Thursday, 31st October 2024

Gururaj Gantihole Column: ಬದುಕನ್ನು ಬಂಗಾರವಾಗಿಸುವ ಭತ್ತದ ಬೆಳೆಯನ್ನು ನಿರ್ಲಕ್ಷಿಸದಿರಿ

ಗಂಟಾಘೋಷ

ಗುರುರಾಜ್‌ ಗಂಟಿಹೊಳೆ

ವಿದೇಶಗಳ ವಾಣಿಜ್ಯ ಕೃಷಿಯ ಹಾವಳಿಯಿಂದಾಗಿ ಭತ್ತದ ಕೃಷಿ ಮೂಲೆಗುಂಪಾಗುತ್ತಿದೆ. ದೇಸೀ ಮೂಲತಳಿಗಳು ಕಣ್ಮರೆಯಾಗುತ್ತಿವೆ. ಇದು, ಆಹಾರಕ್ಕಾಗಿ ಪರದೇಶಗಳ ಆಮದಿನ ಮೇಲೆ ಅವಲಂಬಿತ ರಾಗುವ ಕಾಲದ ಮುನ್ಸೂಚನೆ. ಕೃಷಿಕುಟುಂಬದ ಇಂದಿನ ಮಕ್ಕಳಿಗೆ ಅಕ್ಕಿಯ ಮೂಲ ಯಾವುದು, ಹೇಗೆ ತಯಾರಾಗುತ್ತದೆ ಎಂದು ತಿಳಿದಿಲ್ಲದಿರುವುದು ಪರಿಸ್ಥಿತಿಗೆ ಹಿಡಿದ ಕೈಗನ್ನಡಿ!

ಭತ್ತ ಬಂಗಾರಕ್ಕೆ ಸಮ ಎಂಬ ಮಾತು ಬೆಳೆದಿರುವ ಅನುಭವಿ ರೈತನಿಗೆ ಮಾತ್ರ ಗೊತ್ತು. ಇಂದು ಬಹುತೇಕ
ರಾಷ್ಟ್ರಗಳ ಉತ್ಪಾದನೆ ಮತ್ತು ದಿನನಿತ್ಯದ ಬಳಕೆಯು ಭತ್ತದ ಮೇಲೆಯೇ ಅವಲಂಬಿತವಾಗಿವೆ. ಭತ್ತವು ಅಕ್ಕಿಯ
ರೂಪದಲ್ಲಿ ಜಗತ್ತಿನ ಅರ್ಧಕ್ಕೂ ಹೆಚ್ಚು ಜನರ ಪ್ರಮುಖ ಆಹಾರವಾಗಿದ್ದು, ಏಷ್ಯಾ ಸೇರಿದಂತೆ ಇತರೆ 17 ದೇಶಗ ಳಲ್ಲಿ, ಉತ್ತರ ಮತ್ತು ದಕ್ಷಿಣ ಅಮೆರಿಕ ಖಂಡದ 9 ದೇಶಗಳಲ್ಲಿ ಹಾಗೂ ಆಫ್ರಿಕಾದ 8 ದೇಶಗಳಲ್ಲಿ ಆಹಾರದ ಶಕ್ತಿಯ ಪ್ರಮುಖ ಆಕರವಾಗಿದೆ.

ಜಗತ್ತಿನ ಮೂರು ಪ್ರಮುಖ ಏಕದಳ ಧಾನ್ಯಗಳಾದ ಮೆಕ್ಕೆಜೋಳ, ಗೋಧಿಯ ಜತೆಗೆ ಭತ್ತವೂ ಒಂದಾಗಿದ್ದು, 800
ದಶಲಕ್ಷ ಟನ್ ಉತ್ಪಾದನೆಯಾಗುವ ಮೂಲಕ, ಮೆಕ್ಕೆಜೋಳದ ನಂತರದ ಸ್ಥಾನ ಭತ್ತಕ್ಕಿದೆ. ಭಾರತದಲ್ಲಿ ಏಕದಳ ಧಾನ್ಯಗಳ ಉತ್ಪಾದನೆಯಲ್ಲಿ ಭತ್ತಕ್ಕೆ ಮೊದಲ ಸ್ಥಾನವಿದೆ. ಇದು ಪೂರ್ವ ಹಾಗೂ ದಕ್ಷಿಣ ಭಾರತದ ಪ್ರಮುಖ ಆಹಾರವಾಗಿದ್ದು, ಚೀನಾದ ನಂತರ ಭಾರತವು ವಿಶ್ವದ ಅತಿ ಹೆಚ್ಚು ಭತ್ತ ಬೆಳೆಯುವ ದೇಶವಾಗಿದೆ. ಭಾರತದಲ್ಲಿ, ಜನಸಂಖ್ಯೆಯ ಮೂರನೇ ಎರಡರಷ್ಟು ಜನರು ಈ ಬೆಳೆಯನ್ನು ಅವಲಂಬಿಸಿದ್ದಾರೆ.

ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಒಡಿಶಾ, ಛತ್ತೀಸ್‌ಗಢ, ಆಂಧ್ರಪ್ರದೇಶ ಮತ್ತು ಕರ್ನಾಟಕ ಇವು ಭಾರತದಲ್ಲಿ ಭತ್ತ ಬೆಳೆಯುವ ಪ್ರಮುಖ ರಾಜ್ಯ ಗಳಾಗಿವೆ. ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ಉತ್ತರಪ್ರದೇಶ ಮತ್ತು ಕರ್ನಾಟಕವು ದೇಶದಲ್ಲಿ ಭತ್ತವನ್ನು ಅತಿ ಹೆಚ್ಚು ಉತ್ಪಾದಿಸುವ ನಾಲ್ಕು ರಾಜ್ಯಗಳಾಗಿವೆ.

ಕರ್ನಾಟಕವು ಭಾರತದ ಪ್ರಮುಖ ಹತ್ತು ಭತ್ತ ಬೆಳೆಯುವ ರಾಜ್ಯಗಳಲ್ಲಿ ಒಂದಾಗಿದ್ದು, 2021೧-22ರಲ್ಲಿ, ರಾಜ್ಯವು ಭತ್ತದ ಕೃಷಿಯಲ್ಲಿ 14.56 ಲಕ್ಷ ಹೆಕ್ಟೇರ್ ಪ್ರದೇಶವನ್ನು ಹೊಂದಿರುವ ಮೂಲಕ, 65.47 ಲಕ್ಷ ಟನ್‌ನಷ್ಟು ಭತ್ತವನ್ನು ಉತ್ಪಾದಿಸುತ್ತಿದೆ. ಇದು 4630೦ ಕೆ.ಜಿ./ಹೆಕ್ಟೇರ್ ಇಳುವರಿಯನ್ನು ಹೊಂದಿದ್ದು, ದೇಶದ ಒಟ್ಟು ಅಕ್ಕಿ ಉತ್ಪಾದನೆಯಲ್ಲಿ ಶೇ.3ಕ್ಕಿಂತ ಹೆಚ್ಚಿನ ಪಾಲನ್ನು ಹೊಂದಿದೆ.

ನೀರಾವರಿ ಪ್ರದೇಶಗಳಲ್ಲಿ ಯಥೇಚ್ಛವಾಗಿ ಬೆಳೆಯಬಹುದಾದ ಈ ಬೆಳೆಯು, ಬಿತ್ತನೆಯ ಸಮಯದಲ್ಲಿ 20 ಡಿಗ್ರಿಯಿಂದ 22 ಡಿಗ್ರಿ ಸೆಲ್ಸಿಯಸ್, ಬೆಳವಣಿಗೆಯ ಸಮಯದಲ್ಲಿ 23 ಡಿಗ್ರಿಯಿಂದ 25 ಡಿಗ್ರಿ ಸೆಲ್ಸಿಯಸ್ ಮತ್ತು ಕೊಯ್ಲಿನ ಸಮಯದಲ್ಲಿ 25 ಡಿಗ್ರಿಯಿಂದ ದಿಂದ 30 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ಬೇಡುತ್ತದೆ. ಅದರಲ್ಲೂ, ಎರಡು ಪ್ರಮುಖ ಪ್ರಭೇದಗಳೆಂದರೆ, ಏಷ್ಯಾದ ಭತ್ತ ‘ಒರಿಜ ಸಟಿವ ಮತ್ತು ಆಫ್ರಿಕಾದ ಭತ್ತ ‘ಒರಿಜ ಗ್ಲಾಬಿರ್ರಿಮ’.
ಒಂದು ಅಧ್ಯಯನದ ಪ್ರಕಾರ, ಎಂಟು ಸಾವಿರ ವರ್ಷಗಳಷ್ಟು ಹಿಂದೆ ‘ಒರಿಜ ಸಟಿವ’ ಬೀಜದ ಉಪಪ್ರಭೇದ ‘ಜಪೋನಿಕ’ವನ್ನು ದಕ್ಷಿಣ ಚೀನಾದ ಯಾಂಗ್ಟ್‌ಜಿ ನದಿಯ ಕಣಿವೆಯಲ್ಲಿ ಬೆಳೆಯಲು ಯತ್ನಿಸಲಾಯಿತು. ಇದರ ಇನ್ನೊಂದು ಉಪಪ್ರಭೇದವಾದ ‘ಇಂಡಿಕಾ’ ವಂಶವಾಹಿ ಭತ್ತವನ್ನು ಬ್ರಹ್ಮಪುತ್ರಾ ನದಿಪ್ರದೇಶ ಮತ್ತು ಭಾರತದ ಗಂಗಾಬಯಲು ಪ್ರದೇಶಗಳಲ್ಲಿ ಸುಮಾರು 9000-100000 ವರ್ಷಗಳಷ್ಟು ಹಿಂದೆ ಬೆಳೆಯಲಾಗುತ್ತಿತ್ತು ಎನ್ನುತ್ತವೆ ವೈಜ್ಞಾನಿಕ ಸಂಶೋಧನೆಗಳು.

ಭತ್ತವನ್ನು ರಾಜ್ಯದಲ್ಲಿ ನೀರಾವರಿ ಹಾಗೂ ಮಳೆಯಾಶ್ರಯದಲ್ಲಿ ಅಂದಾಜು 156= ಲಕ್ಷ ಹೆಕ್ಟೇರ್ ಕ್ಷೇತ್ರದಲ್ಲಿ ಬೆಳೆಯಲಾಗುತ್ತಿದ್ದು, ಒಟ್ಟು ಉತ್ಪಾದನೆ 66 ಲಕ್ಷ ಟನ್‌ಗಳಷ್ಟಿದೆ. ಭತ್ತವನ್ನು ಗುಡ್ಡಗಾಡು ಪ್ರದೇಶ (ವಲಯ-9) ಮತ್ತು ಕರಾವಳಿ ಪ್ರದೇಶ (ವಲಯ-10), ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯಾಶ್ರಯದಲ್ಲಿ, ಈಶಾನ್ಯದ
ಅರೆಮಲೆನಾಡು ಹಾಗೂ ಒಣವಲಯದ (ಪ್ರದೇಶ 1, ವಲಯ 1 ಮತ್ತು 2) ಪ್ರದೇಶದಲ್ಲಿ ಕಾಲುವೆ, ಕೆರೆ ಮತ್ತು ಏತ ನೀರಾವರಿ ಆಶ್ರಯದಲ್ಲಿ ಬೆಳೆಯಲಾಗುತ್ತಿದೆ.

ರಾಜ್ಯದಲ್ಲಿ ಭತ್ತ ಬೆಳೆಯುವ ಮುಖ್ಯ ತಾಲೂಕುಗಳೆಂದರೆ ಮಾನ್ವಿ, ರಾಯಚೂರು, ಬೀದರ್, ಭಾಲ್ಕಿ, ಔರಾದ್, ಆಳಂದ, ಚಿಂಚೋಳಿ, ಚಿತ್ತಾಪೂರ, ಯಾದಗಿರಿ ಮತ್ತು ಸೇಡಂ. ಈಶಾನ್ಯ ಹಾಗೂ ಉತ್ತರದ ಒಣ ಪ್ರದೇಶಗಳ ಜಿಲ್ಲೆಗಳಾದ (ಪ್ರದೇಶ 2, ವಲಯ 3) ರಾಯಚೂರು, ಬಳ್ಳಾರಿ, ಬೆಳಗಾವಿ ಮತ್ತು ವಿಜಯಪುರಗಳಲ್ಲಿ ಭತ್ತವನ್ನು ನೀರಾವರಿ ಆಶ್ರಯದಲ್ಲಿ ಬೆಳೆಯಲಾಗುತ್ತಿದೆ.

ಮಧ್ಯಭಾಗದ ಉತ್ತರದ ಅರೆಮಲೆನಾಡು ಪ್ರದೇಶ 4 (ವಲಯ 8) ದಲ್ಲಿ ಪಶ್ಚಿಮದ ಹೆಚ್ಚು ಮಳೆ ಬೀಳುವ ಭಾಗಗಳಲ್ಲಿ ಸಹ ಮಳೆಯಾಶ್ರಯದಲ್ಲಿ ಮುಂಗಾರಿನಲ್ಲಿ ಕೂರಿಗೆಯಿಂದ ಭತ್ತವನ್ನು ಬಿತ್ತಿ ಬೆಳೆಯಲಾಗುತ್ತಿದೆ. ಶಿಗ್ಗಾಂವಿ, ಧಾರವಾಡ, ಹಿರೇಕೆರೂರ, ಬೆಳಗಾವಿ ಮತ್ತು ಬೈಲಹೊಂಗಲ ತಾಲೂಕುಗಳಲ್ಲಿ ಕೂರಿಗೆ ಭತ್ತವನ್ನು ಬೆಳೆಯಲಾಗುತ್ತಿದೆ.

ಭತ್ತವನ್ನು ಮಲೆನಾಡು (ಪ್ರದೇಶ 5, ವಲಯ 9) ಹಾಗೂ ಕರಾವಳಿ ಪ್ರದೇಶದ (ಪ್ರದೇಶ 6 ವಲಯ 10) ಪ್ರಧಾನ
ಬೆಳೆಯಾಗಿ, ಮಳೆಯಾಶ್ರಯದಲ್ಲಿ ಮುಂಗಾರಿನಲ್ಲಿ ಬೆಳೆಯಲಾಗುತ್ತಿದೆ. ನೀರಿನ ಲಭ್ಯತೆಗನುಗುಣವಾಗಿ ಹಿಂಗಾರು
ಮತ್ತು ಬೇಸಿಗೆಯಲ್ಲೂ ಭತ್ತವನ್ನು ಬೆಳೆಯಲಾಗುತ್ತಿದೆ. ಸಂಕರಣ ಭತ್ತ (ಏqsಚ್ಟಿಜಿb PZbbqs) ಕಡಿಮೆ ಅವಧಿಯದಾಗಿದ್ದು, ಇತರೆ ಭತ್ತದ ತಳಿಗಳಿಗಿಂತ ಶೇ. 15-20ರಷ್ಟು ಹೆಚ್ಚಿನ ಇಳುವರಿ ಕೊಡುವುದಲ್ಲದೆ, ರೋಗ ನಿರೋಧಕ ಶಕ್ತಿ ಹೊಂದಿದೆ. ಕೆಆರ್ ಎಚ್-2 ಹಾಗೂ ಕೆಆರ್‌ಎಚ್-4 ಕರ್ನಾಟಕದಲ್ಲಿ ಬಿಡುಗಡೆ ಯಾದ ಉತ್ತಮ ಸಂಕರಣ ತಳಿಗಳಾಗಿವೆ. ಇನ್ನು ಬೀಜಗಳ ಕುರಿತಂತೆ ಗಮನಿಸುವುದಾದರೆ, ಮುಂಗಾರು ಸಮಯದಲ್ಲಿ, ಜಯಾ 1,23,8,9 ಮಳೆಯಾಶ್ರಿತ ಬೆಳೆಯಾಗಿ, ಬಿಪಿಟಿ-5204 ನೀರಾವರಿಯಲ್ಲಿ, ಜಿಜಿವಿ-05-01 (ಗಂಗಾವತಿ ಸೋನಾ) ಸವಳು ಭೂಮಿಯಲ್ಲಿ ಬೆಳೆಯಬಹುದು. ಇನ್ನುಳಿದಂತೆ, ಎಮ್‌ಟಿಯು-8, ಅಭಿಲಾಶ, ಇಂಟಾನ್, ಹೇಮಾವತಿ, ಐಇಟಿ-7564, ಐಇಟಿ-13549, ಸಿಎಸ್‌ಆರ್-22, ಭದ್ರಾ (ಎಂಒ-4), ಎಮ್‌ಜಿಡಿ-101, ಆಶಾ-9 ಮುಗದ ಸಿರಿ-1253, ಎಂಜಿಡಿ-03, ಆರ್‌ಪಿ ಬಯೋ-226ಗಳಂಥ ವಿವಿಧ ಪ್ರಭೇದಗಳೂ ಭತ್ತದಲ್ಲಿವೆ.

ಹಿಂಗಾರು ಸಮಯದಲ್ಲಿ ಸಾಮಾನ್ಯವಾಗಿ, ಜಿಜಿವಿ-05 (ಗಂಗಾವತಿ ಸೋನಾ), ಜಯಾ 10, ಜ್ಯೋತಿ 10 ಬಗೆಯ
ಉದ್ದ-ದಪ್ಪ ಕೆಂಪು ಭತ್ತಗಳನ್ನು ಬೆಳೆದರೆ ಬೇಸಿಗೆಯಲ್ಲಿ ಜಿಜಿವಿ-05, ಐಇಟಿ-19251, ಜಿಎನ್‌ವಿ-10, ಬಿಪಿಟಿ-5204 ತಳಿಗಳನ್ನು ಬೆಳೆಯಲಾಗುತ್ತಿದ್ದು ಇವು ಶೇ.6ರಷ್ಟು ಅಧಿಕ ಇಳುವರಿಯನ್ನೂ ಕೊಡುತ್ತವೆ. ಬೇರೆ ಬೇರೆ ರೀತಿಯ ಅಕ್ಕಿಗಳಲ್ಲಿ, ಬಿಳಿ, ಕೆಂಪು, ಕಂದು, ಕಪ್ಪು ಅಥವಾ ನೇರಳೆ ಬಣ್ಣಗಳ ಅಕ್ಕಿಗಳಲ್ಲಿ ಪೋಷಕಾಂಶ ಗಳು ಭಿನ್ನವಾಗಿದ್ದು, ಅಗತ್ಯಕ್ಕೆ ತಕ್ಕಂತೆ ಸಂಸ್ಕರಿಸಿ ಬಳಸುತ್ತೇವೆ. ಈ ಹಂತದಲ್ಲಿ ದೊರಕಿದ ಹೊಟ್ಟನ್ನು ಉರುವಲಾಗಿ ಬಳಸಲಾಗುತ್ತದೆ.

ಕೋಳಿ ಸಾಕಣೆಯಲ್ಲಿ ತೇವಾಂಶ ಕಾಪಾಡಲು ಮಣ್ಣಿಗೆ ಹೊದಿಕೆಯಾಗಿ, ವಿದ್ಯುತ್ ನಿರೋಧಕ ಪದಾರ್ಥಗಳ ತಯಾರಿಕೆ, ಬೋರ್ಡುಗಳು, ಪ್ಯಾಕಿಂಗ್ ಪದಾರ್ಥಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ನಾಡಿನಾದ್ಯಂತ ಸಂಚರಿ ಸುವ ಹವ್ಯಾಸ ಹೊಂದಿರುವ ಅಸ್ಮಾ ಬಾನು ಎಂಬುವವರು, ಹೋದೆಡೆಯೆಲ್ಲ ಭತ್ತದ ವಿವಿಧ ತಳಿಗಳನ್ನು
ಹಣ ನೀಡಿ ತಂದು ಜೋಪಾನಿಸಿ, ಹಿಡಿ ಬೀಜವನ್ನು ಮಡಿಯಲ್ಲಿ ಬಿತ್ತಿ, ಇಡಿಯಾಗಿ ನೆಟ್ಟು, ಮುಡಿ ಭತ್ತ ಬೆಳೆಯುವ ಕಾಯಕ ಮಾಡುತ್ತಾ, ಇಂದಿಗೆ ೮೦೦ಕ್ಕೂ ಅಧಿಕ ತಳಿಯ ಭತ್ತವನ್ನು ತಮ್ಮ ಗದ್ದೆಯಲ್ಲಿ ಬೆಳೆದಿದ್ದಾರೆ.

ಈ ಮೂಲಕ, 800ಕ್ಕೂ ಹೆಚ್ಚು ಭತ್ತದ ತಳಿಗಳನ್ನು ಒಂದೇ ದೊಡ್ಡ ಗದ್ದೆಯಲ್ಲಿ ಬೇರೆಬೇರೆಯಾಗಿ ಬೆಳೆಸುವ
ಮೂಲಕ ಕೃಷಿ ಕಾಯಕದಲ್ಲಿ ತೊಡಗಿದ್ದಾರೆ. ಇವರ ಕೃಷಿ ಪ್ರೀತಿ, ಭತ್ತದ ನಾಟಿಯ ದರ್ಶನವನ್ನು ನಾವು ಕಾರ್ಕಳದಲ್ಲಿ ಕಾಣಬಹುದಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಿವಾಸಿ ಬಿ.ಕೆ.ದೇವರಾವ್, ತಮ್ಮ ಐದು ಎಕರೆ ಗದ್ದೆಯಲ್ಲಿ 140ಕ್ಕೂ ಅಧಿಕ ತಳಿಗಳ ಮೂಲಕ ವರ್ಷಕ್ಕೆ ಎರಡು ಬೆಳೆಗಳನ್ನು ಪಡೆಯುತ್ತಿಈ ಮೂಲಕ, 800ಕ್ಕೂ ಹೆಚ್ಚು ಭತ್ತದ ತಳಿಗಳನ್ನು ಒಂದೇ ದೊಡ್ಡ ಗದ್ದೆಯಲ್ಲಿ ಬೇರೆಬೇರೆಯಾಗಿ ಬೆಳೆಸುವ
ಮೂಲಕ ಕೃಷಿ ಕಾಯಕದಲ್ಲಿ ತೊಡಗಿದ್ದಾರೆ. ಇವರ ಕೃಷಿ ಪ್ರೀತಿ, ಭತ್ತದ ನಾಟಿಯ ದರ್ಶನವನ್ನು ನಾವು ಕಾರ್ಕಳದಲ್ಲಿ ಕಾಣಬಹುದಾಗಿದೆ.

ದಕ್ಷಿಣ ಕನ್ನಡ ಜಿಯ ಬೆಳ್ತಂಗಡಿ ತಾಲೂಕಿನ ನಿವಾಸಿ ಬಿ. ಕೆ.ದೇವರಾವ್, ತಮ್ಮ ಐದು ಎಕರೆ ಗದ್ದೆಯಲ್ಲಿ 140ಕ್ಕೂ ಅಧಿಕ ತಳಿಗಳ ಮೂಲಕ ವರ್ಷಕ್ಕೆ ಎರಡು ಬೆಳೆಗಳನ್ನು ಪಡೆಯುತ್ತಿದ್ದಾರೆ.

ಪ್ರತಿಸಲವೂ 50 ಕ್ವಿಂಟಾಲ್‌ಗಿಂತ ಅಧಿಕ ಇಳುವರಿ ಅವರಿಗೆ ಸಿಗುತ್ತಿದೆ. ಗಂಧಸಾಲೆ ಎಂಬ ಬಹುಪರಿಮಳದ ತಳಿ ಸಹ ಇಲ್ಲಿ ಕಾಣಸಿಗುತ್ತದೆ. ಸುಮಾರು 250ಕ್ಕೂ ಹೆಚ್ಚು ಭತ್ತದ ತಳಿ ಸಂಗ್ರಹ ಹೊಂದಿರುವ ಇವರು ರಾಷ್ಟ್ರಮಟ್ಟದ ಪುರಸ್ಕಾರ ಪಡೆದಿದ್ದಾರೆ. ಕರ್ನಾಟಕದ ಕರಾವಳಿಯಲ್ಲಿ ಭತ್ತದ ಕೃಷಿಯೇ ಪ್ರಧಾನ. ತೋಟಗಾರಿಕಾ ಬೆಳೆಯಾಗಿ ಅಡಕೆ, ತೆಂಗು, ರಬ್ಬರ್ ಸಹಿತ ವಿವಿಧ ಹಣ್ಣುಗಳನ್ನು ಬೆಳೆಯಲಾಗುತ್ತದೆ. ಆದರೆ ಮುಂಗಾರು ಮತ್ತು ಹಿಂಗಾರಿನಲ್ಲಿ ಭತ್ತವನ್ನೇ ರೈತರು ಪ್ರಮುಖ ಬೆಳೆಯಾಗಿ ಬೆಳೆಯುತ್ತಾರೆ. ಈ ಅವಧಿಯಲ್ಲಿ ಬೇರೆ ಬೆಳೆಗಳನ್ನು ಬೆಳೆಯಲು ಸಾಧ್ಯ ವಾಗದೇ ಇರುವುದು ಇದಕ್ಕೆ ಮುಖ್ಯ ಕಾರಣ. ಹಿಂಗಾರಿನಲ್ಲಿ ದ್ವಿದಳ ದಾನ್ಯಗಳನ್ನು ಕೆಲವರು ಬೆಳೆಯುತ್ತಿದ್ದರೂ ಪ್ರಮಾಣ ತೀರಾ ಕಡಿಮೆಯಿದೆ.

2023ರಲ್ಲಿ ಉಡುಪಿ ಜಿಲ್ಲೆಯಲ್ಲಿ 36500 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬಿತ್ತನೆ ಮಾಡಲಾಗಿತ್ತು. ಈ ವರ್ಷ ಅದು 35000 ಹೆಕ್ಟೇರ್‌ಗೆ ಇಳಿದಿದೆ. ಅಂದರೆ ಸರಿಸುಮಾರು ಒಂದೂವರೆ ಸಾವಿರ ಹೆಕ್ಟೇರ್ ನಷ್ಟು ಪ್ರದೇಶದಲ್ಲಿ ಮುಂಗಾರು ಬಿತ್ತನೆ ಒಂದೇ ವರ್ಷದಲ್ಲಿ ಕಡಿಮೆಯಾಗಿದೆ. ಹಾಗೆಯೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ವರ್ಷ 9500 ಹೆಕ್ಟೇರ್ ಬಿತ್ತನೆ ಯಾಗಿದ್ದರೆ, ಈ ವರ್ಷ ಅದು 9000 ಹೆಕ್ಟೇರಿಗೆ ಇಳಿದಿದೆ. ಉಭಯ ಜಿಲ್ಲೆಗೆ ತಿಂಗಳಿಗೆ 1 ಲಕ್ಷ ಕ್ವಿಂಟಾಲ್ ಗೂ ಅಧಿಕ ಅಕ್ಕಿಯ ಅವಶ್ಯಕತೆಯಿದೆ. ಪಡಿತರ ವ್ಯವಸ್ಥೆಯಡಿ ಕುಚ್ಚಲು ಅಕ್ಕಿ ನೀಡಲು ಕೇಂದ್ರ ಸರಕಾರ 2 ವರ್ಷದ ಹಿಂದೆ ಅವಕಾಶ ಕಲ್ಪಿಸಿದರೂ ಅಕ್ಕಿಯ ಕೊರತೆಯಿಂದಾಗಿ ಅದನ್ನು ನೀಡಲು ಸಾಧ್ಯವಾಗಿಲ್ಲ. ವರ್ಷದಿಂದ ವರ್ಷಕ್ಕೆ ಭತ್ತದ ಬಿತ್ತನೆ ಕಡಿಮೆಯಾಗುತ್ತಿದೆ. ಆ ಮೂಲಕ ಇಳುವರಿಯೂ ಕುಸಿಯುತ್ತಿದೆ.

‘ಎಂ.ಒ-4’ ಕರಾವಳಿಯಲ್ಲಿ ಅತ್ಯಧಿಕವಾಗಿ ಬೆಳೆಯುವ ತಳಿ. ಇದು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಗಳಿಗೆ
ಹೇಳಿಮಾಡಿಸಿದ ತಳಿಯಾಗಿದೆ. ರಾಜ್ಯಾದ್ಯಂತ ಈ ಭತ್ತದ ತಳಿಯ ಪೂರೈಕೆಗೆ ಕೊರತೆಯಿದೆ. ಬರೀ ಉಡುಪಿ ಜಿಲ್ಲೆಗೇ ಎರಡು ಸಾವಿರ ಕ್ವಿಂಟಾಲ್ ಬಿತ್ತನೆ ಬೀಜದ ಅಗತ್ಯವಿದೆ. ಇಲಾಖೆಯಿಂದ 200 ಕ್ವಿಂಟಾಲ್ ತರಿಸಿ, ಅದರಲ್ಲೂ ಅನ್ಯ ತಳಿಗಳನ್ನು ಕೊಟ್ಟು ಬೆಳೆಯಲು ಹೇಳುತ್ತಿರುವುದು ತರವಲ್ಲ. ಕುಂದಾಪುರ, ಬೈಂದೂರು ಭಾಗಗಳಲ್ಲಿ ಉಪ್ಪು ನೀರು ಏರುವುದುಂಟು. ಇಂಥ ಗದ್ದೆಗಳಲ್ಲಿ ಎಂ.ಒ-4 ತಳಿಯು ಚೆನ್ನಾಗಿ ಇಳುವರಿ ನೀಡುತ್ತದೆ. ರೋಗ ಬಾಧೆಯೂ ಕಡಿಮೆ. ಜತೆಗೆ 25 ವರ್ಷಗಳಿಂದ ನಿರುಮ್ಮಳವಾಗಿ ಬೆಳೆಯುತ್ತ ಬರುತ್ತಿದ್ದ ಈ ಭತ್ತದ ತಳಿಯು ರೈತರ ಮಿತ್ರನಂತಿತ್ತು ಕೂಡ. ಆದರೆ, ನಿಜಕ್ಕೂ ರೈತರ ಹಿತಕಾಯಬೇಕಾದ ರಾಜ್ಯ ಸರಕಾರ ಮಾತ್ರ ಈ ವಿಷಯದಲ್ಲಿ ಯಾವೊಂದೂ ನಿರ್ಧಾರ ಕೈಗೊಳ್ಳದಿರುವುದು, ಕರಾವಳಿ ಭಾಗಕ್ಕೆ ಯಾವತ್ತೂ ತಾರತಮ್ಯ ಮಾಡುತ್ತ ಬಂದಿರುವ ಹತ್ತಾರು ಪ್ರಕ್ರಿಯೆಗಳಲ್ಲಿ ಒಂದೆಂಬಂತೆ ಸೇರಿಕೊಂಡಂತಾಗಿದೆ. ಇನ್ನು ಕರಾವಳಿಯಲ್ಲಿ ಭತ್ತದ ಬೆಳೆ ಗಣನೀಯವಾಗಿ ಕಡಿಮೆಯಾಗಿದ್ದು, ವಿದೇಶಗಳ ವಾಣಿಜ್ಯ ಕೃಷಿಯ ಹಾವಳಿಯಿಂದಾಗಿ ಭತ್ತದ ಕೃಷಿ ಮೂಲೆಗುಂಪಾಗುತ್ತಿದೆ.

ದೇಸೀ ಮೂಲತಳಿಗಳು ಕಣ್ಮರೆಯಾಗುತ್ತಿವೆ. ಬಹುತೇಕ ಕೃಷಿಕುಟುಂಬದ ಇಂದಿನ ಮಕ್ಕಳಿಗೆ ಅಕ್ಕಿಯ ಮೂಲ ಯಾವುದು, ಹೇಗೆ ತಯಾರಾಗುತ್ತದೆ ಎಂದು ತಿಳಿದಿಲ್ಲದಿರುವುದು ವಿಷಾದನೀಯ. ಇಂದಿನ ಶಾಲಾಮಕ್ಕಳು ‘ಭತ್ತ ಹೇಗಿರುತ್ತೆ ಮಿಸ್?’ ಎಂದು ಕೇಳಿದ ಘಟನೆ ಕೂಡ ಮಾಧ್ಯಮಗಳಲ್ಲಿ ವರದಿಯಾಗಿದೆ. ಇದೆಲ್ಲವೂ ಆಹಾರದ ಆತಂಕಕ್ಕೆ, ತಲೆಮಾರಿನಿಂದ ತಲೆಮಾರಿಗೆ ಮರೆಯಾಗುತ್ತಿರುವ ಕೃಷಿಕ ಬದುಕಿಗೆ ಪ್ರಾತ್ಯಕ್ಷಿಕೆಗಳು. ಅದರಲ್ಲೂ, ಸಾಲ ಯೋಜನೆ ಮತ್ತು ಭತ್ತದ ಬೆಳೆಗೆ ಕೊಡುವ ಸಾಲ, ವಿಮೆ ವಿಚಾರದಲ್ಲಿ ತಾರತಮ್ಯವಿದೆ. ಇದನ್ನು ಸರಿಪಡಿಸಿ,
ಬೆಂಬಲ ಬೆಲೆಯನ್ನು ಹೆಚ್ಚಿಸಬೇಕಿದೆ. ಮೇಲಾಗಿ, ಇಂದಿನ ಯುವಜನತೆ ದೇಸೀ ಕೃಷಿಯತ್ತ ಆಕರ್ಷಿತರಾಗಲು ಸಮರ್ಪಕ ಯೋಜನೆ ರೂಪಿಸಬೇಕಿರುವುದು ಸ್ಥಳೀಯ ಸರಕಾರಗಳ ಕರ್ತವ್ಯವೂ ಹೌದು.

ಕೇರಳ, ಆಂಧ್ರಪ್ರದೇಶ, ತೆಲಂಗಾಣ ಮೊದಲಾದ ಹೊರ ರಾಜ್ಯಗಳಿಂದ ಹೆಚ್ಚು ಅಕ್ಕಿ ಬರುತ್ತಿವೆ. ಈ ಕಾರಣಕ್ಕಾಗಿಯೇ
ಸ್ಥಳೀಯ ರೈತರ ಬೆಳೆಗೆ ಸೂಕ್ತ ದರವೂ ಸಿಗುತ್ತಿಲ್ಲ. ಕೇಂದ್ರ ಸರಕಾರ ಈಗಾಗಲೇ ಕ್ವಿಂಟಾಲ್‌ಗೆ 2300 ರು. ಬೆಂಬಲ ಬೆಲೆ ಘೋಷಣೆ ಮಾಡಿದೆ. ಆದರೆ ರಾಜ್ಯ ಸರಕಾರ ಈವರೆಗೂ ಈ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಭತ್ತ ಖರೀದಿ ಕೇಂದ್ರ ತೆರೆಯುವ ಹೊತ್ತಿಗೆ ಜನವರಿ, ಫೆಬ್ರವರಿ ಆಗಲಿದೆ. ಕರಾವಳಿ ರೈತರ ಬಗ್ಗೆ ಸರಕಾರ ಇಷ್ಟು ನಿರ್ಲಕ್ಷ್ಯ ಧೋರಣೆ ಹೊಂದಿದರೆ ರೈತರಿಗೆ ಭತ್ತ ಬೆಳೆಯಲು ಉತ್ತೇಜನ ಸಿಗುವುದಾದರೂ ಹೇಗೆ? ಸರಕಾರದಿಂದ ಭತ್ತದ ಬೆಳೆಗೆ ಸೂಕ್ತ ಪ್ರೋತ್ಸಾಹ ಸಿಗಬೇಕು ಮತ್ತು ತಳಿ ಸಂವರ್ಧನೆಯಲ್ಲಿ ಕೃಷಿ ವಿಶ್ವವಿದ್ಯಾಲಯಗಳಿಂದ ಹೊಸ ಪ್ರಯೋಗ ನಡೆದಾಗ ಆದಷ್ಟು ಶೀಘ್ರವಾಗಿ ಅದನ್ನು ರೈತರಿಗೆ ಮುಟ್ಟಿಸುವ ಕಾರ್ಯ ಆಗಬೇಕು.

ಸರಕಾರವು ಭತ್ತದ ಕೃಷಿಗೆ ಹಾಗೂ ರೈತರಿಗೆ ಪ್ರೋತ್ಸಾಹ ನೀಡದೇ ಇದ್ದಲ್ಲಿ ಮುಂದೊಂದು ದಿನ ಕರಾವಳಿಯ ಭತ್ತದ ಗದ್ದೆಗಳು ಹಡಿಲು ಬೀಳುವುದರಲ್ಲಿ ಯಾವುದೇ ಸಂಶಯವಿಲ್ಲ ಹಾಗೂ ಇದರ ಪೂರ್ಣ ಜವಾಬ್ದಾರಿಯನ್ನು ಸರಕಾರ ವೇ ಹೊರಬೇಕಾದಿತು. ಭತ್ತದ ಕೃಷಿ ಕಡಿಮೆಯಾದಂತೆ ಅಕ್ಕಿಯ ಬೆಲೆ ಏರಿಕೆಯಾಗುತ್ತದೆ. ಆಗ ಇಡೀ ವ್ಯವಸ್ಥೆಯೇ ತಲ್ಲಣವಾಗಲಿದೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಸರಕಾರ ಇನ್ನಾದರೂ ಭತ್ತ ಬೆಳೆಯುವ ಕೃಷಿಕರಿಗೆ ಪ್ರೋತ್ಸಾಹ ನೀಡಲು ಮುಂದಾಗಲೇಬೇಕು. ರೈತರ ಬೇಡಿಕೆಗನುಗುಣವಾಗಿ ಸರಕಾರ ಯೋಚಿಸಬೇಕಲ್ಲವೇ?

ಇದನ್ನೂ ಓದಿ: Gururaj Gantihole Column: ದಮನಿತರ ಬದುಕಿಗೆ ಆಸರೆಯಾದ ಡಿ.ಸಿ. ಭೂಮಿ ಯೋಜನೆ !