ರತ್ನಸದೃಶ
ಗುರು ಚರಣ್ ದಾಸ್
ನೂರಾರು ಕೋಟಿಗಳ ಒಡೆಯನಾದರೂ ಶ್ರೀಮಂತನಲ್ಲದ ವಿಶಿಷ್ಟ ಉದ್ಯಮಿ ರತನ್ ಟಾಟಾ. ಅವರೊಬ್ಬ ಸಾದಾಸೀದಾ ಮನುಷ್ಯ. ಅವರಿಗೆ ತಾನೊಬ್ಬ ದೊಡ್ಡ ಉದ್ಯಮಿಯೆಂಬ ಅಹಂ ಇರಲಿಲ್ಲ. ಪ್ರಚಾರದಲ್ಲಿರಲು
ಅವರಿಗೆ ದಾಕ್ಷಿಣ್ಯವಾಗುತ್ತಿತ್ತು. ಆದರೆ ಅವರಿಗೆ ಬಿಲಿಯನೇರ್‌ನ ಹೃದಯವಿತ್ತು. ಸಮಾಜ ಸೇವೆಯಲ್ಲೇ ಯಶಸ್ಸಿನ ನಿಜವಾದ ಮಾನದಂಡ ಅಡಗಿದೆ ಎಂಬುದು ಅವರ ಬದುಕಿನ ಸಂದೇಶವಾಗಿತ್ತು.
ರತನ್ ಟಾಟಾ ನೂರಾರು ಬಿಲಿಯನ್ ಡಾಲರ್ ಸಂಪತ್ತಿನ ಉದ್ಯಮ ಸಾಮ್ರಾಜ್ಯಕ್ಕೆ ಅಧಿಪತಿಯಾಗಿದ್ದರು. ಆದರೆ ಅವರ ಹೆಸರು ಬಿಲಿಯನೇರ್‌ಗಳ ಪಟ್ಟಿಯಲ್ಲಿ ಎಂದೂ ಬರುತ್ತಿರಲಿಲ್ಲ. ಈ ವೈರುಧ್ಯಕ್ಕೊಂದು ಕಾರಣವಿದೆ.
ಟಾಟಾ ಗ್ರೂಪ್‌ನ ವಿನ್ಯಾಸವೇ ಬಹಳ ವಿಶಿಷ್ಟವಾದುದು. ಅಲ್ಲಿ ಸಂಪತ್ತು ವ್ಯಕ್ತಿಗಳ ಹೆಸರಿನಲ್ಲಿ ಇರುವುದಿಲ್ಲ, ಬದಲಿಗೆ ಚಾರಿಟಬಲ್ ಟ್ರಸ್ಟ್‌ನ ಹೆಸರಿನಲ್ಲಿರುತ್ತದೆ. ಟಾಟಾ ಸಮೂಹದ ಕಂಪನಿಗಳಿಗೆ ಬಂದ ಲಾಭವನ್ನು ಆ ಟ್ರಸ್ಟ್ ಸಾಮಾಜಿಕ ಕಾರ್ಯಗಳಿಗೆ ಖರ್ಚು ಮಾಡುತ್ತದೆ. ಶಿಕ್ಷಣ, ಆರೋಗ್ಯ, ಮಾನವ ಕಲ್ಯಾಣ ಹೀಗೆ ನಾನಾ ಕ್ಷೇತ್ರಗಳಲ್ಲಿ ಟಾಟಾ ಟ್ರಸ್ಟ್ ದೊಡ್ಡ ಪ್ರಮಾಣದಲ್ಲಿ ಕೆಲಸ ಮಾಡುತ್ತಿದೆ. ರತನ್ ಟಾಟಾ ಅವರ ಪ್ರಕರಣಕ್ಕೆ ಬಂದರೆ ಇನ್ನೊಂದು ವೈಶಿಷ್ಟ್ಯವಿದೆ.
ಅವರೊಬ್ಬ ಸಾದಾಸೀದಾ ಮನುಷ್ಯ. ಅವರಿಗೆ ತಾನೊಬ್ಬ ದೊಡ್ಡ ಉದ್ಯಮಿಯೆಂಬ ಅಹಂ ಇರಲಿಲ್ಲ. ಪ್ರಚಾರ ದಲ್ಲಿರಲು ಅವರಿಗೆ ದಾಕ್ಷಿಣ್ಯವಾಗುತ್ತಿತ್ತು. ಆದರೆ ಅವರಿಗೆ ಬಿಲಿಯನೇರ್ ನ ಹೃದಯವಿತ್ತು. ಸಮಾಜ ಸೇವೆಯಲ್ಲೇ ಯಶಸ್ಸಿನ ನಿಜವಾದ ಮಾನದಂಡ ಅಡಗಿದೆ ಎಂಬುದು ಅವರ ಬದುಕಿನ ಸಂದೇಶವಾಗಿತ್ತು. ಅವರು ಭಾರತೀಯ ಕಾರ್ಪೊರೇಟ್ ಜಗತ್ತಿನ ಸಾಕ್ಷಿಪ್ರಜ್ಞೆಯಾಗಿದ್ದರು ಎಂಬ ಕಾರಣಕ್ಕಾಗಿಯೇ ಅವರಿಗೆ ಜಗತ್ತಿನಾದ್ಯಂತ ದೊಡ್ಡ ಗೌರವವಿತ್ತು. ಅಕ್ಟೋಬರ್ ೯ರಂದು ರತನ್ ಟಾಟಾ ಇಹಲೋಕ ತ್ಯಜಿಸಿದಾಗ ಜಗತ್ತಿನ ಮೂಲೆ ಮೂಲೆಯಿಂದ ಶೋಕ ಸಂದೇಶಗಳು ಹರಿದುಬಂದಿದ್ದಕ್ಕೆ ಇದೇ ಕಾರಣ.
1980ರ ದಶಕದಲ್ಲಿ ಆಹ್ವಾನದ ಮೇರೆಗೆ ನಾನು ಟಾಟಾ ಗ್ರೂಪ್‌ನ ಒಂದು ಕಂಪನಿಯ ಆಡಳಿತ ಮಂಡಳಿಯ
ಸದಸ್ಯನಾಗಿ ಕೆಲಸ ಮಾಡಿದ್ದೆ. ಒಂದು ಬೆಳಗ್ಗೆ ಬಾಂಬೆ ಹೌಸ್ ನಲ್ಲಿ ನಡೆದಿದ್ದ ಸಭೆಗೆ ಚೇರ್ಮನ್ ಫ್ರೆಡ್ಡಿ ಮೆಹ್ತಾ ಅವರು ‘ರತನ್’ ಎಂದು ತಾವು ಪ್ರೀತಿಯಿಂದ ಕರೆಯುತ್ತಿದ್ದ ಯುವಕ ನನ್ನು ಕರೆದುಕೊಂಡು ಬಂದಿದ್ದರು. ನನಗೆ ಆತ ಅಪರಿಚಿತ ವ್ಯಕ್ತಿ. ಆದರೆ ನೋಡಲು ಸುರದ್ರೂಪಿಯಾಗಿದ್ದ ಮತ್ತು ಮುಜುಗರದ ಮುದ್ದೆಯಾಗಿದ್ದ ಕಾರಣಕ್ಕೆ ಇಂದಿಗೂ ಆ ಮುಖ ನೆನಪಿದೆ. ಅವರು ‘ಟಾಟಾ’ ಎಂಬ ದೊಡ್ಡ ವ್ಯಕ್ತಿ ಎಂದು ಅಲ್ಲಿದ್ದ ಯಾರೂ ಹೇಳಲಿಲ್ಲ. ಸಭೆ ಶುರುವಾಗಿ ಹದಿನೈದು ನಿಮಿಷ ಕಳೆದಿರಬಹುದು. ನಾಯಿಯೊಂದು ಬೋರ್ಡ್ ಮೀಟಿಂಗಿನ ಕೊಠಡಿಗೆ ಬಂದು ರತನ್ ಕಾಲಿನ ಬಳಿ ಕುಳಿತಿತು.
ನನ್ನನ್ನು ಬಿಟ್ಟು ಸಭೆಯಲ್ಲಿದ್ದ ಯಾರಿಗೂ ಅದು ವಿಶೇಷವೆನ್ನಿಸಲಿಲ್ಲ. ನಂತರ ನನಗೆ ತಿಳಿದಿದ್ದೇನೆಂದರೆ, ಅದು ಬಾಂಬೆ ಹೌಸ್ ಬಳಿ ಕೆಲ ದಿನಗಳ ಹಿಂದೆ ರತನ್ ರಕ್ಷಿಸಿ ಕರೆದುಕೊಂಡು ಬಂದು ಆಶ್ರಯ ನೀಡಿದ್ದ ಬೀದಿನಾಯಿ ಯಾಗಿತ್ತು ಮತ್ತು ಅಂಥ ಇನ್ನೂ ಅನೇಕ ನಾಯಿಗಳು ಅವರ ಆಶ್ರಯದಲ್ಲಿದ್ದವು. ನಂತರ ನಾನು ರತನ್ ಬಗ್ಗೆ ಕೇಳಿದ್ದು 1991ರಲ್ಲಿ. ಆಗಷ್ಟೇ ಅವರು ಜೆ.ಆರ್.ಡಿ. ಟಾಟಾರಿಂದ ಟಾಟಾ ಸಮೂಹದ ಮುಖ್ಯಸ್ಥನ ಸ್ಥಾನವನ್ನು ವಹಿಸಿಕೊಂಡಿದ್ದರು. ಇದು ಸ್ವಜನಪಕ್ಷಪಾತ ಎಂದು ನಾನು ಟೀಕಿಸಿದ್ದೆ. ಇಂಗ್ಲಿಷ್‌ನಲ್ಲಿ ಅದಕ್ಕೆ ನೆಪೋಟಿಸಂ ಎನ್ನುತ್ತಾರೆ. ‘ನೆಪೋಟ್’ ಎಂಬ ಪದ ಲ್ಯಾಟಿನ್ ಮೂಲದಿಂದ ಬಂದಿದೆ. ಇಂಗ್ಲಿಷ್‌ನಲ್ಲಿ ಅದರರ್ಥ ನೆವ್ಯೂ. ಅಂದರೆ ಸಂಬಂಧಿಕ. ಸಂಸ್ಕೃತದ ‘ನಪಾತ್’ಗೆ ಇದರ ಜತೆ ನಂಟಿದೆ. ರತನ್ ಟಾಟಾ ಜೆ.ಆರ್.ಡಿ. ಟಾಟಾಗೆ ಸಂಬಂಧಿ ಯಾಗಿದ್ದರು. ಹೀಗಾಗಿ ನನ್ನ ಪ್ರತಿಕ್ರಿಯೆ ಸಹಜವಾಗಿತ್ತು.
ಏಕೆಂದರೆ ಅಲ್ಲಿಯವರೆಗೆ ರತನ್ ಮಾಡಿದ ಸಾಧನೆ ಅಷ್ಟಕ್ಕಷ್ಟೆ ಆಗಿತ್ತು. ನ್ಯಾಷನಲ್ ರೇಡಿಯೋ ಆಂಡ್ ಇಲೆಕ್ಟ್ರಾನಿಕ್ಸ್ (ನೆಲ್ಕೋ) ಎಂಬ ವಿಫಲ ಉದ್ದಿಮೆಯನ್ನು ಅವರು ನಡೆಸುತ್ತಿ ದ್ದರು. ಅವರು ಉದ್ಯಮ ಜಗತ್ತಿಗೆ ಬಂದಿದ್ದೇ ಆಕಸ್ಮಿಕವಾಗಿತ್ತು. ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ ರತನ್ ಆರ್ಕಿಟೆಕ್ಚರ್ ಓದಿದ್ದರು. ಬಳಿಕ ಆರ್ಕಿಟೆಕ್ಟ್ ಆಗಿ ಕೆಲಸ ಮಾಡುತ್ತಿದ್ದರು. ಅಮೆರಿಕದಲ್ಲೇ ಉಳಿದುಕೊಳ್ಳುವುದಕ್ಕೂ ಬಯಸಿದ್ದರು. ಆದರೆ ಅವರನ್ನು ಬೆಳೆಸಿದ ಅಜ್ಜಿ ತನಗೆ ಹುಷಾರಿಲ್ಲದಾಗ ರತನ್‌ರನ್ನು ಭಾರತಕ್ಕೆ ಕರೆಸಿಕೊಂಡಿದ್ದರು. ವಿಧಿಯು ಸರಿಯಾದ ಸಮಯಕ್ಕೆ ಸರಿಯಾದ ಜಾಗದಲ್ಲೇ ರತನ್ ಟಾಟಾರನ್ನು ತಂದು ಕೂರಿಸಿತ್ತು. ಪ್ರಧಾನಿ ನರಸಿಂಹರಾವ್ ಆಗಷ್ಟೇ ಭಾರತದ ಆರ್ಥಿಕತೆಯನ್ನು ಜಗತ್ತಿಗೆ ತೆರೆದಿದ್ದರು. ಭಾರತೀಯ ಉದ್ದಿಮೆಗಳು ಎರಡು ತಲೆಮಾರುಗಳ ಲೈಸೆನ್ಸ್‌ರಾಜ್, ಕೋಟಾರಾಜ್ ಹಾಗೂ ಇನ್‌ಸ್ಪೆಕ್ಟರ್ ರಾಜ್ ಸಂಕೋಲೆಯಿಂದ ಬಿಡಿಸಿಕೊಂಡು ಸ್ವತಂತ್ರವಾಗಿದ್ದವು. ಉದ್ಯಮಿಗಳಿಗೆ ಅಪಾರ ಅವಕಾಶಗಳು ಸೃಷ್ಟಿಯಾಗಿದ್ದವು.
ಆದರೆ ಅವುಗಳನ್ನು ಬಾಚಿಕೊಳ್ಳುವುದಕ್ಕೂ ಮೊದಲು ರತನ್ ಟಾಟಾ ತನ್ನ ಮನೆಯನ್ನು ಸರಿಪಡಿಸಿಕೊಳ್ಳಬೇಕಿತ್ತು. ಜೆ.ಆರ್.ಡಿ ಟಾಟಾ ಬಿಟ್ಟುಹೋಗಿದ್ದ ಉದ್ಯಮ ಸಾಮ್ರಾಜ್ಯ ಅಲುಗಾಡುತ್ತಿತ್ತು. ಟಾಟಾ ಸಮೂಹದ ಕಂಪನಿಗಳು ಚೆಲ್ಲಾಪಿಲ್ಲಿಯಾಗುವ ಭೀತಿಯಲ್ಲಿದ್ದವು. ಏಕೆಂದರೆ ಸಮೂಹದ ಮೂರು ಬೃಹತ್ ಕಂಪನಿಗಳಾದ ಟಾಟಾ ಸ್ಟೀಲ್, ಟಾಟಾ ಕೆಮಿಕಲ್ಸ್ ಮತ್ತು ಇಂಡಿಯನ್ ಹೋಟೆಲ್ಸ್‌ಗಳನ್ನು ಕ್ರಮವಾಗಿ ರುಸ್ಸಿ ಮೋದಿ, ದರ್ಬಾರಿ ಸೇಠ್ ಹಾಗೂ ಅಜಿತ್ ಕೇರ್ಕರ್ ಎಂಬ ಮೂವರು ಉದ್ಯಮಪತಿಗಳು ತಮ್ಮಿಷ್ಟಕ್ಕೆ ತಕ್ಕಂತೆ ನಡೆಸುತ್ತಿದ್ದರು.
ಈ ಮೂವರೂ ಬಹಳ ದಕ್ಷ ಆಡಳಿತಗಾರರು ಎಂಬುದು ನಿಜ. ಆದರೆ ಇವರು ಯಾವುದಕ್ಕೂ ಕೇರ್ ಮಾಡುತ್ತಿರ ಲಿಲ್ಲ. ಬದುಕಿಗಿಂತ ತಾವೇ ದೊಡ್ಡವರು ಎಂಬಂತೆ ಮೆರೆಯುತ್ತಿದ್ದರು. ಯಾರಿಗೂ ಹೆದರುತ್ತಿರಲಿಲ್ಲ. ಈ ಸತ್ರಪರನ್ನು ನೋಡಿ ಸ್ವತಃ ಜೆ.ಆರ್.ಡಿ. ಟಾಟಾ ಕಂಗಾಲಾಗಿದ್ದರು. ಹೀಗೆ ಅವರು ಬಿಟ್ಟುಹೋದ ಟಾಟಾ ಗ್ರೂಪ್‌ನಲ್ಲಿ ಮೂವರು ಅಸಾಧಾರಣ ವ್ಯಕ್ತಿಗಳನ್ನು ದಾರಿಗೆ ತರುವುದು ರತನ್‌ಗಿದ್ದ ಮೊದಲ ಸವಾಲಾಗಿತ್ತು. ರತನ್ ಸೋಲುವ ಸಾಧ್ಯತೆ ಗಳೇ ಹೆಚ್ಚಿದ್ದವು. ಆದರೆ ತನ್ನದೇ ಶಸ್ತ್ರಾಸ್ತ್ರಗಳನ್ನು ಹುಡುಕಿಕೊಂಡು ಯುದ್ಧ ಆರಂಭಿಸಿದ ರತನ್ ಟಾಟಾ ಗೆದ್ದುಬಿಟ್ಟರು.
ಟಾಟಾ ಗ್ರೂಪ್‌ನಲ್ಲಿ ಬಹಳ ಜನರಿಗೆ ಗೊತ್ತೇ ಇಲ್ಲದಿದ್ದ ನಿವೃತ್ತಿಯ ವಯಸ್ಸಿನ ನಿಯಮವನ್ನು ಹುಡುಕಿ ತೆಗೆದ ಅವರು, ಆ ಮೂವರನ್ನೂ ಬಹಳ ಸುಲಭವಾಗಿ ಮನೆಗೆ ಕಳುಹಿಸಿದರು. ಆಗಲೇ ಜಗತ್ತಿಗೆ ರತನ್ ಟಾಟಾ ಬಳಿ
ಮೆದುವಾದ ವೆಲ್ವೆಟ್ ಹ್ಯಾಂಡ್‌ಗ್ಲೌಸಿನೊಳಗೆ ಕಬ್ಬಿಣದ ಮುಷ್ಟಿಯಿದೆ ಎಂಬುದು ಗೊತ್ತಾಗಿದ್ದು. ರತನ್ ಕೈಗೊಂಡ ಆ ನಿರ್ಧಾರದಿಂದ ಟಾಟಾ ಸಮೂಹದ ಭವಿಷ್ಯವೇ ಬದಲಾಯಿತು. ಎಲ್ಲಾ ಕಂಪನಿಗಳ ನಡುವೆ ಒಗ್ಗಟ್ಟು ಮೂಡಿತು. ಇದರಲ್ಲಿ ಭಾರತೀಯ ಕಾರ್ಪೊರೇಟ್ ಜಗತ್ತಿಗೊಂದು ಒಳ್ಳೆಯ ಪಾಠವಿದೆ. ಹೇಗೆ ಪ್ರಜಾಪ್ರಭುತ್ವದಲ್ಲಿ ಕಾನೂನಿಗಿಂತ ಯಾರೂ ಮೇಲೆ ಅಲ್ಲವೋ ಹಾಗೆಯೇ ಉದ್ದಿಮೆಯಲ್ಲಿ ಯಾರೂ ‘ಕಂಪನಿಗಿಂತ ದೊಡ್ಡವರಲ್ಲ’. ಪ್ರಜಾಪ್ರಭುತ್ವವನ್ನೂ, ಕಂಪನಿ ಗಳನ್ನೂ ‘ಸಾಮಾನ್ಯ’ ವ್ಯಕ್ತಿಗಳು ನಡೆಸುವುದೇ ಒಳ್ಳೆಯದು.
ನಂತರದ್ದು ರತನ್ ಟಾಟಾ ಎಂಬ ದೂರದೃಷ್ಟಿಯ ಉದ್ಯಮಿಯ ಕತೆ. ಅವರು ಟಾಟಾ ಸಮೂಹವನ್ನು ಭಾರತ ದಾಚೆಗೂ ವಿಸ್ತರಿಸಿ ಜಾಗತಿಕ ಹೆಸರನ್ನಾಗಿ ರೂಪಾಂತರಗೊಳಿಸಿದರು. ಮೊದಲಿಗೆ ಬ್ರಿಟನ್ನಿನ ಟೆಟ್ಲಿ ಟೀ ಕಂಪನಿ ಯನ್ನು ಖರೀದಿಸಿದರು. ನಂತರ ಬ್ರಿಟನ್ನಿನ ಉಕ್ಕು ಉತ್ಪಾದಕ ಕಂಪನಿ ಕೋರಸ್ ಖರೀದಿಸಿದರು. ಅದೇ ದೇಶದ ಜಾಗ್ವಾರ್ ಲ್ಯಾಂಡ್ ರೋವರ್ ಬ್ರ್ಯಾಂಡ್‌ಗಳನ್ನು ಫೋರ್ಡ್ ಮೋಟರ್ ಕಂಪನಿಯಿಂದ ಖರೀದಿಸಿದರು.
ತನ್ಮೂಲಕ ಬ್ರಿಟನ್ನಿನಲ್ಲಿ ಅತಿದೊಡ್ಡ ಬಂಡವಾಳ ಹೂಡಿಕೆದಾರನಾದರು. ಕೋರಸ್ ಕಂಪನಿಯನ್ನು ಖರೀದಿಸಿದ
ನಿರ್ಧಾರವು ಮುಂದೆ ಜಾಗತಿಕ ಆರ್ಥಿಕ ಕುಸಿತದ ಸಮಯ ದಲ್ಲಿ ಟಾಟಾಗೆ ದೊಡ್ಡ ತಲೆನೋವಾಯಿತು ಎಂಬುದು ಬೇರೆ ವಿಷಯ. ಭಾರತದಲ್ಲಿ ಸಿಮೆಂಟ್, ಜವಳಿ, ಕಾಸ್ಮೆಟಿಕ್ಸ್, ಫಾರ್ಮಾಸ್ಯುಟಿಕಲ್ಸ್‌ಗೆ ಸಂಬಂಧಿಸಿದ ಅನೇಕ ಕಂಪನಿ ಗಳನ್ನು ಮಾರಾಟ ಮಾಡಿದ ರತನ್ ಟಾಟಾ, ಬೇರೆ ಬೇರೆ ಹೊಸ ಕ್ಷೇತ್ರಗಳಿಗೆ ಕಾಲಿರಿಸುವ ಸಾಹಸಕ್ಕೆ ಮುಂದಾದರು. ಅದರಂತೆ ಟೆಲಿಕಾಂ, ರೀಟೇಲ್ ಹಾಗೂ ಹಣಕಾಸು ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡಿದರು.
ಅದರ ಬೆನ್ನಲ್ಲೇ ಮೊದಲ ಸ್ವದೇಶಿ ಕಾರು ‘ಇಂಡಿಕಾ’ ತಯಾರಿಸಿದರು. ನಂತರ ದೇಶದ ಅತ್ಯಂತ ಸೋವಿ ಕಾರು ‘ನ್ಯಾನೋ’ ಬಿಡುಗಡೆ ಮಾಡಿದರು. ಉತ್ಪಾದನೆ ಹಾಗೂ ಮಾರ್ಕೆಟಿಂಗ್ ವೈಫಲ್ಯದಿಂದ ನ್ಯಾನೋ ಫೇಲಾಯಿತು. 1 ಲಕ್ಷ ರುಪಾಯಿಗೆ ಸಿಗುವ ಕಾರು ಜಗತ್ತಿನ ಅತ್ಯಂತ ಸೋವಿ ಕಾರೇನೋ ಆಗಿತ್ತು. ಆದರೆ, ಅದನ್ನು ‘ಚೀಪ್ ಕಾರು’ ಎಂಬಂತೆ ಜನರು ನೋಡತೊಡಗಿದರು. ಹೀಗಾಗಿ ನಿರೀಕ್ಷೆಯಂತೆ ಬೇಡಿಕೆ ಬರಲಿಲ್ಲ. 2012ರಲ್ಲಿ ಟಾಟಾ ಗ್ರೂಪ್‌ನ ಮುಖ್ಯಸ್ಥನ ಸ್ಥಾನದಿಂದ ರತನ್ ಕೆಳಗಿಳಿದಾಗ ಅದರ ವ್ಯವಹಾರ 25 ಪಟ್ಟು ಬೆಳೆದಿತ್ತು. 1991ರಲ್ಲಿ ರತನ್ ಆ ಹುದ್ದೆ ವಹಿಸಿಕೊಂಡಾಗ ಟಾಟಾ ಸಮೂಹದ ವ್ಯವಹಾರ 4 ಬಿಲಿಯನ್ ಡಾಲರ್ ಇತ್ತು.
2012ರಲ್ಲಿ ಅದು 100 ಬಿಲಿಯನ್ ಡಾಲರ್‌ಗೆ ಏರಿತ್ತು. ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಕಂಪನಿ ಏಷ್ಯಾದ ಅತಿ ದೊಡ್ಡ ಐಟಿ ಕಂಪನಿಯಾಗಿ ಹೊರಹೊಮ್ಮಿತ್ತು. ಟಾಟಾ ಸಮೂಹದ ಶೇ.90ರಷ್ಟು ಲಾಭ ಅದೊಂದೇ ಕಂಪನಿ ಯಿಂದ ಬರುತ್ತಿತ್ತು. ಆ ಕಂಪನಿಯಿಂದ ಪ್ರತಿ ವರ್ಷ 4 ಬಿಲಿಯನ್ ಡಾಲರ್ ಡಿವಿಡೆಂಡ್ ಸಿಗುತ್ತಿತ್ತು. ಹೀಗಾಗಿ ಅದು ಟಾಟಾ ಸಮೂಹದ ಚಿನ್ನದ ಮೊಟ್ಟೆಯಿಡುವ ಕೋಳಿಯೆಂಬ ಖ್ಯಾತಿ ಗಳಿಸಿತು. ಆದರೆ ರತನ್ ಟಾಟಾ ಅವಧಿಯು ಕೋರ್ಟ್ ಸಮರದ ಮೂಲಕ ಅಂತ್ಯವಾಯಿತು ಎಂಬುದು ಬೇಸರದ ಸಂಗತಿ.
ಟಾಟಾ ಸಮೂಹದಲ್ಲಿ ಅತಿದೊಡ್ಡ ಷೇರುದಾರನಾಗಿದ್ದ ಕುಟುಂಬದ ಸೈರಸ್ ಮಿಸಿ ಅವರು ಟಾಟಾಗೆ ಉತ್ತರಾಧಿ ಕಾರಿಯಾದರು. ಅದೇಕೋ ಸರಿಹೋಗಲಿಲ್ಲ. ಹೀಗಾಗಿ ಮಿಸ್ತ್ರಿಯನ್ನು ರತನ್ ಟಾಟಾ ಹೊರಗೆ ಹಾಕಿದರು. ಆದರೆ ಮಿಸಿ ಸುಮ್ಮನೆ ಹೋಗಲಿಲ್ಲ. ಟಾಟಾ ಗ್ರೂಪ್ ಮೇಲೆ ಕೇಸು ಹಾಕಿದರು. ಟಾಟಾ ಸಮೂಹದಲ್ಲಿ ಸ್ವಜನಪಕ್ಷಪಾತ ನಡೆಯುತ್ತದೆ, ಕಡಿಮೆ ಷೇರು ಹೊಂದಿರುವವರಿಗೆ ತಾರತಮ್ಯ ಮಾಡಲಾಗುತ್ತದೆ, ಭ್ರಷ್ಟಾಚಾರವನ್ನು ಕಡೆಗಣಿಸ ಲಾಗುತ್ತದೆ ಎಂದೆಲ್ಲಾ ಅವರು ದೂರಿದರು. ಆರಂಭದಲ್ಲಿ ಕೋರ್ಟುಗಳು ಮಿಸ್ತ್ರಿ ಪರವಾಗಿಯೇ ಆದೇಶಗಳನ್ನು ನೀಡಿದವು. ಅಂತಿಮವಾಗಿ, ಮಿಸ್ತ್ರಿಯನ್ನು ಹೊರಹಾಕಿದ್ದು ಸರಿಯಾಗಿದೆ ಎಂಬ ತೀರ್ಪು ಸುಪ್ರೀಂಕೋರ್ಟ್‌ನಲ್ಲಿ ಬಂದಿತು.
ರತನ್ ಟಾಟಾ ಅವರ ಬದುಕಿನಿಂದ ಕಲಿಯಬೇಕಾದ ಕೊನೆಯ ಪಾಠ ಉತ್ತರಾಧಿಕಾರಕ್ಕೆ ಸಂಬಂಧಿಸಿದ್ದು. ೨೦೧೭ರಲ್ಲಿ ಅತ್ಯಂತ ದಕ್ಷ ಉದ್ಯಮಿ ಮತ್ತು ಆಡಳಿತಗಾರ ಎನ್. ಚಂದ್ರಶೇಖರ್ ಅವರನ್ನು ಟಾಟಾ ಸಮೂಹದ ಸಿಇಒ ಹುದ್ದೆಗೆ ರತನ್ ನೇಮಿಸಿದರು. ಆದರೆ, ಟಾಟಾ ಟ್ರಸ್ಟ್‌ಗೆ ಮುಖ್ಯಸ್ಥನಾಗಿ ತಾವೇ ಉಳಿದುಕೊಂಡರು. ಟಾಟಾ ಟ್ರಸ್ಟ್ ಎಂಬುದು ಟಾಟಾ ಸಮೂಹದ ಎಲ್ಲಾ ಕಂಪನಿಗಳಿಗೆ ಮುಖ್ಯಸ್ಥನಂತೆ. ಆದರೆ, ವ್ಯವಹಾರದಲ್ಲಿ ಅದು ನೇರವಾಗಿ ತಲೆಹಾಕುವುದಿಲ್ಲ. ಹೀಗೆ ಟಾಟಾ ಕುಟುಂಬವನ್ನು ಟಾಟಾ ಗ್ರೂಪ್‌ನ ಕಂಪನಿಗಳನ್ನು ನಡೆಸುವ ಜವಾಬ್ದಾರಿಯಿಂದ ರತನ್ ಹೊರಗೆ ತಂದರು. ಭಾರತೀಯ ಕಾರ್ಪೊರೇಟ್ ಜಗತ್ತಿಗೆ ಇದು ಬಹಳ ಮುಖ್ಯವಾದ
ಪಾಠ. ಏಕೆಂದರೆ ಇಲ್ಲಿ ಯೋಗ್ಯತೆಯಿಲ್ಲದ ಅನೇಕ ಮಕ್ಕಳು ಅಪ್ಪನಿಂದ ಕಂಪನಿಯ ಚುಕ್ಕಾಣಿ ಪಡೆದು ಕೊಳ್ಳುತ್ತಾರೆ.
ಹೀಗಾಗಿ ಭಾರತದ ಸಾಕಷ್ಟು ಕಂಪನಿಗಳು ಇಂದು ಕೌಟುಂಬಿಕ ವ್ಯಾಜ್ಯಗಳಲ್ಲಿ ಮುಳುಗಿವೆ. ಕಂಪನಿಗಳನ್ನು ಕಟ್ಟುವವರು ತಮ್ಮ ಕುಟುಂಬ ಕೂಡ ಒಂದು ದಿನ ಕಂಪನಿಯ ಚುಕ್ಕಾಣಿಯನ್ನು ಬಿಡಬೇಕು ಎಂಬುದನ್ನು ಮನಗಂಡರೆ ಮಾತ್ರ ಭಾರತೀಯ ಉದ್ದಿಮೆಗಳು ಪ್ರೌಢಾವಸ್ಥೆಯನ್ನು ತಲುಪುತ್ತವೆ. ನಾವು ಕಟ್ಟಿದ ಕಂಪನಿಯ ದೈನಂದಿನ ವ್ಯವಹಾರಗಳನ್ನು ನೋಡಿಕೊಳ್ಳಲು ಒಂದಲ್ಲಾ ಒಂದು ದಿನ ಹೊರಗಿನವರನ್ನು ತರಬೇಕಾಗುತ್ತದೆ
ಎಂಬುದಕ್ಕೆ ಉದ್ಯಮಿಗಳು ಮಾನಸಿಕವಾಗಿ ಮೊದಲೇ ಸಿದ್ಧರಾಗಿರಬೇಕು.
ಮಗ ದಕ್ಷನೇ ಆಗಿರಬಹುದು, ಆದರೆ ಆತ ಆ ಕೆಲಸಕ್ಕೆ ಜಗತ್ತಿನಲ್ಲೇ ಬೆಸ್ಟ್ ಆಗಿರಬೇಕಿಲ್ಲ. ಇದು ಸಾಮಾನ್ಯ ಜ್ಞಾನ. ಕುಟುಂಬದ ಸದಸ್ಯ ರಿಸ್ಕ್ ತೆಗೆದುಕೊಳ್ಳುವಷ್ಟು ಧೈರ್ಯವಾಗಿ ಪ್ರೊಫೆಷನಲ್ ಮ್ಯಾನೇಜರ್ ರಿಸ್ಕ್ ತೆಗೆದುಕೊಳ್ಳಲಾರ ಎಂಬುದು ನಿಜವಲ್ಲ. ಕುಟುಂಬದ ಹಿಡಿತದಲ್ಲಿದ್ದ ಕಂಪನಿಯೊಂದು ಹೊರಗಿನ ಸಿಇಒ ಕೈಯಲ್ಲಿ ಫೇಲಾಯಿತು ಅಂದರೆ ನೀವು ಸರಿಯಾದ ಸಿಇಒ ಆಯ್ಕೆ ಮಾಡಿಲ್ಲ ಎಂದಷ್ಟೇ ಅರ್ಥ.
(ಲೇಖಕರು ಪ್ರಾಕ್ಟರ್ ಆಂಡ್ ಗ್ಯಾಂಬಲ್ ಕಂಪನಿಯ ಮಾಜಿ ವ್ಯವಸ್ಥಾಪಕ ನಿರ್ದೇಶಕರು)
ಇದನ್ನೂ ಓದಿ: Ratan Tata: ಸಿರಿವಂತರಾಗಿದ್ದರೂ ರತನ್ ಟಾಟಾ ಧರಿಸುತ್ತಿದ್ದ ವಾಚ್ ಯಾವುದು ನೋಡಿ!