Saturday, 14th December 2024

ಗುರು – ಶನಿಯ ಮಹಾ ಸಂಯೋಗ

ತನ್ನಿಮಿತ್ತ

ಗುರುರಾಜ್‌ ಎಸ್‌.ದಾವಣಗೆರೆ

ಡಿಸೆಂಬರ್ 21ರ ರಾತ್ರಿಯ ಆಗಸ ವಿಶೇಷ ಖಗೋಳ ಘಟನೆಯೊಂದಕ್ಕೆ ಸಾಕ್ಷಿಯಾಗುತ್ತಿದೆ. ಸೌರವ್ಯೂಹದ ಬೃಹತ್ ಗ್ರಹಗಳಾದ ಗುರು ಮತ್ತು ಶನಿ ಸೂರ್ಯನ ಸುತ್ತ ಸುತ್ತುತ್ತಾ ತಮ್ಮ ಕಕ್ಷೆಯಲ್ಲಿದ್ದುಕೊಂಡೇ ಒಂದಕ್ಕೊಂದು ಹತ್ತಿರ ಬರುತ್ತವೆ.

ಪ್ರತೀ 20 ವರ್ಷಗಳಿಗೊಮ್ಮೆ ಸಂಭವಿಸುವ ಗ್ರಹಗಳ ಸಮೀಪವರ್ತನೆಯನ್ನು ಖಗೋಳ ಭಾಷೆಯಲ್ಲಿ ಗ್ರೇಟ್ ಕಂಜಂಕ್ಷನ್ ಅಥವಾ ಮಹಾ ಸಂಯೋಗ ಎನ್ನುತ್ತಾರೆ. ಈ ಅಪರೂಪದ ಘಟನೆಯನ್ನು ಕಣ್ತುಂಬಿಕೊಳ್ಳಲು ಖಗೋಳತಜ್ಞರು, ಹವ್ಯಾಸಿ ವೀಕ್ಷಕರು ಬೈನಾಕುಲರ್, ಕ್ಯಾಮೆರಾ, ಟೆಲಿಸ್ಕೋಪ್ ಗಳನ್ನು ಹಿಡಿದು ತುದಿಗಾಲಿನಲ್ಲಿ ನಿಂತಿದ್ದಾರೆ.

ಭೂಮಿಯಿಂದ ನೋಡಿದಾಗ ಇಂಥದೇ ಘಟನೆ ಮತ್ತೆ ಘಟಿಸುವುದು 2040ರಲ್ಲಿ! ಕಳೆದೊಂದು ವಾರದಿಂದ ಸೂರ್ಯಾಸ್ತವಾದ ಅರ್ಧಗಂಟೆಯ ನಂತರ ಈಶಾನ್ಯ ದಿಕ್ಕಿನಲ್ಲಿ ಪ್ರಖರವಾಗಿ ಹೊಳೆಯುವ ಗುರು ಮತ್ತು ಅದರ ಪಕ್ಕದಲ್ಲಿ ಗುರುಗಿಂತ ಕಡಿಮೆ ಹೊಳಪುಳ್ಳ ಶನಿ ಗ್ರಹಗಳೆರಡೂ ಒಟ್ಟೊಟ್ಟಿಗೆ ಬರಿಯ ಕಣ್ಣಿಗೇ ಕಾಣಿಸುತ್ತಿವೆ. ಉತ್ತಮ ಶಕ್ತಿಯ ಮಸೂರ ಹೊಂದಿದ ದೂರ ದರ್ಶಕದಲ್ಲಿ ಗೆಲಿಲಿಯೋ ಕಂಡುಹಿಡಿದ ಗುರುವಿನ ನಾಲ್ಕು ಉಪಗ್ರಹಗಳಾದ ಯುರೋಪ್, ಗ್ಯಾನಿಮೆಡ್, ಕ್ಯಾಲಿಸ್ಟೊ ಮತ್ತು ಅಯೊ ಜತೆಗೆ ಶನಿಗ್ರಹದ ಸುತ್ತಲಿನ ಬಳೆಗಳೂ ನಿಚ್ಚಳವಾಗಿ ಗೋಚರಿಸಿ ವೀಕ್ಷಕರಿಗೆ ಥ್ರಿಲ್ ನೀಡುತ್ತಿವೆ.

ಕಳೆದ ಸೆಪ್ಟೆಂಬರ್‌ನಿಂದಲೇ ಹತ್ತಿರವಾಗುತ್ತಿರುವ ಗ್ರಹಗಳು ಅಪರೂಪದ ಮಹಾಸಂಗಮಕ್ಕೆ ಕಾರಣವಾಗುತ್ತಿವೆ. ನವೆಂಬರ್ ತಿಂಗಳಿನ ಆರಂಭದಲ್ಲಿ 5 ಡಿಗ್ರಿಯಷ್ಟಿದ್ದ ಗ್ರಹಗಳ ಕೋನಾಂತರ ಈ ತಿಂಗಳ ಆರಂಭಕ್ಕೆ 2 ಡಿಗ್ರಿಗೆ ಬದಲಾಗಿತ್ತು. ಡಿಸೆಂಬರ್
21ಕ್ಕೆ ಅಂತರ ಇನ್ನೂ ಕಡಿಮೆ ಎಂದರೆ ಕೇವಲ 0.1 ಡಿಗ್ರಿಗೆ ತಲುಪಿ ಭೂಮಿಯಿಂದ ನೋಡುವವರಿಗೆ ಎರಡೂ ಗ್ರಹಗಳು ಒಂದರ ತಲೆಗೆ ಇನ್ನೊಂದು ಅಂಟಿಕೊಂಡಂತೆ ಕಾಣುತ್ತವೆ.

ಹಾಗೆ ಕಂಡರೂ ಅವುಗಳ ನಡುವಿನ ಸರಾಸರಿ ದೂರ 64.5 ಕೋಟಿ ಕಿಲೋ ಮೀಟರ್‌ಗಳಿಗೂ ಹೆಚ್ಚು! ಕಳೆದ ಸಲ ಮೇ 31, 2000ದಲ್ಲಿ ಇದೇ ರೀತಿಯ ಸಂಯೋಗವಾದಾಗ ಅವುಗಳ ನಡುವಿನ ಕೋನಾಂತರ 1.2 ಡಿಗ್ರಿಯಷ್ಟಿತ್ತು ಮತ್ತು ಘಟನೆ ಸೂರ್ಯೋದಯಕ್ಕೂ ಮುಂಚೆ ಗೋಚರಿಸಿತ್ತು.ಸೌರವ್ಯೂಹದ ಗ್ರಹಗಳಲ್ಲೇ ಅತ್ಯಂತ ದೊಡ್ಡದಾದ ಗುರು ಸೂರ್ಯನ ಸುತ್ತಸುತ್ತಲು 12 ವರ್ಷ (11.86) ತೆಗೆದುಕೊಂಡರೆ ಎರಡನೆಯ ದೊಡ್ಡ ಗ್ರಹ ಶನಿ 30 ವರ್ಷ (29.46)ಗಳನ್ನು ತೆಗೆದು ಕೊಳ್ಳುತ್ತದೆ.

ಸೂರ್ಯನಿಂದ ಗುರು 778 ದಶಲಕ್ಷ ಕಿ.ಮೀ ದೂರದಲ್ಲಿದ್ದರೆ ಶನಿಯು 1400 ದಶಲಕ್ಷ ಕಿ.ಮೀ ದೂರದಲ್ಲಿದೆ. ಇವೆರಡರ ನಡುವಿನ ಸರಾಸರಿ ದೂರ ಅರವತ್ನಾಲ್ಕು ಕೋಟಿ ಕಿಲೋ ಮೀಟರ್‌ಗೂ ಹೆಚ್ಚು. ಆದರೂ ಡಿಸೆಂಬರ್ 21ರಂದು ಒಂದರ ಪಕ್ಕ ಒಂದು ಇವೆಯೆಂಬಂತೆ ಭ್ರಮೆ ಹುಟ್ಟಿಸುತ್ತವೆ. ಅಂದಿಗೆ ಶನಿಗ್ರಹ ತನ್ನ ಒಂದು ಪೂರ್ಣ ಸುತ್ತಿನ ಮೂರನೇ ಎರಡು ಭಾಗ ಅಂದರೆ 20 ವರ್ಷಗಳನ್ನು ಮುಗಿಸಿರುತ್ತದೆ ಹಾಗೂ ಗುರು ಗ್ರಹ 12 ವರ್ಷದ ಒಂದು ಪೂರ್ಣ ಸುತ್ತನ್ನು ಮುಗಿಸಿ ಎರಡನೇ ಸುತ್ತಿನ ಮೂರನೇ ಎರಡು ಭಾಗ ಅಂದರೆ ಹೆಚ್ಚುವರಿ 8 ವರ್ಷಗಳನ್ನು ಮುಗಿಸಿರುತ್ತದೆ!

ಆದ್ದರಿಂದಲೇ ಗುರು – ಶನಿಗಳ ಮಹಾ ಸಂಗಮ ಜರುಗುವುದು 20 ವರ್ಷಗಳಿಗೊಮ್ಮೆ! ಅಂದು ಎರಡೂ ಒಂದೇ ರೇಖೆಯ ಮೇಲಿರುತ್ತವೆ. ಆದರೆ ಎರಡರ ಸಮತಲದ ನಡುವೆ 0.1 ಡಿಗ್ರಿಯಷ್ಟು ಕೋನಾಂತರವಿರುತ್ತದೆ. ಮುಂದಿನ ಮಹಾಸಂಗಮ ನವೆಂಬರ್ 2, 2040 ಮತ್ತು ಏಪ್ರಿಲ್ 7, 2060ರಲ್ಲಿ ಸಂಭವಿಸುತ್ತವೆ. ಆ ಎರೆಡೂ ಸಂದರ್ಭಗಳಲ್ಲಿ ಅವುಗಳ ನಡುವಿನ ಕೋನಾಂತರ 1.1 ಡಿಗ್ರಿಯಷ್ಟಿರುತ್ತದೆ.

ಅಂದರೆ ಅವುಗಳ ನಡುವಿನ ಅಂತರ ಈಗಿನದ್ದಕ್ಕಿಂತ 11 ಪಟ್ಟು ಹೆಚ್ಚಿರುತ್ತದೆ. ಭೂಮಿಗೆ ಹೋಲಿಸಿದರೆ ಅವುಗಳ ಚಲನೆಯ ವೇಗ ತುಂಬಾ ಕಡಿಮೆ. ಭೂಮಿ ಸೂರ್ಯನ ಸುತ್ತ ಸೆಕೆಂಡಿಗೆ 30ಕಿ.ಮೀ ಚಲಿಸಿದರೆ, ಗುರು 13.9 ಮತ್ತು ಶನಿ 9.6 ಕಿ.ಮೀ ಚಲಿಸುತ್ತದೆ.

ಸೂರ್ಯನಿಂದ ಇರುವ ಅಗಾಧ ದೂರ ಮತ್ತು ಸುದೀರ್ಘ ಕಕ್ಷೆಗಳೇ ಅದ  ಕಾರಣ. ಕಳೆದ ಒಂದು ಸಾವಿರ ವರ್ಷಗಳ ಅವಧಿ ಯಲ್ಲಿ ಗುರು – ಶನಿಗಳು ಇಷ್ಟೊಂದು ಕಡಿಮೆ ಅಂತರ ಕಾಯ್ದುಕೊಂಡಿರುವುದು ಇದೇ ಮೊದಲು. ಕಕ್ಷೆಗಳಲ್ಲಿ ಸುತ್ತುವಾಗ ಗುರುಗ್ರಹ ಕೆಲವೊಮ್ಮೆ ಶನಿಯನ್ನು ಸಂಪೂರ್ಣ ಇಲ್ಲವೆ ಭಾಗಶಃ ಮರೆಮಾಡುತ್ತದೆ. ಭಾಗಶಃ ಮರೆ ಮಾಡುವುದನ್ನು ಟ್ರಾನ್ಸಿಟ್ (ಸಂಕ್ರಮಣ) ಎಂದೂ ಪೂರ್ಣ ಮರೆ ಮಾಡುವುದನ್ನು ಆಕಲ್ಟೇಶನ್ (ಗೋಪನ) ಎಂದೂ ಕರೆಯುತ್ತಾರೆ.

ಬೃಹತ್ ಗಾತ್ರದ ಗ್ರಹಗಳು ದೊಡ್ಡ ಪ್ರಮಾಣದ ಗುರುತ್ವಾಕರ್ಷಣಾ ಶಕ್ತಿಯನ್ನು ಹೊಂದಿದ್ದರೂ ಭೂಮಿ ಅವುಗಳಿಂದ ಭಾರೀ ದೂರವಿರುವುದರಿಂದ ಅವೆರಡರ ಮಹಾ ಸಂಗಮದಿಂದ ಭೂಮಿಯ ಮೇಲೆ ಯಾವ ವ್ಯತಿರಿಕ್ತ ಪರಿಣಾಮಗಳೂ ಸಂಭವಿ ಸುವುದಿಲ್ಲ. ಆದ್ದರಿಂದ ಸೂರ್ಯಾಸ್ತದ ನಂತರ ಧೈರ್ಯವಾಗಿ ಮನೆಯ ಮಾಳಿಗೆ ಇಲ್ಲವೆ ಬಾಲ್ಕನಿಯಲ್ಲಿ ನಿಂತು ನೈರುತ್ಯ ದಿಕ್ಕಿನಲ್ಲಿ ಬರಿ ಕಣ್ಣಿನಲ್ಲಿ ನೋಡಿದರೂ ಸಾಕು, ಅಪರೂಪದ ಗ್ರಹ ಸಂಯೋಗದ ದೃಶ್ಯಕ್ಕೆ ಸಾಕ್ಷಿಯಾಗುತ್ತೀರಿ.