Thursday, 12th December 2024

ಬದುಕಿನಲ್ಲಿ ಸದಾ ದೊಡ್ಡ ಸಂತಸ ಬರುವುದಿಲ್ಲ, ಸಣ್ಣ ಸಣ್ಣ ಸಂಗತಿಗಳಲ್ಲೂ ಸಂತಸ ಕಾಣಬೇಕು ?

ನೂರೆಂಟು ವಿಶ್ವ

ಕಳೆದ ಎರಡು ವಾರಗಳ ಹಿಂದೆ, ಯೋಗಿ ದುರ್ಲಭಜೀ ಜತೆ ಮಾತಾಡುವಾಗ, ‘ನೀವು The Joy Of Small Things ಎಂಬ ಪುಸ್ತಕ ಓದಿದ್ದೀರಾ?’ ಎಂದು ಕೇಳಿದರು. ನಾನು ‘ಇಲ್ಲ’ ಎಂದೆ. ‘ಸಾಧ್ಯವಾದರೆ ಆ ಪುಸ್ತಕವನ್ನು ಓದಿ. ಮಹಾನ್ ಕೃತಿ ಎಂದು ಹೇಳುತ್ತಿಲ್ಲ. ಮಹಾನ್ ಕೃತಿಗಳಲ್ಲಿ ಅಂಥ ಉಪಯುಕ್ತ ವಿಷಯಗಳಿರುವುದಿಲ್ಲ ಅನ್ನೋದು ಬೇರೆ ಮಾತು. ಆದರೆ ಆ ಪುಸ್ತಕದಲ್ಲಿ ಸಣ್ಣ ಸಣ್ಣ ಸಂಗತಿಗಳಿಂದ ಸಂತಸ, ಖುಷಿಯನ್ನು ಪಡೆಯುವುದು ಹೇಗೆ ಎಂಬ ಬಗ್ಗೆ ಬರೆದಿದ್ದಾರೆ.

ನಾವು ಬೆಳಗ್ಗೆ ಬ್ರೇಕ್ ಫಾಸ್ಟ್ (ಉಪಾಹಾರ), ಮಧ್ಯಾಹ್ನ ಮತ್ತು ರಾತ್ರಿ ಊಟ ಮಾಡುತ್ತೇವೆ. ಅದರ ಬದಲು ತಿಂಗಳಿಗೊಮ್ಮೆ, ಮೂರೂ ಹೊತ್ತು ನಮಗೆ ಇಷ್ಟವಾದ ಬ್ರೇಕ್ ಫಾಸ್ಟ್ ಮಾಡಿದರೆ ಹೇಗಿರುತ್ತದೆ ನೋಡಿ. ನಿಜಕ್ಕೂ ಚೆನ್ನಾಗಿರುತ್ತದೆ. ಸಂತೋಷ ಅನ್ನೋದು ಎಲ್ಲೋ ಇರುವುದಿಲ್ಲ. ಅದು ನಮ್ಮೊಳಗೇ ಇರುವಂಥದ್ದು. ಅದನ್ನು ನಾವೇ ಕಂಡುಕೊಳ್ಳಬೇಕು, ಶೋಧಿಸಿಕೊಳ್ಳಬೇಕು, ಅನುಭವಿಸಬೇಕು. ಪ್ರತಿ ಸಲ ಲಾಟರಿ ಟಿಕೆಟ್ ಖರೀದಿಸಿದಾಗ ಕೋಟಿ ರುಪಾಯಿ ಹೊಡೆಯುವುದಿಲ್ಲ, ಉದ್ಯೋಗದಲ್ಲಿ ದಿನವೂ ಭಡ್ತಿ ಸಿಗುವುದಿಲ್ಲ, ಪ್ರತಿದಿನವೂ ಬಾಸ್ ಹೊಗಳುವುದಿಲ್ಲ, ದಿನವೂ ಹೊಸ ಕಾರು, ಮನೆ, ಸೈಟ್, ಮೊಬೈಲ್, ಡ್ರೆಸ್, ವಾಚು, ಆಭರಣಗಳನ್ನು ಖರೀದಿಸಲು ಆಗುವುದಿಲ್ಲ. ದಿನವೂ ಹೋಟೆಲಿಗೆ ಹೋಗಲಾಗುವುದಿಲ್ಲ.

ನಿತ್ಯ ಪ್ರವಾಸಕ್ಕೂ ಹೋಗಲಾಗುವುದಿಲ್ಲ. ವಾರವಾರ ಫಾರಿನ್ ಟೂರ್ ಹೋಗಲಾಗುವುದಿಲ್ಲ. ಆದರೆ ಅನುಗಾಲವೂ ಸಂತಸ, ನೆಮ್ಮದಿ, ಖುಷಿಯಿಂದ ಇರಲೇಬೇಕಾಗುತ್ತದೆ. ಹಾಗಾದರೆ ಈ ಸಂತಸವನ್ನು ಸದಾ ಪಡೆಯುವುದಾದರೂ ಹೇಗೆ?’ ಎಂದು ಕೇಳಿದರು. ನಾನು ಯೋಗಿಯವರೊಂದಿಗೆ ಹಲವು ಸಲ ಸಣ್ಣ ಸಣ್ಣ ವಿಷಯಗಳ ಮೂಲಕ ಸಂತಸವನ್ನು ಅನುಭವಿಸುವುದು, ಖುಷಿಯನ್ನು ಕಾಣುವುದು, ಸದಾ ಶಾಂತವಾಗಿ, ನೆಮ್ಮದಿಯಿಂದ ಇರುವುದು ಹೇಗೆ ಎಂಬ ಬಗ್ಗೆ ಚರ್ಚಿಸಿದ್ದಿದೆ.

ಹೀಗೆಲ್ಲ ನಾವು ಚರ್ಚಿಸಿದಾಗ, ನಮ್ಮ ಮಾತುಕತೆ, ‘ಸಂತಸ, ಸಮಾಧಾನ, ನೆಮ್ಮದಿ, ಶಾಂತತೆ ಬೇರೆಲ್ಲೂ ಇಲ್ಲ. ಅಲ್ಲಿ ಸಿಗಲು ಸಾಧ್ಯವಿಲ್ಲ. ಅದು ಇರುವು ದಾದರೆ ನಮ್ಮೊಳಗೇ’ ಎಂದು ಮಾತು ಮುಗಿಸಿದ್ದಿದೆ. ಅದು ನಿಜವೂ ಹೌದು. ಮೊಬೈಲ್ ತೆಗೆದುಕೊಂಡ ೨ ದಿನಗಳ ಬಳಿಕ, ಅದನ್ನು ಖರೀದಿಸುವು ದಕ್ಕಿಂತ ಮುನ್ನ ಇದ್ದ ಉತ್ಸಾಹ, ಉದ್ವೇಗ, ತಹತಹ ಇರುವುದಿಲ್ಲ. ಬೆಂಜ್ ಕಾರು ತೆಗೆದುಕೊಂಡ ಮರುದಿನವೇ ಅದು ಸೆಕೆಂಡ್ ಹ್ಯಾಂಡ್ ಕಾರು. ಇಲ್ಲದಾಗ ಇರುವ ಕುತೂಹಲ ಇದ್ದಾಗ ಇರುವುದಿಲ್ಲ. ಹೀಗಿರುವಾಗ ಅನುಗಾಲವೂ ಸಂತಸದಿಂದ ಇರುವುದು ಹೇಗೆ? ಅಷ್ಟಕ್ಕೂ ಸಂತಸ, ಸಮಾಧಾನ ಎಲ್ಲಿದೆ? ಮೊನ್ನೆ ಯೋಗಿಯವರು The Joy Of Small Things ಪುಸ್ತಕದ ಬಗ್ಗೆ ಪ್ರಸ್ತಾಪಿಸಿದಾಗಲೂ, ಸಂತಸ, ಸಮಾಧಾನ, ನೆಮ್ಮದಿ ಬಗ್ಗೆ ಚರ್ಚೆ ಹರಡಿಕೊಂಡಿತು.

ಯೋಗಿಯವರು ಹೇಳಿದರೆಂದು ಆ ಪುಸ್ತಕವನ್ನು ಆನ್‌ಲೈನ್‌ನಲ್ಲಿ ತರಿಸಿ, ಓದಿದೆ. ಲೇಖಕಿಯ ಹೆಸರು ಮತ್ತು ಫೋಟೋ ನೋಡಿ, ಪರಿಚಿತಳು ಅನಿಸಿತು. ಅದನ್ನು ಬರೆದ ಹನ್ನಾ ಜೇನ್ ಪಾರ್ಕಿನ್ಸನ್ ಬ್ರಿಟಿಷ್ ಪತ್ರಕರ್ತೆ ಮತ್ತು ಅಂಕಣಕಾರ್ತಿ. ನಾನು ಅವಳ ಅಂಕಣ, ಬರಹಗಳನ್ನು ‘ದಿ ಗಾರ್ಡಿಯನ್’ ಪತ್ರಿಕೆಯಲ್ಲಿ ಓದಿದ್ದೆ. ಜೆ.ಬಿ.ಪ್ರೀಸ್ಟ್ಲೆ ಬರೆದ ‘ಡಿಲೈಟ್’ ಎಂಬ ಕೃತಿಯಿಂದ ಪ್ರೇರಣೆ ಪಡೆದು, The Joy of Small Things ಎಂಬ ಶೀರ್ಷಿಕೆಯಡಿಯಲ್ಲಿ ಅಂಕಣ ಬರೆಯುತ್ತಿದ್ದಾಳೆ. ೩೪ ವರ್ಷ ವಯಸ್ಸಿನ ಹನ್ನಾ ಪಾಪ್ ಸಂಸ್ಕೃತಿ, ಸಂಗೀತ, ತಂತ್ರಜ್ಞಾನ, ಫುಟ್ಬಾಲ್, ರಾಜಕಾರಣ, ಮಾನಸಿಕ ಆರೋಗ್ಯ ಹೀಗೆ ಹತ್ತು-ಹಲವು ವಿಷಯಗಳ ಬಗ್ಗೆ ನಿರಂತರ ಬರೆಯುತ್ತಿದ್ದಾಳೆ. ಅಷ್ಟು ಚಿಕ್ಕ ವಯಸ್ಸಿನಲ್ಲಿ, ‘ದಿ ಗಾರ್ಡಿಯನ್’ನಂಥ ಪ್ರತಿಷ್ಠಿತ ಪತ್ರಿಕೆಯಲ್ಲಿ ಅಂಕಣ ಕಾರ್ತಿ ಯಾಗಿ ಹೆಸರು ಮಾಡಿರುವ ಹನ್ನಾ, ತೀರಾ ಸಣ್ಣ ಸಣ್ಣ ಸಂಗತಿ ಗಳಿಂದ ಹೇಗೆ ಆನಂದವನ್ನು ಪಡೆಯಬಹುದು ಎಂಬುದನ್ನು The Joy Of Small Things ಕೃತಿಯಲ್ಲಿ ಹೇಳಿದ್ದಾಳೆ.

ಯೋಗಿ ದುರ್ಲಭಜೀ ಅವರು ಕೆಲವು ದಿನಗಳ ಹಿಂದೆ, ‘ಭಟ್ರೇ, ಇಂದು ನಾನು ಸಣ್ಣ ಸಣ್ಣ ವಿಷಯಕ್ಕೂ ಕಿರಿಕಿರಿ ಮಾಡಿಕೊಳ್ಳುತ್ತಿದ್ದೆ. ಎಲ್ಲರ ಮೇಲೆ ರೇಗುತ್ತಿದ್ದೆ. ನಂತರ ನಾನು ನನ್ನ ಬೆಡ್‌ರೂಮ್ ಸ್ವಚ್ಛಗೊಳಿಸಿಕೊಂಡೆ. ಬೆಡ್‌ಶೀಟ್ ಮತ್ತು ಚಾದರವನ್ನು ಬದಲಿಸಿ, ಹೊಸತನ್ನು ಹಾಸಿ ಅಲ್ಲಿಯೇ ಒಂದು ಗಂಟೆ ಮಲಗಿದೆ. ಸ್ವರ್ಗದಲ್ಲಿದ್ದಷ್ಟು ಸಮಾಧಾನವಾಯಿತು’ ಎಂದು ಹೇಳಿದರು. ಎರಡು ದಿನಕ್ಕೊಮ್ಮೆ ಹೊಸ ಬೆಡ್‌ಶೀಟ್ ಮತ್ತು ಚಾದರ ಬದಲಿಸಿ ಮಲಗುವುದನ್ನು ಅಭ್ಯಾಸ ಮಾಡಿಕೊಂಡರೆ, ಸಿಗುವ ಆನಂದ ಅಷ್ಟಿಷ್ಟಲ್ಲ. ನಾವು ಅತಿಹೆಚ್ಚು ಹೊತ್ತು ಒಂದೆಡೆ ಕಳೆಯುವುದು ಹಾಸಿಗೆಯಲ್ಲಿ. ಏಳೆಂಟು ಗಂಟೆ ಕಾಲ ನಾವು ಒಂದೇ ಜಾಗದಲ್ಲಿ ಇರುವುದಿಲ್ಲ.

ಹೀಗಾಗಿ ಬೆಡ್‌ಶೀಟ್, ದಿಂಬಿನ ಕವರ್ ಹಾಗೂ ಚಾದರವನ್ನು ದಿನ ಬಿಟ್ಟು ದಿನ ಬದಲಿಸಿದರೆ, ಅದರಿಂದ ಸಿಗುವ ಖುಷಿ ಅಷ್ಟಿಷ್ಟಲ್ಲ. ಹನ್ನಾ ಕೂಡ ಆ ಪುಸ್ತಕದಲ್ಲಿ ಇದೇ ವಿಷಯವನ್ನು ಪ್ರಸ್ತಾಪಿಸಿದ್ದಳು. ನೀವು ಮಲಗುವ ಹಾಸಿಗೆ ಅದೆಷ್ಟೇ ದುಬಾರಿ ಯಾಗಿರಬಹುದು, ಬೆಡ್‌ಶೀಟ್ ಚೆನ್ನಾಗಿದ್ದಿರಬಹುದು, ಆದರೆ ತಲೆ
ದಿಂಬು ಸರಿಯಾಗಿಲ್ಲದಿದ್ದರೆ, ನಿದ್ದೆಗೇ ಸಂಚಕಾರ. ತಲೆದಿಂಬು ಚೆನ್ನಾಗಿದ್ದು ಅದರ ಕವರ್ ಫುಶ್ ಆಗಿರದಿದ್ದರೆ, ಅದಕ್ಕೂ ಮೊದಲು ಬೇರೆಯವರು ಬಳಸಿದ್ದರೆ, ಅಪ್ಪಿತಪ್ಪಿಯೂ ನಿದ್ದೆ ಸುಳಿಯದು. ಇತ್ತೀಚೆಗೆ ನಾನು ಜರ್ಮನಿಯ ಆಗ್ಸ್ ಬರ್ಗ್ ಎಂಬ ಊರಿನಲ್ಲಿ ಒಳ್ಳೆಯ ಹೋಟೆಲಿನಲ್ಲಿ ತಂಗಿದ್ದೆ. ಅಲ್ಲಿನ ತಲೆದಿಂಬು ಎರಡೂವರೆ ಅಡಿ ಉದ್ದ ಮತ್ತು ಮೂರೂವರೆ ಅಡಿ ಅಗಲವಿತ್ತು. ಬೆನ್ನು, ಕುತ್ತಿಗೆ, ತಲೆಯನ್ನು ಇಟ್ಟುಕೊಳ್ಳಬಹುದಾದಷ್ಟು ವಿಶಾಲವಾಗಿತ್ತು.

ಜೀವನದಲ್ಲೇ ಅಂಥ ಉತ್ತಮ ವಿನ್ಯಾಸದ ದಿಂಬಿನ ಮೇಲೆ ನಾನು ಗೋಣು ಚೆಲ್ಲಿರಲಿಲ್ಲ. ಇದು ತೀರಾ ಸಣ್ಣ ವಿಷಯವಾಗಿರಬಹುದು, ಆದರೆ ಅದು ನನ್ನ ನೆಮ್ಮದಿಯನ್ನು ಹೆಚ್ಚಿಸಿದ್ದಂತೂ ಸುಳ್ಳಲ್ಲ. ನಿಮಗೆ ಇದು ತೀರಾ ಸಣ್ಣ ವಿಷಯ ಎನಿಸಬಹುದು ಅಥವಾ ನೀವು ಈ ಅಂಶವನ್ನು ‘ಒಂದು ಅಂಶ’ ಎಂದೂ
ಪರಿಗಣಿಸದೇ ಇರಬಹುದು. ಆದರೆ ನನಗೆ ಈ ಅಂಶ ಅತೀವ ಸಂತಸ ಮತ್ತು ಕಿರಿಕಿರಿಯನ್ನುಂಟುಮಾಡುತ್ತವೆ. ಯಾರಾದರೂ ಫಾಂಟ್ (ಅಕ್ಷರ) ಅಥವಾ ಟೈಪ್ ಪಾಸ್‌ಗಳನ್ನು ಸರಿ ಯಾಗಿ ಬಳಸಿದಾಗ ಅತೀವ ಸಂತಸವಾಗುತ್ತದೆ. ಸರಿಯಾಗಿ ಬಳಸಲಿಲ್ಲವೆನ್ನಿ, ಆಗ ಆಗುವ ಕಿರಿಕಿರಿ ಅಷ್ಟಿಷ್ಟಲ್ಲ. ಪ್ರತಿ ಅಕ್ಷರಕ್ಕೂ ಅದರದೇ ಆದ ವ್ಯಕ್ತಿತ್ವ, ಗುಣಲಕ್ಷಣಗಳಿವೆ. ಪ್ರತಿ ಅಕ್ಷರವೂ ಒಂದು ಸಮೂಹ ಅಥವಾ ಫ್ಯಾಮಿಲಿಗೆ ಸೇರುತ್ತವೆ.

ಇಂಗ್ಲಿಷ್ ಅಕ್ಷರಗಳಲ್ಲಿ ಸಾವಿರಾರು ವಿಧ. ಪ್ರತಿ ಅಕ್ಷರ ಫ್ಯಾಮಿಲಿಗೂ ಅದರದೇ ಆದ ವೈಶಿಷ್ಟ್ಯ ಮತ್ತು ಕಥನಗುಣವಿದೆ. ಹೀಗಾಗಿ ಯಾವ ಅಕ್ಷರ ಪ್ರಭೇದ ವನ್ನು ಬಳಸಬೇಕೋ, ಅದನ್ನೇ ಬಳಸಬೇಕು. ‘ಟೈಮ್ಸ್ ನ್ಯೂ ರೋಮನ್’ ಫ್ಯಾಮಿಲಿಗೆ ಸೇರಿದ ಅಕ್ಷರಕ್ಕೂ, ಗೆರಾಮಂಡ್ ಅಥವಾ ಗಿಲ್ ಸಾನ್ಸ್‌ಗೂ ಸಾಕಷ್ಟು ವ್ಯತ್ಯಾಸವಿದೆ. ಯಾವ ಸಂದರ್ಭದಲ್ಲಿ ಯಾವುದನ್ನು ಬಳಸಬೇಕೋ, ಅದನ್ನೇ ಬಳಸಬೇಕು. ಈ ರೀತಿ ವ್ಯತ್ಯಾಸಗಳಾದಾಗ, ವಿಪರೀತ ಕಿರಿಕಿರಿಯಾಗುತ್ತದೆ. ಆ ಕ್ಷಣದ ಸಂತಸವನ್ನು ಯಾರೋ ಚಿವುಟಿ ಕಿತ್ತುಕೊಂಡ ಹಾಗಾಗುತ್ತದೆ. ಈ ಮಾತು ಕನ್ನಡದ ಅಕ್ಷರಗಳಿಗೂ ಅನ್ವಯ. ಬಳಸಲೇ ಬಾರದಷ್ಟು ಕೆಟ್ಟದಾಗಿರುವ ಕನ್ನಡ ಫಾಂಟ್‌ಗಳಿವೆ. ಕೆಲವು ಅಡ್ನಾಡಿಗಳು ಅಥವಾ ಅಡ್ಡಕಸುಬಿಗಳು ಈ ವ್ಯತ್ಯಾಸ ಅರಿಯದೇ ಯಾವುಯಾವುದೋ ಅಕ್ಷರಗಳನ್ನು ಬಳಸಿದಾಗ, ಅತೀವ ಸಿಟ್ಟು ಬರುತ್ತದೆ. ಆ ಹೊತ್ತಿನ ನೆಮ್ಮದಿಯನ್ನು ಕಸಿ ಯಲು, ಇಂಥ ಸಣ್ಣ ಯಡವಟ್ಟುಗಳು ಸಾಕು. ಈ ಫಾಂಟ್ ಗಳು ಎಷ್ಟು ಪ್ರಮುಖ ಅಂದ್ರೆ ಕೆಲವು ಬಹುರಾಷ್ಟ್ರೀಯ ಕಂಪನಿಗಳು ಅಕ್ಷರಗಳನ್ನೇ ಲೋಗೊಗಳನ್ನಾಗಿಟ್ಟುಕೊಂಡಿವೆ.

ಉದಾಹರಣೆಗೆ ಸ್ಯಾಮ್‌ಸಂಗ್. ಮನಸ್ಸಿಗೆ ಬಂದ ಫಾಂಟ್ ಬಳಸಿ ಸ್ಯಾಮ್‌ಸಂಗ್ ಎಂದು ಬರೆದರೆ ಅದು ಸ್ಯಾಮ್‌ಸಂಗ್ ಆಗಲು ಸಾಧ್ಯವಿಲ್ಲ. ಹಾಗೆ ಯಾರಾದರೂ ಚೆಂದದ ಫಾಂಟ್ ಬಳಸಿದರೆ, ನನ್ನ ಸಂತಸ ಇಮ್ಮಡಿಯಾಗಲು, ಆ ಕ್ಷಣದ ಆನಂದ ಹೆಚ್ಚಲು ಇನ್ನೇನು ಬೇಕು? ಕೆಲವು ಸಲ ನಾನು ಮುಂದೆ ಓದದೇ, ಆ ಸುಂದರ ಅಕ್ಷರಗಳನ್ನೇ ಧೇನಿಸುತ್ತಾ, ಅದನ್ನು ವಿನ್ಯಾಸಗೊಳಿಸಿದವನ ಕಲ್ಪನೆಗೆ ತಲೆದೂಗುತ್ತಾ, ಆ ಅಕ್ಷರಗಳ ಮಜಕೂರುಗಳನ್ನು ಚಪ್ಪರಿಸುತ್ತಾ ಸುಮ್ಮನೆ ನೋಡುತ್ತಾ ನಿಂತುಬಿಡುತ್ತೇನೆ. ‘ನಿಮ್ಮ ಸಂತಸವನ್ನು ಏಕಾಏಕಿ ಹೆಚ್ಚಿಸುವ ತೀರಾ ಸಣ್ಣ ಸಂಗತಿ ಯಾವುದು?’ ಎಂದು ಒಮ್ಮೆ ಯೋಗಿ ದುರ್ಲಭಜೀ ಕೇಳಿದ್ದರು. ನಾನು ತಕ್ಷಣ ಹೇಳಿದ್ದೆ- ‘ಆಗ ತಾನೇ ಖರೀದಿಸಿದ ಹೊಸ ಪುಸ್ತಕದ ಪುಟಗಳನ್ನು ತೆರೆದು ಅದರ ವಾಸನೆಯನ್ನು ಹೀರುವುದು ಮತ್ತು ಕೆಲಕಾಲ ಹಾಗೆ ಹೀರುತ್ತಲೇ ಇರುವುದು’.

ಯೋಗಿಯವರು, ‘ಹೌದು, ನಾನೂ ಒಬ್ಬನೇ ಇದ್ದಾಗ ಪುಸ್ತಕದ ಪುಟಗಳನ್ನು ತೆರೆದು ವಾಸನೆಯನ್ನು ಹೀರುತ್ತೇನೆ’ ಎಂದಿದ್ದರು. ‘ಪುಸ್ತಕ ಓದಲು ಮನಸ್ಸು
ಹದವಾಗಲು ಆ ವಾಸನೆ ಸಹಕಾರಿ’ ಎಂದಿದ್ದರು. ‘ಯೋಗಿಜೀ, ನಿಮಗೆ ಯಾವ ಸಣ್ಣ ಸಂಗತಿಗಳು ಇಷ್ಟ?’ ಎಂದು ಕೇಳಿದ್ದೆ. ಅದಕ್ಕೆ ಅವರು ‘ಹಲ್ಲು ಉಜ್ಜುವುದು’ ಎಂದಿದ್ದರು. ‘ಹಲ್ಲುಜ್ಜಿದ ಆ ಹತ್ತು ನಿಮಿಷ ಇಡೀ ಮನಸ್ಸುಪ್ರಫುಲ್ಲಿತವಾಗಿರುತ್ತದೆ. ಅದೆಂಥ ಸಂತೋಷ ಅಂತೀರಿ?’ ಎಂದು ಆ ಸಂತಸ ವನ್ನು ಮನಸ್ಸಿನಲ್ಲಿಯೇ ನೆನಪಿಸಿಕೊಂಡವರಂತೆ ಕಣ್ಮುಚ್ಚಿ ದೀರ್ಘ ಉಸಿರೆಳೆದುಕೊಂಡಿದ್ದರು. ‘ಆಗಾಗ ಕಡತಯಜ್ಞ ಮಾಡಿ. ನಿಮ್ಮ ಕಪಾಟುಗಳನ್ನು ತಡಕಾಡಿ. ನೀವು ಎಂದೋ ಹುಡುಕಿದ ವಸ್ತುಗಳು, ಮಾಜಿ ಪ್ರೇಯಸಿಯ ಪ್ರೇಮಪತ್ರ, ಗೆಳೆಯ ಕಳಿಸಿದ ಗ್ರೀಟಿಂಗ್ ಕಾರ್ಡ್, ಗಣ್ಯರು ಕಳಿಸಿದ ಶುಭಾಶಯ ಪತ್ರ… ಹೀಗೆ ಏನಾದರೂ ಸಿಕ್ಕದೇ ಹೋಗುವುದಿಲ್ಲ. ಅವು ನೀಡುವ ಸಂತೋಷ ಅಷ್ಟಿಷ್ಟಲ್ಲ’ ಎಂದಿದ್ದರು. ಅದು ನನ್ನ ಅನುಭವವೂ ಹೌದು.

‘ನಾನು ಎದುರು ನೋಡುವ ಸಂತಸದ ಸಣ್ಣ ಕ್ಷಣಗಳಾವವು?’ ಈ ಪ್ರಶ್ನೆಯನ್ನು ನಾನೇ ನನಗೆ ಎಷ್ಟೋ ಸಲ ಕೇಳಿಕೊಂಡಿದ್ದೇನೆ. ಕಳೆದ ಅವೆಷ್ಟೋ ವರ್ಷಗಳಿಂದ ಆ ಕ್ಷಣ ಒಂದೇ ಆಗಿದೆ. ಅದೇನೆಂದರೆ, ಬೆಳಗ್ಗೆ ಪತ್ರಿಕೆಗಳಿಗಾಗಿ ದಾರಿ ನೋಡುವುದು. ಬೆಳಗ್ಗೆ ಬೇಗ ಎದ್ದು, ಲಗುಬಗೆಯಿಂದ ಹಲ್ಲುಜ್ಜಿ, ಮುಖ ತೊಳೆದು, ನಿತ್ಯಕರ್ಮ ಮುಗಿಸಿ, ಕೂದಲು ಬಾಚಿಕೊಂಡು, ಒಂದು ಗ್ಲಾಸ್ ನೀರು ಕುಡಿದು, ದೇವರಿಗೆ ಕೈ ಮುಗಿದು, ಬಿಸಿಬಿಸಿ ಕಾಫಿ ಹೀರುತ್ತಾ ಪೇಪರ್ ಹಾಕುವ ಹುಡುಗನಿಗೆ ಕಾಯುತ್ತಾ ನಿಲ್ಲುವ ಕ್ಷಣಗಳಿವೆಯಲ್ಲ, ನಿತ್ಯವೂ ನನ್ನ ಪಾಲಿನ ಅತ್ಯಂತ ಸಂತಸದ, ನಿರೀಕ್ಷಿತ, ಅಪ್ಪುಗೆಯ ಅಮೃತ ಗಳಿಗೆ! ಪೇಪರ್ ಬರುವುದಕ್ಕಿಂತ ಮುಂಚಿನ ಐದು ನಿಮಿಷಗಳು ನನ್ನನ್ನು ತೀವ್ರ ಚಡಪಡಿಕೆಗೆ ಹಚ್ಚುತ್ತವೆ.

ಚಿಕ್ಕ ಮಕ್ಕಳಿಗೆ ಚಾಕಲೇಟ್, ಐಸ್‌ಕ್ರೀಮ್ ಕೊಡಿಸುತ್ತೇನೆಂದು ಕರೆದುಕೊಂಡು ಹೋಗಿ, ಇನ್ನೂ ಕೊಡಿಸದೇ, ಕಾಯಿಸುವ ಆ ಕ್ಷಣಗಳಂತೆ. ಅದರಲ್ಲೂ ಭಾನುವಾರದ ಪತ್ರಿಕೆಗಳನ್ನು ಎತ್ತಿ ಕೊಳ್ಳಲು ನಾನು ಅರ್ಧ ಗಂಟೆ ಮುಂಚಿತವಾಗಿ ಸಿದ್ಧವಾಗುವು ದುಂಟು. ಮುಂದಿನ ೩ ಗಂಟೆ ನಾನು ಕಳೆದು ಹೋಗಿರುತ್ತೇನೆ. ಅದು ನನ್ನ ಪಾಲಿಗೆ ಅತ್ಯಂತ ಧ್ಯಾನಸ್ಥ ಸ್ಥಿತಿ. ಆ ಸಮಯದಲ್ಲಿ ಎದುರಾಗುವ ಸಣ್ಣಪುಟ್ಟ ಅಡ್ಡಿ-ಅಡಚಣೆಗಳನ್ನು ಒಪ್ಪಿಕೊಳ್ಳುವು ದಿಲ್ಲ. ಭಾನುವಾರವೂ ಬೇಗನೆ ಏಳುವ ಏಕಮಾತ್ರ ಆಕರ್ಷಣೆ ಮತ್ತು ಸಂತಸ ನೀಡುವ ಸಣ್ಣ ಸಂಗತಿ ಅಂದ್ರೆ ಆ ದಿನದ ಪತ್ರಿಕೆ! ಶನಿವಾರ ತಡವಾಗಿ ಮಲಗಿದರೂ, ಭಾನುವಾರ ಬೆಳಗ್ಗೆ ಐದೂವರೆಗೆ ನನಗೆ ಚಾಟಿ ಬೀಸಿ ‘ಪ್ರೀತಿಯಿಂದ’ ಎಬ್ಬಿಸುವ ಶಕ್ತಿಯಿದ್ದರೆ ಅಂದಿನ ಪತ್ರಿಕೆಗಳಿಗೆ ಮಾತ್ರ.

‘ಹತ್ತು ದಿನ ಪುರುಸೊತ್ತು ಇದ್ದರೆ ಸ್ಪೇನ್ ದೇಶದ ಬಾರ್ಸಿಲೋನಾ ನಗರದಿಂದ ಒಂದು ಗಂಟೆ ವಿಮಾನ ಪ್ರಯಾಣ ದೂರದಲ್ಲಿರುವ ಸುಂದರ ದ್ವೀಪ ಇಬಿಜಕ್ಕೆ ನನ್ನ ಪತಿಯ ಜತೆಗೆ ಹೋಗಬೇಕು ಎಂದು ಅನಿಸುತ್ತದೆ. ನನ್ನ ಪಾಲಿನ ಸಂತಸದ ಕ್ಷಣಗಳವು’ ಎಂದು ಕ್ರಿಕೆಟಿಗ ವಿರಾಟ ಕೊಹ್ಲಿ ಪತ್ನಿ, ನಟಿ ಅನೂಷ್ಕಾ ಶರ್ಮ ಹೇಳಿದ್ದಳು. ಇರಲಿ. ಅದು ಅವಳು ಸಂತೋಷ ಕಾಣುವ ಪರಿ. ‘ನೀವು ವಿಪರೀತ ಒತ್ತಡದಲ್ಲಿದ್ದಾಗ ಕ್ಷಣಕ್ಷಣಕ್ಕೂ ಯಾರೋ ಫೋನ್ ಕರೆಗಳನ್ನು ಮಾಡುತ್ತಿದ್ದರೆ ಅಥವಾ ನೀವು ವಿಮಾನ ನಿಲ್ದಾಣಕ್ಕೆ ಅವಸರದಲ್ಲಿ ಹೊರಡುವಾಗ, ಎಲ್ಲೋ ಇತ್ತ ಪಾಸ್‌ಪೋರ್ಟ್‌ನ್ನು ಹುಡುಕುವಾಗ, ಕ್ರೆಡಿಟ್ ಕಾರ್ಡ್ ಮಾಡಿಸುತ್ತೀರಾ, ಪರ್ಸನಲ್ ಲೋನ್ ಬೇಕಾ ಎಂದು ಯಾರಾದರೂ ಕರೆ ಮಾಡಿದರೆ, ವಿಪರೀತ ಕಿರಿಕಿರಿಯಾಗುತ್ತದೆ. ಆ ಕ್ಷಣ ಮೊಬೈಲನ್ನು ಏರೋಪ್ಲೇನ್ ಮೋಡ್‌ನಲ್ಲಿಟ್ಟರೆ ಆಗುವ ಸಮಾಧಾನ, ಸಿಗುವ ಸಂತಸ ಅಷ್ಟಿಷ್ಟಲ್ಲ. ದಿನದ ಕೆಲ ಹೊತ್ತು ನಿಮ್ಮ ಮೊಬೈಲನ್ನು ಏರೋಪ್ಲೇನ್ ಮೋಡ್‌ನಲ್ಲಿಡಿ. ನಿಮ್ಮ ಸಂತಸ ಎಲ್ಲಿದೆ ಎಂಬುದು ಗೊತ್ತಾಗುತ್ತದೆ’ ಎಂದು ನಾನು ಇತ್ತೀಚೆಗೆ ಟಿವಿ ಸಂದರ್ಶನವೊಂದರಲ್ಲಿ ಹೇಳಿದ್ದೆ. ಇದು ತೀರಾ ಸಣ್ಣ ಸಂಗತಿ ಎಂದು ಅನಿಸಬಹುದು.

ಆದರೆ ಮೊಬೈಲ್ ಫೋನ್ ಏರೋಪ್ಲೇನ್ ಮೋಡ್ ನಲ್ಲಿರುವಷ್ಟು ಹೊತ್ತು ಮನಸ್ಸು ಲಾಲ್‌ಬಾಗ್! ‘ಯೋಗಿಜೀ, ಸಣ್ಣ ಸಂಗತಿಗಳಿಂದ ಗರಿಷ್ಠ ಸಂತೋಷ ಪಡೆಯಲು ಸಾಧ್ಯವಾ?’ ಎಂದು ಕೇಳಿದೆ. ‘ಸಂತಸದಲ್ಲಿ ದೊಡ್ಡದು ಮತ್ತು ಸಣ್ಣದು ಎಂಬುದಿಲ್ಲ. ಸಂತಸವನ್ನು ಪ್ರಮಾಣೀಕರಿಸಲು (Quantify) ಸಾಧ್ಯವಿಲ್ಲ. ನೀವು ಇಷ್ಟ ಪಡುವ ಒಂದು ಅತ್ತರು ಬಾಟಲಿಯನ್ನು ಯಾರೋ ಕೊಟ್ಟಾಗ ಬಹಳ ಸಂತೋಷವಾಗುತ್ತದೆ. ನಿಮಗೆ ಯಾರೋ ಐಫೋನ್ ನ್ನು ಉಡುಗೊರೆ ಕೊಟ್ಟಾಗಲೂ ಅಷ್ಟೇ ಸಂತೋಷವಾಗುತ್ತದೆ. ಮೊದಲನೆಯದು ಒಂದು ಕೆಜಿ ಸಂತಸವಾದರೆ, ಎರಡನೆ ಯದು ಮೂರು ಕೆಜಿ ಸಂತೋಷವಾಗಲು ಸಾಧ್ಯವಾ? ನನಗೆ ಅತಿಸಣ್ಣ ಸಂಗತಿಯಿಂದ ಸಂತೋಷವಾಗುವುದು ಯಾವಾಗ ಅಂದ್ರೆ ಐಸ್‌ಕ್ರೀಮ್‌ನ ಕೊನೆಯ ತುತ್ತನ್ನು ತಿನ್ನುವಾಗ.

ಪ್ರತಿಸಲ ನಾನು ಕೊನೆಯ ತುತ್ತನ್ನು ತಿನ್ನುವಾಗ ಸ್ವಲ್ಪ ಹಿಡಿದು, ನನ್ನ ತುಡಿತವನ್ನು ತಡೆದು, ತಿನ್ನುತ್ತೇನೆ. ಆಗ ಸಿಗುವ ಸಂತಸ ಅಷ್ಟಿಷ್ಟಲ್ಲ. ಅದೇ ಕೊನೆಯ ತುತ್ತು ನೆಲಕ್ಕೆ ಬಿದ್ದರೆ, ಆಗುವ ಬೇಸರವೂ ಅಷ್ಟಿಷ್ಟಲ್ಲ. ನಾವು ಸಣ್ಣ ಸಂಗತಿಗಳಿಂದ ಸಂತಸ ಅನುಭವಿಸುವುದನ್ನು ರೂಢಿಸಿಕೊಳ್ಳದಿದ್ದರೆ, ಒಂದು ಕಪ್ ಕಾಫಿಯನ್ನು ಸವಿಯುವಾಗ ಸಂತಸಪಡದಿದ್ದರೆ, ಮಕರಂದ ಹೀರಿ ಜೇನುಗಳು, ತುಪ್ಪ ಮಾಡುವ ಕ್ರಿಯೆಗೆ ವಿಸ್ಮಯಪಡುವುದನ್ನು ಅಭ್ಯಾಸ ಮಾಡಿಕೊಳ್ಳದಿದ್ದರೆ, ಪ್ರತಿದಿನವೂ ದೊಡ್ಡ ದೊಡ್ಡ ಸಂಗತಿಗಳು ಜರುಗುವುದಿಲ್ಲ. ಆಗ ಸಂತಸಪಡುವ ಅವಕಾಶಗಳೇ ಸಿಗುವುದಿಲ್ಲ’ ಎಂದು ಹೇಳಿದ್ದರು.

‘ಹದಿನೈದು ದಿನಗಳ ಹಿಂದೆ, ಒಂದು ಮಾವಿನ ಹಣ್ಣನ್ನು ತಿಂದು, ಗೊರಟನ್ನು ಬಿಸಾಕದೇ, ಅದನ್ನು ಒಂದು ಕುಂಡದಲ್ಲಿ ಹಾಕಿ ನೆಟ್ಟು, ಮಣ್ಣು, ಗೊಬ್ಬರ, ನೀರು ಹಾಕಿದೆ. ನಂತರ ಅತ್ತ ನೋಡಿರಲಿಲ್ಲ. ಇಂದು ಬೆಳಗ್ಗೆ ನೋಡಿದರೆ, ಅದು ಮೊಳಕೆಯೊಡೆದಿತ್ತು. ನನಗೆ ಆದ ಸಂತಸಕ್ಕೆ ಪಾರವೇ ಇರಲಿಲ್ಲ’ ಎಂದು ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ ಒಬ್ಬರು ತಮ್ಮ ಆನಂದವನ್ನು ಫೋಟೋ ಸಮೇತ ಹಂಚಿಕೊಂಡಿದ್ದರು. ಅವರ ಆನಂದ ಎಲ್ಲಿಂದ ಮೊಳಕೆಯೊಡೆದಿದೆ ಎಂಬ ಸಂಗತಿ ನನ್ನಲ್ಲೂ
ಒಂದು ಕ್ಷಣ ಸಂತಸಕ್ಕೆ ಕಾರಣವಾಗಿತ್ತು. ಕುಮಾರಸ್ವಾಮಿ, ಡಿಕೆಶಿ, ಯಡಿಯೂರಪ್ಪ, ಅಮಿತ್ ಶಾ, ಸ್ಟಾಲಿನ್ ಅವರೆಲ್ಲ ಇಂಥ ಸಣ್ಣ ಸಣ್ಣ ವಿಷಯಗಳಲ್ಲಿ ಸಂತಸವನ್ನು ಪಡೆಯುತ್ತಾರಾ ಎಂದು ಯಾರೋ ಅಲ್ಲಿ ಕಾಮೆಂಟ್ ಹಾಕಿದ್ದರು. ಅವರನ್ನು ನೆನಪಿಸಿಕೊಳ್ಳುವುದೇ ದುಃಖಕ್ಕೆ ಕಾರಣ ಎಂದು ಇನ್ಯಾರೋ
ಬರೆದಿದ್ದರು. ಮನೆಯಲ್ಲಿ ಬೋರಾದರೆ, ಊರಲ್ಲಿರುವ ಸ್ಮಶಾನಕ್ಕೆ ಹೋಗಿ. ನೀವು ಬದುಕಿರುವುದೇ ದೊಡ್ಡ ಸಂತೋಷದ ವಿಷಯ ಎಂಬ ಸರಳ ಸತ್ಯ ಅರಿವಾಗಬಹುದು.

ಬದುಕಿನಲ್ಲಿ ಸದಾ ದೊಡ್ಡ ಸಂತಸ ಬರುವುದಿಲ್ಲ. ಹೀಗಾಗಿ ಸಣ್ಣ ಸಣ್ಣ ಸಂಗತಿಗಳಲ್ಲಿ ಸಂತಸ ಕಾಣವುದನ್ನು ರೂಢಿಸಿಕೊಳ್ಳಬೇಕು.