ಇದೇ ಅಂತರಂಗ ಸುದ್ದಿ
ವಿಶ್ವೇಶ್ವರ ಭಟ್
vbhat@me.com
ಅನೇಕರಲ್ಲಿ ಒಂದು ಗುಣವಿದೆ. ಅದೇನೆಂದರೆ ತಮ್ಮ ಎಲ್ಲ ಗೋಳು, ಸಂಕಟಗಳನ್ನು ಸ್ನೇಹಿತರು, ಬಂಧು- ಬಾಂಧವರು ಹಾಗೂ ಸಹೋ ದ್ಯೋಗಿಗಳ ಮುಂದೆ ಹರಡಿಕೊಳ್ಳುತ್ತಾರೆ, ಹೇಳಿಕೊಳ್ಳುತ್ತಾರೆ. ಹಾಗೆ ಹೇಳಿಕೊಳ್ಳುವ ಮೂಲಕ ತಾವು ಹಗುರವಾಗಿದ್ದೇವೆಂದು ಭಾವಿಸು ತ್ತಾರೆ.
ನಮ್ಮ ಕಷ್ಟಗಳನ್ನು ಬೇರೆಯವರ ಮುಂದೆ ಹೇಳಿಕೊಂಡರೆ, ಹಂಚಿಕೊಂಡರೆ ಅದರ ಭಾರ ಹೇಗೆ ಕಡಿಮೆಯಾಗುತ್ತದೆ? ನಮ್ಮ ತೊಂದರೆ ಗಳನ್ನು ನಮಗೆ ಬೇಕಾದವರ ಮುಂದೆ ಹೇಳಿಕೊಳ್ಳುವುದರಿಂದ ಸಲಹೆ, ಮಾರ್ಗದರ್ಶನದ ರೂಪದಲ್ಲಿ ಒಂದಷ್ಟು ಸಹಾಯ ಸಿಗಬಹುದು. ಮನಸ್ಸಿನಲ್ಲಿ ಮಡುಗಟ್ಟಿದ ಭಾವನೆಗಳನ್ನು ಹರಿಯಬಿಟ್ಟಾಗ ಒಂದಷ್ಟು ಸಮಾಧಾನ ಸಿಗಬಹುದು. ನಮ್ಮ ಕಷ್ಟಗಳಿಗೆ ಸ್ನೇಹಿತರು ಪರಿಹಾರೋಪಾಯ ಸೂಚಿಸಬಹುದು. ಹೆಚ್ಚೆಂದರೆ ಹಣಕಾಸಿನ ನೆರವನ್ನೂ ನೀಡಬಹುದು. ಕೆಲವೊಮ್ಮೆ ಮನಸ್ಸಿನಲ್ಲಿಯೇ ಇಟ್ಟುಕೊಂಡು, ಎಲ್ಲವನ್ನೂ ನುಂಗಿಕೊಂಡು ಒಳಗೊಳಗೇ ಪರಿತಪಿಸುವ ಬದಲು ನಾಲ್ಕು ಜನರ ಮುಂದೆ ಹೇಳಿಕೊಂಡಾಗ ಸಾಂತ್ವನ ಸಿಗುವುದು ಸುಳ್ಳಲ್ಲ.
ಇಲ್ಲಿ ಬಹಳ ಮುಖ್ಯವಾದ ಸಂಗತಿಯೇನೆಂದರೆ, ನೀವು ನಿಮ್ಮ ಕಷ್ಟಗಳನ್ನು, ವೈಯಕ್ತಿಕ ಸಮಸ್ಯೆಗಳನ್ನು ಯಾರ ಮುಂದೆ ಹೇಳಿ ಕೊಳ್ಳುತ್ತಿದ್ದೀರಿ ಎಂಬುದು. ಆತನೋ, ಆಕೆಯೋ ನಿಮ್ಮ ಸಮಸ್ಯೆಗಳನ್ನು ಕಾಪಾಡಿಕೊಳ್ಳುವಷ್ಟು ನಿಯತ್ತು ಉಳ್ಳವರಾಗಿರಬೇಕು. ನಿಮಗೆ ಸೂಕ್ತ ಸಲಹೆ, ಸೂಚನೆ, ಮಾರ್ಗದರ್ಶನ, ಸಾಂತ್ವನ, ಸಮಾಧಾನ ಹೇಳುವಷ್ಟು ಪ್ರಬುದ್ಧರಾಗಿರಬೇಕು. ಅವರ ಸಲಹೆ – ಸಾಂತ್ವನಗಳು ಆ ಕ್ಷಣದಲ್ಲಿ ನಿಮಗೆ ನೆಮ್ಮದಿ ಸಿಗುವಂತಾಗಬೇಕು. ಅಲ್ಲದೇ ಅಗತ್ಯಬಿದ್ದರೆ ನಿಮಗೆ ಹಣಕಾಸಿನ ನೆರವು ನೀಡಲೂ ಹಿಂದೇಟು ಹಾಕುವಂತಾಗಬಾರದು.
ವೈದ್ಯರ ಮುಂದೆ ತನ್ನ ರೋಗಿಗಳ ಮಾಹಿತಿಯನ್ನೆಲ್ಲವನ್ನೂ ಹೇಳಿಕೊಳ್ಳುತ್ತಾನಲ್ಲ, ಹಾಗೆ ಹೇಳಿಕೊಂಡಾಗ ವೈದ್ಯ ಮುಂದೆ ಮಾಡಬೇಕಾದ ಕಾರ್ಯಗಳ ಬಗ್ಗೆ ಪ್ರವೃತ್ತನಾಗುತ್ತಾನಲ್ಲ, ಅಂಥ ಸಾಂತ್ವನವಾದರೂ ಹೇಳುವವರ ಮುಂದೆ ನಮ್ಮ ಗೋಳು, ವೈಯಕ್ತಿಕ
ಸಮಸ್ಯೆಗಳನ್ನು ಹೇಳಿಕೊಳ್ಳಬಹುದು. ನಿಮ್ಮ ವೈಯಕ್ತಿಕ ಅಥವಾ ಖಾಸಗಿ ಸಂಗತಿಗಳನ್ನು ಬೇರೆಯವರ ಮುಂದೆ ಹಂಚಿಕೊಳ್ಳುವು ದೆಂದರೆ, ನಿಮ್ಮ ವ್ಯಕ್ತಿತ್ವದ ರಹಸ್ಯದ ತಿಜೋರಿ ಬೀಗದ ಕೈಯನ್ನು ಬೇರೆಯವರಿಗೆ ಕೊಟ್ಟ ಹಾಗೆ. ನಿಮ್ಮ ಕುರಿತಾದ ಆ ಮಾಹಿತಿಯನ್ನು ಅವರು ಹೇಗೆ ಬೇಕಾದರೂ ಬಳಸಿಕೊಳ್ಳಬಹುದು.
ಅಲ್ಲಿಯವರಿಗೆ ನೀವು ಕಾಪಾಡಿಕೊಂಡು ಬಂದ ನಿಮ್ಮ ಖಾಸಗಿ ಅಂಶಗಳೆಲ್ಲ ಬಹಿರಂಗವಾಗಬಹುದು. ಆ ಮೂಲಕ ನಿಮ್ಮ ಚಾರಿತ್ರ್ಯ ಹರಣವಾಗಬಹುದು. ನೀವೇ ಕೋಲು ಕೊಟ್ಟು ಹೊಡೆಸಿಕೊಳ್ಳುವ ಪರಿಸ್ಥಿತಿ ಬರಬಹುದು. ನಿಮ್ಮೆಲ್ಲ ಗುಟ್ಟುಗಳನ್ನು ಯಾರ ಮುಂದೆ ಹೇಳಿಕೊಳ್ಳುತ್ತೀರೋ ಅವರು ನಿಮ್ಮನ್ನು ಬ್ಲ್ಯಾಕ್ ಮೇಲ್ ಮಾಡಬಹುದು. ಈ ಅಂಜಿಕೆಯಿಂದ ನೀವು ಅವರಿಗೆ ಸದಾ ಗೊಡ್ಡು ಸಲಾಮು ಹೊಡೆಯುತ್ತಾ ಇರಬೇಕಾದ ಪರಿಸ್ಥಿತಿಗೆ ನಿಮ್ಮನ್ನೇ ನೀವು ನೂಕಿಕೊಳ್ಳಬಹುದು. ಬೇರೆಯವರ ಮುಂದೆ ನಿಮ್ಮ ‘ಪುರಾಣ’ ಹೇಳಿಕೊಳ್ಳುವು ದರಿಂದ ಸಮಸ್ಯೆ ಖಂಡಿತ ಬಗೆಹರಿಯುವುದಿಲ್ಲ, ಕಡಿಮೆಯೂ ಆಗುವುದಿಲ್ಲ.
ಅದರ ಬದಲು oಜಿbಛಿ ಛ್ಛ್ಛಿಛ್ಚಿಠಿ ಹೆಚ್ಚುತ್ತಾ ಹೋಗುತ್ತದೆ. ನಿಮ್ಮನ್ನು ಗೌರವಿಸುತ್ತಿದ್ದವರು, ಇಷ್ಟಪಡುತ್ತಿದ್ದವರು ನಿಮ್ಮ ಪರಿಸ್ಥಿತಿ ನೋಡಿ ಕ್ರಮೇಣ ದೂರವಾಗಬಹುದು, ಅಂತರ ಕಾಪಾಡಬಹುದು, ನಿಕೃಷ್ಟವಾಗಿಯೂ ಕಾಣಬಹುದು, ಲಘುವಾಗಿ ಪರಿಗಣಿಸಬಹುದು. ನಿಮ್ಮ ಸಮಸ್ಯೆಗಳನ್ನು ಬೇರೆಯವರ ಮುಂದೆ ಹೇಳಿಕೊಳ್ಳಬೇಡಿ. ನಿಮಗೆ ನಿಮಗಿಂತ ಉತ್ತಮ ಸ್ನೇಹಿತ, ಹಿತ ಚಿಂತಕ, ಮಾರ್ಗದರ್ಶಕ ಮತ್ತೊಬ್ಬರಿಲ್ಲ. ಅವನ ಹೊರತಾಗಿ ಬೇರೆಲ್ಲೂ ಸಾಧ್ಯವಾದಷ್ಟು ಮಟ್ಟಿಗೆ ಹೇಳಿಕೊಳ್ಳಬೇಡಿ.
ತಾತನ ನಾಮಬಲ
ಒಮ್ಮೆ ಬ್ರಿಟಿಷ್ ಪಾರ್ಲಿಮೆಂಟೇರಿಯನ್‌ಗಳಾದ ಕ್ಲೆಮೆಂಟ್ ಫಾಯ್ಡ್ ಹಾಗೂ ವಿನ್‌ಸ್ಟನ್ ಚರ್ಚಿಲ್ ಅಧಿಕೃತ ಪ್ರವಾಸದನಿಮಿತ್ತಚೀನಾಕ್ಕೆ ಹೋಗಿದ್ದರು. ಅವರಿಬ್ಬರೂ ಅಕ್ಕಪಕ್ಕದ ರೂಮುಗಳಲ್ಲಿ ವಾಸವಾಗಿದ್ದರು. ರೂಮು ಖಾಲಿ ಮಾಡಿ ಹೊರಡುವ ದಿನ ಫಾಯ್ಡ್, ಚರ್ಚಿಲ್ ರೂಮಿಗೆ ಹೋದರು. ಅವರ ಸಹಾಯಕ್ಕೆ ಒಬ್ಬ ಸೇವಕ ಬೇರೆ ನಿಂತಿದ್ದ. ಅಲ್ಲದೇ ಚರ್ಚಿಲ್ ವಾಸವಾಗಿದ್ದ ರೂಮು ದೊಡ್ಡದಿತ್ತು, ಬೆಡ್ ಅಗಲವಾಗಿತ್ತು. ಬಾಲ್ಕನಿಯೂ ವಿಶಾಲವಾಗಿತ್ತು. ತಾವಿಬ್ಬರೂ ಸಂಸದರು, ಆದರೂ ತನಗಿಂತ ಹೆಚ್ಚಿನ ಸೌಕರ್ಯ, ಮೇಜವಾನಿಕೆ ಚರ್ಚಿಲ್‌ರಿಗೆ ನೀಡಿರುವುದನ್ನು ಗಮನಿಸಿದ ಫಾಯ್ಡ್, ‘ಈ ರೀತಿಯ ತಾರತಮ್ಯ ಏಕೆ?’ ಎಂದು ಚೀನಾದ ಅಧಿಕಾರಿಯನ್ನು ಕೇಳಿದರು.
‘ನಿಮಗೆ ಗೊತ್ತಿರಬಹುದು, ಚರ್ಚಿಲ್ ಅವರ ಅಜ್ಜ ಪ್ರಸಿದ್ಧ ವ್ಯಕ್ತಿ. ಅದಕ್ಕಾಗಿ ಅವರಿಗೆ ವಿಶೇಷ ಸವಲತ್ತುಗಳನ್ನು ನೀಡಲಾಗಿದೆ’ ಎಂದು ಚೀನಾದ ಅಧಿಕಾರಿ ಸಮಜಾಯಿಷಿ ನೀಡಿದರು. ಇದರಿಂದ ಕೆರಳಿದ ಫಾಯ್ಡ್, ‘ನಾನು ಯಾರು ಅಂತ ತಿಳಿದುಕೊಂಡಿದ್ದೀರಿ? ನನ್ನ ಅಜ್ಜನೇನು ಸಾಮಾನ್ಯ ವ್ಯಕ್ತಿಯಾ? ಅವನ ಬಗ್ಗೆ ನಿಮಗೆ ಗೊತ್ತಾ?’ ಎಂದು ಕೇಳಿದರು. ಈ ಮಾತಿಗೆ ಚೀನಾ ಅಧಿಕಾರಿ ಗೊತ್ತಿಲ್ಲ ಎಂಬಂತೆ ತಲೆಯಾಡಿಸಿದ.
‘ನನ್ನ ಅಜ್ಜನ ಹೆಸರು ಸಿಗ್ಮಂಡ್ ಫಾಯ್ಡ್, ಖ್ಯಾತ ಮನೋವಿಶ್ಲೇಷಕ. ಅವರೇನಾದರೂ ನಿನ್ನನ್ನು ನೋಡಿದ್ದಿದ್ದರೆ, ನಿನ್ನ ಮನಸ್ಸಿನಲ್ಲಿನ ಯೋಚನೆಗಳನ್ನು ಹೇಳುತ್ತಿದ್ದರು. ಅವರ ಮೊಮ್ಮಗ ನಾನು’ ಎಂದು ಹೆಮ್ಮೆಯಿಂದ ಹೇಳಿಕೊಂಡ. ಅವರಿಬ್ಬರ ಸಂಭಾಷಣೆ ಕೇಳುತ್ತಿದ್ದ ಚರ್ಚಿಲ್ ‘ತಾತನ ಹೆಸರನ್ನು ಇಟ್ಟುಕೊಂಡರೆ ಪ್ರಯೋಜನವಿಲ್ಲ. ಅವರಂತೆ ಆಗ ಬೇಕು. ಆಗಲೇ ಕಿಮ್ಮತ್ತು’ ಎಂದು ಹೇಳಿದರು.
ಫಾಯ್ಡ್ ಮಾತಾಡಲಿಲ್ಲ. ಅಂದಹಾಗೆ ಚರ್ಚಿಲ್‌ನ ಅಜ್ಜನ ಹೆಸರು ಜಾನ್ ಸ್ಪೆನ್ಸರ್ ಚರ್ಚಿಲ್. ಅವರು ಮಾರ್ಲ್‌ಬರೋದ ಏಳನೇ ಡ್ಯೂಕ್ ಆಗಿದ್ದರು. ವಿಜ್ಞಾನಿಯ ಕೆಲಸ ಗಗನ ನೌಕೆಯಲ್ಲಿ ಪ್ರಯಾಣಿಸಲು ವಿಜ್ಞಾನಿಯೊಬ್ಬ ಆಯ್ಕೆ ಯಾದ. ‘ಒಂದು ರಹಸ್ಯ ಉದ್ದೇಶಕ್ಕಾಗಿ ಈ ಗಗನನೌಕೆಯನ್ನು ಕಳಿಸಲಾಗುತ್ತಿದೆ. ಅದನ್ನು ಯಾರೊಂದಿಗೂ ಚರ್ಚಿಸುವಂತಿಲ್ಲ. ಭೂಕಕ್ಷೆಯನ್ನು ದಾಟಿದ ನಂತರ ನಿನಗೊಂದು ಲಕೋಟೆ ಕೊಡಲಾಗುತ್ತದೆ. ಅದರಲ್ಲಿ ಏನು ಬರೆದಿದೆಯೋ, ಹಾಗೆ ಮಾಡಬೇಕು’ ಎಂದು ವಿಜ್ಞಾನಿಗೆ ತಿಳಿಸಲಾಯಿತು.
ಅದಕ್ಕೆ ಆತ ಒಪ್ಪಿದ. ಗಗನ ನೌಕೆ ಆಕಾಶಕ್ಕೆ ನೆಗೆಯುತ್ತಿದ್ದಂತೆ ವಿಜ್ಞಾನಿಗೆ ಆಶ್ಚರ್ಯವಾಯಿತು. ಅಲ್ಲಿ ಆತನೊಂದಿಗೆ ಚಿಂಪಾಂಜಿ ಮಾತ್ರ ಇತ್ತು. ಅದು ಕಂಟ್ರೋಲ್ ರೂಮ್‌ನಿಂದ ಬರುವ ಸೂಚನೆಯನ್ನು ಕೇಳಿಸಿಕೊಂಡು ಬಟನ್ ಒತ್ತುತ್ತಿತ್ತು. ಸ್ವಿಚ್‌ಗಳನ್ನು ಆನ್-ಆಫ್ ಮಾಡುತ್ತಿತ್ತು. ಅದು ಸೂಚನೆಗಳನ್ನು ಪಾಲಿಸುವ ವೈಖರಿಯನ್ನು ನೋಡಿ ಸ್ವತಃ ವಿಜ್ಞಾನಿಯೇ ಮೂಕವಿಸ್ಮಿತನಾದ. ಗಗನ ನೌಕೆ ಭೂಕಕ್ಷೆ ದಾಟುತ್ತಿದ್ದಂತೆ, ವಿಜ್ಞಾನಿಯ ಕೈಗೆ ಚಿಂಪಾಂಜಿ ಒಂದು ಲಕೋಟೆಯನ್ನು ಕೊಟ್ಟಿತು. ಅದರಲ್ಲಿ ಬರೆದಿತ್ತು – ‘ನಿನ್ನ ಜತೆಯಿರುವ ಚಿಂಪಾಂಜಿಗೆ ಕಾಲಕಾಲಕ್ಕೆ ತಿನ್ನಲು ಕೊಡು.’
ಬೋರು ನಿವಾರಣೆ ಹೇಗೆ?
ಬೆಳಗಿನಿಂದಲೇ ಆತ ಖಿನ್ನಮನಸ್ಕನಾಗಿದ್ದ. ಯಾರೊಂದಿಗೂ ಮಾತಿಲ್ಲ, ಕತೆಯಿ. ವನ ಹಾವ ಭಾವ, ಮುಖಮುದ್ರೆಗಳನ್ನು ನೋಡಿದರೆ, ಅವನಿಗೆ ಬೇಸರವಾಗಿದೆಯೆಂದು ಹೇಳಬಹುದಿತ್ತು. ಯೋಗಿ ದುರ್ಲಭಜೀ ಬಳಿ ಬಂದ ಆತ, ‘ಯಾಕೋ ಬೆಳಗಿನಿಂದ ವಿಪರೀತ ಬೋರು. ಏನು ಮಾಡಲಿ?’ ಎಂದು ಕೇಳಿದ.
ಅದಕ್ಕೆ ಯೋಗಿ, ‘ನೋಡು, ಇನ್ನೇನು ಸೂರ್ಯ ಮುಳುಗಲಿದ್ದಾನೆ. ಹೊರಗೆ ಹೋಗಿ ಸೂರ್ಯಾಸ್ತ ನೋಡು’ ಎಂದರು. ‘ಹಾಗೆ ಮಾಡಿದರೆ ಬೋರು ನಿವಾರಣೆಯಾಗುವುದಾ?’ ಎಂದು ಕೇಳಿದ. ಯೋಗಿ ಹೇಳಿದರು – ‘ಸೂರ್ಯಾಸ್ತ ನೋಡಿದ ನಂತರವೂ ನಿನ್ನ ಬೋರು, ಖಿನ್ನತೆ ನಿವಾರಣೆಯಾಗದಿದ್ದರೆ, ಬೇರೆ ಯಾವುದರಿಂದಲೂ ಅದಕ್ಕೆ ಪರಿಹಾರ ಇಲ್ಲ.’
ಸೀರೆ ಉಡಿಸುವುದು ಹೇಗೆ?
ಈ ಘಟನೆ ನಡೆದದ್ದು 1948ರಲ್ಲಿ. ಭಾರತದ ಪ್ರಮುಖ ವ್ಯಕ್ತಿಯೊಬ್ಬರು ಲಂಡನ್‌ನಲ್ಲಿ ನಿಧನರಾದರು. ಅವರ ಅಂತ್ಯಕ್ರಿಯೆಯನ್ನು ಅಲ್ಲಿಯೇ ನೆರವೇರಿಸಲು ನಿರ್ಧರಿಸಲಾಯಿತು. ನಿಧನರಾದವರು ಮಂಡಿ ಪ್ರಾಂತದ ಮಹಾರಾಣಿ. ಹೀಗಾಗಿ ಸಕಲ ರಾಜ ಮರ್ಯಾದೆ ಗಳೊಂದಿಗೆ ಅಂತಿಮ ಸಂಸ್ಕಾರ ಮಾಡಬೇಕೆಂದು ಸೂಚಿಸಲಾಯಿತು. ಈ ಜವಾಬ್ದಾರಿಯನ್ನು ‘ಕೆನ್ಯಾನ್ ಅಂಡರ್ ಟೇಕರ‍್ಸ್’ ಎಂಬ ಸಂಸ್ಥೆಗೆ ವಹಿಸಲಾಯ್ತು. ಆ ಸಂಸ್ಥೆ ಅಂತ್ಯಕ್ರಿಯೆ ನೆರವೇರಿಸುವುದರಲ್ಲಿ ಪ್ರಸಿದ್ಧ. ಮಹಾರಾಣಿ ತನ್ನ ಉಯಿಲಿನಲ್ಲಿ ಅಂತ್ಯಸಂಸ್ಕಾರದ ಸಮಯದಲ್ಲಿ ಕಳೇಬರಕ್ಕೆ ಮದುವೆಯಲ್ಲಿ ಧರಿಸಿದ ಸೀರೆಯನ್ನು ಉಡಿಸಬೇಕೆಂದು ಬರೆದಿದ್ದಳು. ಆ ಸೀರೆಯೇನೋ ಸಿಕ್ಕಿತು. ಆದರೆ ಪಾರ್ಥಿವ ಶರೀರಕ್ಕೆ ಹೇಗೆ ಸೀರೆ ಉಡಿಸುವುದು ಎಂಬ ಪ್ರಶ್ನೆ ಎದುರಾಯಿತು. ಆ ದಿನಗಳಲ್ಲಿ ಲಂಡನ್‌ನಲ್ಲಿ ಸೀರೆ ಉಡುವವರನ್ನು ಎಲ್ಲಿ ಹುಡುಕುವುದು? ಕೆನ್ಯಾನ್ ಅಂಡರ್ ಟೇಕರ‍್ಸ್ ಸಂಸ್ಥೆಯ ಅಧಿಕಾರಿಗಳು ಬಹಳ ತಲೆ ಕೆಡಿಸಿಕೊಂಡರು. ಆ ನಂತರ ಲಂಡನ್‌ನಲ್ಲಿರುವ ಭಾರತೀಯ ಹೈ ಕಮಿಶನ್ ಕಚೇರಿಯ ಅಧಿಕಾರಿಗಳನ್ನು ಭೇಟಿ ಮಾಡಲು ನಿರ್ಧರಿಸಿದರು.
ಆ ದಿನಗಳಲ್ಲಿ ಖುಷವಂತ ಸಿಂಗ್ ಭಾರತೀಯ ಹೈ ಕಮಿಶನ್ ಕಚೇರಿಯಲ್ಲಿ ಪ್ರೆಸ್ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದರು. ಅಲ್ಲದೇ, ಪಬ್ಲಿಕ್ ರಿಲೇಶನ್ಸ್ ವಿಭಾಗದ ಉಸ್ತುವಾರಿಯನ್ನೂ ನಿರ್ವಹಿಸುತ್ತಿದ್ದರು. ಕೆನ್ಯಾನ್ ಅಂಡರ್‌ಟೇಕರ‍್ಸ್ ಅಧಿಕಾರಿಯೊಬ್ಬ ಖುಷವಂತ ಸಿಂಗ್ ಅವರನ್ನು ಭೇಟಿ ಮಾಡಿ, ‘ಮಹಿಳೆಯೊಬ್ಬಳಿಗೆ ಸೀರೆ ಉಡಿಸಬೇಕಾಗಿದೆ. ಸೀರೆ ಉಡಿಸುವುದು ಹೇಗೆಂದು ನಮಗೆ ತಿಳಿಯುತ್ತಿಲ್ಲ. ಅದು ಹೇಗೆ ಎಂಬುದನ್ನು ತಿಳಿಸುತ್ತೀರಾ?’ ಎಂದು ಕೇಳಿದ.
ಖುಷವಂತ್ ಸಿಂಗ್‌ಗೆ ಅವರು ಬಂದ ಹಿನ್ನೆಲೆ, ಅಂತ್ಯಕ್ರಿಯೆಯ ಶಿಷ್ಟಾಚಾರದ ಅಗತ್ಯ ಮುಂತಾದ ವಿವರಗಳೇನೂ ಗೊತ್ತಿರಲಿಲ್ಲ. ‘ನೋಡಿ, ನೀವು ಒಬ್ಬ ರಾಂಗ್ ಪರ್ಸನ್‌ನ್ನು ಭೇಟಿ ಮಾಡಿದ್ದೀರಿ. ನನಗೆ ಸೀರೆ ಬಿಚ್ಚುವುದು ಗೊತ್ತೇ ಹೊರತು, ಉಡಿಸುವುದು ಗೊತ್ತಿಲ್ಲ. ಕಾರಣ, ನಾನು ನನ್ನ ಜೀವನದಲ್ಲಿ ಒಂದು ಸಲವೂ ಸೀರೆ ಉಡಿಸಿಲ್ಲ. ಅವೆಷ್ಟೋ ಸಲ ಬಿಚ್ಚಿದ್ದೇನೆ’ ಎಂದರು ಖುಷವಂತ ಸಿಂಗ್.
ಈ ಮಾತನ್ನು ಕೇಳಿದ ಕೆನ್ಯಾನ್ ಅಂಡರ್‌ಟೇಕರ‍್ಸ್ ಅಧಿಕಾರಿ ಸಿಟ್ಟಿಗೆದ್ದು, ಹೈ ಕಮಿಶನ್ ಆಫೀಸಿನ ಹಿರಿಯ ಅಧಿಕಾರಿಯೊಬ್ಬರನ್ನು ಭೇಟಿ ಮಾಡಿ ದೂರು ನೀಡಿದ. ಖುಷವಂತ ಸಿಂಗ್‌ರನ್ನು ಅವರು ಕರೆಸಿದರು. ಅದಕ್ಕೆ ಸಿಂಗ್, ‘ನಿಮಗೆ ಗೊತ್ತಿದೆಯಾ ಸಾರ್? ಜೀವನದಲ್ಲಿ ನೀವು ಎಂದಾದರೂ ನಿಮ್ಮ ಹೆಂಡತಿಗೆ ಅಥವಾ ಬೇರೆ ಹೆಂಗಸರಿಗೆ ಸೀರೆ ಉಡಿಸಿದ್ದೀರಾ? ನೀನು ರಾಂಗ್ ಪರ್ಸನ್ ಅನ್ನು ಭೇಟಿ ಮಾಡಿದೆ ಅಂತ ಅವನಿಗೆ ಹೇಳಿದೆ. ನನ್ನ ತಪ್ಪೇನು ಬಂತು ಹೇಳಿ? ಇರೋ ವಿಷಯವನ್ನು ನೇರವಾಗಿ ಹೇಳಿದೆ ಅಷ್ಟೇ’ ಎಂದರು. ಮೇಲಧಿಕಾರಿಯೂ ಜೋರಾಗಿ ನಕ್ಕರು.
ಅವರು ಕುಡಿದಿದ್ದೇನು?
ಐವರಿಗೆ ಜಾನಿವಾಕರ್ ಬ್ಲ್ಯಾಕ್‌ಲೇಬಲ್ ಕೊಡಿ ಹಾಗೂ ಅವರಿಗೆ ಇದು ಜಾನಿವಾಕರ್ ಬ್ಲ್ಯಾಕ್‌ಲೇಬಲ್ ಎಂದು ಹೇಳಿ. ಆನಂತರ ಆ ಐವರಿಗೆ ಜಾನಿವಾಕರ್ ಬ್ಲ್ಯಾಕ್‌ಲೇಬಲ್ ಕೊಟ್ಟು,ಅದು ಜಾಕ್ ಡೇನಿಯಲ್ಸ್ ಎಂದು ಹೇಳಿ. ಅವರು ಅದನ್ನು ಕುಡಿದ ನಂತರ ‘ನಿಮಗೆ ಯಾವುದು ಇಷ್ಟವಾಯಿತು?’ ಎಂದು ಕೇಳಿ. ಆ ಐವರೂ ಕುಡಿದಿದ್ದು ಒಂದೇ ಆದರೂ, ಎರಡು ಬೇರೆ ಬೇರೆ ಬ್ರ್ಯಾಂಡ್‌ಗಳ ವಿಸ್ಕಿಯನ್ನು ಕುಡಿದಿದ್ದೇವೆಂಬುದು ಯೋಚಿಸಲಾರಂಭಿಸುತ್ತಾರೆ. ಅವರೆಲ್ಲ ಒಂದೇ ವಿಸ್ಕಿಯನ್ನು ಕುಡಿದು, ಎರಡು ಇಮೇಜ್‌ಗಳ ರುಚಿಯನ್ನು ಯೋಚಿಸ ಲಾರಂಭಿಸುತ್ತಾರೆ. Actually they are tasting images.
ಜಿರಳೆ ಕಲಿಸಿದ ಪಾಠ
ಸಮಸ್ಯೆಯ ನಿರ್ವಹಣೆಯ ಬಗ್ಗೆ ಗೂಗಲ್‌ನ ಸಿಇಒ ಭಾರತೀಯ ಮೂಲದ ಸುಂದರ್ ಪಿಚೈ ಹೇಳಿದ ಮಾತು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತಿದೆ. ರೆಸ್ಟೋರೆಂಟ್ ಒಂದರಲ್ಲಿ ಎಲ್ಲಿಂದಲೋ ಒಂದು ಜಿರಳೆ ಹಾರಿ ಬಂದು ಒಬ್ಬ ಮಹಿಳೆಯ ಮೇಲೆ ಕುಳಿತುಕೊಂಡಿತು. ಗಾಬರಿಯಾದ ಆಕೆ ಒಂದೇ ಸಮನೇ ಸೂರು ಕಿತ್ತು ಹೋಗುವ ಹಾಗೆ ಕಿರುಚಿಕೊಳ್ಳಲಾರಂಭಿಸಿದಳು. ಆ ಜಿರಳೆ ಯಿಂದ ತನ್ನನ್ನು ರಕ್ಷಿಸಿಕೊಳ್ಳುವುದಕ್ಕಾಗಿ ಎರಡೂ ಕೈಗಳನ್ನು ಎತ್ತಿ, ಜೋರಾಗಿ ಕೂಗಿ, ಬೊಬ್ಬಿರಿದು ಒಂದು ಸುತ್ತು ತಾವಿದ್ದ ಟೇಬಲ್ ಸುತ್ತೆಲ್ಲ ಓಡಾಡಿ ರಂಪ ಮಾಡಿದಳು. ಎಷ್ಟೆಂದರೂ ಹೆಣ್ಣು ಧ್ವನಿ, ಆ ಕಿಟಾರ್ ಧ್ವನಿಗೆ ಜನರು ಸಹಜವಾಗಿಯೇ ಬೆಚ್ಚಿ ಬಿದ್ದರು. ಹೋಟೆಲ್ ನಲ್ಲಿರುವವರೆಲ್ಲರೂ ಏನಾಯ್ತು ಏನಾಯ್ತು ಎಂದು ಮುಖ ಮುಖ ನೋಡಿಕೊಂಡರು.
ಇತ್ತ ಆ ಮಹಿಳೆ ಅದು ಹೇಗೋ ಮಾಡಿ ಜಿರಳೆಯನ್ನು ದೂಡಿ ನಿರಾಳವಾದಳು. ಆದರೆ ಆ ಜಿರಳೆ ಹಾರಿ ಅದೇ ಗುಂಪಿನಲ್ಲಿದ್ದ ಮತ್ತೊಬ್ಬ ಮಹಿಳೆಯ ಮೇಲೆ ಕುಳಿತುಕೊಂಡಿತು. ಒಂದೇ ಗುಂಪೆಂದ ಮೇಲೆ ಕೇಳಬೇಕೆ? ಮತ್ತೊಬ್ಬ ಮಹಿಳೆಯೂ ಡ್ರಾಮಾ ಮುಂದುವರಿಸಿದಳು. ಈ ಗೌಜು ಬಹಳ ಜೋರಾಗಿದ್ದರಿಂದ ವೇಯ್ಟರ್ ಅಲ್ಲಿಗೆ ಬಂದ. ಆಗ ಮಹಿಳೆಯ ಮೇಲಿದ್ದ ಜಿರಳೆ ಆ ವೇಯ್ಟರ್ ಮೇಲೆ ಕುಳಿತುಕೊಂಡಿತು.
ಆದರೆ ವೇಯ್ಟರ್ ಒಂದು ಕ್ಷಣ ಸ್ತಬ್ಧನಾದ. ಶರ್ಟ್ ಮೇಲಿಂದ ಜಿರಳೆ ಹೇಗೆ ಓಡಾಡುತ್ತಿದೆ ಎಂದು ಗಮನಿಸಿ ಅದನ್ನು ಗಬಕ್ಕನೆ ಹಿಡಿದು, ನಿಧಾನವಾಗಿ ತೆಗೆದುಕೊಂಡು ಹೋಗಿ ಹೊರಗೆ ಹಾಕಿದ. ಎಲ್ಲವೂ ಸಹಜ ಸ್ಥಿತಿಗೆ ಬಂತು.
ನಾನು ಕಾಫಿ ಹೀರುತ್ತಾ ಇನ್ನೊಂದು ಟೇಬಲ್‌ನಲ್ಲಿ ಕುಳಿತಿದ್ದೆ. ನನ್ನ ತಲೆಯ ಆಂಟೇನಾ ಈ ಘಟನೆಯಿಂದ ಒಂದೆರಡು ಅಂಶಗಳ ಬಗ್ಗೆ ಆಲೋಚಿಸಲು ಶುರು ಮಾಡಿತ್ತು. ಇಲ್ಲಿ ನಡೆದ ಈ ನಾಟಕೀಯ ಬೆಳವಣಿಗೆಗೆ ಆ ಜಿರಳೆ ಕಾರಣವಾ? ಹಾಗಾಗಿ ದ್ದಿದ್ದರೆ, ಆ ಮಹಿಳೆಯರ ಹಾಗೆ ವೇಯ್ಟರ್ ಏಕೆ ವಿಚಲಿತನಾಗಲಿಲ್ಲ? ಏಕೆ ಕೂಗಾಡಿ ರಂಪ ಮಾಡಲಿಲ್ಲ? ಅಷ್ಟು ಪರ್ಫೆಕ್ಟ್ ಆಗಿ ಹೇಗೆ ಆತ ಆ ಸಂದರ್ಭವನ್ನು ನಿಭಾಯಿಸಿದ? ಅಂದರೆ, ಅದರ ಅರ್ಥ ಆ ಸ್ಥಿತಿಗೆ ಕಾರಣ ಜಿರಳೆಯಲ್ಲ. ಬದಲಿಗೆ ಆ ಜಿರಳೆ ಸೃಷ್ಟಿ ಮಾಡಿದ್ದಂಥ ಸನ್ನಿವೇಶವನ್ನು ನಿಭಾಯಿಸುವುದಕ್ಕೆ ಆಗದೇ ಇರುವುದು. ಅದು ಆ ಮಹಿಳೆಯರನ್ನು ವಿಚಲಿತರನ್ನಾಗಿ ಮಾಡಿತು. ಇದರಿಂದ ನನಗೆ ಒಂದು ವಿಚಾರ ಅರ್ಥವಾಯಿತು.
ಅದೇನೆಂದರೆ, ನನ್ನ ಅಪ್ಪ, ಆಫೀಸಿನಲ್ಲಿರುವ ಬಾಸ್, ನನ್ನ ಹೆಂಡತಿ ಅಥವಾ ಇನ್ಯಾರೇ ನನ್ನ ಮೇಲೆ ಕೂಗಾಡುವುದು ನನ್ನನ್ನು ವಿಚಲಿತ ನನ್ನಾಗಿ ಮಾಡುತ್ತಿಲ್ಲ. ಬದಲಿಗೆ ಆ ಕೂಗುವಿಕೆಯಿಂದ ನನ್ನ ಮೇಲಾಗುವ ಪರಿಣಾಮವನ್ನು ನಿಭಾಯಿಸುವುದು ನನ್ನಿಂದಾಗುತ್ತಿಲ್ಲ. ರೋಡ್‌ನಲ್ಲಾಗುವ ಟ್ರಾಫಿಕ್ ಜ್ಯಾಮ್ ನನ್ನನ್ನು ತಾಳ್ಮೆ ಕಳೆದುಕೊಳ್ಳುವಂತೆ ಮಾಡುತ್ತಿಲ್ಲ. ಬದಲಿಗೆ ಟ್ರಾಫಿಕ್ ಜ್ಯಾಮ್‌ನಿಂದಾದ ಕಿರಿಕಿರಿಯನ್ನು ನನ್ನಿಂದ ತಡೆದುಕೊಳ್ಳುವುದಕ್ಕೆ ಆಗದೇ ಇರುವುದೇ ನನ್ನ ಅಶಾಂತಿ, ತಾಳ್ಮೆ ರಹಿತ ವರ್ತನೆಗೆ ಕಾರಣ. ಇಲ್ಲಿ ವಿಷಯ ಸ್ಪಷ್ಟ – ಸಮಸ್ಯೆಗಿಂತಲೂ ಹೆಚ್ಚಾಗಿ ಆ ಸಮಸ್ಯೆಗೆ ನಾವು ಸ್ಪಂದಿಸುವ ರೀತಿ ನಮ್ಮ ಜೀವನದಲ್ಲಿ ಅಶಾಂತಿ ಉಂಟು ಮಾಡುತ್ತಿರುವುದು.
ಪಿಕಾಸೋ ಬಿಡಿಸಿದ ಚಿತ್ರ
ಒಮ್ಮೆ ಖ್ಯಾತ ಕಲಾವಿದ ಪಿಕಾಸೋ ಉದ್ಯಾನವನದಲ್ಲಿ ಸುಮ್ಮನೆ ಕುಳಿತಿದ್ದ. ಇದನ್ನು ಗಂಡ-ಹೆಂಡತಿಯರು ಗಮನಿಸಿದರು. ತಮ್ಮ ಮಗನನ್ನು ಕರೆದು ‘ನೋಡು ಅಲ್ಲಿ ಕುಳಿತಿದ್ದಾರಲ್ಲ, ಅವರು ಮಹಾನ್ ಕಲಾವಿದರು. ಅವರಿಗೆ ಈ ಕಾಗದ ಕೊಟ್ಟು ಯಾವುದಾದರೂ ಚಿತ್ರ ಬಿಡಿಸುವಂತೆ ಹೇಳು’ ಎಂದು ಕಳುಹಿಸಿ ಅವರಿಬ್ಬರ ಸಂಭಾಷಣೆ ಏನು ನಡೆಯಬಹುದೆಂದು ದೂರದಿಂದ ನೋಡುತ್ತಾ ಕುಳಿತರು.
ಪಿಕಾಸೋ ಭೇಟಿ ಮಾಡಿದ ಮಗು, ಯಾವುದಾದರೂ ಚಿತ್ರ ಬರೆದುಕೊಡುವಂತೆ ಹೇಳಿತು. ಆದರೆ ಪಿಕಾಸೋ ಆ ಕಾಗದವನ್ನು ಹರಿದು ಹಾಕಿ, ಮಗುವಿನ ಎದೆ ಮೇಲೆ ಚಿತ್ರ ಬಿಡಿಸಿ, ಪಿಕಾಸೋ ಎಂದು ಸಹಿ ಹಾಕಿ ವಿಚಿತ್ರವಾಗಿ ನಕ್ಕರು.
ಮಗುವಿಗೆ ಏನೂ ಅರ್ಥವಾಗಲಿಲ್ಲ. ಅದು ಅಪ್ಪ-ಅಮ್ಮಂದಿರ ಬಳಿ ಓಡಿ ಹೋಯಿತು. ಅವರು ಆ ಚಿತ್ರವನ್ನು ಏನು ಮಾಡಿದರೋ ಗೊತ್ತಾಗಲಿಲ್ಲ. ಒಂದು ವೇಳೆ ಅವರೇನಾದರೂ ಈಗ ಹಾಗೆ ಮಾಡಿದ್ದಿದ್ದರೆ, ಸೆಲಿ ತೆಗೆದುಕೊಂಡು ಫೇಸ್‌ಬುಕ್ ಗೋ, ಟ್ವಿಟರ್‌ಗೆ ಹಾಕಿ ವೈರಲ್ ಆಗುವಂತೆ ಮಾಡುತ್ತಿದ್ದರು. ಆದರೆ ಪಿಕಾಸೋ ಇಲ್ಲವಲ್ಲ?!
ನಮ್ಮ ಸೇವೆ
ಆಸ್ತಿಕರೆಲ್ಲ ಸೇರಿ ಹೊಸ ದೂರವಾಣಿ ಸೇವೆ ಆರಂಭಿಸಿದರು. ಡಯಲ್ – ಎ – ಪ್ರೇಯರ್ ಎಂಬ ಸೇವೆಯದು. ಇದಕ್ಕೆ ಫೋನ್ ಮಾಡಿದರೆ ಧ್ವನಿ ಮುದ್ರಿತ ದೇವರ ಪ್ರಾರ್ಥನೆ ಕೇಳಿಸುತ್ತಿತ್ತು. ನಾಸ್ತಿಕರು ಕೊಚ್ಚಿಕೊಂಡರು – ‘ಇದೇನ್ ಮಹಾ? ಇವರಿಗಿಂತ ಮೊದಲೇ ನಾವು ಈ ಸೇವೆ ಆರಂಭಿಸಿದ್ದೇವೆ. ನೀವು ಡಯಲ್ ಮಾಡಿದರೆ, ಯಾರೂ ಉತ್ತರಿಸದಿದ್ದರೆ, ಅದು ನಮ್ಮ ಸೇವೆ ಎಂದು ತಿಳಿಯಿರಿ.’
ಮರೆಯಲಾಗದ ಶೀರ್ಷಿಕೆ
ಇದು ಯಾವ ಪತ್ರಿಕೆಯಲ್ಲಿ ಪ್ರಕಟವಾದ ಶೀರ್ಷಿಕೆ ಎಂಬುದು ಮರೆತು ಹೋಗಿದೆ. ನಗರದಲ್ಲಿ ಶಬ್ದ ಮಾಲಿನ್ಯ ನಿಯಂತ್ರಿಸುವ ಕುರಿತು ಸ್ಥಳೀಯ ಮಹಾನಗರ ಪಾಲಿಕೆ ತನ್ನ ನಾಗರಿಕರಿಗೆ ಸಲಹೆಗಳನ್ನು ನೀಡುವಂತೆ ವಿನಂತಿಸಿಕೊಂಡಿತು. ಇದು ಸುದ್ದಿ. ಅದಕ್ಕೆ ಪತ್ರಿಕೆ ನೀಡಿದ ಹೆಡ್‌ಲೈನ್ – ‘Can the public reduce noise? Speak up.