ಪ್ರತಿಸ್ಪಂದನ
ಶಂಕರನಾರಾಯಣ ಭಟ್
ಪತ್ರಿಕೆಯೊಂದು ನಿಂತಿರುವುದೇ ಅದರ ವಿಶ್ವಾಸಾರ್ಹತೆ ಮತ್ತು ವಸ್ತುನಿಷ್ಠತೆಯ ಮೇಲೆ ಎಂಬುದನ್ನು ಸಮರ್ಪಕವಾಗಿ ತಿಳಿಹೇಳಿದೆ ‘ನೂರೆಂಟು ವಿಶ್ವ’ ಅಂಕಣ (ವಿಶ್ವವಾಣಿ ಜ.೪). ಪತ್ರಿಕೆ ಅಂದ ಮೇಲೆ ಪತ್ರಕರ್ತ ಇರಲೇಬೇಕಲ್ಲವೇ? ಇಲ್ಲವೆಂದರೆ ಪತ್ರಿಕೆಗಳ ಪುಟ ತುಂಬುವುದಾದರೂ ಹೇಗೆ? ಇದನ್ನೇ ಅಸ್ತ್ರವಾಗಿಸಿಕೊಂಡು ಕೆಲ ಪತ್ರಕರ್ತರು ಅಲ್ಲಲ್ಲಿ ಕಂಡ ‘ಗೋಡೆ ಬರಹ’ ಗಳನ್ನೇ ಮುಖಪುಟ ಶೀರ್ಷಿಕೆಯಾಗಿಸಿಕೊಂಡು ಈ ದೇಶದ ಮಾನಹರಣ ಮಾಡುವಲ್ಲಿಗೆ ತಲುಪುತ್ತಾರೆ ಎಂಬುದು ನಿಜಕ್ಕೂ ಆತಂಕಕಾರಿ.
ವಿದೇಶದಲ್ಲಿರುವ ಭಾರತ ಮೂಲದ ಪತ್ರಕರ್ತ, ‘ಸ್ವಚ್ಛಭಾರತ ಅಭಿಯಾನವು ಅಂದುಕೊಂಡಷ್ಟು ಪರಿಣಾಮ ಬೀರಿಲ್ಲ’ ಎಂಬ ಸಂದೇಶ ಸಾರಿ ಬಿಡುತ್ತಾನೆ. ಅದಕ್ಕೆ ಮೂಲಕಾರಣ, ತನ್ನ ‘ಬಾಸ್’ ಎನಿಸಿಕೊಂಡವನನ್ನು ಸಂತುಷ್ಟಗೊಳಿಸಿ ಒಂದಷ್ಟು ಪ್ತಯೋಜನ ಪಡೆಯುವುದು ಎಂಬುದೂ ನಿಜ.ಇಲ್ಲಿ ಅದೆಷ್ಟೇ ಒಳ್ಳೆಯ ಕೆಲಸ ಗಳಾಗುತ್ತಿದ್ದರೂ, ಇಂಥ ಕೆಲ ಸುದ್ದಿಯಿಂದಾಗಿ ‘ಸರ್ವ ಬಣ್ಣ ವನ್ನೂ ಮಸಿ ನುಂಗಿತು’ ಎಂಬಂತಾ ಗುವುದೂ ಸಹಜ. ಗೋಡೆ ಬರಹ ಗಳ ಉದ್ದೇಶ ಜನರಲ್ಲಿ ಜಾಗೃತಿ ಮೂಡಿಸಲು ಎಂಬುದು ತಿಳಿದಿದ್ದರೂ, ಅದನ್ನೇ ಅತಿರೇಕವಾಗಿ ಪ್ರಕಟಿಸಲು ಮುಂದಾಗುವುದಕ್ಕೆ ಏನನ್ನುವುದು!
ಒಂದೊಮ್ಮೆ ಅಂಥ ವರದಿ ಪ್ರಕಟಗೊಳ್ಳದಿದ್ದರೆ ಏನೂ ಆಗು ವುದಿಲ್ಲ; ಆದರೆ ತಥಾಕಥಿತ ಪತ್ರಕರ್ತರಿಗೆ ಸಿಗಬೇಕಲ್ಲ ಸಮಾಧಾನ? ಪತ್ರಿಕೆಯು ಒಂದು ಸಮಾಜದ ಪ್ರತಿಬಿಂಬ ಎನ್ನುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ. ಸಮಾಜದ ಹುಳುಕುಗಳನ್ನು ಹೊರತೆಗೆದು ಒಳಿತು ಬಯಸುವವನೇ ನಿಜವಾದ ಪತ್ರಕರ್ತ! ಆದರೆ ಕೆಲ ‘ವಿಘ್ನ ಸಂತೋಷಿ’ಗಳಿಂದಾಗಿ ಒಳಿತಿಗಿಂತ ಕೆಡುಕೇ ಜಾಸ್ತಿಯಾಗುತ್ತದೆ. ಇಲ್ಲಿ ಇನ್ನೊಂದು ವಿಷಯವನ್ನೂ ಗಮನಿಸಲೇಬೇಕು: ಅದೆಂದರೆ, ಈಗಿತ್ತಲಾಗಿ ಕೆಲ ಪತ್ರಿಕೆಗಳು, ಅವುಗಳ ಮಾಲೀಕರು ಮತ್ತು ವರದಿಗಾರರು ಕೆಲ ರಾಜಕೀಯ ಪಕ್ಷಗಳ ವಕ್ತಾರರಂತೆ ವರ್ತಿಸುವುದು.
ಇಂಥ ಸಂದರ್ಭದಲ್ಲಿ ಪತ್ರಕರ್ತರನ್ನು ಪ್ರಶ್ನಿಸುವವರಾರು? ಪತ್ರಿಕೆಯಲ್ಲಿ ಪ್ರಕಟಗೊಂಡಿದ್ದೇ ಸರಿ ಅಂದುಕೊಳ್ಳುವ ಓದುಗರಿಗೆ ಸತ್ಯವನ್ನು ತಿಳಿಹೇಳುವ ಬಗೆ ಯಾವುದು? ಇಂಥ ವರದಿ ಕನ್ನಡ ಪತ್ರಿಕೆಗಳಲ್ಲಿ ಪ್ರಕಟಗೊಂಡರೆ, ವಿದೇಶಿ ನೆಲದಲ್ಲಿ ಏನೂ ಪರಿಣಾಮ ಬೀರದು ಎಂಬ ಮಾತನ್ನು ಒಪ್ಪಿಕೊಳ್ಳ
ಬಹುದೇ? ಕಾರಣ, ಈಗಿತ್ತಲಾಗಿ ಇಂಗ್ಲಿಷ್ ಪತ್ರಕರ್ತರ ಲೇಖನಗಳು ಕನ್ನಡಕ್ಕೆ ತರ್ಜುಮೆಯಾಗಿ ಇಲ್ಲಿನ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುವಂತೆ, ಕನ್ನಡದ ಲೇಖನಗಳನ್ನು ಇಂಗ್ಲಿಷ್‌ಗೆ ಅನುವಾದಿಸಿ ಪ್ರಕಟಿಸುತ್ತಿರಬಹುದಲ್ಲವೇ? ಹೀಗಾಗಿ ಯಾವ ಭಾಷೆಯಲ್ಲಿ ವರದಿ ಪ್ರಕಟವಾಗುತ್ತದೆ ಎಂಬುದು ಮುಖ್ಯ ಅಲ್ಲವೇ ಅಲ್ಲ.
ಇನ್ನು ಕೆಲ ರಾಜಕಾರಣಿಗಳೂ ವರದಿಗಾರರಂತೆ ವ್ಯವಹರಿಸುವುದು ಇನ್ನೂ ಖತರ್ನಾಕ್! ವಿದೇಶ ಭೇಟಿಯ ವೇಳೆ, ನಮ್ಮ ದೇಶದ ಯಾವುದೋ ವ್ಯಕ್ತಿಯ ಅಥವಾ ವ್ಯವಸ್ಥೆಯ ಬಗ್ಗೆಯೇ ಇಲ್ಲಸಲ್ಲದ ಮಾತುಗಳನ್ನಾಡಿ ಹಿಂದಿರುಗುವುದು. ಹೀಗೆ ಮಾತಾಡಿದರೆ ನಮ್ಮ ದೇಶವನ್ನೇ ಹೀಗಳೆದಂತೆ ಎಂಬ ಸಾಮಾನ್ಯ ತಿಳಿವಳಿಕೆಯೂ ಇಂಥವರಿಗೆ ಇರದಿರುವುದು ವಿಪರ್ಯಾಸ!
(ಲೇಖಕರು ಹವ್ಯಾಸಿ ಬರಹಗಾರರು)