Saturday, 20th April 2024

ಹನುಮನೆಂದಿಗೂ ಅಂಜನಾದ್ರಿಯವ…

ಅಭಿಪ್ರಾಯ

ಗವಿಸಿದ್ದೇಶ್ ಕೆ.

ಅತುಲಿತ ಬಲಧಾಮಂ ಹೇಮಶೈಲಾಭದೇಹಂ

ದನುಜವನ ಕೃಶಾನುಂ ಜ್ಞಾನಿನಾಮಗ್ರಗಣ್ಯ

ಮ. ಸಕಲಗುಣನಿಧಾನಂ ವಾನರಾಣಾಮಧಿಶಂ

ರಘುಪತಿಪ್ರಿಯಭಕ್ತಂ ವಾತಜಾತಂ ನಮಾಮಿ.

ಹನುಮಂತನೆಂದ ತಕ್ಷಣ ನಮ್ಮೆಲ್ಲರ ಮನಸ್ಸಿನಲ್ಲಿ ಬರುವ ಸಂಗತಿ, ಅವನೊಬ್ಬ ರಾಮಭಕ್ತ ಎನ್ನುವುದು. ಹೌದು, ಹನುಮ ಸಂಪೂರ್ಣ ತನ್ನನ್ನು ತಾನು, ತನ್ನ ಸ್ವಾಮಿ ರಾಮನಿಗೆ ಅರ್ಪಿಸಿಕೊಂಡವ. ಜಗತ್ತಿನಲ್ಲಿ ಭಕ್ತಿಯ ಪರಾಕಾಷ್ಠೆಗೆ ಒಂದು ಜ್ವಲಂತ ಉದಾಹರಣೆ ಇದೆ ಅಂತಾದರೆ, ಅದು, ಜನೇಯನೇ ಎಂದರೆ ತಪ್ಪಾಗಲಾರದು.

ಪವನಸುತ, ಕೇಸರೀನಂದನ, ಮಾರುತಿ, ಹನುಮಂತ ಎಂದೆ ಕರೆಯಲ್ಪಡುವ ಆಂಜನೇಯ ಒಬ್ಬ ಕಪಿಶ್ರೇಷ್ಠ, ರಾಜಕೀಯ ಮುತ್ಸುದ್ಧಿ, ಮಂತ್ರಿ, ಜಿತೇಂದ್ರಿಯ, ಅಪ್ರತಿಮ ಸಂಸ್ಕೃತ ಪಂಡಿತ ಹಾಗೂ ಅಣಿಮಾ, ಮಹಿಮಾ, ಗರಿಮಾ, ಲಮಾ, ಪ್ರಾಪ್ತಿ, ಪ್ರಾಕಾಮ್ಯ, ಈಶಿತ್ತ್ವ, ವಶಿತ್ತ್ವಾದಿ ಅಷ್ಟ ಸಿದ್ಧಿಗಳನ್ನು ಸಾಕ್ಷಾತ್ಕರಿಸಿ ಕೊಂಡವ, ಚಿಕ್ಕ ವಯಸ್ಸಿನಲ್ಲಿಯೇ ಸೂರ್ಯನನ್ನು
ಹಣ್ಣೆಂದು ಭಾವಿಸಿ, ಸೂರ್ಯ ದೇವನನ್ನೇ ನುಂಗಲು ಹೊರಟವ.

ಇಂದ್ರನ ವಜ್ರಾಯುಧದ ಹೊಡೆತಕ್ಕೆ ಬಲಿಯಾಗಿ ಹನುಮಂತ ನಾದವ. ಶಿವನ ಆಶೀರ್ವಾದದ ಫಲವಾಗಿ ಚಿರಂಜೀವಿ ಯಾದವ. ಹೀಗೆ ಅತ್ಯಂತ ಚಿಕ್ಕವಯಸ್ಸಿನಲ್ಲಿಯೇ ಮಹಾಶಕ್ತಿಶಾಲಿ ಎನಿಸಿದವ. ರಾಮಾಯಣದ ಪಾತ್ರಗಳಲ್ಲಿ ರಾಮನಷ್ಟೇ ಪರಿಣಾಮ ಬೀರಿದ ಇನ್ನೊಂದು ಪಾತ್ರವೆಂದರೆ ಅದು, ಆಂಜನೇಯ. ಇಂದು ರಾಮನ ಗುಡಿಯಿಲ್ಲದ ಊರಿರಬಹುದು ಆದರೇ, ಆಂಜನೇ ಯನ ಗುಡಿಯಿಲ್ಲದ ಊರೇ ಇಲ್ಲ.

ಜಾತಿ-ಮತ-ಪಂಥಗಳನ್ನು ಮೀರಿ ಇಂದು ಜನ ಆಂಜನೇಯನನ್ನು ಆರಾಧಿಸುವುದನ್ನು ನಾವು ಕಾಣಬಹುವುದು. ರಾಮಾಯಣ ಎನ್ನುವ ಕಾವ್ಯಕ್ಕೆ ಇನ್ನೊಂದು ಹೆಸರಿಡಬಹುದಾರೆ ಸೀತಾಯಾಶ್ಚರಿತಂ ಎಂದು ಕರೆಯಬಹುದಂತೆ. ಅದೇ ಇನ್ನೊಂದು ಹೆಸರಿನಿಂದ ಕರೆಯಬಹುದಾದರೆ ಅದು ಹನುಮಾಯಣ ವಂತೆ. ಇದರಿಂದ ಆಂಜನೇಯನಿಗೆ ಇರುವ ಪ್ರಾಮುಖ್ಯತೆಯನ್ನು ನಾವು ಕಾಣಬಹುದು. ಮಾಯಣದಲ್ಲಿ ಆಂಜನೇಯನ ಮಹಿಮೆಯೇ ಮುಖ್ಯವಾಗಿರುವ ಕಾಂಡಕ್ಕೆ ಸುಂದರಕಾಂಡ ಎಂದೂ ಹೆಸರಿಡಲಾಗಿದೆ. ರಾಮಾಯಣದಲ್ಲಿ ಕಿಷ್ಕಿಂಧಾ ಕಾಂಡದ ನಂತರ ಬರುವ ಕಾಂಡಗಳಲ್ಲಿ ಆಂಜನೇಯ ನನ್ನೇ ಹಾಡಿ ಹೊಗಳ ಲಾಗಿದೆ.  ಸ್ವತಃ ರಾಮನೇ ಹನುಮಂತನ ವಾಕ್ಛಾತುರ್ಯ, ವಿನಯತೆ, ಪಾಂಡಿತ್ಯವನ್ನು ಮೆಚ್ಚಿ ಗುಣಗಾನ ಮಾಡಿರುವುದನ್ನು ವಾಲ್ಮೀಕಿ ಮಹರ್ಷಿಗಳು ಕಿಷ್ಕಿಂಧಾಕಾಂಡದಲ್ಲಿ ಮನೋಜ್ಞವಾಗಿ ಬಣ್ಣಿಸಿರುವುದನ್ನು ನಾವು ಕಾಣಬಹುದು.

ಹನುಮ ಯಾರು?: ಋಷಿ ಗೌತಮ-ಅಹಲ್ಯಾ ದೇವಿಯ ಮಗಳು, ಕುಂಜರ ಮತ್ತು ವಿಂಧ್ಯಾವಳಿಯರ ಸಾಕುಮಗಳು ಆದ ಅಂಜನಾದೇವಿ, ಸುಮೇರು ಗಿರಿಯ ವಾನರರಾಜನಾಗಿದ್ದ ಕೇಸರಿಯನ್ನು ಮದುವೆಯಾಗುತ್ತಾಳೆ. ಅನೇಕ ವರ್ಷಗಳು ಉರುಳಿ ದರೂ ಕೇಸರಿ-ಅಂಜನಾ ದಂಪತಿಗಳಿಗೆ ಮಕ್ಕಳಾಗದ ಕಾರಣ, ವಾಯುದೇವನ ಅಪ್ಪಣೆಯ ಮೇರೆಗೆ ಅಂಜನಾದೇವಿ ಶಿವನನ್ನು ಕುರಿತು ಉಗ್ರ ತಪಸ್ಸನ್ನಾಚರಿಸುತ್ತಾಳೆ.

ತಪ್ಪಸ್ಸಿಗೆ ಒಲಿದ ಶಿವ, ತನ್ನಲ್ಲಿರುವ ಶಿವ ತೇಜಸ್ಸನ್ನು ಅಂಜನಾದೇವಿಗೆ ಅನುಗ್ರಹಿಸಲು ವಾಯುದೇವನಿಗೆ ಅಪ್ಪಣೆ ನೀಡುತ್ತಾನೆ. ಆಜ್ಞಾಪ್ತನಾದ ವಾಯು, ಶಿವ ತೇಜಸ್ಸನ್ನು ಅಂಜನಿಯ ಕಿವಿಯಲ್ಲಿ ಪ್ರವೇಷಿಶಿ, ಗರ್ಭದಲ್ಲಿ ಸ್ಥಾಪಿಸುತ್ತಾನೆ. ತತ್ಪರಿಣಾಮ ಅಂಜನಾ ದೇವಿ ಗರ್ಭಿಣಿಯಾಗುತ್ತಾಳೆ. ಆಗ ಜನಿಸಿದವನೇ ಆಂಜನೇಯ. ಅಂಜನಾಸುತ, ಹುಟ್ಟಿಗೆ ವಾಯು ದೇವನೂ ಕಾರಣ ನಾದ್ದರಿಂದ ವಾಯುಪುತ್ರನೂ ಎನಿಸಿzನೆ. ಅವನು ಹುಟ್ಟಿದ ಸ್ಥಳವೇ ಅಂಜನಾದ್ರಿ ಪರ್ವತ.

ಐತಿಹಾಸಿಕ ಪರಂಪರೆಯುಳ್ಳ, ವಿಶ್ವ ಪ್ರಸಿದ್ಧ ಕ್ಷೇತ್ರಗಳೆನಿಸಿದ ಹಂಪೆ, ಆನೆಗೊಂದಿಯ ವ್ಯಾಪ್ತಿಯಲ್ಲಿ ಬರುವ, ಅಂಜನಾಹಳ್ಳಿಯ ಅಂಜನಾದ್ರಿಯೇ ಹನುಮನುದಿಸಿದ ಸ್ಥಳ. ಇತ್ತೀಚಿನ ದಿನಗಳಲ್ಲಿ ಅವಾಂತರ ಸೃಷ್ಟಿಸುವ ಮೂಲಕವೇ ಪ್ರಸಿದ್ಧಿ, ಪ್ರಚಾರ ಗಿಟ್ಟಿಸಿ ಕೊಳ್ಳುವುದು ಕೆಲವರ ಚಾಳಿಯಾಗಿ ಬಿಟ್ಟಿದೆ. ಈಗ ಟಿಟಿಡಿ ಈ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದೆ. ಅಂಜನಾದ್ರಿ ಕಿಷ್ಕಿಂಧೆಯ ಭಾಗವಲ್ಲ, ಇದು ವೆಂಕಟಾದ್ರಿ, ಎನ್ನುವ ಬಾಲಿಶ ಹೇಳಿಕೆಯನ್ನು ನೀಡಿ, ವಿನಾ ಕಾರಣ ವಿವಾದವನ್ನು ಮೈಮೇಲೆ ಎಳೆದು ಕೊಂಡಿದೆ.

ಇಷ್ಟಕ್ಕೂ ಈ ಹೇಳಿಕೆಗೆ ಯಾವುದೇ ಐತಿಹಾಸಿಕ ಆಧಾರಗಳಿಲ್ಲ. ರಾಮಾಯಣದ ಕಾಲದಿಂದಲೂ ಹಂಪೆ- ಆನೆಗೊಂದಿ ಪ್ರದೇಶಗಳು ಪ್ರಸಿದ್ದಿ ಪಡೆದಿವೆ. ರಾಮಾಯಣದ ಕಿಷ್ಕಿಂಧಾಕಾಂಡದಲ್ಲಿ ನಡೆಯುವ ಪ್ರಸಂಗಗಳೆ ನಡೆದದ್ದು ಹಂಪಿ-ಆನೆಗೊಂದಿಯ ಕಿಷ್ಕಿಂಧಾದಲ್ಲಿಯೇ ಎನ್ನುವುದಕ್ಕೆ ಹಲವು ಪುರಾವೆಗಳಿವೆ. ಇಲ್ಲಿಯ ದುರ್ಗಾದೇವಿ ದೇವಾಲಯವಿರುವ
ಬೆಟ್ಟವೇ ವಾಲಿಪರ್ವತ, ವಾಲ್ಮೀಖಿ. ಇಲ್ಲಿಂದ ದಕ್ಷಿಣಕ್ಕಿರುವ ವಾಲಿಬಂಡಾದಲ್ಲಿ ವಾಲಿ ಅಪಾರ ಸಂಪತ್ತನ್ನು ಹುದುಗಿಸಿಟ್ಟಿದ್ದನು ಎನ್ನುವ ಪ್ರತೀತಿಯೂ ಇದೆ. ಅಲ್ಲದೇ ಹಂಪಿ-ಆನೆಗೊಂದಿಯೇ ಕಿಷ್ಕಿಂದೆ ಮತ್ತು ಅಂಜನಾದ್ರಿ ಎಂದು ದೃಢಪಡಿಸಲು
ಆನೆಗೊಂದಿ, ರಾಂಪುರ ಮತ್ತ ಗೂಗಿಬಂಡಿಯ ಬೆಟ್ಟಗಳಲ್ಲಿ ಕಂಡುಬರುವ ಪ್ರಾಕ್ಚಾರಿತ್ರಿಕ ಕಾಲದ ಹನುಮನ ಚಿತ್ರಗಳು ಪ್ರತ್ಯಕ್ಷಸಾಕ್ಷಿ ಎನಿಸಿವೆ.

ಸೀತೆಯನ್ನು ಕಳೆದುಕೊಂಡ ಶ್ರೀರಾಮಚಂದ್ರ- ಲಕ್ಷ್ಮಣರು ಹುಡುಕುತ್ತಾ ಕಿಷ್ಕಿಂಧಾ ಪ್ರದೇಶಕ್ಕೆ ಬರುತ್ತಾರೆ. ಒಬ್ಬ ಪ್ರಸಿದ್ಧ ಸಂಸ್ಕೃತ ಪಂಡಿತನ ವೇಷದಲ್ಲಿ ಬಂದ ಹನುಮ, ದಶರಥ ನಂದನನ್ನು ಸಂಧಿಸಿದ್ದು, ಸುಗ್ರೀವನ ರಾಮರ ಸಖ್ಯ ಏರ್ಪಟ್ಟದ್ದು, ನಂತರ ವಾಲಿ-ರಾಮರ ಬೃಹತ್ ಕದನ ನಡೆದದ್ದು ಈ ಕಿಷ್ಕೆಂಧೆಯಲ್ಲಿಯೇ. ಇದಕ್ಕೆ ಇಲ್ಲಿನ ವಾಲಿಗುಹಾವೇ ಪ್ರತ್ಯಕ್ಷ ಸಾಕ್ಷಿಯಾಗಿದೆ.

ರಾಮಾಯಣದ ಪಂಪಾ ಸರೋವರವೇ ಈಗಿನ ತುಂಗಾಭದ್ರ ನದಿ. ಪಂಪಾನದಿಯ ಅನತಿ ದೂರದಲ್ಲಿರುವ ಅಂಜನಾಹಳ್ಳಿಯೇ ರಾಮಾಯಣದ ಕಿಷ್ಕೆಂಧೆ. ಈ ಅಂಜನಾಹಳ್ಳಿ ಎಂಬ ಗ್ರಾಮದಲ್ಲಿರುವ ಒಂದು ಸ್ವತಂತ್ರ ಬೆಟ್ಟವೇ ಅಂಜನಾದ್ರಿಬೆಟ್ಟ. ದೇವಿ
ಅಂಜನಾ ತಪಸ್ಸುಮಾಡಿದ ಸ್ಥಳ. ಹನುಮಂತನು ತನ್ನ ಬಾಲ್ಯವನ್ನು ಕಳೆದ ಸ್ಥಳ. ಸೂರ್ಯನನ್ನು ಹಣ್ಣೆಂದು ನುಂಗಲು ಹೊರಟ ಸ್ಥಳವೂ ಅಂಜಾನಾದ್ರಿಯೇ!

ಹನುಮಂತ ಆಗ ಇನ್ನೂ ಶಿಶುವಾಗಿದ್ದ, ಹೆರಿಗೆಯ ನಂತರ ತಾಯಿ ಅಂಜಳಾಗೆ ಶಿಶು ಆಂಜನೇಯನ ಸ್ನಾನಕ್ಕೆ ನೀರು ದೊರೆಯದಿದ್ದಾಗ, ಅದರಿಂದ ತಾಯಿ  ಚಿಂತಿತಳಾದಾಗ, ಅದನ್ನು ಅರಿತ ಆಂಜನೇಯ ಸರಸರನೇ ಅಂಜನಾಬೆಟ್ಟದಿಂದಿಳಿದು, ಪಂಪಾನದಿಗೆ (ತುಂಗಭದ್ರಾ ನದಿಗೆ) ತನ್ನ ಕೈಯನ್ನು ಅಡ್ಡವಾಕಿ, ನದಿಯ ದಿಕ್ಕನ್ನೇ ಬದಲಿಸಿದನೆಂದು ಸ್ಥಳ ಇತಿಹಾಸ
ಹೇಳುತ್ತದೆ. ಅಂದಿನಿಂದ ಪಂಪಾನದಿ (ತುಂಗಾಭದ್ರಾ) ಋಷ್ಯಮುಖ ಪರ್ವತವನ್ನು ಬಳಸಿ ಎರಡು ಕವಲುಗಳಾಗಿ ಹರಿಯಲು ಆರಂಭಿಸಿತು. ಹೀಗೆ ನದಿ ಎರಡು ಕವಲುಗಳಾಗಿ ಹರಿಯುವ ಈ ಸ್ಥಳಕ್ಕೆ ಹನುಮನ ಸೆಳವು ಎಂದು ಕರೆಯುತ್ತಾರೆ. ಈ ವಿಚಾರ
ಆಡವ್ಯಾಗಂಜನಾದೇವಿ ‘ಹನುಮನ ಹಡೆದಾಳ, ತೊಡೆಯ ತೊಳೆಯೋಕೆ ನೀರಿಲ್ಲ|

ಹನುಮಣ್ಣ ಸುತ್ತಲ ಹೊಳೆಯ ತಿರುವ್ಯಾನ’ ಎನ್ನುವ ಜಾನಪದ ಹಾಡಿನಿಂದ ದೃಢಪಡುತ್ತದೆ. ಅಲ್ಲದೇ ಕ್ರಿ.ಶ ೧೬ನೇ ಶತಮಾನದ ಹನುಮನಹಳ್ಳಿ ಶಿಲಾಶಾಸನದಲ್ಲಿ ದೇವಿ ಅಂಜನಾ ಮತ್ತು ಅಮೃತ ಪಡಿಗೆ ದಾನ ಬಿಟ್ಟ ವಿಷಯವೂ ಉಲ್ಲೇಖವಾಗಿರುವುದನ್ನು ನಾವು ಗಮನಿಸಬಹುದು. ಅಲ್ಲದೇ ಆನೆಗೊಂದಿಯ ಚಂಚಲಕೋಟೆ, ದೇವಾಲಯಗಳು, ವಾಲ್ಮೀಖಿ, ವಾಲಿಗುಹೆಗಳು, ಸ್ಮಾರಕಗಳು ಮತ್ತು ಆನೆಗೊಂದಿಯಿಂದ ಹತ್ತು ಕಿಲೋಮೀಟರ್ ದೂರದಲ್ಲಿರುವ, ತುಂಗಾನದಿಯ ತೀರದಲ್ಲಿರುವ ದೇವಘಾಟ್‌ನ ಅಮೃತೇಶ್ವರ ದೇವಾಲಯದ ಕ್ರಿ.ಶ ೧೦೫೯ರ ಶಿಲಾಶಾಸನದಲ್ಲಿ ಕಿಷ್ಕೆಂಧೆಯನ್ನು ಉಲ್ಲೇಖಿಸಲಾಗಿದೆ ಹಾಗೂ ಆನೆಗೊಂದಿ ಯಿಂದ ಹದಿನೈದು ಕಿಲೋಮೀಟರ್ ದೂರದಲ್ಲಿರುವ ಹುಲಿಗಿಯ ಶಿಲಾಶಾಸನದಲ್ಲೂ ಋಷ್ಯಮುಖ, ಗಂಧಮಾದನ, ಶ್ರೀಕೂಟ, ಕಿಷ್ಕಿಂಧಾ ಪರ್ವತಗಳನ್ನು ಉಲ್ಲೇಖಿಸಲಾಗಿದೆ.

ಅಲ್ಲದೇ ಸೌದತ್ತಿಯ ಶಿರಸಂಗಿ ಕಾಳಮ್ಮನ ದೇವಾಲಯದಲ್ಲಿರವ ಕ್ರಿ.ಶ ೧೧೮೬ರ ಶಿಲಾ ಶಾಸನದಲ್ಲೂ ಹಿಮಪರ್ವತ, ವಿಂಧ್ಯಾ, ಕಿಷ್ಕಿಂಧಾ ಪರ್ವತಗಳು ಉನ್ನತ ಪರ್ವತಗಳು ಎಂದು ಉಲ್ಲೇಖಿಸಲಾಗಿದೆ. ರಾಮಾಯಣದ ಕಿಷ್ಕಿಂಧಾ ಕಾಂಡದಲ್ಲೂ ಕೂಡ
‘ಸುಸಮೃದ್ಧಾಂ ಗುಹಾಂ ದಿವ್ಯಾಂ ಗಿರಿಗಹ್ವರೆ ಕಿಷ್ಕಿಂಧಾನಗರಿ ರಮ್ಯಾ’ ಅಂದರೆ ಕಿಷ್ಕಿಂಧೆ ಒಂದು ರಮ್ಯವಾದ, ಅತ್ಯಂತ ಸಮೃದ್ಧವಾದ, ಗಿರಿ-ಗಹ್ವರಗಳಿಂದ ಕೂಡಿತ್ತು. ಅಸಂಖ್ಯಾತ ಗವಿಗಳುಳ್ಳ, ಗುಡ್ಡ-ಬೆಟ್ಟಗಳನ್ನೊಳಗೊಂಡ ಪ್ರದೇಶವಾಗಿತ್ತು ಎಂದು ವರ್ಣನೆ ಮಾಡಲಾಗಿದೆ.

ಅದರಲ್ಲಿ ವಾಲಿ, ಮರುತ್ಸ, ದಿನೇಶ, ಮತಂಗ, ಹಂಸ, ಶಾರ್ಗ, ಅಗಸ್ತ್ಯೆ, ವಿಭಾಂಡಕನ ಮಗನಾದ ಋಷ್ಯಶೃಂಗಾದಿ ಋಷಿಗಳು
ವಾಸವಾಗಿದ್ದರು ಎನ್ನಲಾಗಿದೆ. ಹಿಂದೆ ರಾಮ-ಲಕ್ಷ್ಮಣರು ಕಿಷ್ಕೆಂಧೆಗೆ ಬರುವ ಮುಂಚೆಯೇ, ಕಾರ್ತಿಕೇಯವನವನ್ನು ಸಂದರ್ಶಿಶಿದರು ಎಂದು ರಾಮಾಯಣದ ಕಿಷ್ಕಿಂಧಾಕಾಂಡದಲ್ಲಿ ಉಲ್ಲೇಖ ಮಾಡಲಾಗಿದೆ. ಈ ಕಾರ್ತಿಕೇಯವನ ಇರುವುದು ಇಂದಿನ ಬಳ್ಳಾರಿ ಜಿಯ ಸಂಡೂರಿನಲ್ಲಿ.

ಸಂಡೂರಿನ ಬೆಟ್ಟಗಳಲ್ಲಿ ಉತ್ತಮ ಗುಣಮಟ್ಟದ ಕಬ್ಬಿಣದ ಅದಿರು ದೊರೆಯುತ್ತಿತ್ತು, ಅದರಿಂದ ಶ್ರೀರಾಮ-ಲಕ್ಷ್ಮಣರು ಅಲ್ಲಿಗೆ ತೆರಳಿ, ಉತ್ತಮ ಶಸ್ತ್ರಾಸ್ತ್ರಗಳನ್ನು ತಯಾರಿಸಿಕೊಂಡು ಮುನ್ನಡೆದರ ಎನ್ನುವುದು ಮಹತ್ತ್ವದ ವಿಚಾರವೆನಿಸಿದೆ. ರಾಮ ಚಾತುರ್ಮಾಸ್ಯ ಮಾಡಿದ್ದೂ ಕೂಡ ಇದೇ ಪಂಪಾಕ್ಷೇತ್ರದಲ್ಲಿಯೇ. ತನ್ನ ಆರಾಧ್ಯದೈವನಾದ ಹಂಪೆ ವಿರೂಪಾಕ್ಷನನ್ನು ಪೂಜಿಸಿ, ನಮಿಸಿ ಮಂದೆ ಹನುಮಾದಿ ವಾನರರ ಸಹಾಯದಿಂದ ರಾವಣ, ಕುಂಭಕರ್ಣರನ್ನು ವಧಿಸಿ, ಸೀತೆಯನ್ನು ಪಡೆದು ಈ  ಮಾರ್ಗ ದಲ್ಲಿಯೇ ಅಯೋಧ್ಯೆಗೆ ತೆರಳಿದ ಎನ್ನಲಾಗದೆ.

ವಿಜಯನಗರ ಅರಸರ ನಂಬಿಕೆ: ವಿಜಯನಗರದ ಅರಸರಿಗೆ ಕಿಷ್ಕಿಂದೆಯ ಬಗ್ಗೆ ಅರಿವಿರುವುದು ಇತಿಹಾಸದಲ್ಲಿ ಉಲ್ಲೇಖವಿದೆ. ಹಾಗಾಗಿಯೇ ಹಂಪಿ- ಆನೆಗೊಂದಿಯಲ್ಲಿ ರಾಮನ, ಆಂಜನೇಯನ ದೇವಾಲಯಗಳನ್ನು ಕಟ್ಟಿರುವುದನ್ನೂ ನಾವು ಕಾಣಬ ಹುದು. ಹಾಗೂ ಅಂಜನಾದ್ರಿಯಲ್ಲಿ ಆಂಜನೇಯನ ದೇವಾಲಯವನ್ನು ನಿರ್ಮಿಸಿದರು. ಹಾಗಾಗಿ ಇಂದಿಗೂ ಆನೆಗೊಂದಿ ಪ್ರದೇಶ  ದಲ್ಲಿ ಅನೇಕ ಆಂಜನೇಯನ ದೇವಾಲಯಗಳು, ಶಿಲ್ಪಗಳು ನಿರ್ಮಾಣಗೊಂಡಿರುವುದನ್ನು ನಾವು ಕಾಣಬಹುದು. ಶ್ರೀಕೃಷ್ಣ ದೇವರಾಯನ ಗುರುಗಳಾದ ವ್ಯಾಸರಾಯರಿಗೆ ಅಂಜನಾದ್ರಿಯೇ ಹನುಮಂತನ ಮೂಲ ಎನ್ನುವುದು ನಿಖರವಾಗಿ ಗೊತ್ತಿತ್ತಂತೆ. ಈ ಹಿನ್ನಲೆಯಲ್ಲಿ ಸಾಮ್ರಾಜ್ಯದಾದ್ಯಂತ ೭೩೪ ಆಂಜನೇಯನ ವಿಗ್ರಹಗಳನ್ನು ಸ್ಥಾಪಿಸಿದನೆಂದು ವಿಜಯನಗರ ಇತಿಹಾಸದಿಂದ ತಿಳಿಯುತ್ತದೆ.

ಸ್ಥಳೀಯರ ಆಕ್ರೋಶವೇನು?: ಇತ್ತೀಚೆಗೆ ಅಂಜನಾದ್ರಿ ರಾಮಮಂದಿರದಷ್ಟೇ ಪ್ರಸಿದ್ಧಿ ಪಡೆದುಕೊಳ್ಳುತ್ತಿದೆ. ಸಾಗರೋಪಾದಿ ಯಲ್ಲಿ ವಿಶ್ವದೆಡೆಯಿಂದ ಭಕ್ತ ಸಮೂಹ ಅಂಜನಾದ್ರಿಯೆಡೆ ಹರಿದು ಬರುತ್ತಿದೆ. ಸರಕಾರ ೨೦ ಕೋಟಿ ರು. ಅನುದಾನವನ್ನು ನೀಡಿ  ಅಭಿವೃದ್ಧಿಗೆ ಅಡಿಗಕಿದೆ. ಅಯೋಧ್ಯೆಯಿಂದ ಕಿಷ್ಕೆಂಧೆಗೆ ಸರ್ಕ್ಯೂಟ್ ನಿರ್ಮಾಣಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಇದನ್ನು ಟಿಟಿಡಿಯಿಂದ ಸಹಿಸಲಾಗುತ್ತಿಲ್ಲ. ಹೇಗಾದರೂ ಮಾಡಿ ವಿವಾದ ಮಾಡಿಯಾದರೂ ಭಕ್ತ ಸಮೂಹವನ್ನು ಸೆಳೆಯ ಬೇಕು, ಸರಕಾರದ ಯೋಜನೆಯನ್ನು ವಕ್ಕಲೆಬ್ಬಿಸಬೇಕು ಎನ್ನುವುದೇ ಟಿಟಿಡಿಯ ಈಹೇಳಿಕೆಗೆ ಪ್ರಮುಖ ಕಾರಣ ಎನ್ನುವ
ಕೂಗು ಕೇಳಿ ಬರುತ್ತಿದೆ. ಈಗಾಗಲೇ ವಿಶ್ವವಿಖ್ಯಾತ ಹನುಮನುದಿಸಿದ ಅಂಜನಾದ್ರಿಗೆ ಪ್ರಮುಖ ರಾಜಕಾರಣಿಗಳು, ರಾಜ್ಯಪಾಲರು, ಸಿನಿಮಾ ನಟರು, ಸಾಧುಸಂತರು ಭೇಟಿ ನೀಡಿ ರಾಮಭಂಟನ ದರ್ಶನ ಪಡೆದು ಧನ್ಯರಾಗಿದ್ದಾರೆ.

ಅಂಜನಾದ್ರಿಯಲ್ಲಿ ಹನುಮನಿಗ ನಿತ್ಯ ಪೂಜೆ: ಮೊದಲು ಖಾಸಗಿಯ ಒಡೆತನದಲ್ಲಿದ್ದ ಈ ದೇವಾಲಯವನ್ನು, ೨೦೧೮, ಜುಲೈ ೨೩ ರಂದು ಮುಜರಾಯಿ ಇಲಾಖೆ ಹಾಗೂ ಕಂದಾಯ ಇಲಾಖೆಗಳು ವಶಕ್ಕೆ ಪಡೆದಿವೆ. ಸುಮಾರು ೮೦ ವರ್ಷಗಳಿಂದ ಉತ್ತರಭಾರತದಿಂದ ಬಂದ ಅರ್ಚಕರು ನಿತ್ಯಪೂಜೆಯನ್ನು ಮಾಡುತ್ತಿದ್ದಾರೆ.

ಹೋಮ, ಹವನ, ಪಾರಾಯಣ, ಅಭಿಷೇಕಗಳು ನಿತ್ಯವೂ ಜರುಗುತ್ತಿವೆ. ಅಲ್ಲದೇ ಸ್ಥಳೀಯರು, ರಾಜ್ಯದ ಅನೇಕ ಭಕ್ತ ಸಮೂಹ ಹನುಮ ಜಯಂತಿಯಂದು ಹನುಮ ಮಾಲೆಯನ್ನು ಧರಿಸಿ, ಅಂದು ಹನುಮನ ಸನ್ನಿಧಿ, ಅಂಜನಾದ್ರಿಗೆ ಬಂದು ಅದನ್ನು ವಿಸರ್ಜಿಸಿ ಹರಕೆ ತೀರಿಸುವ ಪದ್ಧತಿ ಈಗಲೂ ರೂಢಿಯಲ್ಲಿದೆ.

ಒಂದು ಸಂತಸ ವಿಷಯವೇನೆಂದರೆ ಇನ್ನು ಕೆಲವೇ ವರ್ಷಗಳಲ್ಲಿ ರಾಮಮಂದಿರದಂತಯೇ, ಭಕ್ತಾಗ್ರೇಸರ ಹನುಮ ಅಂಜನಾದ್ರಿಯಲ್ಲಿ ತಲೆ ಎತ್ತಿ, ಇತಿಹಾಸದ ಪುಟ ಸೇರುವುದು ಶತಸಿದ್ದ. ಆ ದಿನಗಳು ಬಹು ಬೇಗನೇ ಮರುಕಳಿಸಲಿ ಎನ್ನುವುದು ಹನುಮ ಭಕ್ತರ ಸದಾಶಯ.

Leave a Reply

Your email address will not be published. Required fields are marked *

error: Content is protected !!