ಹಿಂದಿರುಗಿ ನೋಡಿದಾಗ
ಕ್ರಿ.ಪೂ. ೬೦,೦೦೦-ಕ್ರಿ.ಪೂ. ೧೦,೦೦೦ ವರ್ಷಗಳ ಹಿಂದಿನ ಅವಧಿಯನ್ನು ಇತಿಹಾಸಪೂರ್ವ ಕಾಲ ಎಂದು ಕರೆಯಬಹುದು. ಈ ಅವಧಿಯಲ್ಲಿ ಮನುಷ್ಯನ ಆಯಸ್ಸು ಹೆಚ್ಚೆಂದರೆ ೨೫-೪೦ ವರ್ಷಗಳು ಮಾತ್ರವಿತ್ತು. ಈ ಕಾಲಘಟ್ಟದ ನಮ್ಮ ಪೂರ್ವಜರು ಪ್ರಾಕೃತಿಕ ವಿಕೋಪಗಳಾದ ಚಳಿ, ಮಳೆ, ಗಾಳಿ, ಬೆಂಕಿ, ಭೂಕಂಪ, ಪ್ರವಾಹಗಳಿಂದ, ತಮಗಿಂತಲೂ ಬಲಶಾಲಿಯಾದ ಹಿಂಸ್ರ ಪಶುಗಳಿಂದ, ಮಾನವ ಗುಂಪು-ಗುಂಪುಗಳ ನಡುವೆ ನಡೆಯುತ್ತಿದ್ದ ಘರ್ಷಣೆಗಳಿಂದ ಹಾಗೂ ನಾನಾ ರೋಗ- ರುಜಿನಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಬೇಕಾಗಿತ್ತು. ಈ ಅಸ್ತಿತ್ವದ ಹೋರಾಟದಲ್ಲಿ ಸಾವು ನೋವುಗಳಾ ಗುತ್ತಿದ್ದವು.
ಅಪಘಾತ ಹಾಗೂ ಅನಾರೋಗ್ಯಗಳಿಗೆ ಅಗತ್ಯ ವೈದ್ಯಕೀಯ ಚಿಕಿತ್ಸಾ ತಂತ್ರಗಳನ್ನು ಅವರು ಒಂದೊಂದಾಗಿ ಕಲಿತರು. ಚಿಕಿತ್ಸೆಯ ನಂತರ ಅವರಿಗೆ ವಿಶ್ರಾಂತಿಯನ್ನು ತೆಗೆದುಕೊಳ್ಳಲು ಅನುವು ಮಾಡಿಕೊಟ್ಟರು. ತಾವು ಗಳಿಸಿದ್ದ ತಿಳಿವನ್ನು ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ವರ್ಗಾಯಿಸಿದರು. ಬಹುಶಃ ಹೀಗೆ ಆದಿ ವೈದ್ಯಕೀಯ ಹಾಗೂ ಆಸ್ಪತ್ರೆಗಳು ಹುಟ್ಟಿಕೊಂಡವು. ಈ ಆದಿವೈದ್ಯಕೀಯ ಜತೆ ಜತೆಯಲ್ಲಿಯೇ ಆಸ್ಪತ್ರೆಗಳೆನ್ನುವ ಪರಿಕಲ್ಪನೆಯು ಬೆಳೆದು ಇಂದಿನ ಮಟ್ಟವನ್ನು ತಲುಪಿರುವ ಇತಿಹಾಸವು, ಕುತೂಹಲಕರವೂ, ಬೋಧಪ್ರದವೂ ಹಾಗೂ ರೋಚಕವೂ ಆಗಿದೆ.
ಪ್ರಾಚೀನ ಜಗತ್ತಿನಲ್ಲಿ ಆಸ್ಪತ್ರೆಗಳು ಬೆಳೆದು ಬಂದ ದಾರಿ ಎನ್ನುವ ವಿಚಾರವನ್ನು ಕುರಿತು ನಾವು ಚರ್ಚಿಸುವಾಗ ಒಂದು ಕಾಲಘಟ್ಟವನ್ನು ಹಾಕಿಕೊಳ್ಳ ಬೇಕಾಗುತ್ತದೆ. ಕ್ರಿ.ಪೂ. ೬೦೦೦ ವರ್ಷಗಳ ಹಿಂದಿನಿಂದ ಹಿಡಿದು ಕ್ರಿ.ಶ. ೬೫೦ರವರೆಗೆ ಕಾಲವನ್ನು ನಾವು ಪ್ರಾಚೀನ ಜಗತ್ತು ಎಂದು ಪರಿಗಣಿಸಬಹುದು.
ಈ ಅವಧಿಯಲ್ಲಿ ಆಸ್ಪತ್ರೆಗಳು ಬೆಳೆದು ಬಂದ ಪ್ರಮುಖ ಮೈಲಿಗಲ್ಲುಗಳನ್ನು ಗುರುತಿಸಬಹುದು.
ಪ್ರಾಚೀನ ಗುಹಾ ಆಸ್ಪತ್ರೆಗಳು
ಯಾವುದೇ ಒಂದು ಇತಿಹಾಸವನ್ನು ರಚಿಸಬೇಕಾದರೆ, ಅದಕ್ಕೆ ಅಗತ್ಯ ಆಕರಗಳು ಬೇಕಾಗುತ್ತವೆ. ಪಳೆಯುಳಿಕೆಗಳು, ಮೂಳೆಗಳು, ಗುಹಾಚಿತ್ರಗಳು, ಆಯುಧಗಳು, ದೈನಂದಿನ ಬಳಕೆಯ ವಸ್ತುಗಳು ಇತ್ಯಾದಿ. ನಮ್ಮ ಪೂರ್ವಜರ ವೈದ್ಯಕೀಯ ಇತಿಹಾಸ ಹಾಗೂ ಆಸ್ಪತ್ರೆಗಳ ವ್ಯವಸ್ಥೆಯ ಬಗ್ಗೆ ಹುಡುಕ ಹೊರಟರೆ ನಮಗೆ ಅತ್ಯಂತ ಕನಿಷ್ಠ ಪ್ರಮಾಣದ ಆಕರಗಳು ದೊರೆಯುತ್ತವೆ. ಹಾಗಾಗಿ ಲಭ್ಯ ಆಕರಗಳನ್ನು ಸಂಗ್ರಹಿಸಿ, ಅವುಗಳನ್ನು ಕ್ರಮಬದ್ಧವಾಗಿ ಜೋಡಿಸಿ, ಚುಕ್ಕಿ ರಂಗೋಲಿಯನ್ನು ಬಿಡಿಸುವಂತೆ, ಲಭ್ಯ ಅಂಶಗಳನ್ನು ಜೋಡಿಸಿ ಒಂದು ಸಮಗ್ರ ಚಿತ್ರವನ್ನು ನೀಡುವ ಪ್ರಯತ್ನವನ್ನು
ಮಾಡಬೇಕಾಗುತ್ತದೆ.
ಮಾನವ ಜನಾಂಗವು ಆಫ್ರಿಕಾದಲ್ಲಿ ಹುಟ್ಟಿ ಜಗತ್ತಿನ ಎಲ್ಲೆಡೆ ಹರಡಿತು ಎನ್ನುವ ವಾದದ ಜತೆಯಲ್ಲಿ, ಜಗತ್ತಿನ ಹಲವು ಭೌಗೋಳಿಕ ಪ್ರದೇಶಗಳಲ್ಲಿ ಒಮ್ಮೆಲೇ ಮಾನವ ಜನಾಂಗಗಳು ಅಸ್ತಿತ್ವದಲ್ಲಿದ್ದವು ಎನ್ನುವ ವಿಚಾರವು ಪ್ರಚಲಿತದಲ್ಲಿದೆ. ಆದರೆ ವೈದ್ಯಕೀಯ ವಿಚಾರಕ್ಕೆ ಬಂದಾಗ, ಜಗತ್ತಿನ ಹಲವು
ಭೌಗೋಳಿಕ ಪ್ರದೇಶಗಳಲ್ಲಿ ತಮ್ಮದೇ ಆದ ಸಂಸ್ಕ ತಿಯನ್ನು ಕಟ್ಟಿಕೊಂಡ ನಮ್ಮ ಪೂರ್ವಜರು, ತಮ್ಮದೇ ಆದ ಚಿಕಿತ್ಸಾ ಪದ್ಧತಿಗಳನ್ನು ರೂಪಿಸಿ ಕೊಂಡಿರುವುದನ್ನು ನಾವು ಗಮನಿಸಿದ್ದೇವೆ. ಮನುಷ್ಯರ ಮನಸ್ಸು ಬಹುಶಃ ಏಕರೀತಿಯಲ್ಲಿ ವಿಕಾಸವಾಗುತ್ತದೆ ಎನ್ನುವುದಕ್ಕೆ ಪೂರಕವಾಗಿ ಈ ವಿಭಿನ್ನ ಚಿಕಿತ್ಸಾ ಪದ್ಧತಿಗಳಲ್ಲಿ ಕೆಲವು ಸಾಮ್ಯ ಗಳನ್ನು ಕಾಣಬಹುದಾಗಿದೆ.
ಆಸ್ಪತ್ರೆ
ಮೊದಲು ಆಸ್ಪತ್ರೆ ಎಂಬ ಶಬ್ದದ ಅರ್ಥವನ್ನು ತಿಳಿಯೋಣ. ನಮ್ಮ ಕನ್ನಡದ ಆಸ್ಪತ್ರೆ ಮತ್ತು ಹಿಂದಿ ಹಾಗೂ ಉರ್ದು ಭಾಷೆಯ ಅಸ್ಪತಾಲ್ ಎಂಬ ಶಬ್ದದ ಮೂಲ ಇಂಗ್ಲಿಷಿನ ಹಾಸ್ಪಿಟಲ್ ಎಂಬ ಶಬ್ದ. ಇದಕ್ಕೆ ಮೂಲ ಲ್ಯಾಟಿನ್ ಭಾಷೆಯ ಹಾಸ್ಪೆಸ್ ಎಂಬ ಪದ. ಈ ಮೂಲ ಹಾಸ್ಪೆಸ್ ಶಬ್ದವು ಹಾಸ್ಪಿಟಾಲಿಸ್ ಆಗಿ ಹಾಸ್ಪಿಟೇಲ್ ಆಗಿ ಕೊನೆಗೆ ಹಾಸ್ಪಿಟಲ್ ಎಂಬ ರೂಪವನ್ನು ತಳೆಯಿತು. ಲ್ಯಾಟಿನ್ ಭಾಷೆಯಲ್ಲಿ ಹಾಸ್ಪೆಸ್ ಎಂಬ ಶಬ್ದಕ್ಕೆ ಅಪರಿಚಿತ, ವಿದೇಶೀಯ ಅಥವಾ ಅತಿಥಿ ಎಂಬ ಮೂಲ ಅರ್ಥವಿದೆ. ಈ ಹಿನ್ನೆಲೆಯಲ್ಲಿಯೇ ಹಾಸ್ಪೆಸ್ ಶಬ್ದದಿಂದ ಹಾಸ್ಟೆಲ್, ಹೋಟೆಲ್ ಹಾಗೂ ಹಾಸ್ಪಿಟಾಲಿಟಿ (ಅತಿಥಿ ಸತ್ಕಾರ) ಎನ್ನುವ ಶಬ್ದಗಳು ರೂಪುಗೊಂಡವು. ಹಾಗಾಗಿ ಆಸ್ಪತ್ರೆ ಎಂದರೆ ಅಪರಿಚಿತ ರೋಗಿಯೊಬ್ಬನು ಅತಿಥಿ ರೂಪದಲ್ಲಿ ಆಗಮಿಸಿ, ದಾಖಲಾಗಿ, ವೈದ್ಯ ಹಾಗೂ ವೈದ್ಯಕೀಯ ಸಿಬ್ಬಂದಿಯ ಚಿಕಿತ್ಸೆ, ಉಪಚಾರ, ಸತ್ಕಾರಗಳಿಂದ ತನ್ನ ಆರೋಗ್ಯವನ್ನು ಮರಳಿ ಪಡೆಯುವ ಸ್ಥಳ ಎಂಬ ಅರ್ಥದಲ್ಲಿ ಆಸ್ಪತ್ರೆ ಎನ್ನುವ ಶಬ್ದವು ಬಳಕೆಯಲ್ಲಿ ಬಂದಿದೆ ಎನ್ನಬಹುದು.
ನಮ್ಮನ್ನು ನಾವು ಬುದ್ಧಿವಂತ ಮಾನವ (ಹೋಮೋಸೆಪಿಯನ್ಸ್) ಎಂದು ಕರೆದುಕೊಂಡಿದ್ದೇವೆ. ಈ ಬುದ್ಧಿವಂತಿಕೆಯ ಫಲವಾಗಿ ನಮ್ಮಲ್ಲಿ ಸ್ವ-ಎಚ್ಚರವು (ಸೆಲ್-ಅವೇರ್ನೆಸ್) ಜಾಗೃತವಾಗಿದೆ. ಈ ಪ್ರಕೃತಿಯಲ್ಲಿ ನಮ್ಮ ಅಸ್ತಿತ್ವ, ನಮ್ಮ ಸ್ಥಾನ ಹಾಗೂ ನಮ್ಮ ಸುತ್ತಮುತ್ತಲಿನ ಪರಿಸರದೊಡನೆ ನಾವು ನಡೆಸುವ ಕೊಡು-ಕೊಳ್ಳುವ ವ್ಯಾಪಾರಗಳ ಅರಿವು ನಮಗಾಗಿದೆ. ನಾವು ಮೂಲತಃ ಸಂಘಜೀವಿಗಳಾಗಿರುವ ಕಾರಣ, ನಮ್ಮ ನಮ್ಮ ವೈಯುಕ್ತಿಕ ಯೋಗಕ್ಷೇಮದ ಬಗ್ಗೆ ಹೇಗೆ ಕಾಳಜಿ ವಹಿಸುತ್ತೇವೆಯೋ, ಹಾಗೆಯೇ ನಮ್ಮವರ ಯೋಗಕ್ಷೇಮದ ಬಗ್ಗೆಯೂ ಕಾಳಜಿ ವಹಿಸುತ್ತೇವೆ. ಅವರಿಗೆ ಯಾವುದೇ ರೀತಿಯ ತೊಂದರೆ ಗಳಾದಾಗ, ಅವರ ನೆರವಿಗೆ ಧಾವಿಸುತ್ತೇವೆ. ನಮ್ಮ ಈ ಉದಾತ್ತ ಭಾವನೆಯು ವೈದ್ಯಕೀಯ ವಿಜ್ಞಾನ ಹಾಗೂ ಆಸ್ಪತ್ರೆಗಳ ಸೇವೆಯುರಂಭವಾಗಲು ಮುಖ್ಯವಾಗಿ ಕಾರಣವಾಗಿದೆ ಎನ್ನಬಹುದು.
ಅಭಿಚಾರಿಗಳು
ಇತಿಹಾಸಪೂರ್ವ ಕಾಲದಲ್ಲಿ ಮನೆಯ ಪರಿಕಲ್ಪನೆಯೇ ಇರದಿದ್ದಾಗ ನಮ್ಮ ಪೂರ್ವಜರು ಗುಹಾವಾಸಿಗಳಾಗಿದ್ದರು. ಗುಹೆಯಲ್ಲಿ ವಾಸ ಮಾಡುವು ದರಿಂದ ಬಿಸಿಲು, ಮಳೆ, ಚಳಿ, ಗಾಳಿಗಳಿಂದ ರಕ್ಷಣೆ ದೊರೆಯುವುದರ ಜತೆಯಲ್ಲಿ ಕಾಡು ಪ್ರಾಣಿಗಳಿಂದ ರಕ್ಷಣೆ ದೊರೆಯುತ್ತಿತ್ತು. ಹಾಗೆಯೇ ಗುಹೆಯ ಬಾಗಿಲಲ್ಲಿ ಬೆಂಕಿಯನ್ನು ಹಾಕಿದರೆ, ಕಾಡುಪ್ರಾಣಿಗಳು ದೂರ ಉಳಿಯುತ್ತಿದ್ದವು. ನಮ್ಮ ಪೂರ್ವಜರು ನೆಮ್ಮದಿಯಿಂದ ನಿದ್ರಿಸುತ್ತಿದ್ದರು. ಬೆಂಕಿಯ ನಿಯಂತ್ರಣವು ಸುಲಭವಾದಾಗ ಗುಹೆಯಲ್ಲಿಯೇ ಒಲೆಯನ್ನು ಹೂಡಿದರು. ಅಲ್ಲಿಯೇ ಅಡುಗೆಯನ್ನು ಮಾಡಿದರು. ಅಲ್ಲಿಯೇ ಆಹಾರ ಪದಾರ್ಥ ಗಳನ್ನು ಸಂಗ್ರಹಿಸಿದರು. ಹಾಗಾಗಿ ಗಾಯಾಳುಗಳಿಗೆ ವಿಶ್ರಾಂತಿಯನ್ನು ನೀಡಲು ಗುಹೆಗಳು ಸೂಕ್ತವೆನಿಸಿದವು. ಅವರು ವಾಸ ಮಾಡುತ್ತಿದ್ದ ಗುಹೆಗಳೇ ಪ್ರಾಥಮಿಕ ಆಸ್ಪತ್ರೆಗಳಾದವು.
ನಮ್ಮ ಪೂರ್ವಜರಲ್ಲಿ ಕೆಲವರು ಈ ಆದಿವೈದ್ಯಕೀಯದ ಬಗ್ಗೆ ಕುತೂಹಲವನ್ನು ತಳೆದು, ಅವುಗಳನ್ನು ಕರಗತ ಮಾಡಿಕೊಂಡರು. ಅವರೇ ಆದಿವೈದ್ಯರು. ಇವರನ್ನು ಅಭಿಚಾರರು (ಶಮನ್ಸ್) ಎಂದು ಕರೆಯುತ್ತಿದ್ದರು. ಮಾನವ ಜನಾಂಗದಲ್ಲಿ ಅಭಿಚಾರದ ಬೀಜವು ಪ್ರಾಚೀನ ಶಿಲಾಯುಗದಲ್ಲಿಯೇ ಆರಂಭ ವಾಯಿತು ಎನ್ನುವ ವಾದವಿದೆ. ಅಭಿಚಾರವನ್ನು ನಡೆಸುತ್ತಿದ್ದ ಅಭಿಚಾರಿಗಳು ಕ್ರಿ.ಪೂ. ೩೦,೦೦೦ ವರ್ಷಗಳ ಹಿಂದೆ ಅಸ್ತಿತ್ವದಲ್ಲಿದ್ದರು ಎನ್ನುವುದಕ್ಕೆ ನಿಖರ ಪುರಾವೆಯು ಜ಼ೆಕ್ ದೇಶದಲ್ಲಿ ದೊರೆತಿದೆ. ಸಂಸ್ಕ ತ ವಿದ್ವಾಂಸ ಹಾಗೂ ಪುರಾಣಗಳ ತಜ್ಞ ಮೈಕೇಲ್ ವಿಟ್ಜಲ್ ಅನ್ವಯ, ಎಲ್ಲ ಅಭಿಚಾರ ಸ್ವರೂಪ ಗಳು ಗೊಂಡ್ವಾನ (ಕ್ರಿ.ಪೂ. ೬೫,೦೦೦) ಹಾಗೂ ಲಾರೇಶಿಯ (ಕ್ರಿ.ಪೂ. ೪೦,೦೦೦) ಖಂಡಗಳಲ್ಲಿ ವಾಸಿಸುತ್ತಿದ್ದ ಜನರಲ್ಲಿ ಹುಟ್ಟಿದವಂತೆ.
ನವಶಿಲಾಯುಗಕ್ಕೆ ಸೇರಿದ, ಅಂದರೆ ಕ್ರಿ.ಪೂ. ೧೨,೦೦೦ ವರ್ಷಗಳಷ್ಟು ಹಿಂದಿನ ಸಮಾಧಿಯೊಂದು ಇಸ್ರೇಲಿನ ಗೆಲೀಲಿಯಲ್ಲಿ ದೊರೆತಿದೆ. ಇದರಲ್ಲಿ ಓರ್ವ ಹಿರಿಯ ಮಾಟಗಾತಿಯ ಅಸ್ಥಿಪಂಜರವಿದೆ. ಈಕೆಯನ್ನು ಹತ್ತು ಬೃಹತ್ ಶಿಲಾಫಲಕಗಳ ಕೆಳಗೆ ಹೂಳಲಾಗಿದೆ. ಜತೆಗೆ ೫೦ ಆಮೆಯ ಚಿಪ್ಪುಗಳು, ಮನುಷ್ಯನ ಪಾದಮೂಳೆ, ಹಸುವಿನ ಬಾಲ, ಹದ್ದಿನ ರೆಕ್ಕೆ ಮುಂತಾದ ಅಭಿಚಾರ ವಸ್ತುಗಳೂ ದೊರೆತಿವೆ. ಕ್ರಿ.ಪೂ. ೧೫,೦೦೦-ಕ್ರಿ.ಪೂ. ೧೧,೫೦೦ ವರ್ಷ ಗಳ ನಡುವೆ ಆಸ್ತಿತ್ವದಲ್ಲಿದ್ದ ನಚೂಫಿಯನ್ ಸಂಸ್ಕ ತಿಗೆ ಈ ಸಮಾಧಿಗಳು ಸೇರಿವೆ. ಈ ಅಭಿಚಾರಿಗಳು ವಾಸ ಮಾಡುವ ಗುಹೆಯೇ ಮೊದಲ ಸಾರ್ವಜನಿಕ ಆಸ್ಪತ್ರೆ ಎನಿಸಿರಬೇಕು. ಕಾಡುಪ್ರಾಣಿಗಳ ದಾಳಿಗೆ ಒಳಗಾದವರನ್ನು, ಮರದಿಂದ ಕೆಳಗೆ ಬಿದ್ದು ಗಾಯಗೊಂಡವರನ್ನು, ಯುದ್ಧದಲ್ಲಿ ಹೋರಾಡಿ ತಲೆ ಒಡೆಸಿಕೊಂಡವರನ್ನು ಈ ಸಾರ್ವಜನಿಕ ಆಸ್ಪತ್ರೆಗೆ ತರುತ್ತಿದ್ದರು. ಅಲ್ಲಿ ಆದಿವೈದ್ಯರು ಚಿಕಿತ್ಸೆಯನ್ನು ಕೊಡುತ್ತಿದ್ದರು. ಇವರಿಂದ ಚಿಕಿತ್ಸೆಯನ್ನು ಪಡೆಯುತ್ತಿದ್ದ ಎಲ್ಲರೂ ಬದುಕುಳಿಯುತ್ತಿದ್ದರು ಎಂದೇನೂ ಭಾವಿಸಬೇಕಾಗಿಲ್ಲ. ಆದರೆ ಈ ಅನಾದಿ ಚಿಕಿತ್ಸೆಯನ್ನು ಪಡೆದ ನಂತರವೂ ಸಾಕಷ್ಟು ಜನರು ಬದುಕುತ್ತಿದ್ದರು ಎನ್ನುವುದಕ್ಕೆ ನಮಗೆ ಪುರಾವೆಯು ದೊರೆತಿದೆ.
ಕಪಾಲರಂಧ್ರನ
ಗುಹಾ ಆಸ್ಪತ್ರೆಗಳಲ್ಲಿ ನಮ್ಮ ಪೂರ್ವಜರು ನಡೆಸುತ್ತಿದ್ದ ಪ್ರಮುಖ ಶಸ್ತ್ರಚಿಕಿತ್ಸೆಯಲ್ಲಿ ಕಪಾಲರಂಧ್ರನವು ಮುಖ್ಯವಾದದ್ದು. ಯುರೋಪ್, ಏಷ್ಯಾ, ನ್ಯೂಜಿಲೆಂಡ್, ಉತ್ತರ ಅಮೆರಿಕಗಳಲ್ಲಿ ವಾಸವಾಗಿದ್ದ ನಮ್ಮ ಪೂರ್ವಜರು ಕಪಾಲರಂಧ್ರನವನ್ನು ಪರಿಣಾಮಕಾರಿಯಾಗಿ ನಡೆಸುತ್ತಿದ್ದರು ಎನ್ನುವುದಕ್ಕೆ ಪುರಾವೆಯು ದೊರೆತಿದೆ. ಕಪಾಲರಂಧ್ರನ (ಟ್ರೆಪಾನಿಂಗ್, ಟ್ರೆ-ನೇಷನ್, ಟ್ರಿ-ನಿಂಗ್, ಬರ್ ಹೋಲ್) ಎನ್ನುವುದು, ಹೆಸರೇ ಸೂಚಿಸುವ ಹಾಗೆ ಮನುಷ್ಯನ ಕಪಾಲದಲ್ಲಿ ರಂಧ್ರವನ್ನು ಕೊರೆಯುವ ಶಸ್ತ್ರಚಿಕಿತ್ಸೆ. ಯಾವುದೇ ರೀತಿಯ ಅಂಗರಚನ ಇಲ್ಲವೇ ಅಂಗಕ್ರಿಯ ವಿಜ್ಞಾನದ ಬಗ್ಗೆ ಮಾಹಿತಿಯಿಲ್ಲದ ಶಿಲಾ ಯುಗದಲ್ಲಿ ಕಪಾಲವನ್ನು ಯಶಸ್ವಿಯಾಗಿ ಕೊರೆದು ರಂಧ್ರ ಮಾಡುತ್ತಿದ್ದರು, ಹಾಗೆ ರಂಧ್ರ ಮಾಡಿಸಿಕೊಂಡವರು ಮತ್ತೆ ಬದುಕುತ್ತಿದ್ದರು.
ಇದು ಕುತೂಹಲಕರವಾಗಿದೆ ಹಾಗೂ ಆಶ್ಚರ್ಯಕರವಾಗಿದೆ. ಕಪಾಲರಂಧ್ರನವನ್ನು ಹೆಚ್ಚಾಗಿ ಪೆರು ಮತ್ತು ಬೊಲೀವಿಯಗಳಲ್ಲಿ ಮಾಡುತ್ತಿದ್ದರು ಎಂದು ಅಲ್ಲಿ ನಡೆಸಿದ ಉತ್ಖನನಗಳಿಂದ ತಿಳಿದುಬಂದಿದೆ. ಯುರೋಪ್, ಏಷ್ಯಾ, ನ್ಯೂಜಿಲೆಂಡ್, ಉತ್ತರ ಅಮೆರಿಕದಲ್ಲಿಯೂ ಇದನ್ನು ನಡೆಸುತ್ತಿದ್ದರು ಎನ್ನುವು ದಕ್ಕೆ ಪುರಾವೆ ದೊರೆತಿದೆ. ಫ್ರಾನ್ಸಿನಲ್ಲಿ ಸುಮಾರು ಕ್ರಿ.ಪೂ. ೬೫೦೦ ವರ್ಷಗಳಷ್ಟು ಹಳೆಯದಾದ ೧೨೦ ತಲೆಬುರುಡೆಗಳನ್ನು ಸಂಗ್ರಹಿಸಿದಾಗ, ಅವುಗಳಲ್ಲಿ ಸುಮಾರು ೪೦ ಬುರುಡೆಗಳ ಕಪಾಲದಲ್ಲಿ ರಂಧ್ರಗಳಿದ್ದವು. ಸಿಂಧೂ-ಸರಸ್ವತಿ ಸಂಸ್ಕತಿಯಲ್ಲೂ ಕಪಾಲ ರಂಧ್ರನವನ್ನು ಮಾಡುತ್ತಿದ್ದರು. ಕಪಾಲರಂಧ್ರ ನವನ್ನು ಏಕೆ ಮಾಡುತ್ತಿದ್ದರು ಎಂಬ ಪ್ರಶ್ನೆಗೆ ಬಹುಶಃ ಮೂರು ಉತ್ತರಗಳಿವೆ. ೧) ಧಾರ್ಮಿಕ ವಿಧಿ: ಕಪಾಲವನ್ನು ಕೊರೆದ ನಂತರ ಉಳಿಯುತ್ತಿದ್ದ ದುಂಡನೆಯ ಚೂರನ್ನು ತಾಯತದ ಹಾಗೆ ಬಳಸುತ್ತಿದ್ದರು.
೨) ನಂಬಿಕೆ: ಒಳ್ಳೆಯ ಶಕ್ತಿಗಳು ತಲೆಯ ಮೂಲಕ ಒಳಬರುತ್ತವೆ ಹಾಗೂ ದುಷ್ಟಶಕ್ತಿಗಳನ್ನು ತಲೆಯ ಮೂಲಕ ಹೊರಗಟ್ಟಬಹುದು ಎಂಬ ನಂಬಿಕೆ ಅನಾದಿಕಾಲದಲ್ಲಿತ್ತು. ಹಾಗಾಗಿ ಶಿಷ್ಟ ಶಕ್ತಿಗಳನ್ನು ಆಕರ್ಷಿಸಲು ಇಲ್ಲವೇ ದುಷ್ಟ ಶಕ್ತಿಗಳನ್ನು ಉಚ್ಚಾಟಿಸಲು ಕಪಾರರಂಧ್ರನವನ್ನು ಮಾಡುತ್ತಿದ್ದಿರ ಬೇಕು.
೩) ಚಿಕಿತ್ಸೆ: ತಲೆಗೆ ಪೆಟ್ಟು ಬಿದ್ದು, ಮೂಳೆಯ ಕೆಳಗೆ ರಕ್ತಸಂಗ್ರಹವಾದಾಗ ಇಲ್ಲವೇ ಕಪಾಲಮೂಳೆ ಮುರಿದಾಗ, ಅದರ ಕೆಳಗೆ ಸಂಗ್ರಹವಾಗಿದ್ದ ರಕ್ತವನ್ನು ಹೊರತೆಗೆಯಲು ಬಹುಶಃ ಕಪಾಲರಂಧ್ರನವನ್ನು ಮಾಡುತ್ತಿದ್ದರು. ತಲೆ ನೋವನ್ನು ಕಡಿಮೆ ಮಾಡಲು, ಅಪಸ್ಮಾರದಿಂದ ಮುಕ್ತಿಯನ್ನು ದೊರಕಿಸಲು ಈ ಚಿಕಿತ್ಸೆಯನ್ನು ನೀಡುತ್ತಿದ್ದಿರಬಹುದು.
ಕಪಾಲರಂಧ್ರನವನ್ನು ಸತ್ತವರ ಮೇಲೂ ಹಾಗೂ ಬದುಕಿದ್ದವರ ಮೇಲೂ ಮಾಡುತ್ತಿದ್ದರು. ಗಂಡಸರ ಕಪಾಲದಲ್ಲಿ ಹೆಚ್ಚು ರಂಧ್ರಗಳು ಕಂಡುಬಂದಿವೆ. ಕೆಲವು ಹೆಂಗಸರು ಹಾಗೂ ಮಕ್ಕಳ ಕಪಾಲದಲ್ಲೂ ರಂಧ್ರಗಳಿರುವುದನ್ನು ಗಮನಿಸಲಾಗಿದೆ. ಕಪಾಲರಂಧ್ರನವನ್ನು ಮೂರು ರೀತಿಯಲ್ಲಿ ಮಾಡು ತ್ತಿದ್ದರು. ಚಾಕುವಿನಂಥ ಹರಿತ ಕಲ್ಲಿನಿಂದ ಕಪಾಲವನ್ನು ಹೆರೆದು ರಂಧ್ರ ಮಾಡುತ್ತಿದ್ದರು. ಚಾಕುವಿನಂಥ ಕಲ್ಲಿನಿಂದ ಚೌಕಾಕಾರದ ರಂಧ್ರವನ್ನು ಕೊರೆಯುತ್ತಿದ್ದರು ಹಾಗೂ ವೃತ್ತಾಕಾರದ ರಂಧ್ರವನ್ನು ಮಾಡುತ್ತಿದ್ದರು. ಕೆಲವು ತಲೆಬುರುಡೆಗಳಲ್ಲಿ ಒಂದಕ್ಕಿಂತ ಹೆಚ್ಚಿನ ರಂಧ್ರಗಳಿರುವುದನ್ನು ಇಂದಿಗೂ ನೋಡಬಹುದು.
ನೌಪಾ ಇಗ್ಲೀಸಿಯ
ಆಂಡಿಯನ್ ಪ್ರಸ್ಥಭೂಮಿಯ ಕುಸ್ಕೋ ಪ್ರದೇಶ, ಇದು ಇಂಕಾ ಸಂಸ್ಕೃತಿಯ ತವರೂರು. ಇಲ್ಲಿ ಅತ್ಯಂತ ಕುತೂಹಲಕರವಾದ ನೌಪ ಇಗ್ಲೀಸಿಯಗಳು ಕಂಡುಬಂದಿವೆ. ಒಂದು ಯಂತ್ರದಿಂದ ನಯಗೊಳಿಸಿದಂತೆ ಕಾಣುವ ವಿವಿಧ ಜಿಯಾಮಿತಿ ಆಕೃತಿಗಳು ಬೆರಗುಗೊಳಿಸುತ್ತವೆ. ಇವು ಅವರ ಗುಹಾ ಆಸ್ಪತ್ರೆಗಳಾಗಿರಬೇಕು, ಇಲ್ಲಿಯೇ ಶಸ್ತ್ರಚಿಕಿತ್ಸೆಗಳನ್ನು ನಡೆಸುತ್ತಿರಬೇಕು ಎನ್ನುವ ತರ್ಕವನ್ನು ಮಂಡಿಸಿರುವುದುಂಟು.
ಆದಿ-ದಂತವೈದ್ಯಕೀ
ನಮ್ಮ ದೇಶದಲ್ಲಿ ಸಿಂಧೂ-ಸರಸ್ವತಿ ಸಂಸ್ಕೃತಿಯು ಮೂಲತಃ ಮೆಹರ್ಘಡ ಸಂಸ್ಕ ತಿಯಿಂದ (ಕ್ರಿ.ಪೂ. ೭೦೦೦-ಕ್ರಿ.ಪೂ. ೨,೦೦೦) ಆರಂಭವಾಯಿ ತೆಂಬುದು ತಜ್ಞರ ಅಭಿಮತ. ಈ ಸಂಸ್ಕ ತಿಯ ಮೊದಲ ಘಟ್ಟವು ಕ್ರಿ.ಪೂ. ೭೦೦೦-ಕ್ರಿ.ಪೂ. ೫೫೦೦ರವರೆಗೆ ನಡೆಯಿತು. ಈ ಅವಧಿಯಲ್ಲಿ ಆದಿ-ದಂತ ವೈದ್ಯಕೀಯವು (ಪ್ರೋಟೋ ಡೆಂಟಿಸ್ಟ್ರಿ) ಅಸ್ತಿತ್ವದಲ್ಲಿತ್ತು. ೨೦೦೬ರಲ್ಲಿ ನೇಚರ್ ಪತ್ರಿಕೆಯಲ್ಲಿ ಒಂದು ಲೇಖನವು ಪ್ರಕಟವಾಯಿತು. ಒಂಬತ್ತು ಪುರುಷರ ೧೧ ದವಡೆ ಹಲ್ಲುಗಳನ್ನು ಕೊರೆದು ರಂಧ್ರ ಮಾಡಿ, ಅದರಲ್ಲಿ ಯಾವುದೋ ಜಡವಸ್ತು ತುಂಬಿರುವುದರ ಕುರಿತು ಅದು ಮಾಹಿತಿಯನ್ನು ನೀಡುತ್ತದೆ. ಜೀವಂತ ವ್ಯಕ್ತಿಗಳಲ್ಲಿ ನಮ್ಮ ಪೂರ್ವಜರು ನಡೆಸಿದ ರೂಟ್ ಕೆನಾಲ್ ಟ್ರೀಟ್ಮೆಂಟ್ ನಮ್ಮನ್ನು ಆಶ್ಚರ್ಯಗೊಳಿಸುತ್ತದೆ. ಈಜಿಪ್ಟಿನವರ ಸಂಸ್ಕೃತಿಯಲ್ಲಿ ಸುನ್ನತಿಯನ್ನು ಮಾಡುತ್ತಿದ್ದ ವಿಚಾರವೂ ನಮಗೆ ತಿಳಿದಿದೆ.