Saturday, 14th December 2024

ಮಕ್ಕಳನ್ನು ಸರಿಯಾಗಿ ಬೆಳೆಸುವುದಲ್ಲ; ಸಹಜವಾಗಿ ಬೆಳೆಸುವುದು

ದಾಸ್ ಕ್ಯಾಪಿಟಲ್‌

ಟಿ.ದೇವಿದಾಸ್‌, ಬರಹಗಾರ, ಶಿಕ್ಷಕ

ಅಪ್ಪ ಅಮ್ಮನಿಗಿಂತ ದೊಡ್ಡದು ಯಾವುದೂ ಇಲ್ಲ. ಆದರೆ ಸತ್ಯ ಅದಕ್ಕಿಂತಲೂ ದೊಡ್ಡದು ಎಂದೂ, ಅದನ್ನೇ ಜೀವನ ಮೌಲ್ಯ ಗಳನ್ನಾಗಿ ಉಳಿಸಿಕೊಂಡು ಬಾಳಿ ಬದುಕಿದ ಅಸಂಖ್ಯ ಸಂಖ್ಯೆಯ ನಮ್ಮ ಹಿರಿಯರು  ತಮ್ಮ ಮಕ್ಕಳಿಗೆ ಕಲಿಸಿದ ಜೀವನ ಪಾಠ  ವೆಂದರೆ ಅವರನ್ನು ಹೊರತು ಪಡಿಸಿಯೂ ಅವರ ಮಕ್ಕಳು ಬದುಕುವು ದನ್ನು ಕಲಿಸಿದ್ದು!

ಹಿರಿಯರಿಗೆ ಗೊತ್ತಿತ್ತು: ಜೀವನ ಎಂದರೆ ನಿರಂತರವಾಗಿ ಕಲಿಯುವುದು. ಕಲಿಯುತ್ತಲೇ ಇರುವುದು. ಯಾರು ಕಲಿಯಲಾರರೋ ಅವರಿಗೆ ಕಲಿಸುವ ಅಗತ್ಯವನ್ನು, ಆವಶ್ಯವನ್ನು ತಾವು ಕಲ್ಪಿಸಬೇಕು, ಕಲಿಸಬೇಕು ಹೇಗೆಂದರೆ, ಕೊರತೆಯನ್ನು, ಕಷ್ಟವನ್ನು ನೇರವಾಗಿಯೂ ಪರೋಕ್ಷವಾಗಿಯೂ ನೀಡುವುದರ ಮೂಲಕ ಎಂದು. ಮಕ್ಕಳನ್ನು ಲಾಲಿಸುವುದು, ಪಾಲಿಸುವುದು, ಮುದ್ದಿಸು ವುದು, ಪೋಷಿಸುವುದು ಪ್ರಧಾನವೆನಿಸಿದರೂ ಅದನ್ನೇ ಜೀವನಿಷ್ಠೆಯಾಗಿ ಸ್ವೀಕರಿಸಿದರೂ, ಈ ಪ್ರಕ್ರಿಯೆಯಲ್ಲಿ ವಸ್ತುನಿಷ್ಠ ವಾಗಿಯೂ ಭಾವನಾತ್ಮಕ ವಾಗಿಯೂ ವೈಚಾರಿಕವಾಗಿಯೂ ಬೌದ್ಧಿಕವಾಗಿಯೂ ಹಿರಿಯರು ನಿಷ್ಠೆಯನ್ನು ಉಳಿಸಿಕೊಂಡವರು.

ಅದಕ್ಕಾಗಿ ಯಾವ ಶ್ರಮವನ್ನೂ ಪ್ರತ್ಯೇಕವಾಗಿ ಅವರು ಪಟ್ಟವರಲ್ಲ. ಮಕ್ಕಳನ್ನು ಮಕ್ಕಳಂತೆಯೇ ಕಂಡು ಬೆಳೆಸಿದವರು. ಅವರ ಸ್ವಾತಂತ್ರ್ಯಕ್ಕೆ ಯಾವ ತೊಂದರೆಯೂ ತಮ್ಮಿಂದಾಗದಂತೆ ತಮ್ಮ ಬದುಕನ್ನು ರೂಢಿಸಿಕೊಂಡವರು. ಯಾವ ಕೊರತೆಯನ್ನೂ ಮಾಡದೆ ಮಕ್ಕಳನ್ನು ಬೆಳೆಸಬಾರದು ಎಂಬ ಚಿಂತನೆ ಅವರಲ್ಲಿ ಇಲ್ಲದಿರುವುದರಿಂದ ತಾವಿಲ್ಲದೆಯೂ ತಮ್ಮ ಮಕ್ಕಳು ಬದುಕು ವುದನ್ನು ಕಲಿತಿದ್ದರು.

ಅಂತೆಯೇ ಮಕ್ಕಳಿಗೂ ಕಲಿಸಿದರು. ಬದುಕು ಎಂದರೆ ಇದು ಎಂದು ಅ-ಪರೋಕ್ಷವಾಗಿ ಮಕ್ಕಳಿಗೆ ಅವರು ಹೇಳಿಕೊಟ್ಟರು. ಹೆತ್ತವರು ತಮ್ಮ ಮಕ್ಕಳಿಗೆ ಕೊಡಬಹುದಾದ ದೊಡ್ಡ ಶಕ್ತಿಯೆಂದರೆ ತಾವಿಲ್ಲದೆಯೂ ತಮ್ಮ ಮಕ್ಕಳು ಬದುಕುವುದನ್ನು ಕಲಿಯು ವುದು. ಹಿರಿಯರಿಗೆ ಅರ್ಥವಾಗಿತ್ತು; ಕೊರತೆ ಬದುಕುವುದನ್ನು ಕಲಿಸುತ್ತದೆ ಎಂದು. ಕಷ್ಟ ನಮ್ಮನ್ನು ಬೆಳೆಸುತ್ತದೆ, ಕರುಣೆ ಮತ್ತು ದುಃಖ ನಮ್ಮನ್ನು ಮಾನವೀಯ ಗೊಳಿಸುತ್ತದೆಂದು.

ಇಂದಿನ ಪೋಷಕರಲ್ಲಿ ಬಹುತೇಕರು ತಮ್ಮ ಮಕ್ಕಳಿಗೆ ತೋರುವ ಅತೀ ಪ್ರೀತಿ, ಅತೀಯಾಗಿ ಕೊಡುವ ಸ್ವಾತಂತ್ರ್ಯ, ಒದಗಿಸುವ ಸವಲತ್ತು ಸೌಲಭ್ಯ, ತೆಗೆದುಕೊಳ್ಳಬಹುದಾದ ಎಚ್ಚರ, ಯಾವುದನ್ನೂ ಪ್ರಶ್ನಿಸದೆ ಬಿಟ್ಟು ಬಿಡುವ, ಹಾಗೆಯೇ ಬೆಳೆಸುವ, ಆ ಮೂಲಕ ಅವರಲ್ಲಿ ಹುಟ್ಟಿಕೊಳ್ಳುವ ಸ್ವೇಚ್ಛೆ – ಇವೆಲ್ಲ ಅವರನ್ನು ವೈಚಾರಿಕವಾಗಿ ಬೌದ್ಧಿಕವಾಗಿ ಭಾವನಾತ್ಮಕ ವಾಗಿ ಪ್ರಬುದ್ಧತೆ ಯನ್ನು ಬೆಳೆಸದೆ ಸಹಿಸಲಾಗದ ಹಠ, ಮೊಂಡುತನ, ಅಗೌರವ, ಧಾರ್ಷ್ಟ್ಯ, ಅನ್ಯರ ಬಗ್ಗೆ ಕೀಳಿರಿಮೆ, ತನ್ನ ಕುರಿತಾಗಿ ಮೇಲರಿಮೆ, ಕಲಿಕೆಯ ಬಗ್ಗೆ ಅನಾಸಕ್ತಿ, ತಿರಸ್ಕಾರ, ಗಾಸಿಪಿಂಗ್, ಮತ್ತೊಬ್ಬರ ಬಗ್ಗೆ ಅಪಹಾಸ್ಯ, ಟೀಕೆ – ವಿಮರ್ಶೆ, ಅನಾವಶ್ಯಕ ಕಮೆಂಟ್ಸ್,
ಬೇರೆಯವರನ್ನು ನೋಡಿ ನಗುವುದು, ದೊಡ್ಡಸ್ಥಿಕೆಯ, ಶ್ರೀಮಂತಿಕೆಯ ದರ್ಪವನ್ನು ದುಷ್ಟತನದಲ್ಲಿ ಅಭಿವ್ಯಕ್ತಿಸುವುದು, ಎಲ್ಲರನ್ನೂ ನಿರ್ಲಕ್ಷ್ಯಿಸುವುದು, ಉಢಾಫೆ, ಉದಾಸೀನ ಭಾವ – ಮಕ್ಕಳಲ್ಲಿ ಹೆಚ್ಚಾಗಲು ಪೋಷಕರು ಕಾರಣವಲ್ಲದೆ ಮತ್ಯಾರು ಆಗಲು ಸಾಧ್ಯವಿದೆ? ಮಕ್ಕಳಿಗೆ ಅವರ ವಯೋಗುಣಕ್ಕೆ ಅನುಗುಣವಾಗಿ ಆ ವಯಸ್ಸಿನಲ್ಲಿ ಯಾವುದರ ಅರಿವು ಬೆಳೆಯಬೇಕು ಎಂಬುದರ ಬಗ್ಗೆ ಪೋಷಕರಲ್ಲಿಯೇ ಸರಿಯಾದ ಜ್ಞಾನ ವಿಲ್ಲ!

ತಂದೆಯನ್ನು, ಅವನ ಇತಿಮಿತಿಯನ್ನು, ಅವನ ದುಡಿಮೆಯನ್ನು, ಗಳಿಸುವ ಸಂಪಾದನೆಯನ್ನು, ಸಾಮಾಜಿಕವಾಗಿ ಹೊಂದಿ ರುವ ಸ್ಥಾನಮಾನವನ್ನು ಅರ್ಥೈಸಿ ಕೊಳ್ಳುವ ಸಾಮರ್ಥ್ಯವನ್ನು ಮಕ್ಕಳಲ್ಲಿ ಹೆತ್ತವರು ಮೂಡಿಸುವುದು ಸಾಧ್ಯವಾಗದೇ ಹೋದಾಗ ಮಕ್ಕಳು ಮಕ್ಕಳಾಗಿ ಇರುವುದಿಲ್ಲ. ಅಲೋಚಿಸಿ ನೋಡಿ: ಮದುವೆಯೆಂಬ ಬದುಕಿನ ಅವಘಡದಲ್ಲಿ ಗಂಡು ಗಂಡ ನಾಗುತ್ತಾನೆ; ಹೆಣ್ಣು ಹೆಂಡತಿಯಾಗುತ್ತಾಳೆ. ಅಲ್ಲಿಗೆ ಎರಡು ವಿಗ್ರಹಗಳು ಸೃಷ್ಟಿಯಾಗುತ್ತವೆ.

ಪ್ರೇಮದ ಉನ್ಮಾದದಲ್ಲಿ ಗಂಡು ಗರ್ಲ್ ಫ್ರೆಂಡ್ ಅನ್ನು ಬಿಗಿಯಾಗಿ ಅಪ್ಪಿ ಪಿಸುದನಿಯಲ್ಲಿ ಯು ಆರ್ ಮೈ ವೈಫ್ ಎಂದು ಬಿಡುತ್ತಾನೆ. ಆದರೆ ಸಂಸಾರದ ಯಾವ ಸಂಭ್ರಮದ ಕ್ಷಣದಲ್ಲೂ ಹೆಂಡತಿಯನ್ನು ಯು ಆರ್ ಮೈ  ಫ್ರೆಂಡ್ ಅಂತ ಯಾವ ಗಂಡನೂ ಹೇಳಲಾರ. ಹೆಂಡತಿಗೆ ಎಲ್ಲವನ್ನೂ ಕೊಡಿಸುವ ಗಂಡ ಅವಳು ಕಳೆದುಕೊಂಡ ಬಾಯ್ ಫ್ರೆಂಡ್ ಅನ್ನು ಕೊಡಿಸಲಾರ.

ಮನುಷ್ಯ ಬದುಕಿನ ಒಟ್ಟೂ ಚಿಂತನೆಯೇ ಬದಲಾಗಿದೆ. ಯಾವ ಹೆಣ್ಣೂ ತನ್ನ ಗಂಡನಲ್ಲಿ ಇಲ್ಲದ  ಅದ್ಭುತವನ್ನು ಕಲ್ಪಿಸಿ ಕೊಳ್ಳುವುದಿಲ್ಲ. ಅವನ ಪಾದಕ್ಕೆರಗಿ ಶರಣಾಗುವುದಿಲ್ಲ. ತನ್ನ ದೌರ್ಬಲ್ಯಗಳನ್ನು ಬಿಚ್ಚಿಕೊಳ್ಳುವ ಮುನ್ನ ಅವನ ತಾಕತ್ತಿನ ಮಿತಿಯನ್ನು ಅರಿತುಕೊಂಡು ಬಿಡುತ್ತಾಳೆ. ಅವನು ಗೆಲುವಿನಲ್ಲಿ ಸಂಭ್ರಮಿಸುತ್ತಾಳೆ. ಸೋಲಿನಲ್ಲಿ ಸಾಂತ್ವನವೀಯುತ್ತಾಳೆ. ಅವನಿಗೆ ಅಂತಃಸಾಕ್ಷಿಯಾಗಿ ನಿಲ್ಲುತ್ತಾಳೆ. ಮಕ್ಕಳಲ್ಲಿ ತಮ್ಮಿಬ್ಬರ ಅಸ್ತಿತ್ವಕ್ಕೆ ಗೌರವ ಬರುವಂತೆ ಜೀವನಪೂರ್ತಿ ಎಚ್ಚರವನ್ನು ನಿರ್ವಹಿಸುತ್ತಾಳೆ.

ಒಂದು ಸುಂದರ ಬದುಕಿಗೆ ಇಷ್ಟನ್ನು ಬಿಟ್ಟರೆ ಇನ್ನೇನು ಬೇಕು? ಇದು ಹಿಂದಿನ ದಿನಮಾನಗಳಲ್ಲಿ ಮನೆಗಳಲ್ಲಿ ನಡೆದಂತೆ ಇಂದಿನ ದಿನಮಾನಗಳಲ್ಲಿ ಮನೆಗಳಲ್ಲಿ ನಡೆಯುವುದಿಲ್ಲ. ಮನೆಯೇ ಮೊದಲ ಪಾಠಶಾಲೆಯಾಗಿ ಉಳಿಯದೇ ಹೋದದ್ದು ದೊಡ್ಡವ ರಿಂದ! ಹಗಲು ರಾತ್ರಿಯೆನ್ನದೆ ಒಂದು ಚಿಂತೆ ಬದುಕಿನ ಇರುವಿಕೆಯನ್ನೇ ಪ್ರಶ್ನೆಯಾಗಿ ಕಾಡಿದಾಗ ಯಾರೋ ಬಂದು ನನ್ನನ್ನು ದಡ ಮುಟ್ಟಿಸಿ ಬಿಡುತ್ತಾನೆಂಬ ನಿರೀಕ್ಷೆಯನ್ನು ಎಲ್ಲ ಸಂದರ್ಭದಲ್ಲೂ ಇಟ್ಟುಕೊಳ್ಳಬಾರದು.

ರಾತ್ರಿಯಿಡೀ ಮುಸುಕು ಹಾಕಿಕೊಂಡು ನಿzಯಿಲ್ಲದೆ ಆಲೋಚನೆ ಮಾಡಿ ಮಾಡಿ ಬೆಳಗಾಗುವ ಹೊತ್ತಿಗೆ ನನ್ನ ಸಮಸ್ಯೆಯನ್ನು ನಾನೇ ಪರಿಹಾರ ಮಾಡಿಕೊಳ್ಳಬೇಕು ಎಂಬ ಒಂದು ನಿರ್ಧಾರಕ್ಕೆ ಬಂದು ಬಿಡಬೇಕು. ಅಂದಾಗ ಮಾತ್ರ ಈ ಬದುಕು ನಮ್ಮನ್ನು ಕೈಹಿಡಿದುಕೊಂಡು ಕರೆದುಕೊಂಡು ಹೋಗುತ್ತದೆ. ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ಸಂಗತಿಯೇನೆಂದರೆ, ಕಷ್ಟಗಳನ್ನು ಎದುರಿಸಿ ಗೆಲ್ಲುವುದರ, ನೋವನ್ನು ನುಂಗಿ ನಗುವನ್ನು ತಂದುಕೊಂಡಾಗಲೇ ಗೊತ್ತಾಗುವುದು ಬದುಕಿನ ಥ್ರಿಲ್ ಏನೆಂಬುದು!

ಮಕ್ಕಳಿಗೆ ಇದನ್ನು ಕಲಿಸಬೇಕಿದೆ. ಎಲ್ಲವನ್ನೂ ದೇವರು ಮಾಡಿ ಬಿಡುತ್ತಾನೆ ಎಂಬ ಬಲಹೀನತೆಗೆ ಒಳಗಾಗಬಾರದು. ದೇವರಿಗೂ ನಾವಂದುಕೊಂಡಷ್ಟು ಒಳ್ಳೆಯದನ್ನು ಮಾಡಿಬಿಡುವಷ್ಟು ಶಕ್ತಿಯಿದೆ ಎಂದು ನನಗೆ ಈವರೆಗೂ ಅನಿಸಲಿಲ್ಲ. ಒಳ್ಳೆಯದನ್ನು ಮಾಡುವುದಕ್ಕೆ ಅವನು ಕಾಯುತ್ತಾನೆ ತನ್ನ ಸರದಿಗಾಗಿ! ದೇವರ ಮೇಲೆಯೇ ಎಲ್ಲ ಭಾರವನ್ನೂ ಹಾಕಿ ಏನೂ ಶ್ರಮಪಡದೆ ಎಲ್ಲವೂ ತನಗೇ ದಕ್ಕಲಿ ಎಂಬ ಹಂಬಲದಿಂದ ನಮ್ಮ ಮಕ್ಕಳು ಬೆಳೆಯುವುದನ್ನು ತಪ್ಪಿಸಬೇಕಿದೆ.

ಕೊರತೆಯನ್ನು ತುಂಬಿಸಿಕೊಳ್ಳುವ ದಾರಿ ಯನ್ನು, ಸವಾಲನ್ನು ಎದುರಿಸುವ ಶಕ್ತಿಯನ್ನು ಮಕ್ಕಳಿಗೆ ತೋರಬೇಕಿದೆ. ಹೆತ್ತವರು ಆ ಶಕ್ತಿಯನ್ನು ಮಕ್ಕಳಲ್ಲಿ ಉದ್ದೀಪನಗೊಳಿಸಬೇಕಿದೆ. ಪೋಷಕರು ತಾವು ಹೊಂದಿರುವ ಶ್ರೀಮಂತಿಕೆ, ಸ್ಥಾನಮಾನ, ಪ್ರಭಾವ, ವರ್ಚಸ್ಸು, ಹೊಂದಿರುವ ಐಹಿಕ ಸಂಪತ್ತು – ತಮ್ಮ ಮಕ್ಕಳ ಗುಣ ಸ್ವಭಾವ, ಸಹಬಾಳ್ವೆ, ಕೂಡಿಡುವುದು, ಹೊಂದಾಣಿಕೆ, ಕಲಿಕೆಯ ಮೇಲೆ ಯಾವ ಪರಿಣಾಮ ಮತ್ತು ಪ್ರಭಾವವನ್ನು ಬೀರುತ್ತದೆಂದು ಯೋಚಿಸಲಾರರು.

ಮಕ್ಕಳ ಬದುಕಿನಲ್ಲಿ ತಾವೇ ನಿಂತು ಎಲ್ಲವನ್ನೂ ಎದುರಿಸುವ ಪೋಷಕರಿಗೆ ಇವು ಬೀರುವ ಯಾವ ಪರಿಣಾಮವೂ ಅಷ್ಟು ಸುಲಭವಾಗಿ ಅರ್ಥವಾಗುವುದಿಲ್ಲ. ತಮ್ಮ ಮಕ್ಕಳಿಗೆ ಕಲಿಸುವ ಶಿಕ್ಷಕರನ್ನು ಏಕವಚನ ದಲ್ಲಿ ಅಂದಾಜಿಸುವ ಪೋಷಕರಲ್ಲಿ ಯಾವ ಮಟ್ಟದ ಜ್ಞಾನ, ಪರಿಜ್ಞಾನ ಇರಲು ಸಾಧ್ಯ? ನಿಮಗೆಷ್ಟು ಸಂಬಳ ಕೊಡ್ತಾರೆ ಎಂದು ಕೀಳಂದಾಜಿಸುವ ಪೋಷಕರು ತಮ್ಮ ಮಕ್ಕಳಿಗೆ ಕೊಡಿಸುವ ವಸ್ತುಗಳ ಬೆಲೆಗಿಂತಲೂ ಕಡಿಮೆಯಾಗಿ ಪರಿಹಾಸ್ಯ ಮಾಡುವುದನ್ನು ನಾನು ನೋಡಿದ್ದೇನೆ.

ತಮ್ಮ ಮಕ್ಕಳಿಗೆ ಚೆನ್ನಾಗಿ ಅಂಕಗಳು ಬಾರದಿದ್ದಾಗ ಆ ಟೀಚರ್‌ನನ್ನು ಎಲ್ಲರೆದುರು ಬಾಯಿಗೆ ಬಂದಂತೆ ಅವಮಾನಿಸಿದ್ದನ್ನು ನಾನು ನೋಡಿದ್ದೇನೆ. ಕಲಿಯಲು ಯಾವ ಯೋಗ್ಯತೆಯೂ ಇಲ್ಲದೇ ಹೋದ ಮಕ್ಕಳಿಗೂ ತೊಂಬತ್ತಕ್ಕಿಂತ ಹೆಚ್ಚಿನ ಅಂಕಗಳನ್ನು ಕೊಡಬೇಕು ಎಂದು ತಾಕೀತು ಮಾಡಿದ ಪೋಷಕರನ್ನೂ ನೋಡಿದ್ದೇನೆ.

ಅಂಕಗಳು ಹಣಕ್ಕೆಯೋ, ಅಥವಾ ಧಮಕಿಗೋ ಸಿಗಬೇಕೆಂದಾದರೆ ಅಥವಾ ಸಿಗುತ್ತದೆಂದಾದರೆ ಶಾಲೆಗಳು ಯಾಕೆ ಬೇಕು, ಶಿಕ್ಷಕರು ಯಾಕೆ ಬೇಕು, ಓದು ಯಾಕೆ ಬೇಕು? ಹಾಗೆ ಎಲ್ಲವನ್ನೂ ಹಣದಲ್ಲಿ ಕೊಂಡುಕೊಳ್ಳಲು ವಿದ್ಯೆಯೇನು ಮಾರುವ ಸರಕಲ್ಲವಲ್ಲ!

ತಾಯಿಯಾದವಳು ಸಂಸ್ಕಾರವನ್ನು, ಸಭ್ಯತೆಯನ್ನು, ಸಜ್ಜನಿಕೆಯನ್ನು ನೀಡುತ್ತಾಳಾದರೆ, ತಂದೆ ಈ ಸಮಾಜವನ್ನು ಎದುರಿಸುವು ದನ್ನು ಕಲಿಸುತ್ತಾನೆ ಎಂದು ನಂಬಿದ ಸಮಾಜ ನಮ್ಮದು. ಮನೆಯ ಹೆಣ್ಣು ಮಕ್ಕಳು ಅಂಗಳದಲ್ಲಿ ನಿಂತು ದೊಡ್ಡ ಗಂಟಲಲ್ಲಿ ಮಾತನಾಡುವುದನ್ನು ಸಹಿಸದ ಮನೆತನದ ಪರಂಪರೆ ಯನ್ನು ಹೊಂದಿದ ಈ ನೆಲದ ಹೆಣ್ಣು ಮಕ್ಕಳು ಇಂದು ಬೀದಿ ಬದಿಯಲ್ಲಿ ನಿಂತು ಹರಟುವುದನ್ನು, ಕುಡಿದು ಮಜಾ ಉಡಾಯಿಸುವುದನ್ನು ಅಭಿವ್ಯಕ್ತಿ ಸ್ವಾತಂತ್ರ್ಯ, ಆಧುನಿಕತೆ ಎಂಬ ಹಂಗಿನಲ್ಲಿ, ಗುಂಗಿ ನಲ್ಲಿ ಸ್ವೇಚ್ಛೆ ಯಾಗಿ ವ್ಯವಹರಿಸಲು ಅನುಕೂಲ ಮಾಡುತ್ತಿದೆ.

ಆಫ್ ಕೋರ್ಸ್ ವ್ಯಕ್ತಿ ಸ್ವಾತಂತ್ರ್ಯವನ್ನು ಯಾರೂ ಹರಣ ಮಾಡುವಂತಿಲ್ಲ. ಆದರೆ ಯಾವ ಬಂಧವೂ ಇಲ್ಲದೆ ಈ ಬದುಕಿಗೊಂದು ಚೌಕಟ್ಟು ಬರಲು ಹೇಗೆ ಸಾಧ್ಯ? ಬಂಧನವೇ ಇಲ್ಲದೆ ಬದುಕಿಗೊಂದು ಅರ್ಥವಾದರೂ ಹೇಗೆ ಬಂದೀತು? ಜೀವನಕ್ಕೂ ಒಂದು ಸಂಹಿತೆ ಬೇಡವೇ? ಎಳವೆಯ ಸಂಸ್ಕಾರ ಸಂಸ್ಕೃತಿಹೀನರನ್ನಾಗಿಸುವ ಅವಕಾಶಗಳನ್ನು ನಿಯಂತ್ರಿಸದೇ ಹೋದರೆ, ಅತಿಯಾದ ನಂಬಿಕೆ ಮತ್ತು ಪ್ರೀತಿಯನ್ನು ತೋರದೇ ಹೋದರೆ ಯಾವ ಅಪದ್ಧಗಳೂ ಮಕ್ಕಳಲ್ಲಿ ಹುಟ್ಟಲಾರದು.

ಮಕ್ಕಳನ್ನು ಮಕ್ಕಳ ಹಾಗೆ ಬೆಳೆಸುವುದೂ ಒಂದು ಕಲೆ. ಆ ಕಲೆ ಇಂದಿನ ಪೋಷಕರಿಗಿಂತ ಹಿಂದಿನ ಪೋಷಕರಲ್ಲಿ ಚೆನ್ನಾಗಿತ್ತು. ಮಕ್ಕಳೊಂದಿಗೇ ಇರುತ್ತಿದ್ದರೂ ಅವರು ಮಕ್ಕಳನ್ನು ಅಗಲಿ ಬದುಕುತ್ತಿದ್ದರು. ಅಂದಿನ ದಿನಮಾನಗಳಲ್ಲಿ ಶಾಲೆಗಳೂ ಹಾಗೇ ಇದ್ದವು. ಸಮಾಜವೂ ಹಾಗೇ ಇತ್ತು. ಬಿಟ್ಟು ಬದುಕುವ, ಎಲ್ಲ ಸೌಕರ್ಯಗಳಿಂದ ಅಗಲುವ ಶಕ್ತಿಯನ್ನು, ತಿರಸ್ಕರಿಸುವ ಸಾಮರ್ಥ್ಯವನ್ನು ಪೋಷಕರು ಮಕ್ಕಳಿಗೆ ಕಲಿಸುವ ರೀತಿಯೇ ಇಂದಿನ ಪೋಷಕರಲ್ಲಿ ಅನೇಕರಿಗೆ ಗೊತ್ತಿಲ್ಲ.

ಮಕ್ಕಳನ್ನು ಅತೀಯಾಗಿ ನಂಬುವ ಪೋಷಕರಿಗೆ ಮಕ್ಕಳು ಹೇಳುವ ಸುಳ್ಳು ಗೊತ್ತಾಗುವುದೇ ಇಲ್ಲ. ಗೊತ್ತಾದರೂ ಅದನ್ನು ಒಪ್ಪಿ ಮಕ್ಕಳ ತಪ್ಪನ್ನು ತಿದ್ದುವ ಗೋಜಿಗೇ ಹೋಗುವುದಿಲ್ಲ. ಕಾರಣ ಮಕ್ಕಳ ಮೇಲೆ ಅವರು ಹೊಂದಿರುವ ಅತೀಯಾದ ಪ್ರೀತಿ. ಈ ಅತೀ ಪ್ರೀತಿಯೆಂಬುದು ವೈಯಕ್ತಿಕವಾದ ದೌರ್ಬಲ್ಯವೇ ಹೊರತು ವಾಸ್ತವವಲ್ಲ. ಇದರಿಂದಾಗಿ ಮಕ್ಕಳು ಓದುವುದಿಲ್ಲ, ಬರೆಯುವುದಿಲ್ಲ, ಯಾರಿಗೂ, ಯಾವುದಕ್ಕೂ ಕೇರ್ ಮಾಡುವುದಿಲ್ಲ. ಕೊನೆಗೆ ಹೆತ್ತವರನ್ನೂ!

ಶಾಲೆಯಲ್ಲಿ ಮಕ್ಕಳು ತಪ್ಪು ಮಾಡಿದಾಗ ಅವರನ್ನು ಶಿಕ್ಷಿಸಿ ತಪ್ಪನ್ನು ಮಾಡದಂತೆ ಎಚ್ಚರಿಸಿದ ಶಿಕ್ಷಕರನ್ನು ತರಾಟೆಗೆ ತೆಗೆದು ಕೊಳ್ಳುವುದು ಇಂದಿನ ದಿನಗಳಲ್ಲಿ ಶಾಲೆಗಳಲ್ಲಿ ಸರ್ವೇಸಾಮಾನ್ಯ. ಸಂಬಂಧಿಸಿದ ಶಿಕ್ಷಕರನ್ನು ಏಕವಚನದಲ್ಲಿ ಬೈದು ಭಂಗಿಸಿ ಹೀನಾಮಾನವಾಗಿ ನಡೆಸಿಕೊಂಡವರನ್ನು ಹೇಗೆಂದು ಅರ್ಥೈಸಲು ಸಾಧ್ಯ ವಿದೆ? ಪೋಷಕರೇ ಮಕ್ಕಳಿಗೆ ಮೌಲ್ಯಹೀನ ಬದುಕಿಗೆ ಅಡಿಯಿಟ್ಟು ಕಲಿಸುತ್ತಾರೆ. ಮಕ್ಕಳು ಹೇಳಿದ್ದಕ್ಕೆಲ್ಲ ಹೆಜ್ಜೆ ಹಾಕುತ್ತಾರೆ. ಹಾಗಂತ ಹಿರಿಯರೆಲ್ಲರೂ ಸುಭಗರೇ? ನೋ ಚಾನ್ಸ್. ಸೂಕ್ಷ್ಮವಾಗಿ ಅವಲೋಕಿಸಿದರೆ ಅವರಲ್ಲೂ ಮೊಂಡುತನ, ಹಠದ ಸ್ವಭಾವ, ಉಢಾಫೆಯಿತ್ತು.

ಆದರೆ ಅವರಲ್ಲಿ ಮಾನವೀಯತೆಯಿತ್ತು, ಜೀವಪರ ದಯೆಯಿತ್ತು. ಅದಕ್ಕೆ ಕಾರಣ ಅವರಲ್ಲಿದ್ದ ತಿರಸ್ಕಾರದ ಭಾವ. ಯಾವ ಅಮಿಷಕ್ಕೂ ಒಳಗಾಗದ ಮನೋಸ್ಥಿರತೆಯಿತ್ತು. ಬದುಕಿನ ಬಗ್ಗೆ ಪ್ರಾಮಾಣಿಕವಾದ ಪ್ರೀತಿ ಯಿತ್ತು. ಬದುಕನ್ನು ಬಂದ ಹಾಗೆ ಎದುರಿಸುವ ಎದೆಗಾರಿಕೆಯಿತ್ತು. ಕಾರಣ ಅವರಲ್ಲಿದ್ದ ಈ ತಿರಸ್ಕಾರದ ಶಕ್ತಿ. ಯಾವುದಕ್ಕೂ ಅಂಟಿಕೊಳ್ಳದ, ಅತಿಯಾಗಿ ಆಸೆಪಡದ,  ಹಂಬಲಿಸದ, ಇಲ್ಲದ್ದನ್ನು ಇಲ್ಲವಂದೇ ಸ್ವೀಕರಿಸುವ, ಇದ್ದುದರಲ್ಲಿಯೇ ಹೊಂದಿಕೊಳ್ಳುವ, ಯಾರ ಕರುಣೆಗೂ, ಸಿಂಪಥಿಗೂ ಚಾಚದ ಮನೋಭಾವವಿತ್ತು.

ಎಲ್ಲಾ ಇದ್ದೂ, ಎಲ್ಲರೂ ಇದ್ದು ನಾವು ಖಿನ್ನತೆಯನ್ನು ಅನುಭವಿಸುತ್ತೇವೆ. ಬದುಕು ಏಕತಾನತೆಯಿಂದ ಕೂಡಿದೆ ಯೆಂದು ಗೊಣಗುತ್ತೇವೆ. ಇನ್ಯಾವುದಕ್ಕೋ ಹಂಬಲಿಸಿ ಕೊರಗುತ್ತೇವೆ. ಮಕ್ಕಳಿದ್ದರೂ ದುಃಖಿಸುತ್ತೇವೆ, ಇಲ್ಲದಿದ್ದರೂ ದುಃಖಿಸುತ್ತೇವೆ. ಮಕ್ಕಳಿಗೆ ಅಂಟಿಕೊಂಡು ಬದುಕುತ್ತೇವೆ. ಅವರ ಭವಿಷ್ಯದ ಬಗ್ಗೆ ಹಂಬಲಿಸುತ್ತ ಕನವರಿಸುತ್ತೇವೆ. ಆಗದಿದ್ದಾಗ ಹತಾಶೆ ಗೊಳ್ಳುತ್ತೇವೆ. ನಿರೀಕ್ಷೆಗಳನ್ನು ಅತಿಯಾಗಿ ಇಟ್ಟುಕೊಳ್ಳುತ್ತೇವೆ, ಅದಕ್ಕೆ ಸರಿಯಾಗಿ ಮಕ್ಕಳನ್ನು ಬೆಳೆಸುವುದರಲ್ಲಿ ಎಡವುತ್ತೇವೆ.

ನಮ್ಮ ಮಾತನ್ನು ಮಕ್ಕಳು ಕೇಳದೇ ಹೋದಾಗ ಅವರು ಹೇಳಿದ್ದನ್ನು ಕೇಳುವ ಹಂತವನ್ನು ತಲುಪುತ್ತೇವೆ. ಮಕ್ಕಳಿಗಾಗಿ ಏನೆಲ್ಲ ಮಾಡುತ್ತೇವೆ, ಏನೆಲ್ಲ ಆಗುತ್ತೇವೆ. ಅಂತಾದರೂ ಮಕ್ಕಳಿಗೆ ಬೇಕಾದ್ದುದನ್ನು ಬೇಕಾದ ಸಮಯದಲ್ಲಿ ಕೊಡಬೇಕೆನ್ನುವ ಪ್ರಜ್ಞೆ ನಮ್ಮಲ್ಲಿ ಹುಟ್ಟುವುದೇ ಇಲ್ಲ. ಬೇಡವಾದುದನ್ನು ಅತಿಯಾಗಿ ಕೊಟ್ಟು ಅವರನ್ನು ಹಾಳುಮಾಡಿ ಕೊನೆಗೆ ತಲೆಮೇಲೆ ಕೈಹೊತ್ತು ಕಣ್ಣೀರು ಹಾಕುತ್ತೇವೆ.

ಬದುಕನ್ನು ಮತ್ತಷ್ಟು ಜಟಿಲ ಮಾಡಿಕೊಳ್ಳುವ ನಮಗೆ ಅದರ ಬಲೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದೇ ಒದ್ದಾಡುತ್ತೇವೆ. ಮಕ್ಕಳನ್ನು ಸರಿಯಾಗಿ ಬೆಳೆಸುವುದಲ್ಲ, ಸಹಜವಾಗಿ ಬೆಳೆಸುವುದು ಎಂಬ ಅರಿವು ಮೂಡುವ ಹೊತ್ತಿಗೆ ಮಕ್ಕಳಿಗೆ ಮದುವೆಯ ವಯಸ್ಸು ಬಂದಿರುತ್ತದೆ. ಕೊನೆಗೆ ಅವರಿಗೆ ಮಕ್ಕಳಾಗುತ್ತವೆ. ಆಗ ನಾವು ಅನುಭವಿಸಿದ ಯಾತನೆಗಳನ್ನು ಅವರು ಅನುಭವಿಸುವು ದನ್ನು ನೋಡುತ್ತ ದುಃಖಿಸುತ್ತೇವೆ.

ವಿಚಿತ್ರವಲ್ಲವೇ ಇದೆಲ್ಲ! ನಾವು ಕಳೆದ ದಿನಗಳನ್ನು ಅವರೂ ಹಾಗೆಯೇ ಕಳೆಯಬಾರದು ಎಂಬ ಎಚ್ಚರದ ಬದುಕನ್ನು ಕಳೆಯು ತ್ತೇವೆ. ನಮ್ಮ ಮಕ್ಕಳು ಐಎಎಸ್ ಮಾಡಬೇಕು, ಎಂಜಿನಿಯರ್ ಆಗಬೇಕು, ಡಾಕ್ಟರ್ ಆಗ್ಬೇಕು ಇನ್ನೇನೋ ಆಗಬೇಕೆಂಬ ಹಂಬಲ ವಿಟ್ಟುಕೊಂಡು ಅಗತ್ಯಕ್ಕೂ ಮೀರಿದ ಹಣವನ್ನು ವ್ಯಯಿಸಿ ವಿದ್ಯೆಯನ್ನು ಕೊಟ್ಟು ಈ ದಿನಮಾನಗಳಲ್ಲಿ ಬೆಳೆಸುವ ಪೋಷಕರೇ ಹೆಚ್ಚಿದ್ದಾರೆ. ಹಾಗೇ ಆದರೆ ಸರಿಯಾಗಿ ಮಕ್ಕಳನ್ನು ಬೆಳೆಸಿದ್ದೇವೆಂಬ ಅಹಂ ಬೆಳೆಸಿಕೊಳ್ಳುತ್ತೇವೆ.

ಹಾಗಾಗದೇ ಹೋದಾಗ ನೊಂದುಕೊಳ್ಳುತ್ತೇವೆ. ಆದರೆ, ಏನಾದರೂ ಆಗಲಿ ಎಂಬ ಭಾವದಲ್ಲಿ ಅವರನ್ನು ಜೀವನ ಮೌಲ್ಯಗಳಿಗೆ ನಿಷ್ಠರಾಗಿರುವಂತೆ ಬೆಳೆಯಿಸುವ ಪ್ರಜ್ಞೆ ನಮ್ಮಲ್ಲಿ ಹುಟ್ಟುವುದೇ ಇಲ್ಲ. ಮುಖ್ಯವಾಗಿ, ನಮ್ಮಂದು ಸಮಸ್ಯೆಯಿದೆ. ಅದೇನೆಂದರೆ, ಒಳ್ಳೆಯ ಶಿಕ್ಷಕರು ನಮ್ಮ ಮಕ್ಕಳಿಗೆ ಪಾಠ ಹೇಳಿಕೊಡಲು ಬೇಕು, ಭದ್ರತೆಗೆ ಪೊಲೀಸರು ಬೇಕು, ನಂಬಿಗಸ್ಥನೊಬ್ಬ ಮನೆಯ ಕೆಲಸವನ್ನು ಮಾಡಲು ಬೇಕು ಎಂತ ಯಾವ್ಯಾವುದಕ್ಕೋ ಯಾರ‍್ಯಾರ ಹುಡುಕಾಡುತ್ತೇವೆ.

ಆದರೆ ಎಂದಿಗೂ ನಮ್ಮ ಮಕ್ಕಳನ್ನು ಶಿಕ್ಷಕರನ್ನಾಗಿಯೋ, ಪೊಲೀಸರನ್ನಾಗಿಯೋ ಮಾಡಲು ನಾವು ಮನಸು ಒಪ್ಪುವುದಿಲ್ಲ. ಇಂಥ ಉದ್ಯೋಗಗಳನ್ನೆಲ್ಲ ನಾವು ನಿಕೃಷ್ಟ ವಾಗಿ ನೋಡುತ್ತೇವೆ. ಅವುಗಳ ಬಗ್ಗೆ ಮಕ್ಕಳಲ್ಲೂ ನಿಕೃಷ್ಟತೆಯ ಭಾವವನ್ನು ಬೆಳೆಸುತ್ತೇವೆ. ನೀನು ಇಂಥ ಉದ್ಯೋಗವನ್ನು ಮಾಡಬಾರದೆಂದೇ ಪಾಠ ಮಾಡುತ್ತೇವೆ. ತಾಕೀತು ಹಾಕುತ್ತೇವೆ. ಮಕ್ಕಳನ್ನು ಸರಿಯಾಗಿ ಬೆಳೆಸುತ್ತೇವೆಂಬ ಅಹಂಭಾವದಲ್ಲಿ ಅವರಿಗೆ ಬದುಕಿನ ಮೌಲ್ಯಗಳನ್ನು ಕಲಿಸದೇ ಬೆಳೆಸುತ್ತೇವೆ.

ತನ್ನ ತಂದೆ ತಾಯಂದಿರನ್ನು, ಮನೆಯ ಸದಸ್ಯರನ್ನು, ಗೆಳೆಯರನ್ನು, ಶಾಲೆ, ಶಿಕ್ಷಕರು, ಸಮಾಜವನ್ನು, ದೇಶವನ್ನು ಅರ್ಥೈಸಿ ಕೊಳ್ಳುವ ಬಗೆಯಲ್ಲಿ ದೊಡ್ಡವರು ತುಳಿದ ಹಾದಿಯನ್ನು ಮಕ್ಕಳು ಅನುಕರಿಸುತ್ತಾರೆ, ಅನುಸರಿಸುತ್ತಾರೆಯೇ ಹೊರತು ಹೇಳಿ ದ್ದನ್ನಲ್ಲ! ಹಣದಿಂದ, ಶ್ರೀಮಂತಿಕೆಯು ಹುಟ್ಟಿಸಬಹುದಾದ ಒಣ ದರ್ಪದಿಂದ, ಅದರಿಂದಾಗುವ ಕೆಡುಕುಗಳಿಂದ ನಮ್ಮ ಮಕ್ಕಳನ್ನು ಕಾಪಾಡಕೊಳ್ಳಬೇಕು ಎಂಬ ಪ್ರಜ್ಞೆ ಹೆತ್ತವರಲ್ಲಿ ಬೆಳೆಯಬೇಕು.

ಮಕ್ಕಳು ಏನೇ ಆದರೂ ಸರಿಮಾಡುತ್ತೇನೆಂಬ ಉದ್ಧಟತನ ದಿಂದ ಮಕ್ಕಳನ್ನು ಬೆಳೆಸಬಾರದು ಎಂಬ ಮನೋಧೋರಣೆಯಿಂದ ಹೆತ್ತವರು ಹೊರಬರಬೇಕು. ಕಡಿಮೆ ಅಂಕ ತೆಗೆದಾಗಲೂ ಹಣದಿಂದ ಎಲ್ಲವನ್ನೂ ಸರಿಮಾಡುತ್ತೇನೆಂಬ ಶುಷ್ಕ ಅಡಗುತನದ ಭ್ರಮೆಯಿಂದ ಕಳಚಿಕೊಳ್ಳಬೇಕು. ಹಾಗಂತ ಹೆಚ್ಚಿನ ಅಂಕಗಳಿಗಾಗಿ ಪೀಡಿಸುವಂತೆ ಅವರನ್ನು ಕಾಡಬಾರದು ಎಂಬ ಅರಿವನ್ನೂ ಬೆಳೆಸಿಕೊಳ್ಳಬೇಕು.

ಸೋಲನ್ನು ಅವಮಾನ ವನ್ನು ಕಷ್ಟವನ್ನು ಸ್ವೀಕರಿಸಿ ಗೆಲ್ಲುವ ಮನೋಧಾರ್ಷ್ಟ್ಯವನ್ನು ಎಳವೆಯ ಬೆಳೆಸಬೇಕು. ಪರಸ್ಪರ ಸಹಾಯದ, ಸೌಹಾರ್ದದ, ಭ್ರಾತೃತ್ವದ ಮೌಲ್ಯಗಳನ್ನು ರೂಢಿಸಿಕೊಳ್ಳುವಂತೆ ಅವರನ್ನು ಸಿದ್ಧಗೊಳಿಸಬೇಕು. ಶ್ರಮದಲ್ಲಿ, ಶ್ರಮಿಕರಲ್ಲಿ ಗೌರವ, ಎಲ್ಲರಲ್ಲೂ ಸಹನೆಯನ್ನು ಬೆಳೆಸಿಕೊಳ್ಳು ವಂತೆ ಅವರ ಮನಸನ್ನು ಅರಳಿಸು ವಂಥ ಕಾರ್ಯವನ್ನು ದೊಡ್ಡವರು ತಮ್ಮ ನಡೆನುಡಿಯಲ್ಲಿ ಅಭಿವ್ಯಕ್ತಿಸಬೇಕು. ಮುಖ್ಯವಾಗಿ ದೊಡ್ದವರ ಭಾಷೆ ಸರಿಯಾಗಬೇಕು. ಅನಾಗರಿಕ, ಅಸಂಸ್ಕೃತಿಯ ರೂಢಿಗತ ಮೌಲ್ಯಗಳಿಂದ ಮಕ್ಕಳನ್ನು ದೂರವಿರುವಂತೆ ಮಕ್ಕಳನ್ನು ಸರಿಯಾಗಿ ಅಲ್ಲ, ಸಹಜವಾಗಿ ಬೆಳೆಸ ಬೇಕು; ನಮ್ಮ ಹಿರಿಯರು ನಮ್ಮನ್ನು ಬೆಳೆಸಿದಂತೆ.