Sunday, 15th December 2024

ಹರನಗುಡ್ಡೆಯ ಪ್ರೇಮಿ ಹೊರತಂದ ಪುಸ್ತಕ !

ಶಶಾಂಕಣ

shashidhara.halady@gmail.com

ಹರನಗುಡ್ಡವು ವರ್ಷವೊಂದರಲ್ಲಿ ೩ ಬಣ್ಣ ತಳೆಯುವುದು ಒಂದು ವಿಸ್ಮಯ. ಇದು ಸಾವಿರಾರು ವರ್ಷಗಳಿಂದ ಮರುಕಳಿಸುತ್ತಿದೆ ಎಂದು ನಾನು ಹಿಂದೆ ಇದೇ ಅಂಕಣದಲ್ಲಿ ಭಾವುಕನಾಗಿ ವರ್ಣಿಸಿದಾಗ, ಅದನ್ನೋದಿದ ಹಲವರು ‘ನಿಮ್ಮ ಹರನಗುಡ್ಡೆಯನ್ನು ಒಮ್ಮೆ ನೋಡಬೇಕು, ಅಲ್ಲೇ ನಾವೂ ನೀವೂ ಭೇಟಿಯಾಗೋಣ’ ಎಂದು ಪ್ರತಿಕ್ರಿಯಿಸಿದ್ದುಂಟು.

ನಮ್ಮೂರಿನ ಭಾಷೆಯಲ್ಲಿ ‘ಹರ’ ಅಥವಾ ‘ಹರೆ’ ಎಂದರೆ ‘ವಿಶಾಲವಾದ ಬೆಟ್ಟ ಪ್ರದೇಶ’ ಅಥವಾ ಮೈದಾನದಂಥ ಗುಡ್ಡ ಎಂಬ ಅರ್ಥವುಂಟು. ನಮ್ಮ ಹಳ್ಳಿಯ ಸುತ್ತಮುತ್ತ ‘ಹರ’ ಎಂಬ ಪದವನ್ನೊಳಗೊಂಡ ಹಲವು ಪ್ರದೇಶಗಳಿವೆ: ಬಳ್ಳಿ ಹರ, ಚೇರ್ಕಿ ಹರ, ಹರನಗುಡ್ಡೆ, ಆಜ್ರಿ ಹರ ಇತ್ಯಾದಿ. ಈ ಪದ ಮಲೆನಾಡಿನ ಕೆಲವು
ಪ್ರದೇಶಗಳಲ್ಲೂ ಬಳಕೆಯಲ್ಲಿದೆ ಎನಿಸುತ್ತದೆ (ಉದಾ: ಕೊಟ್ಟಿಗೆಹಾರದ ಬಳಿ ಇರುವ ‘ಕಾಟಿ ಹರ’. ಕಾಟಿ ಎಂದರೆ ಕಾಡೆಮ್ಮೆ ಅಥವಾ ಕಾಡು ಕೋಣ. ‘ಕೊಟ್ಟಿಗೆಹಾರ’ ಊರಿನ ಹೆಸರು ‘ಕೊಟ್ಟಿಗೆ ಹರ’ದಿಂದ ಬಂದಿರಬಹುದು).

ನನ್ನ ಬರಹಗಳಲ್ಲಿ ಆಗಾಗ ‘ಹರನ ಗುಡ್ಡೆ’ ಎಂಬ ಒಂದು ಸುಂದರ ತಾಣದ ಕುರಿತು ಬರೆದದ್ದುಂಟು. ಆ ಪ್ರದೇಶದಲ್ಲಿ ಹಲವು ಬಾರಿ ನಡೆದು ಹೋಗಿದ್ದಾಗ
ಕಂಡ ಸುಂದರ ದೃಶ್ಯಗಳಿಂದಾಗಿ, ಹರನಗುಡ್ಡವು ನನ್ನ ಪ್ರೀತಿಯ ತಾಣ ಎಂದೆನ್ನಬಹುದು. ಪ್ರೀತಿಯ ತಾಣ ಎಂದ ಕೂಡಲೆ, ಅಲ್ಲಿ ಹೋಗಿ ವಾಸಮಾಡ
ಬೇಕೆಂದಲ್ಲ. ಹರನಗುಡ್ಡದಲ್ಲಿ ವಾಸಿಸುವುದು ಕಷ್ಟ. ಏಕೆಂದರೆ, ಆ ಎತ್ತರ ಪ್ರದೇಶದಲ್ಲಿ ನೀರಿನ ಕೊರತೆ ಇದೆ. ಬಿಸಿಲಿನ ರಾಪು ಸಹ ಜೋರು. ಆದರೂ
ಹರನಗುಡ್ಡ ಒಂದು ಸುಂದರ ತಾಣ ಎಂಬುದರ ಬಗ್ಗೆ ಅದನ್ನು ಕಂಡವರಾರೂ ಆಕ್ಷೇಪಿಸಲಾರರು. ಅದೇಕೆ ಆ ಒಂದು ಜಾಗದ ಕುರಿತು ಪದೇ ಪದೆ ಬರೆಯುತ್ತಿದ್ದೀರಿ ಎಂದು ಕೆಲವು ಓದುಗರು ಸಣ್ಣಗೆ ಆಕ್ಷೇಪಿಸಿದ್ದೂ ಉಂಟು!

ಅದೊಂದು ವಿಶಾಲ ಮೈದಾನ- ನಡುವೆ ಅಲ್ಲಲ್ಲಿ ಕಲ್ಲುಗಳು ವಿಚಿತ್ರಾಕೃತಿಯಲ್ಲಿ ತಲೆ ಎತ್ತಿದ್ದು, ಆ ಕಪ್ಪನೆಯ ಮುರಕಲ್ಲುಗಳ ಪ್ರಕೃತಿಶಿಲ್ಪವು ಆ ಜಾಗದ ಪ್ರಾಕೃತಿಕ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ! ಅಲ್ಲಿನ ಮುರಕಲ್ಲಿನದ್ದೂ ವಿಶೇಷವುಂಟು; ಹಲವು ಅಡಿಗಳಷ್ಟು ಉದ್ದಗಲದ ಮುರಕಲ್ಲು ಹಾಸು ಆ ಮೈದಾನದಲ್ಲಿ ಅಲ್ಲಲ್ಲಿ ಹರಡಿದ್ದು ಕಾಣಿಸುತ್ತದೆ. ನಮ್ಮ ಹಳ್ಳಿಯವರ ನಂಬಿಕೆಯಂತೆ, ಹರನಗುಡ್ಡವು ಒಂದು ಬೃಹತ್ ಮುರಕಲ್ಲಿನ ಹಾಸಿನ ಮೇಲೆ ಸೃಷ್ಟಿಯಾಗಿದೆ! ಜತೆಗೆ, ಆ ಮುರಕಲ್ಲಿನ ತಳದಲ್ಲಿ ಟೊಳ್ಳು ಮತ್ತು ಅಲ್ಲಿ ಸುರಂಗ, ಗುಹೆಗಳು ಇರಬಹುದು ಎಂಬ ನಂಬಿಕೆ. ಆ ಟೊಳ್ಳಿನಲ್ಲಿ ಚಿನ್ನ ತುಂಬಿದ ಕೊಪ್ಪರಿಗೆ ಇರಬಹುದು, ಅದನ್ನು ಸರ್ಪ ಕಾಯುತ್ತಿದೆ ಎಂಬ ನಂಬಿಕೆಯೂ ಇದೆ! ಈ ನಂಬಿಕೆಗೆ ಪೂರಕವಾಗಿ, ಹರನಗುಡ್ಡದ ಮೇಲೆ ನಡೆಯುವಾಗ, ಕೆಲವು ಕಡೆ ಧನ್ ಧನ್ ಎಂಬ ಸದ್ದಾಗುತ್ತದೆ- ಕೆಳಗೆ ಟೊಳ್ಳು ಇದೆ ಎಂಬ ಸೂಚನೆ ಅದು.

ಯಾರಿಗ್ಗೊತ್ತು, ಹರನಗುಡ್ಡದ ತಳವು ಅಲ್ಲಲ್ಲಿ ಟೊಳ್ಳಾಗಿದ್ದರೂ ಇರಬಹುದು, ಅಲ್ಲಿ ಗುಹೆಗಳೂ ಇರಬಹುದು- ನೆಲ್ಲಿತೀರ್ಥದ ಗುಹೆಯ ರೀತಿ! ನಮ್ಮ ಹಳ್ಳಿಮನೆ ಯಿಂದ ೧.೫ ಕಿ.ಮೀ. ದೂರ ದಲ್ಲಿರುವ, ಮರಗಳ ನೆರಳಿನಲ್ಲಿರುವ, ಸುಮಾರು ೧೨೦ ಮೆಟ್ಟಿಲು ಹತ್ತಿ ಹೋಗಬೇಕಾದ, ಕಾಡು ಪ್ರದೇಶದ ಮಗ್ಗುಲಲ್ಲಿ, ತುಸು ಎತ್ತರ ಪ್ರದೇಶದಲ್ಲಿ ರುವ ಹರನಗುಡ್ಡೆಯು ವರ್ಷಕ್ಕೆ ಮೂರು ಬಾರಿ ಬಣ್ಣ ಬದಲಿಸುತ್ತದೆ! ೧) ಮಳೆ ಬಿದ್ದ ತಕ್ಷಣ, ಇಡೀ ಮೈದಾನದಲ್ಲಿ ಹುಲ್ಲು ಬೆಳೆದು, ಹಸಿರು ಹಾಸಿದ ನೆಲ ಸೃಷ್ಟಿಯಾಗುತ್ತದೆ. ೨) ನವೆಂಬರ್-ಡಿಸೆಂಬರ್ ತಿಂಗಳಲ್ಲಿ ಅದೇ ಹುಲ್ಲು ೨ ಅಡಿ ಎತ್ತರ ಬೆಳೆದು, ಹೊಳೆವ ತಿಳಿಬೆಳ್ಳಿ ಬಣ್ಣ ತಳೆದು (ಆಗ ಹುಲ್ಲನ್ನು
‘ಕರಡ’ ಎನ್ನುವರು, ಇದು ಜಾನುವಾರು ಮೇವೂ ಹೌದು, ಮನೆಗೆ ಹೊದಿಸುವ ಹುಲ್ಲೂ ಹೌದು), ಗಾಳಿಗೆ ತೊನೆದಾಡುವಾಗ ಇಡೀ ಗುಡ್ಡವೇ ಸಣ್ಣಗೆ
ನರ್ತಿಸುವಂತೆನಿಸುತ್ತದೆ.

೩) ಶಿವರಾತ್ರಿಯ ನಂತರ, ಬೇಸಗೆಯಲ್ಲಿ ಆ ಕರಡ ಒಣಗಿ, ಅದಕ್ಕೆ ಬೆಂಕಿ ಬಿದ್ದು ಸುಟ್ಟು ಹೋದಾಗ, ಇಡೀ ಮೈದಾನವು ಕಪ್ಪು ಮತ್ತು ಬೂದಿ ಬಣ್ಣ ತಳೆಯುತ್ತದೆ!
ಈ ರೀತಿ ಹರನಗುಡ್ಡವು ವರ್ಷವೊಂದರಲ್ಲಿ ೩ ಬಣ್ಣ ತಳೆಯುವುದು ಒಂದು ವಿಸ್ಮಯ. ಇದು ಸಾವಿರಾರು ವರ್ಷಗಳಿಂದ ಮರುಕಳಿಸುತ್ತಿರುವ ಚೋದ್ಯ ಎಂದು ನಾನು ಈ ಹಿಂದೆ ಇದೇ ಅಂಕಣ ದಲ್ಲಿ ಭಾವುಕನಾಗಿ ವರ್ಣಿಸಿದಾಗ, ಅದನ್ನೋದಿದ ಹಲವರು ‘ನಿಮ್ಮ ಹರನಗುಡ್ಡೆಯನ್ನು ಒಮ್ಮೆ ನೋಡಬೇಕು, ಎಷ್ಟು ಚಂದ ಇದೆ ಎಂದು ವರ್ಣಿಸಿದ್ದೀರಾ! ಅಲ್ಲೇ ನಾವೂ ನೀವೂ ಭೇಟಿಯಾಗೋಣ’ ಎಂದು ಪ್ರತಿಕ್ರಿಯಿಸಿದ್ದುಂಟು.

ದೂರದಲ್ಲೆಲ್ಲೋ ಕುಳಿತು ಹರನಗುಡ್ಡೆಯ ನನ್ನ ನೆನಪುಗಳನ್ನು ಪ್ರೀತಿಯಿಂದ ಓದಿದ ಓದುಗರು, ನಮ್ಮ ಮೊದಲ ಭೇಟಿಗೆ ಆಯ್ಕೆ ಮಾಡಿದ ಜಾಗ ಹರನಗುಡ್ಡೆ! ಆಪ್ಯಾಯ ಮಾನವಾದ, ಸುಂದರವಾದ ಹರನಗುಡ್ಡೆಗೆ ಭೇಟಿ ನೀಡಿ, ಪ್ರಕೃತಿಯ, ಪರಿಸರದ ಕುರಿತು ಮಾತನಾಡುವುದು ನಿಜಕ್ಕೂ ಒಳ್ಳೆಯ ಐಡಿಯಾ! ಆದರೆ ಹರನಗುಡ್ಡೆ ಬೆಂಗಳೂರಿನಿಂದ ಬಹು ದೂರ; ಎಲ್ಲರೂ ಒಟ್ಟಿಗೆ ಸಮಯ ಹೊಂದಿಸಿಕೊಂಡು ಹೋಗುವುದೇ ಒಂದು ದೊಡ್ಡ ಕೆಲಸ.

ಹರನಗುಡ್ಡ ಎಂದ ಕೂಡಲೇ ಎಲ್ಲವೂ ಸುಂದರ ಆಗಿರಲೇಬೇಕಿಲ್ಲವಲ್ಲ! ಹರನಗುಡ್ಡದಲ್ಲಿ ದೆವ್ವ- ಭೂತಗಳಿರುತ್ತವೆ ಎಂಬ ನಂಬಿಕೆ ಹಿಂದೆ ಇತ್ತು; ನಮ್ಮ ಮನೆಯಿಂದ ಆ ದಿಕ್ಕಿಗೆ ಸಾಗುವ ದಾರಿಯಲ್ಲಿ ನಡೆದು, ಸುಮಾರು ೧೨೦ ಮೆಟ್ಟಿಲುಗಳನ್ನು ಏರಿದ ನಂತರ, ಸ್ವಲ್ಪ ದೂರ ದಟ್ಟ ಕಾಡು. ಅಲ್ಲಿ ಮರಗಳ
ದಟ್ಟಣೆ ಹೇಗಿತ್ತು ಎಂದರೆ, ಸೂರ್ಯನ ಬಿಸಿಲು ನೆಲವನ್ನು ಸೋಂಕದು ಎನ್ನುತ್ತಾರಲ್ಲ, ಹಾಗೆ. ಆ ಕಾಡನ್ನು ದಾಟಿದ ತಕ್ಷಣ, ಒಮ್ಮೆಗೇ ಎಂಬಂತೆ ಮರಗಳ ದಟ್ಟಣೆ ಕಡಿಮೆಯಾಗಿ, ಬೆಳಕು ತುಂಬಿಕೊಳ್ಳುತ್ತದೆ, ಬಿಸಿಲು ತಲೆಯನ್ನು ಚುರುಗುಟ್ಟಿಸತೊಡಗುತ್ತದೆ.

ಅಲ್ಲಿಂದ ಸುಮಾರು ೨ ಕಿ.ಮೀ. ತನಕ ಯಾವುದೇ ಮನೆ, ಗದ್ದೆ, ತೋಟ ಇಲ್ಲ; ಒಂದೇ ಮಟ್ಟದ, ಏರಿಳಿತ ಇಲ್ಲದ ದಾರಿ. ಅದೊಂದು ನಿರ್ಜನ ಮೈದಾನ. ಅಲ್ಲಲ್ಲಿ ಕೆಲವು ಮರಗಳು, ಮುರಕಲ್ಲುಗಳು. ಬಿಸಿಲು ಇರುವಾಗಲಂತೂ, ಆ ೨ ಕಿ.ಮೀ. ನಡೆಯುವಲ್ಲಿ ಸುಸ್ತು. ಆ ಭಾಗದಲ್ಲಿ ಚಿತ್ರ ವಿಚಿತ್ರ ಹೆಸರಿನ ದೆವ್ವಗಳು ಇರುತ್ತವೆ, ಆದ್ದರಿಂದ ಒಬ್ಬೊಬ್ಬರೇ ಹೋಗಬಾರದು ಎಂಬ ನಂಬಿಕೆ. ಅದರಲ್ಲೂ ನಡುಮಧ್ಯಾಹ್ನದ ಹೊತ್ತು, ರಾತ್ರಿಯ ಹೊತ್ತು ಆ ದಾರಿಯಲ್ಲಿ ಒಬ್ಬರೇ ಹೋಗಲೇಬಾರದು
ಎಂಬ ಬಲವಾದ ನಂಬಿಕೆ.

ನಾನು ಹರನಗುಡ್ಡದ ಆ ಕಾಲುದಾರಿಯಲ್ಲಿ ಹಲವು ಬಾರಿ ನಡೆದುಕೊಂಡೇ ಹೋದದ್ದುಂಟು; ಆದರೆ ಸಾಮಾನ್ಯವಾಗಿ ಮಧ್ಯಾಹ್ನ ೧೧ ಗಂಟೆಯ ಮುಂಚೆ ಮತ್ತು ಸಂಜೆ ನಾಲ್ಕು ಗಂಟೆಯ ನಂತರ ಮಾತ್ರ ಅಲ್ಲಿ ನಡೆದು ಸಾಗಿದ ಅನುಭವ ನನ್ನದು; ಆದ್ದರಿಂದ ಯಾವುದೇ ದೆವ್ವ-ಭೂತಗಳ ಕಾಟ ಎದುರಾಗಲಾರದು ಎಂಬ ಧೈರ್ಯ! ಬಹುಶಃ ಮಧ್ಯಾಹ್ನದ ಹೊತ್ತಿನಲ್ಲಿ ನಡೆದವರಿಗೆ ಕಾಡುವ ನಿರ್ಜಲೀಕರಣ, ವಿಪರೀತ ಬಿಸಿಲಿನ ಬೇಗೆ ಯಿಂದಾಗಿ, ಮನಸ್ಸು ವಿಹ್ವಲಗೊಂಡು ಭಯಕ್ಕೊಳ
ಗಾಗುವ ಸಾಧ್ಯತೆ ಇದ್ದುದರಿಂದ, ಅಂಥ ಭೂತ ಭಯವು ಹಿಂದಿನ ಕಾಲದ ನಮ್ಮ ಜನಪದರನ್ನು ಕಾಡಿರಬೇಕು.

ಅಂದ ಹಾಗೆ, ಹರನಗುಡ್ಡದಲ್ಲಿ ನಾನೇಕೆ ಹಲವು ಬಾರಿ ನಡೆದು ಸಾಗಿದ್ದೆ ಎಂದು ನೀವು ಕೇಳಬಹುದು! ತುಸು ನಿರ್ಜನ ಎನ್ನಬಹುದಾದ ಆ ಬ್ಯಾಣದಲ್ಲಿ ಒಬ್ಬನೇ ನಡೆಯುವ ದರ್ದು ಏನಿತ್ತು, ಆ ರೀತಿ ನಡೆಯುವ ಮೊದಲೇ ಪ್ರೀತಿ ಹುಟ್ಟಿತ್ತಾ ಅಥವಾ ಹಲವು ಬಾರಿ ನಡೆದ ನಂತರ ಆ ಗುಡ್ಡದ ಮೇಲೆ ಪ್ರೀತಿ ಹುಟ್ಟಿತ್ತಾ ಎಂಬ ಕುಚೋದ್ಯದ ಪ್ರಶ್ನೆಯನ್ನೂ ನಿಮ್ಮಿಂದ ನಿರೀಕ್ಷಿಸಬಲ್ಲೆ! ಇದಕ್ಕೆ ಉತ್ತರ ಹೇಳುತ್ತಾ ಹೋದರೆ, ಸುಮಾರು ಒಂದು ಶತಮಾನದ ಇತಿಹಾಸವನ್ನು ಹೇಳಬೇಕಾ ದೀತು. ನಮ್ಮ ಅಜ್ಜಿಯ ತವರುಮನೆಗೆ ನಮ್ಮ ಮನೆಯಿಂದ ಹೊರಟ ದಾರಿಯು ಇದೇ ಹರನಗುಡ್ಡೆಯ ಮೇಲೆ ಹಾದು ಹೋಗುತ್ತದೆ. ವಾಹನ ಸೌಕರ್ಯ ಇಲ್ಲದ ಆ ಕಾಲದಲ್ಲಿ ಅವರು, ಅವರ ಕುಟುಂಬದವರು ಅದೆಷ್ಟು ನೂರು ಬಾರಿ ಈ ದಾರಿಯಲ್ಲಿ ಸಾಗಿದ್ದರೋ ಲೆಕ್ಕವಿಲ್ಲ.

ಆ ನಂತರ, ನಮ್ಮ ಸೋದರತ್ತೆಯ ಪತಿಯ ಮನೆಗೆ ಹೋಗಲು ಸಹ ಇದೇ ದಾರಿಯಲ್ಲಿ ನಡೆದು ಸಾಗಬೇಕು! ಅದಾದ ನಂತರ, ೨೦ನೇ ಶತಮಾನದ
ಕೊನೆಯ ಭಾಗದಲ್ಲಿ, ನನ್ನ ವಿವಾಹವಾದ ನಂತರ, ನನ್ನ ಮಾವನ ಮನೆಗೂ ಇದೇ ದಾರಿಯಲ್ಲಿ ಹೋಗುವಂತಾಯಿತು! ಆಗ, ಬಸ್ ಸೌಕರ್ಯ ಇದ್ದರೂ, ನಮ್ಮ ಹಳ್ಳಿಮನೆಯಿಂದ ಸುಮಾರು ೬ ಕಿ. ಮೀ. ದೂರದಲ್ಲಿರುವ ಅಲ್ಲಿಗೆ ನಡೆದು ಹೋಗುವುದೆಂದರೆ ನನಗೆ ಪ್ರೀತಿ! ನಮ್ಮ ಮನೆ ಮತ್ತು ನಮ್ಮ ಮಾವನ ಮನೆ ಎರಡೂ ಬಸ್ ರಸ್ತೆಯಿಂದ ಸುಮಾರು ೨ ಕಿ.ಮೀ. ದೂರ ಇದ್ದುದರಿಂದ, ಅಷ್ಟು ನಡೆದು ಬಸ್ ಹಿಡಿದು ಹೋಗುವಾಗ, ನಡೆದು ಸಾಗಿದಷ್ಟೇ ಸಮಯ ಬೇಕಾಗುತ್ತಿತ್ತು. ಆದ್ದರಿಂದ, ಹರನಗುಡ್ಡೆಯ ಮೇಲೆ ಸಾಗುವ ಕಾಲ್ದಾರಿ ಹಿಡಿದು ನಡೆಯುವುದು ಹೆಚ್ಚು ಸಲೀಸು ಎನಿಸಿತ್ತು.

ಹರನಗುಡ್ಡೆಯ ಆ ವಿಶಾಲ ಬಯಲು, ಅಲ್ಲಿನ ಕಿಲೊಮೀಟರ್‌ಗಟ್ಟಲೆ ಜಾಗದಲ್ಲಿ ಬೆಳೆಯುವ ಕರಡ, ಗಾಳಿ ಬೀಸುವಾಗ ತೊನೆದಾಡುವ ಕರಡದ ಲಾಸ್ಯ, ಜಾನುವಾರುಗಳು ಆ ಕರಡವನ್ನು ತೃಪ್ತಿಯಿಂದ ತಿನ್ನುತ್ತಾ ಓಡಾಡುವ ದೃಶ್ಯ ಇವೆಲ್ಲವೂ ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ಆದರೇನು ಮಾಡುವುದು, ಆ ಬಯಲಿನ ವೈಶಾಲ್ಯವನ್ನು ಅಲ್ಲಲ್ಲಿ ಕತ್ತರಿಸುವ ಚಟುವಟಿಕೆಗಳು ಈಚಿನ ದಶಕಗಳಲ್ಲಿ ಆಗುತ್ತಲೇ ಇವೆ. ಮೊದಲಿಗೆ ಬಂದದ್ದು ‘ಗೋವೆ ಪ್ಲಾಟ್’!

ಇದೆಂಥ ವಿಚಿತ್ರಪದ ಎನ್ನಬೇಡಿ. ‘ಗೋವೆ’ ಅಂದರೆ ಗೋವೆ ಹಣ್ಣಿನ ಮರ (ಗೋಡಂಬಿ); ಪ್ಲಾಟ್ ಅಂದರೆ, ‘ಕೃಷಿ ಎಸ್ಟೇಟ್’ ಎಂಬುದರ ನಮ್ಮೂರಿನ ಸಮಾನಾರ್ಥಕ ಪದ. ಸರಕಾರವು ಹರನಗುಡ್ಡೆ ಯುದ್ದಗಲಕ್ಕೂ ಗೋವೆ ಅಥವಾ ಗೋಡಂಬಿ ಗಿಡಗಳನ್ನು ನೆಟ್ಟು ಬೆಳೆಸಿದ್ದರಿಂದ, ಅಲ್ಲಲ್ಲಿ ಗೋಡಂಬಿ ಮರಗಳು ಬೆಳೆದವು. ಈ ‘ಗೋವೆ ಪ್ಲಾಟ್’ ಮೇಲೆ, ಹೆಚ್ಚು ಇಳುವರಿಗಾಗಿ, ಕರಾವಳಿಯ ಬೇರೆ ಕಡೆ ನಡೆದಂತೆ, ಎಂಡೋಸಲ್ಫಾನ್ ಸಿಂಪಡಣೆಯೂ ಆಗಿತ್ತು ಎನಿಸುತ್ತದೆ
(ಖಚಿತ ಮಾಹಿತಿ ನನ್ನ ಬಳಿ ಇಲ್ಲ). ಹರನಗುಡ್ಡದ ವೈಶಾಲ್ಯಕ್ಕೆ ಭಂಗ ತಂದ ಇನ್ನೊಂದು ಚಟುವಟಿಕೆ ಎಂದರೆ, ಈಚಿನ ದಶಕಗಳಲ್ಲಿ ಅಭಿವೃದ್ಧಿ ಹೊಂದಿದ
ಕೆಲವು ರಸ್ತೆಗಳು. ಇವೆಲ್ಲವನ್ನೂ ಕಾಲಾಯ ತಸ್ಮೈನಮಃ ಎಂದು ಒಪ್ಪಿಕೊಳ್ಳಬೇಕಾಗಿದೆ.

ಜತೆಗೆ, ಹರನಗುಡ್ಡೆಯ ಮೇಲೆ ಸಾಗಿದ್ದ ದಾರಿಯನ್ನು ಬಳಸುವವರ ಸಂಖ್ಯೆ ಸಹ ಕಡಿಮೆಯಾಗಿದೆ; ಎಲ್ಲೆಡೆ ದ್ವಿಚಕ್ರ ವಾಹನ, ಇತರ ವಾಹನಗಳ ಬಳಕೆ ಜಾಸ್ತಿಯಾಗಿದೆ. ಈಗ ಯಾರೂ ಹರನಗುಡ್ಡೆಯ ಮೇಲೆ ನಡೆದು ಸಾಗುವವರೇ ಇಲ್ಲ. ಆದ್ದರಿಂದ, ಆ ನಿರ್ಜನ ಬಯಲುದಾರಿಯಲ್ಲಿ ೬ ಕಿ.ಮೀ. ನಡೆದು ಸಾಗಿ, ನನ್ನ ಮಾವನ ಮನೆಯನ್ನು ತಲುಪುವುದು ಅಂದಿನ ಮಧುರ ನೆನಪುಗಳಾಗಿ ಸ್ಥಿರವಾಗಿವೆ. ಈ ಹರನಗುಡ್ಡೆ, ಅದನ್ನೇರುವ ೧೨೦ ಮೆಟ್ಟಿಲುಗಳು, ಹತ್ತಿರದ ಬಳ್ಳೀ ಹರ, ಸೊಪ್ಪಿನ ಅಣೆ, ಕಲ್ಲು ಕಟ್ಟರ ಅಣೆ, ಆ ಸುತ್ತಲಿನ ಹಾಡಿಯಲ್ಲಿರುವ ದೂಪದ ಮರಗಳ ಕಾಯಿಯಿಂದ ತಯಾರಿಸುವ ಖಾದ್ಯ ತೈಲ, ಕಾಟು ಮಾವಿನ ರುಚಿ ವೈವಿಧ್ಯ, ಹರನ ಗುಡ್ಡೆಯಿಂದ ೪ ಕಿ.ಮೀ. ದೂರದ ಬೃಹತ್ ಬಂಡೆ ಯಲ್ಲಿರುವ ಅಕ್ಕತಂಗಿಯರ ಹೊಂಡ, ನಮ್ಮೂರಿನಲ್ಲಿರುವ ಹಾರುವ ಜೀವಿಗಳು ಇಂಥ ವಿಷಯ
ಗಳನ್ನು ಕುರಿತು ನಾನು ಬರೆದಿರುವ ಬರಹ ಗಳ ಸಂಕಲನವೊಂದು ಈಗ ಬೆಳಕು ಕಾಣುತ್ತಿದೆ.

ಕೃತಿಯ ಹೆಸರು ‘ಬೆಟ್ಟಗುಡ್ಡಗಳ ನಡುವೆ ಪುಟ್ಟ ಮನೆ’ ವಿಶೇಷವೆಂದರೆ, ಈ ರೀತಿ ಪರಿಸರ, ಗ್ರಾಮೀಣ ಬದುಕಿನ ವೈವಿಧ್ಯಗಳ ಕುರಿತು ನಿರಂತರವಾಗಿ
ಬರೆಯಲು ನನಗೆ ಪ್ರೋತ್ಸಾಹ, ಸೂರ್ತಿ, ಬೆಂಬಲ, ಮಾರ್ಗದರ್ಶನ ನೀಡಿ, ಬರಹಗಳನ್ನು ಬರೆಯಿಸಿದ ಶ್ರೀ ವಿಶ್ವೇಶ್ವರ ಭಟ್ ಅವರ ಹೊಸ ಕೃತಿ ‘ನಿದ್ದೆಯೇ
ವಿದ್ಯೆಗೆ ಮೂಲವಯ್ಯ’ ಸಹ ಇದೇ ಸಂದರ್ಭದಲ್ಲಿ ಬೆಳಕು ಕಾಣುತ್ತಿದೆ. ಅವರ ಜತೆ ನನ್ನ ಪುಸ್ತಕ ಬಿಡುಗಡೆಯಾಗುತ್ತಿರುವುದು ನನಗೆ ಒಂದು ಹೆಮ್ಮೆಯ ಕ್ಷಣ. ‘ಸಪ್ನ ಬುಕ್ ಹೌಸ್’ ಹೊರತರುತ್ತಿರುವ ಈ ಪುಸ್ತಕಗಳು ಮತ್ತು ಒಟ್ಟು ೬೮ ಕೃತಿಗಳು, ೯.೧೨.೨೦೨೩ರಂದು ಬೆಳಗ್ಗೆ ೧೦ ಗಂಟೆಗೆ ಬೆಂಗಳೂರಿನ ಗಾಂಧಿಭವನದಲ್ಲಿ ಬಿಡುಗಡೆಯಾಗುತ್ತಿವೆ.

ಈ ಸಂದರ್ಭದಲ್ಲಿ ನಿಮ್ಮನ್ನು ಭೇಟಿಯಾಗಲು ನನಗೆ ತುಂಬಾ ಸಂತೋಷವಾಗುತ್ತದೆ. ಖಂಡಿತ ಬನ್ನಿ. ಪುಸ್ತಕ ಓದುತ್ತಾ, ಹರನಗುಡ್ಡೆ ಮತ್ತು ಇತರ ಪ್ರಾಕೃತಿಕ ವಿಸ್ಮಯಗಳ ಕುರಿತು ಮಾತನಾಡುತ್ತಾ, ಕಾಫಿ ಕುಡಿಯೋಣ! ಬರ್ತೀರಲ್ಲಾ!