Saturday, 14th December 2024

ಕಾಲಕ್ಕನುಗುಣವಾಗಿ ಬಣ್ಣ ಬದಲಿಸುವ ಹರನಗುಡ್ಡ !

ಶಶಾಂಕಣ

shashidhara.halady@gmail.com

ಹರನಗುಡ್ಡವು ಹಲವು ಕೌತುಕಗಳ ಆಗರ! ಮೊದಲನೆಯ ಕೌತುಕ ಎಂದರೆ ಆ ಗುಡ್ಡ ಟೊಳ್ಳು ಎಂಬ ವಿಚಾರ. ಎತ್ತರವಾದ ಪ್ರದೇಶದಲ್ಲಿ ಸಪಾಟಾಗಿ ೨ ಕಿ.ಮೀ. ದೂರದ ತನಕ ಹರಡಿರುವ ಆ ಗುಡ್ಡದ ಮೇಲೆ ನಡೆಯುವಾಗ, ಪ್ರತಿ ಹೆಜ್ಜೆ ಹಾಕಿದಾಗಲೂ ಒಂದು ರೀತಿಯ ‘ಧನ್ ಧನ್’ ಎಂಬ ಸದ್ದು ಮೂಡುತ್ತದೆ! ಇಡೀ ಹರನಗುಡ್ಡ ಟೊಳ್ಳಾಗಿದೆ ಎಂದು ನಮ್ಮೂರಿನವರು ಹೇಳುವುದುಂಟು. ಗುಡ್ಡದ ಒಳಗಿನ ಟೊಳ್ಳು ಜಾಗದಲ್ಲಿ ಚಿನ್ನ ತುಂಬಿದ ಕೊಪ್ಪರಿಗೆ ಇದೆ ಎಂಬ ನಂಬಿಕೆಯೂ ಇದೆ!

ದೂರದ ಅಮೆರಿಕದಲ್ಲಿ ಫಾಲ್ ಸೀಸನ್ ಬಂದಾಗ, ಕಾಡುಗುಡ್ಡಗಳಲ್ಲಿರುವ ಮರಗಳು ಬೇರೆ ಬಣ್ಣ ತಳೆಯುತ್ತವಂತೆ. ಇಡೀ ಗುಡ್ಡವೇ ಬಣ್ಣ ಬಣ್ಣವಾಗಿ ಕಾಣುವ ಈ ದೃಶ್ಯವನ್ನು ನೋಡಲು, ನೂರಾರು ಮೈಲಿ ದೂರ ಪಯಣಿಸಿ, ಅಲ್ಲಿನ ಸುಂದರ ನೋಟವನ್ನು ಕಣ್ತುಂಬಿಕೊಳ್ಳುತ್ತಾರಂತೆ. ಚಳಿಗಾಲದ
ಮುಂಚೆ ಎಲೆ ಉದುರಿಸುವ ಮರಗಳ ಎಲೆಗಳು, ಒಮ್ಮೆಗೇ ಹಳದಿ ಅಥವಾ ಕೆಂಪು ಬಣ್ಣವಾದಾಗ, ಇಡೀ ಗುಡ್ಡವೇ ಬೇರೊಂದು ಬಣ್ಣ ತಳೆಯುತ್ತ ದಂತೆ.

ಅದೊಂದು ವಿಸ್ಮಯಕಾರಿ ದೃಶ್ಯ, ಜತೆಗೆ ಅಮೆರಿಕದ ಪ್ರವಾಸಿಗರನ್ನು ಆಕರ್ಷಿಸುವ ನಿಸರ್ಗದ ವಿದ್ಯಮಾನವೂ ಹೌದು. ಆ ರೀತಿ ಬಣ್ಣ ತಳೆದ ಎಲೆಗಳು, ಒಂದೆರಡು ವಾರಗಳಲ್ಲಿ ಬಿದ್ದುಹೋಗುತ್ತವೆ, ಇಡೀ ಕಾಡು ಆಗ ಬೋಳುಮರಗಳ ಕಾಡಾಗುತ್ತದೆ, ಜತೆಗೆ, ಆ ಕಾಡಿನ ಬಣ್ಣವು ಬೇರೆಯದೇ ಆಗುತ್ತದೆ; ಆ ನಂತರ, ಅಲ್ಲಿ ತೀವ್ರ ಚಳಿಗಾಲ- ಎಲ್ಲೆಲ್ಲೂ ಹಿಮಪಾತ- ಆ ಋತುಮಾನದ ನೋಟವೇ ವಿಭಿನ್ನ, ಬೇರೊಂದೇ ಬಣ್ಣ. ಈ ರೀತಿ ನಿಸರ್ಗ ನಾನಾ ಬಣ್ಣ ತಳೆಯುವ ಚೋದ್ಯ ಅಲ್ಲಿದೆ. ಅದೇ ರೀತಿ ನಮ್ಮ ಹಳ್ಳಿಯಲ್ಲೂ ವರ್ಷಕ್ಕೆ ಮೂರು ಬಣ್ಣ ತಳೆಯುವ ಗುಡ್ಡವೊಂದಿದೆ; ಅದೇ ‘ಹರನ ಗುಡ್ಡ’. ಈ ಗುಡ್ಡವು ಅಗಣಿತ ವಿಸ್ಮಯಗಳ ತಾಣ, ನನ್ನನ್ನು ಅದ್ಭುತ ಲೋಕಕ್ಕೆ ಕರೆದೊಯ್ದ ಬ್ಯಾಣ.

ಆದ್ದರಿಂದಲೇ, ಹರನಗುಡ್ಡದ ಕುರಿತು ಈ ಹಿಂದೆಯೂ ನಾನು ಬರೆದದ್ದುಂಟು. ಅಮೆರಿಕದಲ್ಲಿ ವರ್ಷದ ವಿವಿಧ ಋತುಗಳಿಗೆ ಅನುಗುಣವಾಗಿ ಬೆಟ್ಟಗುಡ್ಡಗಳ ಮರಗಳು ಬಣ್ಣ ಬಣ್ಣದ ಎಲೆಗಳನ್ನು ತಾಳುತ್ತಾ, ಬೇರೆ ಬೇರೆ ನೋಟ ಒದಗಿಸುತ್ತಿರುವಂತೆಯೇ, ನಮ್ಮೂರಿನ ಹರನಗುಡ್ಡವೂ ವರ್ಷಕ್ಕೆ ೩ ಸಲ ವಿಭಿನ್ನ ನೋಟವನ್ನು ಒದಗಿಸುತ್ತದೆ! ಹೇಗೆಂದು ಕೇಳಿದಿರಾ? ಇಗೋ ಕೇಳಿ. ಹಾಗೆ ನೋಡಿದರೆ, ನಮ್ಮ ಹಳ್ಳಿ ಮನೆಯ ಪೂರ್ವ ದಿಕ್ಕಿನಲ್ಲಿರುವ ಹರನಗುಡ್ಡವನ್ನು, ಯಾತಕ್ಕೂ ಉಪಯೋಗಕ್ಕೆ ಬಾರದ ಪಾಳುಜಾಗ ಅಥವಾ ಮೈದಾನ ಎಂದೂ ಕರೆಯುವವರಿದ್ದಾರೆ. ಈಗಿನ ಕಾಲಮಾನದ
ಸರಕಾರಿ ದೃಷ್ಟಿಯಲ್ಲಿ, ವಾಣಿಜ್ಯ ಉದ್ದೇಶಕ್ಕೆ ಜಾಗವನ್ನು ಪರಭಾರೆ ಮಾಡುವವರ ಪರಿಭಾಷೆಯಲ್ಲಿ, ಅದು ಪಕ್ಕಾ ಬಂಜರುಭೂಮಿಯೇ ಸರಿ. ಆದರೆ, ನಮ್ಮ ಪರಿಸರದ ಸಮತೋಲನ ಕಾಪಾಡುವಲ್ಲಿ, ಇಕಾಲಜಿಯ ಸರಪಣಿಯಲ್ಲಿ, ಹರನಗುಡ್ಡದಂಥ ಬೋಳು ಬೋಳಾದ, ಕಲ್ಲುಮಿಶ್ರಿತ ಸಮತಟ್ಟು ಜಾಗಗಳಿಗೆ ತಮ್ಮದೇ ಆದ ಪ್ರಮುಖ ಸ್ಥಾನವಿದೆ.

ಜೀವವೈವಿಧ್ಯ ಶ್ರೀಮಂತವಾಗಲು ಇಂಥ ಜಾಗಗಳ ಕೊಡುಗೆ ಮಹತ್ವದ್ದು. ಇಕಾಲಜಿಯ ಸರಪಣಿಯಲ್ಲಿ ಓತಿಕ್ಯಾತಗಳಿಗೂ, ಮಳೆಹಾತೆಗಳಿಗೂ ಸ್ಥಾನವಿರುವಂತೆ, ಬಂಜರು ಎಂದು ಕರೆಯಬಹುದಾದ ಗುಡ್ಡ, ಪಾಳು ಮೈದಾನಗಳಿಗೂ ಅವುಗಳದೇ ಆದ ಸ್ಥಾನವಿದೆ. ಹರನಗುಡ್ಡ ಎಂಬುದು ನಮ್ಮ ಹಳ್ಳಿಮನೆಯಿಂದ ಸುಮಾರು ೧ ಕಿ.ಮೀ. ದೂರದಲ್ಲಿರುವ ಗುಡ್ಡಗಾಡು ಪ್ರದೇಶ, ವಿಶಾಲವಾದ ಬಯಲು ಅಥವಾ ಬ್ಯಾಣ. ಮನೆಯಂಗಳಕ್ಕೆ ಅಂಟಿಕೊಂಡಿರುವ ಗದ್ದೆಬಯಲಿನ ನಡುವೆ ಪೂರ್ವದಿಕ್ಕಿಗೆ ಸಾಗಿದ ದಾರಿಯಲ್ಲಿ ಸುಮಾರು ಮುಕ್ಕಾಲು ಕಿ.ಮೀ. ನಡೆದು, ಅಡ್ಡಲಾಗಿ ಸಿಗುವ
ತೋಡನ್ನು (ತೊರೆ) ಮರದ ಸಂಕದ ಮೇಲೆ ನಡೆದು ದಾಟಿ, ಕಾಡು ಮರಗಳು ಬೆಳೆದಿರುವ ಹಾಡಿಯನ್ನು ಪ್ರವೇಶಿಸಿದಾಗ, ಇನ್ನೇನು ಹರನಗುಡ್ಡದ ಬಳಿ ಬಂದೆವೆಂದೇ ಅರ್ಥ. ಆದರೆ, ಆ ಹಾಡಿ ದಾರಿಯಲ್ಲಿ ಒಂದು ಕಡಿದಾದ ಏರು; ಆ ಏರನ್ನು ಏರಿ ಹೋಗಲು ಮುರಕಲ್ಲನ್ನು ಕಟ್ಟಿ ತಯಾರಿಸಿದ ಸುಮಾರು ೧೨೦ ಮೆಟ್ಟಿಲುಗಳಿವೆ! ಆ ಕಾಡುಪ್ರದೇಶದಲ್ಲಿ ಈ ರೀತಿ ಕಲ್ಲಿನಮೆಟ್ಟಿಲುಗಳನ್ನು ಯಾರು, ಯಾಕೆ ಕೆತ್ತಿಸಿದರು ಎಂಬುದಕ್ಕೂ ಸ್ವಾರಸ್ಯಕರ ವಾದ ಒಂದು ಕಥೆಯಿದೆ.

ನೂರಾರು ವರ್ಷಗಳ ಹಿಂದೆ ಒಬ್ಬ ವಿಲಾಸಿ ಮಹಿಳೆಯು ತನ್ನಲ್ಲಿರುವ ಧನವನ್ನು ವೆಚ್ಚಮಾಡಿ, ಈ ಮೆಟ್ಟಿಲುಗಳನ್ನು ಕಟ್ಟಿಸಿದಳೆಂಬ ಕಥೆಯಿದೆ. ಅವಳಲ್ಲಿ ಶೇಖರಗೊಂಡ ಚಿನ್ನದ ನಾಣ್ಯಗಳು ಈ ರೀತಿ ಜನರ ಕಾಲಿನಿಂದ ತುಳಿಸಿಕೊಳ್ಳುವ ಮೆಟ್ಟಿಲುಗಳಾಗಿ ಪರಿವರ್ತನೆಗೊಂಡು, ಸಮಾಜಸೇವೆ ಮಾಡುತ್ತಿವೆ. ಈ ಕಥೆಯ ಮಾಂತ್ರಿಕ ಸ್ವರೂಪವನ್ನು ಗ್ರಹಿಸಿಯೋ ಏನೋ, ನನ್ನ ಲೇಖನಿ ಇದಕ್ಕೆ ಹಲವು ಬಾರಿ ಹಲವು ಸಂದರ್ಭಗಳಲ್ಲಿ ಅಕ್ಷರರೂಪ ನೀಡಿದೆ!

ಕಾಡಿನ ನಡುವೆ ಹರನಗುಡ್ಡಕ್ಕೆ ಹತ್ತಿಹೋಗಲು ಇರುವ ಮೆಟ್ಟಿಲುಗಳ ಸಾಲು ನಿಜಕ್ಕೂ ಸುಂದರ. ಅಲ್ಲಲ್ಲಿ ಬೆಳೆದ ಬೋಗಿ, ದೂಪ, ಕಾಸಾನು ಮತ್ತು
ಇತರ ಮರಗಳ ನಡುವೆ, ಒಪ್ಪವಾಗಿ ಕಟ್ಟಿರುವ ಮೆಟ್ಟಿಲುಗಳ ನೋಟ ಕಾವ್ಯಾತ್ಮಕ. ಅದನ್ನೇರುತ್ತಾ, ನೂರು ಮೆಟ್ಟಿಲುಗಳಾದ ನಂತರ, ಕಾಡು ತುಸು
ದಟ್ಟವಾಗುತ್ತದೆ. ಹೆಚ್ಚು ಕಡಿದಾಗಿರುವ ಕೊನೆಯ ಆರೆಂಟು ಮೆಟ್ಟಿಲುಗಳನ್ನು ‘ಉಸ್ಸಪ್ಪ’ ಎಂದು ಏರಿದಾಗ, ಒಮ್ಮೆಗೇ ಕಾಡು ಗವ್ವೆಂದು ತಲೆಯನ್ನೇ
ಮುಚ್ಚಿಕೊಂಡಂತೆ ಅನಿಸುತ್ತದೆ. ಅಲ್ಲಿ ತಂಪಾದ ವಾತಾವರಣ. ಆ ದಟ್ಟಕಾಡಿನ ನಡುವೆ ಸಾಗಿದ ಕಾಲುದಾರಿಯಲ್ಲಿ ನೂರಿನ್ನೂರು ಹೆಜ್ಜೆ ಹಾಕಿದರೆ,
ಒಮ್ಮೆಗೇ ಕಾಡು ತಿಳಿಯಾಗುತ್ತದೆ, ಮರಗಳ ದಟ್ಟಣೆ ವಿರಳವಾಗುತ್ತದೆ. ಒಂದು ವಿಶಾಲ ಬಯಲುಭೂಮಿ ಎದುರಾಗುತ್ತದೆ. ಕಾಡಿನ ನೆರಳಿನಿಂದ ಒಮ್ಮೆಗೇ ಬಯಲಿನ ಬೆಳಕಿಗೆ ಬಂದ ಅನುಭವ. ಅಲ್ಲಿಂದಾಚೆ ಸುಮಾರು ೨ ಕಿ.ಮೀ. ವೈಶಾಲ್ಯದ ಮಟ್ಟಸವಾದ ನೆಲ, ಅಲ್ಲಲ್ಲಿ ಮೇಲೆದ್ದ ಕಪ್ಪನೆಯ ಮುರಕಲ್ಲಿನ (ಜಂಬಿಟ್ಟಿಗೆ) ಆಕಾರಗಳು, ಅಲ್ಲೊಂದು ಇಲ್ಲೊಂದು ದೊಡ್ಡ ಮರ, ಕೆಲವು ಕುರುಚಲು ಗಿಡಗಳು, ಬುಕ್ಕಿ, ಕಿಸ್ಕಾರ ಗಿಡಗಳು, ಮುಳ್ಳುಬಳ್ಳಿ ಗಳು.

ಕೆಲವೇ ಹೆಜ್ಜೆಗಳ ಹಿಂದೆ ಇದ್ದ ದಟ್ಟಕಾಡಿಗೂ, ಈ ಮಟ್ಟಸ ಮೇಲ್ಮೈಯ ಗುಡ್ಡಕ್ಕೂ ಅರ್ಥಾರ್ಥ ಸಂಬಂಧವಿಲ್ಲದಂಥ ನೋಟ! ಇದೇ ಹರನಗುಡ್ಡ. ಕುರುಚಲು ಗಿಡ, ಕಲ್ಲು-ಮುಳ್ಳುಗಳೇ ತುಂಬಿರುವ ‘ಹರನ ಗುಡ್ಡ’ದ ಹೆಸರಿನಲ್ಲಿರುವ ‘ಹರ’ ಶಬ್ದಕ್ಕೂ, ಈಶ್ವರನಿಗೂ ಸಂಬಂಧವಿಲ್ಲ. ನಮ್ಮೂರಿನ ಭಾಷೆಯಲ್ಲಿ ‘ಹರ’ ಎಂದರೆ ಕಡಿದಾದ ಗುಡ್ಡಗಾಡಿನ ಮೈದಾನ ಎಂಬರ್ಥ. ಹರನಗುಡ್ಡಕ್ಕೆ ಇನ್ನೊಂದು ಹೆಸರು ಚೇರ್ಕಿ ಹರ, ಅದರಾಚೆ ಇರುವುದೇ ಬಳ್ಳಿ ಹರ. ಇವೆಲ್ಲಾ ಸ್ಥಳನಾಮಗಳಲ್ಲಿ ‘ಹರ’ ಎಂಬ ಗುಡ್ಡದ ಮೇಲಿನ ಮೈದಾನ ಎಂಬರ್ಥ ಸ್ಪಷ್ಟ. ಅಂದಹಾಗೆ ಕನ್ನಡದ ‘ಅರ’ (ಕಲ್ಲು) ಎಂಬ ಪದಕ್ಕೂ ‘ಹರ’ ಎಂಬ ಪದಕ್ಕೂ ತುಸು ಸಾಮ್ಯತೆ ಇದ್ದರೂ, ಅರ್ಥವ್ಯತ್ಯಾಸವಿದೆ.

ಹರನಗುಡ್ಡವು ಹಲವು ಕೌತುಕಗಳ ಆಗರ! ಮೊದಲನೆಯ ಕೌತುಕ ಎಂದರೆ ಆ ಗುಡ್ಡ ಟೊಳ್ಳು ಎಂಬ ವಿಚಾರ. ಎತ್ತರವಾದ ಪ್ರದೇಶದಲ್ಲಿ ಸಪಾಟಾಗಿ ೨ ಕಿ. ಮೀ. ದೂರದ ತನಕ ಹರಡಿರುವ ಆ ಗುಡ್ಡದ ಮೇಲೆ ನಡೆಯುವಾಗ, ಪ್ರತಿ ಹೆಜ್ಜೆ ಹಾಕಿದಾಗಲೂ ಒಂದು ರೀತಿಯ ‘ಧನ್ ಧನ್’ ಎಂಬ ಸದ್ದು ಮೂಡುತ್ತದೆ! ಇಡೀ ಹರನಗುಡ್ಡ ಟೊಳ್ಳಾಗಿದೆ ಎಂದು ನಮ್ಮೂರಿನವರು ಹೇಳುವುದುಂಟು. ಗುಡ್ಡದ ಒಳಗಿನ ಟೊಳ್ಳು ಜಾಗದಲ್ಲಿ ಚಿನ್ನ ತುಂಬಿದ ಕೊಪ್ಪರಿಗೆ ಇದೆ ಎಂಬ ನಂಬಿಕೆಯೂ ಇದೆ! ಆ ಕೊಪ್ಪರಿಗೆಯನ್ನು ಕಾಯಲು ನಾನಾ ರೀತಿಯ ಸರ್ಪಗಳಿದ್ದು, ಇಂದಿಗೂ ರಕ್ಷಿಸುತ್ತಿವೆ ಎಂಬ ಐತಿಹ್ಯ!
ಅದೇನೇ ಇದ್ದರೂ, ಆ ಗುಡ್ಡದ ಮೇಲೆ ಸಾಗುವ ದಾರಿಯಲ್ಲಿ ಓಡಾಡಿದಾಗ, ಪ್ರತಿ ಹೆಜ್ಜೆ ಎತ್ತಿ ಹಾಕಿದಾಗಲೂ ‘ಧನ್ ಧನ್’ ಎಂದು ಸದ್ದಾಗುವುದಂತೂ
ನಿಜ- ಟೊಳ್ಳಾದ ಕಲ್ಲಿನ ಮೇಲೆ ನಡೆದಾಗ ಆಗುವ ಸದ್ದಿನಂತೆ.

ಆ ಸಪಾಟಾದ ಗುಡ್ಡದ ಅರ್ಧಕ್ಕರ್ಧ ಪ್ರದೇಶವು ಮುರಕಲ್ಲಿನ ಒಂದು ಮೈದಾನ. ಅದರ ಮೇಲೆ ಸಾಗುವ ನಾಲ್ಕಾರು ದಾರಿಗಳಿಂದ ಇದು ಸ್ಪಷ್ಟವಾಗುತ್ತದೆ. ಅತ್ತ ಬಾವಣಿಗೆ, ಇತ್ತ ಹೈಕಾಡಿಗೆ ಸಾಗುವ ಕಾಲುದಾರಿಗಳು ಹರನಗುಡ್ಡದ ಸಪಾಟು ನೆಲದ ಮೇಲೆ ಬೈತಲೆ ತೆಗೆದಂತೆ
ಹರಿದುಹೋಗಿವೆ. ಕಲ್ಲಿನ ಮೇಲಮೈ ಮೇಲೆ ಸಾಗಿದ ದಾರಿಯ ಮೇಲೆ ಜನರು ನಿರಂತರವಾಗಿ ನಡೆದದ್ದರಿಂದ ದಾರಿಯು ಬಿಳಿ ಬಣ್ಣ ಪಡೆದಿದ್ದರೆ, ಕಲ್ಲಿನ ಭಾಗವು ಪಾಚಿಗಟ್ಟಿ ಕಪ್ಪಾಗಿದೆ. ಆ ಗುಡ್ಡವನ್ನು ಕಲ್ಲು ಆವರಿಸಿದ್ದರಿಂದಲೇ, ಒಳಭಾಗ ಟೊಳ್ಳಾಗಿರಬಹುದು.

ಮುರಕಲ್ಲು ಅಥವಾ ಜಂಬಿಟ್ಟಿಗೆ ಇರುವ ಪ್ರದೇಶಗಳಲ್ಲಿ ಟೊಳ್ಳು ಗುಹೆಗಳು ರೂಪುಗೊಳ್ಳುವುದು ಕಮಲಶಿಲೆ ಮೊದಲಾದ ಬೇರೆ ಬೇರೆ ಕಡೆಗಳಲ್ಲಿ ಕಂಡುಬಂದಿದೆ. ಹರನಗುಡ್ಡದ ಸಪಾಟು ಮೇಲ್ಮೈ, ಅದರ ಅರ್ಧಕ್ಕರ್ಧ ಭಾಗವನ್ನು ಆವರಿಸಿರುವ ಮುರಕಲ್ಲಿನ ಹಾಸು, ನಡೆಯುವಾಗ ಆಗುವ ಧನ್ ಧನ್ ಸದ್ದು, ಇವೆಲ್ಲವುಗಳಿಗಿಂತಲೂ, ಹೆಚ್ಚು ವಿಸ್ಮಯಕಾರಿ ವಿಚಾರ ಒಂದಿದೆ. ಅದೆಂದರೆ, ಆ ಇಡೀ ಗುಡ್ಡವು ಕಾಲದಿಂದ ಕಾಲಕ್ಕೆ ತಳೆಯುವ ವಿಭಿನ್ನ ಬಣ್ಣಗಳು! ೨ ಕಿ.ಮೀ. ವಿಸ್ತೀರ್ಣದ ಬಯಲೊಂದು ಋತುಮಾನಕ್ಕನುಸಾರ ವಾಗಿ ವಿಭಿನ್ನ ಬಣ್ಣವನ್ನು ಹೊದ್ದು ಕೂರುವ ಪರಿಯೇ ಒಂದು ಪ್ರಾಕೃತಿಕ ವಿಸ್ಮಯವಲ್ಲವೆ! ಹರನಗುಡ್ಡವು ತನ್ನ ಇಡೀ ಮೈಯನ್ನು ಹಸಿರಿನಿಂದ ತುಂಬಿಕೊಳ್ಳುವ ಕಾಲ ವೆಂದರೆ, ಆಷಾಢ ಕಳೆದು ಬರುವ ಶ್ರಾವಣದ ದಿನಗಳು.
ಜೂನ್‌ನಿಂದ ಆರಂಭವಾಗಿ ಒಂದೆರಡು ತಿಂಗಳು ಎಡೆಬಿಡದೆ ಸುರಿದ ಮಳೆ ತುಸು ಬಿಡುವು ಕೊಟ್ಟಾಗ, ಇಡೀ ಹರನಗುಡ್ಡದ ತುಂಬಾ ಹುಲ್ಲುಬೀಜಗಳು ಮೊಳಕೆಯೊಡೆದು, ನಾಲ್ಕಾರು ಇಂಚು ಚಿಗುರಿ ಬೆಳೆದು, ಇಡೀ ಗುಡ್ಡವನ್ನು ಹಸಿರಿನ ಸಿರಿಯಿಂದ ತುಂಬಿಬಿಡುತ್ತವೆ.

ಸುಮಾರು ೧೨೦ ಮೆಟ್ಟಿಲು ಹತ್ತಿ, ಸಣ್ಣ ಕಾಡು ದಾಟಿ, ಹರನಗುಡ್ಡಕ್ಕೆ ಬಂದಾಗ ಇದಿರಾಗುವ ವಿಶಾಲ ಹಸಿರು ಹುಲ್ಲುಹಾಸು ಒಂದು ಅಪೂರ್ವ ದೃಶ್ಯವೈಭವ. ಆ ವಿಶಾಲ ಹಸಿರು ಪ್ರದೇಶದಲ್ಲಿ, ನಡುನಡುವೆ ಅಲ್ಲಲ್ಲಿ ಕೆಲವು ಮರಗಳು, ಎದ್ದು ನಿಂತ ಕಲ್ಲುಗಳು, ಸಣ್ಣ ಪುಟ್ಟ ಕೊಳಗಳು- ಇಂಥ ಅಲಂಕಾರದ ಜತೆ ಆ ಬೃಹತ್ ಹಸಿರುಹಾಸಿನ ನೋಟ ಬಹು ಮೋಹಕ. ವಿಶಾಲ ಪ್ರದೇಶದಲ್ಲಿ ಬೆಳೆದ ಹಸಿರು ಹುಲ್ಲನ್ನು ಮೇಯಲು, ನಮ್ಮೂರಿನ ಹತ್ತೈವತ್ತು ಹಸು, ಕರು, ಎತ್ತುಗಳು ಹರನಗುಡ್ಡಕ್ಕೆ ಪಾದ ಬೆಳೆಸುತ್ತವೆ. ಮಳೆಯು ಹೊಳವಾದ ದಿನಗಳಲ್ಲಿ, ಹುಲ್ಲು ಮೇಯುವ ಜಾನುವಾರುಗಳಿಗೆ ಆಶ್ರಯ ನೀಡುವ ಆ ವಿಶಾಲ ಹುಲ್ಲುಗಾವಲಿನ ನೋಟ ಅದ್ಭುತ! ಆ ಹಸಿರು ಹುಲ್ಲಿನ ನಡುವೆ ಕೆಲವು ನೀಲಿ ಬಣ್ಣದ ಹೂವುಗಳು ಆಗುವುದೂ ಇದೆ!

ಆಗ ಆ ನೆಲದ ನೋಟ ಇನ್ನಷ್ಟು ಸುಂದರ. ಮಳೆ ಕಡಿಮೆಯಾಗಿ, ದೀಪಾವಳಿ ಕಳೆದಂತೆ, ಹರನಗುಡ್ಡದ ಬಣ್ಣವು ಪಡೆಯುವ ಸ್ವರೂಪವೇ ವಿಭಿನ್ನ. ಮಳೆಗಾಲದಲ್ಲಿ ಹಸಿರಾಗಿ ಇಡೀ ಗುಡ್ಡವನ್ನೇ ಆವರಿಸಿದ್ದ ಹುಲ್ಲು, ಈಗ ಸುಮಾರು ಒಂದಡಿ ಎತ್ತರ ಬೆಳೆದಿದ್ದು, ಹಸಿರು ಮಾಗಿ ಬೂದುಬಣ್ಣಕ್ಕೆ ತಿರುಗುವ ಪರಿ ಅನನ್ಯ. ಪ್ರತಿ ಹುಲ್ಲುಗಿಡದ ತುದಿಯಲ್ಲೂ, ಹುಲ್ಲುಬೀಜ ತುಂಬಿದ ಕದಿರು, ಅವುಗಳ ನಸುಗೆಂಪು ಬಣ್ಣ ಎಲ್ಲವೂ ಸೇರಿ ಇಡೀ ಗುಡ್ಡಕ್ಕೆ ಬೂದು ಮಿಶ್ರಿತ ಹಸಿರಿನ ಹಚ್ಚಡ ಹೊದಿಸಿದ ನೋಟ. ಡಿಸೆಂಬರ್ ಬಂದಂತೆಲ್ಲಾ ಹರನಗುಡ್ಡವು ಬೇರೊಂದೇ ಬಣ್ಣವನ್ನು ಪಡೆಯುತ್ತದೆ! ಇಂಚೂ ಬಿಡದಂತೆ ಬೆಳೆದಿರುವ ಹುಲ್ಲು ಮಾಗುತ್ತಾ ಬಂದು, ಹೊಳೆವ ಮಾಸಲು ಬಿಳಿ ಬಣ್ಣ ಪಡೆದಾಗ, ಇಡೀ ಹರನಗುಡ್ಡವು ಬೆಳ್ಳಿಯ ವರ್ಣದಿಂದ ಹೊಳೆಯ ತೊಡಗುತ್ತದೆ! ಚಳಿಗಾಲದ ಬೆಳಗಿನ ಬಿಸಿಲಿನಲ್ಲಿ ಗಾಳಿಗೆ ತೊನೆದಾಡುವ ಹುಲ್ಲುಗಿಡಗಳು, ಇಡೀ ಗುಡ್ಡಕ್ಕೆ ಒಂದು ಚಲನಶೀಲ ನೋಟವನ್ನು
ಒದಗಿಸುವ ರೀತಿ ವಿಸ್ಮಯಕಾರಿ.

ಈ ಶ್ರಾಯದಲ್ಲಿ, ಇಡೀ ಗುಡ್ಡದ ಮೇಲೆ ಬೆಳೆದ ಹುಲ್ಲನ್ನು ‘ಕರಡ’ ಎಂದು ಕರೆಯುತ್ತಾರೆ. ಒಂದರಿಂದ ಎರಡು ಅಡಿ ಎತ್ತರದ ಕರಡದ ಹುಲ್ಲು ಬಹೂಪ
ಯೋಗಿ. ದನಕರುಗಳು ಸಂತಸದಿಂದ ಕರಡವನ್ನು ತಿನ್ನುವುದು ಒಂದೆಡೆಯಾದರೆ, ಊರಿನ ಮಹಿಳೆಯರು ಕರಡ ವನ್ನು ಕಿತ್ತು, ಸಣ್ಣ ಸಣ್ಣ ಕಟ್ಟುಗ ಳನ್ನಾಗಿ ಮಾಡಿ, ಮನೆಗೆ ಸಾಗಿಸಿ ಸಂಗ್ರಹಿಸುತ್ತಾರೆ. ಅದನ್ನು ಒಣಗಿಸಿಟ್ಟರೆ, ಬಹುಮಟ್ಟಿಗೆ ಬತ್ತದ ಹುಲ್ಲಿನ ರೀತಿಯೇ ಉಪಯೋಗಿಸಬಹುದು. ಕರಡವನ್ನು ಕತ್ತರಿಸಿ ಅಕ್ಕಚ್ಚು ಮಾಡಿ, ದನಕರುಗಳಿಗೆ ತಿನ್ನಿಸಬಹುದು. ಕರಡವನ್ನು ಓರಣವಾಗಿ ಗುಡಿಸಲಿನ ಮೇಲೆ ಹರವಿ, ಮಾಡನ್ನು
ಭದ್ರಪಡಿಸ ಬಹುದು, ಗಂಟಿ ಕಾಲಡಿ ಹರವಿ, ಗೊಬ್ಬರವನ್ನೂ ಮಾಡಬಹುದು!

ಡಿಸೆಂಬರ್-ಜನವರಿ ಸಮಯದಲ್ಲಿ ಪ್ರತಿದಿನವೂ ಹರನಗುಡ್ಡಕ್ಕೆ ಹೋಗಿ, ಕರಡವನ್ನು ತರುವುದೇ ಹಲವು ಜನರ ಪ್ರಮುಖ ಕೆಲಸ. ಇನ್ನೇನು ಫೆಬ್ರವರಿ
ಬಂತೆಂದರೆ, ಶಿವರಾತ್ರಿಯ ಕಾಲ. ಹರನಗುಡ್ಡದ ಕರಡ ಒಣಗಲು ಆರಂಭ. ಒಂದೆರಡು ಅಡಿ ಎತ್ತರದ ಆ ಕರಡವು ಒಣಗಿದಾಗ ‘ಕಾಡಿನ ಬೆಂಕಿ’ಗೆ ಆಹ್ವಾನವಿತ್ತಂತೆ. ಹರನಗುಡ್ಡದ ಅಂಚಿನಲ್ಲಿರುವ ಯಾವುದೋ ಮನೆಯಿಂದ ಹಾರಿದ ಕಿಡಿಯೊಂದು ಕರಡಕ್ಕೆ ತಗುಲಿದರೆ, ನಿಧಾನವಾಗಿ ಇಡೀ ಗುಡ್ಡಕ್ಕೆ ಬೆಂಕಿ ಹರಡುತ್ತದೆ. ಮಾರ್ಚ್ -ಏಪ್ರಿಲ್‌ನಲ್ಲಿ ಕರಡಕ್ಕೆ ಬೆಂಕಿ ಬೀಳುವುದು ಅಥವಾ ಯಾರಾದರೂ ಬೀಡಿ ಸೇದಿ ಎಸೆದ ಕಡ್ಡಿಯಿಂದ ಬೆಂಕಿ
ಹೊತ್ತಿಕೊಳ್ಳುವುದು ಸಾಮಾನ್ಯ. ಆ ತಿಂಗಳುಗಳಲ್ಲಿ ಅಲ್ಲಲ್ಲಿ ಹರನಗುಡ್ಡದ ಕರಡವು ಸುಟ್ಟು ಕರಕಲಾಗುತ್ತಾ ಹೋಗುತ್ತದೆ. ಕ್ರಮೇಣ ಇಡೀ ಗುಡ್ಡದ ಮೇಲೆನ ಕರಡ ಬೂದಿಯಾಗುತ್ತದೆ. ಈಗ ಹರನಗುಡ್ಡಕ್ಕೆ ಬೇರೊಂದೇ ಬಣ್ಣ!

ಹುಲ್ಲು ಸುಟ್ಟ ಕರಕಲು ಕರಿಯ ಬಣ್ಣದಿಂದ ತುಂಬಿದ, ಅಲ್ಲಲ್ಲಿ ಬೂದಿ ಹರಡಿದ ಹರನಗುಡ್ಡವು ನೋಡಲು ಅಷ್ಟೇನೂ ಚಂದ ಕಾಣದಿರಬಹುದು.
ಆದರೆ, ಕರಡ ಸುಟ್ಟ ನಂತರ ತಯಾರಾಗುವ ಬೂದಿಯು, ಮುಂದಿನ ವರ್ಷ ಅಲ್ಲಿ ಬೆಳೆಯುವ ಹುಲ್ಲಿಗೆ ಒಳ್ಳೆಯ ಗೊಬ್ಬರ ಎನ್ನುತ್ತಾರೆ ನಮ್ಮ ಹಳ್ಳಿಯ
ಕೃಷಿಕರು. ಮಳೆಗಾಲ ಆರಂಭವಾದ ನಂತರ ಪುನಃ ಅಲ್ಲಿ ಹಸಿರು ಹುಲ್ಲು ಬೆಳೆಯುವುದರಿಂದ, ಹಸುಕರುಗಳನ್ನು ಮೇಯಿಸಲು ಅನುಕೂಲ ಎಂಬ ಇರಾದೆ ಅವರದು. ಬೇಸಗೆ ಕಳೆದು ಮತ್ತೆ ಮಳೆಯಾಗುತ್ತದೆ; ಪುನಃ ಇಡೀ ಗುಡ್ಡವು ಹಸಿರಿನಿಂದ ತುಂಬುತ್ತದೆ; ಮತ್ತೊಮ್ಮೆ ಹುಲ್ಲಿನ ಬೀಜಗಳು ಮೊಳೆತು, ಹರನಗುಡ್ಡದ ತುಂಬಾ ಕರಡದ ಹೊದಿಕೆಯನ್ನು ಹರಡುತ್ತವೆ! ಈ ನಿಸರ್ಗದ ಸರಪಣಿ ನಿಜಕ್ಕೂ ಅದೆಂಥಾ ಚೋದ್ಯ!

(ಕರಡ=ಬೆಳೆದ ಹುಲ್ಲು,
ಬ್ಯಾಣ = ಬಯಲು ಪ್ರದೇಶ, ಶ್ರಾಯ = ಕಾಲ)