Thursday, 12th December 2024

ಗರ್ಭಿಣಿಯರು- ಮಕ್ಕಳ ಆರೋಗ್ಯದ ಅಡಿಗಲ್ಲು ಬುಡಮೇಲು

ಅವಲೋಕನ

ಡಾ.ಕರವೀರಪ್ರಭು ಕ್ಯಾಲಕೊಂಡ

ಕರೋನಾ ಮಹಾಮಾರಿ ವೈರಸ್ ಸೋಂಕು ತಮಗೂ ಬರಬಹುದೆಂಬ ಭೀತಿಯಲ್ಲಿ ಜಗತ್ತಿನಾದ್ಯಂತ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ರೋಗಿಗಳ ಮುಟ್ಟಿ, ತಟ್ಟಿ ನೋಡುವುದಿರಲಿ, ಹತ್ತಿರ ಹೋಗಲು ಹೆದರುವ ವಾತಾವರಣ ಲಾಕ್ ಡೌನ್ ಆರಂಭದಲ್ಲಿ ನಿರ್ಮಾಣವಾಗಿತ್ತು. ಅದರ ನೇರ ಪರಿಣಾಮವಾಗಿದ್ದು ಗರ್ಭಿಣಿಯರ ಮೇಲೆ.

ಗರ್ಭಿಣಿ, ಗರ್ಭಧರಿಸಿದ ಮೊದಲ ತಿಂಗಳಿಂದ ಕಾಲಕಾಲಕ್ಕೆ ವೈದ್ಯರಲ್ಲಿಗೆ ಭೇಟಿ ನೀಡಿ, ಆರೋಗ್ಯ ತಪಾಸಣೆಯನ್ನು, ಸಕಾಲಿಕ ಸಲಹೆ ಸೂಚನೆಗಳನ್ನು ಪಡೆಯುವುದು ಅವಶ್ಯ ಮತ್ತು ಅನಿವಾರ್ಯ ಕೂಡ. ಗರ್ಭಿಣಿಯರನ್ನು ಕ್ರಮಬದ್ಧ, ವ್ಯವಸ್ಥಿತ ವೈದ್ಯಕೀಯ ತಪಾಸಣೆಗೆ ಒಳಪಡಿಸುವುದನ್ನು ಪ್ರಸೂತಿ ಪೂರ್ವ ಪರಾಮರಿಕೆ (Antenatal care ) ಎಂದು ಕರೆಯುತ್ತಾರೆ. ಗರ್ಭಧಾರಣೆಯು ಸುಸೂತ್ರವಾಗಿ ಮುಂದುವರಿದು, ಹೆರಿಗೆಯು ನಿರಾತಂಕವಾಗಿ ನಡೆದು, ಆರೋಗ್ಯವಂತ ತಾಯಿ ಮತ್ತು ಆರೋಗ್ಯಶಾಲಿ ಮಗು ಪಡೆಯುವುದೇ ಪ್ರಸೂತಿ ಪೂರ್ವ ಪರಾಮರಿಕೆಯ ಗುರಿ.

4 ರಿಂದ 28 ವಾರಗಳ ನಡುವೆ ಪ್ರತಿ ತಿಂಗಳಿಗೊಮ್ಮೆ, ನಂತರ 28-36 ವಾರಗಳ ನಡುವೆ ಪ್ರತಿ 15 ದಿನಗಳಿಗೊಮ್ಮೆ, ಆ ಮೇಲೆ ಹೆರಿಗೆಯಾಗುವ ವರೆಗೆ ಪ್ರತಿ ವಾರಕ್ಕೊಮ್ಮೆ ವೈದ್ಯರ ಭೇಟಿ, ತಪಾಸಣೆ,ಸೂಕ್ತ ಸಲಹೆ ಸೂಚನೆ ಅತೀ ಅವಶ್ಯ. ಆದರೆ, ಕರೋನಾ ಸೋಂಕಿನ ಸುನಾಮಿಗೆ ತತ್ತರಿಸಿದ ಜಗತ್ತಿನಲ್ಲಿ ಎ ಲೆಕ್ಕಾಚಾರಗಳು ಏರುಪೇರಾಗಿವೆ. ಸದ್ಯದ ಸ್ಥಿತಿಯಲ್ಲಿ ತಬ್ಬಿಬ್ಬಾದ ವೈದ್ಯರು ಟೆಲಿಮೆಡಿಸಿನ್ ತಂತ್ರಜ್ಞಾನದ ಮೊರೆ ಹೋದರು. ಟೆಲಿಮೆಡಿಸಿನ್ ವೈದ್ಯರಿಗೆ ಮಾತ್ರವಲ್ಲ, ಗರ್ಭಿಣಿ ಸ್ತ್ರೀಯರಿಗೂ ಮತ್ತು ಅವರ ಗರ್ಭದಲ್ಲಿರುವ ಮಗುವಿನ ದೃಷ್ಟಿಯಿಂದಲೂ ಸುರಕ್ಷಿತ ವಿಧಾನ ಎಂಬುದು ಹಲವಾರು ವೈದ್ಯರ ಅಭಿಪ್ರಾಯ.

ತಾಯಿ ಮತ್ತು ಭವಿಷ್ಯದ ಮಗು ಆಸ್ಪತ್ರೆಗೆ ಬಂದು ಕರೋನಾದಂಥ ಸೋಂಕಿನ ಬಳುವಳಿ ಪಡೆದುಕೊಳ್ಳುವ ಅಪಾಯಕ್ಕಿಂತ ಮನೆಯಲ್ಲಿಯೇ ಇದ್ದು, ಟೆಲಿಮೆಡಿಸಿನ್ ಮೂಲಕ ವೈದ್ಯರ ಸೂಕ್ತ ಸಲಹೆ ಸೂಚನೆಗಳನ್ನು ಪಡೆಯುವುದು ಒಳ್ಳೆಯದು ಎಂಬುದು ಟೆಲಿಮೆಡಿಸಿನ್ ವೈದ್ಯರ ಅಭಿಮತ. ಟೆಲಿಮೆಡಿಸಿನ್ ಸಣ್ಣ ಪುಟ್ಟ ಕಾಯಿಲೆಗಳಿಗೆ ಉಪಯುಕ್ತ. ಗರ್ಭಿಣಿಯರ ಕ್ಷೇತ್ರ ಕ್ಕಂತೂ ಇದು ಸೂಕ್ತವಲ್ಲ ಎಂಬುದು ವಿಶ್ವ ಆರೋಗ್ಯ ಸಂಸ್ಥೆಯ ಅಭಿಪ್ರಾಯ.

ಕರೋನಾ ಮಹಾಮಾರಿ ಸಾಂಕ್ರಾಮಿಕದಲ್ಲಿ ಗರ್ಭಿಣಿಯರು ಅನುಭವಿಸಿದ ಗೋಳು ಅಷ್ಟಿಷ್ಟಲ್ಲ. ಹೆರಿಗೆ ವೇಳೆಯಲ್ಲಿ ಆಸ್ಪತ್ರೆಗಳ ಮೆಟ್ಟಿಲು ಹತ್ತಿ ಇಳಿದು ಸಾಕು ಸಾಕಾಗಿ ಹೋಗಿದೆ. ಸಕಾಲದಲ್ಲಿ ವೈದ್ಯರ ಸೇವೆ ಸಿಗದಿದ್ದಕ್ಕೆ ಸಾವುಗಳು ಸಂಭವಿಸಿರುವ ವರದಿ ಗಳಾಗಿವೆ. ಇದು ಹಲವು ಗರ್ಭಿಣಿ ಸ್ತ್ರೀಯರ ಮಾನಸಿಕ ವ್ಯವಸ್ಥೆಯನ್ನು ಕುಬ್ಜಗೊಳಿಸಿದೆ. ಹೆರಿಗೆ ಎಂದರೆ ಇನ್ನೊಮ್ಮೆ ಹುಟ್ಟಿ ಬಂದಂತೆ ಎಂಬ ನಂಬಿಕೆಗೆ ಎಡೆಕೊಟ್ಟರೆ, ಈ ಭ್ರಮೆಯಿಂದಲೇ ಹೆರಿಗೆಯ ಕಾಲಕ್ಕೆ ಪ್ರಾಣಾಪಾಯ ಆಗಬಹುದು.

ಗರ್ಭಿಣಿ ಸ್ತ್ರೀಯರ ಕೋವಿಡ್ –19 ಪೂರ್ವದ ನಿಯಮಿತ ತಪಾಸಣೆಗಳು, ಈ ದಿನಗಳಲ್ಲಿ ರದ್ದಾಗಿರುವುದು ಗರ್ಭಿಣಿಯರಿಗೆ ತೊಂದರೆ ಉಂಟು ಮಾಡಿದೆ. ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್ ಕಾಯಿಲೆ ಹರಡುವುದರ ಬಗ್ಗೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ ನಂತರ ಜಗತ್ತಿನಾದ್ಯಂತ ಆಸ್ಪತ್ರೆಗಳು ದಿಢೀರ್ ಎಂದು ಮುಚ್ಚಲ್ಪಟ್ಟವು.

ತುರ್ತು ಸಂದರ್ಭಗಳಲ್ಲಿ ಮಾತ್ರ ವೈದ್ಯರನ್ನು ಮುಖತಃ ಭೇಟಿ ಮಾಡಬೇಕು ಎಂದು ಅಮೆರಿಕದ ಸಿಡಿಸಿ ಮತ್ತು ಇಂಗ್ಲೆಂಡಿನ ರಾಷ್ಟ್ರೀಯ ಆರೋಗ್ಯ ಸೇವೆಯ ಸಂಸ್ಥೆ ನಿರ್ದೇಶನ ನೀಡಿದ್ದರಿಂದ, ವೈದ್ಯರೊಡನೆಯ ಎಲ್ಲಾ ಸಾಮಾನ್ಯ ಭೇಟಿಗಳನ್ನು ಮುಂದೂಡಲಾಯಿತು. ದಿನನಿತ್ಯ ನಡೆಯಬೇಕಿದ್ದ ಶಸ್ತ್ರ ಸಚಿಕಿತ್ಸೆಗಳು ರದ್ದಾಗತೊಡಗಿದವು. ಸಾಮಾನ್ಯ ರೋಗಿಗಳು ಅಂತರ್ಜಾಲ ಅಥವಾ ಪೋನ್ ಮೂಲಕ ವೈದ್ಯರನ್ನು ಸಂಪರ್ಕಿಸಬೇಕಾಗಿ ಬಂತು. ಆಗ ರೋಗಿಗಳ ಮನದಲ್ಲಿ ಹೆದರಿಕೆ ಮತ್ತು ಆತಂಕ, ಅಭದ್ರತೆ ಆವರಿಸಿಕೊಂಡಿತು. ಭಾರತದಲ್ಲಿಯ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ.

ವೈದ್ಯಕೀಯ ಪ್ರಸಿದ್ಧ ನಿಯತಕಾಲಿಕ ‘ಬ್ರಿಟಿಷ್ ಮೆಡಿಕಲ್ ಜರ್ನಲ್’ನಲ್ಲಿ ಇತ್ತೀಚೆಗೆ ಪ್ರಕಟವಾದ ಲೇಖನದಲ್ಲಿ ಕೋವಿಡ್ – 19 ಮತ್ತು ಅದಿಲ್ಲದೆ ಇತರ ರೋಗಗಳಿಂದ ಸತ್ತವರ ಅಂಕಿಅಂಶಗಳನ್ನು ನೀಡಿದೆ. ತಜ್ಞ ವೈದ್ಯರ ಪ್ರಕಾರ ಎಂದಿನ ಆಸ್ಪತ್ರೆ ಸೇವೆಗಳು ಸಾರ್ವಜನಿಕರಿಗೆ ಸಿಗುತ್ತಿದ್ದರೆ, ಇದರಲ್ಲಿನ ಎಷ್ಟೋ ಮರಣಗಳನ್ನು ತಪ್ಪಿಸಬಹುದಾಗಿತ್ತು. ಇದರಿಂದ ಎಚ್ಚೆತ್ತ ಪ್ರಾನ್ಸ್,
ಇಂಗ್ಲೆಂಡ್, ಅಮೆರಿಕ ತಮ್ಮ ಆರೋಗ್ಯ ವ್ಯವಸ್ಥೆಯನ್ನೇ ಅಮೂಲಾಗ್ರವಾಗಿ ಬದಲಿಸಿಕೊಂಡರು. ಈ ಬದಲಾವಣೆ ನಮ್ಮ ದೇಶಕ್ಕೂ ಅನಿವಾರ್ಯ ಎಂಬುದನ್ನು ಮರೆಯುವಂತಿಲ್ಲ.

ಪುಟ್ಟ ಮಕ್ಕಳಿಗೂ ಕರೋನಾ ಪೆಟ್ಟು: ಮಕ್ಕಳೇ ನಾಡಿನ ದೊಡ್ಡ ಸಂಪತ್ತು ಎಂದು ಇಂಗ್ಲಿಷ್ ಲೇಖಕ ಜಾನ್ ರಸ್ಕಿನ್ ನುಡಿದಿ ದ್ದಾನೆ. ಮುಂಜಾವು ದಿನವನ್ನು ತೋರಿಸಿದಂತೆ ಬಾಲ್ಯ ಮನುಷ್ಯನನ್ನು ತೋರಿಸುತ್ತದೆ ಎಂದು ಇಂಗ್ಲೀಷ್ ಕವಿ ಜಾನ್ ಮಿಲ್ಟನ್ ಹಾಡಿzನೆ. ಆರೋಗ್ಯ ನಮ್ಮ ಸಾಮಾಜಿಕ ಮತ್ತುಆರ್ಥಿಕ ಬೆಳವಣಿಗೆಗೆ ಬಹುಮುಖ್ಯ.

ಮಗುವಿನ ಆರೋಗ್ಯ ವಯಸ್ಕನ ಆರೋಗ್ಯದೊಡನೆ ನೇರ ಸಂಪರ್ಕವನ್ನು ಹೊಂದಿರುವುದರಿಂದ ಅವರ ಆರೋಗ್ಯದತ್ತ ನಾವು ಗಮನ ಹರಿಸಲೇ ಬೇಕು. ಬಾಳ ಸಂಪುಟದಲ್ಲಿ ಬಾಲ್ಯವೆಂಬುವುದೊಂದು ಅಳಿಸಲಾಗದ ಮಧುರ ಭಾವಗೀತೆ ಎಂದು ಕವಿ ಚೆನ್ನ ವೀರ ಕಣವಿಯವರು ಕವಿತೆ ಕಟ್ಟಿ ಹಾಡಿದ್ದಾರೆ. ಅದಕ್ಕಾಗಿಯೇ ಮಕ್ಕಳಿಗಾಗಿ ಆರೋಗ್ಯಕರ ಪರಿಸರ ನಿರ್ಮಿಸಿ ಅವರ ಜೀವನದ ಭವಿಷ್ಯ ರೂಪಿಸಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿರುವುದು ಸಮಯೋಚಿತ ಮತ್ತು ಸ್ವಾಗತಾರ್ಹ.

ಮಕ್ಕಳು ಆರೋಗ್ಯದಿಂದ ಸುಖಜೀವನವನ್ನು ದೀರ್ಘಕಾಲ ಮಾಡಬೇಕೆಂಬುದು ಪ್ರತಿಯೊಬ್ಬ ತಂದೆ – ತಾಯಿಗಳ ಅಪೇಕ್ಷೆ. ಅವರು ಆರೋಗ್ಯದಿಂದ ಬಲಗೊಳ್ಳುವುದರ ಬುನಾದಿ, ಜೀವನ ಉಗಮವಾದ ಮೊದಲ ಘಟ್ಟದಲ್ಲಿಯೇ ಹಾಕಲ್ಪಡುತ್ತದೆ. ಆದುದ
ರಿಂದಾಗಿಯೇ ಜೋಸೆಫ್ ಔಬನರ್ ಹೇಳಿದ ಮಾತು – ಮಗುವನ್ನು ಬೆಳೆಸುವಾಗ ಅವರ ವೃದ್ದಾಪ್ಯವನ್ನು ಗಮನಿಸು. ಇದು ಸರ್ವ ಕಾಲಿಕ ಸತ್ಯ! ಮಕ್ಕಳಿಗೆ ಮಾರಕವಾದ ರೋಗಗಳೆಂದರೆ – ಕ್ಷಯ, ಪೋಲಿಯೋ, ಗಂಟಲು ಮಾರಿ, ನಾಯಿಕೆಮ್ಮು, ಧನುರ್ವಾಯು, ದಡಾರ, ಹೆಪಟೈಟಿಸ್ ಬಿ, ಮಿದುಳು ಜ್ವರ……. ವೈದ್ಯಕೀಯ ಎಷ್ಟೇ ಮುಂದುವರಿದಿದ್ದರೂ, ರೋಗಾಣುಗಳ ಸಾಗರದ ಈಜಾಡು ತ್ತಿರುವ ಜನರು, ಅವುಗಳೊಂದಿಗೆ ಸಹಬಾಳ್ವೆ ನಡೆಸುತ್ತಿದ್ದಾರೆ.

ಈ ಸಮತೋಲನದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಸಾಕು, ರೋಗಾಣುಗಳು ಮನಷ್ಯ ನ ಮೇಲೆ ಆಕ್ರಮಣ ಮಾಡುತ್ತವೆ. ಈ ಯುದ್ಧದಲ್ಲಿ ಮನುಷ್ಯ ಜಯಶಾಲಿಯಾದರೆ, ರೋಗ ಲಕ್ಷಣಗಳು ಸುಳಿಯುವುದಿಲ್ಲ. ಸೋತರೆ ರೋಗಿಯಾಗುತ್ತಾನೆ. ಅಷ್ಟೇ
ಅಲ್ಲ ರೋಗ ಪ್ರಸಾರದ ಕೇಂದ್ರವೂ ಆಗುತ್ತಾನೆ. ಈ ರೀತಿಯ ಸೋಂಕು ರೋಗಗಳಿಗೆ ಎಳೆ ವಯಸ್ಸಿನವರು ಸುಲಭವಾಗಿ ತುತ್ತಾಗು ತ್ತಾರೆ. ಆದ್ದರಿಂದ ಆ ವಯಸ್ಸು, ಆರೋಗ್ಯದ ದೃಷ್ಟಿಯಿಂದ ಅಪಾಯಕಾರಿ ಹಂತ ಎಂದು ಪರಿಗಣಿಸಲಾಗಿದೆ.

ಲಸಿಕೆ ನೀಡುವುದರಿಂದ ಮಾತ್ರವೇ ಮೂರು ಮಿಲಿಯನ್ ಮಕ್ಕಳ ಸಾವನ್ನು ತಡೆಗಟ್ಟಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಲಸಿಕೆಗಳಿಂದ ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಕೃತ್ರಿಮವಾಗಿ ಹೆಚ್ಚಿಸಿಕೊಳ್ಳಬಹುದು. ಲಸಿಕೆಗಳು ರೋಗಗಳ ವಿರುದ್ಧ ಹೋರಾಡುವ ಸೈನಿಕರನ್ನು ತರಬೇತಿಗೊಳಿಸುವ ಕಾರ್ಯವನ್ನೇ ಮಾಡುತ್ತದೆ. ಲಸಿಕೆ ಎಂಬುದು ರಸಿಕೆ ಎಂಬ ಪದದ ರೂಪಾಂತರ. ರೋಗ ನಿರೋಧಕ ಶಕ್ತಿ ಹೆಚ್ಚಿಸಿ, ಕಾಯಿಲೆಗಳಿಂದ ಕಾಪಾಡುವ ವಿಶಿಷ್ಟ ಶಕ್ತಿ ಲಸಿಕೆಗಳಿದೆ.
ಆದ್ದರಿಂದ ಲಸಿಕೆಗಳನ್ನು ಜೈವಿಕ ಗುರಾಣಿ ಎನ್ನಬಹುದು.

ಕೋವಿಡ್-19 ಕಾಯಿಲೆ ಹೂಂಕರಿಸಿದ ನಂತರ ಮಕ್ಕಳಿಗೆ ಕೊಡುತ್ತಿದ್ದ ವಿವಿಧ ರೋಗಗಳ ವಿರುದ್ಧದ ಲಸಿಕೆಗಳ ಪ್ರಮಾಣ ಗಮನಾರ್ಹವಾಗಿ ಕಡಿಮೆಯಾಗುತ್ತಿರುವುದು ಎಲ್ಲೆಡೆ ಆರೋಗ್ಯ ತಜ್ಞರ ಗಮನಕ್ಕೆ ಬಂದಿದೆ. ಇದನ್ನು ವಿಶ್ವ ಆರೋಗ್ಯ ಸಂಸ್ಥೆಯು ಗಮನಿಸಿದೆ. ಲಾಕ್ ಡೌನ್ ಮತ್ತು ಜನರು ಮನೆಯಲ್ಲಿಯೇ ಬಂಧಿಯಾಗಿರುವ ಪರಿಣಾಮ, ಜತೆಗೆ ಆಸ್ಪತ್ರೆಗಳಲ್ಲಿನ ವೈದ್ಯರ ಸಂದರ್ಶನ ರದ್ದಾಗಿರುವುದು – ಈ ಎಲ್ಲದರ ಕ್ರೋಢೀಕೃತ ಪರಿಣಾಮ ಎನ್ನಬಹುದು.

ಪ್ರಪಂಚದಾದ್ಯಂತ ಸುಮಾರು 11.7 ಕೋಟಿ ಮಕ್ಕಳು ಈ ದೆಸೆಯಿಂದ ಲಸಿಕೆಗಳಿಂದ ವಂಚಿತರಾಗಿರುವರೆಂದು ಇಂಗ್ಲೆಂಡ್‌ನ ಯುನಿಸೆ-ನ ನಿರ್ದೇಶಕರಾದ ಸಾಚಾ ದೇಶಮುಖ್ ಅಭಿಪ್ರಾಯ ಪಡುತ್ತಾರೆ. ಜಗತ್ತಿನಾದ್ಯಂತ ಕೋಟ್ಯಂತರ ಮಕ್ಕಳಿಗೆ ಲಸಿಕೆ
ಸಿಗದಿರುವುದರಿಂದ ದಡಾರ, ಪೋಲಿಯೋ, ನಾಯಿಕೆಮ್ಮು ಮೊದಲಾದ ರೋಗಗಳು ಭೀಕರ ರೀತಿಯಲ್ಲಿ ಕಾಣಿಸಿಕೊಂಡು, ಮಕ್ಕಳ ಜೀವವನ್ನು ಕುಕ್ಕಿ ಕುಕ್ಕಿ ಹೆಕ್ಕಬಹುದು. ವಿಶ್ವ ಆರೋಗ್ಯ ಸಂಸ್ಥೆಯ ಡೈರೆಕ್ಟರ್ ಜನರಲ್ ಡಾ.ಟೆಡ್ರೊಸ್ ಅದಾನೋಮ್ ಘೆಬ್ರಿಯೊಸಸ್ ವಿಶ್ವ ಆರೋಗ್ಯ ಸಂಸ್ಥೆಯ ಗೊತ್ತು ಗುರಿಗಳನ್ನು ಮುಟ್ಟುವುದು ತುಂಬಾ ನಿಧಾನವಾಗುತ್ತಿದೆ.

ಕೋವಿಡ್-19 ದೆಸೆಯಿಂದ ಅದು ತುಂಬಾ ಭಿನ್ನವಾಗಬಹುದು ಎಂದು ಅಭಿಪ್ರಾಯ ಪಡುತ್ತಾರೆ. ವಿಶ್ವ ಆರೋಗ್ಯ ಸಂಸ್ಥೆಯು ಸಸ್ಟೇನಬಲ್ ಡೆವಲಪ್‌ಮೆಂಟ್, ಬಡತನ ಮತ್ತು ಆರೋಗ್ಯ ವ್ಯವಸ್ಥೆಯ ವಿಚಾರದಲ್ಲಿ 2030ರ ಹೊತ್ತಿನತನಕ ಒಂದು ಭವಿಷ್ಯದ ಯೋಜನೆಯನ್ನು ರೂಪಿಸಿದೆ. ಅವೇ ಸಸ್ಟೇನಬಲ್ ಡೆವಲಪ್ ಮೆಂಟ್ ಗೊತ್ತುಗುರಿಗಳು. ಕೋವಿಡ್-19 ಮಹಾಮಾರಿ
ಸಾಂಕ್ರಾಮಿಕ ರೋಗ ನಮ್ಮೆಲ್ಲ ಭವಿಷ್ಯದ ಯೋಜನೆಗಳನ್ನು ತಲೆಕೆಳಗಾಗಿಸಿದೆ.

ಕೋವಿಡ್-19ನಂಥ ಕಾಯಿಲೆ ಹೊಸದಾಗಿ ಹುಟ್ಟುವುದರ ಬಗ್ಗೆ ಮತ್ತು ಆರೋಗ್ಯ ಸಂಬಂಧಿ ಅಪಾಯವನ್ನು ಎದುರಿಸಲು ನಾವು ಮೊದಲಿನಿಂದ ಸಿದ್ಧತೆ ನಡೆಸಬೇಕಾಗುತ್ತದೆ. ಈ ವಿಷಯದಲ್ಲಿ ನಾವು ಸೂಕ್ತ ಎಚ್ಚರವಹಿಸದಿದ್ದರೆ ಆರೋಗ್ಯದ ದುಷ್ಪರಿ ಣಾಮಗಳನ್ನು ಮಾತ್ರ ಎದುರಿಸುವುದಿಲ್ಲ, ಹಾಗೆಯೇ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ರಂಗದಲ್ಲಿಯೂ ತೀವ್ರ ರೀತಿಯ ಹಿನ್ನಡೆ ಅನುಭವಿಸಬೇಕಾಗುತ್ತದೆ ಎಂಬುದು ಅವರ ಅಭಿಪ್ರಾಯ. ಲಾಕ್‌ಡೌನ್ ಮತ್ತು ನಂತರದ ದಿನಗಳಲ್ಲಿ ಸಾಮಾನ್ಯ ಸಾರಿಗೆ ವ್ಯವಸ್ಥೆ – ಬಸ್, ರೈಲು, ವಿಮಾನಗಳು ಎಂದಿನಂತೆ ಚಲಿಸುತ್ತಿಲ್ಲವಾದ್ದರಿಂದ ಜನಸಾಮಾನ್ಯರಿಗೆ ತುಂಬಾ ತೊಂದರೆ ಆಗಿದೆ.  ಸಾಮಾನ್ಯ ನೆಗಡಿ, ಕೆಮ್ಮು, ಜ್ವರ ಬಂದವರು ಕರೋನಾ ಅಂತ ಹೌಹಾರುವ ಸ್ಥಿತಿ ಇಂದು ನಿರ್ಮಾಣವಾಗಿದೆ.

ಸಣ್ಣ ಪುಟ್ಟ ಕಾಯಿಲೆಗೆ ದೇವರೇ ಗತಿ: ಕರೋನಾ ಕಾಟದಿಂದ ಸಣ್ಣ ಪುಟ್ಟ ಕಾಯಿಲೆಗಳಿಗೆ ತುತ್ತಾದವರಿಗೂ ಸಹ ಚಿಕಿತ್ಸೆ ದೊರೆಯದ ಪರಿಸ್ಥಿತಿ ನಿರ್ಮಾಣವಾಗಿದೆ. ಕರೋನಾ ಲಕ್ಷಣಗಳು ಇಲ್ಲದ ಕಾಯಿಲೆಗಳಿಗೆ ಯಾವ ವೈದ್ಯರೂ ಸ್ಪಂದಿಸುತ್ತಿಲ್ಲ. ಈ ಮೊದಲು ಪ್ರತಿ ದಿನ ನೂರಾರು ಜನರಿಗೆ ಸಣ್ಣ ಪುಟ್ಟ ಕಾಯಿಲೆಗಳಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಕರೋನಾ ಕಾಲಘಟ್ಟದಲ್ಲಿ ನಿರಾಕರಿಸುತ್ತಿದ್ದಾರೆ. ಕೆಮ್ಮಿದರೆ, ಸೀನಿದರೆ, ನೆಗಡಿ, ಜ್ವರ ಬಂದರೆ ಕರೋನಾ ಟೆಸ್ಟ್ ಮಾಡಿಸಿಕೊಂಡು ಬರಲು ಹೇಳುತ್ತಿದ್ದಾರೆ.

ಮಳೆಗಾಲದಲ್ಲಿ ನೆಗಡಿ, ಕೆಮ್ಮು, ಜ್ವರ ಸಾಮಾನ್ಯ ಎಂಬುದನ್ನು ಇಂದು ವೈದ್ಯರು ಮರೆತಂತಿದೆ ಎಂದು ಜನಸಾಮಾನ್ಯರು
ಆಡಿಕೊಳ್ಳುತ್ತಿದ್ದಾರೆ. ಅನ್ಯ ತೊಂದರೆಗಳಿಂದ ವೈದ್ಯರಲ್ಲಿಗೆ ಹೋದರೂ ಕರೋನಾ ಟೆಸ್ಟ್ ಬಗ್ಗೆ ಕೇಳುತ್ತಾರೆ. ಕೈಮುಟ್ಟಿ
ನೋಡಲು ಹೆದರುತ್ತಿದ್ದಾರೆ. ಎರಡು ಮೀಟರ್ ದೂರದಲ್ಲಿಯೇ ಕೂಡಿಸಿ, ರೋಗಿಯ ಕಥೆ ಕೇಳಿ, ಔಷಧಿ ಬರೆದು ಕೊಡುತ್ತಿದ್ದಾರೆ.

ಕರೋನಾ ಸೋಂಕಿನ ನಾಗಾಲೋಟದಿಂದಾಗಿ ಸಣ್ಣ ಪುಟ್ಟ ಕಾಯಿಲೆಗೆ ಚಿಕಿತ್ಸೆ ನೀಡಲು ವೈದ್ಯರು ಭಯ ಪಡುತ್ತಿದ್ದಾರೆ.
ಸರಕಾರಿ ಆಸ್ಪತ್ರೆಗೆ ಹೋಗಲು ಜನರು ಹೆದರುತ್ತಿದ್ದಾರೆ. ಬಿ.ಪಿ. ಶುಗರ್ ಟೆಸ್ಟ್ ಮಾಡಲು ಸಹ ವೈದ್ಯರು ಹಿಂದೇಟು ಹಾಕುತ್ತಿದ್ದಾರೆ. ಪರಿಸ್ಥಿತಿಯ ದುರುಪಯೋಗ ಪಡೆದ ಬೊಗಳೆ ವೈದ್ಯರು ಬಾಯಿಗೆ ಬಂದಷ್ಟು ಹಣ ಕೀಳುತ್ತಿದ್ದಾರೆ. ಇದು ಹೀಗೆಯೇ ಮುಂದುವರಿ ದರೆ ಕರೋನಾಗಿಂತ ಸಣ್ಣ ಪುಟ್ಟ ಕಾಯಿಲೆಗಳೇ ಎಂಬ ಅನುಮಾನ ಆರಂಭವಾಗಿದೆ. ಇಂದು ಸಾಮಾನ್ಯ ರೋಗಗಳಿಗೆ ವೈದ್ಯರೂ ಇಲ್ಲ.

ಚಿಕಿತ್ಸೆಯೂ ಇಲ್ಲ. ಕಿವಿ, ಗಂಟಲು, ಮೂಗಿನ ತೊಂದರೆಗಳ ನಿವಾರಣೆಗೂ, ಅಂಧತ್ವ ನಿವಾರಣೆಗೂ ಈ ಹಿಂದಿನಂತೆ ಶಸ್ತ್ರ  ಚಿಕಿತ್ಸೆಗಳು ನಡೆಯುತ್ತಿಲ್ಲ. ಕೆಮ್ಮಿದರೆ, ಸೀನಿದರೆ ಜನ ಅನುಮಾನದಿಂದ ನೋಡುವಂತಾಗಿದೆ. ವೈದ್ಯರು ಸಾಮಾನ್ಯ ಕಾಯಿಲೆಗಳ
ಚಿಕಿತ್ಸೆಗೆ ಆಸ್ಪತ್ರೆಗೆ ಬರಬೇಡಿ. ತುರ್ತು ಚಿಕಿತ್ಸೆಗೆ ಮಾತ್ರ ಬನ್ನಿ ಎನ್ನುತ್ತಾರೆ. ಟೆಲಿಮೆಡಿಸಿನ್‌ನಿಂದ ರೋಗಿಗಳ ತೊಂದರೆಗಳಿಗೆ ಔಷಧ ತಿಳಿಸಬಹುದಾಗಿದೆ. ಅಮೂಲಾಗ್ರ ರೋಗಿಯ ತಪಾಸಣೆ ಆಗುವುದಿಲ್ಲ. ಗರ್ಭಿಣಿಯರ ವಿಷಯದಲ್ಲಂತೂ ಟೆಲಿಮೆಡಿಸಿನ್‌ ನಿಂದ ಗರ್ಭಿಣಿಯರ ಮತ್ತು ಭವಿಷ್ಯದ ಶಿಶುವಿನ ಆರೋಗ್ಯದ ಬಗ್ಗೆ ನಿಖರವಾಗಿ ಹೇಳಲು ಬರುವುದಿಲ್ಲ. ಹೆರಿಗೆ ಹಂತಗಳನ್ನು ಗುರುತಿಸಲು ಸಾಧ್ಯವಾಗುವುದಿಲ್ಲ.

ಹುಟ್ಟಿದ ಮಕ್ಕಳ ತೊಂದರೆಗಳ ನಿವಾರಣೆಯಾಗುವುದಿಲ್ಲ. ಈ ಎಲ್ಲ ‘ಇಲ್ಲ’ಗಳ ನಡುವೆ ಕರೋನಾ ಸೋಂಕಿನಿಂದಾಗಿ ಉಳಿದ
ರೋಗಗಳು ನಿರ್ಲಕ್ಷ್ಯಕ್ಕೆ ಒಳಗಾಗಿರುವುದಂತೂ ಸತ್ಯ. ಕರೋನಾ ಸೋಂಕು ಅನೇಕ ಅವಾಂತರಗಳನ್ನು ಸೃಷ್ಟಿಸುವುದರ ಜತೆಗೆ ಆರೋಗ್ಯದ ಅಡಿಗಲ್ಲನ್ನೇ ಬುಡಮೇಲು ಮಾಡಿರುವುದಂತೂ ವಾಸ್ತವ.