Sunday, 15th December 2024

ಸಮೂಹಸನ್ನಿಗೆ ಸಿಲುಕುವುದು ಜನರ ಸ್ವಭಾವ !

ವಿಶ್ವರಂಗ

ರಂಗಸ್ವಾಮಿ ಮೂಕನಹಳ್ಳಿ

ಭಾರತ, ಪಾಕಿಸ್ತಾನ, ಸ್ಪೇನ್, ಜರ್ಮನಿ, ಇಂಗ್ಲೆಂಡ್ ಹೀಗೆ ದೇಶಗಳ ಮತ್ತು ಕ್ರೀಡೆಯ ಹೆಸರು ಬದಲಾಗುತ್ತದೆ. ಆದರೆ ಜನರ ಫೆನಟಿಸಂ ಮಾತ್ರ ಸೇಮ್! ಜನಸಾಮಾನ್ಯನಿಗೆ ಹುಚ್ಚುಚ್ಚಾಗಿ ಕಿರುಚಾಡಲು ಒಂದು ಕಾರಣ ಬೇಕು. ದೇಶ, ಭಾಷೆ, ವೇಷ ಬದಲಾದರೂ ಇವನ ಮೂಲಗುಣ ಬದಲಾಗದು.

ಕ್ರಿಕೆಟ್ ಎನ್ನುವುದು ಭಾರತದಲ್ಲಿ ಧರ್ಮ ಎನ್ನುವ ಮಟ್ಟಿಗೆ ಬೆಳೆದಿದೆ, ಅಥವಾ ಬೆಳೆಸಿದ್ದಾರೆ. ಇವತ್ತು ಅಂತಲ್ಲ, ನನ್ನ ಏರು ಯೌವನದ ದಿನಗಳಲ್ಲಿ ಕೂಡ ನಾನು ಟಿವಿಯ ಮುಂದೆ ಕುಳಿತವನಲ್ಲ. ಆದರೆ ಅಪ್ಪನಿಗೆ ಕ್ರಿಕೆಟ್ ಎಂದರೆ ಪಂಚಪ್ರಾಣ. ಟಿವಿ ಇರದ ಸಮಯದಲ್ಲಿ ಅಪ್ಪ ರೇಡಿಯೋಗೆ ಅಂಟಿಕೊಂಡು ಕೂತಿರುತ್ತಿದ್ದರು. ಕಾಮೆಂಟರಿ ಕೇಳುವುದು ಅವರಿಗೆ ಅತೀವ ಇಷ್ಟದ ಕೆಲಸವಾಗಿತ್ತು. ಮನೆಯಲ್ಲಿ ನಾವ್ಯಾರಾದರೂ ಮಾತನಾಡಿದರೆ ಅಥವಾ ಶಬ್ದ ಮಾಡಿದರೆ ಸಾಕು ಅಪ್ಪ ಸಿಡಿಮಿಡಿಗೊಳ್ಳುತ್ತಿದ್ದರು. ಹೇಳುವ ಪ್ರತಿ ಪದವನ್ನೂ ಅವರು ಕೇಳಿಸಿಕೊಳ್ಳುತ್ತಿದ್ದರು.

ಟಿವಿ ಬಂದ ಮೇಲೆ ಇದರ ಕಥೆ ಇನ್ನೂ ಬದಲಾಯ್ತು. ರಜಾದಿನಗಳಾದರೆ ಅಪ್ಪ ಇಡೀ ದಿನ ಟಿವಿಯ ಮುಂದೆ ಕುಳಿತು ಪ್ರತಿ ಬಾಲನ್ನೂ ಬಿಡದೆ
ನೋಡುತ್ತಿದ್ದರು. ಜಾಹೀರಾತು ಬಂದಾಗ ಮಾತ್ರ ಟಾಯ್ಲೆಟ್ ಮತ್ತಿತರೆ ಜರೂರಿ ಕೆಲಸಗಳು ನೆನಪಾಗುತ್ತಿದ್ದವು. ಅದು ಹೇಗೆ ಪೂರ್ಣದಿನ ಆ ಆಟವನ್ನು
ನೋಡುತ್ತಿದ್ದರು ಎನ್ನುವುದು ನನಗೆ ಇಂದಿಗೂ ಸೋಜಿಗ. ಇದು ನನ್ನಪ್ಪನೊಬ್ಬನ ಕಥೆಯಲ್ಲ, ೯೫ ಪ್ರತಿಶತ ಭಾರತೀಯರ ಕಥೆ. ಇಷ್ಟೊಂದು ಜನ
ಒಂದು ಕ್ರೀಡೆಯನ್ನು ಆರಾಧಿಸಲು ಶುರುಮಾಡಿದರೆ ಏನಾಗಬಹುದು? ಅದು ಭಾರತದಲ್ಲೂ ಆಗಿದೆ.

ಈ ಕ್ರೀಡೆಯನ್ನ ಒಂದು ದೊಡ್ಡ ಉದ್ಯಮವನ್ನಾಗಿ ಮಾರ್ಪಡಿಸಲಾಗಿದೆ. ಸೋಲು-ಗೆಲುವುಗಳ ಮೀರಿ ಆಟಗಾರರು ಹಣವಂತರಾಗುತ್ತಾ ಹೋಗುತ್ತಲೇ ಇದ್ದಾರೆ. ಕ್ರಿಕೆಟ್ ಆಟವಾಗಿ ಉಳಿಯದೆ ಮನರಂಜನೆಯ ಇನ್ನೊಂದು ಸಾಧನ ವಾಗಿ ಬದಲಾಗಿಹೋಗಿದೆ. ಆದರೂ ಜನರಿಗೆ ಕ್ರಿಕೆಟ್ ಪ್ರೇಮ ಒಂದಿಂಚೂ ಕಡಿಮೆಯಾಗಿಲ್ಲ. ಸ್ಪೇನ್‌ಗೆ ಬಂದ ಹೊಸತರಲ್ಲಿ, ‘ಇಲ್ಲಿನ ಜನ ಈ ವಿಷಯದಲ್ಲಿ ಸ್ವಲ್ಪ ವಾಸಿ’ ಎನ್ನುವ ನನ್ನ ನಂಬಿಕೆ ಬಹಳ ದಿನ ಉಳಿಯಲಿಲ್ಲ. ಇಲ್ಲಿ ಕ್ರಿಕೆಟ್ ಆಡುವುದಿಲ್ಲ, ಹೀಗಾಗಿ ಜನರು ಕ್ರಿಕೆಟ್ ಆಟವನ್ನ ಆರಾಧಿಸುವುದಿಲ್ಲ. ಇಲ್ಲಿ ಪೂಟ್ಬಾಲ್ ಆಟದ ಹುಚ್ಚು ಬಹಳವಿದೆ.

ಹೀಗಾಗಿ ಇಲ್ಲಿನ ಜನ ಪೂಟ್ಬಾಲ್ ಆಟವನ್ನ ಇನ್ನಿಲ್ಲ ದಷ್ಟು ಇಷ್ಟಪಡುತ್ತಾರೆ. ಭಾರತದಲ್ಲಿ ಕ್ರಿಕೆಟ್‌ಗೆ ಇರುವ ಸ್ಥಾನ ಯುರೋಪಿನಲ್ಲಿ ಪೂಟ್ಬಾಲ್‌ಗೆ ದಕ್ಕಿದೆ ಎಂದು ಧಾರಾಳವಾಗಿ ಹೇಳಬಹುದು. ಇಲ್ಲಿನ ಜನರ ಕೈಯಲ್ಲಿ ಹಣದ ಹರಿವು ಕೂಡ ಹೆಚ್ಚಾಗಿದ್ದ ದಿನಗಳವು, ಹೀಗಾಗಿ ಯುರೋಪಿನ ಯಾವುದೇ
ದೇಶದಲ್ಲಿ ಫುಟ್ಬಾಲ್ ಪಂದ್ಯವಾದರೂ ಜನ ತಮ್ಮ ನೆಚ್ಚಿನ ತಂಡ ಆಡುವುದನ್ನ ನೋಡಲು ಪ್ರಯಾಣ ಮಾಡುತ್ತಿದ್ದರು. ಪ್ರಯಾಣದ ಖರ್ಚು, ಅಲ್ಲಿ
ಉಳಿದುಕೊಳ್ಳುವ ಖರ್ಚು, ಊಟ-ತಿಂಡಿಯ ಜತೆಗೆ ಪಂದ್ಯದ ಎಂಟ್ರೆನ್ಸ್ ಫೀಸು! ಅದೆಷ್ಟು ಖರ್ಚು!!

ಆದರೆ ಜನರಿಗೆ ಇದ್ಯಾವುದರ ಚಿಂತೆ ಇರಲಿಲ್ಲ. ಕೈಯಲ್ಲಿ ಹಣವಿದ್ದಾಗ ನಾಳಿನ ಬಗ್ಗೆ ಚಿಂತಿಸುವುದು ಯುರೋಪಿಯನ್ನರ ಗುಣವಲ್ಲ. ಇವರನ್ನು ಹತ್ತಿರದಿಂದ ನೋಡುತ್ತಾ ಹೋದಂತೆ ‘ಭಾರತೀಯರೇ ವಾಸಿ’ ಎನ್ನಿಸುವ ಮಟ್ಟಿಗೆ ಇವರ ಫುಟ್ಬಾಲ್ ಪ್ರೇಮ ನನ್ನ ಮಟ್ಟಿಗೆ ಹೇವರಿಕೆ ತರಿಸಿತು. ಭಾರತದಲ್ಲಿ ಐಪಿಎಲ್ ಶುರುವಾಗುವುದಕ್ಕೆ ಮುಂಚಿನಿಂದ ಇಲ್ಲಿ ಫುಟ್ಬಾಲ್ ಆಟವನ್ನು ಐಪಿಎಲ್ ಮಾದರಿಯಲ್ಲಿ ನಡೆಸಲಾಗುತ್ತಿತ್ತು. ಇಂದಿಗೂ
ನಡೆಸುತ್ತಾರೆ. ಜನ ತಮ್ಮ ಇಷ್ಟದ ತಂಡದ ಬಗ್ಗೆ ಯಾವ ಮಟ್ಟದ ಫೆನಟಿಸಂ ಹೊಂದಿದ್ದಾರೆ ಎಂದರೆ, ತಮ್ಮ ನೆಚ್ಚಿನ ತಂಡ ಆಕಸ್ಮಿಕವಾಗಿ ಸೋತರೆ ಇಡೀ ಕ್ರೀಡಾಂಗಣವನ್ನು ಯುದ್ಧರಂಗವಾಗಿ ಮಾರ್ಪಡಿಸಿ ಬಿಡುವಷ್ಟು! ಹೌದು, ಇತರೆ ತಂಡದ ಅಭಿಮಾನಿಗಳ ಮೇಲೆ ಹಲ್ಲೆಮಾಡುವುದು, ಪೇಪರ್‌ನಿಂದ ಬೆಂಕಿ ಹಚ್ಚುವುದು, ಆಸನಗಳನ್ನು ಮುರಿಯುವುದು ಅತ್ಯಂತ ಸಾಮಾನ್ಯ ಎನ್ನುವಂತಾಗಿತ್ತು.

ಇದರ ಜತೆಗೆ, ಕೆಲವೊಮ್ಮೆ ಇಂಗ್ಲೆಂಡ್‌ನಿಂದ ಬಾರ್ಸಿಲೋನಾಗೆ ಬಂದ ಕ್ರೀಡಾಭಿಮಾನಿಗಳು ಕ್ರೀಡಾಂಗಣಕ್ಕೆ ಸೀಮಿತರಾಗದೆ ನಗರದ ಇತರ ಕಡೆಯಲ್ಲೂ ದಾಂಧಲೆ ನಡೆಸಿದ್ದನ್ನು ಕಣ್ಣಾರೆ ಕಂಡ ಅನುಭವ ನನ್ನದು. ಎಟಿಎಂ ಮಷಿನ್‌ಗಳನ್ನು ಒಡೆದುಹಾಕುವುದು, ಸಾರಿಗೆ ಬಸ್ಸಿಗೆ ಮತ್ತು ಕಸದ ಕಂಟೈನರ್‌ಗಳಿಗೆ ಬೆಂಕಿ ಹಚ್ಚುವುದು ಹೀಗೆ ಒಂದಲ್ಲ ಅನೇಕ ಅಮಾನವೀಯ ಘಟನೆಗಳನ್ನ ಕಂಡಿದ್ದೇನೆ. ಇವರನ್ನ ನಿಯಂತ್ರಣಕ್ಕೆ ತರಲು ಪೊಲೀಸರು ನೀರನ್ನ ಎರಚುವುದು ಇತ್ಯಾದಿ ಮಾಡುವುದು ಮತ್ತು ಆ ಪ್ರಕ್ರಿಯೆಯಲ್ಲಿ ಕಣ್ಣು ಕಳೆದುಕೊಂಡ, ಕೈಮುರಿದು ಕೊಂಡ ಕ್ರೀಡಾಭಿಮಾನಿಗಳ ಕಥೆಗಳು ಹತ್ತಾರು.

ಭಾರತ, ಪಾಕಿಸ್ತಾನ, ಬಾಂಗ್ಲಾ, ಟರ್ಕಿ, ಸ್ಪೇನ್, ಫ್ರಾನ್ಸ್, ಜರ್ಮನಿ, ಇಂಗ್ಲೆಂಡ್ ಹೀಗೆ ದೇಶಗಳ ಹೆಸರುಗಳು ಬದಲಾಗುತ್ತವೆ. ಕ್ರೀಡೆಯ ಹೆಸರು ಬದಲಾಗುತ್ತದೆ. ಆದರೆ ಜನರ ಫೆನಟಿಸಂ ಮಾತ್ರ ಸೇಮ್! ಜನಸಾಮಾನ್ಯನಿಗೆ ಹುಚ್ಚುಚ್ಚಾಗಿ ಕಿರುಚಾಡಲು ಒಂದು ಕಾರಣ ಬೇಕು. ದೇಶ, ಭಾಷೆ,
ವೇಷ ಬದಲಾದರೂ ಇವನ ಮೂಲಗುಣ ಮಾತ್ರ ಬದಲಾಗುವುದಿಲ್ಲ. ಒಂದೆರಡಲ್ಲ, ಅರವತ್ತಾರು ದೇಶಗಳ ಪರ್ಯಟನೆಯ ನಂತರ ಈ ನಿರ್ಧಾರಕ್ಕೆ
ಬಂದಿದ್ದೇನೆ. ಕ್ರಿಕೆಟ್ ಅಂತಲ್ಲ, ಧರ್ಮ ಮತ್ತು ಭಾಷೆಯ ವಿಷಯದಲ್ಲಿ ಕೂಡ ಇವನನ್ನ ಬಹಳ ಬೇಗ ಪ್ರವೋಕ್ ಮಾಡಿಬಿಡಬಹುದು. ಹೀಗಾಗಿ
ಧರ್ಮ ಮತ್ತು ಭಾಷೆಯ ಹೆಸರಿನಲ್ಲಿ ಕೂಡ ಎಲ್ಲೆಡೆ ಹೊಡೆದಾಟವೂ ಸಾಮಾನ್ಯವಾಗಿದೆ.

ಈ ಜನಸಾಮಾನ್ಯ, ಅವನು ಯಾವ ದೇಶದ ಪ್ರಜೆಯೇ ಆಗಿರಲಿ, ವಿವೇಕ ಮತ್ತು ಸಾಮಾನ್ಯ ಜ್ಞಾನವನ್ನ ಮನೆಯಲ್ಲಿ ಇಟ್ಟು ಬಂದಿರುತ್ತಾನೆ. ಹೀಗೆ
ಹೇಳಲು ಕಾರಣ ಬಹಳ ಸರಳ. ನೀವೇ ಗಮನಿಸಿ ನೋಡಿ, ಮೊನ್ನೆ ಭಾನುವಾರದ ಪಂದ್ಯದಲ್ಲಿ ಪಾಕಿಸ್ತಾನ ಅಥವಾ ಭಾರತ ಯಾರೇ ಗೆಲ್ಲಲಿ ಜನ
ಸಾಮಾನ್ಯನ ಬದುಕಿನಲ್ಲಿ ಏನಾದರೂ ಬದಲಾವಣೆ ಆಯ್ತಾ? ಇಲ್ಲ; ಬದಲಿಗೆ ಸೋಲೋ ಅಥವಾ ಗೆಲುವೋ, ಆಟಗಾರರಿಗೆ ತಮ್ಮ ಹಣ ಸಿಗುತ್ತದೆ.
ದಿನದಿಂದ ದಿನಕ್ಕೆ ಅವರು ಹೆಚ್ಚೆಚ್ಚು ಸಾಹುಕಾರ ರಾಗುತ್ತಾರೆ. ಪೂರ್ಣ ದಿನ, ಹಣ ಮತ್ತು ಶಕ್ತಿಯನ್ನ ವ್ಯಯಿಸಿ ಪಂದ್ಯ ನೋಡಿದ ನೂರಾರು ಕೋಟಿ
ಜನರ ಕತೆಯೇನು? ಪಂದ್ಯ ನೋಡಿದ ಮಾರನೆಯ ದಿನ ೯೯ ಪ್ರತಿಶತ ಜನರು ತಮ್ಮ ಹಣೆಬರಹವನ್ನು ಹಳಿದುಕೊಂಡು ಕೆಲಸಕ್ಕೆ ಹೋಗುತ್ತಾರೆ.

ಇದು ಅವರಿಗೂ ಗೊತ್ತಿದೆ. ಆದರೂ ಮತ್ತೆ ಅದೇ ತಪ್ಪನ್ನ ಮಾಡುತ್ತಾರೆ. ಹೀಗೆ ತಪ್ಪು ಮಾಡುತ್ತಲೇ ಜೀವನ ಸವೆಸುವುದರಲ್ಲಿ ಅವರಿಗೇನೋ ಆನಂದ.
ನಮ್ಮಲ್ಲಿ ಹೇಗೆ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಇನ್ನಿಲ್ಲದ ಪ್ರಚಾರ ನೀಡುತ್ತಾರೋ ಮತ್ತು ಅದನ್ನು ವಿಜೃಂಭಿಸುತ್ತಾರೋ, ಥೇಟ್ ಅದೇ
ರೀತಿಯಲ್ಲಿ ಇಲ್ಲಿನ ರಿಯಲ್ ಮ್ಯಾಡ್ರಿಡ್ ಮತ್ತು ಬಾರ್ಸ ಅಂದರೆ ಫುಟ್ಬಾಲ್ ಕ್ಲಬ್ ಬಾರ್ಸಿಲೋನಾ ನಡುವಿನ ಪಂದ್ಯವನ್ನ ಬಿಂಬಿಸುತ್ತಾರೆ. ಈ ಪಂದ್ಯ
ಗಳು ಹೈವೋಲ್ಟೇಜ್ ಪಂದ್ಯಗಳು. ಜನರು ಒಂದು ರೀತಿಯ ಸಮೂಹಸನ್ನಿಗೆ ಒಳಗಾದವರಂತೆ ಇದರ ಪ್ರಭಾವಲಯಕ್ಕೆ ಸಿಲುಕಿ ಭ್ರಮೆಯಲ್ಲಿ ಬದುಕು
ವುದನ್ನ ಕಂಡಿದ್ದೇನೆ.

ಬಾರ್ಸಿಲೋನಾದಲ್ಲಿ ನನಗೆ ಬಹಳಷ್ಟು ಜನ ಉತ್ತಮ ಗೆಳೆಯರಾದರು. ಅವರಲ್ಲಿ ಕೆಲವರು ಸಮಾಜದಲ್ಲಿ ಉನ್ನತ ಸ್ಥಾನಮಾನ ಹೊಂದಿದವರು. ಬಾರ್ಸದಲ್ಲಿ ಸದಸ್ಯತ್ವ ಹೊಂದಿದವರು. ಇಂಥ ಪಂದ್ಯಗಳು ನಡೆಯುವಾಗ ಟಿಕೆಟ್ ಸಿಗುವುದು ಸುಲಭದ ಮಾತಲ್ಲ. ಆದರೆ ನನಗೆ ಪಾಸ್ ನೀಡುವ ಸ್ನೇಹಿತರಿದ್ದರು. ಒಂದು ಪಾಸ್‌ನಲ್ಲಿ ಇಬ್ಬರು ಪ್ರವೇಶ ಪಡೆಯಬಹುದಿತ್ತು. ಆದರೆ ನಾನು, ‘ನೀವು ಕೊಡುವ ಪಾಸ್ ಬೇಡ’ ಎಂದಾಗ ಅವರಿಗೆ ಅನ್ಯಗ್ರಹ ಜೀವಿಯಂತೆ ಕಾಣುತ್ತಿದ್ದೆ. ಎರಡು ತಂಡಗಳು ಸೆಣಸುತ್ತವೆ, ಒಬ್ಬರು ಗೆಲ್ಲುತ್ತಾರೆ ಮತ್ತೊಬ್ಬರು ಸೋಲುತ್ತಾರೆ; ಆದರೆ ಹಣವನ್ನು ಮಾತ್ರ ಎಲ್ಲಾ ಆಟಗಾರರು ಮಾಡಿಕೊಳ್ಳುತ್ತಾರೆ.

ಜನಸಾಮಾನ್ಯ ಮಾತ್ರ ಹಣ ಮತ್ತು ವೇಳೆ ಎರಡನ್ನೂ ಕಳೆದುಕೊಳ್ಳುತ್ತಾನೆ. ‘ನನ್ನ ವೇಳೆ ಕಳೆದುಕೊಳ್ಳಲು ಇಷ್ಟವಿಲ್ಲ’ ಎನ್ನುವ ನನ್ನ ಮಾತುಗಳು ಬಹಳಷ್ಟು ಮಿತ್ರರಿಗೆ ಜೀರ್ಣವಾಗುತ್ತಿರಲಿಲ್ಲ ನಿಮಗೆಲ್ಲಾ ತಿಳಿದಿರಲಿ, ರೊನಾಲ್ಡೊ, ಮೆಸ್ಸಿ, ನೇಯ್ಮಾರ್‌ರಂಥ ಆಟಗಾರರು ಒಂದು ಸೀಸನ್‌ನಲ್ಲಿ
ಗಳಿಸುವ ಹಣವನ್ನ ಯುರೋಪಿನ ಸಾಮಾನ್ಯ ಪ್ರಜೆ ಗಳಿಸಲು ೫೦೦ ವರ್ಷ ಅಥವಾ ಅದಕ್ಕಿಂತ ಹೆಚ್ಚು ಸಮಯ ಬೇಕಾಗುತ್ತದೆ. ಇನ್ನು ಭಾರತೀಯ ಪ್ರಜೆಗೆ ಸಾವಿರ ವರ್ಷವಾದರೂ ಸಾಲದು. ಇದೇ ಮಾತು ಕ್ರಿಕೆಟ್ ಆಟಗಾರರಿಗೂ ಅನ್ವಯಿಸುತ್ತದೆ. ಹೀಗೆ ಮನುಷ್ಯ-ಮನುಷ್ಯರ ನಡುವಿನ ಅಂತರವನ್ನ
ಹೆಚ್ಚಿಸಲು ನಾವೇ ಖುಷಿಯಾಗಿ ಸಹಾಯ ಮಾಡುತ್ತೇವೆ ಎನ್ನುವುದು ಹೇಯವಾಸ್ತವ.

ಕನಿಷ್ಠಪಕ್ಷ ನಾನು ಇಂಥ ಒಂದು ಸಮೂಹಸನ್ನಿಗೆ ಒಳಗಾಗುವುದಿಲ್ಲ ಎನ್ನುವ ಶಪಥವನ್ನು ಬಹಳ ಹಿಂದೆಯೇ ಮಾಡಿದ್ದೆ. ಹೀಗಾಗಿ ಇಲ್ಲಿ ಪುಕ್ಕಟೆ ಪಾಸ್ ನೀಡುತ್ತೇನೆ ಎಂದರೂ ನಾನು ಪಂದ್ಯ ವೀಕ್ಷಿಸಲು ಹೋಗಲಿಲ್ಲ. ಪಂದ್ಯದ ಮಾತು ಬಹಳ ದೂರ ಉಳಿಯಿತು, ನಾನು ಬಾರ್ಸಿಲೋನಾ ತಂಡದ ಸ್ಟೇಡಿಯಂ ಕೂಡ ನೋಡಲು ಹೋಗಲಿಲ್ಲ. ಇಲ್ಲಿಗೆ ಬರುವ ಕೋಟ್ಯಂತರ ಜನರು ಬಾರ್ಸ ಸ್ಟೇಡಿಯಂ ಟೂರ್ ಮಾಡುತ್ತಾರೆ, ಆಟಗಾರರ ಕೋಣೆಯನ್ನ ನೋಡಿ ಕೊಂಡು ಫೋಟೋ ತೆಗೆದುಕೊಂಡು ಹೋಗುತ್ತಾರೆ.

ನಮಗೆ ಎಲ್ಲವೂ ಸರದಿಯಲ್ಲಿ ಸಾಲುಗಟ್ಟಿ ನಿಲ್ಲದೆ, ಹಣ ಖರ್ಚುಮಾಡದೆ ನೋಡುವ ಅವಕಾಶ ಸಿಕ್ಕಿತ್ತು. ಆದರೆ ನನಗೆ ಈ ರೀತಿಯ ಅತಿರಂಜಿತ ವ್ಯಕ್ತಿಪೂಜೆ ಇಷ್ಟವಾಗುವುದಿಲ್ಲ. ಹೀಗಾಗಿ ನಾನು ಇಲ್ಲಿಯವರೆಗೆ ಬಾರ್ಸ ಪ್ರವೇಶಿಸಿಲ್ಲ, ಚಿನ್ನಸ್ವಾಮಿ ಕ್ರೀಡಾಂಗಣಕ್ಕೂ ಕಾಲಿಟ್ಟಿಲ್ಲ. ರಮ್ಯ, ಕ್ರಿಕೆಟ್ ಕಾಶಿ ಎಂದು ಪ್ರಖ್ಯಾತ ವಾಗಿರುವ ಇಂಗ್ಲೆಂಡ್‌ನ ಲಾರ್ಡ್ಸ್ ಸ್ಟೇಡಿಯಂ ಸುತ್ತುಹೊಡೆದು ಬರುವವರೆಗೆ ಹೊರಗೆ ನಿಂತು ಕಾಯುತ್ತಿದ್ದೆ.

ಕ್ರಿಕೆಟ್ ಅಥವಾ ಫುಟ್ಬಾಲ್ ಅಥವಾ ಇನ್ಯಾವುದೇ ಆಟದ ಆಟಗಾರರಿಗೆ ಸಿಕ್ಕಿರುವ ದೈವಪಟ್ಟ ನನಗೆ ಇನ್ನಿಲ್ಲದ ಕಿರಿಕಿರಿ ಉಂಟು ಮಾಡು ತ್ತದೆ. ಹೀಗಾಗಿ
ನಾನು ಇವುಗಳಿಂದ ಗಾವುದ ದೂರ. ಒಂದಲ್ಲ ಹಲವು ಬಾರಿ ನನ್ನ ಸ್ಪ್ಯಾನಿಷ್ ಸ್ನೇಹಿತರು, ‘ಕೊನೇಪಕ್ಷ ಒಂದು ಮ್ಯಾಚ್ ಆದರೂ ಬಂದು ನೋಡು, ನಿನಗೆ ಖಂಡಿತ ಇಷ್ಟವಾಗುತ್ತದೆ’ ಎನ್ನುವ ಮಾತುಗಳನ್ನ ಆಡಿದರು. ‘ಅಲ್ಲಿನ ಎಲೆಕ್ಟ್ರಿ ಫ್ಲೈಯಿಂಗ್ ವಾತಾವರಣಕ್ಕೆ ನಾವು ದುಡ್ಡುಕೊಟ್ಟು ಹೋಗು ವುದು. ನೀನು ಹೇಳುವುದು ಸರಿ, ಎಲ್ಲರೂ ದುಡ್ಡು ಮಾಡಿಕೊಳ್ಳುತ್ತಾರೆ. ಆದರೆ ನಾವೇನೂ ಕಳೆದುಕೊಂಡು ಬರುವುದಿಲ್ಲ, ಕೊಟ್ಟ ಹಣಕ್ಕೆ ಪೂರಾ ಪೈಸಾವಸೂಲಿಯಾಗುವಷ್ಟು ಖುಷಿಯನ್ನು ಅನುಭವಿಸಿ ಬರುತ್ತೇವೆ’ ಎನ್ನುವ ಅವರ ಮಾತು ನನಗಿಲ್ಲಿಯವರೆಗೆ ರುಚಿಸಿಲ್ಲ.

ಎಲ್ಲವೂ ಗೊತ್ತಿದ್ದೂ, ‘ಸಮಯ ಮತ್ತು ಹಣವನ್ನ ವ್ಯಯಿಸಿ ಖುಷಿಯನ್ನು ಪಡೆಯುತ್ತೇವೆ’ ಎನ್ನುವವರಿಗೆ ಬೇಡವೆನ್ನಲು ನಾನ್ಯಾರು? ಜಗತ್ತಿನ
ಉದ್ದಗಲದ ತುಂಬೆಲ್ಲಾ ಮೆಜಾರಿಟಿ ಸಿಕ್ಕುವುದು ಇಂಥ ಜನ. ತನ್ನ ಸೀಮಿತ ಜೀವಿತಾವಧಿಯಲ್ಲಿ ಮನುಷ್ಯ ಇದನ್ನ ಮೀರಿ ಯೋಚಿಸದೆ ಹೋಗು
ವುದು ಮಾತ್ರ ನನ್ನ ಪಾಲಿಗೆ ಸದಾ ಅಚ್ಚರಿ.