Monday, 14th October 2024

ನೇರ – ದೂರ ಶಿಕ್ಷಣ ಮತ್ತು ಶಿಕ್ಷಣದಿಂದ ದೂರ

ಅಭಿವ್ಯಕ್ತಿ

ಡಾ.ಎಸ್.ಶಿಶುಪಾಲ

ಗುರುಕುಲ ಶಿಕ್ಷಣ ಭಾರತದ ಮೂಲ ಪದ್ಧತಿಯಾಗಿತ್ತು. ವಿದ್ಯಾರ್ಜನೆಯ ಜೊತೆಗೆ ಗುರುವಿನ ಆಚಾರ, ವಿಚಾರ, ಜೀವನ ಪದ್ಧತಿ,
ಭಾಷೆ, ಪಾಂಡಿತ್ಯ, ಚಿಂತನೆ, ಜೀವನಾನುಭವದ ಸಾರ, ಪ್ರಾಯೋಗಿಕ ಕಲಿಕೆ, ನಿತ್ಯ ಜೀವನಕ್ಕೆ ಬೇಕಾದ ಜ್ಞಾನ ಮತ್ತು ದೈನಂದಿನ ಚಿಂತನ-ಮಂಥನಗಳು ಶಿಕ್ಷಣದ ಭಾಗವಾಗಿದ್ದವು.

ಮನೆಯಿಂದ ದೂರವಾಗಿ ಪ್ರಕೃತಿಯ ನಡುವೆ ಗುರುವಿಗೆ ವಿಧೇಯರಾಗಿ, ಗುರುಪತ್ನಿ ಯೆಂಬ ತಾಯಿಯಿಂದ ಮಮಕಾರ ಬೆರೆತ ಆಹಾರವುಂಡು, ಗುರುವಿನ ಹಿರಿಯ ಶಿಷ್ಯ ವೃಂದದ ಜತೆ ಬೆರೆತು ಅವರಿಂದ ನಡೆ-ನುಡಿ, ಓರೆ-ಕೋರೆಗಳ ವಿಮರ್ಶೆಗಳು ಒಬ್ಬ ಶಿಷ್ಯನ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದ್ದವು.

ವೇದಶಾಲೆಗಳಲ್ಲಿ ಬಹಳ ಕ್ಲಿಷ್ಟಕರವಾದ ಶ್ಲೋಕಗಳನ್ನು ಸುಶ್ರಾವ್ಯವಾಗಿ ನಿರ್ದಿಷ್ಟ ಸ್ವರದಲ್ಲಿ ಗುಂಪಿನಲ್ಲಿ ಪಠಿಸುತ್ತಾ ಮನನ ಮಾಡಿಕೊಂಡು, ಅರ್ಥವನ್ನೂ ಮಾಡಿ ಕೊಂಡು ಮುಂದಿನ ಪೀಳಿಗೆಯ ಶಿಕ್ಷಣಾರ್ಥಿಗಳಿಗೆ ತಲೆತಲಾಂತರದಿಂದ ಬಂದಂತಹ ವಿದ್ಯೆಯಾಗಿತ್ತು. ಜ್ಞಾನದ ಹಂಚಿಕೆ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ನಡೆಯುತ್ತಿತ್ತು.

ವಿಶ್ವ ವಿಖ್ಯಾತ ಮತ್ತು ಭಾರತದ ಐತಿಹಾಸಿಕ ನಳಂದ ಮತ್ತು ತಕ್ಷಶಿಲಾ ವಿಶ್ವವಿದ್ಯಾಲಯ ಗಳಲ್ಲಿ ತಮ್ಮ ಛಾತೃಗಳಿಗೆ ಪೂರಕವಾದ ವಾತವರಣ ಕಲ್ಪಿಸಿದ್ದರಿಂದಲೇ ಭಾರತದಲ್ಲಿ ಜ್ಞಾನದ ಗುಣಮಟ್ಟ ಅತ್ಯುತ್ತಮವಾಗಿದ್ದಿತು. ಕಲಿಕೆಯೆಂಬುದು ನಿರಂತರವೆಂಬ ಸತ್ಯವನ್ನು ಕಂಡುಕೊಂಡವರಿಂದ ಜ್ಞಾನವೆಂಬ ತೇರನ್ನು ಜೀವನದುದ್ದಕ್ಕೂ ಎಳೆಯುವ ಪರಿಯನ್ನು ಕಲಿಸಲಾಗುತ್ತಿತ್ತು. ಪರಿಪೂರ್ಣ ಶಿಕ್ಷಣದ ಸಮಗ್ರ ರೂಪು-ರೇಶೆಗಳು ಈ ರೀತಿಯ ಗುರುಕುಲ ಪದ್ಧತಿಯಲ್ಲಿದ್ದಿತ್ತು ಎಂಬುದು ಸತ್ಯ.

ಜ್ಞಾನಾರ್ಜನೆಯಲ್ಲಿ ಯಾವುದೇ ಕ್ಷಿಪ್ರ ವಿಧಾನ ಅಥವ ಅಡ್ಡದಾರಿಯಿಲ್ಲವೆಂಬುದು ಸಹ ಸಾರ್ವಕಾಲಿಕ ಸತ್ಯ. ಬ್ರಿಟಿಷರು ನಮ್ಮನ್ನಾಳಿದ ನಂತರ ಶಾಲೆ, ಕಾಲೇಜುಗಳಿಗೆ ವಿದ್ಯಾರ್ಥಿಗಳು ನಿಗದಿತ ಸಮಯಕ್ಕೆ ಬರುವುದು, ಅಧ್ಯಾಪಕರು ಉಪನ್ಯಾಸ ನೀಡುವುದು, ನಿಗದಿತ ಪಠ್ಯ ಪುಸ್ತಕಗಳು, ಮನೆಯಲ್ಲಿ ಕಲಿಕೆ ಮುಂದುವರೆಯಲು ಮನೆಕೆಲಸಗಳು, ಸ್ಲೇಟು-ಬಳಪದಿಂದ ಪ್ರಾರಂಭಿಸಿ ಪುಸ್ತಕ ಪೆನ್ನಿನಿಂದ ಬರೆಯುವ ತನಕ ಅಕ್ಷರಾಭ್ಯಾಸ, ದಿನ ನಿತ್ಯ ಪಠಣ, ಸ್ಮರಣ, ಓದುವಿಕೆ ಮತ್ತು ಪುನರ್ಮನನಗಳು
ವಿದ್ಯಾರ್ಥಿಯನ್ನು ಓದಿನ ಕಡೆ ಮಗ್ನನಾಗಿರುವಂತೆ ಮಾಡಿದವು.

ಹಾಗೆಯೇ ಓದಿದವನ ಅರ್ಹತೆಯನ್ನು ಪರೀಕ್ಷಿಸುವ ಸಲುವಾಗಿ ಪರೀಕ್ಷೆ ಮತ್ತು ತೇರ್ಗಡೆ ಎಂಬ ವಿಧಾನಗಳು ಬಳಕೆಗೆ ಬಂದವು. ನಿಗದಿತ ಅರ್ಹತೆ ಇಲ್ಲದಿದ್ದವರಿಗೆ ಅದೇ ತರಗತಿಯಲ್ಲಿ ಪುನಾರವರ್ತನೆಯಿಂದ ಮತ್ತೆ ಪುನರ್ಮನನ ತರಗತಿಗಳಿಂದ ಅವನಿಗೆ ಓದುತ್ತಿರುವ ವಿಷಯದ ಕನಿಷ್ಟ ಜ್ಞಾನವನ್ನು ಪಡೆದ ನಂತರವಷ್ಟೇ ಮುಂದಿನ ತರಗತಿಗೆ ಬಡ್ತಿ ಎಂಬ ವಿಚಾರಗಳು ಜನಜನಿತ ವಾಗಿ ಎಲ್ಲಾ ವಿದ್ಯಾರ್ಥಿಗಳು ಮತ್ತು ಜನಸಾಮಾನ್ಯರು ಒಪ್ಪುವ ವಿಧಾನ ಸೃಷ್ಟಿಯಾಯಿತು.

ದೇಶದ ಶಿಕ್ಷಣದ ಸ್ಥಿತಿಗತಿ ಬಗ್ಗೆ 2017-18ರಲ್ಲಿ ರಾಷ್ಟ್ರೀಯ ಸಾಂಖ್ಯಿಕ ಸಂಘಟನೆ (Indian Statistical Institute) ಮಾಡಿರುವ ಸಮೀಕ್ಷೆಯ ಪ್ರಕಾರ ದೇಶದಲ್ಲಿ ಅಂತರ್ಜಾಲ (Internet) ಸೌಲಭ್ಯವಿರುವ ಕುಟುಂಬಗಳ ಸಂಖ್ಯೆ ನಗರದಲ್ಲಿ ಶೇ.42 ಇದ್ದು ಗ್ರಾಮೀಣ ಪ್ರದೇಶಗಳಲ್ಲಿ ಶೇ. 14.9 ಇದೆ. ವೈಯುಕ್ತಿಕ ಕಂಪ್ಯೂಟರ್ ಹೊಂದಿರುವವರ ಸಂಖ್ಯೆ ಶೇ. 23.4 ನಗರದಲ್ಲಿದ್ದು ಮತ್ತು ಶೇ. 4.4 ಗ್ರಾಮೀಣ ಭಾಗಗಳಲ್ಲಿವೆ. ಕಂಪ್ಯೂಟರ್ ಬಳಕೆಯಲ್ಲಿ ಸ್ತ್ರೀರು ಪುರುಷರಿಗಿಂತ  ಕಡಿಮೆ ಯಿದ್ದಾರೆ. ದೇಶದ ನಗರ ಗಳಲ್ಲಿ ಉಚಿತ ಶಿಕ್ಷಣ ಶೇ.23.4 ರಷ್ಟಿದ್ದು ಗ್ರಾಮೀಣ ಪ್ರದೇಶದಲ್ಲಿ ಶೇ.57ರಷ್ಟಿದೆ. ಇದರ ಅರ್ಥ ನಮ್ಮ ದೇಶ ಇನ್ನೂ ತಂತ್ರಜ್ಞಾನ ಆಧಾರಿತ ಕಲಿಕೆಗೆ ಸಜ್ಜಾಗಿಲ್ಲ.

ಕೋವಿಡ್ ಸಂಕಷ್ಟ ಕಾಲದಲ್ಲಿ ನಿರಂತರ ಕಲಿಕೆಯಿಲ್ಲದ ಮಕ್ಕಳು ಪರೀಕ್ಷೆಯಿಲ್ಲದೇ ತೇರ್ಗಡೆಯಾಗಿದ್ದಕ್ಕೆ ಸಂಭ್ರಮ ಪಟ್ಟಿದ್ದರು. ಆನ್‌ಲೈನ್ ಶಿಕ್ಷಣದ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆಯಾಗಿದ್ದು ನಿಜ. ನೂರಾರು ವಿದ್ಯಾರ್ಥಿಗಳಲ್ಲಿ ಮಾನಸಿಕ ಕ್ಷೋಭೆ ಉಂಟುಮಾಡಿದೆ. ಆನ್‌ಲೈನ್ ಶಿಕ್ಷಣಕ್ಕಾಗಿ ಹಲವಾರು ಖಾಸಗಿ ಕಂಪನಿಗಳು ತಮ್ಮ ಆಕರ್ಷಕ ಜಾಹಿರಾತುಗಳ ಮೂಲಕ ಮಕ್ಕಳ ಮನ ತಟ್ಟುವುದರ ಜೊತೆಗೆ ಪೋಷಕರ ಜೇಬನ್ನು ಖಾಲಿ ಮಾಡುವ ಹುನ್ನಾರ ನಡೆಸಿವೆ.

ಮಕ್ಕಳಿಗೆ ಜ್ಞಾನದ ಬಾಗಿಲನ್ನು ಅಂತರ್ಜಾಲದ ಮೂಲಕವೇ ಕೊಡುತ್ತೇನೆಂದು ಲ್ಯಾಪ್‌ಟಾಪ್‌ಗಳ ಖರೀದಿ ಜೋರಾಗಿ ನಡೆದಿದೆ. ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಪೋಷಕರು ಮಕ್ಕಳ ವಿದ್ಯಾಭ್ಯಾಸದ ಖರ್ಚಿಗೆ ಕೊರಗುವಂತಹ ಪರಿಸ್ಥಿತಿ ತಲೆ ದೋರಿದೆ. ಶೈಕ್ಷಣಿಕ ಸಾಲಕ್ಕೆ ತಮ್ಮ ಆಸ್ತಿ ಅಡವಿಡುವ ಮಟ್ಟಿಗೆ ಈ ದಂಧೆ ಬೆಳೆದು ನಿಂತಿದೆ. ಯಾವಾಗ ಶಿಕ್ಷಣದ ವ್ಯಾಪಾರೀಕರಣ ಪ್ರಾರಂಭವಾಗಿ ಯೋಗತ್ಯೆಯಿಲ್ಲದವರನ್ನು ಯೋಗ್ಯರನ್ನಾಗಿ ಮಾಡುವ ಬಗ್ಗೆ ಬೆಲೆ ತೆರಬೇಕು ಮತ್ತು ಹೀಗೆ ಮಾಡಿದ ಖರ್ಚು ಆದಷ್ಟು ಬೇಗನೆ ಹಿಂದಿರುಗಿ ಬರಬೇಕೆಂದರೆ ಉನ್ನತ ಹುದ್ದೆ ಸಿಗಬೇಕು.

ಅದರಿಂದ ಸಂಬಳದ ಜೊತೆಗೆ ಸಾಕಷ್ಟು ಸವಲತ್ತುಗಳು ಮತ್ತು ಗಿಂಬಳವೂ ಸಿಗಬೇಕೆನ್ನುವ ವ್ಯವಹಾರಿಕ ಜ್ಞಾನದ ಟಿಸಿಲುಗಳು ಹೆಮ್ಮರವಾಗಿ ಬೆಳೆಯಲಾರಂಭಿಸಿದವು. ಇಂತಹ ವಿಷವೃಕ್ಷದ ಉತ್ಪಾದನೆ ಮತ್ತು ಬೆಳವಣಿಗೆಗೆ ರಾಜಕಾರಣಿಗಳು, ಅಧಿಕಾರಿಗಳು,
ಅಧ್ಯಾಪಕರು ಮತ್ತು ಪೋಷಕರು ಸಾಕಷ್ಟು ಕೊಡುಗೆ ನೀಡಿದ್ದಾರೆ. ವಿದ್ಯೆಯೆಂಬುದು ಜ್ಞಾನಾರ್ಜನೆ ಮಾರ್ಗವಾಗಿದ್ದರೂ ಅದು ಹೊಟ್ಟೆ ತುಂಬಿಸುವ ಕೆಲಸಕ್ಕೆ ಬಳಕೆಯಾಗಿದ್ದು ನಮ್ಮ ಸಮಾಜದ ಬೆಳವಣಿಗೆಗೆ ಅಪಭ್ರಂಶವಾಗಿರುವ ಅರಗಿಸಿಕೊಳ್ಳಲಾಗದ ಕಹಿ ಸತ್ಯ.

ಶಿಕ್ಷಣ ರಂಗದ ಅವನತಿಗೆ ಇಂದಿನ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಬಹಳಷ್ಟು ಕೊಡುಗೆ ನೀಡಿದ್ದಾರೆ. ಸುಲಭವಾಗಿ ಅಂಕ ಸಿಗಬೇಕು, ಹೆಚ್ಚು ಕಷ್ಟಪಡಬಾರದು, ಯಾವುದೇ ಪರಿಶ್ರಮವಿಲ್ಲದೆ, ಜ್ಞಾನಾರ್ಜನೆ ಮಾಡದೇ ಉನ್ನತ ಹುದ್ದೆ ಗಿಟ್ಟಿಸಬೇಕು ಎನ್ನುವ ಗೀಳು ಇಂದಿನ ಯುವಜನರಲ್ಲಿ ಹೆಚ್ಚಾಗುತ್ತಿದೆ. ಶಿಕ್ಷಕ-ವಿದ್ಯಾರ್ಥಿಗಳ ನಡುವಿನ ಆತ್ಮೀಯ ಸಂಬಂಧ ಕಾಣದೇ ಕೇವಲ ಅಂಕಗಳ ದೃಷ್ಠಿಯಿಂದ ನೋಡುವ ವ್ಯವಹಾರಿಕ ಸಂಬಂಧವಷ್ಟೇ ಉಳಿದಿದೆ.

ಹೆಚ್ಚಿನ ಅಧ್ಯಾಪಕರು ತಾವು ಮಾಡುತ್ತಿರುವ ಕೆಲಸದ ಬಗ್ಗೆ ಶ್ರದ್ಧೆ ಇಲ್ಲದೆ, ನಿರಂತರ ಅಧ್ಯಯನದಿಂದ ಹೊರತಾಗಿದ್ದು ಮಾತ್ರ ಶಿಕ್ಷಣರಂಗ ಅವನತಿಗಿಳಿಯಲು ಬಹುಮುಖ್ಯ ಕಾರಣ. ಸ್ಪರ್ಧೆ ಹೆಚ್ಚಿದಂತೆ ಪರೀಕ್ಷಾ ಪದ್ಧತಿಗಳು ಬದಲಾದವು. ಜ್ಞಾನದ ಮುಂದೆ ಪರೀಕ್ಷೆ ಬೇಕೆ ಎಂಬ ಚರ್ಚೆಗಳು ನಡೆಯುತ್ತಿದ್ದರೂ ಈ ಸ್ಪರ್ಧಾತ್ಮಕ ಯುಗದಲ್ಲಿ ಜ್ಞಾನದ ಅಳತೆಗೋಲನ್ನು ನಿರ್ಧರಿಸುವುದು  ಕಷ್ಟಸಾಧ್ಯ. ಪರೀಕ್ಷಾ ವಿಧಾನಗಳು ಸಹ ತೀವ್ರಗತಿಯಲ್ಲಿ ವಿಕಾಸ ಹೊಂದುತ್ತಿವೆ. ಅಂತೆಯೇ ಹಲವಾರು ಅಕ್ರಮಗಳಿಗೆ ದಾರಿ ಮಾಡಿಕೊಟ್ಟಿವೆ.

ಬಹಳಷ್ಟು ವಿವಿಗಳಲ್ಲಿ ಜ್ಞಾನ ಆಧಾರಿತ ಮಾಲ್ಯಮಾಪನ ಇಲ್ಲದೆ ಕೆಲವು ವೈಯುಕ್ತಿಕ ವಿಷಯಗಳ ಆಧಾರದ ಮೇಲೆ ಆಂತರಿಕ ಅಂಕಗಳ ಹಂಚಿಕೆಯಾಗುತ್ತಿದ್ದು ವಿದ್ಯಾರ್ಥಿಗಳಲ್ಲಿ ಜ್ಞಾನಾರ್ಜನೆಯ ಒಲವು ಕಡಿಮೆಯಾಗುತ್ತಿದೆ. ತುಂಬಾ ಕಷ್ಟಪಟ್ಟು ಓದಿ ಬರೆದ ವಿದ್ಯಾರ್ಥಿಗೂ, ಅಧ್ಯಾಪಕರ ಕೆಲಸಗಳನ್ನು ಮಾಡಿಕೊಟ್ಟು ಓದದೆ ಬರೆದ ವಿದ್ಯಾರ್ಥಿಗೂ ವ್ಯತ್ಯಾಸ ಇಲ್ಲದಂತಾಗಿ ಆಂತರಿಕ ಮೌಲ್ಯಮಾಪನ ಮೌಲ್ಯ ಕಳೆದುಕೊಳ್ಳುತ್ತಿದೆ. ಶಿಕ್ಷಣದಲ್ಲಿ ರಾಜಕೀಯ ನುಸುಳಿ ಸ್ವಜಾತಿ ಪಕ್ಷಪಾತ, ಹಣ ಮುಂತಾದ ಅನೈತಿಕತೆಗಳು ವಿದ್ಯಾಸಂಸ್ಥೆಗಳಲ್ಲಿ ಬೇರು ಬಿಟ್ಟಿವೆ.

ಅಧ್ಯಾಪಕರ ನೇಮಕಾತಿ ವಿಚಾರವೇ ಅರ್ಥ ಕಳೆದುಕೊಂಡಿದೆ. ಮಠಾಽಶರಿಂದ ಹಿಡಿದು, ಕಿರಿ-ಹಿರಿ ಪುಢಾರಿಗಳ ಶಿಫಾರಸ್ಸು ಪತ್ರ ಹಿಡಿದು ವಿದ್ಯಾಸಂಸ್ಥೆಗಳಿಗೆ ಅಲೆದಾಡುವ ಹುದ್ದೆ ಆಕಾಂಕ್ಷಿಗಳ ಸಂಖ್ಯೆ ಬಹಳ ದೊಡ್ಡದು. ಅಧ್ಯಾಪನ ವೃತ್ತಿಗೆ ಸಮರ್ಪಿಸಿ ಕೊಳ್ಳುವವರಿಗೆ ಅನೈತಿಕತೆಯ ಅಬ್ಬರದಲ್ಲಿ ಜಾಗವಿಲ್ಲದಂತಾಗಿದೆ. ವಿವಿಗಳೂ ಸಹ ಇದೆಲ್ಲಾ ವಿಧಾನಗಳ ಕಾರಸ್ಥಾನ ವಾಗಿರು ವುದು ವಿಪರ್ಯಾಸ. ವಿವಿಗಳಲ್ಲಿ ಪ್ರಮುಖ ಹುದ್ದೆಗಳ ಆಕಾಂಕ್ಷಿಗಳು ರಾಜಕೀಯ ಮುದ್ರೆಗಾಗಿ ತಮ್ಮೆಲ್ಲ ಶಕ್ತಿ ಬಳಸಿಕೊಳ್ಳುತ್ತಿ ದ್ದಾರೆ. ನಿಜವಾದ ಶೈಕ್ಷಣಿಕ ಕಾಳಜಿ ಮತ್ತು ಜ್ಞಾನಾರ್ಜನೆ ಮಾಡುತ್ತಿರುವ ಅಧ್ಯಾಪಕರು ಅನೈತಿಕ ವಿಧಾನಗಳಿಂದ ಅಧಿಕಾರ ಪಡೆದವರ ಕೆಳಗೆ ಕೆಲಸ ಮಾಡಬೇಕಾಗಿರುವುದು ಶೈಕ್ಷಣಿಕ ಸಂಸ್ಥೆಗಳ ದುರ್ದೈವ.

ಈ ವ್ಯವಸ್ಥೆಯನ್ನು ಸರಿಪಡಿಸುವ ಪ್ರಯತ್ನಗಳು ಆಶಾದಾಯಕವಾಗೇನೂ ಇಲ್ಲ. ಮೌಲ್ಯಧಾರಿತ ಶಿಕ್ಷಣ ಬೇಕೆನ್ನುವ ಮತ್ತು ಶೈಕ್ಷಣಿಕ ಸಂಸ್ಥೆಗಳನ್ನು ಉನ್ನತಿಗೇರಿಸಬೇಕೆಂಬ ಹಲವಾರು ಯೋಜನೆಗಳು ನೆನೆಗುದಿಗೆ ಬಿದ್ದಿವೆ. ವಿವಿಗಳ ಸ್ವಾಯತ್ತೆ ಹೆಸರಿನಲ್ಲಿ
ನಿಜವಾದ ಶಿಕ್ಷಣ ಪ್ರಸರಣದಿಂದ ದೂರವಾಗಿವೆ. ಇಷ್ಟೆಲ್ಲಾ ರಾದ್ಧಾಂತಗಳ ನಡುವೆ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಮುಂತಾವುಗಳು ಶೈಕ್ಷಣಿಕ ಮೇರು ಪರ್ವತಗಳನ್ನೇರಲು ಸಾಧ್ಯವಾಗಿದೆ. ನಿಜವಾದ ಅರ್ಥದಲ್ಲಿ ಶಿಕ್ಷಣ ಅಲ್ಲಿ ಹೆಚ್ಚಿನ ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತಿದ್ದು ವಿಶ್ವದ ಪ್ರತಿಷ್ಟಿತ ಸಂಶೋಧನಾ ಸಂಸ್ಥೆಗಳು ಇಂತಹ ವಿದ್ಯಾರ್ಥಿಗಳನ್ನು ಸ್ವಾಗತಿಸುತ್ತಿವೆ.

ಆಗ ನಮ್ಮ ದೇಶದ ವಿದ್ವತ್ತು ವಿದೇಶಕ್ಕೆ ಹರಿಯಿತು ಪ್ರತಿಭಾ ಪಲಾಯನ ಎಂದು ಹುಯಿಲೆಬ್ಬಿಸಿದರೆ ಆಯಿತೇ? ನಮ್ಮ
ದೇಶದ ಲ್ಲಿರುವ ವಿದ್ಯಾಸಂಸ್ಥೆಗಳಿಗೆ ಇಂತಹ ಪ್ರತಿಭಾನ್ವಿತರನ್ನು ನೇಮಕ ಮಾಡಿಕೊಳ್ಳಲು ಸಾಧ್ಯವಿಲ್ಲವೇ? ಭಾರತೀಯ ವಿಜ್ಞಾನ ಸಂಸ್ಥೆಗಳಲ್ಲಿ ಹೆಚ್ಚಾಗಿ ನೇಮಕಗೊಂಡಿರುವ ಪ್ರಾಧ್ಯಾಪಕರು ವಿದೇಶಗಳಲ್ಲಿ ಉನ್ನತ ವ್ಯಾಸಂಗ ಮಾಡಿ ಬಂದವರು. ಅಂದರೆ ಇಲ್ಲಿನ ಶಿಕ್ಷಣ ಪದ್ಧತಿಯಲ್ಲಿ ಕಲಿತು ಪ್ರಾವಿಣ್ಯತೆ ಪಡೆದ ಪ್ರತಿಭ್ವಾನಿತರಿಗೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸ್ಥಾನವಿಲ್ಲವೇ? ವಿದೇಶಿ ಸಂಸ್ಥೆಗಳಿಗೆ ಉಪಯುಕ್ತವಾಗುವ ನಮ್ಮ ವಿದ್ಯಾರ್ಥಿ ಸ್ವದೇಶಿ ಸಂಸ್ಥೆಗಳಲ್ಲಿ ಕೆಲಸಕ್ಕೆ ಹೇಗೆ ನಿರರ್ಥಕವಾಗುತ್ತಾನೆ? ಪರಿಹಾರ ವಿಲ್ಲದ ಪ್ರಶ್ನೆಗಳಿವೆ.

ವಿವಿಗಳಲ್ಲಿನ ಅನುದಾನ ಹಂಚಿಕೆ ಸುವ್ಯವಸ್ಥೆಯಲ್ಲಿ ನಡೆದರೆ ಎಲ್ಲಾ ವಿವಿಗಳ ಮೂಲ ಸೌಕರ್ಯಗಳನ್ನು ಕಲ್ಪಿಸಿ ಉತ್ತಮ  ಶಿಕ್ಷಣ ಕೊಡಲು ಸಾಧ್ಯ. ಎಲ್ಲಾ ಜನಪ್ರತಿನಿದಿಗಳು ತಮ್ಮ ಸ್ಥಾನಗಳ ಹೆಸರಿನಲ್ಲಿ ಪಡೆಯುತ್ತಿರುವ ಸೌಲಭ್ಯಗಳ ಒಂದು ದಿನದ ಖರ್ಚನ್ನು ಶಾಲೆಗಳಿಗೆ ನೀಡಿದರೆ ಅದೆಷ್ಟು ಸರಕಾರಿ ಶಾಲೆಗಳು ಉತ್ತಮ ತರಗತಿಯ ಕೊಠಡಿ ಮತ್ತು ವೈಜ್ಞಾನಿಕ ಉಪಕರಣ ಗಳನ್ನು ಪಡೆಯಬಹುದು? ಶಿಕ್ಷಣಕ್ಕೆ ಮಹತ್ವ ಸಿಕ್ಕಿದರೆ ಮಾತ್ರ ಸತ್ಪ್ರಜೆಗಳನ್ನು ತಯಾರು ಮಾಡಲು ಸಾಧ್ಯವೆಂಬ ವೇದಾಂತ ಬರೀ ಹೇಳುವುಕ್ಕಲ್ಲದೆ ನಿಜವಾದ ಅರ್ಥದಲ್ಲಿ ಕಾರ್ಯರೂಪಕ್ಕೆ ತಂದರೆ ಮಾತ್ರ ಶಿಕ್ಷಣದ ಗುರಿ ಈಡೇರಬಹುದು.

ಇಲ್ಲದಿದ್ದರೆ ಶಿಕ್ಷಣವೂ ವಿದಾರ್ಥಿಗಳಿಂದ ದೂರವಾಗುತ್ತದೆ. ವಿದ್ಯಾರ್ಥಿಗಳಲ್ಲಿ ಜ್ಞಾನದ ಹಸಿವು, ಶಿಕ್ಷಕರಲ್ಲಿ ಕೆಲಸದಲ್ಲಿನ ಶ್ರದ್ಧೆ ಮತ್ತು ಪೋಷಕರಲ್ಲಿ ಮಕ್ಕಳ ವಿದ್ಯಾಭ್ಯಾಸ ಜ್ಞಾನಾರ್ಜನೆಗಾಗಿ ಎಂಬುದನ್ನು ಅರಿಯುವ ತನಕ ನಿಜ ಅರ್ಥದ ಶಿಕ್ಷಣ ಮರೀಚಿಕೆಯಾಗಿರುತ್ತದೆ.

ಲೇಖಕರು: ದಾವಣಗೆರೆ ವಿಶ್ವವಿದ್ಯಾಲಯದ ಸೂಕ್ಷ್ಮಜೀವಿಶಾಸ ವಿಭಾಗದ ಪ್ರಾಧ್ಯಾಪಕರು.