Friday, 13th December 2024

ಹಸಿರುಳಿದರೆ ಉಸಿರುಳಿವುದು

ಅಜಯ್ ಅಂಗಡಿ

‘ವಿಶ್ವವಾಣಿ’ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ಟರು ಸಿಂಗಾಪುರದ ಜನರ ಮತ್ತು ಆಳುಗರ ಪರಿಸರ ಪ್ರೇಮ ಮತ್ತು ‘ಸಿಟಿ ಇನ್ ಗಾರ್ಡನ್’ ಪರಿಕಲ್ಪನೆಯ
ಕುರಿತು ‘ನೂರೆಂಟು ವಿಶ್ವ’ ಅಂಕಣದಲ್ಲಿ ಸವಿಸ್ತಾರವಾಗಿ ಬರೆದಿದ್ದರು. ಇದನ್ನೋದಿದಾಗ, ‘ಅಂಥ ಯೋಜಿತ ನಗರ ಸಿಂಗಾಪುರದಲ್ಲಿ ಈ ರೀತಿಯ ಮಹತ್ವದ ಉಪಕ್ರಮ ಸಾಕಾರಗೊಂಡಿರುವಾಗ, ಹೇರಳ ಸಸ್ಯಸಂಪತ್ತನ್ನು ಇಟ್ಟುಕೊಂಡಿರುವ ನಾವೇಕೆ ಅದನ್ನೇ ಉಳಿಸಿಕೊಳ್ಳಲು ಒದ್ದಾಡುತ್ತಿದ್ದೇವೆ’ ಎಂದು ನನಗನ್ನಿಸಿತು. ಭಾರತದಲ್ಲಿನ ಬಹುತೇಕ ಭೂಭಾಗವು ಬೆಟ್ಟ-ಗುಡ್ಡ, ಕಾಡು-ಮೇಡುಗಳಿಂದ ಆವೃತವಾಗಿದೆ.

ಆದರೆ ಜಾಗತೀಕರಣದ ಭರಾಟೆಯಲ್ಲಿ ಮುನ್ನುಗ್ಗಲು ಹೊರಟಿರುವ ನಾವು, ನಮ್ಮ ಪರಿಸರವು ಹಂತಹಂತವಾಗಿ ನಶಿಸುತ್ತಿರುವ ಕುರಿತೇಕೆ ಚಿಂತಿತರಾಗಿಲ್ಲ? ಎಂಬುದೇ ನನ್ನನ್ನು ಕಾಡುತ್ತಿರುವ ಯಕ್ಷಪ್ರಶ್ನೆ. ಪಶ್ಚಿಮ ಘಟ್ಟಕ್ಕೂ ಕುತ್ತು ಬಂದಿರುವುದನ್ನು ಪತ್ರಿಕೆಗಳಲ್ಲಿ ಆಗಾಗ ಓದುತ್ತಿರುತ್ತೇವೆ. ಸಹಸ್ರಾರು ಸಂಖ್ಯೆಯಲ್ಲಿ ಸಸ್ಯಪ್ರಭೇದ ಇರುವ, ನಾವಿನ್ನೂ ಗುರುತೇ ಹಿಡಿದಿರದಂಥ ಪ್ರಾಣಿಸಂಕುಲ ನೆಲೆಗೊಂಡಿರುವ ಪಶ್ಚಿಮ ಘಟ್ಟಗಳ ವಿನಾಶವು ಇಂಥ ಜೀವವೈವಿಧ್ಯಕ್ಕೆ ಪೆಟ್ಟು ನೀಡಿದಂತಲ್ಲವೇ? ಪ್ರಕೃತಿನಿರ್ಮಿತ ಆ ಸೌಂದರ್ಯವನ್ನು ನಾವೇ ಕೈಯಾರೆ ಹಾಳು ಮಾಡಿದಂತಲ್ಲವೇ? ಒಮ್ಮೆ ಯೋಚಿಸಿ.

ಇನ್ನು ನಗರಗಳ ವಿಷಯಕ್ಕೆ ಬರುವುದಾದರೆ, ರಸ್ತೆಬದಿಯ ಗಿಡಮರಗಳ ಸಂಖ್ಯೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಉದ್ಯಾನ ನಗರಿ ಎನಿಸಿಕೊಂಡಿದ್ದ ಬೆಂಗಳೂರು ಈಗೀಗ ‘ಸಾಫ್ಟ್ ವೇರ್ ನಗರಿ’ ಎನಿಸಿಕೊಳ್ಳುತ್ತಿರುವುದು ಗೊತ್ತಿರು ವಂಥದ್ದೇ. ಎತ್ತ ತಿರುಗಿದರೂ ಅಪಾರ್ಟ್ಮೆಂಟ್ ಮತ್ತು ಮಾಲ್‌ಗಳು, ಅಲ್ಲಲ್ಲಿ ಗಗನಚುಂಬಿ ಕಟ್ಟಡಗಳು. ಇನ್ನುಳಿದಂತೆ ರಸ್ತೆ ಅಗಲೀಕರಣ ಮತ್ತಿತರ ಅಭಿವೃದ್ಧಿ ಕಾಮಗಾರಿಗಳ ನೆಪದಲ್ಲಿ ಇರುವ ಒಂದಷ್ಟು ಮರಗಳನ್ನೂ ಮುಲಾಜಿಲ್ಲದೆ ಧರೆಗುರುಳಿಸು ತ್ತಿರುವುದಕ್ಕೆ ತಡೆಯೇ ಇಲ್ಲವಾಗಿದೆ. ನಗರಗಳಲ್ಲಿ ಉದ್ಯಾನಕ್ಕೆಂದೇ ಮೀಸಲಿಟ್ಟಿರುವ ಜಾಗವು ಹೆಸರಿಗಷ್ಟೇ ಉದ್ಯಾನ ವಾಗದೆ ಅಕ್ಷರಶಃ ಹಸಿರು ತುಂಬಿರಬೇಕು.

ಮನೆಯಂಗಳದಲ್ಲಿ ಅಲಂಕಾರಕ್ಕಾದರೂ ಗಿಡ ಬೆಳೆಸುವ ಪರಿಪಾಠ ಮರೆತೇಹೋಗಿದೆಯೇನೋ ಎನ್ನುವಷ್ಟರ ಮಟ್ಟಿಗೆ ಇಕ್ಕಟ್ಟಿನಲ್ಲಿ ಮನೆಗಳ ನಿರ್ಮಾಣವಾಗುತ್ತಿದೆ. ಗಿಡಮರಗಳು ಹೀಗೆ ಕಡಿಮೆಯಾಗುತ್ತಾ ಹೋದರೆ, ಸ್ವಚ್ಛಗಾಳಿಯನ್ನೂ ಕೃತಕವಾಗಿ ಉತ್ಪಾದಿಸಬೇಕಾದ ಹಂತಕ್ಕೆ ನಾವು ತಲುಪ ಬಹುದು. ದೆಹಲಿಯಲ್ಲಿ ಪ್ರತಿವರ್ಷ ಹೆಚ್ಚುತ್ತಿರುವ ಮಾಲಿನ್ಯದ ನಿಯಂತ್ರಣಕ್ಕೆ ಅಲ್ಲಿನ ಸರಕಾರ ಹರಸಾಹಸ ಪಡುತ್ತಿರುವುದನ್ನು ಬಿಡಿಸಿ ಹೇಳಬೇಕಿಲ್ಲ.

ಪರಿಸ್ಥಿತಿ ಹೀಗೇ ಮುಂದುವರಿದರೆ ನಮ್ಮ ನಂತರದ ಪೀಳಿಗೆಗೆ ಉಸಿರಾಡಲು ಸೂಕ್ತ ವಾತಾವರಣವೇ ಇಲ್ಲದಂತಾಗುವುದು ನಿಶ್ಚಿತ. ಘನ ಸರಕಾರಗಳು ತಮ್ಮ ಆಯವ್ಯಯದಲ್ಲಿ ಅಬಕಾರಿ, ಲೋಕೋಪಯೋಗಿ ಮತ್ತು ಇತರ ಇಲಾಖೆಗಳಿಗೆ ಸಾವಿರಾರು ಕೋಟಿ ರುಪಾಯಿ ಅನುದಾನ ಮೀಸಲಿಡುವಂತೆಯೇ ಪರಿಸರ, ಅರಣ್ಯ ಮತ್ತು ಪ್ರವಾಸೋದ್ಯಮ ಇಲಾಖೆಗಳಿಗೂ ಅನುದಾನ-ಆದ್ಯತೆ ನೀಡಿದರೆ ಬಹಳ ಉಪಕಾರವಾಗುತ್ತದೆ. ಇತ್ತೀಚಿನ ವಿಚಿತ್ರವೆಂದರೆ ರೆಸಾರ್ಟುಗಳ ನಿರ್ಮಾಣ; ಇವು ಪರಿಸರ-ಸ್ನೇಹಿ ಆಗಿರಬೇಕಾದ ಅಗತ್ಯವಿದೆ. ನಾವು ಕೂಡ ನಮ್ಮ ಮನೆಗಳಲ್ಲಿ ಹಸಿರಿನ ವಾತಾವರಣ ನಿರ್ಮಿಸುವತ್ತ ಗಮನ ಹರಿಸಬೇಕಿದೆ.

ಪರಿಸರವನ್ನು ಉಳಿಸಿ ಬೆಳೆಸಿ ಅದರಲ್ಲಿ ಒಂದಾಗಿ ಬದುಕಲು ಸಂಕಲ್ಪಿಸಬೇಕಿದೆ. ಸಿಂಗಾಪುರದ ಪಾರ್ಕ್ ರಾಯಲ್ ಹೋಟೆಲ್‌ನವರಂತೆ ನಾವೂ ಕಟ್ಟಡವನ್ನು ಹಸಿರೀಕರಣಗೊಳಿಸಲು ಸಂಕಲ್ಪ ಮಾಡೋಣ. ಅದೆಲ್ಲಕ್ಕಿಂತ ಮುಖ್ಯವಾಗಿ ಇರುವ ಪರಿಸರವನ್ನು ಸಂರಕ್ಷಿಸಿ ಸ್ವಚ್ಛವಾಗಿ ಇಟ್ಟು ಕೊಳ್ಳೋಣ. ಪರಿಸರವನ್ನು ದೈವವೆಂದು ಪೂಜಿಸಿ ಪ್ರೀತಿಸೋಣ. ‘ನೀವು ಪರಿಸರವನ್ನು ಪ್ರೀತಿಸಿದರೆ, ಪರಿಸರವು ಅದಕ್ಕೆ ಪ್ರತಿಯಾಗಿ ಪರಿಶುದ್ಧ ಪ್ರೀತಿಯನ್ನೇ ನೀಡುತ್ತದೆ’ ಎಂಬುದು ನನ್ನ ಅನಿಸಿಕೆ. ಹಾಗಾಗಿ ಇದೊಂದು ಅಭಿಯಾನವಾಗಬೇಕು. ಸುಂದರ್‌ಲಾಲ್ ಬಹುಗುಣ ಸೇರಿದಂತೆ ಬಹಳಷ್ಟು ಪರಿಸರ ಪ್ರೇಮಿಗಳು ಇಲ್ಲಿಯವರೆಗೂ ಇಂಥ ಅಂದೋಲನಗಳನ್ನು ನಡೆಸಿದ್ದಾರೆ.

ಹಾಗಿದ್ದರೂ, ಇಂಥ ಮತ್ತಷ್ಟು ಅಭಿಯಾನಗಳು ಪರಿಸರ ಸಂರಕ್ಷಣೆಯ ಪರಿಕಲ್ಪನೆಗೆ ಹೊಸ ಆಯಾಮ ನೀಡಬಹುದು ಎಂಬುದು ನನ್ನ ನಂಬಿಕೆ. ಇದನ್ನು ಪ್ರತಿಯೊಬ್ಬರೂ ಅರಿತರಷ್ಟೇ ಈ ಅಭಿಯಾನಕ್ಕೆ ಒಂದು ಅರ್ಥ, ಸಾರ್ಥಕತೆ ಸಿಕ್ಕಂತೆ.