ಮೂರ್ತಿಪೂಜೆ
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ಕಣಕ್ಕಿಳಿಯಬೇಕು ಅಂತ ಜೆಡಿಎಸ್‌ನ ಹಲನಾಯಕರು ಮಾಜಿ ಪ್ರಧಾನಿ ದೇವೇಗೌಡರ ಮೇಲೆ ಒತ್ತಡ ಹೇರಿದ್ದಾರೆ. ಚುನಾವಣಾ ಸ್ಪರ್ಧೆಯ ಬಗ್ಗೆ ದೇವೇಗೌಡರು ಇತ್ತೀಚಿಗೆ ಹಲವು ಬಾರಿ ನಿರಾಕರಿಸಿದ್ದಾರಾದರೂ ಪಕ್ಷದ ಭದ್ರಕೋಟೆ ಎನ್ನಿಸಿಕೊಂಡಿರುವ ಜಿಲ್ಲೆಗಳಲ್ಲಿ ಜೆಡಿಎಸ್‌ಗೆ ಯಶಸ್ಸು ಸಿಗಬೇಕು ಎಂದರೆ ಅವರು ಕಣಕ್ಕಿಳಿಯಬೇಕು ಎಂಬುದು ಈ ನಾಯಕರ ವಾದ.
ಕಳೆದ ಲೋಕಸಭಾ ಚುನಾವಣೆಯ ವೇಳೆ ತಮ್ಮ ಮೊಮ್ಮಗ, ರೇವಣ್ಣ ಅವರ ಪುತ್ರ ಪ್ರಜ್ವಲ್ ಅವರಿಗೆ ಹಾಸನ ಕ್ಷೇತ್ರವನ್ನು ಬಿಟ್ಟುಕೊಟ್ಟ ದೇವೇಗೌಡರು ತುಮ ಕೂರು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಆದರೆ ಅಷ್ಟೊತ್ತಿಗಾಗಲೇ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವಣ ಮೈತ್ರಿ ಬಿರುಕು ಬಿಟ್ಟಿತ್ತಲ್ಲ? ಹೀಗಾಗಿ ಕಾಂಗ್ರೆಸ್‌ನ ಕೆಲ ನಾಯಕರು ಚಕ್ರವ್ಯೂಹ ರಚಿಸಿ ಗೌಡರು ಸೋಲುವಂತೆ ನೋಡಿಕೊಂಡರು. ಇದಾದ ನಂತರ ದೇವೇಗೌಡರು ರಾಜ್ಯಸಭೆಗೆ ಹೋದರೇನೋ ಸರಿ, ಆದರೆ ಈ ಬೆಳವಣಿಗೆಯಾದ ನಂತರ ಅವರಿಗೆ ಲೋಕಸಭೆಗೆ ಹೋಗುವ ಆಸಕ್ತಿಯೂ ಇಲ್ಲ, ವಯಸ್ಸೂ ಅವರಿಗೆ ಸಹಕಾರ ಕೊಡುತ್ತಿಲ್ಲ.
ಆದರೆ ಅವರ ನಿರಾಸಕ್ತಿಯನ್ನು ಒಪ್ಪಲು ಜೆಡಿಎಸ್‌ನ ಶಾಸಕರನೇಕರು ತಯಾರಿಲ್ಲ. ಇದೇ ಕಾರಣಕ್ಕಾಗಿ ಇತ್ತೀಚಿನ ಪಕ್ಷದ ಶಾಸಕಾಂಗ ಸಭೆಯಲ್ಲಿ ಹಿರಿಯ ಶಾಸಕರೊಬ್ಬರು, ‘ಮುಂದಿನ ಪಾರ್ಲಿಮೆಂಟ್ ಚುನಾವಣೆ ಯಲ್ಲಿ ನಮ್ಮ ಪಕ್ಷ ಹಾಸನ ಕ್ಷೇತ್ರದಲ್ಲಿ ಗೆಲ್ಲಬೇಕು ಮತ್ತು ಅದೇ ಕಾಲಕ್ಕೆ ಹಳೆಮೈಸೂರು ಭಾಗದ ಹಲವು ಜಿಲ್ಲೆ ಗಳಲ್ಲಿ ಗೆಲುವಿನ ಕನಸು ಕಾಣಬೇಕೆಂದರೆ ದೊಡ್ಡವರು ಚುನಾವಣಾ ಕಣಕ್ಕಿಳಿಯಬೇಕು. ಇಲ್ಲದಿದ್ದರೆ ಜೆಡಿಎಸ್ ಸ್ಥಿತಿ ಕಷ್ಟಕರವಾಗಬಹುದು’ ಎಂದರು.
ಸಭೆಯಲ್ಲೇ ಇದ್ದ ದೇವೇಗೌಡರು ಆಗ, ‘ನೀವು ಹೇಳಿದ್ದು ಅರ್ಥವಾಗುತ್ತಿದೆ. ಆದರೆ ನನಗೆ ವಯಸ್ಸಾಯಿತು. ದೇಹ ಸಹಕಾರ ಕೊಡುತ್ತಿಲ್ಲ. ಹೀಗಿರುವಾಗ ನಾನು ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರೂ ಲೋಕಸಭೆಗೆ ಬೇರೆಯವರ ಆಸರೆ ಪಡೆದು ಹೋಗಬೇಕು’ ಎಂದರಂತೆ. ಆದರೆ ಇದನ್ನೊಪ್ಪದ ಆ ಹಿರಿಯ ಶಾಸಕರು, ‘ಅದು ದೊಡ್ಡ ವಿಷಯವಲ್ಲ ಸರ್, ನೀವು ಸಂಸತ್ತನ್ನು ಪ್ರವೇಶಿಸಿದರೆ ಅದರ ಸಂದೇಶವೇ ಬೇರೆ. ಅದೇ ಕಾಲಕ್ಕೆ ಜೆಡಿಎಸ್‌ನ ಉಳಿವಿನ ದೃಷ್ಟಿಯಿಂದಲೂ ಅದು ಅನಿವಾರ್ಯ’ ಎಂದರೆ, ದೇವೇಗೌಡರು ಅದನ್ನೂ ಒಪ್ಪದೆ, ‘ನಾನು ಮತ್ತೊಬ್ಬರ ಆಸರೆಯಲ್ಲಿ ಪಾರ್ಲಿಮೆಂಟಿಗೆ ಹೋದರೆ ಪ್ರಧಾನಿ ಮೋದಿ ಅವರಿಗೆ ಅದು ಅರ್ಥ ವಾಗುತ್ತದೆ, ವಿಷಯಾಧಾರಿತವಾಗಿ ಮಾತನಾಡಲು ಗೌಡರು ಬರುತ್ತಿದ್ದಾರೆ ಅಂತ ಗೊತ್ತಾಗುತ್ತದೆ.
ಆದರೆ ಮಾಧ್ಯಮದ ಕ್ಯಾಮೆರಾಗಳಿಗೆ ಅದು ಗೊತ್ತಾಗುವುದಿಲ್ಲ’ ಎಂದರಂತೆ. ಹೀಗೆ ಹಾಸನದಿಂದ ಸ್ಪಽಸಲು ತಮಗೆ ಆಸಕ್ತಿಯಿಲ್ಲ ಎಂದು ದೇವೇಗೌಡರೇನೋ ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ ಪಕ್ಷವನ್ನು ಉಳಿಸಿಕೊಳ್ಳಲು ಅವರನ್ನು ಕಣಕ್ಕಿಳಿಸಬೇಕು, ಮುಖ್ಯವಾಗಿ ಹಾಸನ ಜಿಲ್ಲೆಯಲ್ಲಿ ೫ ಕವಲುಗಳಾಗಿ ಒಡೆದಿರುವ ಜೆಡಿಎಸ್ ಒಂದಾಗಿ ದುಡಿಯಬೇಕೆಂದರೆ ದೇವೇ ಗೌಡರು ಕ್ಯಾಂಡಿಡೇಟ್ ಆಗುವುದು ಅನಿವಾರ್ಯ ಎಂಬುದು ಬಹುತೇಕ ಶಾಸಕರ ಲೇಟೆಸ್ಟು ಪಟ್ಟು.
ಅಂದ ಹಾಗೆ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಅವರು ತಮ್ಮ ಕುಟುಂಬದ ಹಲವರ ಜತೆ ಸೇರಿ ಇತ್ತೀಚೆಗೆ ಯುರೋಪ್ ಪ್ರವಾಸಕ್ಕೆ ಹೋಗಿದ್ದರಲ್ಲ? ಆ ವೇಳೆ ದೇವೇಗೌಡರ ಮತ್ತೊಬ್ಬ ಪುತ್ರ ರೇವಣ್ಣ ಪದ್ಮನಾಭನಗರದ ನಿವಾಸದಲ್ಲಿ ತಂದೆಯನ್ನು ಭೇಟಿಯಾಗಿ, ಹಾಸನದಿಂದ ನೀವು ಸ್ಪರ್ಧಿಸುವುದು ಒಳ್ಳೆಯದು ಅಂದಾಗ ದೇವೇಗೌಡರು ಉತ್ಸಾಹ ತೋರಿಸಿಲ್ಲವಾದರೂ ಈಗಿನ ಪರಿಸ್ಥಿತಿಯಲ್ಲಿ ಪಕ್ಷವನ್ನು ಮೇಲೆತ್ತಲು ತಾವು ಸ್ಪರ್ಧಿಸುವುದು
ಅನಿವಾರ್ಯವೇ ಎಂಬ ಗೊಂದಲ ಅವರನ್ನು ಕಾಡುತ್ತಿದೆ.
ಕಳೆದ ಚುನಾವಣೆಯಲ್ಲಿ ಹಾಸನದಿಂದ ಸ್ಪರ್ಧಿಸಿ ಗೆದ್ದಿದ್ದ ರೇವಣ್ಣ ಅವರ ಪುತ್ರ ಪ್ರಜ್ವಲ್‌ರಿಗೆ ಈಗ ಕ್ಷೇತ್ರದ ಮೇಲೆ ಹಿಡಿತವಿಲ್ಲ. ಹೀಗಾಗಿ ದೇವೇಗೌಡರನ್ನು ಹೊರತುಪಡಿಸಿ ಬೇರೆ ಯಾರೇ ಸ್ಪರ್ಧಿಸಿದರೂ ಹಾಸನದಿಂದ ಗೆಲುವು ಸಾಧ್ಯವಿಲ್ಲ ಅಂತ ಹಲವು ಶಾಸಕರು ಭಾವಿಸುತ್ತಿದ್ದಾರೆ. ಅಷ್ಟೇ ಅಲ್ಲ, ಈ ಬಗ್ಗೆ ಕುಮಾರಸ್ವಾಮಿ ಅವರಿಗೆ ಪದೇ ಪದೆ ಇದನ್ನೇ ಹೇಳುತ್ತಿದ್ದಾರೆ. ಹಲವು ಶಾಸಕರ ಭಾವನೆ ಕುಮಾರಸ್ವಾಮಿ ಅವರಿಗೆ ಈ ಹಿಂದೆಯೇ ಬಂದಿತ್ತೋ ಏನೋ ಗೊತ್ತಿಲ್ಲ. ಹೀಗಾಗಿ ಕೆಲ ದಿನಗಳ ಹಿಂದೆ ಅವರು, ‘ಪಾರ್ಲಿಮೆಂಟ್ ಚುನಾವಣೆಯಲ್ಲಿ ಹಾಸನದಿಂದ ನಮ್ಮ ಕುಟುಂಬದ ಯಾರೊಬ್ಬರಿಗೂ ಟಿಕೆಟ್ ಕೊಡುವುದಿಲ್ಲ’ ಎಂದಿದ್ದರು.
ಈಗಿನ ಬೆಳವಣಿಗೆ ನೋಡಿದರೆ ಅವರ ಮಾತೇ ಗಟ್ಟಿ ಯಾಗುಳಿಯುವಂತೆ ಕಾಣಿಸುತ್ತಿದೆ. ವೇಣುಗೋಪಾಲ್ ಸಿಟ್ಟಾಗಿದೆ ಕೆ? ಕಳೆದ ವಾರ ಕಾಂಗ್ರೆಸ್ ಹೈಕಮಾಂಡ್‌ನ ಬುಲಾವ್ ಹಿನ್ನೆಲೆ ಯಲ್ಲಿ ರಾಜ್ಯದ ೩೦ಕ್ಕೂ ಹೆಚ್ಚು ನಾಯಕರು ದಿಲ್ಲಿಗೆ ಹೋಗಿದ್ದರಲ್ಲ? ಈ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ,
ಕರ್ನಾಟಕದಲ್ಲಿ ಪಕ್ಷದ ಉಸ್ತುವಾರಿಯಾದ ರಣದೀಪ್ ಸಿಂಗ್ ಸುರ್ಜೇವಾಲ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮಂತ್ರಿಗಳ ಸಭೆ ನಡೆಸಿದರು. ಈ ಸಭೆಗೆ ಹೋದ ಮಂತ್ರಿಗಳ ಪೈಕಿ ಹಳೆ ಮೈಸೂರಿನ ಇಬ್ಬರು ಮತ್ತು ಉತ್ತರ ಕರ್ನಾಟಕ ಭಾಗದ ಇಬ್ಬರು ಸಚಿವರ ಮೇಲೆ ವೇಣುಗೋಪಾಲ್ ಎಗಾದಿಗಾ ಮುಗಿಬಿದ್ದರಂತೆ.
‘ನಿಮ್ಮನ್ನು ಮಂತ್ರಿ ಮಾಡಿರುವುದು ಆ ಜಾಗಕ್ಕೆ ಬೇರೆಯವರು ಇಲ್ಲ ಅಂತಲ್ಲ, ಬದಲಿಗೆ ಚೆನ್ನಾಗಿ ಕೆಲಸ ಮಾಡಿ ಅಂತ. ನೀವು ನೋಡಿದರೆ ವಿಪರೀತ ಆಕ್ಟೀವ್ ಆಗಿದ್ದೀರಿ. ನಿಮ್ಮ ಆಕ್ಟೀವ್ ನೆಸ್ ನೋಡಿ ಪಕ್ಷದ ಹಲ ಶಾಸಕರು ಸಿಟ್ಟಾಗಿದ್ದಾರೆ. ಇನ್ನು ಮುಂದೆ ಇದೆಲ್ಲ ಬೇಡ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದನ್ನು ಕಲಿಯಿರಿ, ಇಲ್ಲದಿದ್ದರೆ ಕಷ್ಟ ಎದುರಿಸುತ್ತಿರಿ’ ಅಂತ ಅವರು ಕ್ಲಾಸ್ ತೆಗೆದುಕೊಂಡಾಗ ಸಭೆಯಲ್ಲಿದ್ದ ಹಿರಿಯ ಮಂತ್ರಿಗಳು ದಂಗಾಗಿದ್ದರಂತೆ. ಈ ಸಂದರ್ಭದಲ್ಲಿ ವೇಣುಗೋಪಾಲ್ ಅವರ ದಾರಿಯನ್ನೇ ಹಿಡಿದ ಖರ್ಗೆ ಮತ್ತು ಸುರ್ಜೇವಾಲ ಕೂಡಾ, ವರ್ಗಾವಣೆ ವಿಷಯದಲ್ಲಿ ಯಾವ್ಯಾವ ಮಂತ್ರಿಗಳ ಮೇಲೆ
ಶಾಸಕರ ಕಂಪ್ಲೇಂಟ್ ಬಂದಿದೆ ಅಂತ ವಿವರಿಸಿ ಕಿರಿಕಿರಿ ಮಾಡಿದ್ದಾರೆ.
ಸಭೆಯ ನಂತರ ಹೊರಬಂದ ಹಿರಿಯ ಮಂತ್ರಿ ಯೊಬ್ಬರು ರಾಜ್ಯದ ನಾಯಕರೊಬ್ಬರ ಬಳಿ, ‘ಇದೇನ್ರೀ? ಸರರ್ಕಾರ ಬಂದು ೩ ತಿಂಗಳಾಗಿಲ್ಲ, ಅಷ್ಟರಲ್ಲೇ ನಮ್ಮವರನ್ನು ರುಬ್ಬುತ್ತಿದ್ದಾರೆ’ ಎಂದರಂತೆ. ಪಾರ್ಲಿಮೆಂಟ್ ಗೆಲುವು ಸುಲಭವಲ್ಲ ಈ ಮಧ್ಯೆ ಮುಂದಿನ ಲೋಕಸಭಾ ಚುನಾವಣೆಯ ತಯಾರಿಗೆ ಅಂತ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ರಾಜ್ಯದ ನಾಯಕರ ಸಭೆ ನಡೆಯಿತಲ್ಲ? ಅದು ಶುರು ವಾದಾಗ ಕೆಲ ನಾಯಕರು ರಾಹುಲ್‌ರಿಗೆ ಜಾಕ್ ಹಾಕಲು ಶುರುಮಾಡಿ ದರಂತೆ. ‘ನಿಮ್ಮಿಂದಾಗಿ ಇವತ್ತು ನಾವು ಕರ್ನಾಟಕದಲ್ಲಿ ಅಧಿಕಾರ ಗಳಿಸಿದ್ದೇವೆ. ಇದೇ ವೇಗದಲ್ಲಿ ಹೋದರೆ ಮುಂದಿನ ಪಾರ್ಲಿಮೆಂಟ್ ಚುನಾವಣೆಯಲ್ಲೂ
ದೊಡ್ಡ ಸಂಖ್ಯೆಯ ಸೀಟುಗಳನ್ನು ಗೆಲ್ಲುತ್ತೇವೆ’ ಎಂದು ಇಂಥವರು ಹೇಳುತ್ತಿದ್ದರೆ ಬಿ.ಕೆ.ಹರಿಪ್ರಸಾದ್ ಅವರಂಥ ನಾಯಕರು ಮಾತ್ರ ವಸ್ತುಸ್ಥಿತಿಯನ್ನು ವಿವರಿಸಿದರಂತೆ.
‘ಪಾರ್ಲಿಮೆಂಟ್ ಚುನಾವಣೆಯಲ್ಲಿ ನಮಗೆ ಬಿಜೆಪಿಯೇ ನೇರ ಎದುರಾಳಿ, ಅಸೆಂಬ್ಲಿ ಎಲೆಕ್ಷನ್ನಿನಲ್ಲಿ ನಾವು ೧೩೫ ಸೀಟು ಗೆದ್ದು ಅಧಿಕಾರ ಹಿಡಿದಿರಬಹುದು. ಆದರೆ ಕಳೆದ ಚುನಾವಣೆಯ ಮತ ಹಂಚಿಕೆಯ ಸ್ವರೂಪ ಗಮನಿಸಿದರೆ ನಾವು ಬಿಜೆಪಿಯ ವೋಟ್ ಬ್ಯಾಂಕನ್ನು ಅಲುಗಾಡಿಸಿಲ್ಲ ಎಂಬುದು ಖಚಿತವಾಗುತ್ತದೆ. ೨೦೧೮ರ ವಿಧಾನಸಭಾ ಚುನಾವಣೆಯಲ್ಲಿ ಶೇ.೩೬ರಷ್ಟು ಮತಗಳನ್ನು ಪಡೆದಿದ್ದ ಬಿಜೆಪಿ, ಈ ಸಲವೂ ಅಷ್ಟೇ ಮತಗಳನ್ನು ಪಡೆದಿದೆ. ಹೀಗಾಗಿ ಬಿಜೆಪಿಯನ್ನು ನಾವು ಮೂಲೆಗುಂಪು ಮಾಡಿಬಿಟ್ಟಿದ್ದೇವೆ ಎಂಬ ಆತ್ಮವಿಶ್ವಾಸ ವೆಲ್ಲ ವರ್ಕ್ ಔಟ್ ಆಗುವುದಿಲ್ಲ. ಈ ಸಲ ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಪಡೆಯುತ್ತಿದ್ದ ವೋಟುಗಳನ್ನು ನಾವು ಕಿತ್ತುಕೊಂಡಿದ್ದೇವೆ. ಉಳಿದಂತೆ ದಲಿತ, ಮುಸ್ಲಿಂ ಮತಗಳು ಚೆಲ್ಲಾಪಿಲ್ಲಿಯಾಗದೆ ಕನ್‌ಸಾಲಿಡೇಟ್ ಆದ ಪರಿಣಾಮ ನಾವು ಗೆದ್ದಿದ್ದೇವೆ. ಇದೇ ರೀತಿ ಅಸೆಂಬ್ಲಿ ಎಲೆಕ್ಷನ್‌ನ ವೋಟ್ ಪ್ಯಾಟರ್ನೇ ಪಾರ್ಲಿಮೆಂಟ್ ಎಲೆಕ್ಷನ್‌ನಲ್ಲಿ ಮುಂದುವರಿಯುತ್ತದೆ ಅಂತಲ್ಲ.
ರಾಜ್ಯ ಸರಕಾರದ ೫ ಗ್ಯಾರಂಟಿ ಯೋಜನೆಗಳು ನಮಗೆ ಪ್ಲಸ್ ಆಗಬಹುದು ನಿಜ. ಆದರೆ ರಾಷ್ಟ್ರ ರಾಜಕಾರಣದ ವಿಷಯ ಬಂದಾಗ ಮತದಾರರ
ಮನಸ್ಸು ಬೇರೆ ರೀತಿ ಯೋಚಿಸಬಹುದು. ಹೀಗಾಗಿ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಶಾಸಕರನ್ನು ಎಷ್ಟರ ಮಟ್ಟಿಗೆ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾರೆ ಎಂಬುದರ ಮೇಲೆ ಆಯಾ ಲೋಕಸಭಾ ಕ್ಷೇತ್ರಗಳ ಹಣೆಬರಹ ನಿರ್ಧಾರವಾಗುತ್ತದೆ’ ಎಂದರಂತೆ. ಈ ಮಾತುಗಳನ್ನು ಕೇಳಿದ ನಂತರ ರಾಹುಲ್ ರಿಗೂ ಅದು ಹೌದೆನ್ನಿಸಿದೆ. ಪರಿಣಾಮ? ಸಿದ್ಧರಾಮಯ್ಯರ ಸಂಪುಟದ ಸಚಿವರು ತಮಗೆ ವಹಿಸಿದ ಉಸ್ತುವಾರಿ ಕೆಲಸ ವನ್ನು ನೋಡಿಕೊಳ್ಳಲು ಸದ್ಯದಲ್ಲೇ ಜಿಲ್ಲಾಯಾತ್ರೆ
ಆರಂಭಿಸಲಿದ್ದಾರೆ.
ಬಿಜೆಪಿ ಸಂಕಟಕ್ಕಿದೆ ಮದ್ದು ಈ ಮಧ್ಯೆ ರಾಜ್ಯ ಬಿಜೆಪಿಯ ಸಂಕಟಕ್ಕೆ ಖುದ್ದು ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಬಳಿಯೇ ಮದ್ದು ಇದ್ದಂತಿಲ್ಲ. ವಿಧಾನಸಭಾ ಚುನಾವಣೆಯ ಫಲಿತಾಂಶ ಬಂದು ಇಷ್ಟು ದಿನ ಕಳೆದರೂ ಒಬ್ಬ ಶಾಸಕಾಂಗ ನಾಯಕ ನನ್ನು ಆರಿಸಿಕೊಳ್ಳಲಾಗದ ಅದರ ಪರಿಸ್ಥಿತಿ ಬೇರೆಯವರಿ
ಗಿರಲಿ, ಖುದ್ದು ರಾಜ್ಯ ನಾಯಕರಿಗೆ ಅವಮಾನದಂತಾಗಿದೆ. ಮೊನ್ನೆ ಆಪ್ತರ ಜತೆ ಮಾತನಾಡುತ್ತಿದ್ದ ಬಿಜೆಪಿಯ ಮಾಜಿ ಸಚಿವರೊಬ್ಬರು, ‘ಶಾಸಕಾಂಗ ನಾಯಕನ ಸ್ಥಾನಕ್ಕೆ ವರಿಷ್ಠರು ಯಾರನ್ನಾದರೂ ತರಲಿ, ಒಟ್ಟಿನಲ್ಲಿ ಆದಷ್ಟು ಬೇಗ ಆ ಕೆಲಸ ಮಾಡಲಿ. ಒಂದು ವೇಳೆ ಆ ಸ್ಥಾನಕ್ಕೆ ಯಾರನ್ನು ತರಬೇಕು ಎಂಬ ವಿಷಯದಲ್ಲಿ ಗೊಂದಲವಿದ್ದರೆ ಅದಕ್ಕೆ ಯಡಿಯೂರಪ್ಪ ಮತ್ತು ಅನಂತಕುಮಾರ್ ಅವರ ಸೂತ್ರವನ್ನಾದರೂ ಅನುಸರಿಸಲಿ’ ಎನ್ನುತ್ತಿದ್ದರು.
ಅದೇನು ಸೂತ್ರ? ಎಂದು ಈ ಆಪ್ತರು ಕೇಳಿದರೆ, ‘ಹಿಂದೆ ಪಕ್ಷದಲ್ಲಿ ಎಲೆಕ್ಷನ್ ಟಿಕೆಟ್ಟಿಗೋ, ಪಕ್ಷದ ಸ್ಥಾನಮಾನಗಳಿಗಾಗೋ ಫೈಟು ಶುರುವಾದರೆ ಯಡಿಯೂರಪ್ಪ ಮತ್ತು ಅನಂತಕುಮಾರ್ ಒಟ್ಟಿಗೆ ಕುಳಿತುಕೊಳ್ಳುತ್ತಿದ್ದರು. ಇಂತಿಷ್ಟು ಟಿಕೆಟ್ ನಾವು ಹೇಳಿದವರಿಗೆ, ಇಂತಿಷ್ಟು ನೀವು ಹೇಳಿದವರಿಗೆ, ಪಕ್ಷದಲ್ಲಿ ಇಂತಿಷ್ಟು ಸ್ಥಾನ ನಾನು ಹೇಳಿದವರಿಗೆ, ಇಂತಿಷ್ಟು ನೀವು ಹೇಳಿದವರಿಗೆ ಅಂತ ಮಾತನಾಡಿಕೊಳ್ಳುತ್ತಿದ್ದರು. ಪರಿಣಾಮ? ಏನೇ ಸಮಸ್ಯೆ ಇದ್ದರೂ ಇಲ್ಲೇ ಸೆಟ್ಲಾಗಿ
ಹೋಗುತ್ತಿತ್ತು. ಯಾವುದೇ ವಿಷಯ ಹೈಕಮಾಂಡ್ ಲೆವೆಲ್ಲಿಗೆ ಹೋದಾಗ ಅಲ್ಲಿಂದ ವಿರೋಧವೇ ವ್ಯಕ್ತವಾಗುತ್ತಿರಲಿಲ್ಲ. ಅಷ್ಟೇ ಅಲ್ಲ, ಕರ್ನಾಟಕದಲ್ಲೇ ವಿಷಯ ಸೆಟ್ಲಾಗಿರುವಾಗ ನಾವು ಮಧ್ಯೆ ಪ್ರವೇಶಿಸಿ ಮಾಡುವುದೇನು? ಅಂತ ವಾಜಪೇಯಿ, ಅಡ್ವಾಣಿ ಅವರಂಥ ನಾಯಕರು ತಾರೀಪು ಮಾಡುತ್ತಿದ್ದರು.
ಇವತ್ತು ಕರ್ನಾಟಕದಲ್ಲಿ ಉದ್ಭವಿಸಿರುವ ಸಮಸ್ಯೆಗೂ ಇದೇ ಸೂತ್ರವನ್ನು ಪಕ್ಷದ ಹೈಕಮಾಂಡ್ ಅನುಸರಿಸಿದರೆ ಒಳ್ಳೆಯದು. ಹೇಗೆಂದರೆ ಇವತ್ತು ಶಾಸಕಾಂಗ
ನಾಯಕನ ಸ್ಥಾನಕ್ಕೆ ಯಡಿಯೂರಪ್ಪ ಮತ್ತು ಅವರ ವಿರೋಧಿಗಳ ಮಧ್ಯೆ ಸಂಘರ್ಷ ನಡೆದಿದೆ. ಈ ಜಾಗಕ್ಕೆ ಬಸವರಾಜ ಬೊಮ್ಮಾಯಿ ಇಲ್ಲವೇ ಅಶೋಕ್ ಆಗಲಿ ಅಂತ ಯಡಿಯೂರಪ್ಪ ಹೇಳಿದರೆ, ಯತ್ನಾಳ್ ಆಗಲಿ ಅಂತ ಅವರ ವಿರೋಧಿಗಳು ಹೇಳುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ವರಿಷ್ಠರು ಒಂದು ಪರಿಹಾರ ಸೂತ್ರ ಕಂಡುಹಿಡಿಯಬಹುದು.
ಹೇಗೆಂದರೆ, ಹೇಗಿದ್ದರೂ ಇವತ್ತು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೂ ಯಡಿಯೂರಪ್ಪ ಮತ್ತು ಅವರ ವಿರೋಧಿ ಬಣದ ಮಧ್ಯೆ ಫೈಟು ನಡೆಯುತ್ತಿದೆ. ಹೀಗಿರುವಾಗ ರಾಜ್ಯಾಧ್ಯಕ್ಷ ಸ್ಥಾನ ಮತ್ತು ಶಾಸಕಾಂಗ ನಾಯಕನ ಸ್ಥಾನವನ್ನು ಯಡಿಯೂರಪ್ಪ ಮತ್ತು ಯಡಿಯೂರಪ್ಪ ವಿರೋಧಿ ಬಣಕ್ಕೆ ಹಂಚಬೇಕು. ಹಾಗಾದಾಗ ರಾಜ್ಯ ಬಿಜೆಪಿಯಲ್ಲಿ ಎದ್ದಿರುವ ವಿವಾದ ಪರಿಹಾರವಾಗುತ್ತದೆ. ಎಲ್ಲಿಯವರೆಗೆ ಯಡಿಯೂರಪ್ಪ ಮತ್ತು ಅನಂತಕುಮಾರ್ ಅವರ ಈ ಫಿಫ್ಟಿ-ಫಿಫ್ಟಿ ಸೂತ್ರ ಇಂಪ್ಲಿಮೆಂಟ್ ಆಗುವುದಿಲ್ಲವೋ, ಅಲ್ಲಿಯವರೆಗೆ ರಾಜ್ಯ ಬಿಜೆಪಿಯ ಸಂಕಟ ಕೊನೆಯಾಗುವುದಿಲ್ಲ’ ಅಂತ ಈ ಮಾಜಿ ಸಚಿವರು ಹೇಳುತ್ತಿದ್ದರೆ, ಆ ಆಪ್ತರು ಮೆಚ್ಚಿ ತಲೆದೂಗಿದರು.