Thursday, 24th October 2024

Gururaj Gantihole Column: ಭ್ರಷ್ಟಾಚಾರದ ತಾಣಗಳಾಗುತ್ತಿರುವ ವಿವಿಗಳು !

ಗಂಟಾಘೋಷ

ಗುರುರಾಜ್‌ ಗಂಟಿಹೊಳೆ

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ದೇಶ-ವಿದೇಶಗಳು ತಮ್ಮ ಶಿಕ್ಷಣ ಪದ್ಧತಿಯಲ್ಲಿ ಕ್ರಾಂತಿಕಾರಕ ಸುಧಾರಣೆಗಳನ್ನು ತರುತ್ತಿದ್ದರೆ, ಕರ್ನಾಟಕದಲ್ಲಿ ಮಾತ್ರ ರಾಜಕೀಯ ಶಕ್ತಿಗಳು ಶಿಕ್ಷಣದ ಹೆಸರಿನಲ್ಲಿ ರಾಜಕೀಯದ ಕೆಸರೆರಚುತ್ತ ಯುವಜನರ ಭವಿಷ್ಯದ ಜತೆ ಚೆಟವಾಡುತ್ತಿರುವುದು ದುರಂತ.

ಜಗತ್ತಿನ ಜ್ಞಾನದೇಗುಲವೆಂದೇ ಖ್ಯಾತವಾಗಿದ್ದ ಭಾರತಕ್ಕೆ ವಿದ್ಯಾರ್ಜನೆಗಾಗಿ ದೂರದ ದೇಶಗಳಿಂದ ಜನರು ಬರುತ್ತಿದ್ದ ಕಾಲವಿತ್ತು. ಕಾರಣ ನಮ್ಮಲ್ಲಿ ತಕ್ಷಶಿಲಾ, ನಳಂದ, ವಿಕ್ರಮಶಿಲಾ, ವಲ್ಲಭಿ, ಸೋಮಪುರ, ನಾಗಾರ್ಜುನ, ಪುಷ್ಪಗಿರಿಯಂಥ ವಿಖ್ಯಾತ ವಿಶ್ವವಿದ್ಯಾಲಯಗಳಿದ್ದವು. ನಿಷ್ಕಲ್ಮಶ ಮನದಿಂದ ಕಲಿಸಲು, ಮುಂದಿನ ಸರ್ವಶ್ರೇಷ್ಠ ಜನಾಂಗವನ್ನು ರೂಪಿಸಲು ಹವಣಿಸುತ್ತಿದ್ದ ಧರ್ಮಪಾಲ, ನಾಗಾರ್ಜುನ, ಪಾಣಿನಿ, ಚಾಣಕ್ಯ, ಆರ್ಯಭಟರಂಥ ಪ್ರಖ್ಯಾತ ಗುರುಗಳಿದ್ದರು. ಹೀಗಾಗಿ ಭಾರತವು ನೂರಾರು ವರ್ಷಗಳಿಂದ ‘ವಿಶ್ವಗುರು’ ಸ್ಥಾನದಲ್ಲಿ ವಿರಾಜಮಾನ ವಾಗಿತ್ತು. ದೂರದ ಚೀನಾ, ಜಪಾನ್, ಟಿಬೆಟ್‌ಗಳ ಪ್ರಕಾಂಡ ಪಂಡಿತರೂ ವಿದ್ಯಾರ್ಥಿ ಗಳಾಗಿ ನಮ್ಮಲ್ಲಿಗೆ ಕಲಿಯಲು ಬರುತ್ತಿದ್ದರು.

ಇಂದಿನ ಜಗತ್ತು ಬದಲಾಗಿದೆ. ಭಾರತವೂ ಆಧುನಿಕ ನಾಗರಿಕತೆಯ ಹಾದಿಯಲ್ಲಿ ಬದಲಾವಣೆಗೊಳಪಟ್ಟಿದೆ. ಇಲ್ಲಿನ ಹಲವು ಶಿಕ್ಷಣ ಸಂಸ್ಥೆಗಳು ದೇಶ-ವಿದೇಶಗಳ ಶಿಕ್ಷಣ ಪದ್ಧತಿಯನ್ನು ಅನುಸರಿಸುತ್ತಿವೆ. ಕಲಿಕೆಗಾಗಿ ನಮ್ಮ ವಿದ್ಯಾರ್ಥಿ ಗಳು ವಿದೇಶಗಳಿಗೆ ಹೋಗುವುದು, ವಿದೇಶಿ ವಿದ್ಯಾರ್ಥಿಗಳು ಭಾರತಕ್ಕೆ ಆಗಮಿಸುವುದು ನಿರಂತರವಾಗಿದೆ. ಭಾರತ ದಲ್ಲಿಂದು ಕೇಂದ್ರದ ಅಧೀನದ 50 ವಿಶ್ವವಿದ್ಯಾಲಯಗಳಿದ್ದರೆ (ವಿ.ವಿ.), ರಾಜ್ಯ ಸಂಬಂಧಿತ 410ಕ್ಕೂ ಹೆಚ್ಚು ವಿ.ವಿ. ಗಳು, 340 ಖಾಸಗಿ ವಿ.ವಿ.ಗಳು ಸೇರಿದಂತೆ ಒಟ್ಟು 1170ರಷ್ಟು ವಿ.ವಿ.ಗಳಿವೆ ಎಂಬ ಅಂದಾಜಿದೆ.

ಕರ್ನಾಟಕದಲ್ಲಿ ಉನ್ನತ ಶಿಕ್ಷಣದ ಅಡಿಯಲ್ಲಿ 41 ರಾಜ್ಯ ಸರಕಾರಿ ವಿ.ವಿ.ಗಳು, 27 ಖಾಸಗಿ ವಿ.ವಿ.ಗಳು, 12 ಡೀಮ್ಡ್
ವಿ.ವಿ.ಗಳು ಮತ್ತು 9 ಪ್ರಮುಖ ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳಿವೆ. ರಾಜ್ಯಪಾಲರು ಸಹಜವಾಗಿ ಆಯಾ ರಾಜ್ಯಗಳ
ವಿ.ವಿ.ಗಳಿಗೆ ಕುಲಪತಿಗಳಾಗಿ ನಿಯುಕ್ತರಾಗಿರುತ್ತಾರೆ. ಈ ಮೂಲಕ ಅವರು ಕಮಿಟಿ ಸಭೆಗಳಲ್ಲಿ, ಪ್ರಮುಖ ನಿರ್ಧಾರ
ಕೈಗೊಳ್ಳುವಲ್ಲಿ, ಸರಕಾರದ ಗಮನ ಸೆಳೆಯುವಲ್ಲಿ, ನೇಮಕಾತಿ, ಅಭಿವೃದ್ಧಿ, ವಿಸ್ತರಣೆಗಳ ಜತೆಗೆ ಘಟಿಕೋತ್ಸವ ದಂಥ ಪ್ರಮುಖ ಸಮಾರಂಭಗಳ ಅಧ್ಯಕ್ಷತೆ ವಹಿಸುವಲ್ಲಿ ಅಧಿಕಾರ ಹೊಂದಿರುತ್ತಾರೆ.

ಉಪಕುಲಪತಿಗಳ ಆಯ್ಕೆ, ಗೌರವ ಪುರಸ್ಕಾರ ನೀಡುವಿಕೆ, ಕಾರ್ಯಕಾರಿ ಮಂಡಳಿಗೆ ಸದಸ್ಯರ ನೇಮಕ ಮುಂತಾದವು ರಾಜ್ಯಪಾಲರ ಪ್ರಮುಖ ಹೊಣೆಗಳಾಗಿರುತ್ತವೆ. ಹಾಗೆಯೇ, ಏನಾದರೂ ಹಗರಣವಾದಲ್ಲಿ ಸಂಬಂಧಪಟ್ಟವರನ್ನು ಅಮಾನತುಗೊಳಿಸುವ, ತಡೆಹಿಡಿಯುವ, ತನಿಖೆಗೊಳಪಡಿಸುವ ಅಧಿಕಾರವೂ ರಾಜ್ಯಪಾಲರಿಗೆ ಸೇರಿರುತ್ತದೆ.

ಹೀಗೆ ರಾಜ್ಯದ ಪ್ರಮುಖ ವಿ.ವಿ.ಗಳಲ್ಲಿ, ಉನ್ನತ ಶಿಕ್ಷಣ ಮತ್ತು ಫಲಿತಾಂಶಗಳ ಮೂಲಕ ಗುರುತಿಸಿಕೊಂಡಿರುವ
ಮಂಗಳೂರು ವಿ.ವಿ.ಯೂ ಸೇರಿದೆ. ಇದನ್ನೇ ಉಲ್ಲೇಖಿಸಲು ಕಾರಣ, ಈ ಹಿಂದೆ ಇದ್ದ Solidity, Credibility, Honesty, Quality of Education ಎಂಬ ಆಶಯ ಅಲ್ಲಿ ಕಣ್ಮರೆಯಾಗಿದೆ. ಕ್ಯಾಂಪಸ್‌ನೊಳಗೆ ಒಮ್ಮೆ ಸುತ್ತಾಡಿದರೆ ಈ ಭಾವನೆ ಕಾಡದಿರದು. ಸುಂದರ ಹುಲ್ಲುಹಾಸಿನ ಕ್ಯಾಂಪಸ್‌ನಲ್ಲಿ ‘ಜ್ಞಾನವೇ ಬೆಳಕು’ ಎಂಬ ಅಡಿಬರಹ ಹೊತ್ತು, ‘ಮಂಗಳ ಗಂಗೋತ್ರಿ’ ಎಂಬ ಹೆಸರಿನೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯ ಕೊಣಾಜೆಯಲ್ಲಿ ಸುಮಾರು 360 ಎಕರೆ ಪ್ರದೇಶ ವ್ಯಾಪ್ತಿಯಲ್ಲಿ ಮಂಗಳೂರು ವಿ.ವಿ. ಸ್ಥಾಪಿತವಾಗಿದೆ.

ಮೊದಲು ಇದು ಮೈಸೂರು ವಿ.ವಿ.ಯ ಸ್ನಾತಕೋತ್ತರ ಕೇಂದ್ರವಾಗಿದ್ದು, 1980ರಲ್ಲಿ ಸ್ವತಂತ್ರ ವಿ.ವಿ.ಯಾಗಿ ರೂಪು ಗೊಂಡಿತು. 2023ರಲ್ಲಿ ಕೊಡಗು ವಿ.ವಿ. ಪ್ರಾರಂಭವಾಗುವ ತನಕ ಆ ಜಿಲ್ಲೆಯ ಪದವಿ-ಸ್ನಾತಕೋತ್ತರ ಕಾಲೇಜುಗಳು ಕೂಡ ಮಂಗಳೂರು ವಿ.ವಿ.ಯ ಆಡಳಿತ ವ್ಯಾಪ್ತಿಗೆ ಒಳಪಟ್ಟಿದ್ದವು. ಪ್ರಸ್ತುತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಪದವಿ-ಸ್ನಾತಕೋತ್ತರ ಕಾಲೇಜುಗಳು ಈ ವಿ.ವಿ.ಯ ವ್ಯಾಪ್ತಿಗೆ ಒಳಪಡುತ್ತವೆ.

ಈ ವಿ.ವಿ.ಗೆ ಮಂಜೂರಾದ ಹುದ್ದೆ 273ರಷ್ಟಿದ್ದರೆ, ಇಲ್ಲಿನ ಅತಿಥಿ ಉಪನ್ಯಾಸಕರ ಸಂಖ್ಯೆಯೇ 249 ರಷ್ಟಿದೆ.
ಇರುವ ಹುದ್ದೆಯ ಸುಮಾರು ಶೇ.90ಕ್ಕೂ ಹೆಚ್ಚು ಪ್ರಾಧ್ಯಾಪಕರ ಅಗತ್ಯ ವಿ.ವಿ.ಗೆ ಇದೆ. ಮಂಜೂರಾದ ಹುದ್ದೆಗಳ ಪೈಕಿಯೂ ಭರ್ತಿಯಾಗಿರುವುದು 219 ಮಾತ್ರ. ಅಂದರೆ ಸರಕಾರ ನೇಮಿಸಿದ ಉಪನ್ಯಾಸಕರಿಗಿಂತ ಹೆಚ್ಚಿನ ಅತಿಥಿ ಉಪನ್ಯಾಸಕರೇ ವಿ.ವಿ.ಯ ವಿವಿಧ ಕೋರ್ಸುಗಳಿಗೆ ಪಾಠ ಮಾಡುತ್ತಿದ್ದಾರೆ. ಈ ಅತಿಥಿ ಉಪನ್ಯಾಸಕರಲ್ಲಿ ಒಂದು ಭದ್ರತಾ ಭಾವನೆಯಿಲ್ಲ. ಇಂಥ ಮನಸ್ಥಿತಿಯಲ್ಲಿ ಅದಿನ್ನೆಷ್ಟು ಆತ್ಮವಿಶ್ವಾಸದಿಂದ ಅವರು ಪಾಠ ಮಾಡಬಹುದು? ಇರುವ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳೇ ಬರುತ್ತಿಲ್ಲ, ಸಾವಿರಾರು ಅರ್ಜಿಗಳ ಸಲ್ಲಿಕೆಯಾದರೂ ಪ್ರವೇಶ ಪಡೆಯು ವವರು 200-400ರಷ್ಟು ಮಾತ್ರ. ಹೀಗೇಕೆ ಎಂಬುದರ ಕಡೆಗೆ ವಿ.ವಿ.ಯ ಆಡಳಿತ ಮಂಡಳಿ ಕಣ್ಣೆತ್ತಿಯೂ ನೋಡು ತ್ತಿಲ್ಲ. 15ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ ವಿಭಾಗವನ್ನು ತಾತ್ಕಾಲಿಕವಾಗಿ ಬಂದ್ ಮಾಡಬೇಕೆಂಬುದು ಸರಕಾರದ ನಿರ್ದೇಶನ. ಈ ಮಟ್ಟವನ್ನು 10ಕ್ಕೆ ಇಳಿಸಿದರೂ ವಿದ್ಯಾರ್ಥಿಗಳು ಸೇರಿಕೊಳ್ಳುತ್ತಿಲ್ಲ.

ಹೀಗಾಗಿ ಹಲವು ವಿಭಾಗದ 10-15 ಕೋರ್ಸ್‌ಗಳನ್ನು ಮುಚ್ಚಲಾಗಿದೆ ಎನ್ನಲಾಗಿದೆ. ಇನ್ನು ಪಿಜಿಗೆ ಸಂಬಂಧಿಸಿ 28 ವಿಭಾಗಗಳು, 42 ಕೋರ್ಸ್‌ಗಳಿದ್ದು 10ರಷ್ಟು ಕೋರ್ಸ್‌ಗಳಿಗೆ ಒಬ್ಬ ವಿದ್ಯಾರ್ಥಿಯೂ ಪ್ರವೇಶ ಪಡೆದಿಲ್ಲ. ಹೀಗಾಗಿ ಕೋರ್ಸ್‌ಗಳನ್ನು ಮುಚ್ಚುತ್ತಿರುವುದರಿಂದ ಅತಿಥಿ ಬೋಧಕರ ಬದುಕು ಅತಂತ್ರವಾಗುತ್ತಿದೆ. ಇವೆಲ್ಲದರ ಮಧ್ಯೆ ವಿ.ವಿ.ಯ ಸಿಂಡಿಕೇಟ್, ಅಲ್ಲಿನ ನೌಕರರನ್ನು ಇಲ್ಲಿಗೆ, ಇಲ್ಲಿನವರನ್ನು ಮತ್ತೆಲ್ಲಿಗೋ ಎಂಬಂತೆ ನಿಯೋಜಿಸುತ್ತಿದೆ. ಇನ್ನು ಕೆಲವರು ಸುಮ್ಮನೆ ಸಂಬಳ ಎಣಿಸುತ್ತಿದ್ದಾರೆ. ಇದೇ ಕಾರಣದಿಂದ ಅರ್ಜಿ ಸಲ್ಲಿಕೆ ದಿನಾಂಕವನ್ನು ೨ ಬಾರಿ ವಿಸ್ತರಿಸಲಾಗಿತ್ತು.

ಇಲ್ಲಿ ಅಸ್ತಿತ್ವದಲ್ಲಿದ್ದ ಶಿಕ್ಷಣ ವ್ಯವಸ್ಥೆ ದಿಢೀರ್ ಬದಲಾದದ್ದು. ಮೊದಲು ಕಲಿಸುತ್ತಿದ್ದ ‘ರಾಷ್ಟ್ರೀಯ ಶಿಕ್ಷಣ ನೀತಿ’
(ಎನ್‌ಇಪಿ) ಪದ್ಧತಿ ಬಿಟ್ಟು, ರಾಜ್ಯ ಸರಕಾರ ನಿಗದಿಪಡಿಸಲು ಮುಂದಾದ ‘ರಾಜ್ಯ ಶಿಕ್ಷಣ ನೀತಿ’ (ಎಸ್‌ಇಪಿ) ಪದ್ಧತಿಗೆ
ಬದಲಾಗುವ ವಿಷಯದಲ್ಲಿ ಸಾಕಷ್ಟು ಗೊಂದಲಗಳಿವೆ. ಅಂದರೆ, ಈಗಾಗಲೇ ಎನ್‌ಇಪಿ ಅಡಿ ಕಲಿಯುತ್ತಿದ್ದವರು
ಎಸ್‌ಇಪಿಗೆ ಬರಬೇಕೇ ಅಥವಾ ಅದರಲ್ಲೇ ಮುಂದುವರಿಯಬಹುದೇ? 3 ವರ್ಷದ ಪದವಿಯಲ್ಲಿ ಒಂದು ವರ್ಷ
ಪೂರೈಸಿ ಪ್ರಮಾಣಪತ್ರ, 2 ವರ್ಷ ಪೂರೈಸಿ ಡಿಪ್ಲೊಮಾ, 3 ವರ್ಷದ ಪದವಿ, 4 ವರ್ಷದ ಆನರ‍್ಸ್ ಪದವಿ ಪಡೆಯಲು
ಎಸ್‌ಇಪಿಯಲ್ಲಿ ಅವಕಾಶವಿದೆಯೇ? ಎಂಬ ಗೊಂದಲಗಳು. ಎಸ್‌ಇಪಿ ರೂಪಿಸಲು ತಜ್ಞರ ಸಮಿತಿ ರಚನೆಯಾಗಿದೆ,
ಅಂತಿಮ ವರದಿ ಬಂದಿಲ್ಲ. ಅದು ಅನುಷ್ಠಾನವಾದ ಮೇಲೆ ಎನ್‌ಇಪಿ ಅಡಿ ಓದಿದ ವಿದ್ಯಾರ್ಥಿಗಳ ಪಾಡೇನು? ಇದಕ್ಕೆ ರಾಜ್ಯ ಸರಕಾರ ಉತ್ತರದಾಯಿ ಆಗಬೇಕಲ್ಲವೇ? ಕೆಲ ಡಿಗ್ರಿಗಳ ವಿದ್ಯಾರ್ಥಿಗಳು ಹಳೇ ಪಠ್ಯಕ್ರಮದಲ್ಲಿದ್ದರೆ
ಅವರನ್ನು ಎನ್‌ಇಪಿಯವರೊಂದಿಗೆ ಪರೀಕ್ಷೆಗೆ ಕೂರಿಸಲಾಗುತ್ತಿದೆ.

ಇಂಥ ಘಟನೆಗಳು ಬಹುತೇಕ ವಿ.ವಿ.ಗಳಲ್ಲಿ ಕಂಡುಬರುತ್ತಿರುವುದರಿಂದ ಇಡೀ ಶಿಕ್ಷಣ ವ್ಯವಸ್ಥೆ ಗೊಂದಲದ ಗೂಡಾಗಿದೆ. ಅದು ಉನ್ನತ ಶಿಕ್ಷಣದ ಮೂಲೋದ್ದೇಶವನ್ನೇ ಕೊಂದುಹಾಕಿದೆ. ಉಜ್ವಲ ಭವಿಷ್ಯ, ಕನಸು ಹೊತ್ತು ದೇಶದ ಆಸ್ತಿಯಾಗಬೇಕಿದ್ದ ಯುವಜನರನ್ನು ಕತ್ತಲಕೂಪಕ್ಕೆ ತಳ್ಳುತ್ತಿವೆ ನಮ್ಮ ಆಡಳಿತಾರೂಢ ಸರಕಾರ,
ಇಲಾಖೆ ಮತ್ತು ವಿ.ವಿ.ಗಳು.

‘ಮಂಗಳ ಗಂಗೋತ್ರಿ’ಯು ಭ್ರಷ್ಟಾಚಾರದ ಕೂಪವಾಗಿ ಮಾರ್ಪಟ್ಟಿರುವುದಕ್ಕೆ 2015-16ರಲ್ಲಿ ಆರಂಭಿಸಿದ 32
ಕೋಟಿ ರು. ವೆಚ್ಚದ ವಿದ್ಯಾರ್ಥಿನಿಲಯದ ಕಾಮಗಾರಿಯೇ ಸಾಕ್ಷಿ. 2024 ಮುಗಿಯುತ್ತ ಬಂದಿದ್ದರೂ ಅದು ಮುಗಿ
ದಿಲ್ಲ. ಕಾಮಗಾರಿ ವೆಚ್ಚ 32 ರಿಂದ 54 ಕೋಟಿಗೆ ಏರಿಕೆಯಾಗಿ, ಒಟ್ಟು 64 ಕೋಟಿಗೂ ಅಧಿಕ ಖರ್ಚಾಗಿದ್ದರೂ, ಅದು ಹೆಚ್ಚುವರಿಯಾಗಿ 30 ಕೋಟಿ ಹಣ ಬೇಡುತ್ತಿದೆಯಂತೆ!

ಇಂಥ ಯೋಜನೆಗೆ ಆಂತರಿಕ ಸಂಪನ್ಮೂಲ ಬಳಸಲಾಗುವುದು ಎಂದು ಸರಕಾರಕ್ಕೆ ವಿ.ವಿ. ತಿಳಿಸಿತ್ತಂತೆ. ಹೀಗಾಗಿ, ನಿವೃತ್ತ ಪ್ರಾಧ್ಯಾಪಕರ ಪಿಂಚಣಿಗೆ ಮೀಸಲಾಗಿದ್ದ ಹಣವನ್ನು ಈ ಕಾಮಗಾರಿ ನುಂಗಿಹಾಕಿದೆ. ಗುತ್ತಿಗೆದಾರರು ಇದೇ ವಿಚಾರವಿಟ್ಟುಕೊಂಡು ಕೋರ್ಟ್‌ನಲ್ಲಿ ದಾವೆ ಹೂಡಿ, ಜಾಗದ ಜತೆಗೆ ಕಟ್ಟಡವನ್ನೂ ತಮಗೆ ಬಿಟ್ಟುಕೊಡಬೇಕೆಂಬ
ಬೇಡಿಕೆಯಿಟ್ಟಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದಲ್ಲದೆ, ಗುತ್ತಿಗೆ ಆಧಾರದಲ್ಲಿರುವ ಅತಿಥಿ ಉಪನ್ಯಾಸಕರಿಗೆ
ಕೆಲ ತಿಂಗಳಿಂದ ನಿಗದಿತ ಸಂಬಳವೂ ನಿಂತಿದ್ದು, ಗೌರವಧನ ಕೊಡಲೂ ವಿ.ವಿ.ಯಲ್ಲಿ ಹಣವಿಲ್ಲ. ನಿವೃತ್ತರು ಪಿಂಚಣಿ ಪಡೆಯಲೆಂದು 2-3 ವರ್ಷಗಳಿಂದ ಈ ಇಳಿವಯಸ್ಸಿನಲ್ಲೂ ವಿ.ವಿ.ಗೆ ಅಲೆಯುತ್ತಿದ್ದಾರೆ. ಹೀಗೆ ಅರೆಬರೆ ವ್ಯವಸ್ಥೆ, ಅವೈಜ್ಞಾನಿಕ ಯೋಜನೆಗಳಿಂದಾಗಿ ಕಟ್ಟಡಗಳೆಲ್ಲಾ ಬಿಕೋ ಎನ್ನುತ್ತಿದ್ದು, ಅವುಗಳ ಗೋಡೆಗಳು ನಿರ್ವಹಣೆಯಿಲ್ಲದೆ ಪಾಚಿಗಟ್ಟಿವೆ.

ಕ್ಯಾಂಪಸ್‌ನಲ್ಲಿ ಬೆಳೆದಿರುವ ಮುಳ್ಳುಗಂಟಿಗಳನ್ನೂ ಚೊಕ್ಕ ಮಾಡದೆ ಅದರ ಅಂದಗೆಟ್ಟಿದೆ. ವಿ.ವಿ.ಯ ಕಥೆಯೇ ಹೀಗಾದರೆ, ಇದರಡಿಯಲ್ಲಿರುವ ಅನೇಕ ಕಾಲೇಜುಗಳ ದಕ್ಷತೆ, ಪರೀಕ್ಷೆ ನಡೆಸುವಲ್ಲಿನ ಪಾರದರ್ಶಕತೆ ದೇವರಿಗೇ ಪ್ರೀತಿ. ಒಟ್ಟಾರೆ, ‘ದೀಪದ ಕೆಳಗೆ ಕತ್ತಲು’ ಎಂಬಂತಿದೆ. ಹಿಂದಿದ್ದ ಕೆಲವರು ಬೇಕಾಬಿಟ್ಟಿಯಾಗಿ ಪಿಜಿ ಸೆಂಟರ್‌ಗಳಿಗೆ ಅನುಮತಿಸಿದ್ದು, ಪದವಿ-ಉನ್ನತ ಪದವಿಯಂಥ ಶ್ರೇಣಿಗೂ ಸಿಕ್ಕ ಸಿಕ್ಕ ಕಾಲೇಜುಗಳಿಗೆ ಅನುಮತಿಸಿದ್ದು ಮತ್ತು ಅಗತ್ಯಕ್ಕಿಂತ 3 ಪಟ್ಟು ಹೆಚ್ಚು, ಅಂದರೆ 280ಕ್ಕೂ ಹೆಚ್ಚು ಬೋಧಕೇತರ ಸಿಬ್ಬಂದಿಯನ್ನು ನೇಮಿಸಿಕೊಂಡಿದ್ದು ಸಾಕಷ್ಟು ಅನುಮಾನಗಳನ್ನು ಹುಟ್ಟಿಸುತ್ತವೆ. ಮಾನದಂಡಕ್ಕನುಗುಣವಾಗಿ ಇರಬೇಕಿದ್ದ ಸುಸಜ್ಜಿತ ಪ್ರಯೋಗಾ ಲಯಗಳು, ಮೂಲಭೂತ ಸೌಲಭ್ಯಗಳ ಕೊರತೆಯಿಂದಾಗಿ ‘ಎನ್‌ಎಎಸಿ ಗ್ರೇಡ್-ಎ’ನಿಂದ ‘ಗ್ರೇಡ್ ಬಿ’ಗೆ ಕುಸಿದ ಪರಿಣಾಮ ವಿದ್ಯಾರ್ಥಿಗಳ ಪ್ರವೇಶವು ನಿಂತಿತು.

ಹೀಗಾಗಿ ಕೇಂದ್ರದ ಅನುದಾನ ಭಾಗಶಃ ನಿಂತಿತು. ನಿಯಮ ಮೀರಿ ಉದ್ಯೋಗಿಗಳ ನೇಮಕ, ಬೇಕಾಬಿಟ್ಟಿಯ
ಕಟ್ಟಡ ಕಾಮಗಾರಿಗಳು, ಮೀಸಲಿಟ್ಟ ವಿ.ವಿ.ಯ ಹಣವನ್ನು ವಿವಿಧ ಕಾರ್ಯಕ್ಕೆ ಬಳಸಿ ನಷ್ಟಗೊಳಿಸಿದ ಕರ್ತವ್ಯ ಲೋಪದ ಆರೋಪವೂ ಈ ಹಿಂದಿನವರ ಮೇಲಿದೆ. ಇದಕ್ಕೆ ಸಂಬಂಧಿಸಿ, ‘ವಿ.ವಿ.ಯ ಒಳಗಿನ ಸಮಸ್ಯೆಗಳನ್ನು, ಅನಗತ್ಯ ನೌಕರರ ಸಂಖ್ಯೆಯನ್ನು ಸರಿಪಡಿಸಿ, ಸರಕಾರದ ನೀತಿ- ನಿಯಮಗಳಿಗೆ ಹೊಂದಿಕೊಂಡು ಬನ್ನಿ; ಹಣಕಾಸು ಒದಗಿಸುವ ಕುರಿತಂತೆ ಗಮನಿಸೋಣ’ ಎಂದು ಉನ್ನತ ಶಿಕ್ಷಣ ಸಚಿವರು ಹೇಳಿದ್ದು ಮಾಧ್ಯಮಗಳಲ್ಲಿ ವರದಿ ಯಾಗಿದೆ.

ಇದಾದ ಬಳಿಕ, ಸಿಕ್ಕಸಿಕ್ಕವರನ್ನೆಲ್ಲ ಕೆಲಸದಿಂದ ತೆಗೆಯಲಾಗುತ್ತಿದ್ದು ಈ ಕುರಿತೂ ಅಸಮಾಧಾನವೆದ್ದಿದೆ. ಈಗಿನ ವರು, ‘ನಾವೇನು ಮಾಡಲು ಸಾಧ್ಯ; ಹಿಂದಿನವರು ಮಾಡಿದ ತಪ್ಪು ಗಳನ್ನು ಸರಿಪಡಿಸಲು ಯತ್ನಿಸುತ್ತಿದ್ದೇವೆ’ ಎನ್ನುತ್ತಿದ್ದಾರೆ. ಪ್ರತಿಷ್ಠಿತ ವಿ.ವಿ.ಯೊಂದು ಹೀಗೆ ಕತ್ತಲಲ್ಲಿ ಮುಳುಗಿರುವುದನ್ನು, ಆಕರ್ಷಣೆ ಕಳೆದುಕೊಳ್ಳುತ್ತಿ ರುವುದನ್ನು ನೋಡಿದರೆ, ಇದರೊಳಗೆ ಅಡಗಿರುವ ಗೆದ್ದಲು-ತಿಮಿಂಗಿಲಗಳು ಅದನ್ನು ಸರ್ವನಾಶಗೊಳಿಸಲು ಸಜ್ಜಾಗಿವೆ ಎನಿಸುತ್ತದೆ. ಜನರ ತೆರಿಗೆ ಹಣದಿಂದ ನಡೆಯುತ್ತಿರುವ ಇಂಥ ಸಾರ್ವಜನಿಕ ಸಂಸ್ಥೆಗಳ ನಿರ್ವಹಣೆ ಕುರಿತಂತೆ ಪ್ರಶ್ನಿಸಲು ಕೂಲಿ ಕಾರ್ಮಿಕರಿಂದ ಹಿಡಿದು ರಾಜ್ಯಪಾಲ ರವರೆಗೂ ಹಕ್ಕಿದೆ. ಹಾಗಾಗಿ ನಾಗರಿಕರು ತಮ್ಮ ಪ್ರಜ್ಞೆ ಮೆರೆಯಬೇಕಿದೆ.

ಇಡೀ ಆಡಳಿತ ಮಂಡಳಿಯನ್ನು ಬರ್ಖಾಸ್ತುಗೊಳಿಸುವ/ಸೂಪರ್‌ಸೀಡ್ ಮಾಡಿ ಹೊಸ ಆಡಳಿತ ಮಂಡಳಿ ನೇಮಿಸುವ ಮೂಲಕ ಕಾಯಕಲ್ಪ ನೀಡುವಂತಾಗಲು ನಾಗರಿಕರು ರಾಜ್ಯಪಾಲರಿಗೆ, ಇಲಾಖೆಗೆ, ಆಳುಗ ಸರಕಾರಕ್ಕೆ ಬಿಸಿಮುಟ್ಟಿಸಬೇಕಿದೆ. ಹಾಗೆಯೇ, ಇಂಥ ಸ್ಥಳಗಳಲ್ಲಿ ಭ್ರಷ್ಟಾಚಾರ, ಅಪರಾಧಗಳು ನಡೆಯುತ್ತಿದ್ದರೆ ಪ್ರಶ್ನಿಸಿ ತಡೆಯುವ ಹೊಣೆಗಾರಿಕೆಯನ್ನು ಸ್ಥಳೀಯ ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕಿದೆ.

ಪುಟ್ಟಜಾಗ ಸಿಕ್ಕರೂ ವಿದ್ಯೆ ಕಲಿಸುವ ತವಕದಿಂದ ಚಿಕ್ಕ-ಪುಟ್ಟ ಕಾನ್ವೆಂಟುಗಳು ತಲೆಯೆತ್ತುತ್ತಿರುವ ಈ ಕಾಲದಲ್ಲಿ, ವಿಶಾಲ ಪ್ರದೇಶದಲ್ಲಿ ಮೈದಳೆದಿರುವ ಇಂಥದೊಂದು ವಿ.ವಿ.ಯ ಅದ್ಭುತ ವ್ಯವಸ್ಥೆ ಮತ್ತು ವಾತಾವರಣವನ್ನು ಹದಗೆಡಿಸುತ್ತಿರುವವರಿಗೆ ಕೆಲವರು ಶಾಪ ಹಾಕುತ್ತಿದ್ದಾರೆ. ವಿ.ವಿ.ಯು ಇನ್ನಾದರೂ ನವನವೀನ ರೂಪುರೇಷೆ ಗಳೊಂದಿಗೆ ಗುಣಮಟ್ಟದ ಶಿಕ್ಷಣ ನೀಡುವಂತಾಗಲಿ. ತನ್ಮೂಲಕ ‘ಗಂಗೋತ್ರಿ’ಯ ಉದ್ದೇಶ ‘ಮಂಗಳ’ಕರವಾಗಿ ನೆರವೇರಲಿ ಎಂಬುದು ಶಿಕ್ಷಣಪ್ರೇಮಿಗಳ ಆಶಯ.

ಇದನ್ನೂ ಓದಿ: Gururaj Gantihole Column: ಹೈನುಗಾರಿಕೆಯನ್ನು ಕ್ಷೀರೋದ್ಯಮವನ್ನಾಗಿ ವಿಶ್ವಕ್ಕೆ ತೋರಿದ ಭಾರತ !