Saturday, 14th December 2024

ಹತ್ಯಾಚಾರಕ್ಕೆ ಜಾತಿ-ಮತ-ಧರ್ಮಗಳ ಹಂಗಿರುವುದಿಲ್ಲ, ಆದರೆ…

ದಾಸ್ ಕ್ಯಾಪಿಟಲ್
ಟಿ.ದೇವದಾಸ್, ಬರಹಗಾರ, ಶಿಕ್ಷಕ

ಲಂಚ ಸಂಬಂಧಿತವಾದ ಯಾವುದೇ ಭ್ರಷ್ಟ ಆಚಾರಗಳು ಮಾತ್ರ ಭ್ರಷ್ಟಾಚಾರವಲ್ಲ. ಅತ್ಯಾಚಾರವೂ ಭ್ರಷ್ಟಾಚಾರವೇ. ಹತ್ಯಾಚಾರ (ಅತ್ಯಾಚಾರ ಸಂತ್ರಸ್ತೆ ಸಾವು)ದ ಹಿಂದೆ ಲಂಚದ ಭ್ರಷ್ಟಾಚಾರವೂ ಇರುತ್ತದೆ. ಹತ್ಯಾಚಾರವನ್ನು ಹೇಳಿ ಮಾಡಿಸು ವುದು ನಡೆಯುವುದುಂಟು.

ಹತ್ಯಾಚಾರಕ್ಕೆ ಇಂಥದ್ದೇ ಕಾರಣಗಳಿದ್ದರೂ ಇರಬಹುದು. ಆದರೆ ಅತ್ಯಾಚಾರಗಳಿಗೆ ಮಾನಸಿಕವಾದ ವಿಕೃತಿಯೇ ಮುಖ್ಯ ಕಾರಣ. ಶಿಕ್ಷಣ, ಸಂಸ್ಕಾರ, ಸಂಸ್ಕೃತಿ ಇಲ್ಲದವರು ಇಂಥ ಹೇಯ ಕೃತ್ಯಗಳಿಗೆ ತೊಡಗಿಕೊಳ್ಳುತ್ತಾರೆ ಎಂಬುದನ್ನು ಸಂಪೂರ್ಣವಾಗಿ ಒಪ್ಪಲು ಸಾಧ್ಯವಿಲ್ಲ. ಇವೆಲ್ಲ ಇದ್ದವರೇ ಇಂಥ ಕೃತ್ಯಗಳಲ್ಲಿ ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವಂತೆ ಸಂಚನ್ನು ಹೂಡುತ್ತಾರೆ. ಅಂಥ ಶಿಕ್ಷಿತರ ಮನಸು ವಿಕೃತಗೊಂಡಾಗ ಇಂಥ ಹತ್ಯಾಚಾರಗಳು ನಡೆಯುತ್ತವೆ.

ಹತ್ಯಾಚಾರ ಮಾಡುವವರು ಯಾವ ಕಠಿಣ ಕಾನೂನಿಗೂ ಹೆದರುವುದಿಲ್ಲವಾದ್ದರಿಂದ ಅವರಿಗೆ ಭಯವೇ ಇರುವುದಿಲ್ಲ. ಯಾಕೆಂದರೆ, ಹತ್ಯಾಚಾರಿಗಳ ಪರ ನಿಂತು ವಾದಿಸುವವರು ಈ ದೇಶದಲ್ಲಿದ್ದಾರೆ. ತನಗೆ ಶಿಕ್ಷೆ ಕೊಡಬೇಕಾದ ಕಾನೂನಡಿ ಯಲ್ಲೇ
ತಾನು ನಿರಪರಾಧಿಯೆಂದು ಸಾಬೀತು ಮಾಡಿಕೊಳ್ಳಬಹುದು ಎಂಬ ಹುಂಬು ಲಜ್ಜೆಗೆಟ್ಟ ಧೈರ್ಯವೂ ಹತ್ಯಾಚಾರಕ್ಕೆ ಪ್ರೇರಣೆ ಯಾಗುತ್ತದೆ. ಇಡೀ ರಾಷ್ಟ್ರವೇ ಪ್ರತಿಕ್ರಿಯಿಸಿದ ಹತ್ಯಾಚಾರದ ಪ್ರಕರಣದ ಅಪರಾಧಿಗಳಿಗೆ ಗಲ್ಲುಶಿಕ್ಷೆಯನ್ನು ನೀಡಿದ್ದಿದೆ. ಗಲ್ಲು ಶಿಕ್ಷೆ ಘೋಷಣೆಯಾದ ಕೂಡಲೇ ಶಿಕ್ಷೆ ಜಾರಿಯಾಗುವುದಿಲ್ಲ. ಮೇಲ್ಮನವಿಗೆ ಅವಕಾಶವಿರುತ್ತದೆ.

ಸರ್ವೋಚ್ಚ ನ್ಯಾಯಾಲಯದ ಉನ್ನತ ಪೀಠಕ್ಕೂ ಮೇಲ್ಮನವಿ ಸಲ್ಲಿಸಿದ ಮೇಲೂ, ಮರುಪರಿಶೀಲನಾ ಮನವಿ ಸಲ್ಲಿಸಿದ ಮೇಲೂ
ರಾಷ್ಟ್ರಪತಿಯವರಿಗೆ ಕ್ಷಮಾದಾನದ ಮನವಿ ಅರ್ಜಿಯನ್ನು ಸಲ್ಲಿಸಬಹುದು. ಹೀಗೆ ಒಂದಷ್ಟು ಕಾಲ ದೂಡಿದ ಮೇಲೆ ಶಿಕ್ಷೆ
ಜಾರಿಯಾಗಬಹುದು. ಆಗದೆಯೂ ಇರಬಹುದು. ಮುಖ್ಯವಾಗಿ ಆಗಬೇಕಾದ ಬದಲಾವಣೆ ಏನೆಂದರೆ, ಅತ್ಯಾಚಾರದಂಥ ಸೂಕ್ಷ್ಮ ಪ್ರಕರಣಗಳನ್ನು ನೇರವಾಗಿ ಸುಪ್ರೀಂಕೋರ್ಟಿಗೆ ಕೊಂಡೊಯ್ಯುವ ಕಾನೂನು ರಚನೆಯಾಗಬೇಕು. ಯಾವುದೇ ಶಿಕ್ಷೆಯ ಉದ್ದೇಶ ಅಪರಾಧಿಯಲ್ಲಿ ಅಪರಾಧ ಪ್ರಜ್ಞೆಯನ್ನು ಮೂಡಿಸಿ ಅವನಲ್ಲಿ ಅಪೇಕ್ಷಿತ ಬದಲಾವಣೆಯನ್ನು ತರುವುದು. ಅಪೇಕ್ಷಿತ ಅಂದರೆ ಅವನು ಅಂಥ ಕುಕೃತ್ಯಗಳಿಗೆ ತೊಡಗದಂಥ ಬದಲಾವಣೆಯನ್ನು ಅವನಲ್ಲಿ ಹುಟ್ಟುವಂತೆ ಮಾಡುವುದು. ಉತ್ತಮ ಬದುಕನ್ನು ಬಾಳುವಂತೆ ಪ್ರೇರೇಪಣೆ ನೀಡಿ ನಾಗರಿಕ ಸಮಾಜದಲ್ಲಿ ಎಲ್ಲರಂತೆ ಸರಳ ಜೀವನವನ್ನು ನಡೆಸುವುದಕ್ಕೆ ಅವಕಾಶ ಕೊಡುವುದು. ಆದರೆ ಅತ್ಯಾಚಾರ ಮಾಡಿ ಕೊಲೆ ಮಾಡಿದವ ನಿಗೆ ಕೊಲೆಯೇ ಶಿಕ್ಷೆಯಾಗಬೇಕು. ಗಲ್ಲಿಗೇರಿಸುವ ಮುನ್ನ ಅಪರಾಧಿಯನ್ನು
ಸಾರ್ವಜನಿಕವಾಗಿ ಮಾನ ಹರಾಜು ಮಾಡಬೇಕು. ಗಲ್ಲು ಶಿಕ್ಷೆಗೆ ಗುರಿಯಾದವ ನಲ್ಲಿ ಏನೂ ಬದಲಾವಣೆಯಾಗಲು ಸಾಧ್ಯವಿಲ್ಲ.
ಆದರೆ ಅವನ ಪಾಪಕೃತ್ಯಕ್ಕೆ ನೀಡುವ ಗಲ್ಲುಶಿಕ್ಷೆಯು ಸಮಾಜದಲ್ಲಿ ಒಂದು ಭಯವನ್ನು ಹುಟ್ಟಿಸಬೇಕು.

ಇಂಥ ಅಪರಾಧಗಳು ತಡೆಯುವ ಹಿನ್ನೆಲೆಯಲ್ಲಿ ಇಂಥ ಘೋರ ಶಿಕ್ಷೆಗಳ ಅನಿವಾರ್ಯತೆ ಇದೆ. ಜನರಲ್ಲಿ ಕಾನೂನಿನ ಮೇಲೆ ಭಯ, ಗೌರವ, ನಂಬಿಕೆಯನ್ನು ಹುಟ್ಟಿಸುವುದು ಸಾಧ್ಯವಾಗುವುದು ಕಾನೂನುಗಳು ಕಟ್ಟುನಿಟ್ಟಾಗಿ ಜಾರಿಯಾಗುವುದರಲ್ಲಿ! ಶಿಕ್ಷೆ ಯಾವ ಕಾಲಕ್ಕೂ ಮಾನವೀಯವಲ್ಲವೆಂಬುದು ಸತ್ಯವೇ ಆದರೂ ಯಾವ ಅಪರಾಧಕ್ಕೂ ಶಿಕ್ಷೆಯೇ ಇಲ್ಲವಾದರೆ ಬರ್ಬರ ಸಮಾಜವೊಂದು ಹುಟ್ಟಿಕೊಳ್ಳುತ್ತದೆ.

ಹತ್ಯಾಚಾರದಂಥ ಪ್ರಕರಣಗಳಿಗೆ ಅತೀ ಶೀಘ್ರವಾಗಿ ಕಾನೂನಿನ ಕುಣಿಕೆಯನ್ನು ತೊಡಿಸುವುದು ಅತೀಮುಖ್ಯ. ಯಾಕೆಂದರೆ, ಘಟನೆ ನಡೆದ ಸಂದರ್ಭದಲ್ಲಿ ಜನರ ತೊಡಗಿಸಿಕೊಳ್ಳುವಿಕೆಯ ಮಾನಸಿಕತೆಯು ದೊಡ್ಡದಾಗಿರುತ್ತದೆ. ಪ್ರಬಲವಾಗಿರುತ್ತದೆ. ಘಟನೆ ನಡೆದು ಐದಾರು ವರ್ಷಗಳ ಅನಂತರ ಶಿಕ್ಷೆ ಜಾರಿಯಾದರೆ ಘಟನೆಯ ಬಗ್ಗೆ ಜನರಲ್ಲಿ ನೆನಪೂ ಇರಲಾರದು. ಆಸಕ್ತಿಯೂ

ಕ್ಷೀಣವಾಗಿರುತ್ತದೆ. ಹೆಚ್ಚುಕಡಿಮೆ ಘಟನೆಯೇ ಮರೆತು ಹೋಗಿರುತ್ತದೆ. ಘಟನೆಗೂ, ಜನರ ಮಾನಸಿಕತೆಗೂ ನೆನಪಿನ ದೊಡ್ಡ ಮಟ್ಟದ ಅಂತರವೊಂದು ಸೃಷ್ಟಿಯಾದ ಮೇಲೆ ಕೊಡುವ ಶಿಕ್ಷೆಯಿಂದ ಯಾವ ಸಂದೇಶವನ್ನು, ಪರಿವರ್ತನೆಯನ್ನು ಅಪೇಕ್ಷಿಸು ವುದು ಸಾಧ್ಯವಿಲ್ಲ. ಬಾಬರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ಮೊನ್ನೆ ಬಂದಾಗ ಎಷ್ಟೋ ದೇಶವಾಸಿಗಳಿಗೆ ಪ್ರಕರಣದ ಅಸಲಿಯತ್ತೇ ಗೊತ್ತಿರಲಿಲ್ಲವಾಗಿತ್ತೇನೋ! ಆರೋಪಿಗಳಿಗೂ ಘಟನೆಯ ಕುರಿತಾದ ವಿಚಾರಗಳು ಮರೆತುಹೋಗಿರಲೂ ಬಹುದು.
ಹೆಚ್ಚು ಅಂದರೆ ಮೂರು ತಿಂಗಳೊಳಗೆ ಪ್ರಕರಣದ ತನಿಖೆ ನಡೆದು ಹತ್ಯಾಚಾರಿಗೆ ಗಲ್ಲು ಶಿಕ್ಷೆ ಘೋಷಣೆಯಾಗಬೇಕು. ಅಜ್ಜನ
ಕಾಲದಲ್ಲಿ ನಡೆದಿದೆ ಎನ್ನಲಾದ ಘಟನೆಗೆ ಅಪ್ಪನ ಕಾಲದಲ್ಲಿ ತನಿಖೆ ನಡೆಸಿ, ಮಗನ ಕಾಲದಲ್ಲಿ ಶಿಕ್ಷೆ ಪ್ರಕಟವಾದರೆ ಏನು
ಬದಲಾವಣೆಯಾಗಲು ಸಾಧ್ಯ? ಘಟನೆ ನಡೆದಾಗ ಇದ್ದ ಅಜ್ಜ ಶಿಕ್ಷೆ ಪ್ರಕಟವಾದಾಗ ಇರುವುದಿಲ್ಲ. ಅಪ್ಪನಿಗೆ ವಯಸ್ಸಾಗಿ ನೆನಪುಗಳು ಹಿಂದುಮುಂದಾಗಿರುತ್ತದೆ. ಮಗನಿಗೆ ವಿಚಾರವೇ ಗೊತ್ತಿರುವುದಿಲ್ಲ.

ಯಾವತ್ತೋ ರೇಪ್ ಮಾಡಿ ಕೊಂದಿದ್ದನಂತೆ, ಅದಕ್ಕೆ ಈಗ ಗಲ್ಲು ಶಿಕ್ಷೆ ಕೊಟ್ಟಿದ್ದಾರಂತೆ, ಅದೇನು ನಡೆದಿತ್ತೋ ಯಾರಿಗೆ ಗೊತ್ತು, ನನ್ನಜ್ಜನಿಗೆ ಇದರ ಬಗ್ಗೆ ಗೊತ್ತಿರಬಹುದು ಅಂತ ಅಪ್ಪ ಹೇಳುತ್ತಿದ್ದ ಮಾತನ್ನು ಮಗ ಹೇಳುವಾಗ ಅಂತೆ ಕಂತೆಗಳು ಹುಟ್ಟಿಕೊಂಡು ಯಾವತ್ತೋ ನಡೆದ ಹತ್ಯಾಚಾರಕ್ಕೆ ಯಾವತ್ತೋ ಗಲ್ಲು ಶಿಕ್ಷೆಯಾದರೆ ಅದು ಮಗನ ಕಾಲದಲ್ಲಿ ಏನೂ
ಪ್ರಭಾವವನ್ನೂ, ಪರಿಣಾಮವನ್ನೂ ನೀಡುವುದು ಸಾಧ್ಯವೇ ಇಲ್ಲ. ಆದ್ದರಿಂದ ಶಿಕ್ಷೆ ಜಾರಿಯ ಹಿಂದೆ ಘಟನೆಯ ಬಗೆಗಿನ ಜನರ
ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ಕಾನೂನಿಗೆ ಇದೆ. ಈ ಜವಾಬ್ದಾರಿಯನ್ನು ನಿರ್ವಹಿಸಲು
ನ್ಯಾಯಾಲಯಗಳು ಮಾತ್ರ ಸಮರ್ಥ ಎಂಬುದನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ.

ರೇಪ್ ಪ್ರಕರಣ ನಡೆದಾಗ ಹುಟ್ಟದೇ ಇರುವವರು ರೇಪ್ ಮಾಡುವ ವಯಸ್ಸಿಗೆ ಬಂದಾಗ ಶಿಕ್ಷೆ ಜಾರಿಯಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆಯ ಶಕ್ತಿ ಸಾಮರ್ಥ್ಯ ನ್ಯಾಯಾಲಯಕ್ಕಿದೆ. ತನಿಖೆ ಮತ್ತು ವಿಚಾರಣೆಯನ್ನು ವರ್ಷದೊಳಗೆ ಮುಗಿಸಿ ಕಠಿಣ ಶಿಕ್ಷೆಯನ್ನು ನೀಡುವಂಥ ಬಲವಾದ ಕಾನೂನನ್ನು ಜಾರಿಗೊಳಿಸಬೇಕು. ಜನಮಾನಸದಲ್ಲಿ ಪ್ರಕರಣದ ಬಿಸಿಯಿರುವಾಗಲೇ ಪ್ರಕರಣಕ್ಕೊಂದು ತಾರ್ಕಿಕ ಅಂತ್ಯ ಬಿದ್ದರೆ ಹತ್ಯಾಚಾರದಂಥ ಪ್ರಕರಣಗಳನ್ನು ತಹಬಂದಿಗೆ ತರಬಹುದು.

ಅತ್ಯಾಚಾರ, ಕೊಲೆಯಂಥ ಮಹಾಪರಾಧಗಳಿಗೆ ಕನಿಕರ ತೋರುವ ಯಾವ ಅಗತ್ಯವೂ ಇಲ್ಲವೆಂಬುದನ್ನು ಕಾನೂನಿನ ಮೂಲಕವೇ ಎತ್ತಿಹಿಡಿಯಬೇಕಾಗಿದೆ. ಉತ್ತರ ಪ್ರದೇಶದ ಹಾಥರಸ್‌ನಲ್ಲಿ ನಡೆದಿದೆಯೆನ್ನಲಾದ ದಲಿತ ಯುವತಿ ಮನೀಷಾ ವಾಲ್ಮೀಕಿಯ ಮೇಲಿನ ಸಾಮೂಹಿಕ ಹತ್ಯಾಚಾರ ಪ್ರಕರಣ ಈಗ ದೇಶದಲ್ಲಿ ಭಾರೀ ದೊಡ್ದ ಸುದ್ದಿಯಾಗಿದೆ. ಎಂದಿನಂತೆ ಘಟನೆ ಅಥವಾ ಪ್ರಕರಣದ ಪರ ವಿರೋಧದ ನೆಲೆಗಳ ವಾಕ್ಸಮರವು ತಾರಕಕ್ಕೇರಿದೆ. ಹೀಗೆ ತಾರಕಕ್ಕೇರಿದ ವಾಕ್ಸಮರದಲ್ಲಿ ಮುಖ್ಯವಾಗಿ ಕಾಣುವುದು ಆ ಯುವತಿ ದಲಿತರವಳು ಎಂಬುದು. ಅಕಸ್ಮಾತ್ ಅವಳು ದಲಿತ ಜಾತಿಗೆ ಸೇರದೇ ಇರುತ್ತಿದ್ದರೆ ಇಷ್ಟೊಂದು ದೊಡ್ದ ದೇಶವ್ಯಾಪಿ ಚರ್ಚೆಗೆ ಕಾರಣವಾಗುತ್ತಿತ್ತೇ ಎಂಬುದೂ ದೊಡ್ದ ಪ್ರಶ್ನೆಯೇ ಆಗಿ ಕಾಣುತ್ತಿದೆ.

ಅವಳು ದಲಿತರವಳು ಎಂಬ ಕಾರಣಕ್ಕೆ ಅವಳಿಗಾದ ದುಃಸ್ಥಿತಿಯ ಬಗ್ಗೆೆ ಮರುಕವನ್ನು ವ್ಯಕ್ತಪಡಿಸುವುದು ಸಮರ್ಥನೀಯವಲ್ಲ, ಅವಳ ಪರನಿಂತು ನ್ಯಾಯಕ್ಕಾಗಿ ಬೀದಿಗೆ ಬಂದು ದೊಂಬಿ, ಗಲಾಟೆಯನ್ನು ಮಾಡುವುದು ಸರಿಯಲ್ಲ. ಅಂತೆಯೇ ಅವಳು ದಲಿತರವಳು ಎಂಬ ಕಾರಣಕ್ಕೆ ನಿರ್ಲಕ್ಷ್ಯವನ್ನೋ, ತಿರಸ್ಕಾರವನ್ನೋ ವ್ಯಕ್ತಪಡಿಸುವುದು ಸರಿಯಲ್ಲ, ಸಮರ್ಥನೀಯವಲ್ಲ. ಮಾನವೀಯವಲ್ಲ. ಘಟನೆಯನ್ನು ಜಾತಿಯಾಧಾರಿತವಾಗಿ ನೋಡುವ ಯಾವ ನಿಲುವನ್ನೂ ಖಂಡಿಸಬೇಕಾಗುತ್ತದೆ. ಯಾಕೆಂದರೆ ಹತ್ಯಾಚಾರಕ್ಕೆ ಜಾತಿ-ಮತ-ಧರ್ಮಗಳ ಹಂಗಿರುವುದಿಲ್ಲ.

ಹಾಗಿದ್ದ ಮೇಲೆ ಘಟನೆಯನ್ನು ಜಾತಿಗೆ ತಳುಕು ಹಾಕಿ ಪರ ವಿರೋಧ ನಿಂತು ವ್ಯವಹರಿಸುವುದು ನೀಚ ಬುದ್ಧಿಯ ಪ್ರದರ್ಶನ ವಾಗುತ್ತದೆ. ನೋವು, ಅವಮಾನ, ಹಿಂಸೆ, ಮೋಸ ವಂಚನೆಗೆಳಿಗೆ ಜಾತಿಯ ಹಂಗೇಕೆ? ಇವುಗಳಿಗೆ ಕೆಳಜಾತಿ ಅಥವಾ ಮೇಲ್ಜಾತಿ ಎಂದು ವಿಭಾಗ ಮಾಡಿ ವ್ಯವಹರಿಸುವುದು ನಾಗರಿಕ ಪ್ರಪಂಚದ ದೊಡ್ದ ದುರಂತ! ನಡೆಯಬಾರದ ಅನಾಹುತವೊಂದು ನಡೆದು ಹೋಗಿದೆ. ಅದರ ಬಗ್ಗೆೆ ಈಗ ಕಟ್ಟುಕಥೆಗಳು ಗರಿಗೆದರುವುದು ಸಾಮಾನ್ಯವೇ ಆದರೂ ಅದು ಮತ್ತಷ್ಟು ಅನಾಹುತಗಳಿಗೆ ಆಸ್ಪದ ವೀಯದಂತೆ ನೋಡಿಕೊಳ್ಳುವ ಹೊಣೆ ನಾಗರಿಕ ಸಮಾಜದ್ದು. ಕಾನೂನಿನದ್ದು. ಸರಕಾರ ಗಳದ್ದು. ಯಾರನ್ನೂ ರಕ್ಷಿಸುವ, ಇನ್ನು ಯಾರನ್ನೋ ಬಲಿಗೊಡುವ ಅಚಾತುರ್ಯಗಳು ನಡೆಯಬಾರದು. ತನಿಖೆ ಪಾರದರ್ಶಕವಾಗಿ ನಡೆಯಬೇಕು. ಹಾಥರಸ್ ಪ್ರಕರಣವನ್ನು ಉತ್ತರ ಪ್ರದೇಶ ಸರಕಾರ ಸಿಬಿಐಗೆ ಒಪ್ಪಿಸಿದ್ದು ಸರಿಯಾಗಿದೆ.

ಆದರೆ ಈ ಕೆಲಸವನ್ನು ತಕ್ಷಣವೇ ಮಾಡಿದ್ದರೆ ಇಷ್ಟೊಂದು ಅಲ್ಲೋಲ ಕಲ್ಲೋಲವಾಗುತ್ತಿರಲಿಲ್ಲವೇನೋ! ಅತ್ಯಾಚಾರ ಕ್ಕೊಳಗಾಗಿ ಕೊಲೆಯಾದ ಯುವತಿಯ ಮನೆಯವರಿಗೆ ಸಾಂತ್ವನ ಹಾಗೂ ನ್ಯಾಯವನ್ನು ಒದಗಿಸಿಕೊಡುವ ಧೈರ್ಯ ವನ್ನು ಸರಕಾರ ತಕ್ಷಣಕ್ಕೆ ಮಾಡಿದ್ದರೆ ಸರಕಾರಕ್ಕೂ ಕೆಟ್ಟ ಹೆಸರನ್ನು ಬರುತ್ತಿರಲಿಲ್ಲವೇನೋ ಎನಿಸುತ್ತಿದೆ. ಪ್ರಕರಣದ ಸತ್ಯಾಸತ್ಯತೆ ಯನ್ನು ಶೋಧಿಸುವುದು, ತನಿಖೆ ಮಾಡುವುದು, ಶಿಕ್ಷೆಯನ್ನು ವಿಧಿಸುವುದು ಆಮೇಲಿನ ವಿಚಾರ. ಆದರೆ ನೊಂದವರಿಗೆ ಆ ಹೊತ್ತಿಗೆ ಧೈರ್ಯವನ್ನು ತುಂಬುವ ಕಾರ್ಯ ಸರಕಾರದಿಂದ ಮೊದಲಾಗಬೇಕಿತ್ತು.

ಇದಾಗಲಿಲ್ಲ ಎಂಬುದು ಬಹುವಿಷಾದದ ವಿಷಯ! ಈಗ ಜಾತಿಯ ಸಮೀಕರಣದೊಂದಿಗೆ ಈ ಪ್ರಕರಣ ರಾಜಕೀಯದ ಬಣ್ಣವನ್ನು ಪಡೆದಿರುವುದು ವಿಪರ್ಯಾಸವೇ ಸರಿ! ಹಿಂಸೆ ಮತ್ತು ಕ್ರೌರ್ಯಕ್ಕೆ ಒಳಗಾದವಳು ಒಬ್ಬಾಕೆ ಹೆಣ್ಣುಮಗಳು ಎಂಬ ಮನುಷ್ಯತ್ವದ ನೆರಳಿನಲ್ಲಿ ಈ ಘಟನೆಯನ್ನು ನೋಡಬೇಕು. ಧನ ಮದ, ಜಾತಿ ಮದ, ಅಧಿಕಾರದ ಮದ, ರಾಜಕೀಯದ
ಮದಗಳನ್ನು ಮೈತುಂಬಾ ಹೊದ್ದು ಬದುಕುವ ಬಲಾಢ್ಯರ ನಡುವೆ ಯಾವ ಮದವೂ ಯಾವ ಬಾಹ್ಯ ಬೆಂಬಲವೂ ಇಲ್ಲದವರು ಬದುಕುವಂತಾಗ ಬೇಕು. ಪ್ರಭುತ್ವದ ನಿಜವಾದ ತಾಕತ್ತು ಇಂಥ ವಾತಾವರಣ ವನ್ನು ನಿರ್ಮಿಸುವುದರಲ್ಲಿದೆ. ಎಲ್ಲ ಘಟನೆಗಳು ರಾಜಕೀಯದ ಮೂಸೆಯಲ್ಲಿ ಅದರ ಕರಿನೆರಳು ಬೀಳದಂತೆ ಇತ್ಯರ್ಥ ಕಾಣಬೇಕು. ರಾಜಕಾರಣವನ್ನು ಇಷ್ಟಪಡ ದವರೂ ರಾಜಕೀಯದೊಂದಿಗೆ ಬದುಕಬೇಕಾಗುತ್ತದೆ.

ಅಂದರೆ ಅನೇಕರು ಲಜ್ಜೆಗೆಟ್ಟ ರಾಜಕಾರಣದಲ್ಲಿ ನಂಬಿಕೆಯನ್ನು ಕಳೆದುಕೊಂಡಿದ್ದಾರೆಂದರ್ಥ. ಸಮಗ್ರ ದೇಶವಾಸಿಗಳ
ಆಶಾಕಿರಣವಾಗಿ ನಿಸ್ಪಹದ, ಸುಸಂಸ್ಕೃತದ, ಅಪಾರ ದೇಶಪ್ರೇಮದ, ರಾಷ್ಟ್ರನಿಷ್ಠೆೆಯ ಮೋದಿಯಂಥ ಒಬ್ಬ ಪ್ರಧಾನಿ ಎಲ್ಲ ರಾಜಕಾರಣಿಗಳಿಗೂ ಆದರ್ಶವಾಗಬೇಕು ಎನ್ನುವಲ್ಲಿ ಭಾರತದ ಒಟ್ಟೂ ರಾಜಕೀಯವೇ ಪರಿಶುದ್ಧ ವಾಗಬೇಕಾದ ಅನಿವಾರ್ಯತೆ ಯಲ್ಲಿದೆ. ಅಂದಮಾತ್ರಕ್ಕೆ ಯಾವನೂ ನಿಷ್ಪಾಪಿಯಾಗಿ ರಾಜಕಾರಣ ಮಾಡಲು ಸಾಧ್ಯವಿಲ್ಲ. ಈಗ್ಗೆ ಆರು ವರ್ಷಗಳಿಂದ ಆ ದಿಕ್ಕಿನೆಡೆಗೆ ಮೋದಿ ಸರಕಾರ ದಾಪುಗಾಲಿಡುತ್ತಿದೆ.

ಯಾವುದೇ ಭ್ರಷ್ಟಾಚಾರವಿಲ್ಲದೆ ಸ್ವಾವಲಂಬನೆಯ ಪಥದಲ್ಲಿ ಭಾರತವನ್ನು ಕೊಂಡೊಯ್ಯುತ್ತಿರುವ ಮೋದಿಯ ಆಂತರಿಕ
ಮತ್ತು ಬಾಹ್ಯ ಆಡಳಿತ ನೀತಿ ಯನ್ನು ಜಗತ್ತು ಒಪ್ಪಿದೆ, ಸ್ವೀಕರಿಸಿದೆ. ಮೆಚ್ಚಿದೆ. ಬೆಂಬಲಿಸಿದೆ. ಇದು ಭಾರತದ ಚರಿತ್ರೆಯ ಸಾರ್ವ ಕಾಲಿಕ ಹೆಗ್ಗಳಿಕೆ! ಒಬ್ಬ ಮೋದಿಯಿಂದ ಎಲ್ಲವನ್ನೂ ಸರಿಮಾಡಲು ಸಾಧ್ಯವಿದೆ ಯೆಂದು ಭಾವಿಸುವುದು ಮೂರ್ಖತನ. ಸಾವಿರ ಮೋದಿಗಳು ಹುಟ್ಟಿ ಬಂದರೂ ಅದು ಸಾಧ್ಯವಿಲ್ಲ. ಮಾಧ್ಯಮಗಳಲ್ಲಿ ವರದಿಯನ್ನಾಧರಿಸಿ ಹೇಳಬಹುದಾದದ್ದು ಏನೆಂದರೆ, ಹಾಥರಸ್ ಪ್ರಕರಣದಲ್ಲಿ ಯುಪಿ ಸರಕಾರ ಎಡವಿದ್ದು ಮಾತ್ರ ಸತ್ಯವೆನಿಸುತ್ತದೆ. ಸೆಪ್ಟೆೆಂಬರ್ 14ರಂದು ಠಾಕೂರ್ ಜನಾಂಗದ ನಾಲ್ವರು ಯುವಕರು ಸಾಮೂಹಿಕ ಹತ್ಯಾಚಾರ ಮಾಡಿದ್ದರು.

ಅತ್ಯಾಚಾರ ಮಾಡಿ ನಾಲಗೆಯನ್ನು ಕತ್ತರಿಸಿ, ಕತ್ತಿನ ಮೂಳೆಯನ್ನು ಮುರಿದು ನಿರ್ದಯವಾಗಿ ಕೊಂದಿದ್ದಾರೆ ಎಂಬ ವಿಚಾರದಲ್ಲಿ ಪರ ವಿರೋಧ ಏನೇ ಇದ್ದರೂ ಅಲ್ಲಿನ ಸರಕಾರ ಅವಸರದಲ್ಲಿ ಯುವತಿಯ ಕುಟುಂಬದ ಅನುಮತಿಯನ್ನೂ ಪಡೆಯದೆ ಆಕೆಯ ದೇಹವನ್ನು ರಾತ್ರೋರಾತ್ರಿ ಸುಟ್ಟಿದ್ದು, ಯುವತಿಯ ಪರವಾಗಿ ನ್ಯಾಯಕ್ಕಾಗಿ ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್ ಗಾಂಧಿ ತೆರಳಿದ್ದಾಗ ಬಂಧಿಸಿದ್ದು, ಕೊನೆಗೆ ಭೇಟಿಗೆ ಅವಕಾಶ ನೀಡಿದ್ದು, ಅನಂತರ ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್ ಗಾಂಧಿ ಸೇರಿ ಇನ್ನೂರು ಜನರ ಮೇಲೆ ಎಫ್‌ಐಅರ್ ದಾಖಲಿಸಿದ್ದು, ಸರಕಾರದ ಆತುರದ ನಡೆಗಳು, ಯಾರನ್ನೋ ರಕ್ಷಿಸುವ ಸರಕಾರದ ನಿಲುವು, ಸರಕಾರ ಎಲ್ಲ ಅನಾಹುತಗಳನ್ನು ಮಾಡಿಕೊಂಡು ಕೊನೆಯಲ್ಲಿ ಪ್ರಕರಣ ವನ್ನು ಸಿಬಿಐಗೆ ಒಪ್ಪಿಸಿದ್ದು ಮಾತ್ರ ಸಂದೇಹಕ್ಕೆ ಎಡೆಮಾಡಿಕೊಡುವುದರಲ್ಲಿ ಸಂದೇಹವೇ ಇಲ್ಲ. ಹತ್ಯಾಚಾರ ನಡೆದಿದೆ ಎಂದಾಕ್ಷಣ ಮುಖ್ಯಮಂತ್ರಿಗಳು ನೊಂದವ ರಿಗೆ ಬೆಂಬಲವನ್ನು ನೀಡಿ, ಧೈರ್ಯ, ಸಾಂತ್ವನವನ್ನು ನೀಡಿ ಪ್ರಕರಣದ ತನಿಖೆಗೆ ಮುಂದಾಗಿದ್ದರೆ ಇಷ್ಟೆಲ್ಲ ದೊಡ್ದಮಟ್ಟದ
ಪ್ರತಿಭಟನೆಯ ಅನಾಹುತಗಳು ದೇಶವ್ಯಾಪಿ ನಡೆಯಲು ಸಾಧ್ಯವಿರುತ್ತಿರಲ್ಲಿಲ್ಲ.

ಸರಕಾರ ಎಡವಿತು ಎಂದು ನಾನು ಹೇಳುವುದು ಈ ಕಾರಣಕ್ಕಾಗಿ! ಈ ಪ್ರಕರಣದಲ್ಲಿ ಸರಕಾರದ ನಡೆ ತಪ್ಪಿದೆಯೋ ಇಲ್ಲವೋ ಆಮೇಲಿನ ವಿಚಾರ. ಆದರೆ ಸಂತ್ರಸ್ತರ ಪರ ಸರಕಾರ ಔಪಚಾರಿಕವೋ, ಅನೌಪಚಾರಿಕವೋ ಆಗಿಯಾದರೂ ಸ್ಪಂದಿಸಬೇಕಿತ್ತು. ಯಾಕೆಂದರೆ ಅದು ಜನರಿಂದ ಆಯ್ಕೆಯಾದ ಸರಕಾರ ಎಂಬ ಕಾರಣದಿಂದ. ಯಾವುದೇ ಪ್ರಕರಣದಲ್ಲಿ ಸರಕಾರ ತಪ್ಪಿದೆಯೆಂದು ಗೂಬೆ ಕೂರಿಸಿ ದಾಂಧಲೆಯೆಬ್ಬಿಸುವುದು ಯಾವುದೇ ವಿರೋಧ ಪಕ್ಷಗಳ ಮೊದಲ ರಾಜಕೀಯ ಕಾರ್ಯಸೂಚಿಯಾಗಿರುತ್ತದೆ. ಇದು ಯೋಗಿಯವರಿಗೆ ಗೊತ್ತಿಲ್ಲದ ವಿಚಾರವೇನಲ್ಲ.

ಯಾಕೆಂದರೆ ಹಾಥರಸ್ ಪ್ರಕರಣದ ಹಿಂದೆ ಅನೇಕ ಅಪಸೊಲ್ಲುಗಳು ಹುಟ್ಟಿಕೊಂಡಿವೆ. ಈ ಪ್ರತಿಭಟನೆಯ ಹಿಂದೆ ಇಡಿಯವರು ಹವಾಲಾದ 100ಕೋಟಿ ಹಣ ಹೂಡಿಕೆಯ ಬಗ್ಗೆ ತನ್ನಲ್ಲಿ ಸಾಕ್ಷ್ಯಗಳಿವೆಯೆಂದು ಹೇಳಿದೆ. ಸಿಎಎ ಮಾದರಿಯ ಹೋರಾಟವನ್ನು ಮಾಡಲು, ಕೋಮು ಸಂಘರ್ಷವನ್ನು ಹಬ್ಬಿಸಲು ಮಾರಿಷಸ್‌ನಿಂದ 50ಕೋಟಿ ಬಂದಿದೆಯೆಂದು ಇಡಿ ಹೇಳಿದೆ. ಸಿಎಎ ಪ್ರತಿಭಟನೆಯ ವೇಳೆ ಪಿಎಎಫ್‌ಐ ಸಂಘಟನೆಗೆ ವಿದೇಶದಿಂದ 120ಕೋಟಿ ಬಂದಿರುವುದು ಬೆಳಕಿಗೆ ಬಂದಿತ್ತು.

ಜಸ್ಟಿಸ್ ಫಾರ್ ಹಾಥರಸ್ ಹೆಸರಿನಲ್ಲಿ ಕಪ್ಪುಪಟ್ಟಿಗೆ ಸೇರಿದ ವೆಬ್‌ಸೈಟನ್ನು ರೂಪಿಸಿರುವ ಹಿಂದಿನ ಶಕ್ತಿಯನ್ನು ಇಡಿ ಹುಡುಕು ತ್ತಿದ್ದು, ಈ ವೆಬ್ ಸೈಟ್ ಮೂಲಕ ವಿದೇಶಿ ಹಣ ಸಹಾಯಕ್ಕಾಗಿ ಕಾರ್ಯತಂತ್ರ ರೂಪಿಸುತ್ತಿದೆಯೇ ಎಂದು ಇಡಿ ಶೋಧಿಸುತ್ತಿದೆ. ಈ ಮಧ್ಯೆ ಈ ಹತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಸಂದೀಪ್ ಸಿಂಗ್‌ನೊಂದಿಗೆ ಮೃತಪಟ್ಟ ಯುವತಿ ನಿರಂತರವಾಗಿ 104 ಬಾರಿ ಫೋನಿನಲ್ಲಿ ಸಂಪರ್ಕದಲ್ಲಿದ್ದಳು ಎಂಬ ಕುತೂಹಲದ ಅಂಶವನ್ನು ಪೊಲೀಸರು ಹೊರಗೆಡವಿದ್ದಾರೆ. ಇದಕ್ಕೆ ಪೂರಕ ವೆಂಬಂತೆ ಹಾಥರಸ್ ಗ್ರಾಮದ ಮುಖಂಡನೊಬ್ಬ, ಮೃತಪಟ್ಟ ಯುವತಿ ಮತ್ತು ಪ್ರಮುಖ ಆರೋಪಿ ಸಂದೀಪ್ ಸಿಂಗ್ ಸಂಬಂಧದ ಬಗ್ಗೆ ಯುವತಿಯ ಕುಟುಂಬದಲ್ಲಿ ತೀವ್ರ ಅಸಮಾಧಾನ ಇತ್ತು, ಆಕ್ಷೇಪಗಳಿತ್ತು.

ಆದರೂ ಇವರಿಬ್ಬರ ಸಂಪರ್ಕ ಮುಂದುವರಿದಿತ್ತು. ಆರೋಪಿಯೇ ಯುವತಿಯನ್ನು ಭೇಟಿಯಾಗಲು ಹೋದಾಗ ಆಕೆಯ ಕುಟುಂಬದವರಿಂದಲೇ ಆಕೆಯ ಮೇಲೆ ಹಲ್ಲೆಗಳು ನಡೆದಿರಬಹುದು, ಆಕೆ ಗಂಭೀರವಾಗಿ ಗಾಯಗೊಂಡಿರಬಹುದು
ಎಂದಿದ್ದಾನೆ. ಇನ್ನೂ ಒಂದು ಮಜಾ ಏನೆಂದರೆ, ಯುಪಿ ಸರಕಾರದ ವಿರುದ್ಧ ಸುಳ್ಳು ಹೇಳಲು ಹಾಥರಸ್ ಸಂತ್ರಸ್ತ ಕುಟುಂಬಕ್ಕೆ 50ಲಕ್ಷ ರುಪಾಯಿಯ ಆಮಿಷವೊಡ್ಡಲಾಗಿದೆ ಎಂಬ ವಿಚಾರ. ಪತ್ರಕರ್ತೆಯೊಬ್ಬರು ಸಂತ್ರಸ್ತೆಯ ಸಹೋದರನೊಬ್ಬನನ್ನು
ಸಂಪರ್ಕಿಸಿದ್ದಾರೆ. ಸರಕಾರದ ವಿರುದ್ಧ ನನಗೂ ತೃಪ್ತಿಯಿಲ್ಲ ಎಂದಿರುವ ಆಕೆ, ಮುಖ್ಯಮಂತ್ರಿ ವಿರುದ್ಧ ಸುಳ್ಳು ಹೇಳಿಕೆ ನೀಡು ವಂತೆ ಪ್ರಚೋದನೆ ನೀಡಿದ್ದಾರೆಂದು ಪೊಲೀಸರು ಹೇಳಿದ್ದಾರೆ. ಹಾಥರಸ್ ಪ್ರಕರಣ ನಡೆದ ಹೊತ್ತಲ್ಲೇ ಪಕ್ಕದ ರಾಜಸ್ಥಾನ ದಲ್ಲಿ ಇಬ್ಬರು ಸಹೋದರಿಯರ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ಬಗ್ಗೆ ಅಲ್ಲಿಯ ಮುಖ್ಯಮಂತ್ರಿ ಗೆಹ್ಲೋಟ್ ನೀಡಿದ
ನಿರ್ಲಕ್ಷ್ಯದ ಹೇಳಿಕೆ ಸುದ್ದಿಯಾಗಲೇ ಇಲ್ಲ., ಹರ್ಯಾಣದ ಮೊರ್ನಿಯಲ್ಲಿ 2018ರಲ್ಲಿ ನಡೆದ ಸಾಮೂಹಿಕ ಹತ್ಯಾಚಾರ,
ರಾಜಸ್ಥಾನದಲ್ಲಿ ಅರ್ಚಕನೊಬ್ಬನ ಮೇಲೆ ಪೆಟ್ರೋಲ್ ಸುರಿದು ಸಾಯಿಸಿದ್ದು, ದೇಶದಲ್ಲಿ ನಡೆದ ಇಂಥ ಅದೆಷ್ಟೋ ಅಮಾನ ವೀಯ ಘಟನೆಗಳು ತೆರೆಯ ಮರೆಯಲ್ಲೇ ಉಳಿದುಬಿಡುತ್ತವೆ.

ಆದರೆ ಆಯ್ದ ಕೆಲವು ಘಟನೆಗಳಿಗೆ ಮಾತ್ರ ದೇಶವ್ಯಾಪಿ ಪ್ರತಿಭಟನೆಗಳು ನಡೆಯುತ್ತವೆ. ಇದರ ಹಿಂದಿನ ರಾಜಕೀಯ ಅಜೆಂಡಾ ಏನು? ಯಾಕೆ ಹೀಗಾಗುತ್ತದೆ? ಪ್ರತಿಭಟನೆಗಳು ರಾಜಕೀಯ ಸ್ವರೂಪ ಪಡೆದು ವಿನ್ಯಾಸವನ್ನು ವಿಸ್ತರಿಸಿಕೊಳ್ಳುವುದೇಕೆ? ಹತ್ಯಾ ಚಾರಕ್ಕೆ ಜಾತಿ-ಮತ-ಧರ್ಮಗಳ ಹಂಗನ್ನು ತೊಡಿಸಿ ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುವವರ ವಿರುದ್ಧ ಮೊದಲು ಕಠಿಣ ಶಿಕ್ಷೆಯಾಗಬೇಕು. ಮನೆಯೊಂದು ಹೊತ್ತಿ ಉರಿಯುವಾಗ ಮೈಯ ಚಳಿ ಕಾಯಿಸಿಕೊಳ್ಳುವವರ ವಿರುದ್ಧ ಮೊದಲು ಕೇಸು ದಾಖ ಲಾಗಿ ಕಠಿಣ ಶಿಕ್ಷೆಯಾಗಬೇಕು.

ಕೊನೆಯ ಮಾತು: ಬಿಜೆಪಿ ಸರಕಾರ ಇದ್ದ ರಾಜ್ಯದಲ್ಲಿ ಹತ್ಯಾಚಾರಗಳು ನಡೆದರೆ ಆ ರಾಜ್ಯದ ಮುಖ್ಯಮಂತ್ರಿಯೇ ಕಾರಣ ನಾಗುತ್ತಾನೆ. ಬಿಜೆಪಿ ಸರಕಾರ ಇಲ್ಲದ ರಾಜ್ಯದಲ್ಲಿ ಹತ್ಯಾಚಾರಗಳು ನಡೆದರೆ ಮೋದಿ ಕಾರಣನಾಗುತ್ತಾನೆ. ಇದು ಸದ್ಯದ ಬಲು ವಿಚಿತ್ರವಾದ ಮೊಂಡುವಾದ! ಹಾಥರಸ್ ಹತ್ಯಾಚಾರ ಪ್ರಕರಣದ ತನಿಖೆ ಪಾರದರ್ಶಕವಾಗಿ ನಡೆಯಲಿ ಎಂದು ಆಶಿಸೋಣ. ದೇಶದ ನೆಮ್ಮದಿ, ಶಾಂತಿ ಕದಡಲು ಯಾರಿಗೂ ಹಕ್ಕಿಲ್ಲ ಎಂಬ ಪ್ರಜ್ಞೆಯೊಂದಿಗೆ ನಾವೆಲ್ಲ ಬದುಕೋಣ.