ಕದನ ಕುತೂಹಲ
ಶಶಿಕುಮಾರ್ ಕೆ.
ಹಮಾಸ್ ಉಗ್ರರಿಂದ ತನ್ನ ಮೇಲೆ ಅಪ್ರಚೋದಿತ ದಾಳಿ ನಡೆದ ಬೆನ್ನಲ್ಲೇ ತಿರುಗಿಬಿದ್ದ ಇಸ್ರೇಲ್, ಅವರ ನೆಲೆಯಾದ ಗಾಜಾಪಟ್ಟಿಯ ಸರ್ವನಾಶಕ್ಕೆ
ಶಪಥಗೈದಿದೆ. ಹಮಾಸ್ ಉಗ್ರರ ಅಡಗುದಾಣಗಳನ್ನು ವಾಯುದಾಳಿಯ ಮುಖಾಂತರ ಪುಡಿಗಟ್ಟುತ್ತಿದೆ. ಮತ್ತೊಂದೆಡೆ ತನ್ನ ಮೇಲೆ ಎರಗಿರುವ ಸಿರಿಯಾ ಮತ್ತು ಲೆಬನಾನ್ ಗಳ ದಾಳಿಗಳನ್ನೂ ಇಸ್ರೇಲ್ ಮೆಟ್ಟಿನಿಂತು ತಕ್ಕ ಉತ್ತರ ನೀಡುತ್ತಿದೆ. ಇತಿಹಾಸವನ್ನು ಕೆದಕುತ್ತಾ ಹೋದರೆ, ಮೈನವಿರೇಳಿಸುವ ಇಂಥ ಅನೇಕ ಕಾರ್ಯಾಚರಣೆಗಳನ್ನು ಇಸ್ರೇಲ್ ಕೈಗೊಂಡಿರುವುದು ಗೊತ್ತಾಗುತ್ತದೆ.
ಇಸ್ರೇಲ್‌ನ ಬಗ್ಗೆ ಮಾತನಾಡಬೇಕೆಂದರೆ ಅದರ ಗುಪ್ತಚರ ಏಜೆನ್ಸಿ ‘ಮೊಸಾದ್’ ಬಗ್ಗೆಯೂ ತಿಳಿದುಕೊಳ್ಳಬೇಕು. ಮೊಸಾದ್‌ನ ಒಂದು ‘ಅಂಡರ್‌ಕವರ್ ಆಪರೇಷನ್’ ಇಲ್ಲಿ ಉಲ್ಲೇಖನೀಯ. ೧೯೭೬ರಲ್ಲಿ, ಪ್ಯಾಲೆಸ್ತೀನಿನ ಉಗ್ರಗಾಮಿ ಗಳು ‘ಏರ್ ಫ್ರಾನ್ಸ್’ ವಿಮಾನವನ್ನು ಅಪಹರಿಸಿ, ಅದರಲ್ಲಿದ್ದ ೨೫೦ ಪ್ರಯಾಣಿಕರ ಪೈಕಿ ಇಸ್ರೇಲ್‌ನ ೧೦೩ ಯೆಹೂದಿಗಳ ಗುಂಪನ್ನು ಮಾತ್ರ ಒತ್ತೆಯಾಳಾಗಿಟ್ಟುಕೊಂಡು, ಮಿಕ್ಕವರನ್ನೆಲ್ಲಾ ವಾಪಸ್ ಕಳಿಸಿದರು ಹಾಗೂ ಇಸ್ರೇಲ್ ಜೈಲಿನಲ್ಲಿದ್ದ ಪ್ಯಾಲೆಸ್ತೀನಿನ ೪೩ ಉಗ್ರರ ಬಿಡುಗಡೆಗೆ ಬೇಡಿಕೆಯಿಟ್ಟರು.
ಇಸ್ರೇಲ್‌ನಿಂದ ಸುಮಾರು ೨,೦೪೭ ಮೈಲು (ಅಂದರೆ ೪,೪೩೭ ಕಿ.ಮೀ.) ದೂರದ ಉಗಾಂಡಾಕ್ಕೆ ಸದರಿ ವಿಮಾನವನ್ನು ಹೈಜಾಕ್ ಮಾಡಿದ್ದ ಉಗ್ರರ ಬೆನ್ನತ್ತಿ, ಅವರಿದ್ದಲ್ಲಿಗೇ ನುಗ್ಗಿ, ತನ್ನ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಕರೆತಂದ ಇಸ್ರೇಲ್ ಸೇನೆಯ ಬೆನ್ನೆಲುಬಾಗಿದ್ದೇ ಮೊಸಾದ್ ಗುಪ್ತಚರ
ಸಂಸ್ಥೆ. ಈ ಕಾರ್ಯಾಚರಣೆಗೆ ‘ಆಪರೇಷನ್ ಥಂಡರ್ ಬೋಲ್ಟ್’ (ಅಥವಾ ‘ಆಪರೇಷನ್ ಎಂಟೆಬ್ಬೆ’) ಎಂಬ ಹೆಸರನ್ನು ಇಸ್ರೇಲ್ ನೀಡಿತ್ತು. ದೂರದ ಉಗಾಂಡಾಕ್ಕೆ ತೆರಳಿ ತನ್ನ ಪ್ರಜ್ಞೆಗಳನ್ನು ರಕ್ಷಿಸುವುದು ಇಸ್ರೇಲ್‌ಗೆ ನಿಜಕ್ಕೂ ಸವಾಲಾಗಿತ್ತು. ಕಾರಣ, ಉಗಾಂಡಾಕ್ಕೆ ತೆರಳಬೇಕಾದರೆ ಶತ್ರುರಾಷ್ಟ್ರಗಳ
ಮೂಲಕವೇ ಹಾದುಹೋಗಬೇಕಾದ ಹಾಗೂ ಇಂಧನ ತುಂಬಿಸಿಕೊಳ್ಳಲೆಂದು ಮಾರ್ಗಮಧ್ಯೆ ಲ್ಯಾಂಡಿಂಗ್ ಮಾಡಬೇಕಾದ ಅನಿವಾರ್ಯತೆ ಇಸ್ರೇಲ್ ಗಿತ್ತು.
ಯಾವ ರಾಷ್ಟ್ರವಾದರೂ ಇಂಥ ರಿಸ್ಕ್ ತೆಗೆದುಕೊಳ್ಳುವುದು ವಿರಳ. ಜತೆಗೆ ಇಸ್ರೇಲ್ ಕೂಡ ಈ ಕಾರ್ಯಾಚರಣೆಯನ್ನು ಜಗತ್ತಿಗೆ ತಿಳಿಯದಂತೆ ನಡೆಸ ಬೇಕಾಗಿತ್ತು. ಇಸ್ರೇಲ್ ಸೇನೆಯ ೪ ವಿಮಾನಗಳು ಉಗಾಂಡಾದ ಎಂಟೆಬ್ಬೆ ವಿಮಾನ ನಿಲ್ದಾಣಕ್ಕೆ ಹೊರಟುನಿಂತವು. ಮೊದಲ ವಿಮಾನದಲ್ಲಿ ಇಸ್ರೇಲ್‌ನ ಸೈನಿಕರು ತುಂಬಿಕೊಂಡರೆ, ಎರಡು ಮತ್ತು ಮೂರರಲ್ಲಿ ಕ್ರಮ ವಾಗಿ ವೈದ್ಯಕೀಯ ತಂಡ ಹಾಗೂ ವಿಮಾನಗಳಿಗೆ ಬೇಕಾದ ಇಂಧನವನ್ನು, ನಾಲ್ಕನೆಯ ವಿಮಾನದಲ್ಲಿ ಕಪ್ಪುಬಣ್ಣದ ಮರ್ಸಿಡಿಸ್ ಬೆಂಝ್ ಕಾರು ಮತ್ತು ಒಂದೆರಡು ಜೀಪುಗಳನ್ನು ತುಂಬಿಕೊಳ್ಳಲಾಯಿತು.
‘ಏರ್ -ನ್ಸ್’ ವಿಮಾನ ವನ್ನು ಅಪಹರಿಸಿದ್ದು ಪ್ಯಾಲೆಸ್ತೀನಿನ ಉಗ್ರರು. ಅದರಲ್ಲಿನ ಪ್ರಯಾಣಿಕರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದು ಉಗಾಂಡಾದ ಎಂಟೆಬ್ಬೆ ವಿಮಾನ ನಿಲ್ದಾಣದಲ್ಲಿ. ಈ ಕುಕೃತ್ಯಕ್ಕೆ ಉಗಾಂಡಾದ ಅಂದಿನ ಕ್ರೂರಿ ಅಧ್ಯಕ್ಷ ‘ಇದಿ ಅಮೀನ್’ ಸಾಥ್ ನೀಡಿದ್ದ. ಆತ ಪ್ಯಾಲೆಸ್ತೀನಿನ ಉಗ್ರರನ್ನು ಭೇಟಿಯಾಗಲು ‘ಎಂಟೆಬ್ಬೆ’ಗೆ ಬಂದಾಗ ಕಪ್ಪುಬಣ್ಣದ ಮರ್ಸಿಡಿಸ್ ಬೆಂಝ್ ನಲ್ಲಿ ಬಂದಿದ್ದನಂತೆ. ಉಗ್ರರಿಂದ ಬಿಡುಗಡೆಯಾದ ಅನ್ಯ ರಾಷ್ಟ್ರಗಳ ಪ್ರಯಾಣಿಕರಿಂದ ಈ ಮಾಹಿತಿ ಪಡೆದುಕೊಂಡಿದ್ದ ಇಸ್ರೇಲ್‌ನ ಸೇನೆ, ಥೇಟ್ ‘ಇದಿ ಅಮೀನ್’ ರೀತಿಯಲ್ಲೇ ತನ್ನ ಸೈನಿಕನೊಬ್ಬನನ್ನು ತಯಾರು ಮಾಡಿತ್ತು.
ಇಸ್ರೇಲ್‌ನಿಂದ ಹೊರಟ ೪ನೇ ವಿಮಾನದಲ್ಲಿ ಮರ್ಸಿಡಿಸ್ ಬೆಂಝ್ ಕಾರನ್ನು ತುಂಬಿಕೊಂಡಿದ್ದು ಏಕೆಂಬುದು ಈಗ ಗೊತ್ತಾಯಿತಲ್ಲಾ! ಅಂದು ೧೯೭೬ರ ಜೂನ್ ೧೪. ಉಗ್ರರು ನೀಡಿದ್ದ ಡೆಡ್ ಲೈನ್ ಕೊನೆಗೊಳ್ಳುವ ಸಮಯವಾಗಿತ್ತು. ಅದೇ ವೇಳೆಗೆ ಎಂಟೆಬ್ಬೆ ವಿಮಾನ ನಿಲ್ದಾಣದ ಮೇಲೆ ಗ್ರೆನೇಡ್ ಮತ್ತು
ಗುಂಡಿನ ಸುರಿಮಳೆ ಶುರುವಾಗಿ ಪ್ಯಾಲೆಸ್ತೀನಿ ಉಗ್ರರು ಮತ್ತು ಉಗಾಂಡಾ ಸೈನಿಕರು ಕಕ್ಕಾಬಿಕ್ಕಿಯಾದರು. ನೋಡ ನೋಡುತ್ತಲೇ ಏರ್‌ಪೋರ್ಟ್ ಒಳನುಗ್ಗಿದ ಇಸ್ರೇಲಿ ಸೈನಿಕರು ತಮ್ಮ ೧೦೩ ಯೆಹೂದಿ ಒತ್ತೆಯಾಳುಗಳನ್ನು ಬಿಡಿಸಿಕೊಂಡು ಸುರಕ್ಷಿತವಾಗಿ ತಾಯ್ನೆಲಕ್ಕೆ ಕರೆದೊಯ್ದರು. ಈ ಕಾರ್ಯಾ ಚರಣೆಯ ಮುಂದಾಳತ್ವ ವಹಿಸಿದ್ದು ಇಸ್ರೇಲ್ ಡಿಫೆನ್ಸ್ ಫೋರ್ಸ್‌ನ (ಐಡಿಎಫ್) ಅಧಿಕಾರಿ ಯೋನಾಥನ್ ನೆತನ್ಯಾಹು. ಹೀಗೆ ತನ್ನ ರಾಷ್ಟ್ರದ ಒಬ್ಬ ಪ್ರಜೆಗೂ ಶತ್ರುಗಳಿಂದ/ಉಗ್ರರಿಂದ ಕಿಂಚಿತ್ ತೊಂದರೆಯಾದರೂ ಇಸ್ರೇಲ್ ಸಹಿಸುವುದಿಲ್ಲ, ಶತ್ರುಗಳ ರುಂಡ ಚೆಂಡಾಡದೆ ಬಿಡುವುದಿಲ್ಲ.
ಮೊಸಾದ್‌ನ ಮತ್ತೊಂದು ರೋಚಕ ಕಾರ್ಯಾಚರಣೆ ಹೀಗಿದೆ: ೧೯೭೨ರಲ್ಲಿ ಜರ್ಮನಿಯ ಮ್ಯೂನಿಕ್ ಒಲಿಂಪಿಕ್ಸ್ ವೇಳೆ ದಾಳಿ ನಡೆಸಿದ ಉಗ್ರರು, ಇಸ್ರೇಲ್‌ನ ೬ ತರಬೇತುದಾರರು ಮತ್ತು ೫ ಕ್ರೀಡಾಪಟುಗಳು ಸೇರಿದಂತೆ ೧೭ ಮಂದಿಯನ್ನು ಅಮಾನುಷವಾಗಿ ಕೊಂದರು. ಈ ಉಗ್ರರನ್ನು ಹುಡುಕಿ ಹುಡುಕಿ ಕೊಲ್ಲುವಲ್ಲಿ ಇಸ್ರೇಲ್ ಯಶಸ್ವಿಯಾಯಿತು. ಮೊಸಾದ್‌ನ ‘ಮಾಸ್ಟರ್‌ಮೈಂಡ್’ ಪಾತ್ರ ವಹಿಸಿದ್ ಈ ಕಾರ್ಯಾಚರಣೆ ಉಗ್ರರ ಎದೆನಡುಗಿಸು ವಂತಿತ್ತು.
ಇಡೀ ಜಗತ್ತಿನಲ್ಲಿ ‘ಸಾಮೂಹಿಕ ಮಾರಣಹೋಮ’ಕ್ಕೆ ಗಣನೀಯವಾಗಿ ಒಳಗಾದ ಜನಾಂಗ ಯೆಹೂದಿಗಳೇ ಎನ್ನಬೇಕು. ಯೆಹೂದಿಗಳೆಂದರೆ ಉರಿದುಬೀಳುತ್ತಿದ್ದ ಕ್ರಿಶ್ಚಿಯನ್ನರು ಈಗ ಸ್ವಲ್ಪ ಬದಲಾಗಿದ್ದಾರೆ. ಆದರೆ ಮಧ್ಯ ಪ್ರಾಚ್ಯದ ಮುಸಲ್ಮಾನರು ಮಾತ್ರ ಇಸ್ರೇಲ್ ಎಂದರೆ ಈಗಲೂ ಕೆಂಡ ಕಾರುತ್ತಾರೆ. ನಮ್ಮ ಕಾಶ್ಮೀರಕ್ಕಾಗಿ ಪಾಕಿಸ್ತಾನ ಸದಾ ಕ್ಯಾತೆ ತೆಗೆದು ಸಂಘರ್ಷಕ್ಕೆ ಮುಂದಾಗುವಂತೆಯೇ, ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಮಧ್ಯೆ ಇರುವ ಗಾಜಾಪಟ್ಟಿ ಎಂಬ ಪ್ರದೇಶಕ್ಕಾಗಿ ಪ್ಯಾಲೆಸ್ತೀನ್‌ನ ‘ಹಮಾಸ್’ ಉಗ್ರ ಸಂಘಟನೆಯು ಇಸ್ರೇಲ್ ಮೇಲೆ ಕೆಂಡ ಕಾರುತ್ತಲೇ ಇರುತ್ತದೆ ಹಾಗೂ ‘ಇಸ್ರೇಲನ್ನು ಸರ್ವನಾಶ ಮಾಡುತ್ತೇವೆ’ ಎಂದು ಯುದ್ಧಕ್ಕೆ ನಿಂತು, ಇಸ್ರೇಲ್ ಯೋಧರಿಂದ ಆಗಾಗ ಸೊಂಟ ಮುರಿಸಿಕೊಳ್ಳುತ್ತಲೇ ಇರುತ್ತದೆ.
ಅಂತೆಯೇ ಈಗ, ಹಮಾಸ್ ಉಗ್ರರು ಗಾಜಾದಲ್ಲಿ ನಿಂತು ಇಸ್ರೇಲ್ ಮೇಲೆ ದಾಳಿಗೆ ಮುಂದಾದಾಗ, ಪ್ರತಿಯಾಗಿ ತೂರಿಬಂದ ಕ್ಷಿಪಣಿಗಳು ಗಾಜಾಪಟ್ಟಿ ಯನ್ನು ಬಹುತೇಕ ನಿರ್ನಾಮ ಮಾಡಿರುವುದಕ್ಕೆ ಜಗವೇ ಸಾಕ್ಷಿಯಾಗಿದೆ. ವಿಶ್ವದ ಅನೇಕ ಮುಸ್ಲಿಂ ರಾಷ್ಟ್ರಗಳು ಇಸ್ರೇಲನ್ನು ಕಂಠ ಮಟ್ಟ ದ್ವೇಷಿಸುತ್ತಿದ್ದು, ಆ ರಾಷ್ಟ್ರಗಳಲ್ಲಿ ಇಸ್ರೇಲ್‌ನ ಪಾಸ್ ಪೋರ್ಟ್ ಕೆಲಸಕ್ಕೆ ಬರುವುದೇ ಇಲ್ಲ. ‘ಈ ಪಾಸ್‌ಪೋಟ್ ಗೆ ಎಲ್ಲ ರಾಷ್ಟ್ರಗಳ ಮಾನ್ಯತೆಯಿದೆ, ಇಸ್ರೇಲ್ ಹೊರತು
ಪಡಿಸಿ’ ಎಂಬುದಾಗಿ ಪಾಕಿಸ್ತಾನದ ಪಾಸ್‌ಪೋರ್ಟ್ ಮೇಲೆ ಬರೆಯಲಾಗಿದೆ. ಹೀಗೆ ಮುಸ್ಲಿಂ ರಾಷ್ಟ್ರಗಳು ಇಸ್ರೇಲ್ ಹಾಗೂ ಯೆಹೂದಿಗಳನ್ನು ಕಂಡರೆ ಕೆರಳುವ ಕಾರಣ, ಭಾರತಕ್ಕೆ ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ ದೇಶದ ಯಾವ ಪ್ರಧಾನಮಂತ್ರಿಯೂ ಇಸ್ರೇಲ್‌ಗೆ ಕಾಲಿಟ್ಟಿರಲಿಲ್ಲ.
ಇಸ್ರೇಲ್‌ಗೆ ಭೇಟಿಯಿತ್ತರೆ ತಮ್ಮ ‘ಸೆಕ್ಯುಲಕರಿಸಂ’ಗೆ ಧಕ್ಕೆಯಾಗುತ್ತದೆ, ಅರಬ್ ರಾಷ್ಟ್ರಗಳು ಮುನಿಸಿಕೊಳ್ಳುತ್ತವೆ. ಅರಬ್ಬರು ಮುನಿದರೆ ಭಾರತದ ಮುಸಲ್ಮಾನರೂ ಮುನಿಸಿಕೊಳ್ಳುತ್ತಾರೆ ಎಂಬ ಗ್ರಹಿಕೆಯಲ್ಲಿ ‘ಓಲೈಕೆ ರಾಜಕಾರಣಿಗಳು’ ಹಿಂಜರಿದಿದ್ದೇ ಇದಕ್ಕೆ ಕಾರಣ! ಆದರೆ ದೇಶಕ್ಕೆ ಸ್ವಾತಂತ್ರ್ಯ
ಬಂದ ೭೦ ವರ್ಷಗಳ ನಂತರ, ೨೦೧೭ರ ಜುಲೈ ೯ರಂದು, ಪ್ರಧಾನಿ ನರೇಂದ್ರ ಮೋದಿಯವರು ಪ್ರಥಮ ಬಾರಿಗೆ ಇಸ್ರೇಲ್‌ಗೆ ಐತಿಹಾಸಿಕ ಭೇಟಿ ನೀಡಿದರು. ಇದನ್ನು ಕಂಡ ದೇಶದ ತುಷ್ಟೀಕರಣ ನೀತಿಯ ಅನುಸರಣೆಗಾರರಿಗೆ ಹೊಟ್ಟೆಗೆ ಬೆಂಕಿ ಬಿದ್ದಂತಾಗಿರುವುದು ಖರೆ.
ಬಹಳ ಕಾಲದವರೆಗೆ ಭಾರತವು ಇಸ್ರೇಲ್‌ಗೆ ಭೇಟಿ ನೀಡದಿದ್ದರೂ, ನಿಜಾರ್ಥದಲ್ಲಿ ಅದರ ಹಿತರಕ್ಷಕನಾಗಿದೆ ಎಂಬುದಕ್ಕೆ ಕಾಲವೇ ಸಾಕ್ಷಿ. ಒಂದು ಕಾಲಕ್ಕೆ ವಿಶ್ವದ ಕೆಲ ದೇಶಗಳು ಯೆಹೂದಿಗಳಿಗೆ ಮೋಸ ಮಾಡಿ, ಅವರ ಮೇಲೆ ದೌರ್ಜನ್ಯವೆಸಗಿ ತಮ್ಮಲ್ಲಿಂದ ಓಡಿಸಿದಾಗ ಅವರಿಗೆ ಆಶ್ರಯ ನೀಡಿದ ಏಕೈಕ ರಾಷ್ಟ್ರ ನಮ್ಮದು. ಭಾರತವೆಂದರೆ ಇಸ್ರೇಲ್‌ಗೆ ಯಾಕಿಷ್ಟು ಪ್ರೀತಿ ಎಂಬುದೀಗ ಕೆಲವರಿಗೆ ಅರ್ಥವಾಗಿರಬಹುದು.
ಆಪತ್ಕಾಲದಲ್ಲಿ ತನಗೆ ನೆರವಾದ ಭಾರತವನ್ನು ಪ್ರತಿಯೊಬ್ಬ ಇಸ್ರೇಲಿಯೂ ದಿನಕ್ಕೊಮ್ಮೆ ನೆನೆಯುತ್ತಾನೆಂದರೆ ಕೆಲವರಿಗೆ ಅತಿಶಯೋಕ್ತಿ ಎನಿಸಬಹುದು. ಅಂತೆಯೇ ಇಸ್ರೇಲ್ ಅನೇಕ ತುರ್ತು ಸಂದರ್ಭಗಳಲ್ಲಿ ಭಾರತಕ್ಕೆ ನೆರವು ನೀಡುತ್ತಾ ಬಂದಿದೆ. ೧೯೭೧ರ ಪಾಕಿಸ್ತಾನ ವಿರುದ್ಧದ ಯುದ್ಧದಲ್ಲಿ ಅಗತ್ಯ ಶಸಾಸಗಳನ್ನು ಒದಗಿಸಿ ಭಾರತಕ್ಕೆ ಜಯಸಿಗು ವಲ್ಲಿ ಮಹತ್ವದ ಕೊಡುಗೆ ನೀಡಿದ್ದು ಇದೇ ಇಸ್ರೇಲ್. ಮುಂದೆ ೧೯೯೯ರಲ್ಲಿ ನಡೆದ ಕಾರ್ಗಿಲ್ ಯುದ್ಧದ ವೇಳೆಯೂ ಪಾಕಿಸ್ತಾನದ ಹೆಡೆಮುರಿ ಕಟ್ಟುವಲ್ಲಿ ಭಾರತಕ್ಕೆ ನೆರವಾಯಿತು ಇಸ್ರೇಲ್.
ಪೋಖ್ರಾನ್ ಪರಮಾಣು ಪರೀಕ್ಷೆಯ ವೇಳೆ ಅಮೆರಿಕ ಕೂಡ ಜತೆಗೆ ನಿಲ್ಲಲು ಹಿಂಜರಿದಾಗ ಭಾರತದ ನೆರವಿಗೆ ಬಂದಿದ್ದು ಇದೇ ಇಸ್ರೇಲ್. ಹೀಗಾಗಿ, ಪ್ರಸ್ತುತ
ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವೆ ನಡೆಯುತ್ತಿರುವ ಯುದ್ಧದ ಸಂದರ್ಭದಲ್ಲಿ ಭಾರತವು ಇಸ್ರೇಲ್‌ನ ಪರವಾಗಿ ನಿಂತಿರುವುದು ಸಮರ್ಥನೀಯವಾಗಿದೆ.
ಇಸ್ರೇಲ್ ಕುರಿತಾದ ಒಂದಷ್ಟು ರೋಚಕ ಹಾಗೂ ಅನುಕರಣೀಯ ಸಂಗತಿಗಳನ್ನು ಪ್ರತಿಯೊಬ್ಬರೂ ಅರಿಯಬೇಕು
ಜಗತ್ತಿನ ಏಕೈಕ ಯೆಹೂದಿ ರಾಷ್ಟ್ರವೇ ಇಸ್ರೇಲ್. ಪುಟ್ಟರಾಷ್ಟ್ರಗಳ ಸಾಲಿನಲ್ಲಿರುವ ಇಸ್ರೇಲ್‌ನ ಜನಸಂಖ್ಯೆ ೯೨.೨ ಲಕ್ಷ. ನಮ್ಮಲ್ಲಿ ಸಂಸ್ಕೃತ ಭಾಷೆ ಹೇಗೋ ಹಾಗೆ ಇಸ್ರೇಲ್‌ನ ಭಾಷೆ ಹಿಬ್ರೂ. ಮಧ್ಯಕಾಲೀನ ಯುಗದಲ್ಲಿ ನೇಪಥ್ಯಕ್ಕೆ ಸರಿದಿದ್ದ ಹಿಬ್ರೂವನ್ನು ಪ್ರಸ್ತುತ ತನ್ನ ಆಡಳಿತ ಭಾಷೆಯಾಗಿಸಿಕೊಂಡು ಅದಕ್ಕೆ ಮರುಜೀವ ನೀಡಿದೆ ಇಸ್ರೇಲ್. ಇಸ್ರೇಲ್‌ನ ಪ್ರತಿಯೊಬ್ಬ ಪ್ರಜೆಯೂ ಸೇನೆಯಲ್ಲಿ ಕಡ್ಡಾಯವಾಗಿ ಸೇವೆ ಸಲ್ಲಿಸಬೇಕು (ಪುರುಷರಿಗೆ ೩ ವರ್ಷ ಮತ್ತು ಸೀಯರಿಗೆ ೨ ವರ್ಷ ಸೇನಾ ತರಬೇತಿ ಕಡ್ಡಾಯ). ಇಸ್ರೇಲ್ ಸೇನೆಯಲ್ಲಿ ಶೇ.೫೦ಕ್ಕಿಂತ ಹೆಚ್ಚು ಅಧಿಕಾರಿಗಳು ಮಹಿಳೆಯರೇ.
ಜಾಗತಿಕ ಕೃಷಿಯಲ್ಲಿ ಮೂರನೇ ಸ್ಥಾನ ಮತ್ತು ವಾಯುಪಡೆಯ ಕಾರ್ಯಕ್ಷಮತೆಯಲ್ಲಿ ೪ನೇ ಸ್ಥಾನ ಪಡೆದಿರುವ ಹೆಗ್ಗಳಿಕೆ ಇಸ್ರೇಲ್‌ನದ್ದು. ಪ್ರಕ್ಷೇಪಕ ಕ್ಷಿಪಣಿ-ನಿರೋಧಕ ವ್ಯವಸ್ಥೆಯನ್ನು ಸಮರ್ಥವಾಗಿ ಅಳವಡಿಸಿಕೊಂಡಿರುವ ದೇಶ ಇಸ್ರೇಲ್. ಒಂದೊಮ್ಮೆ ಶತ್ರುಗಳು ಇಸ್ರೇಲ್ ಮೇಲೆ ಕ್ಷಿಪಣಿಯನ್ನು ತೂರಿದರೂ ಈ ತಂತ್ರಜ್ಞಾನವು ಅವನ್ನು ಮಾರ್ಗಮಧ್ಯದಲ್ಲೇ ನಿಷ್ಕ್ರಿಯಗೊಳಿಸುತ್ತದೆ. ಜಗತ್ತಿನ ಅತಿ ಶಕ್ತಿಶಾಲಿ ಗುಪ್ತಚರ ಏಜೆನ್ಸಿ ಎನಿಸಿಕೊಂಡಿರುವ
ಇಸ್ರೇಲ್‌ನ ‘ಮೊಸಾದ್’ ಅನ್ನು ‘ಗಾಡ್ ಆಫ್ ಇಂಟೆಲಿಜೆನ್ಸ್’ ಎಂದೂ ಕರೆಯಲಾಗುತ್ತದೆ.
ತಂತ್ರಜ್ಞಾನದ ವಿಷಯದಲ್ಲಿ ವಿಶ್ವದಲ್ಲೇ ೨ನೇ ಸ್ಥಾನದಲ್ಲಿರುವ ಇಸ್ರೇಲ್‌ನಲ್ಲಿ ೩,೫೦೦ಕ್ಕೂ ಹೆಚ್ಚು ತಂತ್ರಜ್ಞಾನ ಕಂಪನಿಗಳಿವೆ. ಮೋಟೊರೋಲಾ ಫೋನ್ ಮೊಟ್ಟಮೊದಲಿಗೆ ಆವಿಷ್ಕಾರಗೊಂಡಿದ್ದೇ ಇಸ್ರೇಲ್‌ನಲ್ಲಿ.
(ಲೇಖಕರು ಹವ್ಯಾಸಿ ಬರಹಗಾರರು)