Wednesday, 30th October 2024

ಬೇರೆಯವರನ್ನು ಖುಶಿಪಡಿಸುವುದರಲ್ಲೂ ನೆಮ್ಮದಿಯಿದೆ !

ಇದೇ ಅಂತರಂಗ ಸುದ್ದಿ

vbhat@me.com

ಅವರಿಬ್ಬರೂ ಮಾಜಿ ಸೈನಿಕರು. ವಯಸ್ಸಾದ ಕಾರಣದಿಂದ ಕಾಯಿಲೆಗೆ ತುತ್ತಾಗಿ ಆಸ್ಟತ್ರೆ ಸೇರಿದ್ದರು. ಬದುಕುತ್ತೇವೆ ಎಂಬ ಭರವಸೆ ಇಬ್ಬರಿಗೂ ಇರಲಿಲ್ಲ.
ಆದರೂ ದೂರದ ಆಸೆಯೊಂದಿಗೆ ಆಸ್ಪತ್ರೆ ಸೇರಿದ್ದರು. ಈ ಪೈಕಿ ಒಬ್ಬನಿಗೆ ಎದ್ದೇಳುವ ತ್ರಾಣವೂ ಇರಲಿಲ್ಲ. ಆತ ಯಾವಾಗಲೂ ಅಂಗಾತ ಮಲಗಿಯೇ ಇರಬೇಕಿತ್ತು. ಇನ್ನೊಬ್ಬನ ಬೆಡ್ ಕಿಟಕಿಯ ಪಕ್ಕದಲ್ಲಿತ್ತು. ಈತ ದಿನವೂ ಸಂಜೆ ಒಂದು ಗಂಟೆಯ ಕಾಲ ಎದ್ದು ಕೂಡುತ್ತಿದ್ದ. ಪರಿಚಯವಾದ ಒಂದೆರಡೇ ದಿನಗಳಲ್ಲಿ ಈ ಇಬ್ಬರೂ ಆಪ್ತರಾದರು.

ಮೊದಲು ತಮ್ಮ ವೃತ್ತಿಯ ಬಗ್ಗೆ, ಆ ದಿನಗಳಲ್ಲಿ ಇದ್ದ ಉತ್ಸಾಹ, ಆವೇಶದ ಬಗ್ಗೆ ಮಾತಾಡಿದರು. ನಂತರ ಹೆಂಡತಿ, ಮಕ್ಕಳು ಬಂಧು-ಬಳಗದ ಬಗ್ಗೆ ಮಾತಾಡಿಕೊಂಡರು. ಕುಟುಂಬದ ವಿಷಯವನ್ನೇ ಅದೆಷ್ಟು ಬಾರಿ ಹೇಳಿಕೊಳ್ಳಲು ಸಾಧ್ಯ? ಅದೊಂದು ದಿನ, ಆ ಕಿಟಕಿಯ ಪಕ್ಕದ ಬೆಡ್‌ನಲ್ಲಿದ್ದವನು ಇದೇ ವಿಷಯ ಪ್ರಸ್ತಾಪಿಸಿದ. ನಂತರ- ‘ನಾಳೆ ಸಂಜೆಯಿಂದ ಒಂದು ಗಂಟೆಯ ಅವಽಯಲ್ಲಿ ಇಲ್ಲಿಂದ ನನಗೆ ಕಾಣುವ ಪ್ರತಿ ಸಂಗತಿಯನ್ನೂ ಕಾಮೆಂಟರಿ ಥರಾ ನಿನಗೆ ಹೇಳ್ತೇನೆ’ ಎಂದ.

ಸರಿ, ಮರುದಿನದಿಂದಲೇ ಈ ಗೆಳೆಯರ ಕಾಮೆಂಟರಿ ಶುರುವಾಯಿತು; ‘ಇಲ್ಲಿ ನೋಡು, ಈ ಕಿಟಕಿಯಿಂದಾಚೆಗೆ ಒಂದು ವಿಶಾಲ ಬಯಲಿದೆ. ಅದರ ಪಕ್ಕದಲ್ಲೇ ಒಂದು ಕೊಳವಿದೆ. ಅದರೊಳಗೆ ಎರಡು ಹಂಸಗಳಿವೆ. ಕೊಳದ ಮೇಲಿರುವ ಕಲ್ಲು ಬೆಂಚಿನ ಮೂಲೆಯಲ್ಲಿ ಪ್ರೇಮಿಗಳ ಹಿಂಡು ಕೂತಿದೆ. ಆ ಹುಡುಗಿ ಯಾವುದೋ ಕಾರಣಕ್ಕೆ ಸಿಟ್ಟಾಗಿದ್ದಾಳೆ. ಹುಡುಗ ಅವಳಲ್ಲಿ ಕ್ಷಮೆ ಕೇಳುತ್ತಿದ್ದಾನೆ. ಈ ಕೊಳದ ನೀರು, ಸಂಜೆಯ ಸೂರ್ಯಕಿರಣದ ಬೆಳಕನ್ನು ಪ್ರತಿ-ಲಿಸುತ್ತಿದೆ… ಉದ್ಯಾನದಲ್ಲಿ ತರಹೇವಾರಿ ಹೂಗಳು ಅರಳಿವೆ. ಆ ಹೂಗಳನ್ನು ನೋಡುತ್ತಾ ಚಿಕ್ಕ ಮಕ್ಕಳು ಮೈಮರೆತಿವೆ.

ಬಯಲಿನ ಇನ್ನೊಂದು ಮೂಲೆಯಲ್ಲಿ ವಯಸ್ಸಾದ ದಂಪತಿ ಏನನ್ನೋ ನೆನಪು ಮಾಡಿಕೊಂಡು ಕಂಬನಿ ಸುರಿಸುತ್ತಿದ್ದಾರೆ. ಅಲ್ಲಿಂದ ಕೂಗಳತೆಯ ದೂರವಿರುವ ಮರದ ಕೆಳಗೆ ಪ್ರೇಮಿಗಳಿಬ್ಬರು ಮುದ್ದು ಮಾಡುತ್ತಿದ್ದಾರೆ… ದಿನವೂ ಹೀಗೆ ಸಾಗುತ್ತಿತ್ತು ರನ್ನಿಂಗ್ ಕಾಮೆಂಟರಿ. ಅವನು ಕಿಟಕಿಯ ಪಕ್ಕ ಕೂತು ಆಗಿಂದಾಗ್ಗೆ ಮುಖ ಅರಳಿಸುತ್ತಾ, ಕೈಯಾಡಿಸುತ್ತಾ ಒಂದೊಂದೇ ವಿವರಣೆ ಹೇಳುತ್ತಿದ್ದರೆ, ಹಾಸಿಗೆಯಲ್ಲಿ ಮಲಗಿದ್ದ ವ್ಯಕ್ತಿ, ಅವನ್ನೆಲ್ಲ ಇದ್ದಲ್ಲೇ
ಅಂದಾಜು ಮಾಡಿಕೊಂಡು ಖುಷಿಪಡುತ್ತಿದ್ದ.

ಪ್ರೇಮಿಗಳಿಬ್ಬರೂ ಮುದ್ದಾಡುತ್ತಿದ್ದಾರೆ ಎಂದಾಗ, ತನ್ನ ಹರೆಯದ ಆಟಗಳು ನೆನಪಾಗಿ ನಸುನಗುತ್ತಿದ್ದ. ಮುಂದೊಂದು ದಿನ- ಕಾಮೆಂಟರಿ
ಕೊಡುತ್ತಿದ್ದ ಗೆಳೆಯ-‘ಈಗ ನೋಡು ಗುರೂ, ಮೈದಾನದಲ್ಲಿ ದೊಡ್ಡದೊಂದು ಮೆರವಣಿಗೆ ಹೋಗ್ತಾ ಇದೆ. ಮುಂದೆ ಆನೆಗಳಿವೆ. ಹಿಂದೆ ಕುದುರೆಗಳ ಹಿಂಡು. ಅದರ ಹಿಂದೆ ಒಂಟೆಗಳು’ ಎಂದ ! ಅಷ್ಟು ದೊಡ್ಡ ಮೆರವಣಿಗೆ ಅಂದ ಮೇಲೆ ಭಾರಿ ಸದ್ದು-ಗದ್ದಲ ಕೇಳಿಸಬೇಕು ತಾನೆ? ಹಾಗೇನೂ ಕೇಳಿಸಲಿಲ್ಲ.
ಹಾಸಿಗೆಯಲ್ಲೇ ಮಲಗಿದ್ದವನು, ಕಾಮೆಂಟರಿ ಕೊಡುತ್ತಿದ್ದ ಗೆಳೆಯನಿಗೆ ಇದನ್ನೇ ಹೇಳಬೇಕು ಅಂದುಕೊಂಡ. ಆದರೆ ವಯಸ್ಸಿನ ಕಾರಣ, ಕಾಯಿಲೆಯ ಕಾರಣದಿಂದ ನನಗೆ ಕಿವುಡುತನ ಉಂಟಾಗಿರಬಹುದು ಎಂದು ಸುಮ್ಮನಾಗಿಬಿಟ್ಟ.

ಹೀಗೆಯೇ ದಿನ, ವಾರ, ತಿಂಗಳುಗಳೂ ಕಳೆದವು. ಒಂದು ಬೆಳಗ್ಗೆ, ರೋಗಿಗಳ ಬೆಡ್‌ಶೀಟ್ ಬದಲಿಸಲೆಂದು ಬಂದ ನರ್ಸ್, ಮೊದಲಿಗೆ ಕಿಟಕಿಯ ಬಳಿ ಇದ್ದ ರೋಗಿಯ ಬಳಿ ಹೋದಳು. ಆತ ನಿದ್ರೆ ಮಾಡುತ್ತಿದ್ದ ವೇಳೆಯಲ್ಲೇ ಸತ್ತು ಹೋಗಿದ್ದ. ಅದುವರೆಗೂ ಕಾಮೆಂಟರಿ ಹೇಳುತ್ತಿದ್ದ ಗೆಳೆಯ ಜತೆಗಿಲ್ಲ ಎಂಬ ಕಾರಣದಿಂದ ಇನ್ನೊಬ್ಬನಿಗೆ ತುಂಬಾ ಸಂಕಟವಾಯಿತು. ಹೊರಗಿನ ದೃಶ್ಯ ನೋಡಿಕೊಂಡು ಎಲ್ಲ ಸಂಕಟ ಮರೆಯೋಣ ಎಂದು ಯೋಚಿಸಿದ ಆತ, ತನಗೆ ಕಿಟಕಿ ಪಕ್ಕದ ಬೆಡ್ ಕೊಡುವಂತೆ ನರ್ಸ್‌ಗೆ ಕೇಳಿದ. ಕೆಲವೇ ನಿಮಿಷಗಳಲ್ಲಿ ಆ ವ್ಯವಸ್ಥೆಯೂ ಆಯಿತು. ಅದುವರೆಗೂ ಕಾಮೆಂಟರಿಯಲ್ಲಿ
ಕೇಳಿದ್ದ ದೃಶ್ಯಗಳನ್ನು ಮತ್ತೆ ಮತ್ತೆ ನೆನಪಿಸಿಕೊಂಡು ಈತ ಸಡಗರದಿಂದಲೇ ಕಿಟಕಿಯಿಂದಾಚೆ ನೋಡಿ ಬೆಚ್ಚಿಬಿದ್ದ.

ಏಕೆಂದರೆ, ಅಲ್ಲಿ ಒಂದು ಗೋಡೆಯನ್ನು ಬಿಟ್ಟರೆ ಬೇರೇನೂ ಇರಲಿಲ್ಲ. ಈಗ ಗಾಬರಿಗೊಂಡು ನರ್ಸ್‌ಗಳನ್ನು ಕರೆದ. ಬಂದವರಿಗೆಲ್ಲ ತನ್ನ ಗೆಳೆಯ ಹೇಳುತ್ತಿದ್ದ ರನ್ನಿಂಗ್ ಕಾಮೆಂಟರಿ ನೆನಪಿಸಿ ಪಾರ್ಕು, ಹೂಗಿಡ, ಈಜುಕೊಳ, ಮೆರವಣಿಗೆಯ ರಸ್ತೆ, ಪ್ರೇಮಿಗಳ ಪಿಸುಮಾತು… ಇದೆಲ್ಲ ಎಲ್ಲಿ ಮಾಯ ವಾಯ್ತು ಎಂದು ಬೆರಗಿನಿಂದ ಕೇಳಿದ. ಆಗ ಅವನನ್ನೇ ಅನುಕಂಪದಿಂದ ನೋಡುತ್ತಾ ನರ್ಸೊಬ್ಬಳು ಹೀಗೆಂದಳು; ‘ಈಗ ನೀವು ನೋಡ್ತಾ ಇದೀರಲ್ಲ, ಅದೇ ಸತ್ಯ. ಒಂದು ವಿಷಯ ನಿಮಗೆ ಗೊತ್ತಾ ? ರನ್ನಿಂಗ್ ಕಾಮೆಂಟರಿ ಕೊಡುತ್ತಿದ್ದ ನಿಮ್ಮ ಗೆಳೆಯನಿಗೆ ಕಣ್ಣು ಕಾಣ್ತಾ ಇರಲಿಲ್ಲ. ಯುದ್ಧದಲ್ಲಿ ಅವರು ಕಣ್ಣುಗಳನ್ನು ಕಳೆದುಕೊಂಡಿದ್ದರು. ನಿಮ್ಮಲ್ಲಿ ಜೀವನೋತ್ಸಾಹ ಹೆಚ್ಚಿಸಬೇಕೆಂಬ ಆಸೆಯಿಂದ ಅವರು ಹಾಗೆಲ್ಲ ಹೇಳ್ತಾ ಇದ್ರು’. ಬೇರೆಯವರನ್ನು ಖುಷಿಪಡಿಸುವುದರಲ್ಲೂ ನೆಮ್ಮದಿ, ಸಮಾಧಾನವಿದೆ.

ಡ್ರೈವರ್ ಮುಖ ನೋಡಿದ್ದೀರಾ? 
ನಗರಗಳಲ್ಲಿ, ಹೊರಭಾಗಗಳಲ್ಲಿ ಸಂಚಾರಿಸುವಾಗಲೆಲ್ಲ ಬಹುತೇಕ ಬಾರಿ ನಾವು ಟ್ರಾಫಿಕ್ ಜಾಮ್ ಅನ್ನು ಬಯ್ದುಕೊಂಡೇ ಹೋಗುತ್ತೇವೆ. ಜೀವಕ್ಕೆ ಹಾನಿಯಾಗದಂತೆ ಮೋಟಾರು ಚಲಾಯಿಸುವುದೇ ದೊಡ್ಡ ಸರ್ಕಸ್ಸು ಅಂತಲೂ ಗೊಣಗಾಡಿರುತ್ತೇವೆ. ಅವೆಲ್ಲ ಕಿರಿಕಿರಿಗಳ ಮಧ್ಯದಲ್ಲೇ ನಮ್ಮನ್ನು
ಒಂದಲ್ಲ, ಎರಡಲ್ಲ ದಿನಂಪ್ರತಿ ಸುರಕ್ಷಿತವಾಗಿ ತಲುಪಿಸುವ ಚಾಲಕನ ಮುಖವನ್ನೇ ನಾವು ನೋಡಿರುವುದಿಲ್ಲ. ತುಂಬ ಚೆನ್ನಾಗಿ ಡ್ರೈವ್ ಮಾಡಿದೆ ಯಪ್ಪಾ ಅಂತ ಚಿಕ್ಕದೊಂದು ಪ್ರಶಂಸೆಯನ್ನು ಮಾಡಿದವರೇ ಇಲ್ಲವೇನೋ. ನಿಜ, ಅವನಿಗೆ ಅದಕ್ಕೆಂದೇ ಸಂಬಳ ಕೊಡುತ್ತಿರಬಹುದು. ಆದರೆ ಸವಲತ್ತಿನ ಹೊರತಾದ ಒಂದು ಗುರುತಿಸುವಿಕೆ ? ಅದು ನಮ್ಮ ಕೃತಜ್ಞತೆಯ ಪ್ರತೀಕ.

ನಾಲ್ಕು ರಸ್ತೆ ಕೂಡುವ ಕಡೆ ದಿನವೂ ನಿಂತು ಹೊಗೆ ಕುಡಿಯುವ ಟ್ರಾಫಿಕ್ ಪೊಲೀಸ್. ಆತನನ್ನು ನಾವು ದಿನವೂ ಹಾಯ್ದುಕೊಂಡು ಬರುತ್ತೇವೆ. ಆದರೂ ಆತ ಅಪರಿಚಿತನಾಗಿ ಉಳಿದಿರುತ್ತಾನೆ. ಅವನಿಗೂ ಕನಸುಗಳಿವೆ. ಗಿಜಿಗುಡುವ ಶಬ್ದ ಪ್ರಪಂಚದಲ್ಲಿ ನಿಂತೂ ಆತನ ತುಟಿಗಳಲ್ಲಿ ‘ಕಹೋನಾ ಪ್ಯಾರ್ ಹೈ’ ಪಲ್ಲವಿ ಜಿನುಗಿಕೊಂಡಿರುತ್ತದೆ. ಕೆಲಸ ಮುಗಿಸಿ ಹೆಂಡತಿಗೆ ಬಿಸಿ ಬಜ್ಜಿ ಕಟ್ಟಿಸಿಕೊಂಡು ಹೋಗೋಣ ಅಂತ ಆತನೂ ಕಾತರದಲ್ಲಿರುತ್ತಾನೆ. ಅವನಿಲ್ಲದಿದ್ದರೆ ಕೆಂಪು – ಹಸಿರು ದೀಪಗಳೆಲ್ಲ ಅರ್ಥ ಕಳೆದುಕೊಂಡು ರಸ್ತೆಯ ಗಜಿಬಿಜಿ ನಮ್ಮ ಮನೋಲೋಕವನ್ನೂ ಆವರಿಸುವ ಆಪಾಯವಿದೆ. ಬಸ್ ಚಾಲಕನಂತೆ ಈತನೂ ನಮ್ಮ ಬದುಕಿನ ಒಂದು ಭಾಗ. ಸಿಗ್ನಲ್ ನಲ್ಲಿ ಸಿಂತಾಗ ಆತನ ಕಣ್ಣುಗಳಲ್ಲಿ ಸರಿದಾಡುತ್ತಿರುವ ಲಹರಿಗಳತ್ತ ನಮ್ಮ ದೊಂದು ಆಪ್ತನೋಟ ಜಮೆಯಾಗುವುದೇ ಇಲ್ಲ.

ರೀಡಿಂಗ್ ಎಡಿಟರ್ ಕುರಿತು

ಕೆಲ ವರ್ಷದ ಹಿಂದೆ ನಾನು ಲಂಡನ್‌ಗೆ ಹೋದಾಗ ಅಲ್ಲಿನ ಪ್ರಮುಖ ಹಳೆಯ ಪತ್ರಿಕೆಗಳಲ್ಲೊಂದಾದ, ‘ದಿ ಗಾರ್ಡಿಯನ್’ ಪತ್ರಿಕೆಗೆ ಭೇಟಿ ಕೊಟ್ಟಾಗ ಅಲ್ಲಿನ ‘ರೀಡಿಂಗ್ ಎಡಿಟರ್’ ಜತೆ ನಡೆಸಿದ ಮಾತುಕತೆ ಬಗ್ಗೆ ಪ್ರಸ್ತಾಪಿಸಿದ್ದೆ . ಇದನ್ನು ಓದಿದ ಅನೇಕರ ಪೈಕಿ ನೂರಕ್ಕೂ ಹೆಚ್ಚು ಮಂದಿ, ಇಂಥ ಹುದ್ದೆ ಯನ್ನು ‘ವಿಶ್ವವಾಣಿ’ಯಲ್ಲಿ ನೀವೂ ಏಕೆ ಸೃಷ್ಟಿಸಬಾರದು, ಕನ್ನಡದ ಓದುಗರಿಗೂ ಅದರ ಪ್ರಯೋಜನ ಸಿಗುವಂತಾಗಲಿ, ಒಂದು ವೇಳೆ ವಿಶ್ವವಾಣಿ ಯಲ್ಲಿ ಅಂಥ ಹುದ್ದೆ ತೆರೆದರೆ ಅದನ್ನು ನಿಭಾಯಿಸಲು ನಾನು ಸಿದ್ಧ’ ಎಂದು ಹೇಳಿದ್ದಾರೆ.

‘ಟೆಕ್ಸಸ್ ಇನ್‌ಸ್ಟ್ರುಮೆಂಟ್ಸ್’ನಲ್ಲಿ ಕೆಲಸ ಮಾಡುತ್ತಿರುವ ಗಿರೀಶ್ ಎಂಬುವವರು ‘ನಾನು ನನ್ನ ಸಂಸ್ಥೆಯಲ್ಲಿ ಒಳ್ಳೆಯ ಹುದ್ದೆಯಲ್ಲಿದ್ದೇನೆ. ಆದರೆ ನನಗೆ ಓದಲು ಸಮಯ ಸಿಗುತ್ತಿಲ್ಲ. ಹಾಗಂತ ನನಗೆ ಪುಸ್ತಕಗಳನ್ನು ಓದುವುದೆಂದರೆ ಪ್ರಾಣ. ಅದಕ್ಕಿಂತ ಉತ್ತಮ ಕೆಲಸ ಬೇರೆ ಯಾವುದೂ ಇಲ್ಲವೆಂಬುದು ನನ್ನ ಭಾವನೆ. ಒಂದು ವೇಳೆ ‘ರೀಡಿಂಗ್ ಎಡಿಟರ್’ ಹುದ್ದೆ ಸೃಷ್ಟಿಸಿದರೆ ಹೇಳಿ, ಕಡಿಮೆ ಸಂಬಳವಾದರೂ ಪರವಾಗಿಲ್ಲ, ನಾನು ಈಗಿನ ಕೆಲಸ ಬಿಟ್ಟು ಬರುತ್ತೇನೆ’ ಎಂದು ಬರೆದಿದ್ದಾರೆ.

ಇದೇ ಧಾಟಿಯಲ್ಲಿ ಐವತ್ತಕ್ಕೂ ಹೆಚ್ಚು ಮಂದಿ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ಇವರೆಲ್ಲರೂ ಗಂಭೀರ ಓದುಗರು ಹಾಗೂ ಓದುವುದನ್ನೇ ಕಸುಬಾಗಿ ಮಾಡಿಕೊಳ್ಳಬಯಸುವವರು. ಇವರೆಲ್ಲರ ಪ್ರತಿಕ್ರಿಯೆ ಗಮನಿಸಿದ ಬಳಿಕ ಅಂಥದ್ದೊಂದು ಹುದ್ದೆಯನ್ನು ಕನ್ನಡ ಪತ್ರಿಕೆಯಲ್ಲೂ ತೆರೆಯ ಬೇಕಾದ ಅಗತ್ಯವಿದೆ ಎಂದು ನನಗೆ ಬಲವಾಗಿ ಅನಿಸಿದೆ. ಸದ್ಯ ಈ ರೀಡಿಂಗ್ ಎಡಿಟರ್ ಹುದ್ದೆಯನ್ನು ಹೆಚ್ಚುವರಿಯಾಗಿ ನಾನೇ ನಿಭಾಯಿಸು ತ್ತಿದ್ದೇನೆ. ನನಗಾಗಿ, ಪತ್ರಿಕೆಗಾಗಿ ಹಾಗೂ ನಮ್ಮ ಓದುಗರಿಗಾಗಿ ಯಾರಾದರೂ ಪೂರ್ಣಾವಧಿ ಓದಿ ಅದರ ದತ್ತಫಲವನ್ನು ಕೊಡುವಂತಾದರೆ ಅದು ನಿಜಕ್ಕೂ ಖುಷಿ ವಿಚಾರವೇ.

ಹೀಗೊಂದು ಪತಿ-ಪತ್ನಿ ಸಂಭಾಷಣೆ
ತಮ್ಮ ತಂದೆ-ತಾಯಿ ವಿಷಯಕ್ಕೆ ಬಂದರೆ, ಗಂಡ-ಹೆಂಡತಿ ಹೇಗೆ ವರ್ತಿಸುತ್ತಾರೆಂಬುದನ್ನು ‘ಪ್ರೇಮ ಒಂದು ಕಲೆ’ ಕೃತಿಯಲ್ಲಿ ಯಂಡಮೂರಿ ವೀರೇಂದ್ರ ನಾಥ್ ಹೇಳಿದ್ದು ನೆನಪಾಗುತ್ತದೆ. ಇದು ಗಂಡ-ಹೆಂಡತಿಯರ ನಡುವೆ ನಡೆಯುವ ಸಾಮಾನ್ಯ ಸಂಭಾಷಣೆ. ಇಬ್ಬರೂ ಹೇಗೆ ತಮ್ಮ ತಂದೆ-ತಾಯಿ ಯಂದಿರನ್ನು ಬೆಂಬಲಿಸಿ ಮಾತಾಡ್ತಾರೆ ಎಂಬುದನ್ನು ಗಮನಿಸಿ.

ಹೆಂಡತಿ : ಮೆಡಿಸಿನ್, ಟೆಸ್ಟ್‌ಗಳಿಗೆ ಹದಿನೈದು ಸಾವಿರ ಕಳಿಸು ಎಂದು ಅಪ್ಪ ಪತ್ರ ಬರೆದಿದ್ದಾರೆ.
ಗಂಡ : ಈಗ ಹಣ ಎಲ್ಲಿದೆ ?
ಹೆಂಡತಿ : ನನ್ನ ಅಕೌಂಟ್‌ನಲ್ಲಿದೆ, ಅದರಿಂದ ಕಳಿಸುತ್ತೇನೆ.

ಗಂಡ : ನೀನು ಸಂಪಾದಿಸುತ್ತೀಯಾ, ಅವರಿಗಿರುವ ಏಕೈಕ ಮಗು ನೀನೇ ಎಂಬುದು ಗೊತ್ತು. ಆದರೆ ನಮಗೂ ಸಾಕಷ್ಟು ಖರ್ಚುಗಳಿವೆ ಎಂಬುದು ನಿನಗೆ ಗೊತ್ತಿರಲಿ.

ಹೆಂಡತಿ : ಹಾಗಲ್ಲ

ಗಂಡ : ಏನು ಹಾಗಲ್ಲ ? ನೀನು ಕಳಿಸಿದಷ್ಟೂ ಅವರ ಖರ್ಚುಗಳು ಹೆಚ್ಚಾಗುತ್ತವೆ. ಅದೇನೇ ಇರಲಿ, ಹದಿನೈದು ಸಾವಿರ ರುಪಾಯಿ ಖರ್ಚಾಗುವಂಥ ಟೆಸ್ಟ್ ಯಾವುದು ? ಈಗ ಸಾಧ್ಯವಿಲ್ಲ ಎಂದು ನಿನ್ನ ತಂದೆಗೆ ಹೇಳು.
ಹೆಂಡತಿ : ನನ್ನ ಅಪ್ಪನ ಬಗ್ಗೆ ಹೇಳ್ತಿಲ್ಲ, ನಿಮ್ಮ ಅಪ್ಪನ ಬಗ್ಗೆ ಹೇಳುತ್ತಿರೋದು.

ಗಂಡ : ಏನು ? ನನ್ನ ಅಪ್ಪನ ಟೆಸ್ಟ್, ಮೆಡಿಸಿನ್ ಬಗ್ಗೆ ಹೇಳ್ತಾ ಇದೀಯಾ ನೀನು ?
ಹೆಂಡತಿ : ಹೌದು, ಪತ್ರ ಬರೆದಿರೋದು ನನ್ನ ಅಪ್ಪ ಅಲ್ಲ, ನಿಮ್ಮ ಅಪ್ಪ.

ಗಂಡ : ಹೌದಾ ? ಬಹಳ ಹಿಂದೆಯೇ ಹೇಳಿದ್ದರು. ಪಾಪ, ಅವರು ಅವರ ಮಗನ ಹತ್ತಿರ ಕೇಳದೇ ಇನ್ಯಾರ ಬಳಿ ಕೇಳ್ತಾರೆ ? ನಾವೇ ಏನಾದರೂ ಮಾಡಿ ಅವರಿಗೆ ಹಣ ಕಳಿಸಬೇಕು. ಕಳಿಸೋಣ ಬಿಡು !

ಪದ ಹಾಗೂ ಪಬ್
ನಾನು ಲಂಡನ್‌ಗೆ ಹೋದಾಗ ಆಕ್ಸಫರ್ಡ್‌ಗೂ ಹೋಗಿದ್ದೆ. ಆ ಸಂದರ್ಭದಲ್ಲಿ ಅಲ್ಲಿನ ಪ್ರಸಿದ್ಧ, ಸುಮಾರು ನೂರೈವತ್ತು ವರ್ಷಗಳಷ್ಟು ಹಳೆಯದಾದ ‘ಈಗಲ್ಸ್ ಆಂಡ್ ಚೈಲ್ಡ್’ ಎಂಬ ಪಬ್‌ಗೆ ಹೋಗಿದ್ದೆ. ಅದು ನಿಜಕ್ಕೂ ಅಪರೂಪದ ತಾಣ. ಅಲ್ಲಿ ಎಲ್ಲವೂ ಹಳತು. ಅದೇ ಹೊಸತೂ ಹೌದು. ಕಾರಣ ಅಲ್ಲಿರುವ ಪ್ರತಿಯೊಂದು ವಸ್ತುಗಳನ್ನು ಬೇರೆಲ್ಲೂ ನೋಡಲು ಸಾಧ್ಯವಿಲ್ಲ. ಆ ಪಬ್‌ನ ಗೋಡೆ ಮೇಲೆ ಆಕರ್ಷಕವಾದ ಸ್ಲೋಗನ್ ಗಳಿದ್ದವು. ಬಿಯರ್ ಸುರಿದುಕೊಡುವ ಬಾರ್ ಅಟೆಂಡರ್ ಹಿಂಬದಿಗೆ ’How Now, Brown Cow’ ಎಂದು ಬರೆದಿತ್ತು.

ನನಗೆ ತಕ್ಷಣ ಅದು ಅರ್ಥವಾಗಲಿಲ್ಲ. ಬಾರ್ ಅಟೆಂಡರ್‌ನನ್ನು ಕೇಳಿದೆ. ‘ನನಗೂ ಅರ್ಥಗೊತ್ತಿಲ್ಲ. ಇದರ ಅರ್ಥವೇನು ಎಂದು ಕೇಳಿದವರು ನೀವೇ ಮೊದಲು. ಹೀಗಾಗಿ ನಾನೂ ಅದರ ಅರ್ಥ ತಿಳಿದುಕೊಳ್ಳುವ ಗೋಜಿಗೆ ಹೋಗಿಲ್ಲ’ ಎಂದು ಪ್ರಾಮಾಣಿಕವಾಗಿ ಹೇಳಿದ.

ಅಷ್ಟಕ್ಕೇ ಸುಮ್ಮನಾಗದ ಆತ, ಪಕ್ಕದಲ್ಲಿದ್ದ ತನ್ನ ಸಹ ಬಾರ್ ಟೆಂಡರ್ ನನ್ನು ಕೇಳಿದ. ‘ಆ ದೇವನೇ ಬಲ್ಲ’ ಎಂಬಂತೆ ಆತ ಮೇಲೆ ನೋಡಿದ. ನಾನು ಅಷ್ಟಕ್ಕೆ ಸುಮ್ಮನಾಗಲಿಲ್ಲ. ಯಾವುದೋ ಕಾರಣವಿಲ್ಲದೇ ಹಾಗೆ ಬರೆದಿರಲಾರರು ಎಂದು ಆ ಪಬ್‌ನ ಮಾಲೀಕನನ್ನು ಕೇಳಿದೆ. ಆತ ಸುಮಾರು ೭೫-೮೦ ವರ್ಷದ ಕ್ರಿಯಾಶೀಲ, ಉತ್ಸಾಹಿ ವೃದ್ಧ. ‘”How Now, Brown Cow’ ಅಂದ್ರೆ ‘What’s up? What Next?’ ಎಂದರ್ಥ ಎಂದು ಚುಟುಕಾಗಿ ಹೇಳಿದ.

ಆತ ಅಷ್ಟಕ್ಕೆ ಸುಮ್ಮನಾಗಲಿಲ್ಲ. ‘ಹದಿನೆಂಟನೆ ಶತಮಾನದಲ್ಲಿ ಬಿಯರ್‌ಗೆ ‘ಬ್ರೌನ್ ಕವ್’ ಎಂದು ಹೇಳುತ್ತಿದ್ದರು. ಒಂದು ಬಾಟಲಿ ಬಿಯರ್ ಕುಡಿದ ನಂತರ, ‘ಹವ್ ನೌ, ಬ್ರೌನ್ ಕವ್’ ಎಂದು ಲೋಕಾರೂಢಿಗೆ ಹೇಳುತ್ತಿದ್ದರು. ಅಂದರೆ ಒಂದು ಬಾಟಲಿಗೆ ನಿಲ್ಲಿಸುವುದು ಬೇಡ, ಮಾತುಕತೆ ಹಾಗೂ ಬಿಯರ್ ಸೇವನೆಯನ್ನು ಮುಂದುವರಿಸೋಣ ಎಂಬ ಇಂಗಿತಾರ್ಥ ಈ ಮಾತಿನಲ್ಲಿದೆ. ಈ ನಾಲ್ಕೂ ಪದಗಳಲ್ಲಿ Ow ಅಕ್ಷರ ಹಾಗೂ ಶಬ್ದ ಸಾಮಾನ್ಯ ವಾಗಿರುವುದನ್ನು ಗಮನಿಸಿ. ಅದರಲ್ಲಿ ಶಬ್ದಾಲಂಕಾರವೂ ಇದೆ,Order With (ow) ಎಂಬ ಆದೇಶವೂ ಇದೆ. ಮತ್ತೊಂದು ಬಾಟಲಿ ಬಿಯರ್ ಹೀರಲು
ಇಬ್ಬರೂ ಪರಸ್ಪರರ ಅನುಮತಿ ಪಡೆಯಲು How Now, Brown Cow ಎಂದು ಹೇಳುತ್ತಾರೆ’ ಎಂದು ಪದಬ್ರಹ್ಮನಂತೆ ವಿವರಿಸಿದ. ಆ ಪಬ್‌ಗೆ ಹೋಗಿದ್ದು ಸಾರ್ಥಕವಾಯಿತು ಎಂದೆನಿಸಿತು.

ನಾಯಿ ಹಾಗೂ ಮನುಷ್ಯ!
ಇತ್ತೀಚೆಗೆ ಯೋಗಿ ನಿಶ್ಚಿಂತಜೀ ಕಳಿಸಿದ ಒಂದು ಪುಟ್ಟ ಸಂದೇಶ ನನ್ನನ್ನು ಯೋಚಿಸುವಂತೆ ಮಾಡಿತು. ಯೋಗಿ ಬರೆದಿದ್ದರು-‘ ನಾಯಿಗೂ, ಮನುಷ್ಯ ನಿಗೂ ಏನು ವ್ಯತ್ಯಾಸ ಗೊತ್ತಾ? ಬೀದಿಯಲ್ಲಿರುವ ನೂರು ನಾಯಿಗಳ ಪೈಕಿ ತೊಂಬತ್ತೊಂಬತ್ತು ನಾಯಿಗಳು ಮನುಷ್ಯನನ್ನು ಕಂಡರೆ ಬಾಲ ಅಲ್ಲಾಡಿ ಸುತ್ತವೆ. ಆ ಪೈಕಿ ಒಂದು ನಾಯಿಯೇನಾದರೂ ಕಚ್ಚಿದರೆ, ಎಲ್ಲ ನೂರು ನಾಯಿಗಳನ್ನು ಮನುಷ್ಯ ಸಾಯಿಸಿಬಿಡುತ್ತಾನೆ.

ಬೀದಿಯಲ್ಲಿ ತಿರುಗುವ ನೂರು ಮನುಷ್ಯರ ಪೈಕಿ ತೊಂಬತ್ತೊಂಬತ್ತು ಮಂದಿ ನಾಯಿಗಳನ್ನು ಕಂಡರೆ ಕಲ್ಲನ್ನೆಸೆಯುತ್ತಾರೆ. ಒಬ್ಬ ಮನುಷ್ಯ ಒಂದು ನಾಯಿಗೆ ತಿಂಡಿ ಹಾಕಿದರೆ, ಎಲ್ಲ ನೂರು ನಾಯಿಗಳೂ ಪುನಃ ಮನುಷ್ಯರನ್ನು ಕಂಡರೆ ಬಾಲ ಅಲ್ಲಾಡಿಸುತ್ತಾ ಪ್ರೀತಿಸಲಾರಂಭಿಸುತ್ತವೆ. ಅನ್ನ ಹಾಕಿದ ಕೈಯನ್ನು ನಾಯಿ ಎಂದೆಂದೂ ಕಚ್ಚುವುದಿಲ್ಲ. ಕಚ್ಚಬೇಕೆನಿಸಿದರೆ ಮನುಷ್ಯ ಯಾರನ್ನೂ ಬಿಡುವುದಿಲ್ಲ.

ಇದು ಭಾರತದಲ್ಲಿ ಸಾಧ್ಯವಾ?
ರವಾಂಡಕ್ಕೆ ಒಮ್ಮೆ ಸ್ವಿಟ್ಜರ್‌ಲ್ಯಾಂಡಿನ ಅಧ್ಯಕ್ಷರು ಭೇಟಿ ಕೊಟ್ಟಿದ್ದರಂತೆ. ಆ ಸಂದರ್ಭದಲ್ಲಿ ಅವರು ‘ಅತಿಗಣ್ಯರ ಅಭಿಪ್ರಾಯ ಪುಸ್ತಕ’ದಲ್ಲಿ Rwanda has become one of the cleanest countries in the world as clean as Switzerland ಎಂದು ಬರೆದಿದ್ದಾರಂತೆ. ಸ್ವತಃ ಸ್ವಿಟ್ಜರ್ ಲ್ಯಾಂಡ್ ಅಧ್ಯಕ್ಷರಿಗೇ ಹೀಗೆ ಅನಿಸಿದೆಯೆಂದರೆ, ರವಾಂಡ ಅದೆಷ್ಟು ಸ್ವಚ್ಛವಾಗಿರಬಹುದು ಎಂಬುದನ್ನು ಊಹಿಸಬಹುದು.

ರವಾಂಡದ ಬೀದಿಯಲ್ಲಿ ಕಸ, ಕಡ್ಡಿ ಬಿದ್ದಿದ್ದನ್ನು ಕಂಡರೆ, ಯಾರೂ ಅದನ್ನು ನೋಡಿ ಸುಮ್ಮನೆ ಹೋಗುವುದಿಲ್ಲ. ಅದನ್ನು ಎತ್ತಿ ಸಮೀಪದ ಕಸದ ಬುಟ್ಟಿಗೆ ಹಾಕಿ ಹೋಗುತ್ತಾರೆ. ೨೦೦೭ರಲ್ಲಿ ರವಾಂಡ ಸರಕಾರ ಶ್ರಮದಾನ(ಉಮುಗಂಡ) ಯೋಜನೆಯನ್ನು ಜಾರಿಗೆ ತಂದಿತು. ಈ ಯೋಜನೆಯನ್ವಯ ತಿಂಗಳ ಕೊನೆಯ ಶನಿವಾರ, ರಾಷ್ಟ್ರಾಧ್ಯಕ್ಷರಿಂದ ಕಟ್ಟಕಡೆಯ ವ್ಯಕ್ತಿ ಯವರೆಗೆ ಪ್ರತಿಯೊಬ್ಬರೂ ಶ್ರಮದಾನದಲ್ಲಿ ಪಾಲ್ಗೊಳ್ಳಲೇಬೇಕು. ದೇಶದ ಅಧ್ಯಕ್ಷ ಪಾಲ್ ಕಗಾಮೆ ಈ ‘ಉಮುಗಂಡ’ದಲ್ಲಿ ತಪ್ಪದೇ ಭಾಗವಹಿಸುತ್ತಾರೆ. ರವಾಂಡದ ಶಾಲೆ, ಕಾಲೇಜು, ಸಮುದಾಯ ಭವನ ಮುಂತಾದವುಗಳ ನಿರ್ಮಾಣಕ್ಕೆ ಈ ಯೋಜನೆ ಸಹಾಯಕವಾಗಿದೆ.

ಅಷ್ಟೇ ಅಲ್ಲ, ದೇಶದ ರಸ್ತೆಗಳು ಉಬ್ಬು-ತಗ್ಗು, ಗುಂಡಿಗಳಿಂದ ಮುಕ್ತವಾಗಿರಲು ಇದು ಪ್ರಯೋಜನವಾಗಿದೆ. ಹದಿನೆಂಟರಿಂದ ಅರವತ್ತೈದು ವರ್ಷ
ವಯಸ್ಸಿನವರೆಲ್ಲರೂ ಈ ಮಾಸಿಕ ಆಚರಣೆಯಲ್ಲಿ ಖುಷಿಯಿಂದ ಭಾಗವಹಿಸುತ್ತಾರೆ. ದೇಶದ ಶೇ.೮೫ರಷ್ಟು ಜನ ಸ್ವಯಂಪ್ರೇರಿತರಾಗಿ ಪಾಲ್ಗೊಳ್ಳು ತ್ತಿರುವುದು ಗಮನಾರ್ಹ. ಈ ತಿಂಗಳು ‘ಉಮುಗಂಡ’ದಲ್ಲಿ ಭಾಗವಹಿಸಲು ಆಗದಿದ್ದರೆ ಮುಂದಿನ ತಿಂಗಳಲ್ಲಿ ಎರಡು ಸಲ ಈ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಇಡೀ ದೇಶವಾಸಿಗಳೆಲ್ಲ ಏಕಕಾಲದಲ್ಲಿ ಒಂದೇ ಕಾಯಕದಲ್ಲಿ ನಿರತರಾಗುವುದು ಸಾಮೂಹಿಕ ಪ್ರಜ್ಞೆ ಮೂಡಿಸುವಲ್ಲಿ
ಪರಿಣಾಮಕಾರಿ ಕ್ರಮವಾಗಿದೆ. ಇಂಥ ಯೋಜನೆ ಯಶಸ್ವಿಯಾಗಬೇಕೆಂದರೆ ಎಲ್ಲರ ಸಹಕಾರ ಬೇಕು. ಒಂದು ವೇಳೆ ಮೋದಿಯವರು ಈ ಯೋಜನೆಯನ್ನು ಭಾರತದಲ್ಲಿ ಜಾರಿಗೆ ತಂದರೆ ಏನಾಗಬಹುದು? ನಿಮ್ಮ ಊಹೆ ಸರಿ ಇದೆ, ಪ್ರತಿಪಕ್ಷಗಳು ಇದರಲ್ಲೂ ಕೊಂಕು ತೆಗೆದು ಮೋದಿ ಅವರನ್ನು ಟೀಕಿಸದೇ ಬಿಡು ವುದಿಲ್ಲ. ಈ ಯೋಜನೆ ನೆಲಕಚ್ಚುವ ತನಕ ವಿರಮಿಸುವುದಿಲ್ಲ.