Sunday, 15th December 2024

ಗ್ಯಾರಂಟಿ ಮುಂದುವರಿಯಲಿ

ಅಭಿಮತ

ಸತ್ಯಬೋಧ

ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ಐದು ‘ಗ್ಯಾರಂಟಿ’ ಯೋಜನೆಗಳನ್ನು ಘೋಷಿಸಿತ್ತು. ಈ ಗ್ಯಾರಂಟಿ
ಗಳು ಪಕ್ಷಕ್ಕೆ ಊರುಗೋಲಾಗಿ ಪರಿಣಮಿಸಿ, ೧೩೬ ಸ್ಥಾನಗಳನ್ನು ದಕ್ಕಿಸಿ ಕೊಟ್ಟು, ಅಧಿಕಾರ ಹಿಡಿಯಲು ಕಾರಣವಾದವು. ಕಾಂಗ್ರೆಸ್ ಪಕ್ಷವೂ ಅಧಿಕಾರ ವಹಿಸಿಕೊಂಡ ನಂತರ ಕೊಟ್ಟ ಮಾತಿಗೆ ತಪ್ಪದೆ ಅವನ್ನು ಜಾರಿಮಾಡಿ ಜನರ ಮನ್ನಣೆಗೆ ಪಾತ್ರವಾಗಿದೆ. ಆದರೆ ಈ ಗ್ಯಾರಂಟಿಗಳು ವಿಧಾನಸಭಾ ಚುನಾ ವಣೆಗೆ ಸೀಮಿತ ಎನ್ನುವುದನ್ನು ಕಾಂಗ್ರೆಸ್‌ನ ಕೆಲವು ಮುಖಂಡರು ಮರೆತಂತಿದೆ. ಲೋಕಸಭಾ ಚುನಾವಣೆಯೇ ಬೇರೆ, ವಿಧಾನಸಭಾ ಚುನಾವಣೆಯೇ ಬೇರೆ.

೨೦೧೮ರ ವಿಧಾನ ಸಭಾ ಚುನಾವಣೆಯಲ್ಲಿ ಬಹುಮತ ಪಡೆದ ಕಾಂಗ್ರೆಸ್ ಮತ್ತು ಜನತಾದಳಕ್ಕೆ, ೨೦೧೯ ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕೇವಲ ಒಂದೊಂದು ಸ್ಥಾನವನ್ನು ಪಡೆ ಯಲು ಸಾಧ್ಯವಾಗಿತ್ತು. ಹೀಗೆ ಮತದಾರರು ಎರಡೂ ಚುನಾವಣೆಗಳನ್ನು ಬೇರೆ ಬೇರೆ ರೀತಿಯಲ್ಲಿ ನೋಡುವಾಗ, ಕಾಂಗ್ರೆಸ್ ಪಕ್ಷವು ತಾನು ನೀಡಿದ್ದ ಗ್ಯಾರಂಟಿಗಳು ಲೋಕಸಭಾ ಚುನಾವಣೆಯಲ್ಲೂ ಅದ್ಭುತ ಗೆಲುವು ತರುತ್ತವೆ ಎಂದು ಭಾವಿಸಿದ್ದಾದರೂ ಹೇಗೆ? ಈಗ ಲೋಕಸಭಾ ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್‌ಗೆ ಎರಡಂಕಿ ಮುಟ್ಟಲೂ ಸಾಧ್ಯವಾಗಿಲ್ಲ; ಇದನ್ನು ಕಂಡ ಕಾಂಗ್ರೆಸ್‌ನ ಕೆಲವು ನಾಯಕರು ‘ಕರ್ನಾಟಕದ ಮತದಾರರು ಗ್ಯಾರಂಟಿಯ ಫಲಾನುಭವಿಗಳಾಗಿದ್ದರೂ ಪಕ್ಷಕ್ಕೆ ಮತ ನೀಡದೆ ವಂಚಿಸಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೇ ನೆಪ ಮಾಡಿಕೊಂಡು ಗ್ಯಾರಂಟಿಗಳನ್ನು ಸ್ಥಗಿತಗೊಳಿಸುವ ಹುನ್ನಾರದ ಮುನ್ಸೂಚನೆಯೂ ಇಲ್ಲಿ ಕಾಣುತ್ತದೆ. ಒಂದೊಮ್ಮೆ ಇಂಥ ಕಾರ್ಯಕ್ಕೆ ಮುಂದಾದರೆ, ಮತದಾರರಿಂದ ಬಹುಶಃ ಉಪಕೃತರಾದ ಶಾಸಕರು ಮತದಾರರ ಅಸಮಾಧಾನವನ್ನು ಎದುರಿಸಲಾಗದೆ, ಅವರ ಪರವಾಗಿ ನಿಂತು ಪಕ್ಷವನ್ನು ತ್ಯಜಿಸುವುದರಲ್ಲಿ ಸಂದೇಹವಿಲ್ಲ. ಮಾತ್ರವಲ್ಲ, ಮುಂದೆ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ನೀಡುವ ‘ಗ್ಯಾರಂಟಿ’ ಯೋಜನೆಗಳ ಭರವಸೆಯನ್ನು ಮತದಾರರು ಸಾರಸಗಟಾಗಿ ನಿರಾಕರಿಸಿ ಪಕ್ಷದಿಂದ ದೂರವಾಗುತ್ತಾರೆ ಎಂಬುದನ್ನು ಅರಿಯಬೇಕಾದ್ದು ಅಗತ್ಯ.

ಲೋಕಸಭಾ ಚುನಾವಣೆಯ ನಂತರ ಏನಾದರೊಂದು ಕಾರಣ ಹುಡುಕಿ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುತ್ತಾರೆ ಎಂಬ ವಿರೋಧ ಪಕ್ಷಗಳ ಲೇವಡಿ ಯು ಸತ್ಯವಾಗುವುದಕ್ಕೆ ಆಸ್ಪದ ಕೊಡದಂತೆ ಕಾಂಗ್ರೆಸ್ ಪಕ್ಷವು ಗ್ಯಾರಂಟಿ ಗಳನ್ನು ಈಗ ಇರುವಂತೆ ಮುಂದುವರಿಸುವ ರಾಜಕೀಯ ಜಾಣತನ ತೋರ ಬೇಕಾದ್ದು ಅಗತ್ಯ. ವರ್ಷಾಂತ್ಯದ ಸಂದರ್ಭದಲ್ಲಿ ಆಚರಿಸಿದ ‘ಗ್ಯಾರಂಟಿ ನೀಡಿ ಕೊಟ್ಟ ಮಾತಿನಂತೆ ನಡೆದೆವು’ ಎಂಬ ಸಂಭ್ರಮವನ್ನು, ಆ ಸಂದರ್ಭ ದಲ್ಲಿ ಆಡಿದ ಹೆಮ್ಮೆಯ ಮಾತನ್ನು ಇನ್ನು ನಾಲ್ಕು ವರ್ಷದ ನಂತರವೂ ಹೊಮ್ಮಿಸಿ ಕಾಂಗ್ರೆಸ್ ಪಕ್ಷವು ಮತ್ತೊಮ್ಮೆ ಅಧಿಕಾರ ಗದ್ದುಗೆಗೆ ಏರಲು ಪ್ರಯತ್ನಿಸಬೇಕಾದ್ದು ಅತ್ಯಗತ್ಯ.

(ಲೇಖಕರು ಹವ್ಯಾಸಿ ಬರಹಗಾರರು)