Thursday, 3rd October 2024

ನಕಲಿ ಗೈಡ್‌ಗಳಿಂದ ಹಂಪಿ ಇತಿಹಾಸ ಹಾಳು !

 ಹಂಪಿ ಎಕ್ಸ್‌ಪ್ರೆಸ್

1336hampiexpress1509@gmail.com

೧೫೬೫ರಲ್ಲಿ ರಕ್ಕಸತಂಗಡಿ ಯುದ್ಧ ನಡೆಯುತ್ತದೆ. ಆ ಸಮಯದಲ್ಲಿ ಶ್ರೀಕೃಷ್ಣದೇವರಾಯ ವಿಜಾಪುರದಿಂದ ಒಂದು ಕಿ.ಮೀ ದೂರದ ತಾಳಿಕೊಟೆಗೆ
ಯುದ್ಧಕ್ಕೆ ಹೊರಟಿರುತ್ತಾನೆ. ಇಲ್ಲಿ ಸದಾಶಿವರಾಯ ಅಚ್ಯುತ ದೇವರಾಯನ ಜತೆಗೆ ಅಳಿಯ ರಾಮರಾಯನನ್ನು ಬಿಟ್ಟು ಹೋಗಿರುತ್ತಾನೆ. ಆದರೆ, ರಾಮರಾಯ ಅಚ್ಯುತದೇವಾಲಯದ ಎದುರಿನ ಬಜಾರಿನಲ್ಲಿ ಮಹಿಳೆಯರೊಂದಿಗೆ ‘ಎಂಜಾಯ್’ ಮಾಡುತ್ತಿರುತ್ತಾನೆ… ಹೀಗೆ ವಿವರಿಸುತ್ತಾನೆ
ಹಂಪಿಯ ಒಬ್ಬ ಅನಧಿಕೃತ ಗೈಡ್.

ಅದೂ ಸುಮಾರು ಇಪ್ಪತ್ತು ಪ್ರಾಥಮಿಕ ವಿದ್ಯಾರ್ಥಿಗಳ-ಶಿಕ್ಷಕರ ತಂಡಕ್ಕೆ. ಇಂಥ ಅಸಹ್ಯ ಪದಗಳನ್ನು ಕೇಳಿದ ಆ ಪುಟ್ಟ ವಿದ್ಯಾರ್ಥಿಗಳ ಮನಃಸ್ಥಿತಿ ಏನಾಗಬಹುದು? ಹೀಗೆ ಆತ ಹೇಳುತ್ತಿರುವಾಗ ಶಿಕ್ಷಕರು ತಡೆದು ಕೇಳುತ್ತಾರೆ. ‘ಯುದ್ಧದ ಸಮಯದಲ್ಲಿ ಹಂಪಿಯಲ್ಲಿ ರಾಜ ಯಾರಿರುತ್ತಾರೆ’ ಎಂದು. ಅದಕ್ಕೂ ಅದೇ ಹೇಳುತ್ತಾನೆ ‘ಶ್ರೀ ಕೃಷ್ಣದೇವರಾಯ ಹೊರಗಡೆ ಯುದ್ಧಕ್ಕೆ ಹೊರಟಿರುತ್ತಾರೆ’ ಎಂದು. (ವಾಸ್ತವವೆಂದರೆ ಶ್ರೀಕೃಷ್ಣದೇವರಾಯ ೧೫೨೯ರ ಅನಾರೋಗ್ಯದಿಂದ ಮೃತಪಟ್ಟಿರುತ್ತಾರೆ) ಅಷ್ಟೂ ಸಾಲದೆಂಬಂತೆ ಮೈಸೂರಿನ ಸಾಮಂತ ರಾಜರಿಂದಲೂ ಹಂಪಿ ಹಾಳಾಯಿತು ಎನ್ನುತ್ತಾನೆ. ಹೀಗೆ ಹಂಪಿಯ ಇತಿಹಾಸದ ಅರಿವಿಲ್ಲದ ಅನೇಕ ನಕಲಿ ಗೈಡ್‌ಗಳು ನಕಲಿ ಗುರುತಿನ ಚೀಟಿಗಳನ್ನು ಕುತ್ತಿಗೆಗೆ ನೇತಾಕಿಕೊಂಡು ಪ್ರವಾಸಿಗರನ್ನು ದಾರಿತಪ್ಪಿಸುತ್ತಿದ್ದಾರೆ.

ಇಟಲಿಯಿಂದ ನಿಕಲೋಕೊಂಟಿ, ಪರ್ಶಿಯಾದಿಂದ ಅಬ್ದುಲ್ ರಜಾಕ್, ರಷ್ಯಾದಿಂದ ನಿಕೆಟಿನ್, ಪೋರ್ಚುಗಲ್‌ನಿಂದ ಡೋಮಿಂಗೋ ಪಯಾಸ್, ಡುರೇಟ್ ಬಾರ್ಬೋಸ, ನ್ಯೂನಿಜ್… ಹೀಗೆ ವಿಜಯನಗರ ಸಾಮ್ರಾಜ್ಯಕ್ಕೆ ಭೇಟಿಕೊಟ್ಟ ಅನೇಕ ವಿದೇಶಿ ಪ್ರವಾಸಿಗರು ಸಾಮ್ರಾಜ್ಯದ ವೈಭವವನ್ನು ಕಣ್ಣಾರೆಕಂಡು ವರ್ಣಿಸಿದ್ದಾರೆ. ಅಂಥವರ ದಾಖಲೆಗಳು ಹಾಗೂ ನಮ್ಮಲ್ಲಿನ ಜೀವಂತ ಶಾಸನಗಳಿಂದ ವಿಜಯನಗರದ ಇತಿಹಾಸವನ್ನು ಅರಿತು ಹೆಮ್ಮೆಪಡುತ್ತಿದ್ದೇವೆ. ಆದರೆ ಇಂದು ನಮ್ಮವರಿಗೇ ನೈಜ-ಸತ್ಯ ಇತಿಹಾಸ ಹೇಳಲಾಗದೆ ಅಯೋಗ್ಯರಿಂದ ಅಸಂಬದ್ಧ ಇತಿಹಾಸ ಕಳುವಂತಾ ಗಿದೆ. ಅಸಲಿಗೆ ಹಂಪಿಯ ಗೈಡ್‌ಗಳದ್ದೇ ಒಂದು ಕರ್ಮಕಾಂಡ.

ಯೋಗ್ಯ ಅರ್ಹತೆಯಿಂದಲೇ ಪ್ರವಾಸೋದ್ಯಮ ಇಲಾಖೆಯ ಪರವಾನಗಿ ಪಡೆದಿರುವ ಸುಮಾರು ೧೮೦ ಅಧಿಕೃತ ಪ್ರವಾಸಿ ಮಾರ್ಗದರ್ಶಕರಿದ್ದು, ‘ಶ್ರೀಶ್ರೀಶ್ರೀ ವಿದ್ಯಾರಣ್ಯ ಪ್ರವಾಸಿ ಮಾರ್ಗದರ್ಶಿ ಸಂಘ’ ಹೆಸರಿನಲ್ಲಿ ನೋಂದಣಿಯಾಗಿದೆ. ನಕಲಿ ಗೈಡ್‌ಗಳ ವಿರುದ್ಧ ಸಂಘದ ಸದಸ್ಯರು
ಪ್ರವಾ ಸೋದ್ಯಮ ಇಲಾಖೆಯ ಉಪನಿರ್ದೇಶಕ ತಿಪ್ಪೇಸ್ವಾಮಿ ಎಂಬ ಅದ್ದಾಕಾರಿಗೆ ಅನೇಕ ಬಾರಿ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಅಂದಿನ ಪ್ರವಾಸೋದ್ಯಮ ಸಚಿವರಾಗಿದ್ದ ಸ್ಥಳೀಯ ಶಾಸಕರೂ ಆಗಿದ್ದ ಖುದ್ದು ಆನಂದ್ ಸಿಂಗ್ ಈ ವಿಷಯವಾಗಿ ಕ್ರಮಕೈಗೊಳ್ಳಲು ಪತ್ರ ಬರೆದರೂ ಆ ಪತ್ರವೂ ತಿಪ್ಪೆಸ್ವಾಮಿಯ ತಿಪ್ಪೆ ಸೇರಿದೆ. ಇನ್ನು ಇದೇ ದೂರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ, ಹಂಪಿಯ ಇರುವ ವಿಶೇಷ ಪ್ರವಾಸಿ ಪೊಲೀಸ್ ಠಾಣೆಗೆ ಸಲ್ಲಿಸಿದರೂ ಏನೂ ಪ್ರಯೋಜನವಾಗಿಲ್ಲ.

ಹಂಪಿಗೆ ಸಂಬಂಧಿಸಿದಂತೆ ಇಲ್ಲಿನ ಅಧಿಕಾರಿಗಳಿಗಿರುವ ಅಸಡ್ಡೆ ಬೇಜವಾಬ್ದಾರಿತನ ರೋಗ ಇಂದಿನದ್ದಲ್ಲ. ಇಂಥವರ ಹೊಣೆಗೇಡಿತನಕ್ಕೆ ರೋಸಿ
ಹೋಗಿ ಹಿರಿಯ ಸಂಶೋಧಕರಾದ ಡಾ.ಎಂ.ಚಿದಾನಂದ ಮೂರ್ತಿಗಳೇ ಖುದ್ದು ಹಂಪಿಯಲ್ಲಿ ನಿಂತು ‘ಹಂಪಿ ಉಳಿಸಿ ಆಂದೋಲನ’ನ ಸಂಘಟಿಸಿ ದ್ದರು. ಹೀಗಾಗಿ ಇಂದು ಹಂಪಿ ಒಂದಷ್ಟು ಸುರಕ್ಷಿತವಾಗಿದೆ. ಹಂಪಿಗೆ ಬರುವ ಪ್ರವಾಸಿಗರು ಸೂಕ್ತ ಮಾರ್ಗದರ್ಶಕರನ್ನು ಭೇಟಿಯಾಗ ಬೇಕಾದರೆ ಮೂರು ಸುತ್ತಿನ ನಕಲಿ ಗೈಡ್ ಗಳ ಕೋಟೆಯಿಂದ ಪಾರಾಗಿ ಬರಬೇಕು. ಮೊದಲಿಗೆ ಹೊಸ ಪೇಟೆಗೆ ಬಂದು ಇಳಿಯುತ್ತಲೇ ರೈಲುನಿಲ್ದಾಣ-ಬಸ್ ನಿಲ್ದಾಣದಲ್ಲೇ ಟ್ಯಾಕ್ಸಿ ಡ್ರೈವರ್‌ಗಳೇ ತಾನೂ ‘ಟೂರಿಸ್ಟ್ ಗೈಡ್’ ಎಂದು ನಂಬಿಸಿ ಪ್ಯಾಕೇಜ್ ಮಾತಾಡಿಕೊಂಡು ಪ್ರವಾಸಿಗರನ್ನು ಹತ್ತಿಸಿಕೊಳ್ಳುತ್ತಾರೆ. ಎರಡನೆಯದಾಗಿ ಇಂಥ ನಕಲಿ ಗೈಡಗಳಿಂದ ತಪ್ಪಿಸಿಕೊಂಡು ನೇರ ಹಂಪಿಯ ಬಸ್ ನಿಲ್ದಾಣದಲ್ಲಿ ಇಳಿದರೆ ಅಲ್ಲಿ ಪುಸ್ತಕ-ಫೋಟೋ ಮಾರುವವರು, ಸ್ಥಳೀಯ ಆಟೋಚಾಲಕರು ತಾವೇ ಗೈಡ್ ಎಂದು ಹೇಳಿಕೊಂಡು ಕರೆದೊಯ್ಯುತ್ತಾರೆ.

ಇನ್ನು ಮೂರನೆದಾಗಿ ಹಂಪಿಯ ಖಾಸಗಿ ಹೋಟೆಲ್-ರೂಮುಗಳಲ್ಲಿ ಉಳಿದುಕೊಂಡರೆ ಅದರ ಕೆಲ ಮಾಲೀಕರೇ ಈ ನಕಲಿ ಗೈಡ್‌ಗಳನ್ನು
ತಗುಲಿಸಿ ಕಳಿಸಿಬಿಡುತ್ತಾರೆ. ಇಂಥವರಷ್ಟೇ ಅಲ್ಲ, ಗೋಲಿ ಸೋಡ ಹೊಡೆಯುವವರೂ ಗೈಡ್‌ಗಳಾಗಿ ಮನಸ್ಸಿಗೆ ಬಂದದ್ದನ್ನು ಹೇಳುತ್ತ ಪ್ರವಾಸಿಗರು ಮಾತ್ರವಲ್ಲ, ಇತಿಹಾಸಕ್ಕೂ ಅಪಚಾರವೆಸಗುತ್ತಿದ್ದಾರೆ. ಇಂಥವರು ಹಂಪಿ ತಲುಪುವ ಮೊದಲೇ ಸಿಗುವ ಕಡ್ಡಿರಾಂಪುರ (ಕಡೆಯ ರಾಮಪುರ), ಕಮಲಾಪುರ ದಾರಿಗಳ ನಿಂತಿರುತ್ತಾರೆ. ಹೀಗಾಗಿ ಹಂಪಿಯ ಪ್ರಥಮ ದರ್ಶನ ಶ್ರೀವಿರೂಪಾಕ್ಷೇಶ್ವರ ದೇಗುಲದಲ್ಲಿ ಸೇರುವ ಅಧಿಕೃತ ಗೈಡ್‌ಗಳಿಗೆ ಅವಕಾಶವೇ ಸಿಗುವುದಿಲ್ಲ. ಇಲಾಖೆಯ ಪರವಾನಗಿ ಪಡೆದ ಗೈಡ್‌ಗಳಿಗೆ ಮೊದಲೆಲ್ಲ ೧೦ನೇ ತರಗತಿ ಕನಿಷ್ಠ ವಿರ್ದ್ಯಾತೆ ಇತ್ತು. ಇತಿಹಾಸದ ಸ್ಪಷ್ಟ
eನವಿರಬೇಕೆಂಬ ನಿಯಮವಿತ್ತು. ಅವರಿಗೆ ಸೂಕ್ತ ಪರೀಕ್ಷೆ ಗಳು ನಡೆಸಲಾಗುತ್ತಿತ್ತು. ತದನಂತರ ಈ ಮಾನದಂಡ ಪಿಯುಸಿಗೆ ನಿಗದಿಯಾಗಿ ಈಗ ಪದವಿ ಪಡೆದಿರಲೇಬೇಕೆಂಬ ನಿಯಮವಿದೆ.

ಇಂಥ ಸರಕಾರಿ ಮಾನ್ಯತೆ ಪಡೆದ ಗೈಡ್‌ಗಳು ಹೆಚ್ಚಾಗಿ ಹಿರಿಯ ಇತಿಹಾಸಕಾರರಾದ ಡಾ.ಸೂರ್ಯನಾಥ್ ಕಾಮತ್ ಅವರು ಬರೆದಿರುವ ನೈಜ ಇತಿಹಾಸವನ್ನೇ ಪ್ರವಾಸಿಗರಿಗೆ ವಿವರಿಸುತ್ತಾರೆ. ವಾರದ ಕೊನೆಯ ಮೂರುದಿನಗಳಲ್ಲಿ ಮಾತ್ರ ಪ್ರವಾಸಿಗರು ಹೆಚ್ಚಿರುವುದರಿಂದ ಆ ದಿನಗಳಲ್ಲಷ್ಟೇ
ಸಾಕಷ್ಟು ಅವಕಾಶವಿರುತ್ತದೆ. ಆದರೆ ಈ ನಕಲಿ ಗೈಡ್‌ಗಳ ಹಾವಳಿಯಿಂದ ಅರ್ಹರ ಬದುಕಿಗೂ ಅಲ್ಲದೆ ಇತಿಹಾಸಕ್ಕೂ ಚ್ಯುತಿಯಾಗುತ್ತಿದೆ.

ಹಂಪಿಯಲ್ಲಿರುವ ಎಲ್ಲ ಗೈಡ್‌ಗಳನ್ನು ಕರೆದು ಅವರು ಪಡೆದಿರಬಹುದಾದ ಅಸಲಿ ಗುರುತಿನ ಚೀಟಿಯೊಂದಿಗೆ ನಕಲಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಲು ಈ ಅಧಿಕಾರಿಗಳಿಗೇನು ಬಾಧೆ? ಬಹುಶಃ ಅವರೂ ಈ ‘ಜಾತಿ’ ರಾಜಕೀಯದ ಭಯದಿಂದ ಬಾಲ ಮುದುಡಿಕೊಂಡಿರಬೇಕು.
ಕಳೆದ ಇಪ್ಪತ್ತು, ಮೂವತ್ತು ವರ್ಷಗಳಿಂದ ಹಂಪಿಯ ಮಾರ್ಗದರ್ಶಿಗಳಾಗಿ ಜೀವನ ನಡೆಸುತ್ತಿರುವ ಅನೇಕ ಮಂದಿ ನಿತ್ಯವೂ ಹತ್ತಾರು ಬಾರಿ ಬೆಟ್ಟ , ಪರ್ವತಗಳನ್ನು ಹತ್ತಿಳಿದು ಓಡಾಡಿ, ಮಂಡಿ ಚಿಪ್ಪುಗಳು ಸವೆದುಹೋಗಿ ನಡೆಯಲಾಗದಂಥ ದುಃಸ್ಥಿತಿ ಇದೆ. ಅವರಿಗೆ ಯಾವುದೇ ಜೀವವಿಮೆ, ಆರೋಗ್ಯವಿಮೆ, ಭತ್ಯೆಗಳಿಲ್ಲ. ನಾಲ್ಕು ತಿಂಗಳು ಹೊರತುಪಡಿಸಿದರೆ ವರ್ಷಪೂರ್ತಿ ಪ್ರವಾಸಿಗರ ಬರಗಾಲ.

ಮೂರುದಿನ ದುಡಿದರೆ ನಾಲ್ಕುದಿನ ಸಾಲದ ಜೀವನ. ಇದನ್ನರಿತ ಸಹೃದಯಿ ಸುಧಾಮೂರ್ತಿಯವರು ಕೋವಿಡ್ ಕಾಲದಲ್ಲಿ ೧೦೦ ಮಂದಿ ಗೈಡ್‌ಗಳ ಖಾತೆಗೆ ತಲಾ ಹತ್ತುಸಾವಿರ ರುಪಾಯಿಗಳ ಧನಸಹಾಯ ನೀಡಿದ್ದರು. ಇಷ್ಟು ಬಿಟ್ಟರೆ ಬೊಮ್ಮಾಯಿ ಸರಕಾರ ಕಳೆದ ಏಳೆಂಟು ತಿಂಗಳಿಂದ ೫ ಸಾವಿರ ಸಹಾಯಧನ ನೀಡುತ್ತಿದ್ದು ಈಗ ಅದೂ ನಿಂತು ಹೋಗಿದೆ. ನಾಲ್ಕು ಮಂದಿಯ ಒಂದು ಕುಟುಂಬಕ್ಕೆ ಗೈಡ್ ಮಾಡುತ್ತಿದ್ದರೆ ಅವರ ಸುತ್ತ ಇಪ್ಪತ್ತು ಮಂದಿ ಹಿಂಬಾಲಿಸುವ ಪುಕ್ಕಟ್ಟೆ ಪ್ರವಾಸಿಗರೂ, ಯೂಟ್ಯೂಬ-ಪೇಸ್ಬುಕ್ ಆದರಿಸಿ ಬಂದು ಹಂಪಿ ನೋಡುವ ಅತಿಬುದ್ಧಿವಂತರು ಹೆಚ್ಚಾಗಿzರೆ. ಪ್ರಜ್ಞಾವಂತ ಗೈಡ್‌ಗಳು ಬರಿಯ ದುಡಿಮೆಯಲ್ಲದೇ ಕಿಡಿಗೇಡಿಗಳಿಂದ ಸ್ಮಾರಕಗಳನ್ನು ರಕ್ಷಿಸುವ ಕೆಲಸವನ್ನೂ ಮಾಡುತ್ತಾರೆ.

ಪ್ರವಾಸಿಗರಿಂದ ಕೈತಪ್ಪಿದ ವಸ್ತುಗಳು ಸಿಕ್ಕರೆ ಪೊಲೀಸರಿಗೆ ಒಪ್ಪಿಸುವ ಪ್ರಾಮಾಣಿಕ ಗೈಡಗಳಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಯಾವುದೇ ಗೈಡ್ ಆಗಲಿ, ಹಂಪಿ ನಿವಾಸಿಗಳಾಗಲಿ ಅವರಿಗೆ ಇದು ನಮ್ಮ ನೆಲ, ನಮ್ಮ ಇತಿಹಾಸ, ನಮ್ಮ ಸ್ಮಾರಕ, ಹೆಮ್ಮೆ ಎಂಬ ಸ್ವಾಭಿಮಾನ ಇರಬೇಕು. ಅಂಥ ವಸ್ತುನಿಷ್ಠ ಗೈಡ್‌ಗಳಲ್ಲಿ ಮೊದಲ ಹೆಸರು ಹಿರಿಯ ಪ್ರವಾಸಿ ಮಾರ್ಗದರ್ಶಿ ಮಲ್ಲಿಕಾರ್ಜುನಸ್ವಾಮಿ. ಇವರಿಂದ ಮಾರ್ಗದರ್ಶನ ಪಡೆಯುತ್ತಿದ್ದರೆ ಇತಿಹಾಸವೇ ಕಣ್ಣಮುಂದೆ ಸರಿದಂತಾಗುತ್ತದೆ. ಇಂಥ ಮಾರ್ಗದರ್ಶಿಗಳ ಸಂತತಿ ನಕಲಿಗಳ ಹಾವಳಿಯಿಂದ ಕ್ಷೀಣಿಸುತ್ತಿದೆ. ಇದು ಹಂಪಿಯ ಆಧುನಿಕ ದೌರ್ಭಾಗ್ಯ.
ಸರಕಾರ ಕೂಡಲೇ ಎಲ್ಲ ಅಽಕೃತ ಮಾರ್ಗದರ್ಶಿಗಳಿಗೆ ಸಮವಸ ಕಡ್ಡಾಯಗೊಳಿಸಬೇಕಿದೆ.

ಹಂಪಿ ಬಸ್‌ನಿಲ್ದಾಣ, ವಿರೂಪಾಕ್ಷ ದೇವಾಲಯ, ಹಜಾರರಾಮ ದೇವಾಲಯ, ವಿಜಯವಿಠಲ ದೇವಾಲಯವಲ್ಲದೇ ಆನೆಗುಂದಿಯ ಅಂಜನಾದ್ರಿ ಪರ್ವತ, ಹೊಸಪೇಟೆ ಬಸ್‌ನಿಲ್ದಾಣ-ರೈಲುನಿಲ್ದಾಣ ಹೀಗೆ ಹತ್ತಾರು ಕಡೆಗಳಲ್ಲಿ ‘ಗೈಡ್‌ಗಳ ಕೌಂಟರ್’ ಸ್ಥಾಪಿಸಿ ಅಲ್ಲಿ ಗೈಡ್‌ಗಳ ಹೆಸರು
ಅವರ ಮೊಬೈಲ್ ಸಂಖ್ಯೆಯನ್ನು ನಮೂದಿಸಿದ ಫಲಕ ಹಾಕಬೇಕಿದೆ. ಆ ಮೂಲಕ ಪ್ರವಾಸಿಗರಿಗೆ ಅಸಲಿ ಗೈಡ್‌ಗಳು ಸುಲಭವಾಗಿ ದೊರಕು ವಂತಾಗುತ್ತದೆ. ನಿಲ್ದಾಣಗಳಲ್ಲಿ ಪ್ರೀಪೇಡ್ ಟ್ಯಾಕ್ಸಿ ಆಟೋ ಸಿಗುವಂತೆ ಬರುವ ಪ್ರವಾಸಿಗರಿಗೆ ಲಭ್ಯವಿರುವ ಗೈಡ್‌ಗಳನ್ನು ಜೋಡಿಸಿ ಕಳಿಸುವ ಸುವ್ಯವಸ್ಥೆ ಜಾರಿಮಾಡಬೇಕಿದೆ. ಜತೆಗೆ ಅಂಥವ ರಿಂದ ತಪ್ಪು ಮಾಹಿತಿ, ಅಸಭ್ಯ ವರ್ತನೆ ಕಂಡುಬಂದರೆ ಕೂಡಲೇ ದೂರು ನೀಡುವಂಥ ಸಹಾಯವಾಣಿ ಸಂಖ್ಯೆಯನ್ನೂ ನೀಡಬೇಕಿದೆ.

ಇಲಾಖೆಯಿಂದ ಆರೋಗ್ಯ ಭತ್ಯೆ, ಜೀವವಿಮೆಗಳಲ್ಲದೇ ಪ್ರವಾಸಿಗರಿಲ್ಲದ ‘ ಸನ್‌ಸೀಸನ್’ ಕಾಲ ದಲ್ಲಿ ಆರ್ಥಿಕ ನೆರವು ಸಿಗುವಂಥ ‘ಸಹಕಾರ ಸಂಘ’ವನ್ನೂ ಸ್ಥಾಪಿಸಿ ಅವರ ವೃತ್ತಿ ಮತ್ತು ಬದುಕಿಗೆ ನೆರವಾಗಬೇಕಿದೆ. ಪುರಾಣದ ಪಂಪಾಕಲ್ಯಾಣ, ತ್ರೇತಾಯುಗ ರಾಮಾಯಣದ
ಕಿಷ್ಕಿಂದಾಕಾಂಡ, ವಿದ್ಯಾರಣ್ಯ ಹರಿಹರಬುಕ್ಕರಾದಿಯಾಗಿನ ಐತಿಹಾಸಿಕ, ಸಾಮ್ರಾಜ್ಯದಲ್ಲಿನ ನಗರಯೋಜನೆ-ವಿಜ್ಞಾನ, ವಾಸ್ತುಶಿಲ್ಪ ಹೀಗೆ ಐದು ದೃಷ್ಟಿಕೋನಗಳಲ್ಲಿ ಹಂಪಿಯನ್ನು ಪ್ರವಾಸಿಗರಾಗಿ ನೋಡಬೇಕು, ಯಾತ್ರಿಕರಾಗಿ ಕಾಣಬೇಕು ಎನ್ನುತ್ತಾರೆ ಹಂಪಿ ವಿದ್ಯಾರಣ್ಯ ಮಠದ ಶ್ರೀ ವಿದ್ಯಾರಣ್ಯಭಾರತೀ ಸ್ವಾಮಿಗಳು. ಅಂಥ ಮಾರ್ಗದರ್ಶಿಗಳು ಹಂಪಿಯಲ್ಲಿ ಸದಾ ಇರಬೇಕು. ಇದಕ್ಕಾಗಿ ಎಲ್ಲ ಇಲಾಖೆಗಳ ಅಧಿಕಾರಿಗಳು
ಇಚ್ಛಾಶಕ್ತಿ-ಪ್ರಾಮಾಣಿಕತೆ ತೋರಬೇಕು. ಇಲ್ಲದಿದ್ದರೆ ಅಂಥವರನ್ನು ಪಂಪಾಪತಿ ನೋಡಿಕೊಳ್ಳುತ್ತಾನೆ! ಎಚ್ಚರವಿರಲಿ!