Saturday, 14th December 2024

ಹೆರಾಲ್ಡ್ ಇವಾನ್ಸ್ ಎಂಬ ಸಂಪಾದಕರ ಸಂಪಾದಕ !

ಇದೇ ಅಂತರಂಗ ಸುದ್ದಿ
ವಿಶ್ವೇಶ್ವರ ಭಟ್

ತಮ್ಮ ಜೀವಿತ ಕಾಲದಲ್ಲೇ ’ಎಲ್ಲಾ ಕಾಲಕ್ಕೂ ಸಲ್ಲುವ ಅತ್ಯುತ್ಕೃಷ್ಟ ಸಂಪಾದಕ’ ಎಂಬ ವಿಶೇಷ ಗೌರವಕ್ಕೆ ಪಾತ್ರರಾಗಿದ್ದ ಬ್ರಿಟಿಷ್-ಅಮೆರಿಕನ್ ಸಂಪಾದಕ ಹೆರಾಲ್ಡ್ ಇವಾನ್ಸ್ ಇತ್ತೀಚೆಗೆ (ತಮ್ಮ ತೊಂಬತ್ತೆರಡನೇ ವಯಸ್ಸಿನಲ್ಲಿ) ನಿಧನರಾದಾಗ, ನಾನು ಅವರ ಬಗ್ಗೆೆ ’ಬೆನ್ನುಮೂಳೆಯಿದ್ದ ಸಂಪಾದಕನ ನಿಧನ’ ಎಂಬ ಶೀರ್ಷಿಕೆಯಲ್ಲಿ ಅವರ ಬಗ್ಗೆ ಬರೆದಿದ್ದೆ. ಜಗತ್ತಿನ ಪ್ರಮುಖ ಪತ್ರಿಕೆಗಳೆಲ್ಲ, ಅದರಲ್ಲೂ ವಿಶೇಷವಾಗಿ ಅಮೆರಿಕ ಮತ್ತು ಬ್ರಿಟನ್ನಿನ ಪತ್ರಿಕೆಗಳು ಅವರ ಬಗ್ಗೆ ಪುಟಗಟ್ಟಲೆ ಲೇಖನ ಬರೆದವು. ಇತ್ತೀಚಿನ ವರ್ಷಗಳಲ್ಲಿ ಒಬ್ಬ ಸಂಪಾದಕನ ಸಾವು ಇಷ್ಟೊಂದು ಸುದ್ದಿಯಾಗಿರಲಿಲ್ಲ.

ಮೂಲತಃ ಪತ್ರಕರ್ತರಾಗಿದ್ದ, ಬ್ರಿಟನ್ನಿನ ಪ್ರಧಾನಿ ಬೋರಿಸ್ ಜಾನ್ಸನ್, ಪತ್ರಿಕೋದ್ಯಮಕ್ಕೆ ಹೆರಾಲ್ಡ್ ಇವಾನ್ಸ್ ನೀಡಿದ ಕೊಡುಗೆಯನ್ನು ನೆನಪು ಮಾಡಿಕೊಂಡರು. ಭಾರತದ ಬಹುತೇಕ ಎಲ್ಲಾ ಇಂಗ್ಲಿಷ್ ಪತ್ರಿಕೆಗಳೂ, ’ಹ್ಯಾರಿ’ ಎಂದೇ ಪ್ರೀತಿಯಿಂದ ಕರೆಯಿಸಿಕೊಂಡಿದ್ದ ಹೆರಾಲ್ಡ್ ಇವಾನ್ಸ್ ನಿಧನ ಸುದ್ದಿಯನ್ನು ಪ್ರಕಟಿಸಿದ್ದವು. ಆದರೆ ಕೋಲ್ಕತಾದಿಂದ ಪ್ರಕಟವಾಗುವ ’ದಿ ಟೆಲಿಗ್ರಾಫ್’ ಪತ್ರಿಕೆಯನ್ನು ಬಿಟ್ಟರೆ, ಬೇರೆ ಯಾವ ಪತ್ರಿಕೆಗಳೂ ಅದನ್ನು ಮುಖಪುಟ ಸುದ್ದಿಯನ್ನಾಗಿ ಮಾಡಿರಲಿಲ್ಲ ಮತ್ತು ಪರಿಣತ ಪತ್ರಕರ್ತ ಅಥವಾ ಸಂಪಾದಕರಿಂದ ವಿಶೇಷ ಲೇಖನ ಬರೆಯಿಸಲಿಲ್ಲ. ’ದಿ ಟೆಲಿಗ್ರಾಫ್’ ಪತ್ರಿಕೆಯ ಲಂಡನ್ ವರದಿಗಾರ, ಹೆರಾಲ್ಡ್ ಇವಾನ್ಸ್ ಬಗ್ಗೆ ವಿಸ್ತಾರವಾಗಿ ಬರೆದಿದ್ದರು. ಬಹುತೇಕ ಪತ್ರಿಕೆಗಳು ರಾಯಿಟರ್ಸ್ ಮತ್ತಿತರ ಸುದ್ದಿ ಸಂಸ್ಥೆ ಕಳುಹಿಸಿದ ವರದಿಯನ್ನು ಹಾಕಿಕೊಂಡಿದ್ದವು.

ಕೇರಳದಿಂದ ಪ್ರಕಟವಾಗುವ ’ದಿ ವೀಕ್’ ನಿಯತಕಾಲಿಕ ಮಾತ್ರ, ಅದರ ಸಹೋದರ ದೈನಿಕ ’ಮಲಯಾಳ ಮನೋರಮಾ’ದ ವ್ಯವಸ್ಥಾಪಕ ಸಂಪಾದಕರು ಬರೆದ (ಲೇಖನದ ಶೀರ್ಷಿಕೆ – The Editor of all Times’) ಲೇಖನವನ್ನು ನಾಲ್ಕು ಪುಟಗಳಲ್ಲಿ ಪ್ರಕಟಿಸಿ, ಆ ಶ್ರೇಷ್ಠ ಸಂಪಾದಕನಿಗೆ ಯಥೋಚಿತ ಅಕ್ಷರ ನಮನ ಸಲ್ಲಿಸಿತು.

ಹೆರಾಲ್ಡ್ ಇವಾನ್ಸ್ ಲಂಡನ್‌ನ ಪ್ರತಿಷ್ಠಿತ ’ದಿ ಸಂಡೇ ಟೈಮ್ಸ್’ ಪತ್ರಿಕೆಗೆ ಹದಿನಾಲ್ಕು ವರ್ಷ ಮತ್ತು ’ದಿ ಟೈಮ್ಸ್’ ದೈನಿಕಕ್ಕೆ ಒಂದು
ವರ್ಷ ಸಂಪಾದಕರಾಗಿದ್ದರು. ’ಮಾಧ್ಯಮ ದೊರೆ’ ರೂಪರ್ಟ್ ಮುರ್ಡೋಕ್ ’ದಿ ಟೈಮ್ಸ್’ ದೈನಿಕವನ್ನು ಖರೀದಿಸಿದಾಗ, ತನ್ನ
ಆಣತಿಯಂತೆ ಸಂಪಾದಕೀಯ ನಿಲುವನ್ನು ಮಾರ್ಪಡಿಸಲು ಇವಾನ್ಸ್ ಮೇಲೆ ಒತ್ತಡ ಹೇರಲಾರಂಭಿಸಿದಾಗ, ಸಂಪಾದಕ ಮತ್ತು ಮಾಲೀಕರ ನಡುವೆ ತಿಕ್ಕಾಟ ಆರಂಭವಾಯಿತು. ಸಾಮಾನ್ಯವಾಗಿ ಇಂಥ ಸಂದರ್ಭದಲ್ಲಿ ಯಾವತ್ತೂ ಸೋಲುವವರು
ಸಂಪಾದಕರೇ. ಯಾಕೆಂದರೆ ಬಾಸ್ ಯಾವತ್ತೂ ಸಾರ್ವಭೌಮನೇ !

ಆದರೆ ಹೆರಾಲ್ಡ್ ಇವಾನ್ಸ್ ತೀರಿಕೊಂಡಾಗ, ಅದೇ ’ದಿ ಟೈಮ್ಸ್’ ದೈನಿಕ ತನ್ನ ಒಂದು ಕಾಲದ ’ಸೆಲಿಬ್ರಿಟಿ ಸಂಪಾದಕ’ ನನ್ನು ಮರೆಯಲಿಲ್ಲ. ಇವಾನ್ಸ್ ಬಗ್ಗೆ ಎರಡು ಪುಟಗಳ ಲೇಖನ ಬರೆದು ಅಕ್ಷರ ಶ್ರದ್ದಾಂಜಲಿ ಸಲ್ಲಿಸಿ, ಹೃದಯ ವೈಶಾಲ್ಯ ಮೆರೆಯಿತು. ಬ್ರಿಟನ್ನಿನ ಎಲ್ಲಾ ಪತ್ರಿಕೆಗಳೂ ಧಾರಾಳತನ ಮೆರೆದವು. ’ದಿ ಗಾರ್ಡಿಯನ್’ ಸೇರಿದಂತೆ ಪ್ರಮುಖ ಪತ್ರಿಕೆಗಳು ಹಿರಿಯ ಸಂಪಾದಕ ರಿಂದ ವಿಶೇಷ ಲೇಖನ ಬರೆಯಿಸಿದವು.

’ಗಾರ್ಡಿಯನ್’ ಮಾಜಿ ಸಂಪಾದಕ ಅಲನ್ ರಸ್ಬ್ರಿಜರ್ ಎಲ್ಲಾ ಕಾಲಕ್ಕೂ ಸಲ್ಲುವ, ಅತ್ಯುತ್ತಮ obituary (Harold Evans taught us what journalism at its best can achieve) ಬರೆದರು. ಅವರು ಕೊನೆಯಲ್ಲಿ ಬರೆದ ಈ ವಾಕ್ಯವೊಂದೇ ಹೆರಾಲ್ಡ್ ಇವಾನ್ಸ್ ವ್ಯಕ್ತಿತ್ವವನ್ನು ಕಟ್ಟಿಕೊಡುತ್ತದೆ – Harold Evans knew why journalism mattered. He gave journalism a good name. He reminded us why we wanted to be journalists and what, at its best, journalism could & and should & be. None of us should forget that.. ಹೆರಾಲ್ಡ್ ಇವಾನ್ಸ್ ಪರಿಪೂರ್ಣ ಸಂಪಾದಕ ಎಂದು ಕರೆಯಿಸಿಕೊಂಡಿದರು. ಅವರು ಸುದ್ದಿ ಮನೆಯ ಎಲ್ಲಾ ವಿಭಾಗಗಳಲ್ಲಿ ಪರಿಣತಿ ಹೊಂದಿದ್ದರು. ಅವರ ಬರಹಕ್ಕೆ ಆಯಸ್ಕಾಂತೀಯ ಗುಣವಿತ್ತು. ಚೆಂದವಾಗಿ ಎಡಿಟ್ ಮಾಡುತ್ತಿದ್ದರು. ಅವರಿಗೆ ಆಕರ್ಷಕ ಪುಟ ವಿನ್ಯಾಸ ಸಿದ್ಧಿಸಿತ್ತು. ಮೋಹಕ ಹೆಡ್ ಲೈನ್ ಕೊಡುತ್ತಿದ್ದರು. ಸ್ವತಃ ಫೋಟೋಗಳನ್ನು ಕ್ರಾಪ್ ಮಾಡು ತ್ತಿದ್ದರು.

ಪತ್ರಿಕೆಗೆ ಯಾರಿಂದ ಬರೆಯಿಸಬೇಕೆಂಬುದು ಅವರಿಗೆ ಗೊತ್ತಿತ್ತು. ಗಣ್ಯಮಾನ್ಯ ವ್ಯಕ್ತಿಗಳು, ಸಾಹಿತಿಗಳ, ಅಧಿಕಾರಸ್ಥರ ನಿಕಟ
ಸಂಪರ್ಕವಿತ್ತು. ಪತ್ರಿಕೆಯನ್ನು ಸಮೃದ್ಧಗೊಳಿಸಲು ಬೇಕಾದ ನಾಯಕತ್ವ ಅವರಿಗಿತ್ತು. ಒಬ್ಬ ಸಂಪಾದಕನಾದವನು ಹೇಗೆ
ಸಮರ್ಥ ನಾಯಕನಾಗಬಲ್ಲ ಎಂಬುದನ್ನು ಅವರು ತೋರಿಸಿಕೊಟ್ಟರು. ಭಾವಿ ಮತ್ತು ಹಾಲಿ ಪತ್ರಕರ್ತರಿಗೆ ಮಾದರಿಯಾಗುವ
ವ್ಯಕ್ತಿತ್ವ ಅವರದಾಗಿತ್ತು. ಅವರನ್ನು ’ಪಠ್ಯ-ಪುಸ್ತಕಕ್ಕೆ ಆದರ್ಶವಾಗುವ ಸಂಪಾದಕ’ ಎಂದು ಅವರ ಜೀವಿತ ಕಾಲದಲ್ಲೇ ಬಣ್ಣಿಸು ತ್ತಿದ್ದರು.

ಹೆರಾಲ್ಡ್ ಇವಾನ್ಸ್ ನಿಧನರಾದಾಗ ಕೆಲವು ಪತ್ರಿಕೆಗಳು ನೀಡಿದ ಹೆಡ್ ಲೈನ್ ಗಳನ್ನು ನೋಡಿದರೆ, ಅವರದೆಂಥ ವ್ಯಕ್ತಿತ್ವ
ಎಂಬುದು ಗೊತ್ತಾಗುತ್ತದೆ. ಕೆಲವು ಶೀರ್ಷಿಕೆಗಳು – Sir Harold Evans, 1928&2020, set the Gold standard for Journalism (ರಾಯಿಟರ್ಸ್), Colossus who humbled the mighty (ಡೈಲಿ ಮೇಲ್), The Greatest (ದಿ ನಾರ್ಥರ್ನ್ ಎಕೋ), Sir Harold Evans, trail&blazing newspaper editor, dies at 92  (ದಿ ಗಾರ್ಡಿಯನ್) The Extraordinary Editor dies (ದಿ ನ್ಯೂಯಾರ್ಕರ್), Harold Evans crusading editor no more (ನ್ಯೂಯಾರ್ಕ್ ಟೈಮ್ಸ್), Harold Evans : The who puts down his pen (ಖಲೀಜ್ ಟೈಮ್ಸ್), Crusading editor on both sides of the Atlantic (ವಾಷಿಂಗ್ಟನ್ ಈಜಿಪ್ಟ್) Harold Evans, editor with a backbone, dies (ದಿ ಟೆಲಿಗ್ರಾಫ್) ಇತ್ಯಾದಿ.

ಮಹಾನ್ ವ್ಯಕ್ತಿಗಳೆನಿಸಿಕೊಂಡವರು ತಮಗಾಗಿ ಬದುಕುವುದಿಲ್ಲ. ಅವರು ಇಡೀ ಸಮಾಜವನ್ನು ಆವರಿಸಿಕೊಳ್ಳುತ್ತಾರೆ. ತಮ್ಮ ವೃತ್ತಿಯ ಗರಿಮೆಯನ್ನು ಎತ್ತಿ ಹಿಡಿಯುತ್ತಾರೆ. ಇವಾನ್ಸ್ ಅಂಥ ಸಂಪಾದಕರಾಗಿದ್ದರು. ಅವರು ’ಸಂಪಾದಕರ ಸಂಪಾದಕ’
ಎಂದು ಕರೆಯಿಸಿಕೊಂಡಿದ್ದು ಈ ಕಾರಣಗಳಿಂದ. ತಮ್ಮ ಏಳು ದಶಕಗಳ ವೃತ್ತಿ ಜೀವನದಲ್ಲಿ ಬ್ರಿಟನ್ ಮತ್ತು ಅಮೆರಿಕವನ್ನು
ಕಾರ್ಯಕ್ಷೇತ್ರಗಳಾಗಿಸಿಕೊಂಡಿದ್ದ ಅವರು, ಎರಡೂ ಕಡೆ ಅಳಿಸಲಾಗದ ಪಡಿಯಚ್ಚನ್ನು ಮೂಡಿಸಿದ್ದು ವಿಶೇಷ.

ಜಸ್ವಂತ್ ಸಿಂಗ್ – ಯಶವಂತ್ ಸಿನ್ಹಾ ಜಸ್ವಂತ್ ಸಿಂಗ್ ನಿಧನರಾದರಂತೆ ಎಂದಾಗ, ಯಾಕೋ ನನ್ನ ಮುಂದೆ ತಕ್ಷಣ ಬಂದವರು ಯಶವಂತ್ ಸಿನ್ಹಾ. ಜಸ್ವಂತ್ ಮತ್ತು ಯಶವಂತ್ ಈ ಎರಡೂ ಹೆಸರುಗಳಿಗೆ ಸಾಮ್ಯತೆಯಿದೆ. ಕೇಳಲು ಒಂದೇ ರೀತಿ ಎನಿಸುತ್ತದೆ. ಇದನ್ನು Phonetically Similar Names ಅಂತಾರೆ. ಅದೇ ರೀತಿ ಸಿಂಗ್ ಮತ್ತು ಸಿನ್ಹಾ. ಇದು ನನ್ನದೊಬ್ಬನದೇ ಸಮಸ್ಯೆೆ ಯಿದ್ದಿರಬಹುದು ಅಂದುಕೊಂಡಿದ್ದೆ.

ಆದರೆ ಮೊನ್ನೆ ಜಸ್ವಂತ್ ಸಿಂಗ್ ನಿಧನರಾದ ದಿನ, ತೀರಿ ಹೋದವರು ಯಶವಂತ್ ಸಿನ್ಹಾ ಎಂದು ಅನೇಕರು ಭಾವಿಸಿದ್ದರಂತೆ. ಅವರೆಲ್ಲ ಸಿನ್ಹಾ ಮನೆಗೆ ಫೋನ್ ಮಾಡಿ, ಶ್ರದ್ದಾಂಜಲಿ ಹೇಳಿದರಂತೆ. ಟಿವಿ ಕೆಮರಾಮನ್ ಗಳು ಸಿನ್ಹಾ ಮನೆಗೆ ಆಗಮಿಸಿದ್ದರಂತೆ. ಒಬ್ಬ ಟಿವಿ ವರದಿಗಾರ, ’ಜಸ್ವಂತ್ ಸಿನ್ಹಾ ನಿಧನರಾಗಿದ್ದಾರೆ’ ಎಂದು ಹೇಳಿದನಂತೆ. ಹೀಗೆಂದು ಸ್ವತಃ ಯಶವಂತ್ ಸಿನ್ಹಾ ಅವರೇ ಬರೆದುಕೊಂಡಿದ್ದಾರೆ.

ಇದು ಮೊನ್ನೆಯ ಘಟನೆಯೊಂದೇ ಅಲ್ಲ. ಹಿಂದೆಯೂ ಅನೇಕ ಬಾರಿ, ಇಂಥ ಅನುಭವ ಯಶವಂತ್ ಸಿನ್ಹಾ ಅವರಿಗೆ ಆಗಿದೆ ಯಂತೆ. ಒಮ್ಮೆ, ರಾಮಕೃಷ್ಣ ಹೆಗಡೆಯವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾಗ, ಪ್ರತಿಪಕ್ಷಗಳ ನಾಯಕರ ಸಭೆಯನ್ನು ದಿಲ್ಲಿಯ ಕರ್ನಾಟಕ ಭವನದಲ್ಲಿ ಕರೆದಿದ್ದರಂತೆ. ಅದರಲ್ಲಿ ಪಾಲ್ಗೊಳ್ಳುವಂತೆ ಯಶವಂತ್ ಸಿನ್ಹಾ ಅವರಿಗೂ ಆಹ್ವಾನ ಬಂದಿತ್ತಂತೆ. ಆಗ ಸಿನ್ಹಾ ಹೆಗಡೆಯವರ ಜನತಾ ಪಕ್ಷದಲ್ಲಿಯೇ ಇದ್ದರು. ಕರ್ನಾಟಕ ಭವನ ತಲುಪಿದ ಕೆಲ ಕ್ಷಣಗಳಲ್ಲಿ  ಯಶವಂತ್ ಸಿನ್ಹಾಗೆ, ಹೆಗಡೆಯವರ ಗೊಂದಲ ಅರಿವಿಗೆ ಬಂದಿತು. ಅವರು ಜಸ್ವಂತ್ ಸಿಂಗ್ ಅವರನ್ನು ಆಹ್ವಾನಿಸುವ ಬದಲು ಯಶವಂತ್ ಸಿನ್ಹಾರನ್ನು ಕರೆದಿದ್ದರು.

ಸಭೆ ಆರಂಭಕ್ಕೆ ತುಸು ಮುನ್ನ, ’ಜಸ್ವಂತ್ ಸಿಂಗ್ ಇನ್ನೂ ಬಂದಿಲ್ಲವಲ್ಲ, ಅವರು ಬರುವ ತನಕ ಕಾಯೋಣವಾ?’ ಎಂದು ಹೆಗಡೆ ಯವರು ಹೇಳುತ್ತಿದ್ದರಂತೆ. ತಮ್ಮದೇ ಪಕ್ಷದ ಯಶವಂತ್ ಸಿನ್ಹಾರನ್ನು ಕರೆಯದಿದ್ದರೂ ಈ ಸಭೆಗೆ ಯಾಕೆ ಬಂದಿರಬಹುದು ಎಂದು ಹೆಗಡೆಯವರು ಅಂದುಕೊಂಡಿದ್ದಿರಲೂ ಬಹುದು. ಜಸ್ವಂತ್ ಸಿಂಗ್ ಮತ್ತು ಯಶವಂತ್ ಸಿನ್ಹಾ ಇಬ್ಬರೂ ವಾಜಪೇಯಿ ಸರಕಾರದಲ್ಲಿ ಮಂತ್ರಿಗಳಾಗಿದ್ದವರು. ಅನೇಕ ಸಂದರ್ಭಗಳಲ್ಲಿ ಒಬ್ಬರನ್ನು ಕರೆಯಲು ಹೋಗಿ ಇನ್ನೊಬ್ಬರು ಬಂದಿದ್ದಿದೆ. ಅದು ಜಸ್ವಂತ್ ಸಿಂಗ್ ನಿಧನದಲ್ಲೂ ಪುನರಾವರ್ತನೆಯಾಯಿತು.

ಕೇಳಲು ಒಂದೇ ರೀತಿಯ ಹೆಸರುಗಳು! ಕೇಳಲು ಒಂದೇ ರೀತಿಯಿರುವ ಹೆಸರುಗಳಿಗೆ ಇಂಗ್ಲೀಷಿನಲ್ಲಿ Phonetically Similar Names ಅಥವಾ homophones ಎಂದು ಕರೆಯುತ್ತಾರೆ. Taylor ಮತ್ತು Tailor ಹೆಸರುಗಳು ಬೇರೆ ಬೇರೆ. ಆದರೆ ಒಂದೇ ರೀತಿ
ಕೇಳಿಸುತ್ತವೆ. ಅದೇ ರೀತಿ Wight ಮತ್ತು White ಹಾಗೂ Meyer ಮತ್ತು Meier. ಇಂಥದೇ ಇನ್ನೂ ಕೆಲವು ಹೆಸರುಗಳಿವೆ. ಅವು ಯಾವವೆಂದರೆ, Hugh/Huw, John/ Jhon, Lee/Leigh, Dianne/Dyan, Aimee/ Amy, Wheelar/Wealer  ಇತ್ಯಾದಿ.

ಇವು ಸೃಷ್ಟಿಸುವ ಅವಾಂತರಗಳು ಒಂದೆರಡಲ್ಲ. ಒಬ್ಬರನ್ನು ಕರೆದರೆ, ಇನ್ನೊಬ್ಬರು ಓಗೊಡಬಹುದು ಅಥವಾ ಇಬ್ಬರೂ
ಓಗೊಡದಿರಲೂಬಹುದು. ಕೇಳಿದರೆ, ನೀವು ಅವನನ್ನು ಕರೆದಿರಬಹುದು ಎಂದು ನಾನು ಸುಮ್ಮನಿದ್ದೆ ಎಂದು ಇಬ್ಬರೂ
ಹೇಳಬಹುದು. ಹಾಗೆ ನೋಡಿದರೆ, ಇಬ್ಬರೂ ಸರಿಯೇ. ಅಮೆರಿಕದ ವಿದೇಶಾಂಗ ಖಾತೆ ಅಧಿಕಾರಿ ವಿಲಿಯಮ್ ಹರ್ಟ್ ಮತ್ತು ಖ್ಯಾತ ಕಿರುತೆರೆ ನಟ ಜಾನ್ ಹರ್ಟ್ ಹೆಸರುಗಳು ಅನೇಕ ಸಲ ಗೊಂದಲಕ್ಕೆ ಕಾರಣವಾಗಿದ್ದಿದೆ. ಅದೇ ರೀತಿ ಎಮ್ಮಾ ವಾಟ್ಸನ್ ಮತ್ತು ಎಮಿಲಿ ವಾಟ್ಸನ್ ಅವರ ಹೆಸರುಗಳೂ ಅನೇಕ ಸಲ ಗೊಂದಲಕ್ಕೆ ಕಾರಣವಾಗಿದ್ದುಂಟು.

ಇನ್ನು ಕೆಲವು ಸಲ ಒಬ್ಬರ ಹೆಸರೇ ಎರಡೆರಡು ಸಲ ಬಂದು ಗೊಂದಲ ಸೃಷ್ಟಿಸುವುದುಂಟು. ಉದಾಹರಣೆಗೆ, ಈಜಿಪ್ಟ್
ಮೂಲದ ಅಮೆರಿಕನ್ ನಟ ಮತ್ತು ಕಾಮಿಡಿಯನ್ ಅಹ್ಮದ್ ಅಹ್ಮದ್, ವಿಶ್ವಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ
ಬೌಟ್ರೋಸ್ ಬೌಟ್ರೋಸ್ ಘಾಲಿ, ಲೆಬನಾನಿನ ಖ್ಯಾತ ನಟ ಫಾರೆಸ್ ಫಾರೆಸ್, ರಾಬರ್ಟ್ ಎಫ್. ಕೆನಡಿ ಹಂತಕ, ಉಗ್ರಗಾಮಿ ಸಿರ್ಹಾನ್ ಸಿರ್ಹಾನ್, ಅಫ್ಘನ್ ನಾಯಕ ಅಬ್ದುಲ್ಲಾಹ್ ಅಬ್ದುಲ್ಲಾಹ್, ಮೈಕ್ರೋನೇಶಿಯಾ ಉಪಾಧ್ಯಕ್ಷ ಅಲಿಕ್ ಅಲಿಕ್, ಖ್ಯಾತ ಬಾಸ್ಕೆಟ್ ಬಾಲ್ ಆಟಗಾರ ಬೋಲ್ ಬೋಲ್ , ಭಾರತದ ವೆಯಿಟ್ ಲಿಫ್ಟರ್ ಸುನೈನಾ ಸುನೈನಾ ಇತ್ಯಾದಿ.

ಆಂಧ್ರದಲ್ಲಿ ಅಕ್ಕಿನೇನಿ ಎಂಬ ಹೆಸರಿಟ್ಟುಕೊಂಡಿರುವವರು ಕನಿಷ್ಠ ಒಂದು ಸಾವಿರ ಮಂದಿ ಸಿಗಬಹುದು. ಪ್ರಸಿದ್ಧ ತೆಲುಗು
ನಟ ನಾಗೇಶ್ವರ ರಾವ್ ಅವರಿಂದ ಅಕ್ಕಿನೇನಿ ಜನಪ್ರಿಯವಾಯಿತು. ಅದಾದ ಬಳಿಕ ಅನೇಕ ಮಂದಿ ತಮ್ಮ ಹೆಸರಿನ ಜತೆಗೆ
’ಅಕ್ಕಿನೇನಿ’ಯನ್ನು ಸೇರಿಸಿ, ಗೊಂದಲಕ್ಕೆ ಕಾರಣರಾಗಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಅಕ್ಕಿನೇನಿ ಎಂಬ ಹೆಸರಿಂದ ಆರಂಭ ವಾಗುವ ಹೆಸರುಗಳನ್ನು ನೋಡಿ : ಅಕ್ಕಿನೇನಿ ಲಕ್ಷ್ಮಿ ವರ ಪ್ರಸಾದ ರಾವ್, ಅಕ್ಕಿನೇನಿ ರಮೇಶ ಪ್ರಸಾದ ರಾವ್, ಅಕ್ಕಿನೇನಿ
ಶಂಕರ ಪ್ರಸಾದ ರಾವ್, ಅಕ್ಕಿನೇನಿ ಕುಟುಂಬ ರಾವ್, ಅಕ್ಕಿನೇನಿ ನಾಗಾರ್ಜುನ, ಅಕ್ಕಿನೇನಿ ಅಮಲಾ, ಅಕ್ಕಿನೇನಿ ನಾಗ ಚೈತನ್ಯ,
ಸಮಂತಾ ಅಕ್ಕಿನೇನಿ ಅಕ್ಕಿನೇನಿ ಅಖಿಲ್ …

’ಕ್ಷೇತ್ರ’ ಪರಿಚಯ !
ಜಸ್ವಂತ್ ಸಿಂಗ್ ಅವರಿಗೆ ಒಂದು ವಿಚಿತ್ರ ಖಯಾಲಿಯಿತ್ತು. ಸಂಸತ್ ಸದಸ್ಯರನ್ನು ಕಂಡಾಗ ಅವರ ಹೆಸರಿನ ಬದಲು, ಅವರ
ಲೋಕಸಭಾ ಕ್ಷೇತ್ರದ ಹೆಸರಿನಿಂದ ಮಾತಾಡಿಸುತ್ತಿದ್ದರು. (ನನ್ನ ಸ್ನೇಹಿತರಾದ ಬ್ರಾಹ್ಮಣ ಕಾಫಿ ಬಾರ್‌ನ ರಾಧಾಕೃಷ್ಣ ಅಡಿಗರು,
ವ್ಯಕ್ತಿಗಳನ್ನು ಅವರ ಫೋನ್ ನಂಬರಿನ ಮೂಲಕ ಕರೆಯುತ್ತಿದ್ದರು. ನನ್ನನ್ನು ಕಂಡ ಕೂಡಲೇ, ನನ್ನ ಲ್ಯಾಂಡ್‌ ‌ಲೈನ್
ನಂಬರಾದ 28601838 ಹೇಗಿದ್ದೀರಿ ಎಂದು ಕೇಳುತ್ತಿದ್ದುದು ನೆನಪಾಗುತ್ತದೆ) ಸೋಮನಾಥ ಚಟರ್ಜಿ ಅವರಿಗಂತೂ ’ಬೋಲ್ಪುರ್‌ನ ಮಾನ್ಯ ಸದಸ್ಯರೇ’ ಎಂದೇ ಕರೆಯುತ್ತಿದ್ದರು.

ಮುಂಬೈನ ಉದ್ಯಮಿಗಳ ಜತೆ ಸಖ್ಯ ಹೊಂದಿದ್ದ ದಕ್ಷಿಣ ಮುಂಬೈ ಲೋಕಸಭಾ ಕ್ಷೇತ್ರದ ಸದಸ್ಯ ಮುರಳಿ ದೇವೋರಾ ಲೋಕಸಭೆ ಯಲ್ಲಿ ಪದೇ ಪದೆ ಅವರ ಮಾತಿಗೆ ಅಡ್ಡಿಪಡಿಸಿದಾಗ, ‘The honourable member from Nariman Point’ ಎಂದು ಹೇಳಿ ಸುಮ್ಮನೆ ಕುಳ್ಳಿರಿಸಿದ್ದರು. ಜಸ್ವಂತ್ ಸಿಂಗ್ ಗೆ ತಮ್ಮ ಸಂಪರ್ಕಕ್ಕೆ ಬಂದ ಲೋಕಸಭಾ ಸದಸ್ಯರ ಹೆಸರಿನ ಜತೆಗೆ ಅವರ ಕ್ಷೇತ್ರಗಳ ಹೆಸರು ಗೊತ್ತಿತ್ತು. ಕೆಲವೊಮ್ಮೆ ಅವರು ಲೋಕಸಭಾ ಸದಸ್ಯನ ಹೆಸರನ್ನು ಮರೆತಿದ್ದಿದೆ. ಆದರೆ ಕ್ಷೇತ್ರದ ಹೆಸರನ್ನಂತೂ ಮರೆಯುತ್ತಿರ ಲಿಲ್ಲ.

ಒಮ್ಮೆ ಕೇಂದ್ರ ಸಂಪುಟದಲ್ಲಿ ಜಸ್ವಂತ್ ಅವರ ಸಹೋದ್ಯೋಗಿಯಾದ ಅನಂತಕುಮಾರ, ಕರ್ನಾಟಕದ ಲೋಕಸಭಾ ಸದಸ್ಯರಾದ ರಾಮಚಂದ್ರ ವೀರಪ್ಪ ಅವರನ್ನು ಪರಿಚಯಿಸಿದರು. ಆಗ ಜಸ್ವಂತ್, ‘Yes, I know, he is the honourable member from Bidar ಎಂದು ಹೇಳಿ ಆಶ್ಚರ್ಯವನ್ನುಂಟು ಮಾಡಿದ್ದರು. ಒಮ್ಮೆ ಜಸ್ವಂತ್ ಸಿಂಗ್ ಅವರನ್ನು ಪತ್ರಕರ್ತರೊಬ್ಬರು, ’ನೀವೇಕೆ ಸಂಸದ ರನ್ನು ಅವರ ಕ್ಷೇತ್ರಗಳಿಂದ ಗುರುತಿಸುತ್ತೀರಿ?’ ಎಂದು ಕೇಳಿದಾಗ, ’ಸಂಸದರ ಹೆಸರು ಗೊತ್ತಿದ್ದರೆ, ಅವರ ಕ್ಷೇತ್ರ ಗೊತ್ತಿರಲೇ ಬೇಕಲ್ಲ? ಅವರು ಯಾವ ಕ್ಷೇತ್ರದ ಸದಸ್ಯರು ಎಂಬುದನ್ನು ತಿಳಿದುಕೊಳ್ಳದೇ, ಅವರನ್ನು ತಿಳಿದುಕೊಳ್ಳುವುದು ಸಾಧ್ಯವೇ?’ ಎಂದು ಹೇಳಿದ್ದರು.

ಜಸ್ವಂತ್ ಸಿಂಗ್ ಅವರು ಒಂದು ಕಾಲಕ್ಕೆ ವಾಜಪೇಯಿ ಸರಕಾರದಲ್ಲಿ ವಿದೇಶಾಂಗ ವ್ಯವಹಾರಗಳ ಖಾತೆ ಮತ್ತು ರಕ್ಷಣಾ ಖಾತೆ ಸಚಿವರಾಗಿದ್ದರು. ಕೆಲವು ಕಾಲ ಅವರು ಹಣಕಾಸು ಸಚಿವರೂ ಆಗಿದ್ದರು. ವಾಜಪೇಯಿ ಅವರ ಅತ್ಯಂತ ನಂಬುಗಸ್ಥರಾಗಿದ್ದರು. ಒಂದು ಸಂದರ್ಭದಲ್ಲಿ ಅತ್ಯಂತ ಮಹತ್ವದ ವಿಷಯಗಳನ್ನು ಮೊದಲು ಚರ್ಚಿಸುತ್ತಿದ್ದುದೇ ಜಸ್ವಂತ್ ಬಳಿ.

ಒಮ್ಮೆ ಅವರು ವಿದೇಶದಲ್ಲಿರುವ ಒಬ್ಬ ಅಧಿಕಾರಿಯ ಸೇವಾ ಅವಧಿ ವಿಸ್ತರಿಸಿದ್ದನ್ನು ರದ್ದುಗೊಳಿಸಿದರು. ಮರುದಿನವೇ ತಮ್ಮ ಹಿಂದಿನ ಆದೇಶವನ್ನು ಹಿಂದಕ್ಕೆ ಪಡೆದಿದ್ದರು. ಇದು ಸಣ್ಣ ವಿವಾದಕ್ಕೆ ಕಾರಣವಾಗಿತ್ತು. ಈ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ, ’ ನಿಮಗೆ ನಾನು ಎರಡು ಖಾತೆಗಳ ಮಂತ್ರಿ ಎಂಬುದು ಗೊತ್ತಿದ್ದೂ ಈ ಪ್ರಶ್ನೆ ಕೇಳಿದ್ದೀರಿ. ವಿದೇಶಾಂಗ ಸಚಿವನಾಗಿ ಅಧಿಕಾರಿಯ ಸೇವಾ ಅವಧಿಯನ್ನು ರದ್ದುಗೊಳಿಸಿದ್ದೇನೆ ಮತ್ತು ರಕ್ಷಣಾ ಸಚಿವನಾಗಿ, ಸೇವಾ ಅವಧಿ ವಿಸ್ತರಣೆಗೆ ಅನುಮತಿ ನೀಡಿದ್ದೇನೆ’ ಎಂದು ಚಟಾಕಿ ಹಾರಿಸಿ, ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದರು.

ಒಪ್ಪತಕ್ಕ ಮಾತು !
ಇತ್ತೀಚೆಗೆ ಅಮೆರಿಕದ ಫುಟ್ಬಾಲ್ ಆಟಗಾರ ಟ್ರೆಂಟ್ ಶಲ್ಟನ್ ಜೀವನಗಾಥೆಯನ್ನು ಓದುತ್ತಿದ್ದೆ. ಆತ ಒಂದೆಡೆ ಬರೆದಿದ್ದ – ’ನನ್ನ ಎಲ್ಲಾ ಅಭಿಪ್ರಾಯಗಳನ್ನು ನೀವು ಒಪ್ಪಲಿಕ್ಕಿಲ್ಲ. ಆದರೆ ನನ್ನ ಒಂದು ಮಾತನ್ನು ಒಪ್ಪಿಯೇ ಒಪ್ಪುತ್ತೀರಿ.’ ಹಾಗಾದರೆ ಅದ್ಯಾವ ಅಭಿಪ್ರಾಯ ? ’ನೀವು ಕೆಲವರಿಗೆ ಎಷ್ಟೇ ಒಳ್ಳೆಯವರಾಗಿರಿ, ಉಪಕಾರ ಮಾಡಿ, ಅವರು ಮಾತ್ರ ತಮ್ಮ ಹಲ್ಕಾ ಬುದ್ಧಿ ಯನ್ನು ತೋರಿಸದೇ ಹೋಗುವುದಿಲ್ಲ. ನೀವು ಅವರನ್ನು ತಲೆಯ ಮೇಲೆ ಕುಳ್ಳಿರಿಸಿಕೊಂಡಿದ್ದು ಅವರಿಗೆ ಗೊತ್ತಿರುತ್ತದೆ, ಅದು ಗೊತ್ತಿದ್ದೂ ಅವರು ತಲೆ ಮೇಲೆಯೇ ಹೊಲಸು ಮಾಡಿ ಹೋಗುತ್ತಾರೆ.

ನೀವು ಜೀವನದಲ್ಲಿ ಯಾರನ್ನು ಅತಿಯಾಗಿ ನಂಬುತ್ತೀರೋ, ಅವರು ತಾವು ನಂಬಿಕೆಗೆ ಅರ್ಹರಲ್ಲ ಎಂಬುದನ್ನು ನಿಮಗೆ
ಮನವರಿಕೆ ಮಾಡಿ ನಿರ್ಗಮಿಸುತ್ತಾರೆ.’ ಇದನ್ನು ಯಾರೂ ಅಲ್ಲಗಳೆಯಲಾರರು. ಪ್ರತಿಯೊಬ್ಬರಿಗೂ ಇದು ಒಂದಿಲ್ಲೊಂದು ಸಂದರ್ಭದಲ್ಲಿ ಅನುಭವಕ್ಕೆ ಬಂದಿರುತ್ತದೆ.