Thursday, 31st October 2024

Harish Kera Column: ಇದು ಬರೀ ಬಾಳೆಹಣ್ಣಲ್ಲವೋ ಅಣ್ಣ!

ಕಾಡು ದಾರಿ

ಹರೀಶ್‌ ಕೇರ

ನೋಡಿದರೆ ಅದೊಂದು ಚೆನ್ನಾಗಿ ಮಾಗಿದ, ತುಸು ಬಾಗಿದ ಬಾಳೆಹಣ್ಣು. ಬಹುಶಃ ನಮ್ಮ ಮೈಸೂರು ಬಾಳೆಹಣ್ಣಿ ನಂಥದ್ದೇ ಜಾತಿ. ಇದರ ಬೆಲೆ ಮಾತ್ರ ಸುಮಾರು 12 ಕೋಟಿ ರುಪಾಯಿ. 2019ರಲ್ಲಿ ಇದರ ಬೆಲೆ 1 ಕೋಟಿ ರುಪಾಯಿ ಯ ಆಸುಪಾಸಿನಲ್ಲಿತ್ತು. ಈಗ 12 ಪಟ್ಟು ಅಧಿಕವಾಗಿದೆ.

ಮಿಯಾಮಿಯ ಮಾರುಕಟ್ಟೆಯ ಇದ್ದಿದ್ದರೆ ಇದರ ಬೆಲೆ ಅರ್ಧ ಡಾಲರ್‌ಗೂ ಹೆಚ್ಚಿರುತ್ತಿರಲಿಲ್ಲ. ಆದರೆ ಒಬ್ಬ ಕಲಾವಿದನ ಕೈಯಲ್ಲಿ ಸಿಕ್ಕಿ ಅದು ಆರ್ಟ್ ಗ್ಯಾಲರಿಯ ಭಿತ್ತಿಗೆ ಟೇಪ್ ಅಂಟಿಸಿಕೊಂಡು ಕೂತದ್ದೇ ತಡ, ಇನ್ನಿಲ್ಲದ ಮೌಲ್ಯ ಬಂದುಬಿಟ್ಟಿತು. “ಕಲೆ ಎಂದರೇನು?” ಎಂಬ ಗಂಭೀರವಾದ ಚರ್ಚೆಗೂ ಕಾರಣವಾಯಿತು. ಇದನ್ನು ಆಮೇಲೆ ನೋಡೋಣ. ಸದ್ಯ ಇದರ ಸುತ್ತಲಿನ ಕೋಲಾಹಲ. 2019ರ ಡಿಸೆಂಬರ್. ಫ್ಲೋರಿಡಾ ರಾಜ್ಯದ ಮಿಯಾ ಮಿಯ ಬೇಸೆಲ್ ಆರ್ಟ್ ಗ್ಯಾಲರಿಯಲ್ಲಿ ನಡೆದ ಕಲಾಮೇಳದ ಮೊದಲ ದಿನ, ಮೌರಿಸಿಯೊ ಕತಲಾನ್ (Maurizio Cattelan) ಎಂಬ ಕಲಾವಿದ ಗ್ಯಾಲರಿಯ ಗೋಡೆಗೆ ಬಾಗಿದ ಬಾಳೆಹಣ್ಣೊಂದನ್ನು ತಂದು ಡಕ್ಟ್ ಟೇಪ್ ಹಾಕಿ ಅಂಟಿಸಿದ.

ಇದಕ್ಕೆ ‘ದಿ ಕಾಮೆಡಿಯನ್’ (The Comedia) ಎಂಬ ಹೆಸರು ಕೊಟ್ಟ. ಕೆಲವೇ ಗಂಟೆಗಳಲ್ಲಿ ಈತನ ಕಲಾಕೃತಿ ನೋಡುಗರನ್ನು ಹುಚ್ಚೆಬ್ಬಿಸಿತು. ನೋಡಿದವರು ಅದರ ಫೋಟೋ ತೆಗೆದು ಜಗತ್ತಿನಾದ್ಯಂತ ಹರಡಿದರು. ಕಾಮೆಡಿಯನ್ ವೈರಲ್ ಆಯಿತು. ಅಂದ ಹಾಗೆ, ಈ ಕತಲಾನ್ ಯಾರು? ಇವನು ಇಟಲಿಯ ಕಲಾವಿದ. ತಂದೆ ತಾಯಿ ಇಬ್ಬರೂ ಕಾರ್ಮಿಕರು. ೧೯೬೦ರಲ್ಲಿ ಹುಟ್ಟಿದ ಕತಲಾನ್ ಮರದ ಪೀಠೋಪಕರಣಗಳನ್ನು ವಿನ್ಯಾಸ‌ ಗೊಳಿಸುತ್ತ ಹೊಟ್ಟೆ ಹೊರೆಯುತ್ತಿದ್ದ. ವಿಚಿತ್ರವಾದ, ಲೇವಡಿ ಮಾಡುವ ಶಿಲ್ಪಕಲಾಕೃತಿಗಳನ್ನು ಮಾಡಲು ಶುರು ಮಾಡಿದ. ಇದಕ್ಕಾಗಿಯೇ ಇವನನ್ನು ಕಲಾಜಗತ್ತಿನ ಗಂಭೀರ ವಿಮರ್ಶಕರು ಒಬ್ಬ ‘ಜೋಕರ್’ ಎಂಬಂತೆ ನೋಡ ತೊಡಗಿದರು. ೨೦೧೬ರಲ್ಲಿ ಗುಗ್ಗೆನ್‌ಹೀಮ್ ಮ್ಯೂಸಿಯಂನಲ್ಲಿ ಇವನು ಪ್ರದರ್ಶಿಸಿದ ‘ಅಮೆರಿಕ’ ಎಂಬ ಕಲಾಕೃತಿ ಜಗತ್ತಿನ ಗಮನವನ್ನು ಇವನ ಕಡೆ ಸೆಳೆಯಿತು. ಅದೊಂದು ಚಿನ್ನದ ಕಮೋಡ್.

ಸುಮಾರು 103 ಕಿಲೋ ಚಿನ್ನದಿಂದ ತಯಾರಿಸಿದ ಅದನ್ನು ಸಂಪೂರ್ಣ ಕಾರ್ಯಾಚರಣೆಯ ಸ್ಥಿತಿಯಲ್ಲಿಡಲಾಗಿತ್ತು. ಒಂದು ಹಂತದಲ್ಲಿ ಸುಮಾರು 1 ಲಕ್ಷ ಜನ ತಮ್ಮ ಹೆಸರು ಬರೆಸಿ ಅದರಲ್ಲಿ ವಿಸರ್ಜನೆ ಮಾಡಲು ಕಾಯುತ್ತಿದ್ದರು!
ನಂತರ ಇದು ಬ್ಲೆನ್‌ಹೀಮ್ ಅರಮನೆಗೆ ಹೋಯಿತು. 2019ರ ಸೆಪ್ಟೆಂಬರ್‌ನಲ್ಲಿ ಅದನ್ನು ಯಾರೋ ಕದ್ದೊಯ್ದರು. ಕಳವಿಗೆ ಸಂಬಂಧಿಸಿ ಆರು ಮಂದಿಯನ್ನು ಬಂಧಿಸಲಾಗಿದೆ. ಅವರ ವಿಚಾರಣೆ ಇನ್ನೂ ನಡೆಯುತ್ತಿದೆ. ಈ ಕಲಾ ಕೃತಿಯ ಅರ್ಥವೇನು ಎಂದು ಯಾರೋ ಕೇಳಿದ್ದಕ್ಕೆ, “ನನ್ನ ಕಲಾಕೃತಿಗೆ ನಾನೇ ಅರ್ಥ ಹೇಳಲಾರೆ” ಎಂದ ಕತಲಾನ್. ಇದು “ಡೊನಾಲ್ಡ ಟ್ರಂಪ್ ಅವರ ವಿಲಾಸಿತನಕ್ಕೆ ವ್ಯಂಗ್ಯವೇ?” ಎಂದು ಪ್ರಶ್ನಿಸಿದ್ದಕ್ಕೆ “ಕಲಾಕೃತಿಯ ಬಹು ಸಾಧ್ಯತೆ ಗಳಲ್ಲಿ ಅದು ಒಂದು ಸಾಧ್ಯತೆ ಮಾತ್ರ” ಎಂದ.

ಇರಲಿ, ಈ ಕತಲಾನ್‌ನ ಬಾಳೆಹಣ್ಣು ಕಲಾಕೃತಿಗೆ ಮರಳೋಣ. ಮಿಯಾಮಿಯ ಕಲಾಮೇಳದಲ್ಲಿ ಕಾಳ್ಗಿಚ್ಚಿನಂತೆ ಈ ಕಲಾಕೃತಿಯ ಖ್ಯಾತಿ ಹರಡಿತು. ಜನ ಅದನ್ನು ಮುಗಿಬಿದ್ದು ನೋಡಿದರು. ಈ ಕಲಾಕೃತಿಯ ಮೂರು ಎಡಿಷನ್‌ ಗಳಿದ್ದವು. ಇದರಲ್ಲಿ ಎರಡು ಎಡಿಷನ್‌ಗಳು ಅದೇ ದಿನ 1.2 ಲಕ್ಷ ಡಾಲರ್ (೧ ಕೋಟಿ ರು.) ಬೆಲೆಗೆ ಮಾರಾಟವಾದವು. ಇನ್ನೊಂದು ಆವೃತ್ತಿಯನ್ನು ಗುಗ್ಗೆನ್ ಹೀಮ್ ಮ್ಯೂಸಿಯಂಗೆ ದಾನ ಮಾಡಲಾಯಿತು. ಇಷ್ಟಾಯಿತಲ್ಲ? ಮರುದಿನ ಮಧ್ಯಾಹ್ನ ಡೇವಿಡ್ ದತೂನ ಎಂಬ ಇನ್ನೊಬ್ಬ ಪರ್ಫಾರ್ಮೆನ್ಸ್ ಆರ್ಟಿ, ಗುಂಪಿನಿಂದ‌ ನಿಧಾನವಾಗಿ ನಡೆದುಬಂದು ಗೋಡೆಗೆ ಅಂಟಿಸಿದ ಡಕ್ಟ್ ಟೇಪನ್ನು ಕಿತ್ತು ತೆಗೆದು ಬಾಳೆಹಣ್ಣಿನ ಸಿಪ್ಪೆ ಸುಲಿದು ಅದನ್ನು ತಿಂದು ಮುಗಿಸಿದ.

ಸೋಜಿಗದಿಂದ ನೋಡುತ್ತ ನಿಂತವರಿಗೆ “ನಾನು ಡೇವಿಡ್ ದತೂನ. ನಾನು ಈಗ ಪ್ರದರ್ಶಿಸಿದ ಪರ್ಫಾರ್ಮೆನ್ಸ್
ಆರ್ಟ್‌ನ ಹೆಸರು ಹಂಗ್ರಿ ಆರ್ಟಿಸ್ಟ್ (Hungry Artist). ನಂಗೆ ಕತಲಾನ್ ಬಗ್ಗೆ ತುಂಬಾ ಗೌರವ. ಅವನು ಈ ಶತಮಾನದ ದೊಡ್ಡ ಕಲಾವಿದ. ಎನಿವೇ, ಕಾಮೆಡಿಯನ್ ತುಂಬಾ ರುಚಿಯಾಗಿತ್ತು!” ಎಂದು ಹೇಳಿದ.
‘ಕಾಮೆಡಿ‌ಯನ್’ ಒಂದು ಕಲಾಕೃತಿಯಾದರೆ, ದತೂನ ಮಾಡಿದ್ದೇನು? ಅದೂ ಒಂದು ಕಲಾಕೃತಿಯೇ. ಅವನು ಕತಲಾನ್‌ನ ಚಿತ್ರವನ್ನು ನಾಶ ಮಾಡಲಿಲ್ಲ. ಬದಲಾಗಿ ತನ್ನ ಕಲೆಯನ್ನು ಪ್ರದರ್ಶಿಸಿದ. ಎರಡು ಕಲಾವಿದರು ಮುಖಾಮುಖಿಯಾಗುವುದು, ಸಂವಾದಿಸುವುದು ಹೀಗೆಯೇ ಎಂದು ಕಲಾಜಗತ್ತಿನ ಮೇಧಾವಿಗಳು ಶ್ಲಾಘಿಸಿದರು! ‘ಇವರಿಗೆ ತಲೆ ಕೆಟ್ಟಿದೆ’ ಎಂದು ಹೇಳಿದವರೂ ಇದ್ದರು.

ಕತಲಾನ್‌ನ ಕಲಾಕೃತಿಯ ಕುರಿತ ರಸಪ್ರಸಂಗಗಳನ್ನು ಇಲ್ಲಿಗೇ ಮುಗಿಸಬಹುದಿತ್ತು. ಆದರೆ ಇದು ಸೀರಿಯಲ್ ಥರ ಮುಂದುವರಿಯುತ್ತಲೇ ಹೋಗುತ್ತಿದೆ. ಜೋ ಮಫೋರ್ಡ್ ಎಂಬ ಕಲಾವಿದ, ಕತಲಾನ್‌ನ ಕಲಾಕೃತಿ ನನ್ನ ಆರ್ಟ್‌ನ ನಕಲು ಎಂದು ಆರೋಪಿಸಿ ಕೇಸು ಹಾಕಿದ. ಅವನು 20 ವರ್ಷ ಹಿಂದೆಯೇ ಬಾಳೆಹಣ್ಣು ಮತ್ತು ಕಿತ್ತಳೆಯನ್ನು ಡಕ್ಟ್ ಟೇಪ್ ಹಾಕಿ ಅಂಟಿಸಿದ್ದನಂತೆ. ಆದರೆ ಸಾಕ್ಷಿಗಳನ್ನು ನೀಡಲಾಗದ ಕಾರಣ ಅವನ ವ್ಯಾಜ್ಯ ಬಿದ್ದುಹೋಯಿತು.

2023ರಲ್ಲಿ, ದಕ್ಷಿಣ ಕೊರಿಯದಲ್ಲಿರುವ ಲೀಯಮ್ ಆರ್ಟ್ ಮ್ಯೂಸಿಯಂನಲ್ಲಿ ಇಡಲಾಗಿದ್ದ ಈ ಕಲಾಕೃತಿಯ ಒಂದು ಆವೃತ್ತಿಯನ್ನು ನೋಹ್ ಹ್ಯೂನ್ ಸೋ ಎಂಬ ವಿದ್ಯಾರ್ಥಿ ದತೂನ ಥರವೇ ಗೋಡೆಯಿಂದ ಕಿತ್ತು ತೆಗೆದು ಮುಕ್ಕಿ ಮುಗಿಸಿದ. “ಯಾಕಪ್ಪಾ?” ಎಂದು ಕೇಳಿದವರಿಗೆ, “ಬೆಳಗ್ಗೆ ನಾಷ್ಟಾ ಮಾಡಿರಲಿಲ್ಲ, ನನಗೆ ಹಸಿವಾಗಿತ್ತು” ಎಂದು ಉತ್ತರಿಸಿದ. ಆದರೆ ದತೂನ ಥರ ಇವನು ಫೇಮಸ್ ಆಗಲಿಲ್ಲ.

ನಿಮ್ಮ ಕಲೆಯನ್ನು ಚೆನ್ನಾಗಿ ವ್ಯಾಖ್ಯಾನಿಸಲು ನಿಮಗೆ ಗೊತ್ತಿಲ್ಲದಿದ್ದರೆ ಪ್ರಯೋಜನವಿಲ್ಲ. ಇತ್ತೀಚೆಗೆ ಕತಲಾನ್‌ನ ಕಲಾಕೃತಿ ಮತ್ತೊಮ್ಮೆ ಸುದ್ದಿಯಾಯಿತು. ಅದಕ್ಕೆ ಕಾರಣ, ಅಂದು ಈ ಆರ್ಟನ್ನು ಕೊಂಡವರೊಬ್ಬರು ಇಂದು ಅದನ್ನು ಹರಾಜು ಹಾಕಿದ್ದಾರೆ. ಹರಾಜಿನಲ್ಲಿ ಅದು 15 ದಶಲಕ್ಷ ಡಾಲರ್ (12.61 ಕೋಟಿ ರು.) ಗಳಿಸಿದೆ. ಹರಾಜಿನಲ್ಲಿ ಗೆದ್ದವನಿಗೆ ಸಿಗುವುದೇನು? ಒಂದು ಬಾಳೆಹಣ್ಣು ಮತ್ತು ಟೇಪು. ಅದೇನೂ 2019ರ ಬಾಳೆಹಣ್ಣಲ್ಲ. ಬದಲಾಗಿ ಅಂಥದೇ ಒಂದು ತಾಜಾ ಬಾಳೆಹಣ್ಣು ಮತ್ತು ಅದನ್ನು ಸ್ಥಾಪಿಸುವುದು ಹೇಗೆ ಎಂದು ವಿವರವಾಗಿ ತಿಳಿಸುವ ಕ್ಯಾಟಲಾಗ್ ಹಾಗೂ ಇದು ಒರಿಜಿನಲ್ ಕಲಾಕೃತಿ ಎಂದು ಕಲಾವಿದ ಸಹಿ ಹಾಕಿದ ಅಧಿಕೃತತೆಯ ಪತ್ರ.

ಬಾಳೆಹಣ್ಣು ಕೊಳೆತು‌ ಹೋದರೆ ಅದನ್ನು ಅಂಥದೇ ಇನ್ನೊಂದು ಬಾಳೆಹಣ್ಣಿಟ್ಟು ಬದಲಿಸುವ ಅಽಕಾರ ಅದರ ಮಾಲೀಕನದು! ಇದನ್ನೆ ನೋಡುತ್ತ ಹೋದರೆ, ಅನ್ನ ತಿನ್ನುವ ನಮ್ಮಂಥ ಸಾಮಾನ್ಯರಲ್ಲಿ ಕೆಲವು ಪ್ರಶ್ನೆಗಳಾದರೂ ಮೂಡದೇ ಇರವು. ಒಂದು ಸ್ಕೂಲಿನ ಹುಡುಗ ಗೋಡೆಗೆ ಬಾಳೆಹಣ್ಣು ಅಂಟಿಸಿದರೆ ಅದು ‘ಕಿಡಿಗೇಡಿತನ’ ಮತ್ತದಕ್ಕೆ ಶಿಕ್ಷೆಯಿದೆ. ಆದರೆ ಕಲಾಜಗತ್ತಿನಲ್ಲಿ ಇಂಥ ಕಿಡಿಗೇಡಿತನ ಬೆಲೆಬಾಳುವ ಕಲಾಕೃತಿ ಆಗುವುದು ಹೇಗೆ? ಮತ್ತು ಕಲಾ ಕೃತಿಗಳಿಗೆ ಇಷ್ಟೊಂದು ಬೆಲೆ ಯಾಕೆ? ಅದಕ್ಕಿಂತಲೂ ಮುಖ್ಯವಾದ ಪ್ರಶ್ನೆಗೆ ಬರೋಣ: ಈ ಕಲಾಕೃತಿಗೆ ಏನಾದರೂ ಅರ್ಥವಿದೆಯೆ?

ಇದನ್ನು ಮತ್ತು ಇಂಥ ಕಲಾಕೃತಿಗಳನ್ನು ‘ಪರಿಕಲ್ಪನೆಯ ಕಲಾಕೃತಿ’ (conceptual artwork) ಎಂದು ಕರೆಯ ಲಾಗುತ್ತದೆ. ಇವುಗಳಲ್ಲಿ ಮಾಡಿ ಮುಗಿಸಿದ ಉತ್ಪನ್ನಕ್ಕೆ ಬೆಲೆ ಇರುವುದಲ್ಲ. ಈ ಕಲಾಕೃತಿಯ ಹಿಂದಿರುವ ಐಡಿಯಾಗೆ ಬೆಲೆ. 60-70ರ ದಶಕದಲ್ಲಿ ಇದು ಹುಟ್ಟಿಕೊಂಡು ಜನಪ್ರಿಯವಾಯಿತು. ಇದನ್ನು ಒಂದು ಸರಳವಾದ ಉದಾಹರಣೆ ಯಿಂದ ವಿವರಿಸಬಹುದು. ಕೂಲಿಯೊಬ್ಬ ತನ್ನ ಹೆಂಡತಿಯ ಬರ್ತ್‌ಡೇಗೆ ಕೇಕ್ ತಂದುಕೊಡಬಹುದು. ಕೇಕ್‌ನ ಬೆಲೆ ಇನ್ನೂರಕ್ಕಿಂತ ಹೆಚ್ಚಿರಲಾರದು. ಅದರ ಹಿಂದಿರುವ ಪ್ರೀತಿಯೇ ಹೆಚ್ಚು ಮೌಲ್ಯವುಳ್ಳದ್ದು. ಕಲಾವಿದರು ತಮ್ಮ ಜೀವನಾನುಭವ, ಪ್ರತಿಭೆ, ಒಳನೋಟಗಳು ಎಲ್ಲವನ್ನೂ ಒರೆಗೆ ಹಚ್ಚಿ ಕಲಾಕೃತಿಯೊಂದನ್ನು ಸೃಷ್ಟಿಸುತ್ತಾರೆ.

ಅದರ ಹಿಂದಿರುವ ಐಡಿಯಾ ಏನೆಂದು ತಿಳಿದುಕೊಳ್ಳಬೇಕು. ಅದು ಹೆಚ್ಚು ಮೌಲ್ಯವುಳ್ಳದ್ದು. ವಾಸ್ತವವಾಗಿ ಇಂದಿನ ಕಲಾಜಗತ್ತು ಚಿತ್ರವಿಚಿತ್ರವಾದ, ಸಾಮಾನ್ಯರು ಅರ್ಥಮಾಡಿಕೊಳ್ಳಲು ಕಷ್ಟವಾಗುವ, ಕಲಾವಿದ್ವಾಂಸರಿಗೆ ಮಾತ್ರ ತಿಳಿಯಬಹುದಾದ ಪರಿಕಲ್ಪನೆಗಳಿಂದ ತುಂಬಿ ಹೋಗಿದೆ. ಇವರು ಕಲಾಕೃತಿಗೆ ನೀಡುವ ವಿವರಣೆಗಳೂ ಅಷ್ಟೇ
ಜಟಿಲವಾಗಿರುತ್ತವೆ. “ಇದೊಂದು ಕಲಾಕೃತಿಯೇ ಅಲ್ಲ” ಎಂದವರಿದ್ದಂತೆ, “ಇದೊಂದು ಜೀನಿಯಸ್ ವರ್ಕ್” ಎಂದವರಿದ್ದಾರೆ.

ಇದು ಆಧುನಿಕ ವಾಣಿಜ್ಯ ಜಗತ್ತಿನ ಪ್ರತಿಬಿಂಬ, ವ್ಯಾಪಾರಮಯ ಜಗತ್ತಿನ ಟೀಕು ಎಂದು ವ್ಯಾಖ್ಯಾನಿಸಿದ್ದಾರೆ. “ಇದು
ಒಂದು ಬಾಳೆಹಣ್ಣಿನ ನೈಜಬೆಲೆ ತಿಳಿಯದ ಶ್ರೀಮಂತರಿಗೆ ಮಾಡಿದ ವಿಡಂಬನೆ” ಎಂಬುದು ಇನ್ನೊಬ್ಬರ ವ್ಯಾಖ್ಯಾನ. “ಈ ಕಲಾಕೃತಿಗೆ ಸಿಕ್ಕಿರುವ ಹೈಪ್, ನಮ್ಮ ಇಂದಿನ ಕಲಾಜಗತ್ತಿನ ಬಗ್ಗೆಯೇ ಒಂದು ಒಳನೋಟವನ್ನು ಕೊಡು ವಂಥದ್ದು. ಒಂದು ಕಾಲದ ಸಂಸ್ಕೃತಿಯು ತನ್ನ ಕಾಲದ ಕಲಾಕೃತಿಗಳನ್ನು ಹೇಗೆ ಅರ್ಥ ಮಾಡಿಕೊಳ್ಳುತ್ತದೆ, ವ್ಯಾಖ್ಯಾನಿಸುತ್ತದೆ ಹಾಗೂ ಅದಕ್ಕೆ ಮುಖಾಮುಖಿಯಾಗುತ್ತದೆ ಎಂಬುದರ ಕಾಮೆಂಟರಿ ಇದು” ಎಂಬುದು
ಇನ್ನೊಂದು ವಿವರಣೆ. ಆದರೆ ಸ್ವತಃ ಕತಲಾನ್ ಇದರ ಬಗ್ಗೆ ಏನೂ ಹೇಳಿಲ್ಲ!

ಇದನ್ನು ಇನ್ನೊಂದು ರೀತಿ ವಿವರಿಸಿದವರೂ ಇದ್ದಾರೆ. “ಇದು ಚಕ್ರವರ್ತಿಯ ಹೊಸಬಟ್ಟೆಯ ಕತೆಯಿದ್ದಂತೆ. ಚಕ್ರವರ್ತಿ ಹೊಸಬಟ್ಟೆ ಧರಿಸಿದ್ದಾನೆ ಎಂದು ದರ್ಜಿ ಎಲ್ಲರನ್ನೂ ನಂಬಿಸುತ್ತಾನೆ. ಆದರೆ ಒಂದು ಮಗುವಿನ ಕಣ್ಣನ್ನು ಹಾಗೆ ಮೋಸ ಮಾಡಲಾಗುವುದಿಲ್ಲ. ಈ ಕಲಾಕೃತಿ, ನಮ್ಮ ಕಲಾಜಗತ್ತಿನ ಚಕ್ರವರ್ತಿಗೆ ಬಟ್ಟೆಯಿಲ್ಲ ಎಂದು ಬಯಲು ಮಾಡಿದೆ” ಎಂದಿzರೆ. ಅಂದರೆ, ಇಲ್ಲಿ ಮೌಲ್ಯವಿಲ್ಲದೇ ಕೆಲವು ಕೃತಿಗಳು ದುಬಾರಿ ಬೆಲೆ ಪಡೆಯುವುದು, ನಿಜಕ್ಕೂ ಅರ್ಥವಿಲ್ಲದ್ದು ಎಂದು ಅರ್ಥವಿಲ್ಲದ ಒಂದು ಕೃತಿಯ ಮೂಲಕವೇ ಹೇಳಲಾಗಿದೆ ಎಂದರ್ಥ!

ಇನ್ನೊಂದು ಪ್ರಶ್ನೆ ಮೂಡುತ್ತದೆ. ಹಾಗಾದರೆ, ಒಬ್ಬ ಕುರ್ಚಿ ಮಾಡುವವನು, ಚಪ್ಪಲಿ ಹೊಲಿಯುವವನು- ಇವರು
ಕಲಾವಿದರಲ್ಲವೇ? ಇವರೂ ಪ್ರೀತಿ ಹಾಗೂ ಪರಿಶ್ರಮದಿಂದಲೇ ತಮ್ಮ ಉತ್ಪನ್ನಗಳನ್ನು ಸಿದ್ಧ ಮಾಡುತ್ತಾರೆ. ಆದರೆ ಇವರಿಗೆ ಸಿಗುವ ಬೆಲೆಯೇನು? ಇದು ಅನ್ಯಾಯವಲ್ಲವೇ? ಈ ಪ್ರಶ್ನೆ ಮುಖ್ಯವಾಗಲು ಇನ್ನೊಂದು ಕಾರಣವಿದೆ. ಇದೇ ‘ಕಾಮೆಡಿಯನ್’ ಕಲಾಕೃತಿಯ ಜನಪ್ರಿಯತೆ ಹಾಗೂ ಭಾರಿ ಬೆಲೆ ಮತ್ತು ತಮಗೆ ಸಿಗುತ್ತಿರುವ ಅಲ್ಪ ಸಂಬಳದ ಪ್ರಶ್ನೆ ಯನ್ನು ಮುಂದಿಟ್ಟುಕೊಂಡು ಮಿಯಾಮಿಯ ಸ್ವಚ್ಛತಾ ಸಿಬ್ಬಂದಿ ಒಂದು ಪ್ರತಿಭಟನೆ ಹಮ್ಮಿಕೊಂಡರು.

“ಕಾಮೆಡಿಯನ್‌ಗೆ ಸಿಕ್ಕ ಬೆಲೆಯ ಸಾವಿರದ ಒಂದನೇ ಪಾಲು ಕೂಡ ನಮ್ಮ ಸೇವೆಗೆ ಸಿಗುತ್ತಿಲ್ಲ ಯಾಕೆ? ನಮಗೇಕೆ ಸಂಬಳ ಹೆಚ್ಚಿಸುತ್ತಿಲ್ಲ, ನಮಗೊಂದು ನ್ಯಾಯ, ನಿಮಗೊಂದು ನ್ಯಾಯವೇ?” ಎಂದು ಪ್ರಶ್ನಿಸಿದರು. ಪ್ರತಿಭಟನ ಕಾರರು ತಮ್ಮ ಎದೆಯ ಮುಂದೆ ಬಾಳೆಹಣ್ಣುಗಳನ್ನು ಅಂಟಿಸಿಕೊಂಡಿದ್ದರು. ಅದು ಕಲಾಜಗತ್ತಿನ ಕಪಾಳಕ್ಕೆ ಬಾರಿಸಿದಂತಿತ್ತು. ಈಗ ಇದನ್ನೂ ಒಂದು ಕಲಾಕೃತಿ ಎಂದು ನೋಡೋಣವೇ? ಅಥವಾ ಶ್ರೀಮಂತ ಕಲಾಕೃತಿಗಳ ನಡುವೆಯೇ ಸಾಗಿರುವ ಸೌಲಭ್ಯವಂಚಿತರ ಸುಡುಬಾಳಿನ ಜ್ವಲಂತ ನಿದರ್ಶನವೆಂತಲೇ? ಸದ್ಯಕ್ಕೆ ಈ ಪ್ರಶ್ನೆಗೆ ಉತ್ತರವಿಲ್ಲ. ಅಥವಾ ಇರಲೂಬಹುದು. ನನಗೆ ಗೊತ್ತಿಲ್ಲ. ನಿಮಗೆ ಗೊತ್ತಿದ್ದರೆ ಹೇಳಿ.

ಇದನ್ನೂ ಓದಿ: Harish Kera Column: ಬಟ್ಟೆ ಹೇಗಿದ್ದರೂ ಪರವಾಗಿಲ್ಲ, ನಡೆಯಿರಿ !