ಕಳಕಳಿ
ಕುಮಾರಸ್ವಾಮಿ ವಿರಕ್ತಮಠ
ಬೆಟ್ಟ-ಗುಡ್ಡ, ನದಿ-ಕೆರೆ, ಹಳ್ಳ-ಕೊಳ್ಳ, ಬಾವಿ, ಕಾಡು, ಹಸಿರು ಇವೆಲ್ಲವೂ ಸೇರಿಯೇ ಈ ಸುಂದರ ಪ್ರಕೃತಿ ನಿರ್ಮಾಣಗೊಂಡಿದೆ. ಇವು ರಾತ್ರೋರಾತ್ರಿ ಉದ್ಭವಿಸಿದ್ದಲ್ಲ. ಬಿಲಿಯನ್ಗಟ್ಟಲೆ ವರ್ಷಾವಧಿಯಲ್ಲಿ ಇವು ರೂಪುಗೊಂಡಿವೆ, ರೂಪಾಂತರಕ್ಕೂ ಒಳಗಾಗಿವೆ.
ಮನುಷ್ಯನೂ ಇವೆಲ್ಲವುಗಳ ಸಹಾಯದಿಂದಲೇ ತನ್ನ ಬದುಕನ್ನು ಕಟ್ಟಿಕೊಂಡಿದ್ದಾನೆ; ಇವುಗಳ ಹೊರತಾದ ಮನುಷ್ಯ- ಜೀವನವನ್ನು ಊಹಿಸಲೂ ಸಾಧ್ಯವಿಲ್ಲ. ಬಹಳ ಕಾಲದಿಂದಲೂ ಪ್ರಕೃತಿಯನ್ನು ಆರಾಧಿಸುತ್ತಾ ಬಂದಿರುವ ಭಾರತೀಯರು ನೆಲ-ಜಲ, ಗಿಡ-ಮರಗಳನ್ನು ದೈವೀ ಸ್ವರೂಪವಾಗಿ ಕಂಡಿದ್ದಾರೆ. ಪ್ರಕೃತಿಯೊಂದಿಗೆ ಮಾನವನ ಸಂಬಂಧ ಅತ್ಯಂತ ನಿಕಟವಾದದ್ದು. ಪ್ರಕೃತಿಯೇ ಮಾನವನ ಉಸಿರು. ಗ್ರಾಮೀಣ ಭಾಗದ ಜನರು ಪ್ರಕೃತಿ ಯೊಂದಿಗೆ ತಮ್ಮ ಜೀವನದ ಬಹುಭಾಗವನ್ನು ಕಳೆಯುತ್ತಾರೆ, ಅಂಥ ಪ್ರತಿಕ್ಷಣವನ್ನೂ ಜೀವಿಸುತ್ತಾರೆ.
ಹಳ್ಳಿಗಳ ಆಸುಪಾಸಿನಲ್ಲಿ ಗುಡ್ಡ, ನದಿ, ಜಲಪಾತ, ತೊರೆ ಹೀಗೆ ಪ್ರಕೃತಿಯ ಯಾವುದಾದರೊಂದು ಅದ್ಭುತ ಸೃಷ್ಟಿ ಇದ್ದೇ ಇರುತ್ತದೆ. ಅದು ಆ ಪ್ರದೇಶದ ಹೆಮ್ಮೆಯ ಪ್ರತೀಕವೂ ಆಗಿರುತ್ತದೆ. ಜನಜೀವನದ ಪ್ರತಿ ಘಟ್ಟದ ಬೆಳವಣಿಗೆಯಲ್ಲಿ ಅದು ಮಹತ್ವದ ಪಾತ್ರವನ್ನು ವಹಿಸುತ್ತದೆ. ದೊಡ್ಡ ಬಂಡೆಗಳಿಂದ ಕೂಡಿರುವ ನಮ್ಮೂರಿನ ಬೆಟ್ಟದಲ್ಲಿ ಶ್ರೀ ರೇವಣ ಸಿದ್ಧೇಶ್ವರರ ದೇವಸ್ಥಾನವಿದೆ. ಇದನ್ನು ಆದಿದೈವವೆಂದು ಪರಿಗಣಿಸಿರುವ ನಮ್ಮೂರಿನ ಜನ ಇಂದಿಗೂ ನಂಬಿಕೆ ಮತ್ತು ಶ್ರದ್ಧೆಗಳಿಂದ ಇಲ್ಲಿ ಪೂಜೆ ಸಲ್ಲಿಸುತ್ತಾರೆ. ಸುತ್ತಮುತ್ತಲ ಐದಾರು ಗ್ರಾಮಗಳ ಜನರು ಸೇರಿ ಜಾತ್ರೆ ಮಾಡುತ್ತಾರೆ.
ಗುಡ್ಡದ ಕೆಳಗಿನ ಅಖಾಡದಲ್ಲಿ ಗ್ರಾಮೀಣ ಕುಸ್ತಿ ಪಂದ್ಯಾವಳಿಗಳನ್ನು ಆಯೋಜಿಸಿ ಪ್ರೋತ್ಸಾಹ ನೀಡುತ್ತಾರೆ. ಊರಿನ ಉಳಿವಿಗಾಗಿ ಮತ್ತು ಒಳಿತಿಗಾಗಿ ಪ್ರಕೃತಿಯ ವಿವಿಧ ರೂಪಗಳನ್ನು ದೈವದ ರೂಪ ದಲ್ಲಿ ಪೂಜಿಸುವ ಪ್ರವೃತ್ತಿ ಈಗಲೂ ಗ್ರಾಮೀಣ ಜನರಲ್ಲಿದೆ. ಇದನ್ನು ಮೌಢ್ಯವೆಂದು ಭಾವಿಸಿದರೆ ತಪ್ಪಾದೀತು. ಏಕೆಂದರೆ ಹಳ್ಳಿಗರ ಇಂಥ ಪರಿಪಾಠದ ಹಿಂದೆ ಸಾಕಷ್ಟು ಒಳ್ಳೆಯ ಚಿಂತನೆಗಳಿವೆ.
ಪ್ರಕೃತಿಯೊಂದಿಗೆ ಸಂಸ್ಕೃತಿಯೂ ಬೆಳೆಯುತ್ತಾ ಬಂದಿರು ವಂಥದ್ದು. ಪ್ರಕೃತಿ ಮತ್ತು ಸಂಸ್ಕೃತಿಗಳು ಒಂದೇ ನಾಣ್ಯದ ೨ ಮುಖಗಳಂತೆ ಮನುಷ್ಯನಿಗೆ ಒದಗಿವೆ. ಪ್ರಕೃತಿಯ ಬಲವಿಲ್ಲದೆ ಜಗತ್ತಿನಲ್ಲಿ ಯಾವ ಸಂಸ್ಕೃತಿಯೂ ರೂಪುಗೊಂಡಿಲ್ಲ. ನಾಗರಿಕತೆಗಳೆಲ್ಲವೂ ಪ್ರಕೃತಿಯ ಮಡಿಲಲ್ಲೇ ಜನ್ಮತಾಳಿ ದಂಥವು. ಪ್ರಕೃತಿಯ ಉಳಿವಿಗಾಗಿಯೇ ನಮ್ಮ ಪೂರ್ವಿಕರು ಅದಕ್ಕೆ ದೈವದ ಸ್ವರೂಪವನ್ನು ನೀಡಿದರು. ಆದರೆ ದಿನಗಳೆ ದಂತೆ ಮನುಷ್ಯನ ದುರಾಸೆಗೆ ಬಲಿಯಾಗಿ ಪ್ರಕೃತಿ ಸಂಪನ್ಮೂಲಗಳೆಲ್ಲವೂ ಅವಸಾನದ ಅಂಚಿಗೆ ತಲುಪುತ್ತಿವೆ.
ತನ್ನ ಭೋಗಕ್ಕೆ, ತನಗೆ ಬೇಕಾದಂತೆ ಪ್ರಕೃತಿಯನ್ನು ಬಳಸತೊಡಗಿದ ಮಾನವ, ಪ್ರಕೃತಿಯ ಮೂಲಗಳನ್ನೇ ವಿರೂಪ ಗೊಳಿಸಿದ. ಪರಿಸರದಲ್ಲಿ ಅಸಮ ತೋಲನ ತಂದಿಟ್ಟ. ಹೀಗಾಗಿ ಹವಾಮಾನ ವೈಪರೀತ್ಯಗಳು ಸಂಭವಿಸತೊಡಗಿದವು. ಋತುಮಾನಕ್ಕೆ ತಕ್ಕಂತೆ ಸುರಿಯಬೇಕಿದ್ದ ಮಳೆಯೂ ಸುರಿಯು ತ್ತಿಲ್ಲ. ಕಾರಣ, ತನಗೆ ಮನುಷ್ಯ ನೀಡಿದ ಕೊಡುಗೆ ಗಳನ್ನು ಪ್ರಕೃತಿ ಈಗ ಮರಳಿಸುತ್ತಿದೆ. ಕೆಟ್ಟದ್ದು ಯಾವುದನ್ನೂ ಪ್ರಕೃತಿ ತನ್ನ ಮಡಿಲಲ್ಲಿಟ್ಟು ಕೊಳ್ಳುವುದಿಲ್ಲ ಎಂಬ ಮಾತನ್ನು ಪದೇ ಪದೆ ಸಾಬೀತುಪಡಿಸುತ್ತಲೇ ಬರುತ್ತಿದೆ. ಆದರೆ ಮನುಷ್ಯ ಮಾತ್ರ ಬುದ್ಧಿ ಕಲಿಯುತ್ತಿಲ್ಲ.
ಪ್ರಕೃತಿಯನ್ನು ಆರಾಧಿಸುವ ಸಂಸ್ಕೃತಿ ನಮ್ಮಲ್ಲಿ ಮರುಕಳಿಸಬೇಕಿದೆ. ಈ ಬದುಕು ಮೂರೇ ದಿನದ್ದು, ತನ್ನ ದುರಾಸೆಯ ಜೀವನ ಕೊನೆಗೊಳ್ಳುತ್ತದೆ ಎಂಬುದು ಗೊತ್ತಿದ್ದರೂ ಮನುಷ್ಯ ಪ್ರಕೃತಿಯ ಮೇಲೆ ತನ್ನ ಅಧಿಪತ್ಯ ಸ್ಥಾಪಿಸಲು ಹರಸಾಹಸ ಪಡುತ್ತಿದ್ದಾನೆ, ಅದರಲ್ಲಿ ಭಾಗಶಃ ಯಶಸ್ವಿಯೂ ಆಗಿದ್ದಾನೆ. ತನ್ನ ಮೇಲೆ ಮನುಷ್ಯ ಎಸಗುವ ಈ ದೌರ್ಜನ್ಯಕ್ಕೆ ಪ್ರತಿರೋಧ ತೋರಿಸುವಲ್ಲಿ ಪ್ರಕೃತಿಯೂ ಸೋತಿಲ್ಲ, ಮನುಷ್ಯನಿಗೆ ಬುದ್ಧಿ ಕಲಿಸದೇ ಬಿಟ್ಟಿಲ್ಲ; ಆಗಾಗ ತನ್ನ ರೌದ್ರ ಸ್ವರೂಪವನ್ನು ತೋರುತ್ತಲೇ ಬಂದಿದೆ. ಇಷ್ಟಾಗಿಯೂ ಮನುಷ್ಯ ತನ್ನ ದುರ್ಬುದ್ಧಿಯನ್ನು ಬಿಡುತ್ತಿಲ್ಲ.
ಅರಣ್ಯ ನಾಶದಂಥ ಘೋರಕೃತ್ಯಕ್ಕೆ ತಾನು ಕೈಹಾಕಿದ್ದರ ದುಷ್ಪರಿಣಾಮವನ್ನು ಮನುಷ್ಯ ಇಂದು ಅನುಭವಿಸುತ್ತಿದ್ದಾನೆ. ಹುಲಿ, ಚಿರತೆಯಂಥ ಕ್ರೂರ ಮೃಗಗಳು ಕಾಡಿನಿಂದ ನಾಡಿಗೆ ನುಗ್ಗುವಂತಾಗಿದೆ. ಇಷ್ಟಾಗಿಯೂ ನಾವು ಸರಿಯಾದ ದಿಕ್ಕಿನಲ್ಲಿ ಯೋಚಿಸುತ್ತಿಲ್ಲ. ಕಾಡು ಕಡಿದು ಒಳಹೊಕ್ಕಿರುವ ನಾವು ವನ್ಯಮೃಗಗಳ ಜಾಗವನ್ನು ಆಕ್ರಮಿಸಿಕೊಂಡಿದ್ದೇವೆ ಎಂಬ ಸೂಕ್ಷ್ಮವೂ ನಮಗೆ ಅರ್ಥವಾಗಿಲ್ಲ. ವನ್ಯಮೃಗಗಳ ಆವಾಸಸ್ಥಾನಕ್ಕೇ ಕೈಹಾಕಿದ್ದೇವೆ, ಕಾಡು ಬಗೆದು ಹೆದ್ದಾರಿ ನಿರ್ಮಿಸಿದ್ದೇವೆ, ರೈಲುಹಳಿ ಹಾಕಿದ್ದೇವೆ, ದೊಡ್ಡ ದೊಡ್ಡ ಬಂಡೆಗಳನ್ನು ಕೊರೆದು ಸುರಂಗ ನಿರ್ಮಿಸಿದ್ದೇವೆ. ಒಟ್ಟಿನಲ್ಲಿ ನಮ್ಮ ಭೋಗ ಜೀವನದ ಬಯಕೆಗಳ ಈಡೇರಿಕೆಗೆ ಪ್ರಕೃತಿಯನ್ನು ಸಾಧ್ಯವಾದಷ್ಟು ಹಾಳುಮಾಡಿದ್ದೇವೆ.
ಕಾಡುಪ್ರಾಣಿಗಳ ದಾಳಿಗೆ ಮನುಷ್ಯ ಬಲಿಯಾಗುತ್ತಿದ್ದಾನೋ ಅಥವಾ ಮನುಷ್ಯ ದಾಳಿಗೆ ಕಾಡುಪ್ರಾಣಿಗಳು ಬಲಿಯಾಗುತ್ತಿವೆಯೋ ಎಂಬುದು ಯಕ್ಷಪ್ರಶ್ನೆ ಯಾಗಿದ್ದರೂ, ಮನುಷ್ಯನ ದುರಾಸೆಯೇ ಈ ಪರಿಸ್ಥಿತಿಗೆ ಕಾರಣ ಎಂಬುದಂತೂ ಸರ್ವವಿದಿತ. ಮೈಸೂರು ದಸರೆಯ ಜಂಬೂಸವಾರಿಗೆ ಖ್ಯಾತನಾಗಿದ್ದ ‘ಅರ್ಜುನ’ ಆನೆ, ಈಚೆಗೆ ಕಾಡಾನೆಯೊಂದನ್ನು ಹಿಮ್ಮೆಟ್ಟಿಸುವ ಯತ್ನದಲ್ಲಿ ಮರಣ ಹೊಂದಿದ. ಇಲ್ಲಿ ತಪ್ಪು ಯಾರದು? ತನ್ನದೇ ಪ್ರದೇಶದಲ್ಲಿ ಸಂಚರಿ ಸುತ್ತಿದ್ದ ಕಾಡಾನೆ ಯದೇ? ಮನುಷ್ಯರಿಗೆ ತೊಂದರೆಯಾಗಬಾರದೆಂದು ಅದನ್ನು ಹಿಮ್ಮೆಟ್ಟಿಸಲು ಅರ್ಜುನನನ್ನು ಮುಂದುಮಾಡಿದವರದೇ? ನಿಸರ್ಗ ನಿಯಮಕ್ಕೆ ವಿರುದ್ಧವಾಗಿ ಕಾಡು ಕಡಿದು ವನ್ಯಜೀವಿಗಳ ನೆಲೆಯನ್ನು ಪ್ರವೇಶಿಸಿರುವ ಮನುಷ್ಯನದೇ? ಮನುಷ್ಯ ಎಷ್ಟು ಬುದ್ಧಿವಂತನೆಂದರೆ, ಅರ್ಜುನನ ಸಾವನ್ನು ಆ ಕಾಡಾನೆಯ ತಲೆಗೆ ಕಟ್ಟಿದ, ಮೂಲಸಮಸ್ಯೆಯನ್ನು ಮರೆಮಾಚಿದ.
ಪ್ರಕೃತಿಗೆ ವಿರುದ್ಧವಾಗಿ ನಡೆದ ತನ್ನ ಅಕ್ರಮಗಳನ್ನು ಅದುಮಿದ. ಇವು ಇಡೀ ಮಾನವ ಕುಲವೇ ತಲೆ ತಗ್ಗಿಸುವಂಥ ಘಟನೆಗಳು. ಮಾನವನ ಆಕ್ರಮಣ ವನ್ನು ಪ್ರಕೃತಿ ಮತ್ತು ವನ್ಯಜೀವಿಗಳು ತಮ್ಮದೇ ಆದ ಧಾಟಿಯಲ್ಲಿ ಪ್ರತಿಭಟಿಸುತ್ತಲೇ ಇರುತ್ತವೆ. ‘ವನ್ಯಜೀವಿಗಳ ದಾಳಿಯಿಂದಾಗಿ ಜೀವನಷ್ಟ ವಾಗಿದೆ; ಅವನ್ನು ಹಿಡಿಯಿರಿ, ಗುಂಡಿಕ್ಕಿ’ ಎಂದು ಪ್ರತಿಭಟಿಸುವ ಮನುಷ್ಯರು ಎಸಗುವ ಕುಕೃತ್ಯಗಳಿಗೆ ಶಿಕ್ಷೆ ನೀಡಬೇಕಾದವರು ಯಾರು? ಕಾಡು ಪ್ರಾಣಿಗಳು ಬಂದು ಪ್ರತಿಭಟಿಸಬೇಕೇ? ರಸ್ತೆ ತಡೆ ಮಾಡಬೇಕೇ? ಅರಣ್ಯ ಇಲಾಖೆಯ ಬಳಿ ನ್ಯಾಯವನ್ನು, ತಮ್ಮ ಸಹಜೀವಿಯ ಸಾವಿಗೆ ಪರಿಹಾರವನ್ನು ಕೇಳಬೇಕೇ? ಅಮಾಯಕ ಪ್ರಾಣಿಗಳ ಜೀವ ತೆಗೆಯುವಂಥ ವಿಕೃತಿ ಇರುವವನು ಮನುಷ್ಯನೇ ಅಲ್ಲ.
ಈ ಕೃತ್ಯ ಮೃಗೀಯ ವರ್ತನೆಯನ್ನೂ ಮೀರಿದ್ದು. ಇಂದು ಮನುಷ್ಯನಲ್ಲಿ ನಮ್ಮ ನೆಲಮೂಲ ಸಂಸ್ಕೃತಿಯ ಅರಿವು ಇಲ್ಲದಿರುವುದೇ ಇದಕ್ಕೆಲ್ಲ ಕಾರಣ. ಆದ್ದರಿಂದ ಮನುಷ್ಯ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷಕ್ಕೆ ಇನ್ನಾದರೂ ಅಂತ್ಯಹಾಡಬೇಕಿದೆ. ಮನುಷ್ಯರ ದುರಾಸೆಗೆ ಬ್ರೇಕ್ ಹಾಕದ ಹೊರತು
ಇಂಥದೊಂದು ನಿಯಂತ್ರಣ ಸಾಧ್ಯವಿಲ್ಲ. ಇನ್ನೊಂದು ಜೀವಿಯ ನೋವಿಗೆ ಸ್ಪಂದಿಸಬೇಕಾದ್ದು ಮನುಷ್ಯನ ನಡೆಯಾಗಬೇಕೇ ಹೊರತು ಪ್ರಾಣ ತೆಗೆಯು ವುದಲ್ಲ.
(ಲೇಖಕರು ಹವ್ಯಾಸಿ ಬರಹಗಾರರು)