೆ. ‘ಕರೆನ್ಸಿ’ ಮನೆಯಿಂದ ಹೊರಗಿದ್ದಾಗ ಮಾತ್ರ.

ಮನೆಯಲ್ಲಿ ವೈಫೈ ಇಲ್ಲದಿದ್ದರೂ, ವೈಫೈ ಟೈಮ್ ಟು ಟೈಮ್ ರೀಚಾರ್ಜ್ ಆಗಿರುತ್ತದೆ. ಗೂಗಲ್, ಚಾಟ್‌ಬಾಕ್ಸ್, ಯೂಟ್ಯೂಬ್, ವಿಡಿಯೋ ಚಾಟಿಂಗ್, ಇನ್‌ಸ್ಟಾದಂಥ ಸೋಶಿಲ್‌ಮೀಡಿಯಾಗಳ ನೂರಾರು ಅವತಾರಗಳು… ಇವೆಲ್ಲದರ ನಡುವೆ ಮಕ್ಕಳನ್ನು, ಅದರಲ್ಲೂ ಬೆಳೆದುನಿಂತ ಹೆಣ್ಣು ಮಕ್ಕಳನ್ನು ಕಾಪಾಡಿಕೊಳ್ಳುವ ನನ್ನಂಥ ನಡು(ಬಾಗದ)ವಯಸ್ಸಿನ ಅಪ್ಪಂದಿರ ಕಷ್ಟ ಅರ್ಥ ವಾಗಬಹುದು.

ಆದರೆ… ತಪ್ಪು ನನ್ನದೇ, ಅಂದರೆ ನಾನಿನ್ನೂ ನಾವು ಓದುತ್ತಿದ್ದ ಕಾಲದ ಟೆಕ್ನಾಲಜಿ(?) ಕಲ್ಪನೆಯಿಂದ ಹೊರಬರದೇ ಇರುವುದು. ಮಕ್ಕಳಿಗೀಗ ನಮ್ಮಂತೆ ಟೆಕ್ಸ್ಟ್ ಬುಕ್‌ಗಳನ್ನು ಹರವಿಕೊಂಡು ಕೂರುವ ಅಗತ್ಯವಿಲ್ಲ. ಬಹುಶಃ ನನಗೆ ಗೊತ್ತಿದಂತೆ ಆಕೆ ಬುಕ್ಸ್‌ ಗಳನ್ನು ಕೊಂಡದ್ದು ಎಸ್ಸೆಸೆಲ್ಸಿಯೇ ಕೊನೆಯಿರಬೇಕು. ಆನಂತರ ಪುಸ್ತಕದ ಸಹವಾಸವೇ ಇಲ್ಲ. ಎಲ್ಲವೂ ಬೆರಳಂಚಿನಲ್ಲಿ ಅವರಿಗೆ ಲಭ್ಯ! ಕರೋನೋತ್ತರ ಜಗತ್ತಿನಲ್ಲಂತೂ ಒಂದು ಸ್ಮಾರ್ಟ್ ಫೋನ್‌ಗಳೇ ಓಡಾಡುವ ಯೂನಿವರ್ಸಿಟಿಗಳು. ಒಂದು ಕ್ಲಿಕ್‌ಗೆ ಮಕ್ಕಳು, ದೂರದ ಆಕ್ಸ್ ಫೋರ್ಡ್‌ನ ಕ್ಲಾಸ್(ಆನ್‌ಲೈನ್)ರೂಮ್‌ನಲ್ಲಿರುತ್ತಾರೆ. ತರಗತಿ ಬೋರೆನಿಸಿದರೆ, ಮ್ಯೂಟ್ ಮಾಡಿ, ರೆಕಾರ್ಡ್‌ಗೆ ಹಾಕಿಟ್ಟು ಮಲಗಿರುತ್ತಾರೆ.

ಮತ್ತದನ್ನು ಕೇಳಿಸಿಕೊಳ್ಳುವುದು ಎಕ್ಸಾಮ್ ಹಿಂದಿನ ದಿನವೇ. ಗೂಗಲ್ ಎಂಬ ಸರ್ವಜ್ಞ, ಇಡೀ ಜಗತ್ತಿನ ಬೇಕೆನಿಸಿದ ಭಾಷೆಯಲ್ಲಿ, ಬೇಕೆನಿಸಿದ ಮಾಹಿತಿಗಳ ಪರ್ವತವನ್ನೇ ನಿಮ್ಮೆದುರು ತೆರೆದಿಡುವಾಗ ಇನ್ನು ಕ್ಲಾಸ್‌ರೂಮ್, ಟೆಕ್ಸ್ಟ್‌ಬುಕ್‌ಗಳ ಹಂಗೆಲ್ಲಿಯದು
ಮಕ್ಕಳಿಗೆ? ಅಷ್ಟಕ್ಕೂ ಮಕ್ಕಳಿಗೀಗ, ‘ಪರೀಕ್ಷೆ ಬಂತು ಓದ್ಕೊಳ್ಳ್ರೋ, ಇನ್ನಾದರೂ ಸ್ವಲ್ಪ ಬುಕ್ ಓಪನ್ ಮಾಡಿ, ಓದೋ ಟೈಮಲ್ಲಿ ಓದದೇ ಇದ್ರೆ ನಮ್ಮಂತೆ ಕತ್ತೆ ಥರ ಜೀವನ ಇಡೀ ಗೆಯ್ಯೋದೇ ಆಗುತ್ತೆ…’ ಅಂತೆಲ್ಲ ಹೆತ್ತವರು ಹೇಳುವ ಅಗತ್ಯವೇ ಇಲ್ಲ.

ಎಸ್ಸೆಸ್ಸೆಲ್ಸಿಗೆ ಮುಂಚೆಯೇ ತಂತಮ್ಮ ಕೆರಿಯರ್‌ಗಳ ಕನಸಿಗೆ ರೆಕ್ಕೆ ಮೂಡಿಸಿಕೊಂಡು, ಹಾರಲು ಸಜ್ಜಾಗಿ ಯಾವುದೋ ಮರದ ರೆಂಬೆಯ ಮೇಲೆ ಕುಳಿತುಬಿಟ್ಟಿರುತ್ತಾರೆ. ಇದಕ್ಕೆ ತಕ್ಕಂತೆಯೇ ತಂತ್ರಜ್ಞಾನ ಕ್ಷಣಕ್ಷಣಕ್ಕೂ ನಮ್ಮ ಮನಸ್ಸಿನ ಯೋಚನೆಗೂ ಮೀರಿ
ಬದಲಾಗುತ್ತಿದೆ. ಅಂಥ ಬದಲಾವಣೆಗೆ ಕಾರಣ ಮತ್ತದೇ ನಮ್ಮ ಯೋಚನೆಯ ಓಟ. ಇಂಥ ಓಟದ ಫಲವೇ ‘ಗೂಗಲ್’ ಎಂಬ ದಶಕಗಳ ಸರ್ಚ್ ಎಂಜಿನ್ ಕ್ಷೇತ್ರದ ಸಾಮ್ರಾಟನನ್ನೂ ಮೂಲೆಗೆ ತಳ್ಳಲು ಸಜ್ಜಾಗಿರುವುದು.

ಹೌದು, ಆಧುನಿಕ ಮಾಹಿತಿ ಯುಗದ ತನ್ನ ಮಗ್ಗುಲು ಬದಲಿಸಿಕೊಂಡು, ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಎಂಬ ಹೊಸ ಅವತಾರ ದಲ್ಲಿ ತಲೆ ಎತ್ತಿದೆ. ಇದಕ್ಕೆ ತಕ್ಕಂತೆ ಸಿದ್ಧವಾಗಿರುವ ಸಿಂಹಾಸನ ‘ಚಾಟ್ ಜಿಪಿಟಿ’ ಎಂಬ ತಂತ್ರಜ್ಞಾನ. ಪರೀಕ್ಷೆಯ ಹೊಸ್ತಿಲಲ್ಲಿರುವ ನನ್ನ ಮಗಳೀಗ ಚಾಟ್ ಜಿಪಿಟಿಯಲ್ಲಿ ವಿಷಯಗಳ ಗಣಿಗಾರಿಕೆಯಲ್ಲಿ ಬ್ಯುಸಿ. ಹಾಗಾಗಿಯೇ ಮೊಬೈಲನ್ನಗಲಿ ಅವಳಿಗೆ ಇರಲಿಕ್ಕಾಗುತ್ತಿಲ್ಲ.

ಅಬ್ಬಾ! ವಾಸ್ತವ ಅರ್ಥವಾದಾಗ ಸಮಾಧಾನವಾದರೂ ಚಾಟ್ ಜಿಪಿಟಿಯ ಗುಂಗೆ ಹುಳು ತಲೆಯಲ್ಲಿ ಕೊರೆಯತೊಡಗಿತು. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸಂಶೋಧನಾ ಸಂಸ್ಥೆ ಓಪನ್ GI ಅಭಿವೃದ್ಧಿಪಡಿಸಿದ GI ಬೆಂಬಲಿತ ಚಾಟ್‌ಬಾಟ್. ಇದು
ನಮ್ಮೆಲ್ಲ ಯಕ್ಷ ಪ್ರಶ್ನೆಗಳಿಗೆ ನ್ಯಾಚುರಲ್ ಲಾಂಗ್ವೇಜ್ ಪ್ರೋಸೆಸ್(NLP) ಮೂಲಕ ಸೂಕ್ತ ಪ್ರತಿಕ್ರಿಯೆ ಅಥವಾ ಉತ್ತರ ನೀಡುತ್ತದೆ. ಪಕ್ಕಾ ಅಕ್ಬರನ ಪಕ್ಕ ಎಲ್ಲವನ್ನೂ ಬಲ್ಲ ಬೀರಬಲ್ಲನಿದ್ದಂತೆ; ಚಾಟ್‌ಜಿಪಿಟಿಯಲ್ಲಿ ನೀವು ಲಾಗಿನ್ ಆಗಿದ್ದರೆ. GI ಇಂಟರ್ನೆಟ್ ಟೆಕ್ಸ್ಟ್ ಡೇಟಾಸೆಟ್‌ನಲ್ಲಿ ತರಬೇತಿ ಪಡೆದ ಇದು, ನೂರಕ್ಕೆ ನೂರು ನಿಮ್ಮ (ಮನುಷ್ಯ)ಭಾಷೆಯಲ್ಲಿಯೇ ಉತ್ತರಗಳನ್ನು ನೀಡುತ್ತೆ.

ಅನುವಾದ, ಟೆಕ್ಸ್ಟ್ ವಿವರಣೆಗಳ ವಿಚಾರದಲ್ಲಂತೂ ಟ್ಯೂಷನ್ ಟೀಚರ್ ಇದ್ದಂತೆ. ಸದ್ಯಕ್ಕೆ ಅಧಿಕೃತ ಚಾಟ್‌ಜಿಪಿಟಿ ವೆಬ್ ಪೇಜ್ ಮೂಲಕ ಮಾತ್ರ ಬಳಸಬಹುದಾದ ಈ ಸೌಲಭ್ಯ ಆಪ್ ಸ್ವರೂಪದಲ್ಲಿ ಬಂದಿಲ್ಲ. ಇಷ್ಟರಲ್ಲೇ ಬರಬಹುದು ಬಿಡಿ, ಬಂದರೆ
ಗೂಗಲ್ ಭವಿಷ್ಯದ ಮೇಲೆ ಒಂದು ಗೂಗ್ಲಿ ಎಸೆತ ಇದ್ದದ್ದೇ ಎನ್ನಲಾಗುತ್ತದೆ. ಹಾಗೆಂದು ಬಲವಾಗಿ ಬೇರಿಳಿಸಿಕೊಂಡು ಕೂತಿರುವ ‘ಗೂಗಲ್ ಸರ್ಚ್ ಎಂಜಿನ್’ನ ಅಸ್ತಿತ್ವವೇ ಕಾಣೆಯಾಗಿಬಿಡುತ್ತದೆ ಎಂದೇನೂ ಅಲ್ಲದಿದ್ದರೂ ಇಷ್ಟರವರೆಗೆ ತಕ್ಷಣಕ್ಕೆ ಎಲ್ಲವನ್ನೂ ಒದಗಿಸುವ ‘ಆಪ್’ದ ಬಾಂಧವನೆನಿಸಿದ್ದ ಗೂಗಲ್ ಜಾಗಕ್ಕೆ ಇಂಥ ಹಲವು ತಂತ್ರಜಾನಗಳು ಲಗ್ಗೆ ಇಡುತ್ತಿರುವುದಂತೂ ಸತ್ಯ.

ತೀರಾ ಡಾಕ್ಟರ್ ಬರೆದುಕೊಟ್ಟ ಮೆಡಿಸನ್‌ಗಳ ಹೆಸರನ್ನೂ, ಕ್ಲಿನಿಕ್ ನಿಂದ ಹೊರಬರುತ್ತಿದ್ದಂತೆಯೇ ಗೂಗಲ್‌ಗೆ ಹಾಕಿ ಸರ್ಚ್
ಮಾಡಿಕೊಳ್ಳದಿದ್ದರೆ ಸಮಾದಾನವೇ ಇಲ್ಲ ಎಂಬಂಥ ಪರಿಸ್ಥಿತಿಗೆ ಬಂದುಮುಟ್ಟಿದ್ದೆವು. ಅಷ್ಟಕ್ಕೂ ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಗಳಿಗೆ ಗೂಗಲ್ಲೇ ಈಗ ಎಷ್ಟೋ ಮಂದಿಗೆ ಫ್ಯಾಮಿಲಿ ಫಿಜಿಸಿಯನ್‌ಗಳು. ಅದಿರಲಿ, ಯಾರೂ ಹಿಂದಿನಂತೆ ಗೊತ್ತಿಲ್ಲದ ಊರಿಗೂ, ದಾರಿ, ವಿಳಾಸ ಕೇಳುತ್ತ ಕೂರುವುದಿಲ್ಲ.

ಮ್ಯಾಪ್ ಹಾಕಿದರೆ, ಗೂಗಲಮ್ಮ ನಿಮ್ಮ ಕೈಹಿಡಿದು ವಿಳಾಸಕ್ಕೆ ಕೊಂಡೊಯ್ದು ಮುಟ್ಟಿಸುತ್ತಾಳೆ. ಎಲ್ಲೋ ನಡೆಯವ ಕಾರ್ಯ ಕ್ರಮವನ್ನು ಇಲ್ಲೇ ಕುಳಿತು ಲೈವ್ ವೀಕ್ಷಿಸಬಹುದು, ಕ್ಷಣದಲ್ಲಿ ಜಗತ್ತಿನ ಯಾವ ಮೂಲೆಗಾದರೂ ಹಣ ಕಳುಹಿಸ ಬಹುದು, ಒಟ್ಟಾರೆ ಕೈಯ್ಯಲ್ಲೊಂದು ಮೋಬೈಲ್ ಅಥವಾ ಲ್ಯಾಪ್‌ಟಾಪ್ ಇದ್ದರೆ, ಅಪ್ಪ ಅಮ್ಮನ್ನು ಹೊರತುಪಡಿಸಿ ಜಗತ್ತೇ ಕೈಬೆರಳ ತುದಿಯಲ್ಲಿದ್ದಂತೆ.

ಇಡೀ ಶತಮಾನದ ಬದುಕು ಒಂದಾದರೆ, ಗೂಗಲ್ ಎರಾ ಎಂದು ಎನ್ನುವಷ್ಟರಮಟ್ಟಿಗೆ ಗೂಗಲ್ ಆವಿಷ್ಕಾರ ಜಗತ್ತನ್ನು ಆವರಿಸಿ ಕೊಂಡಿದೆ. ಹಿಂದೆಲ್ಲ ಹೊಸ ವಿಷಯಗಳಿಗಾಗಿ ಪತ್ರಿಕೆಗಳು, ವಿಶ್ವಕೋಶ, ನಿಗಂಟು, ಜ್ಞಾನಿಗಳು-ವಿಜ್ಞಾನಿಗಳನ್ನು ಅವಲಂಬಿಸಿದ್ದ ಜನರೇಷನ್ ಬದಲಾಗಿ ಎಲ್ಲದಕ್ಕೂ ಗೂಗಲ್‌ಗೆ ಜೋತಾಡುವ ಜನರೇಷನ್ ಬಂದು ಕಾಲು ಶತಮಾನವೇ ಕಳೆದುಹೋಗಿದೆ. ಗೂಗಲ್‌ನಲ್ಲಿ ಇಲ್ಲದ ಎಲ್ಲವೂ ಈ ಜನರೇಷನ್‌ಗೆ ಮೂಢ ನಂಬಿಕೆ!

ಇಂಥದ್ದೊಂದು ದೈತ್ಯ ಮಾಹಿತಿಗೂಡಿನ ಕಲ್ಪನೆ ಹುಟಿದ್ದು 1998ರಲ್ಲಿ, ಕ್ಯಾಲಿಫೋರ್ನಿಯಾದ ಸ್ಟಾನ್ ಫೋರ್ಡ್ ವಿಶ್ವ ವಿದ್ಯಾ ಲಯದ ಕಾರಿಡಾರ್‌ನ ಮೇಲೆ. ಅದೂ ಆಫ್ಟ್ ರಾಲ್ ಇಬ್ಬರು ವಿದ್ಯಾರ್ಥಿಗಳಿಂದ. ಏನೋ ಹುಡುಗಾ(ಕಾ)ಟ ನಿರತ ಲ್ಯಾರಿ ಪೇಜ್ ಮತ್ತು ಸರ್ಜಿ ಬ್ರಿಮ್ ಎಂಬುವವರು ಅಲ್ಗೋರಿದಮ್ ಮೂಲಕ ಪುಟ್ಟದೊಂದು ಕಂಪನಿಯನ್ನು ಹುಟ್ಟುಹಾಕುತ್ತಾರೆ. ಇದಕ್ಕೂ ಮೊದಲು 1996ರಲ್ಲಿ ಈ ಕಂಪನಿ ಬ್ಯಾಕ್‌ರಬ್ ಹೆಸರಿನಲ್ಲಿತ್ತು. ಆಗ ಅವರಿಗೆ ಇಂಥ ದೈತ್ಯ ಸಾಹಸದ ಕಲ್ಪನೆ ಇತ್ತೋ, ಇಲ್ಲವೋ; ಆದರೆ 2004ರ ಬೆಳಗಾಗುವದರಲ್ಲಿ ಅದು ಜಗತ್ತಿನ ಅತಿ ದೊಡ್ಡ ಮೀಡಿಯಾ ಕಂಪನಿಯಾಗಿ ಹೊರ ಹೊಮಿಬಿಟ್ಟಿತ್ತು.

ಮದೊಲೆಲ್ಲ ನ್ಯೂಸ್, ಸರ್ಚ್‌ಗೆ ಸೀಮಿತವಾಗಿದ್ದ ಗೂಗಲ್ ‘ಜಿ.ಮೇಲ್’ ಆರಂಭಿಸಿದ್ದೇ ಅದರ ಅದೃಷ್ಟ ಖುಲಾಯಿಸಲು ಕಾರಣ
ವಾಗಿತ್ತು. ಮುಂದಿನ ಒಂದೇ ವರ್ಷದಲ್ಲಿ ಕಲ್ಪನೆಗೂ ನಿಲುಕದ ‘ಗೂಗಲ್ ಮ್ಯಾಪ್’ ಜಗತ್ತಿಗೆ ಪರಿಚಯಗೊಂಡಿತ್ತು. ಅಷ್ಟೆ, ಮತ್ತೆ ಹಿಂದಿರುಗಿ ನೀಡಿಲ್ಲ. 2008ರಲ್ಲಿ ಗೂಗಲ್ ಕ್ರೋಮ್ ಬಂದ ಮೇಲಂತೂ ಕಾರ್ಯವ್ಯಾಪ್ತಿ ವಿಸ್ತಾರಗೊಳ್ಳುತ್ತಲೇ ಸಾಗಿತು. ಆನಂತರ ನಾಸಾ ಸೇರಿದಂತೆ ಜಾಗತಿಕಮಟ್ಟದಲ್ಲಿ ಅನೇಕ ಪ್ರತಿಷ್ಠಿತ ಸಂಸ್ಥೆಗಳು, ವ್ಯವಸ್ಥೆಗಳು ಪಾಲದಾರಿಕೆಗೆ ಗೂಗಲ್ ಮುಂದೆ
ಸಾಲುಗಟ್ಟಿದವು.

ತೀರಾ ಇತ್ತೀಚಿನ ಒಂದು ದಶಕದಲ್ಲಂತೂ ಗೂಗಲ್ ಪಾರುಪತ್ಯ ಎಷ್ಟರಮಟ್ಟಿಗಿದೆ ಎಂದರೆ, ಜಗತ್ತಿನ ಬರೋಬ್ಬರಿ 827 ಕಂಪನಿ ಗಳನ್ನು ಗೂಗಲ್ ಖರೀದಿಸಿದೆ. ಒಂದು ಅಂಕಿ ಅಂಶದ ಪ್ರಕಾರ 2010ರ ಬಳಿಕ ಸರಾಸರಿ ವಾರಕ್ಕೊಂದು ಕಂಪನಿ ಗೂಗಲ್‌ ನೊಳಗೆ ಕಳೆದು ಹೋಗಿವೆ. ಕ್ಯಾಲಿಫೋರ್ನಿಯಾದಲ್ಲಿ ಹುಟ್ಟಿದ ಕಂಪನಿ ಈಗ ಜಗತ್ತಿನ 40 ದೇಶಗಳಲ್ಲಿ 70ಕ್ಕೂ ಹೆಚ್ಚು ಕಚೇರಿ ಗಳನ್ನು ಹೊಂದಿದೆ.

ಕನಿಷ್ಠವೆಂದರೂ ಎರಡೂ ಕಾಲು ಲಕ್ಷ ಮಂದಿಗೆ ಉದ್ಯೋಗ ಕೊಟ್ಟಿದೆ. ಇಂಥ ಕಂಪನಿ ಒಂದೇ ಒಂದು ಸೆಕೆಂಡ್‌ಗೆ ೯.೫ಲಕ್ಷ ರು. ಹೆಚ್ಚಿನ ಆದಾಯ ಗಳಿಸುತ್ತದೆ. ಅದರ ವಾರ್ಷಿಕ ಗಳಿಕೆ ೫೫ರ ಮುಂದೆ ೧೮ ಸೊನ್ನೆ ಹಾಕಿದರೆ ಎಷ್ಟಾಗುತ್ತದೋ (೫೫,೦೦, ೦೦,೦೦,೦೦೦,೦೦೦,೦೦೦,೦೦೦೦ ಅಷ್ಟು ಅಮೆರಿಕನ್ ಡಾಲರ್‌ಗಳಂತೆ. ಅದನ್ನು ಭಾರತದ ಕರೆನ್ಸಿಗೆ ಪರಿವರ್ತಿಸಿ ಹೇಳಲು ಮತ್ತೆ ಗೂಗಲ್ ಮೊರೆ ಹೋಗುವುದು ಅನಿವಾರ್ಯ! ಇದರಲ್ಲಿ ಮುಕ್ಕಾಲುಪಾಲು ಜಾಹೀರಾತಿನಿಂದಲೇ ಬರುತ್ತದೆ. ಕೇವಲ ಒಂದು ಮಿಲಿಯನ್ ಡಾಲರ್‌ಗೆ ಗೂಗಲ್ ಅನ್ನು ಖರೀದಿಸಲು ಹೊರಟಿದ್ದ ‘ಯಾಹೂ’, ವ್ಯವಹಾರ ಕುದುರದಿದ್ದಕ್ಕೆ ಈಗ ‘ಊಹೂ’ ಅಂತ ನಾಲಿಗೆ ಕಚ್ಚಿಕೊಳ್ಳುತ್ತಿರಬಹುದು.

ಸ್ಮಾರ್ಟ್‌ಪೋನ್ ಜಗತ್ತಿನ್ನು ಮುಕ್ಕಾಲುಪಾಲು ಆವರಿಸಿರುವ ಆಂಡ್ರಾಯ್ಡ್ ಅಪರೆಟಿಂಗ್ ಸಿಸ್ಟಮ್ ಇದೇ ಗೂಗಲ್‌ನ ಕೊಡುಗೆ. ಅದ್ಯಾವ ಗಳಿಗೆ(೨೦೦೬)ಯಲ್ಲಿ ಯೂ ಟ್ಯೂಬನ್ನು ಖರೀದಿಸಿತೋ, ಅದರ ದೆಸೆಯೇ ಬದಲಾಗಿದೆ. ಇವತ್ತು, ಅದನ್ನು ೬ ಬಿಲಿಯನ್ ಜನ ನೋಡುತ್ತಿದ್ದಾರೆ. ರೆಪ್ಪೆ ಮಿಟುಕಿಸುವ ಅವಧಿಯಲ್ಲಿ ೬೦ ಸಾವಿರ ಮಂದಿ ಗೂಗಲ್ ಸರ್ಚ್ ಹೊಡೆದಿರುತ್ತಾರೆ.
ಗೂಗಲ್‌ನ ಸರ್ಚ್ ಎಂಜಿನ್ ಸಾಮರ್ಥ್ಯವೇ 100 ಮಿಲಿಯನ್ ಗಿಗಾ ಬೈಟ್ಸ್. ಅಂದರೆ ಒಂದು ಟಿಬಿ (ಟೆರಾ ಬೈಟ್)ಯ ಒಂದು ಲಕ್ಷ ಹಾರ್ಡ್‌ಡಿಸ್ಕ್ ಅಂದುಕೊಳ್ಳೋಣ.

ಇನ್ನು ಗೂಗಲಾಕಿ ಮನೆಗೆ ಬಂದ ಮೇಲೆ ಟೀವಿ ಮೂಲೆಗುಂಪಾಗಿದೆ. ಆಮೇಲೆ ಗೂಗಲ್ ಅರ್ಥ್ ಸಹ ಬಂತು. ಕೇವಲ ಮಾರ್ಗ ದರ್ಶಿ (ಸ್ಟ್ರೀಟ್ ವ್ಯೂ ಮ್ಯಾಪ್) ಯಾಗಿ ಕಾರ್ಯನಿರ್ವಹಿಸಲೆಂದೇ ೮೦ ಲಕ್ಷ ೪೬ ಸಾವಿರ ಕಿ.ಮಿ ನಷ್ಟು ಉದ್ದದ ಫೋಟೋ ಗಳನ್ನು ತೆಗೆದಟ್ಟುಕೊಂಡಿದೆ. ಭಾರತವನ್ನು ವಾಸ್ಕೋಡಗಾಮ ಕಂಡು ಹಿಡಿದನೋ ಬಿಟ್ಟನೋ; ಗೂಗಲ್‌ಗಾಮಿಯಾಗಿ ಹೊರಟರೆ ಜಗತ್ತಿನ ಮೂಲೆಮೂಲೆಯೂ ಗಮ್ಯ!

ಇಂಗ್ಲಿಷ್ ವರ್ಣ ಮಾಲೆಯ abcd ಯ ಮೇಲೆ ಹೆಸರಿಸಲಾದ, ಕಪ್ ಕೇಕ್, ಡೋನಕಟ್, ಇಕ್ಲೇರ್, -ಯೋ, ಜಿಂಜಿರ ಹೆಡ್, ಹನಿಕಾಂಬ್, ಐಸ್ ಕ್ರೀಮ್ ಹೀಗೆ ಚಿತ್ರ ವಿಚಿತ್ರ ತಿನಿಸುಗಳ ಹೆರಿನ್ಲ್ಲಿ ಗುರುತಿಸಲಾಗುವ ಗೂಗಲ್‌ನ ಅಪರೇಟಿಂಗ್ ಸಿಸ್ಟಮ್, ಕ್ಷಣದಲ್ಲಿ ಜಗತ್ತನ್ನು ಅಳೆದು ಬಿಸಾಕುತ್ತದೆ. ಈಗಂತೂ ನಮ್ಮ ಕನ್ನಡವೂ ಸೇರಿದಂತೆ ಗೂಗಲ್ ಹೋಮ್‌ಪೇಜ್ ಜಗತ್ತಿನ 88
ಭಾಷೆಗಳಲ್ಲಿ ಲಭ್ಯ.ಎಚ್‌ಟಿಎಂಎಲ್ ಎಂದರೇನೆಂದೇ ಅರಿಯದ ಗೂಗಲ್ ಜನಕರು ಅತ್ಯಂತ ಸರಳವಾಗಿಯೇ ಗೂಗಲ್ ಹೋಮ್‌ ಪೇಜ್ ರೂಪಿಸಿದ್ದೂ ಸಹ ಇಂದಿನ ಅದರ ಜನಪ್ರಿಯತೆಗೆ ಕಾರಣ. ಇಂಥ ಗೂಗಲ್‌ನ ಮೂಲ ಹೆಸರು ‘Googol’ ಅಗಿದ್ದು, ಟೈಪಿಂಗ್ ತಪ್ಪಿನಿಂದಾಗಿ ‘Google’’ ಆಗಿಯೇ ಇಂದು ಜನಪ್ರಿಯ.

ಇಂಥ ಗೂಗಲ್ ಅನ್ನು ದಾಟಿ ಸದ್ಯ ಚಾಟಜಿಪಿಟಿ GI ಚಾಟ್‌ಬಾಟ್ ಬಗೆಗೆ ಯುವ ಜನ ಮಾತಾಡಿಕೊಳ್ಳುತ್ತಿದ್ದಾರೆ. ನಾವು ಕೇಳಿದ್ದಕ್ಕೆ ಮಕ್ಕಳೂ ಉತ್ತರದಾಯಿಗಳಾಗದಿರುವ ಈ ಕಾಲದಲ್ಲೂ ಕೆಲವು ಸೆಕೆಂಡುಗಳಲ್ಲಿ ‘ಥಟ್ ಅಂತ’ ಇದರ ಪ್ರಾಂಪ್ಟ್ ಬಳಕೆ ಸಹಜವಾಗಿ ಜನಪ್ರಿಯಗೊಳ್ಳಬಹುದೆಂಬ ನಿರೀಕ್ಷೆ. ಹುಟ್ಟಿ (ನವೆಂಬರ್೩೦, 2022)ಇನ್ನೂ ನೆಟ್ಟಗೆ ಮೂರು ತಿಂಗಳೂ ಆಗಿರದ ಈ ಕೃತಕ ಬುದ್ಧಿಮತ್ತೆಯ ತಾಣ, ಗೂಗಲ್‌ಗೆ ಟಕ್ಕರ್ ನೀಡಿದರೂ ಅಚ್ಚರಿ ಇಲ್ಲ.

ಸದ್ಯಕ್ಕೆ ವೆಬ್‌ಸೈಟ್‌ಗೆ ಹೋಗಿ ನೋಂದಾಯಿಸಿಕೊಳ್ಳಬೇಕಾದಂಥ ಕೆಲವು ಮಿತಿಗಳಿವೆಯಾದರೂ ಇದರ ಓಪನ್ GIನ ಪರಿವ್ಯಾಪ್ತಿ ಅಚ್ಚರಿಯನ್ನು ಹುಟ್ಟಿಸದಿರಲಾರದು. ನಮಗೆ ಬೇಕಾದ ಮಾಹಿತಿಯನ್ನು ಕೇವಲ ಕರ್ಸರ್ ಬ್ಲಿಂಕ್ ಮಾಡುತ್ತಲೇ ನೀಡುವ ಈ ಚಾಟ್ ಬಾಟ್ ಮೊದಲೇ ಫೀಡ್ ಮಾಡಿದ ಮಾಹಿತಿಯನ್ನು ನಮಗೆ ಸಂಸ್ಕರಿಸಿ ಕೊಡುವುದು ವಿಶೇಷ. ಎಂದಿನಂತೆ ಜಾಲತಾಣ ದಲ್ಲಿ ಸಿಗುವ ಮಾಹಿತಿಗಳ ವಿಶ್ವಾಸಾರ್ಹತೆಯ ಪ್ರಶ್ನೆ ಇದ್ದೇ ಇದೆ.

ಆದರೂ, ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ, ಸಂಶೋಧಕರ ಕಾರ್ಯವನ್ನು ಸಾಕಷ್ಟು ಇದು ಸುಲಭ ಮಾಡುವುದು ಸುಳ್ಳಲ್ಲ. ನೀವು ಕೇಳಿದ ಮಾಹಿತಿಯನ್ನು ಪುಟಗಟ್ಟಲೇ ಬರೆದೇ ಕೊಡುವ ಚಾಟ್ ಜಿಪಿಟಿಯ ಸೌಲಭ್ಯ ಇದರ ಮಿತಿಯೂ ಸಹ. ಈಗಿನ್ನೂ ಮಾಹಿತಿ ಅಭಿವೃದ್ಧಿಯ ಹಂತದಲ್ಲಿರುವ ಜಿಪಿಟಿ ಶೇ.೫೦ ಫಲಿತಾಂಶ ಸೂಕ್ತವಾಗಿಯೇ ಇದೆ. ಉಳಿದದ್ದರ ಬಗ್ಗೆ ಇನ್ನೂ ‘ನ್ಯಾಚು ರಲ್ ಲ್ಯಾಂಗ್ವೇಜ್ ಪ್ರೊಸೆಸಿಂಗ್’ ಉನ್ನತ ಮಟ್ಟಕ್ಕೇರಬೇಕಿದೆ.

ಬಹುಶಃ ಅಂದದ್ದು ಕಾರ್ಯಗತಗೊಂಡರೆ, ಗೂಗಲ್‌ನ ಭವಿಷ್ಯವನ್ನು ಒತ್ತೊಟ್ಟಿಗಿಡಿ, ನಮ್ಮ ನಡುವಿನ ಡೊನೇಶನ್ ಪೀಕುವ
ಖಾಸಗಿ ಕಾಲೇಜು ಬಿಲ್ಡಿಂಗ್‌ಗಳು ಮದುವೆ ಛತ್ರ ಗಳಾಗಿಯೋ, ಲಾಡ್ಜಿಂಗ್ ತಾಣವಾಗಿಯೋ ಬದಲಾದರೂ ಅಚ್ಚರಿಯಿಲ್ಲ. ಇದೇ ಸಮಯದಲ್ಲಿ ಮೊದಲೇ ದಾರಿ ತಪ್ಪಿರುವ ನಾನಾ ಸರಕಾರಿ ನೇಮಕಗಳಿಗಾಗಿನ ಸ್ಪರ್ಧಾತ್ಮಕ ಪರೀಕ್ಷೆಗಳು ಇನ್ನಷ್ಟು ಹಳ್ಳ ಹಿಡಿಯುವ ಸಾಧ್ಯತೆಗಳೂ ಇಲ್ಲದಿಲ್ಲ!