Wednesday, 11th December 2024

ಗ್ಯಾರಂಟಿ ಸರಕಾರ ತಟಾಯಿಸಿಕೊಳ್ಳಲಿದೆ !

ವಿಶ್ಲೇಷಣೆ

ಎಚ್.ಕೆ.ಮಧು, ದೋಹಾ

5 ಕೆ.ಜಿ. ಅಕ್ಕಿಯನ್ನು ಮೋದಿಯವರು ಕೊಡುತ್ತಿರುವುದು ಎಂಬುದರಲ್ಲಿ ಸತ್ಯವಿದೆಯಾದರೂ, ೧೦ ಕೆ.ಜಿ. ಅಕ್ಕಿಯ ಗ್ಯಾರಂಟಿ ಯೋಜನೆಗೆ ಅದನ್ನು ತಳಕು ಹಾಕುತ್ತಿರುವುದು ಸಮಂಜಸವೂ ಅಲ್ಲ, ಸಮಯೋಚಿತವೂ ಅಲ್ಲ. ಬಿಜೆಪಿ ಯವರು ಸೋಲಿನ ಆಘಾತದಿಂದ ಚೇತರಿಸಿಕೊಳ್ಳಲಿ.

ಸಾಮಾನ್ಯವಾಗಿ, ಸರಕಾರ ಬದಲಾಗಿ ಬೇರೊಂದು ಪಕ್ಷ ಹೊಸದಾಗಿ ಅಧಿಕಾರಕ್ಕೆ ಬಂದಾಗ, ಅದರ ನಾಯಕರು ಮತ್ತು ಕಾರ್ಯಕರ್ತರು ಗೆಲುವಿನ ಮದದ ಹವಾ ನಿರ್ಮಿಸಿಕೊಂಡು, ಬೆಟ್ಟ ಕಡಿದು ಹಿಟ್ಟು ಮಾಡಿದ ರೀತಿಯಲ್ಲಿ ಒಂದಷ್ಟು ತಿಂಗಳ ಕಾಲ ವರ್ತಿಸುತ್ತಿರುತ್ತಾರೆ. ಮತ್ತೊಂದೆಡೆ ಅಧಿಕಾರ ಕಳೆದುಕೊಂಡು ವಿಪಕ್ಷ ಸ್ಥಾನಕ್ಕೆ ನೂಕ ಲ್ಪಟ್ಟ ಪಕ್ಷದ ನಾಯಕರು ಹಾಗೂ ಜನಸಾಮಾನ್ಯರು ಕೂಡ, ಅಧಿಕಾರಾರೂಢ ಪಕ್ಷ/ಸರಕಾರಕ್ಕೆ ಸ್ವಲ್ಪ ಕಾಲಾವಕಾಶ ನೀಡಿ, ತಪ್ಪು-ಒಪ್ಪುಗಳ ಹುಡುಕುವಿಕೆಯಲ್ಲಿ ತೊಡ ಗಿರುತ್ತಾರೆ.

ಇದೊಂದು ರೀತಿಯಲ್ಲಿ ನವವಿವಾಹಿತರ ಮಧುಚಂದ್ರದ ಅವಧಿಯಿದ್ದಂತೆ. ಈ ಅವಧಿ ಯಲ್ಲಿ ಸರಕಾರದ ಕಾರ್ಯವೈಖರಿ, ಎಡವಟ್ಟುಗಳನ್ನು ಜನರು ಗಮನಿಸಿದರೂ ಅವು ಭ್ರಮನಿರಸನಗೊಳಿಸುವ ಹಂತದಲ್ಲಿರುವುದಿಲ್ಲ; ಏಕೆಂದರೆ, ಆಡಳಿತ ಪಕ್ಷದ ಮೇಲೆ ಜನರಿಗೆ ಅಸಮಾಧಾನ, ಸಿಟ್ಟು-ಸೆಡವು, ನಿರಾಶೆ ಮಡುಗಟ್ಟಲು ಸಮಯ ಬೇಕಾದೀತು. ಹೀಗಾಗಿ, ಎಂಥ ಗಂಭೀರ ವಿಷಯವಾದರೂ ಸರಕಾರ ತಟಾಯಿಸಿಕೊಳ್ಳುತ್ತದೆ.

ಜತೆಗೆ ಅದು, ಅಧಿಕಾರ ಕಳೆದುಕೊಂಡ ಪಕ್ಷವನ್ನು, ಅದರ ನಾಯಕಗಣ ವನ್ನು ಮತ್ತು ಅವರ ಅವಧಿಯಲ್ಲಾದ ಘೋರತಪ್ಪು, ಹಗರಣಗಳನ್ನು ಮೇಲಿಂದ ಮೇಲೆ ಹೇಳಿ ಮೂದಲಿಸುತ್ತಾ, ಜನರು ಭರ್ಜರಿ ಆಶೀರ್ವಾದ ಮಾಡಿ ತಮ್ಮ ಪಕ್ಷದ ಪ್ರಚಂಡ ಜಯಭೇರಿಗೆ ಕಾರಣರಾಗಿದ್ದಾರೆಂದು ಹೋದಲ್ಲಿ ಬಂದಲ್ಲಿ ಡಂಗುರ ಸಾರುವುದು ಸರ್ವೇಸಾಮಾನ್ಯ.

ಅದೇನೇ ಇರಲಿ, ಸಿದ್ದರಾಮಯ್ಯ-ಡಿಕೆಶಿ ನೇತೃತ್ವದ ಕಾಂಗ್ರೆಸ್ಸಿನ ‘ಗ್ಯಾರಂಟಿ’ ಸರಕಾರಕ್ಕೆ ಭರಪೂರ ೨ ತಿಂಗಳು ತುಂಬಿವೆ. ಚುನಾ ವಣೆಯಲ್ಲಿ ಏಳಲಾರದಂಥ ಪೆಟ್ಟು ತಿಂದು ಮಕಾಡೆ ಮಲಗಿ ಇನ್ನೂ ಮಮ್ಮಲ ಮರುಗುತ್ತಿರುವ, ಕೇವಲ ೬೬ ಸ್ಥಾನಗಳಿಗೆ ತೃಪ್ತಿ ಪಟ್ಟು ಯಾರ ನಾಯಕತ್ವದಲ್ಲಿ ಸರಕಾರದ ವಿರೋಧ ಮಾಡಬೇಕೆಂಬುದನ್ನು ತೀರ್ಮಾನಿಸಲಾಗದೆ ತಿಣುಕುತ್ತಿರುವ ಹೊಣೆಗೇಡಿ ಬಿಜೆಪಿ ಒಂದೆಡೆಯಾದರೆ, ರಾಜ್ಯದಲ್ಲೆಲ್ಲಾ ಪಂಚರತ್ನ ಯಾತ್ರೆಯ ಧೂಳೆಬ್ಬಿಸಿ, ಕನಸು-ಹಗಲುಗನಸು ಎರಡನ್ನೂ ಕಂಡು, ೧೯ ಕ್ಷೇತ್ರಗಳಲ್ಲಿ ಮಾತ್ರ ಜಯಕಂಡ ಜಾತ್ಯತೀತ ಜನತಾದಳ ಇನ್ನೊಂದೆಡೆ ಇರುವಂಥ ಸ್ಥಿತಿಗೆ ಕರ್ನಾಟಕ ಸಾಕ್ಷಿಯಾಗಿದೆ.

Read E-Paper click here

ಪಂಚ ಗ್ಯಾರಂಟಿಗಳ ಕುದುರೆಯನ್ನು ಮುಂದಿಟ್ಟುಕೊಂಡು ಜಯದ ನಾಗಾಲೋಟ ಕಂಡ ಕಾಂಗ್ರೆಸ್ ಸರಕಾರಕ ಗ್ಯಾರಂಟಿಗಳ ‘ಬಾಲಗ್ರಹ ಬಾಧೆ’ ಶುರುವಾಗಿರುವುದು ನಿಜ. ಸಾವಿರಾರು ಕೋಟಿ ರುಪಾಯಿಗಳ ಖರ್ಚಿನ ಲೆಕ್ಕಕ್ಕೆ ದಾರಿ ಕಂಡುಕೊಳ್ಳಬೇಕಿದೆ.
ಸರಕಾರದಲ್ಲಿರುವವರು ಮತ್ತು ಅವರ ವಂದಿ ಮಾಗಧರು ಟ್ವೆಂಟಿ-ಟ್ವೆಂಟಿ ಪಂದ್ಯದಂತೆ ಸಾಧ್ಯವಾದಷ್ಟು ಬೇಗ ಗೆಬರಿಕೊಳ್ಳಲು ಶುರುವಿಟ್ಟುಕೊಂಡಿದ್ದಾರೆಂದು ಆರೋಪಿಸಿರುವ ದಳದ ಸೇನಾಽಪತಿ, ತಮ್ಮಲ್ಲಿರುವ ಪೆನ್ ಡ್ರೈವ್ ಅನ್ನೇ ಕತ್ತಿಯಂತೆ ಝಳಪಿಸಿ ಯುದ್ಧ ಸಾರಿದ್ದಾರೆ.

ಸಾಲದ್ದಕ್ಕೆ ಈ ಸರಕಾರದಲ್ಲಿ ವರ್ಗಾವಣೆಯ ದಂಧೆ, ‘ವೈಎಸ್‌ಟಿ’ ಎಂಬ ತೆರಿಗೆ ದೈತ್ಯವಾಗಿ ಕಾಣಲಾರಂಭಿಸಿದೆ ಎಂದು ಅಮರಿ ಕೊಂಡಿದ್ದಾರೆ. ಕುಮಾರಸ್ವಾಮಿಯವರು ಸಿಕ್ಕ ಅವಕಾಶಗಳನ್ನು ಕಳೆದುಕೊಳ್ಳದೆ ನೇರಾನೇರ ಸಿಕ್ಸರ್ ಬಾರಿಸುವ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಅವರು ಮಾಡಿದ ಆರೋಪಗಳೆಲ್ಲವೂ ತಾರ್ಕಿಕ ಅಂತ್ಯ ಕಾಣದಿದ್ದರೂ, ‘ಹಿಟ್ ಆಂಡ್ ರನ್’ ಆಪಾದನೆಗಳ ಮೂಲಕ ವಿರೋಧಿಗಳ ಎದೆಗೆ ನೇರವಾಗಿ ಗುರಿಯಿಡುವ ಕಲೆಗಾರಿಕೆ ಅವರಿಗೆ ಒಲಿದಿದೆ.

ಭ್ರಷ್ಟಾಚಾರದ ಪ್ರಕರಣಗಳನ್ನು ಹೇಳುವ ಮತ್ತು ದಾಖಲಿಸುವ ಕುಮಾರಸ್ವಾಮಿಯವರ ಇರಾದೆ ನಿಜಕ್ಕೂ ತನಿಖಾ ಪ್ರವೃತ್ತಿ ಯುಳ್ಳದ್ದು. ಮಾಧ್ಯಮಗಳಿಗೂ ಎಟುಕದ ಗಹನ, ಗುರುತರ ಮತ್ತು ಗಂಭೀರ ಚರ್ಚಾವಿಷಯಗಳು ಕುಮಾರಸ್ವಾಮಿ ಯವರಿಗೆ ಹೇಗೆ ದಕ್ಕುತ್ತವೆ ಎಂಬುದೇ ಕುತೂಹಲಕರ ಸಂಗತಿ. ಅಧಿಕೃತ ವಿಪಕ್ಷವೆನಿಸಿಕೊಂಡ ಬಿಜೆಪಿ, ‘ಮೈಲಿಗೆ ಕಳೆದು ಸ್ನಾನವಾಗಲಿ, ನಂತರ ಅಡುಗೆಮನೆಯೊಳಗೆ ಬಂದು ನೋಡಿಕೊಳ್ಳುತ್ತೇನೆ’ ಎಂಬ ರೀತಿಯಲ್ಲಿ ಬೆಪ್ಪುತನ ಪ್ರದರ್ಶಿಸುತ್ತಿದೆ.

ಜತೆಗೆ, ತಾವು ಒಂದೇ ಕುಟುಂಬದವರೆಂಬುದನ್ನೂ ಮರೆತು ಸವತಿಯರನ್ನು ಮೀರಿಸುವಂತೆ ಕಿತ್ತಾಡುತ್ತಿರುವ ಬಿಜೆಪಿಯವರು, ಪಕ್ಷದ ಸೋಲಿಗೆ ‘ಒಳ ಒಪ್ಪಂದ’ ಮತ್ತು ‘ರಾಜಿಯಾಗಿದ್ದು’ ಕಾರಣವೆಂದು ದೂರುತ್ತಿದ್ದಾರೆ. ಐದು ಕೆ.ಜಿ. ಅಕ್ಕಿಯನ್ನು ಕೇಂದ್ರದ ಮೋದಿಯವರು ಕೊಡುತ್ತಿರುವುದು ಎಂಬುದರಲ್ಲಿ ಸತ್ಯವಿದೆಯಾದರೂ, ಹತ್ತು ಕೆ.ಜಿ. ಅಕ್ಕಿಯ ಗ್ಯಾರಂಟಿ ಯೋಜನೆಗೆ ಅದನ್ನು
ತಳಕು ಹಾಕುತ್ತಿರುವುದು ಸಮಂಜಸವೂ ಅಲ್ಲ, ಸಮಯೋಚಿತವೂ ಅಲ್ಲ. ಇವರೆಲ್ಲ ಮೈಚಳಿ ಬಿಟ್ಟು, ಸೋಲಿನ ಆಘಾತದಿಂದ ಚೇತರಿಸಿಕೊಂಡು ಎದ್ದು, ನಾಯಕನನ್ನು ಘೋಷಿಸಿ ಸರಕಾರವನ್ನು ಶಿಸ್ತಿನಿಂದ ತರಾಟೆಗೆ ತೆಗೆದುಕೊಳ್ಳುವ ಹೊತ್ತಿಗೆ ಲೋಕ ಸಭಾ ಚುನಾವಣೆಯ ದಿನಾಂಕ ಘೋಷಣೆ ಯಾಗಿರುತ್ತದೇನೋ?!

ಎರಡನೆಯ ಬಾರಿಗೆ ಮುಖ್ಯಮಂತ್ರಿ ಗಾದಿಗೆ ಏರಿರುವ ಸಿದ್ದರಾಮಯ್ಯ ತುಸು ಬಳಲಿದಂತೆ ಕಂಡುಬರುತ್ತಿರುವುದರಲ್ಲಿ ಮಹದಾ ಶ್ಚರ್ಯವೇನಿಲ್ಲ. ಪಟ್ಟವೇರುವ ಮುನ್ನವೇ ಹಣ್ಣುಗಾಯಿ-ನೀರುಗಾಯಿ ಮಾಡಿದ್ದ ತಮ್ಮ ತಂಡದ ಉಪನಾಯಕ, ಪೂರ್ಣಾ ವಧಿಗೆ ಆಡಳಿತ ನಡೆಸಲಾಗುವುದಿಲ್ಲವೆಂಬ ತೂಗುಕತ್ತಿ, ವಯಸ್ಸು, ಅಸ್ವಾಸ್ಥ್ಯ ಮತ್ತು ಹೆಚ್ಚಿನದಾಗಿ ಲೋಕಸಭಾ ಚುನಾವಣೆ ಯಲ್ಲಿ ಬರಬಹುದಾದ ಫಲಿತಾಂಶ ಇವೆಲ್ಲವೂ ಸೇರಿಕೊಂಡು ಸಿದ್ದರಾಮಯ್ಯರನ್ನು ಕಂಗೆಡಿಸಿರಲಿಕ್ಕೂ ಸಾಕು. ತಾವು ನಡೆದದ್ದೇ ದಾರಿ, ಕೆಲಸವೇ ತಮ್ಮ ಮನೆದೇವರು ಎಂಬ ವಾದಕ್ಕೆ ಅಡಿಯಾಳಾಗಿ ಬೆಂಗಳೂರಿಗೆ ಕಾಯಕಲ್ಪ ನೀಡಲು ಟೊಂಕಕಟ್ಟಿ ನಿಂತಿ ರುವ, ಆಧುನಿಕ ಕೆಂಪೇಗೌಡರ ಅವತಾರದ ಡಿಕೆಶಿಯ ಲೆಕ್ಕಾಚಾರವೇ ಬೇರೆ. ತಾಳಿದವನು ಬಾಳಿಯಾನು ಎಂಬ ನುಡಿ ಗಟ್ಟಿಗೆ ಗಟ್ಟಿಯಾಗಿ ಅಂಟಿಕೊಂಡಿರುವ ಡಿಕೆಶಿಗೆ ಕೋರ್ಟು-ಕೇಸುಗಳೇ ಬೆಂಬಿಡದ ಬೇತಾಳಗಳಾಗಿಬಿಟ್ಟಿವೆ.

ಅವಶ್ಯಕತೆ ಇರಲಿ ಇಲ್ಲದಿರಲಿ, ಹೇಗಾದರಾಗಲಿ ಸದಾ ಸುದ್ದಿಯಲ್ಲಿರಬೇಕು ಚಾಲ್ತಿಯಲ್ಲಿರಬೇಕು ಎಂಬ ಹಠಕ್ಕೆ ಬಿದ್ದು, ಬೇಡ ದಿರುವ ವಿವಾದಗಳಿಗೆ ಎಡೆ ಮಾಡುವ ಪ್ರಿಯಾಂಕ್ ಖರ್ಗೆಯವರು ತುಸು ಹೆಚ್ಚೇ ಮಾತಾಡುತ್ತಿದ್ದಾರೆ ಎನಿಸುತ್ತಿದೆ. ಸುದ್ದಿಯಲ್ಲಿರ ಬೇಕಾದ ಜಮೀರ್ ಅಹ್ಮದ್ ಖಾನ್ ಮಂತ್ರಿಯಾದ ಮೇಲೆ ರಾದ್ಧಾಂತ ಮಾಡಿಕೊಂಡಿಲ್ಲ. ಸತೀಶ್ ಜಾರಕಿಹೊಳಿ ತುಟಿಮೀರಿ ಮಾತಾಡಿದ ಮೇಲೆ ಸದ್ಯಕ್ಕೆ ಬಾಯಿಗೆ ಹೊಲಿಗೆ ಹಾಕಿಕೊಂಡಂತಿದೆ.

ಭೀಕರ ಹತ್ಯೆಗಳಿಂದಾಗಿ ಗೃಹಮಂತ್ರಿ ಪರಮೇಶ್ವರ್, ಹಳೆಯ ಜಿದ್ದಿನಿಂದಾಗಿ ಕೃಷಿ ಸಚಿವ ಚಲುವರಾಯಸ್ವಾಮಿ ಸುದ್ದಿಯಲ್ಲಿ ದ್ದಾರೆ. ಮಂತ್ರಿ ಪದವಿ ತ್ಯಾಗಮಾಡಿ ಸಭಾಪತಿಯಾಗಿರುವ ಯು.ಟಿ. ಖಾದರ್ ಕೂಡ ತಮ್ಮ ಕನ್ನಡದ ವಿಷಯಕ್ಕೆ ಸುದ್ದಿಯಲ್ಲಿ ದ್ದಾರೆ. ಇನ್ನುಳಿದ ಹಾಲಿ ಮಂತ್ರಿಗಳು, ಮಂತ್ರಿಯಾಗದವರು ಮತ್ತು ಮಂತ್ರಿಯಾಗುವವರು ತಮ್ಮ ಕೆಲಸ ಬಿಂಬಿಸಲು, ಪರಿತಾ ಪದ ಬೇಗುದಿಯನ್ನು ಹೊರಸೂಸುತ್ತಿರುವಂತೆ ಮತ್ತು ಮುಂದೊಂದು ದಿನದ ಅವಕಾಶಕ್ಕಾಗಿ ಕಾಯುತ್ತಿರುವಂತೆ ಕಂಡು ಬರುತ್ತಿದೆ.

ರಾಜ್ಯದ ಜನರು ಸುಖಾಸುಮ್ಮನೆ ಈ ಸರಕಾರವನ್ನು ಅಧಿಕಾರಕ್ಕೆ ತಂದದ್ದಲ್ಲ; ಗ್ಯಾರಂಟಿಗಳು ಜಾರಿಯಾಗುವುದೂ ಸೇರಿದಂತೆ ಭ್ರಷ್ಟಾಚಾರ ರಹಿತ, ರಕ್ತಪಾತ ರಹಿತ, ಜನಪರ, ಸ್ವಚ್ಛ ಆಡಳಿತವನ್ನು ಸರಕಾರ ನೀಡಬೇಕು. ಇಲ್ಲವಾದಲ್ಲಿ ವಿಧಾನಸಭೆಯಲ್ಲಿ ಕೂರುವ ಆಸನಗಳು ಅದಲು-ಬದಲು ಆಗಬಹುದು. ಏಕೆಂದರೆ, ಕಾಲಚಕ್ರ ಯಾರ ಕೈಗೂ ಸಿಗದೇ ತಿರುಗುತ್ತಲೇ ಇರುತ್ತದೆಯಲ್ಲಾ!