Tuesday, 28th May 2024

ಬಿಟ್ಟೆನೆಂದರೂ ಬಿಡದಿ ಮಾಯೆ ಶೀರ್ಷಿಕೆಗೆ ಸಚಿವರು ಸಿಟ್ಟಾಗಿದ್ದೇಕೆ ?

ಇದೇ ಅಂತರಂಗ ಸುದ್ದಿ

vbhat@me.com

ಅಸಲಿಗೆ ಅವರು ಆ ಸುದ್ದಿಯನ್ನು ಸರಿಯಾಗಿ ಮತ್ತು ಇಡಿಯಾಗಿ ಓದಿರಲೇ ಇಲ್ಲ. ತಮ್ಮ ಆಕ್ರೋಶವನ್ನು ಹೊರ ಹಾಕುವ ಮೂಲಕ ತಮ್ಮ ಗುಟ್ಟನ್ನು ತಾವೇ ರಟ್ಟು ಮಾಡಿದ್ದರು! ಅದಾದ ಬಳಿಕ ಹಲವು ಸಲ ಸಭೆ-ಸಮಾರಂಭ, ಕಾರ್ಯಕ್ರಮಗಳಲ್ಲಿ ಭೇಟಿ ಮಾಡಿದ್ದರೂ ಆ ವಿಷಯವನ್ನು ಮಾತ್ರ ಅವರು ಅಪ್ಪಿತಪ್ಪಿಯೂ ಪ್ರಸ್ತಾಪಿಸಲಿಲ್ಲ. ಸುಮ್ಮನೆ ಸಚಿವರ ಕಾಲೆಳೆಯಲೆಂದು ನೀಡಿದ ಆ ಹೆಡ್‌ಲೈನ್‌ಗೆ ಅವರೇ ಕಾಲು ಜಾರಿ ಬಿದ್ದಿದ್ದರು.

ಸುಮಾರು ಹತ್ತು ವರ್ಷಗಳ ಹಿಂದಿನ ಪ್ರಸಂಗ. ಆಗ ನಾನು ‘ಕನ್ನಡ ಪ್ರಭ’ ಪತ್ರಿಕೆಯಲ್ಲಿದ್ದೆ. ಬೆಳಗ್ಗೆ ಏಳೂವರೆ ಹೊತ್ತು. ಆ ಕಡೆಯಿಂದ ಫೋನಿನಲ್ಲಿ
ರಾಜ್ಯದ ಸಚಿವರೊಬ್ಬರು ಏರುದನಿಯಲ್ಲಿ ಮಾತಾಡುತ್ತಿದ್ದರು. ‘ಏನ್ರೀ .. ಕೈಯಲ್ಲಿ ಪತ್ರಿಕೆ ಇದೆಯೆಂದು ಮನಸ್ಸಿಗೆ ಬಂದಿದ್ದನ್ನೆಲ್ಲ ಬರೆಯುವುದಾ? ಪ್ರಕಟಿಸುವುದಾ? ಯಾರು ಬೇಕಾದ್ರೂ ಬರ್ಕೊಂಡು ಸಾಯಲಿ, ಆದರೆ ನೀವೂ ಹೀಗೆ ಬರೀತೀರಲ್ಲ? ನಾನು ನಿಮ್ಮ ಮೇಲೆ ಕೇಸು ಹಾಕುತ್ತೇನೆ’ ಎಂದು ಬಡಬಡಿಸಿದರು.

ಹಿಂದಿನ ರಾತ್ರಿ ಹನ್ನೊಂದು ಗಂಟೆಯವರೆಗೆ ನಾನೇ ಆಫೀಸಿನಲ್ಲಿದ್ದು ಎಲ್ಲ ಪುಟಗಳ ಮೇಲೆ ಕಣ್ಣಾಡಿಸಿ, ಮನೆಗೆ ಬಂದಿದ್ದೆ. ಆ ಸಚಿವರ ವಿರುದ್ಧ ಪತ್ರಿಕೆ ಯಲ್ಲಿ ಯಾವ ಸುದ್ದಿಯೂ ಪ್ರಕಟವಾಗಿದ್ದು ನನ್ನ ಗಮನಕ್ಕೆ ಬಂದಿರಲಿಲ್ಲ. ನಾನು ಮನೆಗೆ ಬಂದ ಬಳಿಕ, ರಾತ್ರಿ ಪಾಳಿಯಲ್ಲಿದ್ದವರೇನಾದರೂ, ಸಚಿವರು ಹೇಳಿದ ಸದರಿ ಸುದ್ದಿಯನ್ನು ಪ್ರಕಟಿಸಿರಬಹುದಾ ಎಂಬ ಸಂದೇಹ ನನ್ನೊಳಗೆ ಹಾದು ಹೋಯಿತು.

ಸಾಮಾನ್ಯವಾಗಿ ಅಂಥ ಸುದ್ದಿಯನ್ನು ಪ್ರಕಟಿಸುವ ಮುನ್ನ, ನನ್ನ ಗಮನಕ್ಕೆ ತಂದು, ಅನುಮತಿ ಪಡೆದು ಪ್ರಕಟಿಸುವುದು ಪ್ರೋಟೋಕಾಲ್. ಯಾವ ಕಾರಣಕ್ಕೂ ಈ ರೀತಿಯ ಶಿಷ್ಟಾಚಾರ ಉಲ್ಲಂಘನೆ ಆಗುವುದಿಲ್ಲ. ಒಂದು ವೇಳೆ ನಾನು ವಿದೇಶ ಪ್ರವಾಸದಲ್ಲಿದ್ದರೂ, ವಿಮಾನದಲ್ಲಿ ಪಯಣಿಸು ತ್ತಿದ್ದರೂ, ನನ್ನ ಗಮನಕ್ಕೆ ಬರದೇ ಇರಲು ಸಾಧ್ಯವಿಲ್ಲ. ಒಂದು ವೇಳೆ ಸಂಪರ್ಕಕ್ಕೆ ಸಿಗದಿದ್ದರೆ, ಮರುದಿನ ಆ ಸುದ್ದಿಯನ್ನು ತೆಗೆದುಕೊಳ್ಳಬಹುದೇ ಹೊರತು, ರಾತ್ರಿ ವೇಳೆ ಏಕಾಏಕಿ ಪ್ರಕಟಿಸುವ ಸಾಧ್ಯತೆಯೇ ಇಲ್ಲ.

ನಾನು ತುಸು ಗಂಭೀರ ಯೋಚನೆಗೆ ಬಿದ್ದೆ. ಕೆಲವೊಮ್ಮೆ ರಾತ್ರಿ ಪಾಳಿಯಲ್ಲಿದ್ದ ಸಹೋದ್ಯೋಗಿಗಳು ಯಡವಟ್ಟು ಮಾಡಿ ಬಿಡುತ್ತಾರೆ. ಆ ರೀತಿ ಏನಾದರೂ ‘ಗೋಟಾವಳಿ’ ಆಗಿರಬಹುದಾ ಎಂದು ಅನಿಸಿತು. ಹಾಗಾಗಲು ಸಾಧ್ಯವೇ ಇಲ್ಲ. ಯಾವುದಕ್ಕೂ ಇರಲಿ, ಪತ್ರಿಕೆ ನೋಡಿದರೆ ಗೊತ್ತಾಗುತ್ತ ದಲ್ಲ ಎಂದು ನಮ್ಮ ಪತ್ರಿಕೆಗಾಗಿ ತಡಕಾಡಿದೆ. ಆ ದಿನದ ಎಲ್ಲಾ ಪತ್ರಿಕೆಗಳಿದ್ದವು. ಆದರೆ ನಮ್ಮ ಪತ್ರಿಕೆಯನ್ನೇ ಪೇಪರ್ ಹುಡುಗ ಹಾಕಿರಲಿಲ್ಲ. ತಕ್ಷಣ ನಾನೇ ಕಾರಿನಲ್ಲಿ ಮನೆಯಿಂದ ಹತ್ತಿರ ದಲ್ಲಿರುವ ಅಂಗಡಿಗೆ ಹೋಗಿ ಪತ್ರಿಕೆ ತಂದು, ಕಾರಿನಲ್ಲಿಯೇ ಕುಳಿತು ಎಲ್ಲಾ ಪುಟಗಳ ಮೇಲೆ ಕಣ್ಣಾಡಿಸಿದೆ. ಸಚಿವರು ಹೇಳಿದ ಯಾವ ಸುದ್ದಿಯನ್ನೂ ನಾವು ಅಂದು ಪ್ರಕಟಿಸಿರಲಿಲ್ಲ. ನಾನು ರಾತ್ರಿ ಮಾಡಿಸಿದ ಪುಟಗಳೇ ಯಥಾವತ್ತು ಪ್ರಕಟವಾಗಿದ್ದವು.

ಸಚಿವರ ಸಿಟ್ಟಿಗೆ ಕಾರಣಗಳು ಗೊತ್ತಾಗಲಿಲ್ಲ. ನಾನೇ ಅವರಿಗೆ ಫೋನ್ ಮಾಡಿದೆ. ಅವರು ಫೋನ್ ತೆಗೆದುಕೊಳ್ಳಲಿಲ್ಲ. ಅವರ ಹಾಯಕನನ್ನು ಸಂಪರ್ಕಿಸಿದೆ. ‘ಸಾಹೇಬ್ರು ಯಾಕೋ ಮೂಡಿ ನಲ್ಲಿ ಇಲ್ಲ. ಬೆಳಗಿನಿಂದಲೇ ಎಲ್ಲರ ಮೇಲೆ ರೇಗಾಡ್ತಾ ಇದ್ದಾರೆ. ಸ್ವಲ್ಪ ಹೊತ್ತು ಹೋಗಲಿ, ನಾನೇ ನಿಮಗೆ ಫೋನ್ ಮಾಡಿ ಕೊಡ್ತೇನೆ, ಮಾತಾಡುವಿರಂತೆ’ ಎಂದು ಆತ ಫೋನಿಟ್ಟ. ನಾನು ಮತ್ತೊಮ್ಮೆ ಪತ್ರಿಕೆಯನ್ನು ಎತ್ತಿಕೊಂಡು ಪ್ರತಿ ಸುದ್ದಿಯನ್ನೂ ಕಣ್ಣಲ್ಲಿ ಕಣ್ಣಿಟ್ಟು ನೋಡಿದೆ. ಸಚಿವರಿಗೆ ಸಂಬಂಧಿಸಿದ ಒಂದು ಸುದ್ದಿ ಪ್ರಕಟವಾಗಿತ್ತು. ಆದರೆ ಆ ಸುದ್ದಿ ಅವರ ಪರವಾಗಿತ್ತು. ಸಚಿವರು ತಮಗೆ ನೀಡಿದ ಖಾತೆ ಬೇಡವೆಂದು ಹೇಳಿದ್ದರು. ಆದರೂ ಮುಖ್ಯಮಂತ್ರಿಗಳು ನೀವು ಅದೇ ಖಾತೆಯಲ್ಲಿ ಮುಂದುವರಿಯಿರಿ ಎಂದು ಹೇಳಿದ್ದರು. ಆ ಸುದ್ದಿ ಎಲ್ಲಾ ಪತ್ರಿಕೆಗಳಲ್ಲೂ ಪ್ರಕಟವಾಗಿತ್ತು. ಅದರಲ್ಲಿ ಸಚಿವರಿಗೆ ಅಹಿತಕರವೆನಿಸುವ, ಮಾನಹಾನಿಕರ ಯಾವ ಸಂಗತಿಯೂ ಇರಲಿಲ್ಲ. ಅದೊಂದು ಸಹಜ ಸುದ್ದಿಯಾಗಿತ್ತು.

ಹಿಂದಿನ ದಿನ ಎ ಟಿವಿಗಳೂ ಆ ಸುದ್ದಿಯನ್ನು ವರದಿ ಮಾಡಿದ್ದವು. ಆದರೂ ಸಚಿವರು ಸಿಟ್ಟಾಗಿದ್ದೇಕೆ ಎಂಬುದು ಬಗೆಹರಿಯದ ರಹಸ್ಯವಾಗಿತ್ತು.
ನಾನು ನನ್ನ ಪಾಡಿಗೆ ಎಂದಿನ ಕಾರ್ಯಗಳಲ್ಲಿ ಮಗ್ನನಾದೆ. ಸಚಿವರ ಸಹಾಯಕ ಫೋನ್ ಮಾಡಿಸುತ್ತೇನೆ ಎಂದು ಹೇಳಿದ್ದನಲ್ಲ, ಸಾಯಂಕಾಲ ವಾದರೂ ಫೋನ್ ಮಾಡಿಸಲಿಲ್ಲ. ಈ ಮಧ್ಯೆ ಸಚಿವರ ಮೊಬೈಲ್‌ಗೆ ನಾನು ಒಂದೆರಡು ಬಾರಿ ಫೋನ್ ಮಾಡಿದರೂ, ಅವರು ಕರೆಯನ್ನು ಸ್ವೀಕರಿಸ ಲಿಲ್ಲ. ನನಗೆ ಅವರ ನಡೆ ಅರ್ಥವಾಗಲಿಲ್ಲ.

ಹಾಗಂತ ನಾನು ಸುಮ್ಮನೆ ಕುಳಿತುಕೊಳ್ಳಲಿಲ್ಲ. ಸಚಿವರು ಬೆಳಗ್ಗೆ ನನಗೆ ಫೋನ್ ಮಾಡಿ ಹಾಗೆ ಮಾತಾಡಿದ್ದೇಕೆ ಎಂಬುದರ ಅಸಲಿ ಕಾರಣವನ್ನು ತಿಳಿದುಕೊಳ್ಳಲೇ ಬೇಕಿತ್ತು. ಆದರೆ ಅದನ್ನು ಸಚಿವರು ಹೇಳಲಿಕ್ಕಿಲ್ಲ ಎಂಬುದು ಸ್ಪಷ್ಟವಾಗಿತ್ತು. ಈ ವಿಷಯವಾಗಿ ನಾನು ಅವರಿಗೆ ಮತ್ತೊಮ್ಮೆ ಫೋನ್
ಮಾಡಬಾರದು ಎಂದು ನಿರ್ಧರಿಸಿದೆ. ಸಾಯಂಕಾಲದ ಹೊತ್ತಿಗೆ ನಮ್ಮ ವರದಿಗಾರ ಬಂದು ಸಚಿವರ ಬೆಳಗಿನ ಕೋಪಕ್ಕೆ ಅಸಲಿ ಕಾರಣವೇನು ಎಂಬುದನ್ನು ಪತ್ತೆ ಹಚ್ಚಿದ!

ಅಷ್ಟಕ್ಕೂ ಸಚಿವರ ಕೋಪಕ್ಕೆ ಕಾರಣವಾಗಿದ್ದು ಅಂದು ನಾವು ನೀಡಿದ ಹೆಡ್‌ಲೈನ್. ಸಚಿವರು ತಮಗೆ ನೀಡಿದ ಖಾತೆ ಬೇಡವೆಂದು ಹೇಳಿದ್ದರೂ ಮುಖ್ಯಮಂತ್ರಿಗಳು ನೀವು ಅದೇ ಖಾತೆಯಲ್ಲಿ ಮುಂದುವರಿಯಿರಿ ಎಂಬ ಆ ಸುದ್ದಿಗೆ ನಾವು ‘ಬಿಟ್ಟೆನೆಂದರೂ ಬಿಡದಿ ಮಾಯೆ’ ಎಂಬ ಶೀರ್ಷಿಕೆ ನೀಡಿ, ಆ ಸಚಿವರ ಫೋಟೋ ಪ್ರಕಟಿಸಿದ್ದೆವು.

ಸರಿ, ಅಷ್ಟಕ್ಕೇ ಸಚಿವರು ವ್ಯಗ್ರರಾಗಿದ್ದು ಯಾಕೆ? ಅದೇ ಈ ಪ್ರಸಂಗದ ಅಸಲಿಯತ್ತು. ಸದರಿ ಸಚಿವರಿಗೆ ಬಿಡದಿಯಲ್ಲಿ ಒಬ್ಬಳು ‘ಸಖಿ’ಯಿದ್ದಳು. (ಅದನ್ನು ಹಸಿಹಸಿಯಾಗಿ ಸೆಟಪ್ ಅಂತ ಬೇಕಾದರೂ ಅನ್ನಿ) ಸಚಿವರು ವಾರದಲ್ಲಿ ಎರಡು ದಿನ ಬಿಡದಿಯಲ್ಲಿರುವ ತಮ್ಮ ‘ಗೆಳತಿ’ಯ ಮನೆಗೆ ಗುಟ್ಟಾಗಿ ಹೋಗಿ ಬರುತ್ತಿದ್ದರು. ಅದು ಕೆಲವರಿಗೆ ಮಾತ್ರ ಗೊತ್ತಿತ್ತು. ಆದರೆ ಎಲ್ಲರಿಗೂ ಗೊತ್ತಿರುವ ರಹಸ್ಯವಾಗಿರಲಿಲ್ಲ. ಪತ್ರಿಕೆಯಲ್ಲಿ ಪ್ರಕಟವಾದ ಶೀರ್ಷಿಕೆ ಮತ್ತು ತಮ್ಮ ಫೋಟೋ ನೋಡಿ, ತಾವು ಕಾಪಾಡಿಕೊಂಡು ಬಂದಿದ್ದ ಗುಟ್ಟು ರಟ್ಟಾಯಿತು ಎಂದು ಗಾಬರಿಗೆ ಬಿದ್ದು ನನಗೆ ಫೋನ್
ಮಾಡಿ, ತಮ್ಮ ಆಕ್ರೋಶವನ್ನು ಹೊರಹಾಕಿದ್ದರು.

ಅಸಲಿಗೆ ಅವರು ಆ ಸುದ್ದಿಯನ್ನು ಸರಿಯಾಗಿ ಮತ್ತು ಇಡಿಯಾಗಿ ಓದಿರಲೇ ಇಲ್ಲ. ತಮ್ಮ ಆಕ್ರೋಶವನ್ನು ಹೊರ ಹಾಕುವ ಮೂಲಕ ತಮ್ಮ ಗುಟ್ಟನ್ನು ತಾವೇ ರಟ್ಟು ಮಾಡಿದ್ದರು! ಅದಾದ ಬಳಿಕ ಹಲವು ಸಲ ಸಭೆ-ಸಮಾರಂಭ, ಕಾರ್ಯಕ್ರಮಗಳಲ್ಲಿ ಭೇಟಿ ಮಾಡಿದ್ದರೂ ಆ ವಿಷಯವನ್ನು ಮಾತ್ರ ಅವರು ಅಪ್ಪಿತಪ್ಪಿಯೂ ಪ್ರಸ್ತಾಪಿಸಲಿಲ್ಲ. ಸುಮ್ಮನೆ ಸಚಿವರ ಕಾಲೆಳೆಯಲೆಂದು ನೀಡಿದ ಆ ಹೆಡ್‌ಲೈನ್‌ಗೆ ಅವರೇ ಕಾಲು ಜಾರಿ ಬಿದ್ದಿದ್ದರು!

ನಿರೀಕ್ಷೆಗಿಂತ ಹೆಚ್ಚಿನ ಲಾಭ

ಇತ್ತೀಚೆಗೆ ‘ದೈನಿಕ್ ಭಾಸ್ಕರ್’ ಪತ್ರಿಕೆಯಲ್ಲಿ ಒಂದು ಪುಟ್ಟ ಬರಹ ಪ್ರಕಟವಾಗಿತ್ತು. ಇಲ್ಲಿ ಲೇಖಕ ಯಾರು ಎಂಬುದು ಅಪ್ರಸ್ತುತ. ಹೀಗಾಗಿ ಆ ಪ್ರಸಂಗ ವನ್ನಷ್ಟೇ ಕೊಡುತ್ತಿದ್ದೇನೆ. ರೈಲಿನಲ್ಲಿ ಜಯಪುರದಿಂದ ಜೋಧಪುರದತ್ತ ಪ್ರಯಾಣಿಸುತ್ತಿರುವಾಗ ನಾನು ಒಂದು ಪುಸ್ತಕ ಓದುತ್ತಿದ್ದೆ. ಇಪ್ಪತ್ತು ನಿಮಿಷಗಳ ಅಂತರದಲ್ಲಿ ಇಬ್ಬರು ಚಾಯವಾಲಾಗಳು ಬಂದುಹೋದರು. ಮೊದಲಿಗೆ ಬಂದವನು ಬಹಳ ಶಿಸ್ತಿನಲ್ಲಿ ಚಹಾ ಕೊಡುತ್ತಿದ್ದ. ನಂತರ ಬಂದವನನ್ನು ಪ್ರಯಾಣಿಕರು, ‘ನಿನ್ನ ಚಹ ಮೊದಲು ಬಂದವನು ನೀಡಿದ ಚಹಾಕ್ಕಿಂತ ಚೆನ್ನಾಗಿದೆಯಾ?’ ಎಂದು ಕೇಳುತ್ತಾರೆ.

ಫಟ್ ಅಂತ ಆಹುಡುಗ, ‘ಮೊದಲು ಕುಡಿದು ನೋಡಿ, ಆಮೇಲೆ ಮಾತನಾಡಿ’ ಎಂದು ಹೇಳುತ್ತಾನೆ. ಅಲ್ಲಿದ್ದವರಿಗೆಲ್ಲ ಒಂದು ಗುಟುಕಿನಷ್ಟು ಚಹ ಉಚಿತವಾಗಿ ಕೊಡುತ್ತಾನೆ. ಆತನ ವ್ಯಾಪಾರ ತಂತ್ರಕ್ಕೆ ಮಾರುಹೋದ ಪ್ರಯಾಣಿಕರು ಚಹಾ ಖರೀದಿ ಮಾಡಿ ಸಂತೋಷ ವ್ಯಕ್ತಪಡಿಸುತ್ತಾರೆ.
ಆತನ ನಡವಳಿಕೆ ಕೋಚ್‌ನಲ್ಲಿ ಚರ್ಚೆಯ ವಸ್ತುವಾಗುತ್ತದೆ. ಜೋಧಪುರ ತಲುಪುವ ತನಕದ ಐದೂವರೆ ಗಂಟೆ ಅವಧಿಯಲ್ಲಿ ಆ ಹುಡುಗ ಅತಿ ಹೆಚ್ಚು ಚಹ ಮಾರಾಟ ಮಾಡಿದ್ದ. ಚಹಾ ಕುಡಿಯುವ ಅಭ್ಯಾಸವೇ ಇಲ್ಲದ ಜನರೂ ಕೂಡ ಆತನ ಮಾತಿಗೆ, ಚತುರತೆಗೆ ಮಾರುಹೋಗಿ ಚಹಾ ಕುಡಿದಿದ್ದರು.
ನಕಾರಾತ್ಮಕ ಚಿಂತನೆ ಮಾಡುವವರ ಪ್ರಕಾರ ಆ ಎರಡೂ ಚಾಯವಾಲಾಗಳು ಪರಸ್ಪರ ಮಾತನಾಡಿಕೊಂಡು ಈ ರೀತಿ ತಂತ್ರ ಹೆಣೆದಿರಬಹುದು ಎಂಬುದು ಒಂದು ಅಭಿಪ್ರಾಯ.

ಆದರೆ ನನ್ನ ತರ್ಕ ಅದಲ್ಲ. ಮೊದಲು ಬಂದ ಚಾಯವಾಲಾಗಿಂತ ಎರಡನೆಯವನ ಚಹ ಚೆನ್ನಾಗಿತ್ತು. ಸಾಮಾನ್ಯವಾಗಿ ಮೊದಲು ವ್ಯಾಪಾರ ಶುರು ಮಾಡಿದವನಿಗೆ ಹೆಚ್ಚು ವ್ಯಾಪಾರ ಆಗುತ್ತದೆ. ತಾನು ಮೊದಲು ನಾನು ಮೊದಲು ಎಂದು ರೈಲಿನಲ್ಲಿ ಸ್ಪರ್ದೆಯೇ ಏರ್ಪಟ್ಟಿರುತ್ತದೆ. ನನ್ನ ಬಳಿ
ಅವರೇನಾದರೂ ಸಲಹೆ ಕೇಳಿದ್ದರೆ ‘ಇದೇ ರೈಲಿನ ಬೋಗಿಯಲ್ಲಿ ಚಹ ತಯಾರು ಮಾಡಿದರೆ, ಅದರ ಸವಿ ಮತ್ತು ಸ್ವಾದ ಎಲ್ಲರ ಮೈಮನಸ್ಸುಗಳನ್ನು ಬಹುಬೇಗ ತಲುಪುತ್ತದೆ ಮತ್ತು ವ್ಯಾಪಾರವೂ ಹೆಚ್ಚಾಗುತ್ತದೆ’ ಎಂದು ಸಲಹೆ ಕೊಡುತ್ತಿದ್ದೆ. ಸಾಮಾನ್ಯವಾಗಿ ನಾವು ಕಾಫಿ ಕೆಫೆಗಳಿಗೆ ಹೋದಾಗ ಅಲ್ಲಿ
ಹರಡಿರುವ ಪರಿಮಳವನ್ನು ಆಸ್ವಾದಿಸಿಯೇ ಕಾಫಿಗೆ ಆರ್ಡರು ಮಾಡುತ್ತೇವೆ.

ವಿದೇಶಗಳಲ್ಲಿ ಚಲಿಸುವ ಬಸ್ಸುಗಳಲ್ಲಿ ನಿಲ್ದಾಣ ಬರುವುದಕ್ಕೆ ಕೊಂಚ ಮುನ್ನ ಕಾಫಿ ಶಾಪ್‌ಗಳ ಜಾಹೀರಾತು ಪ್ರದರ್ಶಿತವಾಗುತ್ತವೆ. ಅಷ್ಟೇ ಅಲ್ಲ, ಬಸ್ ನೊಳಗಡೆಯೇ ಕಾಫೀ ವೆಂಡಿಂಗ್ ಮಶೀನ್ ಕೂಡ ಇರುತ್ತದೆ. ಇದನ್ನೆಲ್ಲ ಗಮನಿಸಿದ ಪ್ರಯಾಣಿಕ ಒಂದು ಕಪ್ ಕಾಫಿ ಕುಡಿಯುವ ಮನಸ್ಸು ಮಾಡುತ್ತಾನೆ. ಆಫೀಸಿಗೆ ಹೊರಡುವಾಗ ಮನೆಯಂದು ಕಾಫಿ ಕುಡಿದು ಬಂದಿದ್ದರೂ ಕೂಡ ಇಲ್ಲಿ ಇನ್ನೊಂದು ಕಾಫಿ ಕುಡಿಯುವಂತೆ ಮನಸ್ಸು ಹೇಳುತ್ತದೆ.

ನೀವು ನಿರೀಕ್ಷೆಗಿಂತ ಹೆಚ್ಚಿನ ರಿಟರ್ನ್ ಬೇಕೆಂದು ಬಯಸುವವರಾದರೆ, ನಿಮ್ಮ ನಡವಳಿಕೆಯಂದು ಸರ್ಪ್ರೈಸಿಂಗ್ ಎಲಿಮೆಂಟ್ ಇರಬೇಕು. ಗ್ರಾಹಕರ
ಇಂದ್ರಿಯಗಳಿಗೆ ನೀವು ಮಾರುವ ಉತ್ಪನ್ನದ ಸುವಾಸನೆ, ಪರಿಮಳ ಆಕರ್ಷಿಸುವಂತಿರಬೇಕು. ಹಾಗಿದ್ದಾಗ ಮಾತ್ರ ನೀವು ಜನಜಂಗುಳಿಯ ಬಜಾರಿ ನಲ್ಲಿ ಗೆಲ್ಲುವುದು ಸಾಧ್ಯ. ಈ ವಿಚಾರವನ್ನು ನಿಮ್ಮ ವಹಿವಾಟಿನಲ್ಲಿ ಪ್ರಯೋಗಿಸಬಹುದು.

ಮೊಬೈಲ್ ಬಿಟ್ಟು ಇರಬಹುದಾ?

ಗಂಡ -ಹೆಂಡತಿ ಏಕಾಂಗಿ ಯಾಗಿ, ರಸಮಯವಾಗಿ, ರೊಮ್ಯಾಂಟಿಕ್ ಆಗಿ ಕಳೆಯುವ ತಾಣವೆಂದರೆ ಬೆಡ್‌ರೂಮ. ಆದರೆ ಅವರಿಬ್ಬರೂ ಮೊಬೈಲ್‌ನಲ್ಲಿ ಹೆಚ್ಚು ಸಮಯ ಕಳೆಯುವ ತಾಣವೂ ಅದೇ.

ಗಂಡ-ಹೆಂಡತಿ ಬೆಡ್ ರೂಮ್ ಸೇರಿದರೆ, ಇಬ್ಬರ ಕೈಯಲ್ಲೂ ಮೊಬೈಲ. ಇಬ್ಬರೂ ಅವರವರ ಲೋಕದಲ್ಲಿ ಮಗ್ನ. ಗಂಡ ತನ್ನನ್ನು ತನ್ನಷ್ಟಕ್ಕೆ ಬಿಟ್ಟರೆ ಸಾಕು ಎಂದು ಹೆಂಡತಿ ಯೋಚಿಸುತ್ತಾಳೆ. ಗಂಡನ ಯೋಚನೆಯೂ ಹಾಗೆ. ಇಬ್ಬರೇ ಹಾಯಾಗಿ ಕಳೆಯಬೇಕಾದ ಬೆಡ್ ರೂಮಿನಲ್ಲಿ ಮೊಬೈಲ್ ಎಂಬ
ಸವತಿ ನಿತ್ಯವೂ ಕಾಡುತ್ತಾಳೆ. ಇಂದಿನ ದಿನಗಳಲ್ಲಿ ಮೊಬೈಲ್ ಮನುಷ್ಯನ ಅಶಾಂತಿ, ಹಲವು ಸಮಸ್ಯೆಗಳಿಗೆ ಕಾರಣವಾಗಿದೆ.

ಕ್ಯಾಥರೀನ್ ಪ್ರೈಸ್ ಎಂಬುವವಳು How To Break Up With Your Phone : The 30 day plan to take back your life ಎಂಬ ಪುಸ್ತಕದಲ್ಲಿ ಮೊಬೈಲ್ ಫೋನ್ ಕೋಟ್ಯಂತರ ಸಂಸಾರ ಹಾಳು ಮಾಡಿದ ಕಥೆಯನ್ನೇ ಬರೆದಿದ್ದಾಳೆ. ನಿದ್ದೆ ಬರುವುದಕ್ಕಿಂತ ಮೊದಲು ಎಲ್ಲರೂ ಮೊಬೈಲ್ ನೋಡಿಯೇ ಮಲಗುತ್ತಾರೆ. ಬೆಳಗ್ಗೆ ಎದ್ದ ತಕ್ಷಣ ಮೊಬೈಲ್ ನೋಡಲೇಬೇಕು. ಇವೆರಡರ ಮಧ್ಯೆ ನೂರಾರು ಸಲ ಮೊಬೈಲ್ ನೋಡು ತ್ತಾರೆ. ಒಂದು ನಿಮಿಷ ಪುರುಸೊತ್ತು ಸಿಕ್ಕರೂ ಮೊಬೈಲ್ ನೋಡಲೇಬೇಕು.

ಸ್ಮಾರ್ಟ್ ಫೋನ್ ಇಟ್ಟುಕೊಂಡವರು ದಿನಕ್ಕೆ ಏನಿಲ್ಲವೆಂದರೂ ಮೂರರಿಂದ-ನಾಲ್ಕು ಗಂಟೆ ಮೊಬೈಲಿನಲ್ಲಿರುತ್ತಾರೆ. ಕೆಲವರು ಆರರಿಂದ ಏಳು ಗಂಟೆ ಹಿಡಿದಿರುತ್ತಾರೆ. ನೀವು ಎಲ್ಲಿಯೇ ಹೋಗಲಿ, ಬರಲಿ ಅದು ನಿಮ್ಮೊಂದಿಗೆ ಇರುತ್ತದೆ. ನಿಮ್ಮೊಂದಿಗೆ ಯಾರು ಇರದಿದ್ದರೂ ಮೊಬೈಲ್ ಇದ್ದೇ ಇರುತ್ತದೆ. ಮೊಬೈಲ್ ಇದ್ದರೆ ಬೇರೆ ಯಾರೂ ಇರಬೇಕಿಲ್ಲ. ಇಂದು ಮೊಬೈಲ್ ಇಲ್ಲದ ಮನೆಯಿಂದ ಸಾಸಿವೆಯನ್ನು ತರುವುದು ಸಾಧ್ಯವೇ ಇಲ್ಲ.
ಮೊಬೈಲ್ ಮಹಾ ವ್ಯಸನಕಾರಿ. ಅಂದರೆ Zbbಜ್ಚಿಠಿಜಿqಛಿ. ಮೊಬೈಲ್ ಆಪ್‌ಗಳನ್ನು ಆ ರೀತಿಯಿಂದಲೇ ರೂಪಿಸಿರುತ್ತಾರೆ. ಕೈಯಲ್ಲಿ ಮೊಬೈಲ್ ಇದ್ದರೆ ನಾವು ಬೇರೆ ಸಂಗತಿಗಳ ಮೇಲೆ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಯಾವ ವಿಷಯದ ಬಗ್ಗೆಯೂ ಆಳವಾಗಿ ಯೋಚಿಸಲು, ಬಹುಕಾಲ ಚಿಂತಿಸಲು ಸಾಧ್ಯವಾಗುವುದಿಲ್ಲ. ಇದು ನೆನಪಿನ ಶಕ್ತಿಯನ್ನೂ ಕುಂದಿಸುತ್ತದೆ.

ಜಗತ್ತಿಗೆ ಐಫೋನ್‌ನ್ನು ಪರಿಚಯಿಸಿದ ಆಪಲ್ ಕಂಪನಿಯ ಮುಖ್ಯಸ್ಥನಾಗಿದ್ದ ದಿವಂಗತ ಸ್ಟೀವ್ ಜಾಬ್ಸ್, ತನ್ನ ಮಕ್ಕಳಿಗೆ ಆಪಲ್ ಪ್ರಾಡಕ್ಟ್ ಗಳ ಬಳಕೆಯನ್ನು ನಿಯಂತ್ರಿಸಿರುವುದಾಗಿ ಹೇಳಿದ್ದ. ಅದರಲ್ಲೂ ಐಫೋನ್ ಬಳಕೆ ಬಗ್ಗೆ ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯ ಟೆಕ್ನಲಾಜಿ ವರದಿಗಾರ ನಿಕ್ ಬಿಲ್ಟನ್ ಕೇಳಿದ ಪ್ರಶ್ನೆಗೆ, They haven’t used it. We limit how much technology our kids use at home ಎಂದು ಹೇಳಿದ್ದ. ಮೈಕ್ರೋಸಾ- ಸಂಸ್ಥಾಪಕ ಬಿಲ್ ಗೇಟ್ಸ ಕೂಡ ತನ್ನ ಮಕ್ಕಳ ಮೇಲೆ ಇದೇ ನಿಯಂತ್ರಣ ಹೇರಿದ್ದ. ‘ನನ್ನ ಮಕ್ಕಳಿಗೆ ಹದಿನಾಲ್ಕು ವರ್ಷ ಆಗುವವರೆಗೆ, ನಾನು ಮೊಬೈಲ್ ಫೋನ್ ಕೊಟ್ಟಿರಲಿಲ್ಲ. ಅವುಗಳಿಂದ ಅವರನ್ನು ದೂರ ಇಟ್ಟಿದ್ದೆ’ ಎಂದು ಹೇಳಿದ್ದ.

ಯೂರೋಪಿನ ಕೆಲ ದೇಶಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ, ಆಫೀಸುಗಳಲ್ಲಿ No Mobile Zone ಕಾಣಿಸಿಕೊಳ್ಳುತ್ತಿವೆ. ಕೆಲವರು ತಮ್ಮ ಮನೆಗಳಲ್ಲೂ ಈ ತಾಣವನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ. ಡೈನಿಂಗ್ ಟೇಬಲ್‌ಗೆ ಬರುವಾಗ ಮೊಬೈಲ್‌ನ್ನು ಹಿಡಿದು ತರಬಾರದು ಎಂಬ ನಿಯಮ ಜನಪ್ರಿಯವಾಗುತ್ತಿದೆ. ದಿನದಲ್ಲಿ ಒಂದು ಗಂಟೆಗಿಂತ ಅಧಿಕವಾಗಿ ಮೊಬೈಲ್ ಬಳಸಬಾರದು ಎಂಬ ನಿಯಮವನ್ನು ತಮ್ಮ ಮೇಲೆ ವಿಧಿಸಿಕೊಳ್ಳುತ್ತಿದ್ದಾರೆ. ಕೆಲವರಂತೂ ಫೇಸ್ಬುಕ್, ಇನ್ಸ್ಟಾ ಗ್ರಾಂ, ವಾಟ್ಸಾಪ್ ಆಪ್‌ಗಳನ್ನು ಡಿಲೀಟ್ ಮಾಡುತ್ತಿzರೆ. ಇವುಗಳ ಗೊಡವೆಯೇ ಬೇಡ ಎಂದು ಬೇಸಿಕ್ ಸೆಟ್‌ಗೆ ಮೊರೆ ಹೋಗುತ್ತಿದ್ದಾರೆ. ಮೊಬೈಲ್ ಇಲ್ಲದೇ ಬದುಕಬಹುದು ಎಂಬ ವಾದ ಜನಪ್ರಿಯವಾಗುತ್ತಿದೆ. ಅದೂ ಸಹ ಫ್ಯಾಷನ್ ಆಗುತ್ತಿದೆ. ನಾನು ಮೊಬೈಲ್ ಬಳಸುತ್ತಿಲ್ಲ, ನಾನು ವಾಟ್ಸಾಪ್ ಬಳಸುವುದಿಲ್ಲ, ನಾನು ಸೋಷಿಯಲ್ ಮೀಡಿಯಾದಲ್ಲಿ ಇಲ್ಲ… ಎಂಬ ಮಾತುಗಳೂ ಸಹ ಹೆಚ್ಚು ಕೇಳಿ ಬರಲಾರಂಭಿಸಿವೆ.

ಭಾರದ ಸಮಸ್ಯೆ
ಈ ವಾರ ಯೋಗಿ ದುರ್ಲಭ ಜೀ ಫೋನ್ ಮಾಡಿದಾಗ ‘ಭಾರ’ಕ್ಕೆ ಸಂಬಂಧಿಸಿದಂತೆ ಎರಡು ತಮಾಷೆಯ ಪ್ರಸಂಗಗಳನ್ನು ಹೇಳಿದರು.
* ‘ಈಜಿಪ್ಟಿನಲ್ಲಿ ಮಾತ್ರ ಯಾಕೆ ಅಷ್ಟು ದೊಡ್ಡ ಪಿರಮಿಡ್ಡುಗಳಿವೆ?’ ಎಂದು ಯಾರೋ ಕೇಳಿದನಂತೆ. ಅದಕ್ಕೆ ಇನ್ಯಾರೋ ಜೋರಾಗಿ ಹೇಳಿದನಂತೆ – ‘ಅವನ್ನು ಲಂಡನ್ನಿನ ಬ್ರಿಟಿಷ್ ಮ್ಯೂಸಿಯಮ್ಮಿಗೆ ಎತ್ತಿಕೊಂಡು ಹೋಗೋಣ ಅಂದ್ರೆ ಬಹಳ ಭಾರ!’
* ಜೀವನದಲ್ಲಿ ಭಾರ ಎತ್ತಿದವರು ಮಾತ್ರ ಏನು ಬೇಕಾದರೂ ಸಾಽಸುತ್ತಾರೆ ಎಂದು ಒಂದು ಜಿಮ್‌ನಲ್ಲಿ ಫಲಕ ಹಾಕಿದ್ದರು. ಅದನ್ನು ಓದಿದ ಪಿರ್ಕಿ ತನ್ನ ಪಾಡಿಗೆ ಹೀಗೆ ಗೊಣಗಿದ – ‘ತಿಮಿಂಗಿಲ ಇಡೀ ದಿನ ಈಜುತ್ತದೆ, ಕೇವಲ ಮೀನುಗಳನ್ನು ಮಾತ್ರ ಸೇವಿಸುತ್ತದೆ. ಆದರೂ ಅದು ದಪ್ಪ. ಮೊಲ ಇಡೀ ದಿನ ಹುಲ್ಲು ಮತ್ತು ತರಕಾರಿಗಳನ್ನು ಮಾತ್ರ ತಿನ್ನುತ್ತದೆ. ಇಡೀ ದಿನ ಜಿಗಿಯುತ್ತದೆ, ಕುಪ್ಪಳಿಸುತ್ತದೆ. ಆದರೆ ಕೇವಲ ಐದು ವರ್ಷ ಬದುಕಿರುತ್ತದೆ. ಆದರೆ ಆಮೆ ಇದೆಯಲ್ಲ, ಅದು ಓಡುವುದೂ ಇಲ್ಲ, ಭಾರ ಎತ್ತುವುದೂ ಇಲ್ಲ. ವಿಪರೀತವಾಗಿ ತಿನ್ನುವುದೂ ಇಲ್ಲ. ಆದರೆ ೪೫೦ ವರ್ಷ ಬದುಕುತ್ತದೆ. ಇವೆ ಗೊತ್ತಿದ್ದರೂ ಚೆನ್ನಾಗಿ ತಿನ್ನಿ, ಓಡಿ ಮತ್ತು ಭಾರ ಎತ್ತಿ ಎಂದು ಏಕೆ ಹೇಳುತ್ತಾರೋ ಗೊತ್ತಿಲ್ಲ.

error: Content is protected !!