Friday, 20th September 2024

ರೈತ, ಗ್ರಾಫಿಕ್ ಡಿಸೈನರ್‌-ಕ್ರಾಪ್ ಎಕ್ಸ್ ಪರ್ಟ್

ತುಂಟರಗಾಳಿ

ಸಿನಿಗನ್ನಡ

ಟಿವಿ ಮತ್ತು ಯೂಟ್ಯೂಬ್ ಚಾನೆಲ್‌ಗಳ ಮೈಕ್ ಮುಂದೆ ‘ಸೂಪರ್, ೧೦೦ ಡೇಸ್ ಗ್ಯಾರಂಟಿ’ ಎನ್ನುವ ಮೊದಲ ದಿನದ ಪ್ರೇಕ್ಷಕರು ಭಾರಿ ಕಿಲಾಡಿಗಳು ಎಂಬುದು ಮತ್ತೆ ಮತ್ತೆ ಪ್ರೂವ್ ಆಗ್ತಾನೇ ಇದೆ. ಚಿತ್ರದ ಮೊದಲ ದಿನ, ಸಾಮಾನ್ಯವಾಗಿ ಸಿನಿಮಾ ನೋಡಿ ಹೊರ ಬಂದವರು, ದೃಶ್ಯ ಮಾಧ್ಯಮದವರು ಕೇಳುವ ‘ಹೇಗಿದೆ ಸಿನಿಮಾ’ ಎಂಬ ಪ್ರಶ್ನೆಗೆ, ಸುಮ್ಮನೆ ಚೆನ್ನಾಗಿದೆ, ಚೆನ್ನಾಗಿದೆ ಅಂದ್ರೆ, ಮತ್ತೆ ’ಏನ್’ ಚೆನ್ನಾಗಿದೆ’ ಅಂತ ಕೇಳ್ತಾರೆ, ಅದಕ್ಕೆ ಇವ್ರ್ ಸಾವಾಸನೇ ಬೇಡ ಅಂತ ಮಾತೆತ್ತಿದ ತಕ್ಷಣ, ‘ಸೂಪರ್, ೧೦೦ ಡೇ ಗ್ಯಾರಂಟಿ, ಇದು ಇನ್ನೊಂದು ಮುಂಗಾರು ಮಳೆ ಆಗುತ್ತೆ’ ಅಂತ ಹೇಳಿ ಅದೃಶ್ಯರಾಗ್ತಾರೆ. ಸಿನಿಮಾ ದವರು ಜನರನ್ನ ಯಾಮಾರಿಸ್ತಾರೆ ಅಂತಾರೆ. ಆದರೆ ಇದನ್ನೆ ನೋಡಿದರೆ ಪ್ರೇಕ್ಷಕರೇ ಸಿನಿಮಾದವರನ್ನೇ ಯಾಮಾರಿಸ್ತಾರೆ ಎನಿಸಬಹುದು.

ಇತ್ತೀಚೆಗೆ ಹಲವು ಚಿತ್ರಗಳಿಗೆ ಹೀಗಾಗುತ್ತಿದೆ. ಅದ್ಭುತ, ೧೦೦ ಡೇಸ್ ಗ್ಯಾರಂಟಿ ಅಂತ ಮೈಕ್ ಮುಂದೆ ಇಷ್ಟು ಹೇಳಿ ತಮ್ಮ ಎರಡು ಮಾತು ಮುಗಿಸಿದ
ಪ್ರೇಕ್ಷಕರು ಮೆಟ್ಟಿಲು ಇಳಿಯುತ್ತಿದ್ದಂತೆ ಹೇಳಿದ್ದು, ಅವ್ನಜ್ಜಿ, ತಲೆಬುಡ ಒಂದೂ ಅರ್ಥ ಆಗಲ್ಲ. ಗುರೂ, ಕ್ರೈಮ್ಯಾಕ್ಸ್ ನಲ್ಲೂ ಅದೇನ್ ಹೇಳ್ತಾನೋ ಅನ್ನೋದು ಅವನಿಗೇ ಗೊತ್ತು ಅಂತ ಕೆಂಡ ಕಾರುತ್ತಿದ್ದರು. ಸಿನಿಮಾ ಪೂರ್ತಿ ಏನೇನನ್ನೋ ಹೇಳಿ ಕೊನೆಯಲ್ಲಿ ಬರೀ ಮೆಸೇಜ್ ಕೊಡುವ ಸಿನಿಮಾಗಳ ಧಾಟಿ ಯಾವ ಕಾಲದ ಹಳೆಯದಾಗಿದೆ.

ಇದು ಪ್ರೇಕ್ಷಕನ ಪಾಲಿಗೆ ‘ಲೇಟ್’ ಡೆಲಿವರಿ’ ಎನಿಸುವುದರಿಂದಲೋ ಏನೋ ಅದು ಅರ್ಥವಾಗದ ಪ್ರೇಕ್ಷಕರಿಂದ ಬೈಗುಳ ಫ್ರೀ ಎನ್ನುವ ಪರಿಸ್ಥಿತಿ. ಅದೇನೇ ಇರಲಿ, ಫೇಸ್‌ಬುಕ್‌ನಲ್ಲಿ ಪೋಸ್ಟ್‌ಗಳನ್ನು ಓದದೇ ಲೈಕ್ ಮಾಡುವ ಸ್ನೇಹಿತರ ಮತ್ತು ಮೈಕ್ ಮುಂದೆ ಪ್ರೇಕ್ಷಕರು ಆಡುವ ಇಂಥ ಮುತ್ತಿನಂಥ ಮಾತು ಗಳನ್ನು ನಂಬಿಕೊಂಡರೆ, ಮಾಧ್ಯಮಗಳ ವಿಮರ್ಶೆಗಳಲ್ಲಿ ಕೊಡುವ ಮೂರೂ ವರೆ ಸ್ಟಾರುಗಳನ್ನೇ, ಮೂರೂವರೆ ವಜ್ರಗಳು ಎಂದುಕೊಂಡರೆ ಸಿನಿಮಾ ಮಾಡಿದವರಿಗೆ ನಿಜವಾದ ರಿಪೋರ್ಟ್ ಸಿಗುವುದಂತೂ ಸಾಧ್ಯವಿಲ್ಲ.

ಲೂಸ್ ಟಾಕ್- ಕರ್ನಾಟಕದ ಕುಡುಕ
ಏನ್ರೀ, ನಮ್ ಚೀಫ್ ಮಿನಿಸ್ಟರು ಮತ್ತೆ ಎಣ್ಣೆ ರೇಟ್  ಜಾಸ್ತಿ ಮಾಡ್ ಬಿಟ್ಟಿದಾರೆ, ಇನ್ನೇಲೆ ನಿಮ್ಮಂಥವರು ಬದುಕೋದಾದ್ರೂ ಹೆಂಗೆ?
– ಎಣ್ಣೆ ರೇಟು ಜಾಸ್ತಿ ಆಗಿ, ಕುಡುಕರ ವ್ಯಾಲ್ಯೂ ಜಾಸ್ತಿ ಆಗಿದೆ ಅಂದ್ಕೊಂಡ್ರಾಯ್ತು ಬಿಡಿ. ಎಣ್ಣೆ ಏಟು ಇನ್ನೂ ಜಾಸ್ತಿ ಆಗುತ್ತೆ.

ಬಿಯರ್ ರೇಟೂ ಜಾಸ್ತಿ ಆಗಿದೆ. ಇದು ನಿಮ್ಮ ದೈನಂದಿನ ಕಾರ್ಯಕ್ರಮದ ಮೇಲೆ ಯಾವ ರೀತಿ ಪರಿಣಾಮ ‘ಬೀರ’ಬಹುದು ಅಂತೀರಾ?
– ಅಯ್ಯೋ, ಹೆಂಡ ಸಾರಾಯಿ ಸಹವಾಸ ಹೆಂಡತಿ ಮಕ್ಕಳು ಉಪವಾಸ ಅಂತ ಕೇಳಿಲ್ವಾ, ಎಣ್ಣೆ ರೇಟು ಜಾಸ್ತಿ ಆದ್ರೆ ಹೆಂಡ್ತಿ ಮಕ್ಳು ಇನ್ನೊಂದೆರಡ್ ದಿನ ಜಾಸ್ತಿ ಉಪವಾಸ ಇರಬೇಕಾಯ್ತದೆ ಅಷ್ಟೆ, ಕುಡುಕರಿಗೇನೂ ಪ್ರಾಬ್ಲಂ ಇಲ್ಲ.

ಆದ್ರೂ, ನಿಮ್ಮ ಜೀವದ್ರವದ ರೇಟು ಜಾಸ್ತಿ ಮಾಡಿದ ಚೀಫ್ ‘ಮಿನಿಸ್ಟರ್’ ಅವರ ಈ ಕ್ರಮದ ಹಿಂದೆ, ಯಾವ ಘನವಾದ ಉದ್ದೇಶ ಇರಬಹುದು ಅಂತ ನಿಮ್ಮ ಅನಿಸಿಕೆ?

– ಎನೂ ಫ್ರೀ ಆಗಿ ಕೊಟ್ರೆ ‘ಚೀಪ್’ ಮಿನಿಸ್ಟರ್ ಆಗ್ಬಿಡ್ತೀನಿ, ಆಲ್ಕೋಹಾಲ್ ರೇಟ್ನಾದ್ರೂ ಜಾಸ್ತಿ ಮಾಡೋಣ ಅನ್ನೋ ಆಲೋಚನೆ ಇರಬಹುದು.

ಅದೇನೋ ಸರಿ, ಕುಡಿಯೋಕ್ ಮುಂಚೆನೇ ಉಚ್ಚೆ ಹೊಯ್ಕೋಳುವಷ್ಟು ಯಾಕ್ ರೇಟ್ ಜಾಸ್ತಿ ಮಾಡಿದ್ರಿ ಅಂತ ಚೀಫ್ ಮಿನಿಸ್ಟರ್‌ಗೇ ಒಂದ್ ಫೋನ್ ಮಾಡಿ ಕೇಳ್ಬಹುದಾ? 
– ಅವರತ್ರ ಮಾತಾಡಾಣ ಅಂತನೇ, ನಿನ್ನೆ ರಾತ್ರಿ ಟೈಟ್ ಆಗುವಷ್ಟು ಕುಡಿದು ಅಲ್ಲಾಡ್ತಾ ಫೋನ್ ಮಾಡಿದ್ದೆ, ಆ ಕಡೆಯಿಂದ ಯುವರ್ ‘ಬ್ಯಾಲೆ’ ಈಸ್ ಟೂ ಲೋ, ಟು ಮೇಕ್ ಎ ಕಾಲ’ ಅಂತ ಬಂತು.

ಹೋಗಿ, ನೀವ್ಯಾಕೆ ಈ ಕುಡಿಯೋ ಚಟನೇ ಬಿಟ್ಬಿಟ್ಟು, ಈ ದರ ಏರಿಕೆಯ ವಿರುದ್ಧ ಪ್ರತಿಭಟನೆ ಮಾಡಬಾರದು?
– ರೀ, ಹಂಗೆ ಮಾಡಿದ್ರೆ, ಅಂತೂ ನಮ್ಮದು ಸಿದ್ದ‘ರಾಮರಾಜ್ಯ’ ಆಯ್ತು ಅಂತ ಖುಷಿ ಪಟ್ಕೋತಾರೆ, ಸುಮ್ನಿರಿ.

(ಕಾಲ್ಪನಿಕ ಸಂದರ್ಶನ)

ನೆಟ್ ಪಿಕ್ಸ್

ಖೇಮುಗೆ ಜಂಗಲ್ ಸಫಾರಿ ಮಾಡೋ ಆಸಕ್ತಿ ಜಾಸ್ತಿ. ಹಂಗಾಗಿ ಗೆಳೆಯರ ಜೊತೆ ಆಗಾಗ ಸಫಾರಿ ಹೋಗ್ತಾ ಇದ್ದ. ಅವನ ಈ ಜಂಗಲ್ ಸಫಾರಿಯಲ್ಲಿ ಸಾಕಷ್ಟು ಬಾರಿ ಅಪಾಯಕಾರಿ ಎನಿಸುವಂಥ ಘಟನೆಗಳು ನಡೆದಿದ್ದವು. ಆದರೆ ಈ ಬಾರಿ ಅವನು ಸೋಮು ಜತೆಗೆ ಮೊದಲ ಬಾರಿ ಜಂಗಲ್ ಸಫಾರಿ ಹೊರಟಿದ್ದ.

ಸೋಮು ಸ್ವಲ್ಪ ದಡ್ಡ. ಜೊತೆಗೆ, ಸ್ಲೋ ಕೂಡ ಆಗಿದ್ರಿಂದ, ಖೇಮು ಹೆಚ್ಚು ಹುಷಾರಾಗಿದ್ದು, ಕಾಡಿನಲ್ಲಿ ಸಿಗೋ ಪ್ರಾಣಿಗಳಿಂದ ಹೇಗೆ ತಪ್ಪಿಸಿಕೊಳ್ಳಬೇಕು ಅಂತ ಯೋಜನೆ ಹಾಕ್ಕೊಂಡು ಸೋಮುವನ್ನು ಕರ್ಕೊಂಡು ಹೊರಟ. ಇಬ್ಬರೂ ಜಂಗಲ್ ಸಫಾರಿ ಹೊರಟ್ರು. ಹೋಗುವಾಗ, ಖೇಮು, ನಾನು ಮುಂದೆ ಹೋಗ್ತೀನಿ, ನಂಗೆ ಯಾವುದಾದ್ರೂ ಪ್ರಾಣಿ ಕಾಣಿಸಿದ್ರೆ ಎಚ್ಚರಿಕೆ ಕೊಡ್ತೀನಿ ಅಂತ ಹೇಳಿದ. ಸರಿ ಅಂತ ಇಬ್ಬರೂ ಹೊರಟರು. ಈ ಬಾರಿ ಯಾಕೋ ಯಾವ ಕಾಡುಪ್ರಾಣಿಗಳೂ ಕಾಣಿಸಲಿಲ್ಲ.

ಕಾಡಿನ ಒಳಗೆ ಸ್ವಲ್ಪ ದೂರ ಹೋದ ಮೇಲೆ, ಖೇಮುಗೆ ಇದ್ದಕ್ಕಿದ್ದಂತೆ ಸೈಡಿನ ಪೊದೆಯಿಂದ ಒಂದು ಚಿರತೆ ನುಗ್ಗಿ ಬರ್ತಾ ಇದ್ದಿದ್ದು ಕಾಣಿಸಿತು. ಕೂಡಲೇ, ‘ಚಿರತೆ, ಓಡು’ ಅಂತ ಕೂಗಿ ಓಡಿ ತಪ್ಪಿಸಿಕೊಂಡ ಖೇಮು. ಆದರೆ ಸೋಮು ಮಾತ್ರ ಅ ನಿಂತಿದ್ದ. ಚಿರತೆ ಅವನ ಮೇಲೆ ಅಟ್ಯಾಕ್ ಮಾಡಿತು. ಅಷ್ಟರಲ್ಲಿ ಖೇಮು ವಾಪಸ್ ಬಂದು ತನ್ನ ಬಳಿ ಇದ್ದ ದೊಡ್ಡ ಕುಡುಗೋಲು ತೋರಿಸಿ ಚಿರತೆಯನ್ನು ಹೇಗೋ ಹೆದರಿಸಿ ಓಡಿಸಿದ. ಆಮೇಲೆ ಸೋಮು ಕಡೆ ನೋಡಿ, ‘ನಿಂಗೇನ್ ಬುದ್ಧಿ ಇದ್ಯಾ? ಚಿರತೆ, ಓಡು ಅಂತ ನಾನು ಎಚ್ಚರಿಕೆ ಕೊಟ್ರೂ ನೀನ್ಯಾಕೆ ಇ ನಿಂತಿದ್ದೆ, ಚಿರತೆ ಬಂದಿದ್ದು ಕಾಣಿಸಲಿಲ್ವಾ ನಿಂಗೆ?’ ಅಂತ ಕೇಳಿದ ಖೇಮು. ಅದಕ್ಕೆ ಸೋಮು ಹೇಳಿದ ಚಿರತೆ ಏನೋ ಕಾಣಿಸ್ತು. ಆದ್ರೆ, ನೀನು ‘ಚಿರತೆ, ಓಡು’ ಅಂತ ಎಚ್ಚರಿಕೆ ಕೊಟ್ಟಿದ್ದು ಚಿರತೆಗೆ ಅಂದ್ಕೊಂಡು ಸುಮ್ನೆ ಇದ್ದೆ’

ಲೈನ್ ಮ್ಯಾನ್

ಕುಡುಕರ ಹಾಡು
– ಬಾರೊಂದು ಭಾವಗೀತೆ, ಕಿವಿ ಮುಚ್ಕೊಂಡ್ರುನೂ ಕೇಳುತೈತೆ…

ರೈತರು ಮತ್ತು ಗ್ರಾಫಿಕ್ ಡಿಸೈನರ್ಸ್ ಇರೋ ಹೋಲಿಕೆ 
– ಇಬ್ಬರೂ ಕ್ರಾಪ್ ಎಕ್ಸ್ ಪರ್ಟ್ಸ್

ಕರೋನಾ ಮತ್ತೆ ಬರ್ತಾ ಇದೆಯಂತೆ

– ಯಾರಾದ್ರೂ ಅದಕ್ಕೆ ಹೇಳ್ರಪ್ಪ, ಚೀನಾದಿಂದ ವರ್ಕ್ ಫ್ರಮ್ ಹೋಮ್ ಮಾಡೋಕೆ.

ಹೌಸಿಂಗ್ ಬೋರ್ಡ್ ವಿಷ್ಯ
– ಈ ಸಮಯದಲ್ಲಿ, ಈ ವಾರ ಯಾರು ಮನೆಯಿಂದ ಹೊರಗೆ ಹೋಗ್ತಾರೆ ಅನ್ನೋ ಕುತೂಹಲ ಬಿಗ್ ಬಾಸ್ ಹೌಸ್ ಗಿಂತ ಪಾರ್ಲಿಮೆಂಟ್ ಹೌಸ್ ನ
ಜಾಸ್ತಿ ಇದೆ.

ಎಣ್ಣೆ ರೇಟು ಜಾಸ್ತಿ ಮಾಡಿದ್ದಕ್ಕೆ ಕುಡುಕರ ರಿಯಾಕ್ಷನ್

– ‘ಸಿದ್ದರಾಮನ ಹುಂಡಿ’ಗೆ ದುಡ್ಡು ಹಾಕಿದ್ವಿ ಅಂತ ಸಮಾಧಾನ ಮಾಡ್ಕೊತೀವಿ ಬಿಡಿ.

‘ಹಾಲಕೋಡಾ’ ಅನ್ನೋ ಗ್ರಾಮದಲ್ಲಿ ಅಕ್ರಮ ಮರಳು ಸಾಗಣೆ

– ಊರ ಹೆಸರು ಸರಿ ಇಲ್ಲ, ಅದು ಹಾಕೋ ಲೋಡಾ’ ಆಗಬೇಕಿತ್ತು ಅಲ್ವಾ?

ಗಾಂಜಾ ಸೇದಿದ್ರೆ ಬೇಲಿಲ್ಲದ ಕೇಸ್ ಆಗುತ್ತೆ
– ಗಾಂಜಾ ಗಿರಾಕಿ- ನಾವ್ ಅದಕ್ಕೆ ‘ಸೊಪ್ಪು’ ಹಾಕಲ್ಲ

ಹುಡುಗರು ಹುಡುಗಿಯರ ಕಡೆ ನೋಡುವ ನೋಟ
– ಮೇಲ್-ನೋಟ

ಇಬ್ಬರು ಸಮಾನ ದುಃಖಿಗಳು ಅನುಭವಿಸೋ ನೋವು
– ಜಾಯಿಂಟ್ ಪೆಯ್ನ್

ಗ್ಯಾಸ್ ಚಾಟ್ 
ಸೋಮು- LPG ರೇಟ್ ಮತ್ತೆ ಜಾಸ್ತಿ ಆಗಿದೆಯಂತೆ’

ಖೇಮು- ‘ಹೋಗ್ಲಿ, ಬಿಡೋ.. ಅದು ಹುಡುರ್ಗೀ ಪ್ರಾಬ್ಲಮ. ನಾವ್ಯಾಕ್ ತಲೆ ಕೆಡಿಸ್ಕೊಬೇಕು?’
ಸೋಮು- ‘ಲೋ, ಗ್ಯಾಸ್ ರೇಟ್ ಬರೀ ಹುಡುಗೀರ್ ಪ್ರಾಬ್ಲಮ್ ಹೆಂಗೋ ಆಗುತ್ತೆ?’

ಖೇಮು- ‘ಓಹ್, ಗ್ಯಾಸ್ ರೇಟಾ?
ನಾನೆ Ladies PG ಬಗ್ಗೆ ಹೇಳ್ತಿದೀಯಾ ಅಂದ್ಕೊಂಡೆ.