Sunday, 15th December 2024

ನಮ್ಮ ಆರೋಗ್ಯ ರಕ್ಷಣೆಗೆ ವರ್ಷಕ್ಕೊಂದು ದಿನ

ಸ್ವಾಸ್ಥ್ಯ ಸಂಪದ

ಡಾ.ಎಸ್.ಪಿ.ಯೋಗಣ್ಣ

yoganna55@gmail.com

ಜಾಗತಿಕ ಮಟ್ಟದಲ್ಲಿ ಆರೋಗ್ಯವನ್ನು ನಿಯಂತ್ರಿಸುವ ‘ವಿಶ್ವ ಆರೋಗ್ಯಸಂಸ್ಥೆ’ ಏಪ್ರಿಲ್ 7, 1948ರಲ್ಲಿ ಸ್ವಿಟ್ಜರ್‌ಲೆಂಡಿನ ಜಿನಿವಾ ದಲ್ಲಿ ಅಸ್ತಿತ್ವಕ್ಕೆ ಬಂತು.

ಅಲ್ಲಿಂದ ಆರೋಗ್ಯ ವಿಜ್ಞಾನದ ಸೃಷ್ಟಿ, ಸಂಶೋಧನೆ, ವಿತರಣೆ ಹಾಗೂ ಆರೋಗ್ಯ ಸಂರಕ್ಷಣೆಗೆ ಸಂಬಂಧಿಸಿದ ಎಲ್ಲ ವಿಚಾರ ಗಳನ್ನು ಪ್ರಾಪಂಚಿಕ ಮಟ್ಟದಲ್ಲಿ ನಿಯಂತ್ರಿಸುವ ಜವಾಬ್ದಾರಿಯನ್ನು ಈ ಸಂಸ್ಥೆ ನಿರ್ವಹಿಸುತ್ತಿದೆ. ಅದು ಅದು ಅಸ್ತಿತ್ವಕ್ಕೆ ಬಂದ ದಿನವನ್ನು ಪ್ರತಿವರ್ಷ ‘ವಿಶ್ವ ಆರೋಗ್ಯ ದಿನ’ವನ್ನಾಗಿ ಆಚರಿಸಲಾಗುತ್ತಿದೆ. ಪ್ರತಿ ವರ್ಷವೂ ಈ ದಿನದಂದು ಆರೋಗ್ಯಕ್ಕೆ ಸಂಬಂಧಿಸಿದ ಘೋಷ ವಾಕ್ಯವೊಂದನ್ನು ಹೊರಡಿಸಿ ಅದರ ಮೂಲಕ ಸಾರ್ವಜನಿಕ ರಲ್ಲಿ ಆರೋಗ್ಯದ ಅರಿವನ್ನು ಮೂಡಿಸುವ ಸಂಪ್ರದಾಯವನ್ನು ಈ ಸಂಸ್ಥೆ 1950ರಿಂದಲಿ ಪಾಳಿಸಿಕೊಂಡು ಬರುತ್ತಿದೆ.

ಕಳೆದ ವರ್ಷದ ಘೋಷ ವಾಕ್ಯ ‘ಸುಂದರ ಆರೋಗ್ಯಕರ ಪ್ರಪಂಚವನ್ನು ನಿರ್ಮಾಣ ಮಾಡುವುದು’ ಮತ್ತು ಎಂಬುದಾಗಿತ್ತು. 2022ರ ಘೋಷ ವಾಕ್ಯ ‘ನಮ್ಮ ಗ್ರಹ, ನಮ್ಮ ಆರೋಗ್ಯ’ಎಂಬುದಾಗಿದೆ. ಈ ಘೋಷಣಾ ವಾಕ್ಯವನ್ನು ಮುಂದಿಟ್ಟುಕೊಂಡು ಆರೋಗ್ಯ ಎಂದರೇನು? ಅದನ್ನು ನಿಯಂತ್ರಿಸುವ ಅಂಶಗಳಾವುವು? ಮತ್ತು ಗ್ರಹಗಳು ಆರೋಗ್ಯದ ಮೇಲೆ ಬೀರುವ ಪರಿಣಾವ ಗಳೇನು? ಗ್ರಹಗಳ ಮಾಲಿನ್ಯದಿಂದುಂಟಾಗುವ ದುಷ್ಪರಿ ಣಾಮಗಳೇನು? ಎಂಬ ಅರಿವನ್ನು ಜನಸಾಮಾನ್ಯರಲ್ಲಿ ಮೂಡಿಸುವುದು ಇದರ ಪ್ರಮುಖ ಉದ್ದೇಶವಾಗಿರುತ್ತದೆ.

ಮನುಷ್ಯ ಸೃಷ್ಟಿಯ ವಿಕಾಸದ ಒಂದು ಹಂತದಲ್ಲಿ ಜನ್ಮವೆತ್ತದವನಾಗಿದ್ದು, ಗ್ರಹಗಳನ್ನು ಒಳಗೊಂಡಂತೆ ಸೃಷ್ಟಿಯ ಎಲ್ಲವು ಗಳೊಡನೆ ಅವನು ಜೋಡಿತನಾಗಿರುವುದರಿಂದ ಅವು ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಸೂರ್ಯ, ಚಂದ್ರ, ಭೂಮಿ, ಮಂಗಳ, ಬುಧ, ಗುರು, ಶುಕ್ರ, ಶನಿ ಇತ್ಯಾದಿ ಎಲ್ಲ ಗ್ರಹಗಳೂ ಮನುಷ್ಯನ ಮೇಲೆ ಪರಿಣಾಮ ಬೀರಬಹು ದಾದರೂ ಭೂಮಿ ಮತ್ತು ಸೂರ್ಯನ ಪ್ರಭಾವಗಳು ಅತಿಮುಖ್ಯ ಮತ್ತು ವೈಜ್ಞಾನಿಕ ಸಾಕ್ಷ್ಯಾಧಾರಗಳಿಂದ  ಸಾಬೀತಾಗಿರು ವಂಥವುಗಳು. ಆದುದರಿಂದ ಇವುಗಳ ಪರಿಣಾಮವನ್ನು ಮಾತ್ರ ವಿಸ್ತತವಾಗಿ ಅರಿಯುವುದು ಅತ್ಯವಶ್ಯಕ.

ಆರೋಗ್ಯ ಎಂದರೇನು?: ಮನುಷ್ಯ ಸೃಷ್ಟಿಯ ಅಭಿವ್ಯಕ್ತ ಜೀವಿಯಾದುದರಿಂದ ಅವನು ಸೃಷ್ಟಿಯ ಎಲ್ಲವುಗಳೊಡನೆ ಪೂರ್ವ ಭಾವಿಯಾಗಿ ಜೋಡಿತನಾಗಿದ್ದಾನೆ. ಆದುದರಿಂದ ಸೃಷ್ಟಿಯ ಎಲ್ಲವುಗಳ ಆರೋಗ್ಯ ಅವನ ಆರೋಗ್ಯಕ್ಕೆ ಅತಿಮುಖ್ಯ. ಆಹಾರ, ಗಾಳಿ, ಬೆಳಕು, ಉಷ್ಣತೆ, ಹವಾಮಾನ, ಸೃಷ್ಟಿಯಲ್ಲಿನ ಶಕ್ತಿಗಳು, ಅತೀತಶಕ್ತಿ ಇವೆಲ್ಲವೂ ಮನುಷ್ಯನ ಆರೋಗ್ಯವನ್ನು ನಿಯಂತ್ರಿ ಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ವಿಶ್ವ ಆರೋಗ್ಯ ಸಂಸ್ಥೆ ಆರೋಗ್ಯವನ್ನು ಹೀಗೆ ವ್ಯಾಖ್ಯಾನ ಮಾಡಿದೆ.

ಆರೋಗ್ಯವೆಂಬುದು ಕೇವಲ ಕಾಯಿಲೆ ಅಥವಾ ವಿಕಲತೆರಹಿತ ಸ್ಥಿತಿಯಲ್ಲ, ಅದು ದೈಹಿಕವಾಗಿ, ಮಾನಸಿಕವಾಗಿ, ಸಾಮಾಜಿಕ ವಾಗಿ ಮತ್ತು ಅಧ್ಯಾತ್ಮಿಕವಾಗಿ ಇರುವ ಸುಃಸ್ಥಿತಿ (ಸಂತೋಷ) ಎಂದಿದೆ. ಅಂದರೆ ಸಂತೋಷಸ್ಥಿತಿಯೇ ಆರೋಗ್ಯ. ಅಸಂತೋಷವೇ ಅನಾರೋಗ್ಯ. ದೇಹದ ಆರೋಗ್ಯ ಜೀವಕೋಶಗಳು ಮತ್ತು ಅಂಗಾಂಗಗಳ ಆರೋಗ್ಯವಾಗಿದ್ದು (ದೈಹಿಕ ಆರೋಗ್ಯ) ವಂಶವಾಹಿ ಗಳು, ಆಹಾರ, ದೇಹದ ತೂಕ, ವ್ಯಾಯಾಮ, ಅಭ್ಯಾಸಗಳು- ದೈಹಿಕ ಆರೋಗ್ಯವನ್ನು ನಿಯಂತ್ರಿಸುತ್ತವೆ.

ಮಾನಸಿಕ ಆರೋಗ್ಯ: ದೇಹದ ಕಾರ್ಯಗಳನ್ನು ಮನಸ್ಸು ನಿಯಂತ್ರಿಸುವುದರಿಂದ ಮನಸ್ಸಿನಲ್ಲಾಗುವ ವ್ಯತ್ಯಾಸಗಳು ದೇಹದ ಆರೋಗ್ಯದ ಮೇಲೂ ಪರಿಣಾಮ ಬೀರುತ್ತವೆಯಾದುದರಿಂದ ಮನಸ್ಸನ್ನು ಆರೋಗ್ಯಕರವಾಗಿಟ್ಟುಕೊಳ್ಳಬೇಕು. ಮೆದುಳಿ ನಲ್ಲಿರುವ ಮನಸ್ಸು ನರವ್ಯವಸ್ಥೆಯ ಮೂಲಕ ಪ್ರತಿಯೊಂದು ಜೀವಕೋಶ ಮತ್ತು ಅಂಗಾಂಗಗಳನ್ನು ನಿಯಂತ್ರಿಸುತ್ತದೆ. ಮನಸ್ಸು ಸಂತೋಷ ಮತ್ತು ಅಸಂತೋಷಗಳ ನಡುವೆ ತೊಳಲಾಡುತ್ತಿರುತ್ತದೆ. ಮಾನಸಿಕ ಒತ್ತಡ ಹೆಚ್ಚಿ ಅಸಂತೋಷ ಉಂಟಾ ದಾಗ ದೇಹದಲ್ಲಿ ಅಡ್ರಿ ನಲಿನ್, ನಾರ್ ಅಡ್ರಿನಲಿನ್, ಕಾರ್ಟಿಕೋ ಸ್ಟೀರಾಯ್ಡ್ ಇತ್ಯಾದಿ ರಾಸಾಯನಿಕಗಳ ಪ್ರಮಾಣ ಹೆಚ್ಚಿ ಅಂಗಾಂಗಗಳು ಜಖಂಗೊಂಡು ಅನಾರೋಗ್ಯ ಉಂಟಾಗುತ್ತದೆ.

ಸಂತೋಷವಾಗಿದ್ದಾಗ ಸೆರಟೋನಿನ್, ಡೋಪೊಮಿನ್, ಎಂಡಾರ್ಫಿನ್‌ಗಳು ಇತ್ಯಾದಿ ರಾಸಾಯನಿಕಗಳು ಅಧಿಕವಾಗಿ ಉತ್ಪತ್ತಿ
ಯಾಗಿ ಆರೋಗ್ಯಕ್ಕೆ ಪೂರಕವಾಗುತ್ತವೆ. ಆದುದರಿಂದ ಮನಸ್ಸನ್ನು ನಿರಂತರವಾಗಿ ಸಂತೋಷಸ್ಥಿತಿಯಲ್ಲಿಟ್ಟುಕೆಳ್ಳುವುದರಿಂದ ಮಾತ್ರ ಮಾನಸಿಕ ಆರೋಗ್ಯ ಲಭಿಸುತ್ತದೆ. ಮನಸ್ಸು ಚಂಚಲವಾಗಿದ್ದು, ವಂಶವಾಹಿಗಳು, ಪರಿಸರ, ನಂಬಿಕೆಗಳು,  ಜವಾಬ್ದಾರಿ ಗಳು, ಆಸೆಗಳು, ನಿದ್ರೆ ಇತ್ಯಾದಿ ಹಲವಾರು ಅಂಶಗಳು ಮನಸ್ಸಿನ ಮೇಲೆ ಪರಿಣಾಮ ಬೀರಿ ಸಕಾರಾತ್ಮಕ ಮತ್ತು ನಕಾರಾತ್ಮಕ ಭಾವಗಳನ್ನುಂಟು ಮಾಡಬಹುದು.

ಸಕಾರಾತ್ಮಕ ಭಾವಗಳಿಂದ ಸಂತೋಷವೂ, ನಕಾರಾತ್ಮಕ ಭಾವಗಳಿಂದ ಅಸಂತೋಷವೂ ಉಂಟಾಗುತ್ತವೆ. ಮನಸ್ಸು ಆಲೋಚನೆಗಳಿಂದ ಅಸ್ತಿತ್ವದಲ್ಲಿದ್ದು, ಸಕಾರಾತ್ಮಕ ಆಲೋಚನೆಗಳಿಂದ ಮಾತ್ರ ಮನಸ್ಸು ಶಾಂತಗೊಳ್ಳುತ್ತದೆ. ನಕಾರಾತ್ಮಕ ಆಲೋ ಚನೆಗಳಿಂದ ಮನಸ್ಸು ಅಶಾಂತಿಗೀಡಾಗುತ್ತದೆ. ಮನಸ್ಸನ್ನು ಅಧ್ಯಾತ್ಮಿಕ ಚಿಂತನೆಗಳಿಂದ ಕೃಷಿ ಮಾಡುವುದರಿಂದ ಮಾನಸಿಕ ಆರೋಗ್ಯವನ್ನು ಗಳಿಕೆಮಾಡಿಕೊಳ್ಳಬಹುದು.

ಸಾಮಾಜಿಕ ಆರೋಗ್ಯ(ವಿಶ್ವ ಆರೋಗ್ಯ): ಮನುಷ್ಯನ ಮೇಲೆ ತಾನು ಬದುಕುವ ಸಾಮಾಜಿಕ ಪರಿಸರ, ಆರೋಗ್ಯ ಪದ್ಧತಿಗಳು, ಜೀವನಶೈಲಿ, ಆಚರಣೆಗಳು, ನಾಗರಿಕತೆ ಪರಿಸರ ಇತ್ಯಾದಿಗಳೆಲ್ಲವೂ ಅವನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ.
ಇದು ಸಾಮಾಜಿಕ ಆರೋಗ್ಯದ ವ್ಯಾಪ್ತಿಗೆ ಬರುತ್ತದೆ. ಇಡೀ ವಿಶ್ವವೇ ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರುವುದರಿಂದ ಇಡೀ ವಿಶ್ವದ ಆರೋಗ್ಯ ಮನುಷ್ಯನ ಆರೋಗ್ಯಕ್ಕೆ ಅತ್ಯವಶ್ಯಕ. ಈ ಹಿನ್ನೆಲೆಯಲ್ಲಿಯೇ ‘ವಸುದೈವ ಕುಟುಂಬಕಂ’ ಇಡೀ
ಸೃಷ್ಟಿಯೇ ಒಂದು ಕುಟುಂಬ ಎಂಬ ವೈಜ್ಞಾನಿಕ ತತ್ವ ಚಾಲ್ತಿಯಲ್ಲಿದೆ. ವಿಶ್ವದ ಯಾವುದಾದರೊಂದು ಮೂಲೆಯಲ್ಲಾಗುವ ಘಟನೆ ಇಡೀ ವಿಶ್ವದ ಆರೋಗ್ಯದ ಮೇಲೆ ಪರಿಣಾಮ ಬೀರುವುದರಿಂದ ಪ್ರತಿಯೊಬ್ಬರೂ ವಿಶ್ವವ್ಯಾಪ್ತಿ ಯೋಚಿಸಿ ಸ್ಥಾನಿಕವಾಗಿ, ಸೂಕ್ತವಾಗಿ ಕಾರ್ಯೋನ್ಮುಖವಾಗುವುದರಿಂದ ಮಾತ್ರ ವಿಶ್ವದ ಆರೋಗ್ಯವನ್ನು ಕಾಪಾಡಬಹುದಾಗಿದೆ.

ಇಲ್ಲದಿದ್ದಲ್ಲಿ ವಿಶ್ವದ ಅನಾರೋಗ್ಯಕ್ಕೆ ನಾಂದಿಯಾಗುತ್ತದೆ. ಅಧ್ಯಾತ್ಮಿಕ ಆರೋಗ್ಯ: ಇಡೀ ಸೃಷ್ಟಿ ವಸ್ತು ಮತ್ತು ಶಕ್ತಿಗಳ ಸಮ್ಮಿಲನ ದಿಂದಾಗಿದ್ದು, ಮಾನವನೂ ವಸ್ತು (ದೇಹ) ಮತ್ತು ಶಕ್ತಿ(ಆತ್ಮ)ಗಳ ಸಮ್ಮಿಲನದಿಂದಾಗಿದ್ದು, ಅವನಲ್ಲಿರುವ ಜೈವಿಕಶಕ್ತಿ (ಆತ್ಮ)ವಿಶ್ವಶಕ್ತಿ ಯೊಡನೆ ಅಂತಿಮವಾಗಿ ಎಲ್ಲವನ್ನೂ ನಿಯಂತ್ರಿಸುವ ಅತೀತಶಕ್ತಿಯೊಡನೆ ಜೋಡಿತವಾಗಿದೆ. ಮನುಷ್ಯ ನಲ್ಲಿರುವ ಅತೀತಶಕ್ತಿಯ ಅಣು ಆತ್ಮವಾಗಿದ್ದು, ಅದು ಅತೀತಶಕ್ತಿಯ ನಿಯಂತ್ರಣದಲ್ಲಿದ್ದು ಮನುಷ್ಯ ಅತೀತಶಕ್ತಿ ಯಿಂದ ನಿಯಂತ್ರಿತನಾಗುತ್ತಾನೆ.

ಆದುದರಿಂದ ಸೃಷ್ಟಿಯಲ್ಲಾಗುವ ಶಕ್ತಿಗಳ ವ್ಯತ್ಯಾಸಗಳು ಸಹ ಮನುಷ್ಯನ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತವೆ. ಮನುಷ್ಯನನ್ನೂ ಒಳಗೊಂಡಂತೆ ಸೃಷ್ಟಿಯಲ್ಲಿ ಜರುಗುವ ಎಲ್ಲ ಕ್ರಿಯೆಗಳು ಪೂರ್ವನಿಗದಿತ ಕಂಪ್ಯೂಟರೀಕೃತ, ಒಂದ ಕ್ಕೊಂದು ಪರಸ್ಪರ ಜೋಡಿತವಾಗಿರುವ ಕ್ರಿಯೆಗಳಾಗಿದ್ದು, ಇವೆಲ್ಲವೂ ಅತೀತಶಕ್ತಿಯ ನಿಯಂತ್ರಣದಲ್ಲಿವೆ. ಈ ಅರಿವನ್ನು ಮೂಡಿಸಿ ಕೊಂಡು ಮನುಷ್ಯ ಸೃಷ್ಟಿಯ ಎಲ್ಲವುಗಳೊಡನೆ ಸಮಗ್ರ ದೃಷ್ಟಿಯಿಂದ ಪೂರಕವಾಗಿ ವರ್ತಿಸಿ, ಪೂರ್ವನಿಗದಿತ ಕ್ರಿಯೆಗಳನ್ನು ಕಾಪಾಡಿಕೊಳ್ಳುವುದರಿಂದ ಮಾತ್ರ ಮನುಷ್ಯ ನಿರಂತರವಾಗಿ ಸಂತೋಷವಾಗಿರಲು ಸಾಧ್ಯ.

ಇದೇ ಅಧ್ಯಾತ್ಮಿಕ ಆರೋಗ್ಯ. ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಆರೋಗ್ಯಗಳನ್ನು ನಿಯಂತ್ರಿಸುವ ಅಂಶಗಳು ಹಲವಾ ರಿದ್ದು, ಅವುಗಳನ್ನು ಅರಿತು ಪರಸ್ಪರ ಜೋಡಿಸಿಕೊಂಡು ಬದುಕುವ ಅಧ್ಯಾತ್ಮಿಕ ಜೀವನಶೈಲಿಯಿಂದ ಮಾತ್ರ ಅಧ್ಯಾತ್ಮಿಕ ಆರೋಗ್ಯವನ್ನು ಗಳಿಸಿಕೊಳ್ಳಬಹುದು.

ಗ್ರಹಗಳ ಪ್ರಭಾವ: ಗ್ರಹಗಳು ಹೊರಹಾಕುವ ವಿವಿಧ ಶಕ್ತಿಗಳು ಮತ್ತು ಅವುಗಳ ಪ್ರಮಾಣಕ್ಕನುಗುಣವಾಗಿ ಮನುಷ್ಯನ ಮನಸ್ಸು ಮತ್ತು ಆತ್ಮಗಳ ಮೇಲೆ ಪರಿಣಾಮಬೀರುವುದರಿಂದ ಗ್ರಹಗಳ ಚಲನೆ ಮತ್ತು ಶಕ್ತಿಗಳಗನುಗುಣವಾಗಿ ಮನುಷ್ಯನ ಆರೋಗ್ಯ ದಲ್ಲೂ ವ್ಯತ್ಯಾಸಗಳಾಗುತ್ತವೆ ಎಂದು ಪೂರ್ವಿಕರು ನಂಬಿದ್ದು, ಈ ಹೊತ್ತಿಗೂ ಆ ನಂಬಿಕೆ ಚಾಲ್ತಿಯಲ್ಲಿದೆ. ಜ್ಯುಪಿಟರ್ ಗ್ರಹದ ಪ್ರಭಾವದಿಂದ ಹಣ, ಅಧಿಕಾರ ಲಭಿಸುತ್ತದೆ, ವೀನಸ್ ಗ್ರಹದ ಪ್ರಭಾವದಿಂದ ಪ್ರೀತಿ, ಲೈಂಗಿಕಾಸಕ್ತಿ ಅಧಿಕವಾಗುತ್ತದೆ, ಹೀಗೆ ಒಂದೊಂದು ಗ್ರಹವು ಮನುಷ್ಯನ ಮೇಲೆ ಒಂದೊಂದು ವಿಭಿನ್ನ ಪರಿಣಾಮಗಳನ್ನು ಬೀರುತ್ತವೆ ಎನ್ನಲಾಗಿದೆ.

ಇದನ್ನು ಪುಷ್ಟೀಕರಿಸಲು ಯಾವುದೇ ವೈಜ್ಞಾನಿಕ ಸಾಕ್ಷ್ಯಾಧಾರಗಳು ಲಭ್ಯವಿಲ್ಲ. ಆದರೂ ಮುಕ್ತ ಮನಸ್ಸಿನಿಂದ ಈ ದಿಕ್ಕಿನಲ್ಲಿ
ಸಂಶೋಧನೆಗಳು ಜರುಗಬೇಕಾಗಿದೆ. ಆದರೆ ಸೂರ್ಯ ಮತ್ತು ಭೂಮಿಗಳ ಪಾತ್ರ ನಿರ್ವಿವಾದ.

ಭೂಮಿ: ಮನುಷ್ಯನ ಬದುಕಿನಲ್ಲಿ ಬಹಳ ಹತ್ತಿರವಾದ, ಅತ್ಯವಶ್ಯಕವಾದ, ಜೀವಿಗಳನ್ನುಳ್ಳ ಗ್ರಹವಿದು. ಸುಮಾರು 13.8 ಬಿಲಿಯನ್ ವರ್ಷಗಳ ಹಿಂದೆ ಭೂಮಿ ಜನ್ಮ ತಾಳಿರಬಹುದೆಂದು ಅಂದಾಜಿಸಲಾಗಿದೆ. ಆಹಾರ, ನೀರು, ಗಾಳಿ, ಬೆಂಕಿ,  ಹವಾಮಾನ, ವಸತಿಗಳೆಲ್ಲವೂ ಭೂಮಿಯಿಂದಲೇ ಲಭ್ಯ, ಭೂಮಿ ನಿರ್ಜೀವ ಜಡವಸ್ತುವಲ್ಲ. ಇದರೊಳಗೆ ಕೋಟ್ಯಂತರ
ಸೂಕ್ಷ್ಮಜೀವಿಗಳಿದ್ದು, ಅವುಗಳಿಂದ ನಿರಂತರವಾಗಿ ಜೈವಿಕ ಕ್ರಿಯೆ ನಡೆಯುವ ಜೈವಿಕ ಕಾರ್ಖಾನೆಯಿದು.

ಈ ಜೈವಿಕ ಕ್ರಿಯೆಗಳಿಂದಲೇ ಆಹಾರ ಉತ್ಪತ್ತಿಯಾಗುವುದು ಮತ್ತು ಸಸ್ಯಸಂಪತ್ತು ಬೆಳೆಯುವುದು. ತನ್ನ ಅಂತರಾಳದಲ್ಲಿ ಮತ್ತು ಮೈಮೇಲೆ ಗಂಗೆಯನ್ನು ತುಂಬಿಕೊಂಡಿರುವ ಜಲಗರ್ಭವಿದು. ಭೂಮಿಯ ಮೇಲಿನ 1ಸೆಂ.ಮೀ. ಮಣ್ಣು ಅತ್ಯಂತ ಫಲವತ್ತಾ
ಗಿದ್ದು, ಜೈವಿಕ ಕ್ರಿಯೆಗಳಿಂದ ಇದು ಉತ್ಪತ್ತಿಯಾಗಲು ಸುಮಾರು 1ಸಾವಿರ ವರ್ಷಗಳೇ ಬೇಕಾಗುತ್ತದೆ. ಮಣ್ಣಿನಲ್ಲಿ ಸಾಮಾನ್ಯ ವಾಗಿ ಕಬ್ಬಿಣ, ಆಮ್ಲಜನಕ ಮತ್ತು ಸಿಲಿಕಾನ್‌ಗಳಿವೆ. ಮನುಷ್ಯನ ಆರೋಗ್ಯಕ್ಕೆ ಭೂಮಿಯ ಸಹಜಸ್ಥಿತಿ ಅತ್ಯವಶ್ಯಕ.

ಭೂಮಾಲಿನ್ಯ: ಭೂಮಿಯ ಮಾಲಿನ್ಯ ಭೂಮಿಯೊಳಗಿನ ಜೈವಿಕ ಕ್ರಿಯೆಗಳನ್ನು ನಾಶಮಾಡಿ ಆಹಾರೋತ್ಪತ್ತಿಗೆ ಮತ್ತು ಸಸ್ಯಗಳ ಬೆಳವಣಿಗೆಗೆ ಧಕ್ಕೆಯುಂಟು ಮಾಡುತ್ತಿದೆ. ವಾಯುಮಾಲಿನ್ಯ, ಸುಡುವಿಕೆ, ಕ್ರಿಮಿಕೀಟಗಳ ಬಳಕೆ, ಧೂಳು, ಕೈಗಾರಿಕಾ ಉತ್ಪನ್ನಗಳು, ಪೆಟ್ರೋಲ್ ಸುಡುವಿಕೆ, ತ್ಯಾಜ್ಯವಸ್ತುಗಳ ಸುಡುವಿಕೆ, ರಾಸಾಯನಿಕ ಗೊಬ್ಬರಗಳ ಬಳಕೆ, ರಾಸಾಯನಿಕ ವಸ್ತು ಗಳಿಂದ ಶುಚಿಗೊಳಿಸುವಿಕೆ, ಕಟ್ಟಡಗಳ ನಿರ್ಮಾಣ ಮತ್ತು ನಾಶ, ಸಾರಿಗೆ ವ್ಯವಸ್ಥೆ, ಸೂಕ್ಷ್ಮಜೀವಿಗಳನ್ನು ನಾಶ ಮಾಡುವಿಕೆ, ತ್ಯಾಜ್ಯವ ವಸ್ತುಗಳ ಕೊಳೆಯುವಿಕೆ ಇವು ಭೂಮಾಲಿನ್ಯಕ್ಕೆ ಪ್ರಮುಖ ಕಾರಣಗಳು.

ಭೂಮಾಲಿನ್ಯವನ್ನು ತಡೆಗಟ್ಟದಿದ್ದಲ್ಲಿ ಆಹಾರೋತ್ಪತ್ತಿಗೆ ಅತೀವವಾಗಿ ಧಕ್ಕೆಯುಂಟಾಗಿ ಆಹಾರವೇ ಲಭಿಸದಂತಾಗುವುದು.
ಸಸ್ಯಗಳು ಕಡಿಮೆಯಾಗುವುದರಿಂದ ಆಮ್ಲಜನಕದ ಕೊರತೆಯುಂಟಾಗಿ ಕಾರ್ಬನ್ ಡೈಆಕ್ಸೈಡ್ ಪ್ರಮಾಣ ಅಧಿಕವಾಗಿ ಪರಿಸರದ ತಾಪಮಾನ ಅಧಿಕವಾಗಿ ಸೃಷ್ಟಿಗೆ ಕಂಟಕಪ್ರಾಯವಾಗುತ್ತದೆ. ಆದುದರಿಂದ ಭೂಮಾಲಿನ್ಯವನ್ನು ತಡೆಗಟ್ಟುವುದು
ಅತ್ಯವಶ್ಯಕ. ವಿಷವಸ್ತುಗಳನ್ನು ಬಳಸದೇ ಇರುವುದು, ತ್ಯಾಜ್ಯಗಳನ್ನು ಪುನರ್ಬಳಕೆ ಮಾಡುವುದು, ಕಸವನ್ನು ಉತ್ಪಾದಿಸದೇ ಇರುವುದು, ಕಾಡುಗಳನ್ನು ಬೆಳೆಸುವುದು, ಯಥೇಚ್ಛವಾಗಿ ಸಸ್ಯಗಳನ್ನು ನೆಡುವುದು ಇವುಗಳಿಂದ ಭೂಮಾಲಿನ್ಯವನ್ನು
ತಡೆಗಟ್ಟಬಹುದು.

ವಾಯುಮಾಲಿನ್ಯ: ವಾಯುಮಾಲಿನ್ಯದಿಂದ ಭೂಮಾಲಿನ್ಯವೂ ಸಹ ಉಂಟಾಗುತ್ತದೆ. ಧೂಳು, ತ್ಯಾಜ್ಯಗಳು, ಕೈಗಾರಿಕೆಗಳ ತ್ಯಾಜ್ಯ, ಕೊಳೆಯುವಿಕೆ, ಪೆಟ್ರೋಲಿಯಂ ಸುಡುವಿಕೆ ಮತ್ತು ಭೂಮಾಲಿನ್ಯವನ್ನುಂಟುಮಾಡುವ ಎಲ್ಲ ಅಂಶಗಳೂ ವಾಯು ಮಾಲಿನ್ಯವನ್ನು ಉಂಟುಮಾಡುತ್ತವೆ.

ಸೂರ್ಯ: ಸೂರ್ಯನಿಂದ ಬರುವ ಬೆಳಕು ಮತ್ತು ಉಷ್ಣತೆ ಭೂಮಂಡಲದ ಜೈವಿಕ ಜಗತ್ತಿಗೆ ಅತ್ಯವಶ್ಯಕ. ಭೂ ಮತ್ತು ವಾಯು ಮಾಲಿನ್ಯಗಳಿಂದ ಇವುಗಳ ಪರಿಣಾಮಕ್ಕೂ ಅಡಚಣೆಯುಂಟಾಗುತ್ತವೆ. ಸೂರ್ಯ ನ ಉಷ್ಣತೆ ಭೂಮಿಯ ಮೇಲೆ ಬಿದ್ದ ನಂತರ ಕೆಲವು ಪ್ರಮಾಣದ ಉಷ್ಣತೆ ಪುನಃ ಹಿಮ್ಮುಖನಾಗಿ ಸೂರ್ಯ ನನ್ನು ತಲುಪುವುದರಿಂದ ಭೂಮಿಯ ತಾಪ ಅಗತ್ಯ ಪ್ರಮಾಣದಲ್ಲಿ ಮಾತ್ರ ಇರುತ್ತದೆ.

ವಾಯುಮಾಲಿನ್ಯದಿಂದ ಪರಿಸರದಲ್ಲಿ ಕಾರ್ಬನ್ ಮಾನಾಕ್ಸೈಡ್, ಕಾರ್ಬನ್ ಡೈ ಆಕ್ಸೈಡ್, ನೈಟ್ರಸ್ ಆಕ್ಸೈಡ್, ಸಲರ್ ಡೈ ಆಕ್ಸೈಡ್ ಇತ್ಯಾದಿ ರಾಸಾಯನಿಕ ಅಂಶಗಳ ಪ್ರಮಾಣ ಹೆಚ್ಚಾಗಿ ವಾಯುಮಂಡಲದ ತಾಪಮಾನವೂ ಅಧಿಕವಾಗಿ ಭೂಮಿ ಸುಡುವಿಕೆಗೆ ಒಳಗಾಗುತ್ತದೆ. ಇದು ಹವಾಮಾನ ಮತ್ತು ಋತುಮಾನಗಳ ಏರುಪೇರಿಗೂ ಕಾರಣವಾಗುತ್ತಿದೆ. ಸೂರ್ಯನ ವಿಷಮಕ್ತ ವಯಲೆಟ್ ಕಿರಣಗಳನ್ನು ಭೂಮಿಗೆ ಬಾರದಂತೆ ತಡೆಯುವ ಓಜೋನ್ ಪದರ ನಾಶವಾಗಿ, ವಿಷಮಕ್ತ ಕಿರಣಗಳು ಭೂಮಿಯನ್ನು ತಲುಪುತ್ತಿದ್ದು, ಭೂಮಿ ಮತ್ತು ಮನುಷ್ಯನ ಮೇಲೆ ಗಂಭೀರ ಸ್ವರೂಪದ ದುಷ್ಪರಿಣಾಮಗಳುಂಟಾಗುತ್ತಿವೆ.

ಅಧಿಕವಾಗುತ್ತಿರುವ ಕ್ಯಾನ್ಸರ್, ಹೃದಯಾಘಾತ, ಅಸ್ತಮಾ, ಸಕ್ಕರೆಕಾಯಿಲೆ, ಸ್ವನಿರೋಧಕತ್ವದ ಕಾಯಿಲೆಗಳಿಗೆ ಪರಿಸರ ಮಾಲಿನ್ಯವೇ ಕಾರಣ ಎಂಬುದು ದೃಢಪಟ್ಟಿದೆ. ಸೃಷ್ಟಿಯನ್ನು ರಕ್ಷಿಸಿ ಪೋಷಿಸುವ ಜವಾಬ್ದಾರಿಹೊತ್ತ ಮನುಷ್ಯ ಈ ವೈಜ್ಞಾನಿಕ ಅಂಶಗಳನ್ನು ಅರಿಯದೆ ಅಥವಾ ಅರಿತೂ ಭೌತಿಕ ಸಂಪತ್ತು ಗಳಿಕೆಗಾಗಿ ಸೃಷ್ಟಿಯ ರಚನೆಯನ್ನೇ ಏರುಪೇರು ಗೊಳಿಸುತ್ತಿದ್ದಾನೆ. ಹೆಚ್ಚುತ್ತಿರುವ ಜನಸಂಖ್ಯೆಯೂ ಪೂರ್ವನಿಗದಿತ ಜೀವಿ ಮತ್ತು ಸೃಷ್ಟಿಯ ಇನ್ನಿತರವುಗಳ ನಡುವಿನ ಪೂರ್ವನಿಗದಿತ ಅನುಪಾತ ವನ್ನು ಅಸ್ತವ್ಯಸ್ತಗೊಳಿಸಿ ಸೃಷ್ಟಿಯ ಉಳಿವಿಗೆ ಕಂಟಕಪ್ರಾಯವಾಗಿದೆ.

ದೇಶದ ಅಭಿವೃದ್ಧಿಯನ್ನು ಭೌತಿಕ ಬೆಳವಣಿಗೆಯನ್ನಾಧರಿಸಿ(ಜಿಡಿಪಿ) ನಿರ್ಧರಿಸುವ ಬದಲು ಜನಸಮುದಾಯದಲ್ಲಿರುವ ಸಂತೋಷದ ಪ್ರಮಾಣವನ್ನು ಮಾನದಂಡವನ್ನಾಗಿರಿಸಿಕೊಂಡು ದೇಶದ ಅಭಿವೃದ್ಧಿಯನ್ನು ಅಳೆಯುವ ಪದ್ಧತಿಯನ್ನು
ಸಂವಿಧಾನದಲ್ಲಿ ಅಳವಡಿಸಿ ಅನುಷ್ಠಾನಗೊಳಿಸುವುದರಿಂದ ಮಾತ್ರ ಈ ಎಲ್ಲ ಸಮಸ್ಯೆಗಳಿಗೂ ಉತ್ತರವನ್ನು ಕಂಡುಕೊಳ್ಳ ಬಹುದಾಗಿದೆ. ಭೂತಾನ್ ದೇಶ ಈಗಾಗಲೆ ಇದನ್ನು ಅನುಷ್ಠಾನಗೊಳಿಸಿದ್ದು, ಅಲ್ಲಿ ಶೇ.90ರಷ್ಟು ಜನ ಸಂತೋಷ ವಾಗಿರುವು ದನ್ನು ಕಾಣಬಹುದಾಗಿದೆ. ಇದು ನಮಗೂ ಅನುಕರಣೆಯಾಗಲಿ ಎಂದು ಹಾರೈಸೋಣ.