ಕಳಕಳಿ
ಎಚ್.ಆನಂದರಾಮ ಶಾಸ್ತ್ರೀ
ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹೊಣೆ ಹೊತ್ತಿರುವ ‘ಕಸಾಪ’ ಅಧ್ಯಕ್ಷ ಮಹೇಶ ಜೋಶಿಯವರಿಗೆ ಒಂದಷ್ಟು ಕಿವಿಮಾತುಗಳನ್ನು ಹೇಳಲಿಚ್ಛಿಸುವೆ.
ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ಆದಷ್ಟು ಬೇಗನೆ ಮುಗಿಸಿ, ನಿಗದಿತ ಸಮಯಕ್ಕೆ ಸರಿಯಾಗಿ ಉದ್ಘಾಟನಾ
ಸಮಾರಂಭವನ್ನು ಆರಂಭಿಸಿರಿ. ವಿಳಂಬ ಮಾಡಿ ಸಮ್ಮೇಳನಾಧ್ಯಕ್ಷರ ಭಾಷಣವನ್ನು ಮೊಟಕುಗೊಳಿಸುವ ಚೋದ್ಯ ನಡೆಯದಿರಲಿ. ಮುಖ್ಯಮಂತ್ರಿಯಾದಿಯಾಗಿ ಯಾರ ವಿಳಂಬಿತ ಆಗಮನಕ್ಕೂ ಕಾಯಬೇಡಿ.
ಮೆರವಣಿಗೆಯ ನಂತರ, ಸಮಾರಂಭಕ್ಕೆ ಮುನ್ನ ಗೊ.ರು.ಚನ್ನಬಸಪ್ಪ ಅವರಿಗೆ ಸಾಕಷ್ಟು ವಿಶ್ರಾಂತಿ ದೊರಕುವಂತೆ
ಸಮಯದ ನಿರ್ವಹಣೆ ಮಾಡಿ. ರಾಜಕಾರಣಿಗಳ ಭಾಷಣಗಳು ಚಿಕ್ಕದಾಗಿರಲಿ, ವೇದಿಕೆಯಲ್ಲಿರುವವರ ಹೆಸರು
ಗಳನ್ನೆಲ್ಲಾ ಹೇಳುತ್ತ ಅವರು ಕಾಲಹರಣ ಮಾಡದಿರಲಿ.
ಉದ್ಘಾಟನಾ ಸಮಾರಂಭವೂ ಸೇರಿದಂತೆ ವೇದಿಕೆಯ ಎಲ್ಲ ಕಾರ್ಯಕ್ರಮಗಳಲ್ಲೂ ನಿರೂಪಕರು ಮತ್ತು ಸ್ವಾಗತ-ವಂದನಾರ್ಪಣೆ ಮಾಡುವವರು ಅವಶ್ಯ ಮಾತಿನ ಹೊರತು ಹೆಚ್ಚುವರಿಯಾಗಿ ಒಗ್ಗರಣೆ ಮಾತು ಆಡದಿರಲಿ.
ಅವರಿಗೆ, ನಿಗದಿತ ಅವಧಿಗಿಂತ ಹೆಚ್ಚಿನ ಸಮಯ ನೀಡಬೇಡಿ.
ಗೋಷ್ಠಿಗಳಲ್ಲಿ ವಿಷಯ ಮಂಡಿಸುವವರೂ ತಮ್ಮ ಮಾತನ್ನು ಅನಗತ್ಯ ಹಿಗ್ಗಿಸದೆ ಸಮಯಪಾಲನೆ ಮಾಡುವಂತೆ
ನಯವಾಗಿ ನೋಡಿಕೊಳ್ಳಿ. ಮೈಕಿನ ಸಂಪರ್ಕ ಕಡಿತಗೊಳಿಸುವಂಥ ಅಗೌರವದ ಕ್ರಮ ಬೇಡ. ಸಭಾಸದ ಸಾಮಾ ನ್ಯರು ಏನಾದರೂ ಪ್ರಶ್ನೆ ಕೇಳಿದರೆ ಅದನ್ನು ವಿನಯ ಮತ್ತು ಚಾಕಚಕ್ಯತೆಗಳಿಂದ ನಿರ್ವಹಿಸುವಂತೆ ವೇದಿಕೆಯ ಗಣ್ಯರಿಗೆ ಮೊದಲೇ ಸೂಚನೆ ನೀಡಿಟ್ಟಿರಿ. ವೇದಿಕೆಯ ಮೇಲೆ ಅನಗತ್ಯವಾದ ಒಬ್ಬ ವ್ಯಕ್ತಿಯೂ ಇರದಂತೆ ನೋಡಿ ಕೊಳ್ಳಿ.
ಪುಸ್ತಕ ಇತ್ಯಾದಿ ಮಳಿಗೆಗಳವರಿಗೆ, ಅದರಲ್ಲೂ ಸ್ತ್ರೀಯರಿಗೆ ಮತ್ತು ಸಮ್ಮೇಳನಕ್ಕೆ ಬರುವ ಎಲ್ಲರಿಗೂ ಸಾಕಷ್ಟು ಶೌಚಾಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಅತ್ಯವಶ್ಯ. ಸಮ್ಮೇಳನದ ಒಟ್ಟು ಪ್ರದೇಶವು ಕಸ-ಧೂಳಿನಿಂದ
ಮುಕ್ತವಾಗಿರಬೇಕಾದ್ದೂ ಅಷ್ಟೇ ಅವಶ್ಯ. ಉದ್ಘಾಟನಾ ಮತ್ತು ಸಮಾರೋಪ ಸಮಾರಂಭಗಳಲ್ಲಿ ತಥಾಕಥಿತ ಅಭಿಮಾನಿಗಳು, ಕಾರ್ಯಕರ್ತರು, ಸಂಘಟನೆಗಳವರು ವೇದಿಕೆಗೆ ನುಗ್ಗಿ ರಾಜಕಾರಣಿಗಳಿಗೆ ಹಾರಹಾಕುವ
ಕೆಟ್ಟ ಮತ್ತು ಕಾಲಹರಣದ ಸಂಪ್ರದಾಯಕ್ಕೆ ಸರ್ವಥಾ ಅವಕಾಶ ನೀಡಬೇಡಿ.
ಊಟದ ಅಂಗಳಗಳಲ್ಲಿ ಸಾಕಷ್ಟು ಪೊಲೀಸರು ಮತ್ತು ಸ್ವಯಂಸೇವಕರು ಹಾಜರಿದ್ದು, ಜನರನ್ನು ಮೃದುವಾಗಿ,
ಆದರೆ, ದೃಢವಾಗಿ ನಿಯಂತ್ರಿಸಲಿ. ಸಮಾರಂಭ ನಡೆಯುತ್ತಿರುವಾಗ ವೇದಿಕೆಯ ಮೇಲೆ ಸೆಲ್ಫಿಗಳಿಗೆ ಯಾವ ಕಾರಣಕ್ಕೂ ಅವಕಾಶ ಬೇಡ.
ಉತ್ತಮ ಧ್ವನಿವರ್ಧಕ ವ್ಯವಸ್ಥೆಯು ಸಮ್ಮೇಳನದ ಅತಿಮುಖ್ಯ ಅವಶ್ಯಕತೆ ಎಂಬುದು ನೆನಪಿರಲಿ. ಇದು ಸಾಹಿತ್ಯ ಸಮ್ಮೇಳನ, ರಾಜಕೀಯ ಸಮಾವೇಶವಲ್ಲ ಎಂಬ ಎಚ್ಚರವೂ ಆದ್ಯಂತ ಇರಲಿ. ಪರಿಷತ್ ಅಧ್ಯಕ್ಷರಾದ(ರೂ) ನೀವು ವೇದಿಕೆಗಳಲ್ಲಿ ಕಡಿಮೆ, ನಿರ್ವಹಣೆಯ ಎಡೆಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುವುದು ಭೂಷಣ. ಸಮ್ಮೇಳನ ಯಶಸ್ವಿಯೂ ಸಾರ್ಥಕವೂ ಆಗಲೆಂದು ಹಾರೈಸುತ್ತೇನೆ.
(ಲೇಖಕರು ಹಿರಿಯ ಸಾಹಿತಿ)
ಇದನ್ನೂ ಓದಿ: Raghu Kotian Column: ಮರೆಯಲಾಗದ ದುರ್ಘಟನೆ