Sunday, 15th December 2024

ಪಿತೃಗರ್ಪಣೆಯ ಗೆಲವಿಗಾಗಿ ಹೆಣಗಾಡುತ್ತಿದ್ದಾರೆ !

ದಾಸ್ ಕ್ಯಾಪಿಟಲ್

dascapital1205@gmail.com

ಹೇಗಾದರೂ ಸರಿ, ಪಕ್ಷದ ಅಸ್ತಿತ್ವವನ್ನು ಉಳಿಸಿ, ಈ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಿ ಪಕ್ಷದ ದೊಡ್ಡ ಅಸ್ಮಿತೆಯಾದ ತಂದೆಯವರಿಗೆ ಅರ್ಪಿಸಿಬೇಕೆಂಬುದು ಕುಮಾರಸ್ವಾಮಿಯವರ ಬಹುದೊಡ್ಡ ಕನಸಾಗಿದೆ. ಅದಕ್ಕಾಗಿ ಅವರು ಪಂಚರತ್ನ ಯಾತ್ರೆ ಹೊರಟಿದ್ದಾರೆ. ಊರು-ಕೇರಿ ಸುತ್ತಿ ಪ್ರಚಾರವನ್ನು ಕೈಗೊಂಡಿದ್ದಾರೆ.

ಗಂಗೆಯನ್ನು ಕರೆತಂದು ಭೂಮಿಯಲ್ಲಿ ಹರಿಸಿ ತನ್ನ ಪಿತೃಗಳಿಗೆ ಸದ್ಗತಿಯನ್ನು ಕೊಟ್ಟ ಭಗೀರಥ ಪ್ರಯತ್ನದಂತೆ ಕುಮಾರಣ್ಣನ ಪ್ರಯತ್ನ ಸಾಗುತ್ತಿದೆ. ಪಾಪ, ಕುಮಾರಣ್ಣ ಈ ಪ್ರಯತ್ನದಲ್ಲಿ ಒಬ್ರೇ ಕಷ್ಟಪಡುತ್ತಿದ್ದಾರೆ. ಹಲವು ವಿರೋಧಗಳ ಸವಾಲುಗಳನ್ನು ಎದುರಿಸುತ್ತ ಸಾಗುವ ಕುರುಕ್ಷೇತ್ರದ ಅಭಿಮನ್ಯುವಿನಂತೆ ಸರಿಹೊತ್ತಿನ ಚುನಾವಣೆ ಯೆಂಬ ಕುರುಕ್ಷೇತ್ರದ ಅಖಾಡಲ್ಲಿ ಕಾಣುತ್ತಿದ್ದಾರೆ. ಈ ಮಧ್ಯೆ ಅವರು ಇತಿಹಾಸದ ಸಂಶೋಧಕರಾಗಿಯೂ
ಇತಿಹಾಸಜ್ಞರಾಗಿಯೂ ಅಭಿವ್ಯಕ್ತಿಸಿಕೊಳ್ಳುತ್ತಿದ್ದಾರೆ. ಸಾಂದರ್ಭಿಕವಾಗಿ ಆರೆಸ್ಸೆಸ್ ಬಗ್ಗೆಯೂ ಮಾತಾಡುತ್ತಾರೆ. ಪೇಶ್ವೆ ವಂಶದವರ ಬಗ್ಗೆಯೂ ಮಾತಾಡುತ್ತಾರೆ. ಬಿಜೆಪಿಯ ಪ್ರಹ್ಲಾದ್ ಜೋಷಿಯವರ ವಂಶಾವಳಿಯ ಮೂಲ ಪೇಶ್ವೆಯ ವಂಶವೆಂದು ಕಂಡುಹಿಡಿದುದಷ್ಟೇ ಅಲ್ಲದೆ, ಸಾವರ್ಕರ್, ಗೋಡ್ಸೆಯನ್ನೂ ಎಳೆದು ತಂದು ಬಿಜೆಪಿ ಗಂಟಿಸಿ, ಆರೆಸ್ಸೆಸ್ ಮತ್ತು ಬಿಜೆಪಿಯು ನಡೆಸುತ್ತಿರುವ ಹುನ್ನಾರದ ಬಗ್ಗೆ ಮಾತಾಡುತ್ತಾ ಮುಂದಿನ ಮುಖ್ಯಮಂತ್ರಿ ಯಾಗಿ ಜೋಷಿಯವರನ್ನೇ ಮಾಡುವ ಹುನ್ನಾರದ ಬಗ್ಗೆ ಜನತೆಯಲ್ಲಿ ಎಚ್ಚರವನ್ನೂ ಮೂಡಿಸುತ್ತಾ ಭಯವನ್ನು ಹುಟ್ಟಿಸುವಂತೆ ಮಾತಾಡುತ್ತಾರೆ.

ರಾಜ್ಯದ ರಾಜಕೀಯ ಭವಿಷ್ಯವನ್ನು ಹೇಳುವಂತೆಯೂ ಮುಂದಿನ ಮುಖ್ಯಮಂತ್ರಿ ನಾನೇ ಎಂದು ಕೂಡ ಹೇಳುತ್ತಾರೆ! ಹಾಗಂತ ಹಿಂದೆ ಇದೇ ಬಿಜೆಪಿಯೊಂದಿಗೆ ಕೈಜೋಡಿಸಿ, ತಾವೇ ಮೊದಲು ಮುಖ್ಯಮಂತ್ರಿಯಾಗಿ ಇಪ್ಪತ್ತು ತಿಂಗಳು ಅಧಿಕಾರ ನಡೆಸಿದ್ದನ್ನು ಮರೆತು ಬಿಡುತ್ತಾರೆ. ರಾಜಕೀಯದ ಬದ್ಧವೈರಿಯಾದ ಡಿಕೆಶಿಯವರ ಕೈ ಮಿಲಾಯಿಸಿ ವಿಧಾನಸೌಧದೊಳಗೆ ಆಜನ್ಮ ಮಿತ್ರರಂತೆ ಪೋಸು ಕೊಟ್ಟಿದ್ದನ್ನೂ ಮರೆಯುತ್ತಾರೆ. ಮೂವತ್ತೋ ನಲವತ್ತೋ ಸೀಟು ಗೆದ್ದುಕೊಂಡು ತಾವೇ ಕಿಂಗ್ ಮೇಕರ್ ಆಗಿ ಅಧಿಕಾರ ರಾಜಕೀಯದ ಮೂಸೆಯಲ್ಲಿ ರಾಜ್ಯ ರಾಜಕಾರಣದ ಅಧಿಕಾರವೆಂಬ ಮೃಷ್ಟಾನ್ನವನ್ನು ಉಣ್ಣಲು ಯಾವ ಪಕ್ಷ ದೊಂದಿಗೂ ಸೇರುವ (ನಿಜಾರ್ಥದಲ್ಲಿ ಜಾತ್ಯತೀತರಾಗಿ) ಜೆಡಿಎಸ್ ಎಂಬ ಪ್ರಾದೇಶಿಕ ಪಕ್ಷವನ್ನು ಅಪ್ಪನ ನಂತರ ಅಪ್ಪನ ಆಣತಿಯನ್ನು ಹೊತ್ತಂತೆ ನಡೆಸುತ್ತಿರುವ ಕುಮಾರಣ್ಣ ಯಾವ ಪಕ್ಷವನ್ನೂ ಎಂಥಾ ಸಂದರ್ಭದಲ್ಲೂ ಅಪ್ಪಿಬಿಡುವ ಅಧಿಕಾರ ರಾಜಕೀಯದಲ್ಲಿ ರಾಜಕಾರಣಿಯೊಬ್ಬನಿಗೆ ಇರಬೇಕಾದ ಪರಮ ಔದಾರ್ಯವನ್ನು ಅಸಹಜ ಸ್ವಭಾವವಾಗಿ ಉಳ್ಳ ಎಂಟೆದೆಯ ಬಂಟರೇ ಸರಿ!

ಒಂದು ಸಲ ಬಿಜೆಪಿಯನ್ನು, ಇನ್ನೊಂದು ಸಲ ಕಾಂಗ್ರೆಸ್ಸನ್ನು ಕೂಡಿ ಮೈತ್ರಿ ಮಾಡಿಕೊಂಡು ಅಧಿಕಾರ ನಡೆಸಿದ ಕುಮಾರಣ್ಣ ನಿಜಕ್ಕೂ ಜಾತ್ಯತೀತರೇ ದಿಟ! ನಿಜಾರ್ಥದಲ್ಲಿ ಅವರದು ಜಾತ್ಯತೀತ ಪಕ್ಷವೇ ಸತ್ಯ! ಹೇಗೆ ಬೇಕಾದರೂ ಬಗ್ಗುವ, ಬಾಗುವ, ಬಳಕುವ ಜೆಡಿಎಸ್ ಎಂಬ ಪ್ರಾದೇಶಿಕ ಪಕ್ಷಕ್ಕೆ ಯಾವ ಪಕ್ಷವೂ ಸೈದ್ಧಾಂತಿಕವಾಗಿ ಅಽಕಾರ ರಾಜಕೀಯದಲ್ಲಿ ಶತ್ರುಗಳಾಗಿ ಇಲ್ಲ ಎಂಬುದನ್ನು ಈ ಮೊದಲು ತೋರಿಸಿಕೊಟ್ಟ ಧೀಮಂತ ನಾಯಕರಾಗಿ ಅಪ್ಪ ಮಕ್ಕಳು ಕಾಣುತ್ತಾರೆ! ಆದರೆ, ಚುನಾವಣಾ ಪೂರ್ವದಲ್ಲಿ ಇರುವ ಸೈದ್ಧಾಂತಿಕ ರಾಜಕೀಯದ ಶತ್ರುತ್ವ ಫಲಿತಾಂಶ ಬಂದಮೇಲೆ ಇರುವುದಿಲ್ಲ ಎಂಬುದು
ಸೋಜಿಗವಾದರೂ ಜೆಡಿಎಸ್ ಪಾಲಿಗೆ ಸತ್ಯ! ಹಾಗೆ ನೋಡಿದರೆ, ಮೈತ್ರಿಯೆಂಬುದು ಜೆಡಿಎಸ್ಸಿನ ರಕ್ತದಲ್ಲಿ ಜಾಯಮಾನವಾಗೇ ಬಂದಿದೆ.

ಆದರೆ, ಈ ಮೈತ್ರಿಯ ಸಾಂಗತ್ಯದಲ್ಲಿ ಕೇವಲ ಜೆಡಿಎಸ್ಸಿನ ಪಾತ್ರ ಮಾತ್ರ ಮಹತ್ತರವೆಂದು ಯಾರೂ ಭಾವಿಸಲಾಗದು. ಬಿಜೆಪಿ ಮತ್ತು ಕಾಂಗ್ರೆಸ್ಸಿನ ಒಟ್ಟೂ ನಡೆಯು ಈ ವಿಚಾರದಲ್ಲಿ ಸೈದ್ಧಾಂತಿಕವಾಗಿ ಪ್ರಶ್ನಾತೀತವೇನೂ ಅಲ್ಲ! ರಾಜಕೀಯದಲ್ಲಿ ಯಾರೂ ನಿಷ್ಪಾಪಿಯಾಗಿ ಇರುವುದಕ್ಕೆ ಸಾಧ್ಯವಿಲ್ಲ. ಈ ಸಾಧ್ಯವಿಲ್ಲದಿರುವಿಕೆ ಕೂಡ ರಾಜಕೀಯದ ಮೂಲ ಸ್ವಭಾವವಾಗೇ ಇದೆ. ಆದರೆ, ಪಾಪವೇ ರಾಜಕೀಯವಾದರೆ, ದೇವರು ಮೆಚ್ಚುವುದಿಲ್ಲ ಎಂಬ ಮಾತನ್ನು ಬಿಡಿ ಜನತೆಯೂ ಒಪ್ಪುವುದಕ್ಕೆ ಸಾಧ್ಯವಿಲ್ಲ.

ಜನತೆ ಒಪ್ಪುವ ಮಾರ್ಗವನ್ನು ಕೇವಲ ಜೆಡಿಎಸ್ ಮಾತ್ರ ಅನುಸರಿಸಬೇಕು ಎಂಬುದು ಸರಿಯಲ್ಲ. ಎಲ್ಲ ಪಕ್ಷಗಳೂ ಇರಬೇಕಾದ ಬಗೆಯಿದು. ಆದರೂ ಕರ್ನಾಟಕದಲ್ಲಿ ಜೆಡಿಎಸ್ ಎಂದಾಕ್ಷಣ ಕುಟುಂಬ ರಾಜಕಾರಣದ ಹೆಗ್ಗುರುತಾಗಿ ಮಾತ್ರ ಜನತೆಗೆ ಕಂಡಿದ್ದರಿಂದ ಅದರ ಅಧ್ವರ್ಯುಗಳಾದ ದೇವೇಗೌಡರು, ರೇವಣ್ಣ, ಕುಮಾರಣ್ಣರಾದಿಯಾಗಿ, ಭವಾನಿ ರೇವಣ್ಣರವರೆಗೆ(ಇಡಿಯ ಕುಟುಂಬವನ್ನು ರಾಜ್ಯ ರಾಜಕೀಯಕ್ಕೆ ಅರ್ಪಿಸಿದ ಗೌಡರ ದೊಡ್ದತನ ಬೇರೆ ಯಾರಿಗಾದರೂ ಬರಲು ಸಾಧ್ಯವೇ?!) ಏನೇ ಅಂದರೂ ಅದಕ್ಕೆ ಜಾತ್ಯತೀತವಾದ ಅಸ್ಮಿತೆಯಾಗಲೀ, ಅಸ್ತಿತ್ವವಾಗಲೀ ರಾಜಕೀಯ ಅಭಿ
ವ್ಯಕ್ತಿಯಾಗಿ ಕಾಣಲೇ ಇಲ್ಲವೆಂಬುದು ಸತ್ಯ! ಈ ರಾಜಕೀಯ ಅಭಿವ್ಯಕ್ತಿಗಾಗಿ ಹೆಣಗಾಡುತ್ತಲೇ ಬಂದು ಈಗ ಸಿ.ಎಂ. ಇಬ್ರಾಹಿಂ ಅವರನ್ನು ರಾಜ್ಯಾಧ್ಯಕ್ಷ ರನ್ನಾಗಿ ಮಾಡಿಯೂ ಜನರಿಗೆ ತಲುಪಿಸಬೇಕಾದ ಮೆಸೇಜನ್ನು ಇನ್ನೂ ತಲುಪಿಸಲು ಜೆಡಿಎಸ್ಸಿಗೆ ಸಾಧ್ಯವಾಗಿಲ್ಲವೇನೋ ಅನ್ನಿಸತೊಡಗಿದೆ!

ಇದು ಕೇವಲ ಜೆಡಿಎಸ್ಸಿನ ಪಾಡು ಮಾತ್ರವಲ್ಲ. ಕಾಂಗ್ರೆಸ್, ಆರ್ ಜೆಡಿ, ಡಿಎಮ್‌ಕೆ ಪಕ್ಷಗಳದ್ದೂ ಇದೇ ಪಾಡಾಗಿದೆ. ಆ ಮಟ್ಟಿಗೆ ಬಿಜೆಪಿ ಸ್ವಲ್ಪಮಟ್ಟಿಗೆ ಸೇ-ಗಿದೆ. ಅದರೆ, ಅದರ ಸಮಸ್ಯೆ ಬೇರೆಯೇ ಇದೆ! ಈಗ ಕುಮಾರಣ್ಣ ಅಧಿಕಾರವನ್ನು ಪಡೆಯಲೇಬೇಕೆಂಬ ಮಹತ್ವಾಕಾಂಕ್ಷೆಯ ಕೊನೆಯ ಬೇಗುದಿಯಲ್ಲಿದ್ದಂತೆ ಕಾಣುತ್ತಿದ್ದಾರೆ. ಅದಕ್ಕಾಗಿ ಪಂಚರತ್ನ ಯೋಜನೆಯ ಯಾತ್ರೆ ಕೈಗೊಂಡಿದ್ದಾರೆ. ವೇದಿಕೆಗಳಲ್ಲಿ ಬಿಜೆಪಿಯನ್ನು ಸರಕಾರವನ್ನು ಗುರಿಯಾಗಿಸಿ ಮಾತನಾಡುತ್ತಿzರೆ. ಏರ್ ಇಂಡಿಯಾ ಶೋದ ಬಗ್ಗೆಯೂ ಮಾತನಾಡಿzರೆ. ವಿರೋಧ ಪಕ್ಷಗಳ ಬಗ್ಗೆಯೂ ಮಾತನಾಡುತ್ತಿದ್ದಾರೆ.

ಹತ್ತಾರು ರಾಜಕೀಯದ ತಲೆಬಿಸಿಯ ಮಧ್ಯೆಯೂ ಕೌಟುಂಬಿಕವಾದ ರಾಜಕೀಯವನ್ನು ಸಂಭಾಳಿಸುವುದು ಕುಮಾರಣ್ಣಂಗೆ ತಂದೆಯಿಂದ ರಕ್ತಗತವಾಗಿ ಬಂದಿರುವ ಬೌದ್ಧಿಕ ಸಾಮರ್ಥ್ಯವೇ ಆಗಿ ತೋರುತ್ತಿದೆ! ಅತ್ತಿಗೆ ಭವಾನಿಯವರಿಗೂ ಈ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕೊಡಬೇಕು ಎಂಬ ಒತ್ತಡವನ್ನು ಅಷ್ಟು ಸುಲಭವಾಗಿ ದಕ್ಕಿಸಿಕೊಂಡು ಪರಿಹರಿಸುವುದು ಬೇರೆ ಯಾರಿಗಾದರೂ ಸಾಧ್ಯವೇ? ಅಂತೂ ಏನೋ ಕಟಿಪಿಟಿ ಮಾಡಿ ಪಕ್ಷದ ಆಂತರಿಕವಾದ ಗೊಂದಲಕ್ಕೆ ಸೂಕ್ತ ಪರಿಹಾರವನ್ನು ಕಾಣಬೇಕೆಂಬ ಸೂಕ್ಷ್ಮತೆ ಕುಮಾರಣ್ಣನ ಮಾತುಗಳಲ್ಲಿ ಸ್ಪಷ್ಟವಾಗಿದ್ದರಿಂದ ರೇವಣ್ಣ ತಮ್ಮನ ಪರ ಹೇಳಿಕೆಯನ್ನು ನೀಡಿ ಬೆಂಬಲಕ್ಕೆ ನಿಂತುಕೊಂಡರು. ಇದು ಗೌಡರ ಕುಟುಂಬದ ನಿಜವಾದ ರಾಜಕೀಯದ ಅಂತಃಶ್ಶಕ್ತಿ.

ಪಂಚರತ್ನ ಯಾತ್ರೆಯಲ್ಲ, ನವಗ್ರಹ ಯಾತ್ರೆ ಮಾಡಬೇಕಿತ್ತೆಂದು ಪ್ರಹ್ಲಾದ ಜೋಷಿಯವರು ಯಾವಾಗ ಟಾಂಗ್ ಕೊಟ್ಟರೋ ಅದಕ್ಕೆ ಪ್ರತಿಯಾಗಿ ಕುಮಾರಣ್ಣ ಅವಸರದ ಸಂಶೋಧನೆ ಮಾಡಿ, ಜೋಷಿಯವರು ಶೃಂಗೇರಿಯ ಮೇಲೆ ದಾಳಿ ಮಾಡಿದ ಪೇಶ್ವೆ ವಂಶಸ್ಥ ಬ್ರಾಹ್ಮಣರು ಎಂದುಬಿಟ್ಟರು.
(ಹಾಗೆ, ನೋಡಿದರೆ, ಶೃಂಗೇರಿಯ ಮೇಲೆ ದಾಳಿ ಮಾಡಿದವರು ಪಿಂಡಾರಿಗಳೇ ಹೊರತು ಪೇಶ್ವೆಗಳಲ್ಲ. ಮತ್ತು ಪಿಂಡಾರಿಗಳು ಪೇಶ್ವೆ ವಂಶಸ್ಥರೂ ಅಲ್ಲ. ಪಿಂಡಾರಿಗಳು ಒಂದು ಲೂಟಿಕೋರ ಜನಾಂಗವಷ್ಟೆ ಇದು ಕುಮಾರಸ್ವಾಮಿಯವರಿಗೆ ಗೊತ್ತಿದ್ದಂತಿಲ್ಲ) ಇರಲಿ ಬಿಡಿ.

ಕುಮಾರಸ್ವಾಮಿಯವರು ಮುಂದುವರೆದು ಕರ್ನಾಟಕದ ಬ್ರಾಹ್ಮಣರು ಬೇರೆ, ಈ ಪೇಶ್ವೆ ವಂಶಸ್ಥ ಬ್ರಾಹ್ಮಣರು ಬೇರೆ. ಸರ್ವೇ ಜನಾಃ ಸುಖಿನೋ
ಭವಂತು ಎನ್ನುವ ಭಾವವಿರುವವರು ನಮ್ಮ ಕನ್ನಡದ ದೇಶಸ್ಥ ಬ್ರಾಹ್ಮಣರು ಎಂದು ಕನಿಕರಿಸುವ ಮತ್ತು ಹಾಗೆ ಹೇಳುವ ಮೂಲಕ ಬ್ರಾಹ್ಮಣರ ಓಟು ತಮ್ಮ ಪಕ್ಷಕ್ಕೆ ಸಿಗುವಂತಾಗಲಿ ಎಂಬ ದೂರದೃಷ್ಟಿಯೂ ಅವರ ಮಾತುಗಳಲ್ಲಿತ್ತು. ಅಷ್ಟಕ್ಕೂ ಇದೆಲ್ಲ ಹುಸಿ ರಾಜಕೀಯದ ವರಸೆಗಳು ಎಂಬುದು ಕುಮಾರಣ್ಣಂಗೂ ಗೊತ್ತು. ಪೇಶ್ವೆ ವಂಶಸ್ಥ ಬ್ರಾಹ್ಮಣರಿಗೂ ಗೊತ್ತು.

ದೇಶಸ್ಥ ಬ್ರಾಹ್ಮಣರಿಗೂ ಗೊತ್ತು. ಮುಖ್ಯವಾಗಿ, ಇವುಗಳಿಂದ ಓಟು ಬರಲಾರದೆಂಬುಬುದೂ ಗೊತ್ತು. ಆದರೂ ಯಾಕೆ ಕುಮಾರಣ್ಣ ಹಾಗಾಡಿದರು? ಮೊದಲೇ ಹೇಳಿದೆನಲ್ಲ, ಕುಮಾರಣ್ಣ ಭಗೀರಥ ಪ್ರಯತ್ನದಲ್ಲಿದ್ದಾರೆ. ರಾಮನಗರದಲ್ಲಿ ರಾಮಮಂದಿರವನ್ನು ಕಟ್ಟುತ್ತೇನೆಂದೂ ಹೇಳಿಕೆ ಕೊಡುವ ಮೂಲಕ ರಾಮಭಕ್ತರನ್ನೂ ತನ್ಮೂಲಕ ಹಿಂದುಗಳನ್ನೂ ಮೆಚ್ಚಿಸುವ ಮತ್ತೊಂದು ವರಸೆಯ ಮಾತಾಡಿದ್ದಾರೆ. ರಾಮಮಂದಿರ ಕಟ್ಟುತ್ತೇನೆ, ತಮಗೆ ಓಟು ಕೊಡಿಯೆಂಬುದು ವೈಚಾರಿಕವಾದ ಪ್ರಬುದ್ದತೆಯಲ್ಲ! ಓಟಿಗಾಗಿ ರಾಮಭಜನೆ ಯಾವ ಪಕ್ಷಕ್ಕೂ ಸಲ್ಲದು.

ಧರ್ಮಾತೀತ, ಜಾತ್ಯತೀತವಾದ ಪಂಚರತ್ನ ಯಾತ್ರೆಯೆಂಬುದು ಓಟಿನ ಗಿಮಿಕ್ಕಿಗಾಗಿ ಹುಟ್ಟಿದ ಐಡಿಯಾ ಎಂಬುದು ಪಬ್ಲಿಕ್ ಸೀಕ್ರೆಟ್. ಬಜೆಟ್ಟನ್ನು ಟೀಕಿಸುವುದು, ದೇಶಸ್ಥ ಬ್ರಾಹ್ಮಣರ ಪರ ಒಲವು ತೋರಿಸುವುದು, ರಾಮಮಂದಿರ ಕಟ್ಟುತ್ತೇನೆನ್ನುವುದು, ಬಿಜೆಪಿ, ಆರೆಸ್ಸೆಸ್ಸನ್ನು ಬೈಯುವುದು, ಮೋದಿಯನ್ನು ಆರೋಪಿಸುವುದು, ಆಕ್ಷೇಪಿಸುವುದು, ಮುಗಿದು ಹೋದ ಹಳೆಯ ವಿಚಾರಗಳನ್ನು ಎತ್ತಿಕೊಂಡು ನಾನೇ ಶುದ್ಧ, ಪ್ರಾಮಾಣಿಕನೆಂದು ಅನುಕಂಪದ ಮಾತುಗಳ ನ್ನಾಡುವುದು- ಇದೆಲ್ಲ, ಓಟು ಗಿಟ್ಟಿಸಲಾರದೆಂಬ ಪ್ರಜ್ಞೆ ಕುಮಾರಣ್ಣಂಗೆ ಇಲ್ಲವೋ? ಖಂಡಿತವಾಗಿಯೂ ಇದೆ.

ಆದರೂ ಅಧಿಕಾರದಾಸೆ ಅವರಿಂದ ಏನೇನೆಲ್ಲ ಆಡಿಸುತ್ತಿದೆ, ಮಾಡಿಸುತ್ತಿದೆ. ತಪ್ಪಲ್ಲವೇ ಅಲ್ಲ ಬಿಡಿ. ಪಿತೃಪ್ರಧಾನ ಪಕ್ಷವಾದ ಎಲ್ಲ ರಾಜಕೀಯ ಪಕ್ಷಗಳಲ್ಲೂ ಪಿತೃವಾಂಛೆಯನ್ನು ನೀಗಿಸುವ ಮಹತ್ವಾಕಾಂಕ್ಷೆಯು ಮಕ್ಕಳಲ್ಲಿ ಢಾಳವಾಗಿರುತ್ತದೆ. ಪಾಪ, ಕುಮಾರಣ್ಣರಾದರೂ ಏನು ಮಾಡಿಯಾರು? ತೊಂಬತ್ತರ ವಯಸ್ಸು ದಾಟಿದ ಅಪ್ಪನಿಗೆ ತಾನು ಕಟ್ಟಿದ ಪಕ್ಷ ತನ್ನ ಜೀವನಸಂಧ್ಯೆಯಲ್ಲಿ ಅಸ್ಮಿತೆಯನ್ನೇ ಕಳೆದುಕೊಂಡು ಬಿಟ್ಟೀತೆಂಬ ಕೊರಗು ಬರಬಾರದೆಂಬ ಜತನದಲ್ಲಿ ಶತಾಯಗತಾಯ ಪಕ್ಷವನ್ನು ಅಧಿಕಾರಕ್ಕೆ ತಂದೇ ತೀರುತ್ತೇನೆಂಬ ಅವಸರದ ಹುಕಿಗೆ ಕುಮಾರಣ್ಣ ಬಿದ್ದಂತಿದೆ.

ತಪ್ಪೇನಲ್ಲ. ಆದರೆ, ತಮ್ಮ ಪಕ್ಷ ಅಧಿಕಾರಕ್ಕೆ ಬರುವುದರ ರಾಜ್ಯದ ಹಿತವಿದೆಯೆಂದು ಅವರು ಅಂದುಕೊಳ್ಳಬಾರದು! ಜನರು ಕುಮಾರಣ್ಣನ ಕೈಯನ್ನು ಹಿಡಿಯುತ್ತಾರೋ? ಅಥವಾ ಇಂಥದ್ದೆಲ್ಲ ರಾಜಕೀಯದಲ್ಲಿ ಮಾಮೂಲಿಯೆನ್ನುತ್ತಾರೋ? ಕಾಲವೇ ಉತ್ತರಿಸಬೇಕು. ಆದರೆ, ಕುಮಾರಣ್ಣ ಬೇಸರ ಮಾಡಿಕೊಳ್ಳದಿದ್ದರೆ ಒಂದಿಷ್ಟು ಮಾತು: ಕುಮಾರಣ್ಣ ಗೌಡರ ಜಾಲದಿಂದ ಮೊದಲು ಹೊರಬರಬೇಕು. ಕುಟುಂಬ ರಾಜಕಾರಣವನ್ನು ಬಿಟ್ಟು ಸಮಕಾಲೀನರೊಂದಿಗೆ ಸಮನ್ವಯ ಸಾಽಸಿಕೊಳ್ಳಬೇಕು. ಹೊಸ ಸವಾಲುಗಳನ್ನು ಎದುರಿಸಲು ವೈಚಾರಿಕವಾಗಿ ಸಿದ್ಧವಾಗಬೇಕು.

ಜಾತಿ ಕೋಮು ವಿಷವರ್ತುಲಗಳಿಂದ ಬಿಡಿಸಿಕೊಳ್ಳಬೇಕು. ಹಳೆ ಸಮೀಕರಣಗಳಿಂದ ಪಾರಾಗಬೇಕು. ಅಪ್ಪಟ ರಾಷ್ಟ್ರೀಯವಾದವನ್ನು ಒಪ್ಪಬೇಕು, ಅಪ್ಪಬೇಕು. ಮುಕ್ತಮನಸ್ಸಿ ನಿಂದ ರಾಷ್ಟ್ರಹಿತ ಪ್ರeಯನ್ನು ಅಳವಡಿಸಿಕೊಳ್ಳಬೇಕು. ಮುಸ್ಲಿಂ ತುಷ್ಟೀಕರಣ ಬಿಡಬೇಕು. ಇವೆಲ್ಲ ಕಷ್ಟವೆನಿಸಿದರೆ, ರಾಜಕೀಯದಿಂದ ದೂರವಿದ್ದು ಸಮಷ್ಟಿ ಚಿಂತನೆಯ ಸಾರ್ವಜನಿಕ ಬದುಕಿನಲ್ಲಿ ಹೊಸ ಇಮೇಜನ್ನು ಬೆಳೆಸಿಕೊಳ್ಳಬೇಕು.