Saturday, 14th December 2024

ಹಗಿಯಾ ಸೋಫಿಯಾ ನೆನಪು, ರಾಮಮಂದಿರದ ಹೊಳಪು !

ನೂರೆಂಟು ವಿಶ್ವ

ಹಿಂದುಗಳೇ ಬಹುಸಂಖ್ಯಾತರಿರುವ ಭಾರತದಲ್ಲಿ, ದೇಶದ ಅಸ್ಮಿತೆಯ ಸಂಕೇತವಾಗಿರುವ ಶ್ರೀರಾಮನಿಗೆ ಆತ ಜನ್ಮ ತಾಳಿದ ನೆಲದಲ್ಲೇ ಒಂದು ದೇವಸ್ಥಾನ ನಿರ್ಮಿಸಲು ಏಕೆ ಸಾಧ್ಯವಾಗಲಿಲ್ಲ ಎಂಬ ಪ್ರಶ್ನೆಗೆ ಎಷ್ಟೇ ಸಮರ್ಪಕ ಅಂದರೂ, ಸಂದೇಹಗಳಿಲ್ಲದ ಉತ್ತರ ನೀಡುವುದು ಕಷ್ಟದ ಕೆಲಸವೇ. ಒಂದು ದೇವಾಲಯ ನಿರ್ಮಿಸಲು ಐನೂರು ವರ್ಷಗಳು ಬೇಕಾಯಿತು ಎಂದರೆ, ಅವರಿಗೆ ಮತ್ತಷ್ಟು ಗೊಂದಲವಾಗುವುದು ಸಹಜವೇ.

ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠೆ ಶ್ರದ್ಧೆಯಿಂದ, ಅದ್ದೂರಿಯಾಗಿ ನೆರವೇರಿದ್ದಕ್ಕೆ ಇಡೀ ವಿಶ್ವವೇ ಸಾಕ್ಷಿಯಾಯಿತು. ಜಗತ್ತಿನ ಇತಿಹಾಸದಲ್ಲಿ
ಇದೊಂದು ಅತ್ಯಂತ ಮಹತ್ವದ ಘಟನೆಯಾಗಿ ಸುವರ್ಣಾಕ್ಷರ ಗಳಲ್ಲಿ ದಾಖಲಾಯಿತು. ಪ್ರಧಾನಿ ನರೇಂದ್ರ ಮೋದಿಯವರು ಅಂದು ಮಂಗಳ ಕಳಶ ಹೊತ್ತು ಅಯೋಧ್ಯೆಯ ರಾಮಮಂದಿರದೊಳಗೆ ಕಾಲಿಡುತ್ತಿದ್ದಾಗ, ಕೋಟಿ ಕೋಟಿ ಭಾರತೀಯರಲ್ಲಿ ರೋಮಾಂಚನ. ಅಂದು ನಾನು ಟಿವಿ ಮುಂದೆ ಕುಳಿತು ಎರಡು ಗಂಟೆ ಕಾಲ ತದೇಕಚಿತ್ತದಿಂದ ಪ್ರಾಣಪ್ರತಿಷ್ಠೆ ಪೂಜಾ ಕೈಂಕರ್ಯ, ವಿಧಿ-ವಿಧಾನ, ಗಣ್ಯರ ಭಾಷಣಗಳನ್ನು ವೀಕ್ಷಿಸುತ್ತಿದ್ದೆ.

ಈ ಕಾರ್ಯಕ್ರಮವನ್ನು ನೋಡುತ್ತಿದ್ದ ನನ್ನ ಸ್ನೇಹಿತರೊಬ್ಬರ ಹನ್ನೊಂದು ವರ್ಷದ ಮಗಳು, ‘ಅಂಕಲ್, ಶ್ರೀರಾಮ ನಮ್ಮ ದೇಶದ ಆರಾಧ್ಯದೈವ ಅಂತಾರೆ. ಆದರೆ ಶ್ರೀರಾಮ ಹುಟ್ಟಿದ ಜಾಗದಲ್ಲಿ ಅವನಿಗಾಗಿ ದೇವಾಲಯ ನಿರ್ಮಿಸಲು ಐನೂರು ವರ್ಷ ಬೇಕಾಯಿತು ಅಂತಾರಲ್ಲ, ಇದು ನನಗೆ ಅರ್ಥವಾಗುತ್ತಿಲ್ಲ. ನಮ್ಮ ದೇಶದಲ್ಲಿ ನಮ್ಮ ದೇವರಿಗೆ ದೇವಾಲಯ ಕಟ್ಟಲು ಏನು ಸಮಸ್ಯೆಯಾಗಿತ್ತು?’ ಎಂದಳು. ಅದಕ್ಕೆ ನಾನು, ‘ಇದು ನನಗೂ ಅರ್ಥವಾಗದ್ದು’ ಎಂದು ಹೇಳಿ ಜಾರಿ ಕೊಳ್ಳಲು ಪ್ರಯತ್ನಿಸಿದೆ. ಕಾರಣ ನಾನು ಮೋದಿಯವರ ಭಾಷಣ ಕೇಳುವುದರಲ್ಲಿ ತಲ್ಲೀನನಾಗಿದ್ದೆ.

ಮೋದಿಯವರು, ‘ಇನ್ನು ಮುಂದೆ ಶ್ರೀರಾಮ ಟೆಂಟ್‌ನಲ್ಲಿ ಇರುವುದಿಲ್ಲ. ಆತ ಈಗ ಭವ್ಯ ಮಂದಿರದಲ್ಲಿ ನೆಲೆಸಿದ್ದಾನೆ’ ಎಂದು ಹೇಳಿದಾಗ, ಪುನಃ ಆಕೆ, ‘ಅಂಕಲ್, ಶ್ರೀರಾಮನಿಗೆ ಟೆಂಟ್‌ನಲ್ಲಿರುವ ಪರಿಸ್ಥಿತಿ ಹೇಗೆ ಬಂತು? ನನಗೆ ಅರ್ಥವಾಗುವಂತೆ ಹೇಳಿ’ ಎಂದು ಹೇಳಿದಳು. ಈ ಪೀಳಿಗೆಯ ಮಕ್ಕಳಿಗೆ ಎಷ್ಟೇ ವಿವರಿಸಿದರೂ ರಾಮಜನ್ಮ ಭೂಮಿ ಹೋರಾಟ ಅರ್ಥವಾಗುವಂಥದ್ದಲ್ಲ. ಹಿಂದುಗಳೇ ಬಹುಸಂಖ್ಯಾತರಿರುವ ಭಾರತದಲ್ಲಿ, ದೇಶದ ಅಸ್ಮಿತೆಯ ಸಂಕೇತವಾಗಿರುವ ಶ್ರೀರಾಮನಿಗೆ ಆತ ಜನ್ಮ ತಾಳಿದ ನೆಲದಲ್ಲೇ ಒಂದು ದೇವಸ್ಥಾನ ನಿರ್ಮಿಸಲು ಏಕೆ ಸಾಧ್ಯವಾಗಲಿಲ್ಲ ಎಂಬ ಪ್ರಶ್ನೆಗೆ ಎಷ್ಟೇ ಸಮರ್ಪಕ ಅಂದರೂ, ಸಂದೇಹ ಗಳಿಲ್ಲದ ಉತ್ತರ ನೀಡುವುದು ಕಷ್ಟದ ಕೆಲಸವೇ. ಒಂದು ದೇವಾಲಯ ನಿರ್ಮಿಸಲು ಐನೂರು ವರ್ಷಗಳು ಬೇಕಾಯಿತು ಎಂದರೆ, ಅವರಿಗೆ ಮತ್ತಷ್ಟು ಗೊಂದಲ ವಾಗುವುದು ಸಹಜವೇ.

ಶ್ರೀರಾಮ ಮಂದಿರ ಲೋಕಾರ್ಪಣೆಯಾಗಿ ಎರಡು ದಿನಗಳ ಬಳಿಕ ‘ವಿಶ್ವವಾಣಿ’ಯಲ್ಲಿ ಪ್ರಕಟವಾದ ಇನ್ನೊಂದು ವರದಿ ನೋಡಿ, ‘ಮುಸ್ಲಿಮರ ದೇಶವಾದ ಅಬುಧಾಬಿಯಲ್ಲಿ ಸ್ವಾಮಿ ನಾರಾಯಣ ದೇವಸ್ಥಾನವನ್ನು ಐದು ವರ್ಷಗಳಲ್ಲಿ ನಿರ್ಮಿಸುವುದು ಸಾಧ್ಯವಾಗುವುದಾದರೆ, ಹಿಂದುಗಳೇ ಹೆಚ್ಚಾಗಿರುವ ಭಾರತದಲ್ಲಿ ಶ್ರೀರಾಮನ ದೇವಾಲಯ ಕಟ್ಟಲು ಏಕೆ ಸಾಧ್ಯವಾಗಿಲ್ಲ?’ ಎಂದು ಕೇಳಿದರೆ ಏನು ಹೇಳುವುದು? ಜಗತ್ತಿನ ಇತಿಹಾಸದಲ್ಲಿ ನೂರಾರು ದೇವಸ್ಥಾನಗಳನ್ನು
ನೆಲಸಮ ಗೊಳಿಸಿ, ಅಲ್ಲಿ ಮಸೀದಿಗಳನ್ನು ನಿರ್ಮಿಸಿರುವುದನ್ನು ಕಾಣಬಹುದು. ಚರ್ಚುಗಳನ್ನು ಸಹ ಧ್ವಂಸ ಮಾಡಿ ಅಲ್ಲಿಯೂ ಮಸೀದಿಗಳನ್ನು ನಿರ್ಮಿಸಿರುವು ದನ್ನು ನೋಡಬಹುದು.

ಮುಸ್ಲಿಂ ದಾಳಿಕೋರರು ಭಾರತದ ಅನೇಕ ಪ್ರಾರ್ಥನಾ ಸ್ಥಳಗಳನ್ನು ಧ್ವಂಸ ಮಾಡಿ ತಮ್ಮ ವಶ ಮಾಡಿಕೊಂಡ ಅವೆಷ್ಟೋ ನಿದರ್ಶನಗಳು ನಮ್ಮ ಕಣ್ಣ ಮುಂದಿವೆ. ಆದರೆ ಮಂದಿರವಿದ್ದ ಜಾಗದಲ್ಲಿ ಮಸೀದಿ ನಿರ್ಮಿಸಿದ ಬಳಿಕ, ಅದನ್ನು ಧ್ವಂಸ ಮಾಡಿ, ಸುದೀರ್ಘ ಕಾನೂನು ಹೋರಾಟದ ಬಳಿಕ, ಅಲ್ಲಿ ಪುನಃ ಮಂದಿರವನ್ನು ಕಟ್ಟಿದ ಮತ್ತೊಂದು ನಿದರ್ಶನ ಮತ್ತೆಲ್ಲೂ ಸಿಗಲಾರದು. ಈ ಕಾರಣದಿಂದ, ಜಾಗತಿಕ ಇತಿಹಾಸದ ದೃಷ್ಟಿಯಿಂದ, ಅಯೋಧ್ಯೆಯ ಶ್ರೀರಾಮ ಮಂದಿರ ಲೋಕಾರ್ಪಣೆ ಅತ್ಯಂತ ಮಹತ್ವದ್ದೆಂದು ಅನಿಸುತ್ತದೆ. ಇದಕ್ಕೆ ಐದು ನೂರು ವರ್ಷ ಹಿಡಿಯಿತೆಂಬುದು ಮಾತ್ರ ತೀರಾ ವಿಷಾದಕರವಾದರೂ, ಅದು ಚರಿತ್ರೆಯ ಕ್ರೂರ ಅಣಕವೂ ಹೌದು.

ಒಂದು ಕ್ಷಣ ರಾಮಮಂದಿರ ವಿಷಯವನ್ನು ಪಕ್ಕಕ್ಕಿಡೋಣ. ಕಾರಣ ಈ ಮಾತನ್ನು ಹೇಳುವಾಗ ನನಗೆ ಟರ್ಕಿಯ ರಾಜಧಾನಿ ಇಸ್ತಾನ್‌ಬುಲ್‌ನಲ್ಲಿರುವ ಹಗಿಯಾ ಸೋಫಿಯಾ (ಏಟ್ಝqs Uಜಿobಟಞ) ನೆನಪಾಗುತ್ತದೆ. ನಾನು ಇಸ್ತಾನ್ ಬುಲ್‌ಗೆ ನಾಲ್ಕು ಬಾರಿ ಹೋಗಿದ್ದೇನೆ. ಪ್ರತಿ ಸಲ ಹೋದಾಗಲೂ ಹಗಿಯಾ ಸೋಫಿಯಾಕ್ಕೆ ಭೇಟಿ ಕೊಟ್ಟಿದ್ದೇನೆ. ಪ್ರತಿ ಭೇಟಿಯಲ್ಲೂ ಹಗಿಯಾ ಸೋಫಿಯಾ ನೋಡಿ ಮೂಗಿನ ಮೇಲೆ ಬೆರಳಿಟ್ಟು ಬಂದಿದ್ದೇನೆ. ಹಗಿಯಾ ಸೋಫಿಯಾದ
ಭವ್ಯ ಕಟ್ಟಡ ಒಂದು ತೂಕವಾದರೆ, ಅದರ ಇತಿಹಾಸ ಇನ್ನೊಂದು ತೂಕ. ಇದು ಜಗತ್ತಿನ ಅದ್ಭುತ ಕಟ್ಟಡಗಳಲ್ಲೊಂದು. ಸುಮಾರು ಒಂದು ಸಾವಿರದ ಆರು ನೂರು ವರ್ಷಗಳ ಪುರಾತನವಾದ, ಬೃಹದ್ಭವ್ಯ ಕಟ್ಟಡ. ಈಸ್ಟರ್ನ್ ರೋಮನ್ ಸಾಮ್ರಾಜ್ಯದಿಂದ ಇಸ್ತಾನ್‌ಬುಲ್‌ನಲ್ಲಿ ನಿರ್ಮಿಸಲಾದ ಮೂರು ಚರ್ಚ್ ಕಟ್ಟಡಗಳಲ್ಲಿ ಕೊನೆಯದಾದ ಇದು ೫೩೭ ಅಈಯಲ್ಲಿ ಪೂರ್ಣಗೊಂಡಿತು.

ಇಂದಿಗೂ ವಿಶ್ವದ ಅಚ್ಚರಿಗಳ ಮುಂದೆ ತಾನೇನು ಕಮ್ಮಿಯಿಲ್ಲವೆಂಬಂತೆ ಆಗಸಕ್ಕೆ ಮುಖಮಾಡಿ ನಿಂತಿದೆ. ಅದರ ಕಟ್ಟಡ ವಿನ್ಯಾಸ, ಸ್ವರೂಪ, ವ್ಯಾಪ್ತಿ ಮತ್ತು ನಿರ್ಮಿತಿಯನ್ನು ಅರ್ಥ ಮಾಡಿಕೊಳ್ಳುವುದು ಎಂಥ ವಾಸ್ತು ವಿನ್ಯಾಸಕಾರರಿಗೂ ಕಬ್ಬಿಣದ ಕಡಲೆಯೇ. ಅದರ ಕತೆ ಕೇಳಿದಾಗ ನನಗೆ ರಾಮಜನ್ಮಭೂಮಿ ಹೋರಾಟ ಕಣ್ಮುಂದೆ ಬಂದಿತ್ತು. ಇದಕ್ಕೂ, ರಾಮಮಂದಿರಕ್ಕೂ ಏನು ಸಂಬಂಧ ಎಂದು ಕೇಳಬಹುದು. ಅದೇ ಇಲ್ಲಿ ಮುಖ್ಯ ಪ್ರಶ್ನೆ. ಅಸಲಿಗೆ, ಜಗತ್ತಿನ ಅತ್ಯಂತ ಪ್ರಮುಖ ಸ್ಮಾರಕ (ಞಟ್ಞ್ಠಞಛ್ಞಿಠಿ)ಗಳ ಪೈಕಿ ಒಂದಾಗಿರುವ ಹಗಿಯಾ ಸೋಫಿಯಾ, ಒಂದು ಕಾಲಕ್ಕೆ ಚರ್ಚ್ ಆಗಿತ್ತು. ಈಗಿನ ಇಸ್ತಾನ್‌ಬುಲ್ ಆಗ ಕಾನ್ಸ್ಟಂಟಿನೋಪಲ್ ಎಂದು ಕರೆಯಿಸಿ ಕೊಳ್ಳುತ್ತಿತ್ತು. ಆಗ ಪೇಗನ್ ದೇವಾಲಯಗಳ ಮಂಜಾಣದ ಮೇಲೆ, ಆರನೇ ಶತಮಾನದಲ್ಲಿ ಬೈಜಂಟೈನ್ ಸಾಮ್ರಾಜ್ಯದ
ರಾಜ ಮೊದಲನೇ ಜಸ್ಟಿನಿಯನ್, ಚರ್ಚ್ ನಿರ್ಮಿಸಲು ಮುಂದಾದ.

ನಿರ್ಮಾಣ ಕಾರ್ಯ ಸುಮಾರು ಅರ್ಧದಷ್ಟು ಮುಗಿದಾಗ, ಅದಕ್ಕೆ ಅನ್ಯ ಕೋಮಿನ ಕೆಲ ಕಿಡಿಗೇಡಿಗಳು ಬೆಂಕಿ ಹಚ್ಚಿ ಧ್ವಂಸ ಮಾಡಿದರು. ಅದಾದ ಬಳಿಕ ಆತ ಅದೇ
ಜಾಗದಲ್ಲಿ ಎರಡನೇ ಚರ್ಚ್ ನಿರ್ಮಾಣಕ್ಕೆ ಮುಂದಾದ. ನಿರ್ಮಾಣ ಹಂತದಲ್ಲಿರುವಾಗ, ಭೂಕಂಪದಿಂದಾಗಿ ಚರ್ಚ್ ನಿರ್ಮಾಣಕ್ಕೆ ವ್ಯತ್ಯಯವುಂಟಾಯಿತು. ಆತ ತನ್ನ ಪ್ರಯತ್ನ ವನ್ನು ನಿಲ್ಲಿಸಲಿಲ್ಲ. ಅಲ್ಲಿಯೇ ಮೂರನೇ ಚರ್ಚ್ ನಿರ್ಮಾಣ ಕೈಗೆತ್ತಿಕೊಂಡ. ಆರು ವರ್ಷಗಳ ಅವಽಯಲ್ಲಿ ಹಗಿಯಾ ಸೋಫಿಯಾ ನಿರ್ಮಾಣ ಮುಗಿದಾಗ, ಅದು ಜಗತ್ತಿನ ಅತಿ ವಿಸ್ಮಯಕಾರಿ ಕಟ್ಟಡವಾಗಿ ನಿಂತಿತ್ತು.

ಅದಾಗಿ ಎರಡು ವರ್ಷಗಳ ಬಳಿಕ ಮತ್ತೊಮ್ಮೆ ಸಂಭವಿಸಿದ ಭೂಕಂಪಕ್ಕೆ ಚರ್ಚ್ ಅಲ್ಲಲ್ಲಿ ಬಿರುಕು ಬಿಟ್ಟಿತ್ತು. ಎರಡನೇ ಜಸ್ಟಿನಿಯನ್ ಚರ್ಚ್ ದುರಸ್ತಿ ಕೆಲಸವನ್ನು ಮುಂದುವರಿಸಿ ಅದನ್ನು ಇನ್ನಷ್ಟು ಅಭಿವೃದ್ಧಿಪಡಿಸಿದ. ಅದು ಪೂರ್ಣಗೊಂಡಾಗ, ನೆಲಮಟ್ಟದಿಂದ ೫೫ ಮೀಟರ್ ಎತ್ತರಕ್ಕೆ ತಲೆಯೆತ್ತಿತ್ತು. ಅದರ ಗೋಳ ಗುಮ್ಮಟದ ವ್ಯಾಸ ಮೂವತ್ತೊಂದು ಮೀಟರಿನಷ್ಟು ವಿಸ್ತಾರಕ್ಕೆ ಚಾಚಿಕೊಂಡಿತ್ತು. ಈಸ್ಟರ್ನ್ ಆರ್ಥೊಡಾಕ್ಸ್ ಚರ್ಚ್ ಆಗಿದ್ದ ಹಗಿಯಾ ಸೋಫಿಯಾ, ಅಂದಿನ ಕ್ರಿಸ್ಟಿಯನ್ ಪಂಥಗಳಲ್ಲಿದ್ದ ಒಳಜಗಳ, ಧಾರ್ಮಿಕ ಪೈಪೋಟಿ, ಕಿತ್ತಾಟದಿಂದ, ನಾಲ್ಕನೇ ಕ್ರುಸೇಡ್ ಬಳಿಕ ಕ್ಯಾಥೋಲಿಕ್ ಚರ್ಚ್ ಆಗಿ ಪರಿವರ್ತನೆಯಾಯಿತು. ೧೨೬೧ ರಲ್ಲಿ ಪುನಃ ಈಸ್ಟರ್ನ್ ಆರ್ಥೊಡಾಕ್ಸ್ ಚರ್ಚ್ ಆಗಿ ಮೊದಲಿನ ಸ್ವರೂಪಕ್ಕೆ ಮರಳಿತು.

ಅದೇನೇ ಇರಲಿ, ಹಗಿಯಾ ಸೋಫಿಯಾ ನಿರ್ಮಾಣವಾಗಿ ಒಂದು ಸಾವಿರ ವರ್ಷಗಳ ತನಕ ಚರ್ಚ್ ಆಗಿಯೇ ಇತ್ತು. ಈ ಮಧ್ಯೆ ನೂರಾರು ವರ್ಷಗಳ ಕಲಹ, ದಾಳಿ, ಹಿಂಸಾಚಾರ, ರಕ್ತಪಾತ, ಯುದ್ಧಗಳ ನಂತರ ಕಾನ್ಸ್ಟಂಟಿ ನೋಪಲ್ ನಗರವನ್ನು ೧೪೫೩ರಲ್ಲಿ ಒಟ್ಟೋಮನ್ ಸುಲ್ತಾನರು ವಶಪಡಿಸಿಕೊಂಡರು. ಎರಡನೇ ಸುಲ್ತಾನ್ ಮುರಾದ್ ತನ್ನ ಸಾರ್ವಭೌಮತ್ವವನ್ನು ಸ್ಥಾಪಿಸಲು ಕಾನ್ಸ್ಟಂಟಿನೋಪಲ್ ನಗರದ ಹೆಸರನ್ನು ‘ಇಸ್ತಾನ್‌ಬುಲ್’ ಎಂದು ನಾಮಕರಣ
ಮಾಡಿದ. ಕ್ರಿಶ್ಚಿಯನ್ನರ ಪ್ರಭುತ್ವದಲ್ಲಿದ್ದ ಹೆಗ್ಗುರುತುಗಳನ್ನು ನಾಶಪಡಿಸಲು ಮುಂದಾದ. ನಗರದಲ್ಲಿದ್ದ ಚರ್ಚುಗಳನ್ನು ಲೂಟಿ ಮಾಡಿ ವಶಪಡಿಸಿಕೊಳ್ಳುವಂತೆ ಆದೇಶಿಸಿದ. ಆಗ ಅವನಿಗೆ ಕಣ್ಣಿಗೆ ಬಿದ್ದಿದ್ದು ಹಗಿಯಾ ಸೋಫಿಯಾ. ಆದರೆ ಆ ಕಟ್ಟಡವನ್ನು ಧ್ವಂಸಗೊಳಿಸುವುದು ಅಷ್ಟು ಸುಲಭವಲ್ಲ ಎಂದು ಅವನಿಗೆ ಮನವರಿಕೆಯಾಯಿತು.

ಅಷ್ಟೊತ್ತಿಗೆ ಆತ ಕಾಲವಾಗಿ ಎರಡನೇ ಸುಲ್ತಾನ್ ಮುರಾದ್ ಮಹಮದ್ ಪಟ್ಟಕ್ಕೆ ಬಂದಿದ್ದ. ಆತ ಹಗಿಯಾ ಸೋಫಿಯಾ ಚರ್ಚನ್ನು ನೆಲಸಮ ಮಾಡುವ
ಬದಲು, ಮಸೀದಿಯಾಗಿ ಪರಿವರ್ತಿಸಿದರೆ ಹೇಗೆ ಎಂದು ಯೋಚಿಸಿದ. ಆಗ ಹಗಿಯಾ ಸೋಫಿಯಾ ಕಟ್ಟಡ ಅಲ್ಲಲ್ಲಿ ಶಿಥಿಲವಾಗಿತ್ತು. ಆತ ಅದನ್ನು ಅಲ್ಲಲ್ಲಿ ಪುನರುಜ್ಜೀವನಗೊಳಿಸಿ, ಒಂದು ದಿನ ಅದನ್ನು ಮಸೀದಿ ಎಂದು ಘೋಷಿಸಿಬಿಟ್ಟ! ೧೪೫೩ರ ಜೂನ್ ತಿಂಗಳ ಮೊದಲ ಶುಕ್ರವಾರದಂದು ಅಲ್ಲಿಗೆ ಹೋಗಿ ಪ್ರಾರ್ಥನೆ ಸಲ್ಲಿಸಿ, ಇನ್ನು ಮುಂದೆ ಇದು ಮುಸಲ್ಮಾನರ ಪವಿತ್ರ ಪ್ರಾರ್ಥನಾ ಸ್ಥಳ ಎಂದು ಅಧಿಕೃತವಾಗಿ ಸಾರಿದ.

ಸುಮಾರು ಒಂದು ಸಾವಿರ ವರ್ಷಗಳ ಕಾಲ ವಿಶ್ವದ ಕ್ರಿಶ್ಚಿಯನ್ನರ ಪಾಲಿಗೆ ಏಟ್ಝqs Uಜಿobಟಞ ಆಗಿದ್ದ, ಅತ್ಯಂತ ಪವಿತ್ರ ಸ್ಥಳಗಳ ಪೈಕಿ ಒಂದಾಗಿದ್ದ ಹಗಿಯಾ ಸೋಫಿಯಾ ಎಂಬ ಚರ್ಚ್ ನೋಡನೋಡುತ್ತಿದ್ದಂತೆ ಮಸೀದಿಯಾಗಿ ಬದಲಾಗಿಬಿಟ್ಟಿತು. ಅದು ಇಸ್ತಾನ್‌ಬುಲ್‌ನಲ್ಲಿ ಒಟ್ಟೋಮನ್ ಚಕ್ರಾಧಿಪತ್ಯದ ಪ್ರಪ್ರಥಮ ಮಸೀದಿ ಆಗಿಹೋಯಿತು. ಆಗ  ಆ ಕಟ್ಟಡಕ್ಕೆ ಆಯಾಸೋ- ಎಂದು ನಾಮಕರಣ ಮಾಡಲಾಯಿತು. ಇಡೀ ಜಗತ್ತು ಉಸಿರು ಬಿಗಿ ಹಿಡಿದುಕೊಂಡು ನಂತರ
ಸುಮ್ಮನಾಯಿತು!

ಎರಡನೇ ಸುಲ್ತಾನ್ ಮುರಾದ್ ಮಹಮದ್ ಹಗಿಯಾ ಸೋಫಿಯಾ ಚರ್ಚನ್ನು ಮಸೀದಿಯಾಗಿ ಕಾಣುವಂತೆ ಮಾಡಲು ವಿನ್ಯಾಸವನ್ನು ಅದಕ್ಕನುಗುಣವಾಗಿ ಬದಲಿಸಲು ಮುಂದಾದ. ಮಸೀದಿಯ ಗೆಟಪ್ ಕಾಣುವಂತೆ ನಾಲ್ಕು ಗೋಪುರ (ಮಿನರೆಟ್)ಗಳನ್ನು ನಿರ್ಮಿಸಿದ. ಮುಂದಿನ ಐದು ನೂರು ವರ್ಷಗಳ ತನಕ ಅಂದರೆ ೧೯೩೪ರವರೆಗೆ ಅದು ಮಸೀದಿಯಾಗಿಯೇ ಇತ್ತು. ಆ ಹೊತ್ತಿಗೆ ಅದು ಒಂದು ಕಾಲಕ್ಕೆ, ಸಹಸ್ರ ವರ್ಷಗಳ ಕಾಲ ಕ್ರಿಶ್ಚಿಯನ್ನರ ಪವಿತ್ರ ಶ್ರದ್ಧಾ ಭಕ್ತಿಯ ಕೇಂದ್ರವಾಗಿತ್ತು ಎಂಬುದು ಮರೆತೇ ಹೋಗಿತ್ತು. ಅನಂತರ ‘ಆಧುನಿಕ ಟರ್ಕಿಯ ನಿರ್ಮಾತೃ’ ಎಂದೇ ಕರೆಯಿಸಿಕೊಂಡ ಟರ್ಕಿಯ ಪ್ರಪ್ರಥಮ ಅಧ್ಯಕ್ಷ ಮುಸ್ತ-
ಕೆಮಾಲ್ ಅಟಾಟರ್ಕ್ ಅಧಿಕಾರಕ್ಕೆ ಬಂದ.

ಆತನಿಗೆ ತಾನು ಲೋಕದ ಎದುರಿಗೆ ‘ಸೆಕ್ಯುಲರ್’ ಎಂದು ತೋರಿಸಿಕೊಳ್ಳುವ ಜರೂರಿತ್ತು. ನ್ಯಾಯಯುತವಾಗಿ ಆತ ಆ ಮಸೀದಿಯನ್ನು ಕ್ರಿಶ್ಚಿಯನ್ನರಿಗೆ ಹಿಂದಿರುಗಿಸಬಹುದಿತ್ತು ಮತ್ತು ಹಿಂದಿರುಗಿಸಲೇಬೇಕಿತ್ತು. ಹಾಗೆ ಮಾಡಿದ್ದರೆ ಆತ ಮಹಾನಾಯಕ ಎಂದು ಕರೆಯಿಸಿಕೊಳ್ಳುತ್ತಿದ್ದ. ಆದರೆ ಅಟಾಟರ್ಕ್ ಅದನ್ನು
ಮ್ಯೂಸಿಯಂ ಮಾಡುತ್ತಿರುವುದಾಗಿ ಘೋಷಿಸಿಬಿಟ್ಟ! ಎಂಥ ದುರ್ದೈವ ನೋಡಿ, ಒಂದು ಸಾವಿರ ವರ್ಷಗಳ ಕಾಲ ಚರ್ಚ್ ಆಗಿದ್ದ ಆ ಭವ್ಯ ಕಟ್ಟಡ, ಗಂಡೂ ಅಲ್ಲ, ಹೆಣ್ಣೂ ಅಲ್ಲದ, ಬೇವರ್ಸಿ ವಸ್ತು ಸಂಗ್ರಹಾಲಯವಾಗಿಬಿಟ್ಟಿತು! ಅಲ್ಲಿ ಪ್ರಾರ್ಥನೆ ಸಲ್ಲಿಸುವುದನ್ನು ನಿಷೇಧಿಸಲಾಯಿತು. ಅಷ್ಟಾದರೂ ಟರ್ಕಿಯಲ್ಲಿನ ಮುಸ್ಲಿಮರು ಆ ಕಟ್ಟಡದ ಮೇಲಿನ ತಮ್ಮ ಹಿಡಿತವನ್ನು ಸಡಿಲಿಸಿರಲಿಲ್ಲ. ಅದನ್ನು ಮಸೀದಿ ಮಾಡಲೇ ಬೇಕು ಎಂಬ ಒತ್ತಡ ಹೆಚ್ಚುತ್ತಲೇ ಇತ್ತು. ಐವತ್ತು ವರ್ಷಗಳ ಬಳಿಕ, ಆ ವಸ್ತು ಸಂಗ್ರಹಾಲಯದ ಒಂದು ಪಾರ್ಶ್ವದಲ್ಲಿ ಪ್ರಾರ್ಥನೆ ಸಲ್ಲಿಸಲು ಒಂದು ಕೋಣೆಯನ್ನು ಮೀಸಲಿಡಲು ಸರಕಾರ ತೀರ್ಮಾನಿಸಿತು.

ಪ್ರಾರ್ಥನೆ ಎಂದ ಮೇಲೆ, ಅದಕ್ಕೆ ಆಹ್ವಾನಿಸಲು ಮತ್ತು ಅದು ನಾಲ್ಕೂ ದಿಕ್ಕಿಗೆ ಮೊಳಗುವಂತೆ ಮಾಡಲು ಧ್ವನಿವರ್ಧಕಗಳನ್ನು ಅಳವಡಿಸಬೇಕೆಂಬ ಒತ್ತಡವೂ
ಹೆಚ್ಚಾಯಿತು. ಈ ಮಧ್ಯೆ ಅಮೆರಿಕ ಮತ್ತು ಯುರೋಪಿನಲ್ಲಿ ಆ ಕಟ್ಟಡವನ್ನು ಮರಳಿ ಕ್ರಿಶ್ಚಿಯನ್ನರಿಗೆ ಬಿಟ್ಟುಕೊಡಬೇಕು ಎಂಬ ಆಂದೋಲನ ಆರಂಭವಾಯಿತು. ಗ್ರೀಕ್-ಅಮೆರಿಕನ್ ನಾಯಕ ಕ್ರಿಸ್ ಸ್ಪಿರೌ ನೇತೃತ್ವದಲ್ಲಿ ಈ ಸಂಬಂಧವಾಗಿ ನಲವತ್ತಾರು ದೇಶಗಳ ಜನರನ್ನು ಒಟ್ಟುಗೂಡಿಸಿ ಹೋರಾಟ ಆರಂಭವಾಯಿತು. ಕ್ರಿಶ್ಚಿಯನ್ನರ ಹೋರಾಟ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದ್ದುದನ್ನು ಗಮನಿಸಿದ ಟರ್ಕಿಯ ಈಗಿನ ಸರ್ವಾಧಿಕಾರಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್
ಗೆ, ಆ ಕಟ್ಟಡವನ್ನು ಮ್ಯೂಸಿಯಂ ಆಗಿ ಇಟ್ಟುಕೊಂಡರೆ, ಸಮಸ್ಯೆ ತಪ್ಪಿದ್ದಲ್ಲ ಎಂಬುದು ಖಾತ್ರಿಯಾಯಿತು. ಹಾಗೆಂದು ಅದನ್ನು ಕ್ರಿಶ್ಚಿಯನ್ನರಿಗೆ ಮರಳಿ ನೀಡುವ ಪ್ರಶ್ನೆಯೇ ಇರಲಿಲ್ಲ.

ಸುಮಾರು ೮೫ ವರ್ಷಗಳ ನಂತರ ಮೊದಲ ಬಾರಿಗೆ ಅಂದರೆ ೨೦೧೬ರಲ್ಲಿ, ಅಧ್ಯಕ್ಷ ಎರ್ಡೊಗನ್ ಅಧಿಕೃತವಾಗಿ ನಮಾಜ್ ಮಾಡಲು ಪರವಾನಗಿ ಕೊಟ್ಟುಬಿಟ್ಟ. ಅದಾಗಿ ಕೆಲವೇ ದಿನಗಳಲ್ಲಿ, ‘ಇನ್ನು ಮುಂದೆ ಆ ಕಟ್ಟಡ ವಸ್ತು ಸಂಗ್ರಹಾಲಯ ಅಲ್ಲ, ಅದು ಮಸೀದಿ’ ಎಂದು ಸಾರಿಬಿಟ್ಟ! ಹಗಿಯಾ ಸೋಫಿಯಾ ನಂತರ ಆಯಾಸೋ- ಆಗಿ, ಈಗ ಆಯಾಸೋ- ಮುಝೆಸಿ ಎಂದು ಕರೆಯಿಸಿಕೊಳ್ಳುತ್ತಿದೆ. ‘ಈ ಭೂಮಿ ಇರುವ ತನಕ ಆ ಕಟ್ಟಡ ಮುಸ್ಲಿಮರ ಮಸೀದಿಯಾಗಿಯೇ ಇರುತ್ತದೆ, ಸಂಶಯ ಬೇಡ’ ಎಂದು ಅಧ್ಯಕ್ಷ ಎರ್ಡೋಗನ್ ಹೇಳಿದ್ದನ್ನು ಜಗತ್ತು ಕೇಳಿಸಿಕೊಂಡು ಸುಮ್ಮನಾಯಿತು.

ಉಫ್ … ಈಗ ರಾಮಜನ್ಮಭೂಮಿ ಹೋರಾಟ… ಅದಕ್ಕೆ ಸಿಕ್ಕ ಜಯವನ್ನು ನೋಡಿ.. ಹಗಿಯಾ ಸೋಫಿಯಾ ನೆನಪಿನಲ್ಲಿ ಅಯೋಧ್ಯೆಯ ಹೊಳಪನ್ನು ನೋಡಿದರೆ, ಶ್ರೀರಾಮ ಮಂದಿರದ ಮಹತ್ವ ಅರ್ಥವಾದೀತು. ಮೂಲ ಮಂದಿರವಿದ್ದ ಜಾಗದಲ್ಲಿ, ಮಸೀದಿ ಕಾಣಿಸಿಕೊಂಡು, ನಂತರ ಆ ಮಸೀದಿ ಜಾಗದಲ್ಲಿ, ಈಗ ಮಂದಿರ ನಿರ್ಮಾಣವಾಗಿದ್ದು ಈ ವಿಶ್ವದ ಎಲ್ಲ ಅಚ್ಚರಿಗಳಿಗೆ ಸಮ!