Thursday, 12th December 2024

ಭಾರದ ಲೋಹಗಳು ಆರೋಗ್ಯಕ್ಕೆ ತೊಂದರೆಯೇ ?

ವೈದ್ಯ ವೈವಿಧ್ಯ

ಡಾ.ಎಚ್.ಎಸ್.ಮೋಹನ್‌

ಇತ್ತೀಚೆಗೆ ಆಂಧ್ರಪ್ರದೇಶದ ಎಲ್ಲೂರು ಭಾಗದಲ್ಲಿ 500ಕ್ಕೂ ಹೆಚ್ಚು ಜನರು ಒಮ್ಮೆಲೇ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿ  ಒಬ್ಬ ವ್ಯಕ್ತಿ ಮರಣ ಹೊಂದಿದ ಬಗ್ಗೆೆ ನೀವು ಪತ್ರಿಕೆಗಳಲ್ಲಿ ಓದಿರಬಹುದು.

ಈ ಜನರಲ್ಲಿ ಕಾಣಿಸಿಕೊಂಡ ಲಕ್ಷಣಗಳೆಂದರೆ – ನಡುಕ ಅಥವಾ ಕಂಪನ, ಕಣ್ಣುಗಳಲ್ಲಿ ವಿಪರೀತ ಉರಿ, ಒಮ್ಮೆಲೇ ಎಚ್ಚರ ತಪ್ಪು ವುದು, ಬಾಯಿಯಲ್ಲಿ ನೊರೆ ಬರುವುದು, ತಲೆ ನೋವು, ತಲೆ ಸುತ್ತುವುದು, ವಾಂತಿ ಬಂದ ಅನುಭವ, ಮೈ ಕೈಗಳಲ್ಲಿ ಜ್ವರ ಬಂದವ ರಂತೆ ನಡುಕ ಬರುವುದು ಇತ್ಯಾದಿ. ಇಂತಹ ಅಪರೂಪದ ಲಕ್ಷಣ ಗಳು ಕಾಣಿಸಿಕೊಂಡ ನಂತರ ದೆಹಲಿಯ ಪ್ರತಿಷ್ಠಿತ ಆಸ್ಪತ್ರೆ ಏಮ್ಸ್ನ ವೈದ್ಯರ ತಂಡ ಅಲ್ಲಿಗೆ ಭೇಟಿ ಕೊಟ್ಟು ರೋಗಿಗಳನ್ನು ಪರೀಕ್ಷಿಸಿ ಕಾರಣ ಕಂಡು ಹಿಡಿಯಲು ಪ್ರಯತ್ನಿಸಿದರು.

ಆರಂಭದ ಪರೀಕ್ಷೆಯಲ್ಲಿ ಸೀಸ ಮತ್ತು ನಿಕಲ್‌ನಂಥ ಭಾರದ ಲೋಹದ ಅಂಶಗಳನ್ನು ರೋಗಿಗಳ ರಕ್ತದಲ್ಲಿ ಇರುವುದಾಗಿ ಕಂಡುಕೊಂಡಿದ್ದಾರೆ. ಈ ರೀತಿಯ ಭಾರದ ಲೋಹ ಗಳು ರೋಗಿಗಳ ದೇಹವನ್ನು ಯಾವುದರ ಮೂಲಕ ಪ್ರವೇಶ ಮಾಡಿವೆ ಎಂಬುದರ ಬಗ್ಗೆ ಈಗ ಪರೀಕ್ಷೆಗಳು ನಡೆಯುತ್ತಿವೆ. ನೀರು ಮತ್ತು ಹಾಲಿನ ಪರೀಕ್ಷೆ ಸದ್ಯ ನಡೆದಿದ್ದು ಅವುಗಳಲ್ಲಿ ಈ ಭಾರದ
ಲೋಹದ ಅಂಶಗಳು ಕಂಡುಬಂದಿಲ್ಲ. ಈಗ ಅವರು ತರಕಾರಿ ಮತ್ತು ಸಿಹಿ ತಿಂಡಿಗಳ ಪರೀಕ್ಷೆ ನಡೆಸುತ್ತಿದ್ದಾರೆ.

ಈ ಹಂತದಲ್ಲಿ ನಾವು ಭಾರದ ಲೋಹಗಳ ಬಗ್ಗೆ ಒಂದು ನೋಟ ಹರಿಸೋಣ. ಸಾಮಾನ್ಯವಾಗಿ ಭಾರದ ಲೋಹಗಳು ಎಂದರೆ: ಕ್ಯಾಡ್ಮಿಯಂ, ಪಾದರಸ ಮತ್ತು ಸೀಸ. ಈ ಗುಂಪಿನ ಇನ್ನಿತರ ಲೋಹಗಳೆಂದರೆ – ಮ್ಯಾಂಗನೀಸ್, ಕ್ರೋಮಿಯಂ, ಕೋಬಾಲ್ಟ್, ನಿಕಲ್, ತಾಮ್ರ, ಸತು, ಬೆಳ್ಳಿ, ಆಂಟಿಮೊನಿ ಮತ್ತು ಥ್ಯಾಲಿಯಂ.

ಈ ಭಾರದ ಲೋಹಗಳು ಸಾಮಾನ್ಯವಾಗಿ ಭೂಮಿಯಲ್ಲಿ ಇರುತ್ತವೆ. ಮಾನವನ ಹಲವಾರು ಕೃತ್ಯಗಳಿಂದ ಅವು ಒಂದು ಕಡೆಗೆ ಸೇರಿಕೊಂಡು ಹೆಚ್ಚಿನ ಪ್ರಮಾಣದಲ್ಲಿ ಒಂದೇ ಜಾಗದಲ್ಲಿ ಹರಳುಗಟ್ಟಿದ ಹಾಗೆ ಇರುತ್ತವೆ. ನಂತರ ಅವು ವಿವಿಧ ಕಾರಣಗಳಿಂದ ಸಸ್ಯಗಳು, ಪ್ರಾಣಿಗಳು ಹಾಗೂ ಮಾನವ ದೇಹಗಳ ಒಳಗೆ ಪ್ರವೇಶ ಪಡೆಯುತ್ತವೆ. ಹಾಗೆ ಜೀವಿಗಳ ಒಳಗೆ ಪ್ರವೇಶ ಮಾಡುವ ಮಾರ್ಗಗಳೆಂದರೆ ಉಸಿರಾಟದ ಮೂಲಕ, ಆಹಾರದ ಮೂಲಕ ಅಥವಾ ವಿವಿಧ ವಸ್ತುಗಳನ್ನು ಬಳಸುವಾಗ.

ಹಾಗೆ ಜೀವಿಗಳ ಒಳ ಸೇರಿದ ಇವು ಜೀವಿಯ ಒಳಗಿನ ಹಲವಾರು ಸಾಮಾನ್ಯ ಕ್ರಿಯೆಗಳನ್ನು ವ್ಯತ್ಯಯಗೊಳಿಸುತ್ತವೆ. ಆರ್ಸೆನಿಕ್, ಪಾದರಸ ಮತ್ತು ಸೀಸಗಳ ಕೆಟ್ಟ ಪರಿಣಾಮಗಳ ಬಗ್ಗೆ ಮಾನವರಿಗೆ ಬಹಳ ಹಿಂದಿನಿಂದಲೂ ಅರಿವಿತ್ತು.

ಇವುಗಳ ಮೂಲಗಳು: ಈಗಾಗಲೇ ತಿಳಿಸಿದಂತೆ ಭೂಮಿಯಲ್ಲಿ ಕಂಡುಬರುವ ಈ ಭಾರದ ಲೋಹಗಳು ವ್ಯವಸಾಯ ಮಾಡು ವಾಗ ಪಲ್ಲಟಹೊಂದಿ ಮಾನವ ದೇಹ ಪ್ರವೇಶಿಸಬಹುದು. ಇಲ್ಲವೇ ಗಣಿಗಾರಿಕೆ, ಕೈಗಾರಿಕೋತ್ಪನ್ನಗಳ ಬೇಡದ ಅಂಶಗಳಲ್ಲಿ (Wastes) ಕಂಡು ಬರಬಹುದು. ಹಾಗೆಯೇ ವಾಹನಗಳ ಹೊಗೆಯಲ್ಲೂ ಕಂಡುಬರುತ್ತವೆ. ವಾಹನಗಳಲ್ಲಿ ಉಪಯೋಗಿಸುವ ಬ್ಯಾಟರಿಗಳಲ್ಲಿ ಯೂ ಇರುತ್ತವೆ.

ಅಲ್ಲದೆ ಗೊಬ್ಬರ, ಬಣ್ಣ, ಸಮುದ್ರದಲ್ಲಿ ತೇಲಾಡುವ ಕೆಲವು ಪ್ಲಾಸ್ಟಿಕ್ ವಸ್ತುಗಳಲ್ಲಿಯೂ ಕಂಡುಬರುತ್ತವೆ. ಆರ್ಸೆನಿಕ್, ಕ್ಯಾಡ್ಮಿಯಂ ಮತ್ತು ಸೀಸದ ಅಂಶಗಳು ಕೆಲವೊಮ್ಮೆ ಮಕ್ಕಳ ಆಟಿಕೆಯಲ್ಲಿಯೂ ಇರುತ್ತವೆ. ಕೆಲವು ಕ್ರಿಮಿನಾಶಕಗಳು ಅದರಲ್ಲಿಯೂ ಇಲಿ ಪಾಷಾಣಗಳಲ್ಲಿ ಹೆಚ್ಚಿನ ಪ್ರಮಾಣದ ಆರ್ಸೆನಿಕ್ ಇರುತ್ತದೆ.

ಈಗಾಗಲೇ ತಿಳಿಸಿದಂತೆ ಈ ಭಾರದ ಲೋಹಗಳು ಸಸ್ಯ, ಪ್ರಾಣಿ ಮತ್ತು ಮಾನವ ದೇಹವನ್ನು ಗಾಳಿಯಿಂದ, ಆಹಾರದ ಮೂಲಕ ಹಾಗೂ ವಿವಿಧ ವಸ್ತುಗಳ ಮೂಲಕ ಪ್ರವೇಶಿಸುತ್ತವೆ. ವಾಹನಗಳ ಹೊಗೆಯಿಂದ ಹಲವು ಲೋಹಗಳು ಅದರಲ್ಲಿಯೂ ಆರ್ಸೆನಿಕ್, ಕ್ಯಾಡ್ಮಿಯಂ, ಕೋಬಾಲ್ಟ್, ನಿಕಲ್, ಸೀಸ, ಆಂಟಿಮೊನಿ, ವೆನಾಡಿಯಂ, ಸತು, ಪ್ಲಾಟಿನಂ, ಪೆಲ್ಲಾಡಿಯಂ ಮತ್ತು ರೋಡಿಯಂ
ಗಳು ಮಾನವ ದೇಹ ಪ್ರವೇಶಿಸಬಹುದು. ನೀರಿನ ಮೂಲಗಳು ಅಂದರೆ ಭೂಮಿಯ ಒಳಗಿನ ನೀರು, ಸರೋವರ ಗಳು, ತೊರೆಗಳು, ನದಿಗಳು, ಕೈಗಾರಿಕೆಗಳಲ್ಲಿ ಬಳಸಿ ಹೊರಬರುವ ವೇಸ್ಟ್‌ ಪದಾರ್ಥಗಳಿಂದ ಕಲುಷಿತಗೊಳ್ಳಬಹುದು.

ಭೂಮಿಯಲ್ಲಿನ ಈ ತರಹದ ಲೋಹಗಳು ಸಸ್ಯಗಳ ಮತ್ತು ಪ್ರಾಣಿಗಳ ಒಳ ಪ್ರವೇಶಿಸಿ ನಂತರ ಮನುಷ್ಯ ಇವುಗಳನ್ನು ಆಹಾರ ವಾಗಿ ಸೇವಿಸಿದಾಗ ಆತನ ದೇಹವನ್ನು ಪ್ರವೇಶಿಸುತ್ತವೆ. ದೇಹದಲ್ಲಿನ ಜೀವಕೋಶಗಳ ಎಂಜೈಮ್‌ಗಳು, ಪ್ರೋಟೀನ್‌ಗಳು ಹಾಗೂ ನ್ಯೂಕ್ಲಿಕ್ ಆಮ್ಲಗಳಿಗೆ ಸೇರಿಕೊಂಡು ದೇಹದ ಎಂದಿನ ಕ್ರಿಯೆಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಬೇರೆ ಬೇರೆ ಲೋಹಗಳು ಬೇರೆ ಬೇರೆ ಪರಿಣಾಮ ಹೊಂದಿವೆ. ಹಾಗೆಯೇ ಯಾವ ಪ್ರಮಾಣದಲ್ಲಿ ದೇಹದೊಳಗೆ ಸೇರಿಕೊಂಡಿವೆ ಎಂಬುದೂ ಮುಖ್ಯ.

ದೀರ್ಘಕಾಲೀನ ಪರಿಣಾಮಗಳೆಂದರೆ – ವಿವಿಧ ರೀತಿಯ ಕ್ಯಾನ್ಸರ್ ಉಂಟು ಮಾಡಬಹುದು, ಕೇಂದ್ರೀಯ ಮತ್ತು ಹೊರಭಾಗದ ನರವ್ಯೂಹಗಳ ಮೇಲೆ ಕೆಟ್ಟ ಪರಿಣಾಮ ಬೀರ ಬಹುದು, ರಕ್ತನಾಳಗಳ ಮೇಲೆ ಬೇಡದ ಪರಿಣಾಮ ಬೀರಬಹುದು. ಕೆಲವು
ಮುಖ್ಯ ಲೋಹಗಳ ಕೆಟ್ಟ ಪರಿಣಾಮಗಳನ್ನು ಗಮನಿಸೋಣ.

ಕ್ಯಾಡ್ಮಿಯಂ: ತಕ್ಷಣದ ಪರಿಣಾಮಗಳು – ಶ್ವಾಸಕೋಶಗಳಲ್ಲಿ ಸೋಂಕು (Pneumonitis).

ದೀರ್ಘಕಾಲೀನ ಪರಿಣಾಮಗಳು: ಶ್ವಾಸಕೋಶದ ಕ್ಯಾನ್ಸರ್, ಮೂಳೆಗಳು ಮೆದುವಾಗುವ ಕಾಯಿಲೆ Osteomalacia, ಕಿಡ್ನಿ ಯಲ್ಲಿ ಹೆಚ್ಚಿನ ಪ್ರೋಟೀನ್ ಸ್ರವಿಸಿ ಕಿಡ್ನಿಗೆ ಅಪಾಯ ತರುವುದು.

ಪಾದರಸ: ತಕ್ಷಣದ ಪರಿಣಾಮಗಳು – ವಾಂತಿ, ಭೇದಿ, ಜ್ವರ. ದೀರ್ಘಕಾಲೀನ ಪರಿಣಾಮಗಳು – ಬಾಯಿ ಮತ್ತು ವಸಡಿನಲ್ಲಿ ಸೋಂಕು (Stomatitis), ಕಿಡ್ನಿಯ ತೊಂದರೆ ನೆಫ್ರಾಟಿಕ್ ಸಿಂಡ್ರೋಮ್, ನರಗಳಿಗೆ ತೊಂದರೆ, ಬಾಯಿಯಲ್ಲಿ ಲೋಹದ ರುಚಿ, ಕೈ ಮತ್ತು ಕಾಲುಗಳು ತಿಳಿಗೆಂಪು ಬಣ್ಣಕ್ಕೆ ತಿರುಗುವುದು, ಕೈ ಕಾಲುಗಳಲ್ಲಿ ನಡುಕ ಕಂಡು ಬರುವುದು.

ಸೀಸ: ತಕ್ಷಣದ ಪರಿಣಾಮಗಳು – ವಾಂತಿ ಬರುವಂತೆ ಆಗುವುದು, ವಾಂತಿ ಬರುವುದು, ಮೆದುಳಿನಲ್ಲಿ ತೊಂದರೆ (Encephalopathy). ದೀರ್ಘಕಾಲೀನ ಪರಿಣಾಮಗಳು – ರಕ್ತದಲ್ಲಿ ಕಬ್ಬಿಣದ ಅಂಶ ಕಡಿಮೆ ಆಗುವ ಕಾಯಿಲೆ ಅನೀಮಿಯಾ,
ಎನ್ಸಫಲೋಪತಿ, ಕೈ ಕಾಲುಗಳಲ್ಲಿ ನರಗಳ ತೊಂದರೆ, ಕಿಡ್ನಿಯ ತೊಂದರೆ ನೆಫ್ರೋಪತಿ.

ಕ್ರೋಮಿಯಂ: ತಕ್ಷಣದ ಪರಿಣಾಮಗಳು – ಹೊಟ್ಟೆ ಮತ್ತು ಕರುಳಿನ ಭಾಗದಲ್ಲಿ ರಕ್ತಸ್ರಾವ (Gastrointe stinal bleeding), ಕೆಂಪು ರಕ್ತ ಕಣಗಳು ನಾಶವಾಗುವುದು (Hemolysis), ಒಮ್ಮೆಲೇ ಕಿಡ್ನಿ ಫೇಲ್ ಆಗುವುದು (Acute Renal failure). ದೀರ್ಘಕಾಲೀನ
ಪರಿಣಾಮಗಳು – ಶ್ವಾಸಕೋಶದ ಸ್ಕಾರಿಂಗ್ (Pulmo nary fibrosis), ಶ್ವಾಸಕೋಶದ ಕ್ಯಾನ್ಸರ್.

ಆರ್ಸೆನಿಕ್: ತಕ್ಷಣದ ಪರಿಣಾಮಗಳು – ವಾಂತಿ ಬರುವಂತೆ ಆಗುವುದು, ವಾಂತಿ ಬರುವುದು, ಭೇದಿ, ಮೆದುಳಿನ ಮೇಲೆ ಪರಿಣಾಮ – Encephalopathy, ದೇಹದ ವಿವಿಧ ಅಂಗಾಗಗಳ ಮೇಲೆ ಕೆಟ್ಟ ಪರಿಣಾಮ, ಹೃದಯದ ಬಡಿತದಲ್ಲಿ ಏರುಪೇರು (Arrhythmias),
ನರಗಳಲ್ಲಿ ಅತೀವ ನೋವು ಕಾಣಿಸಿಕೊಳ್ಳುವುದು (Painful Neuropathy).

ದೀರ್ಘಕಾಲೀನ ಪರಿಣಾಮಗಳು – ಡಯಾಬಿಟಿಸ್ ಕಾಯಿಲೆ, ಚರ್ಮದಲ್ಲಿನ ಪಿಗ್‌ಮೆಂಟ್‌ಗಳಲ್ಲಿ ಬದಲಾವಣೆ ಕಂಡು ಬಂದು ಚರ್ಮದ ಬಣ್ಣದಲ್ಲಿ ವ್ಯತ್ಯಾಸವಾಗುವುದು, ಕ್ಯಾನ್ಸರ್ ಕಾಯಿಲೆ.

ಈ ಲೋಹಗಳ ಬಗೆಗಿನ ಇತಿಹಾಸ: ಆರ್ಸೆನಿಕ್, ಪಾದರಸ ಮತ್ತು ಸೀಸದ ಕೆಟ್ಟ ಪರಿಣಾಮಗಳ ಬಗ್ಗೆ ಮಾನವನಿಗೆ ಬಹಳ ಕಾಲದಿಂದಲೂ ಗೊತ್ತಿತ್ತು. ಆದರೆ ಅವುಗಳ ಸರಿಯಾದ ಅಧ್ಯಯನ 1868ರ ಹೊತ್ತಿಗೆ ಆರಂಭವಾಯಿತು. ಆಗ ವ್ಯಾಂಕ್ಲಿನ್ ಮತ್ತು  ಚಾಪ್ ಮನ್ ಎಂಬ ವಿಜ್ಞಾನಿಗಳು ನೀರಿನಲ್ಲಿನ ಭಾರದ ಲೋಹಗಳಾದ ಆರ್ಸೆನಿಕ್, ಸೀಸ, ತಾಮ್ರ, ಸತು, ಕಬ್ಬಿಣ, ಮ್ಯಾಂಗನೀಸ್
ಗಳ ಕೆಟ್ಟ ಪರಿಣಾಮಗಳ ಬಗ್ಗೆ ಮೊದಲ ಬಾರಿಗೆ ತೋರಿಸಿದರು. 1884ರಲ್ಲಿ ಬ್ಲೇಕ್ ಎಂಬ ಮತ್ತೊಬ್ಬ ವಿಜ್ಞಾನಿ ಈ ಲೋಹಗಳ ಅಣುಗಳ ಭಾರ ಮತ್ತು ಕೆಟ್ಟ ಪರಿಣಾಮಗಳ ಬಗ್ಗೆ ಮೊಟ್ಟ ಮೊದಲ ಬಾರಿಗೆ ತಿಳಿಸಿದ.

ಆರ್ಸೆನಿಕ್: ಹಲವು ಗಣಿಗಳಲ್ಲಿ ಗುಲಾಮರನ್ನು ಈ ಕೆಲಸಕ್ಕೆ ನೇಮಿಸಿಕೊಳ್ಳುತ್ತಿದ್ದರು. ಅವರಲ್ಲಿ ಹೆಚ್ಚಿನವರು ಈ ಲೋಹಗಳ ಕೆಟ್ಟ ಪರಿಣಾಮಗಳಿಂದ ಮರಣ ಹೊಂದುತ್ತಿದ್ದರು. 1900ರಲ್ಲಿ ಇಂಗ್ಲೆಂಡಿನ ಮ್ಯಾಂಚೆಸ್ಟರ್‌ನಲ್ಲಿ ಆರ್ಸೆನಿಕ್‌ನಿಂದ ಕಲುಷಿತ ವಾದ ಬಿಯರ್ ಪಾನೀಯ ಸೇವಿಸಿದ 6000 ಜನರಲ್ಲಿ ಕೆಟ್ಟ ಪರಿಣಾಮ ಕಂಡುಬಂದು ಅವರಲ್ಲಿ 70 ಜನರು ಮರಣ ಹೊಂದಿ ದರು. 1953-56ರಲ್ಲಿ ಇಟಲಿಯಲ್ಲಿನ ಅಮೆರಿಕದ ರಾಯಭಾರಿ ಕ್ಲಾರ್ ಲ್ಯೂಸ್ ಎಂಬ ಮಹಿಳೆ ಇದರ ಕೆಟ್ಟ ಪರಿಣಾಮದಿಂದ ಮರಣ ಹೊಂದಿದಳು. 2014 ರಲ್ಲಿ ಸಹಿತ ಏಷ್ಯಾದ ಹಲವಾರು ದೇಶಗಳಲ್ಲಿ ಲಕ್ಷಾಂತರ ಜನರು ಆರ್ಸೆನಿಕ್‌ನ ಕೆಟ್ಟ ಪರಿಣಾಮ ಗಳಿಗೆ ತುತ್ತಾಗುತ್ತಿದ್ದಾರೆ ಎಂದು ಒಂದು ಅಂತಾರಾಷ್ಟ್ರೀಯ ವರದಿ ತಿಳಿಸುತ್ತದೆ.

ಪಾದರಸ: ಚೀನಾದ ಮೊದಲ ಚಕ್ರವರ್ತಿ ಕ್ವಿನ್ ಷಿ ಹುವಾಂಗ್ ಎಂಬಾತ ದೀರ್ಘಾಯುಷ್ಯ ಉಂಟಾಗುತ್ತದೆ ಎಂದು ಪಾದರಸ ಗುಳಿಗೆಗಳನ್ನು ಸೇವಿಸಿ ಮರಣ ಹೊಂದಿದ ಎನ್ನುತ್ತದೆ ಇತಿಹಾಸ. 18 ಮತ್ತು 19ನೇ ಶತಮಾನದಲ್ಲಿ ತಲೆಯ ಮೇಲೆ ಧರಿಸುವ ಫೆಲ್ಟ್
ಹ್ಯಾಟ್‌ಗಳಲ್ಲಿ ಪಾದರಸವನ್ನು ಉಪಯೋಗಿಸಲಾಗುತ್ತಿತ್ತು. ಈ ಟೋಪಿಯನ್ನು ಉಪಯೋಗಿಸಿದ ಹಲವರು ಪಾದರಸದ ಕೆಟ್ಟ ಪರಿಣಾಮಗಳಿಗೆ ಒಳಗಾದರು ಎನ್ನಲಾಗಿದೆ. ಚಿನ್ನದ ಬಣ್ಣ ಹಾಕುವ ಉದ್ಯಮದಲ್ಲಿ ಗೋಲ್ಡ್ ಅಮಾಲ್ಗಮ್ ಎಂಬ ವಸ್ತು
ವನ್ನು ಉಪಯೋಗಿಸಲಾಗುತ್ತಿತ್ತು. ಇದರಲ್ಲಿ ಪಾದರಸದ ಬಹಳಷ್ಟು ಅಂಶ ಇರುತ್ತಿತ್ತು. ಈ ಉದ್ಯಮದಲ್ಲಿ ತೊಡಗಿಕೊಂಡ ಹಲವಾರು ಕೆಲಸಗಾರರು ವಿವಿಧ ಕೆಟ್ಟ ಪರಿಣಾಮಗಳಿಗೆ ಒಳಗಾದ ನಿದರ್ಶನಗಳಿವೆ.

ಯುರೋಪಿನ ಸೈಂಟ್ ಐಸಾಕ್ ಕೆಥಡ್ರಲ್‌ನ ಕಟ್ಟಡ ಕಟ್ಟುವಾಗ ಮುಖ್ಯ ಗೋಪುರದಲ್ಲಿ ಪಾದರಸ ಒಳಗೊಂಡ ಚಿನ್ನದ ಲೇಪನ ಉಪಯೋಗಿಸಿದ್ದರಿಂದ 60 ಕೆಲಸಗಾರರು ಮರಣ ಹೊಂದಿದರು ಎನ್ನಲಾಗಿದೆ. 1950ರ ದಶಕದಲ್ಲಿ ಜಪಾನಿನಲ್ಲಿ ಪಾದರಸವು ಹಲವು ಫ್ಯಾಕ್ಟರಿಗಳಿಂದ ನದಿ ಮತ್ತು ಸಮುದ್ರದ ನೀರಿಗೆ ಸೇರಿ ಮಿಥೈಲ್ ಮರ್ಕ್ಯುರಿ ಪಾಯಸನಿಂಗ್ ಉಂಟಾಗಿತ್ತು.

ಇದರ ಪರಿಣಾಮ ಮಿನಮಾಟ ಮತ್ತು ನಯೀಗಟ ಎಂಬ ಸ್ಥಳಗಳಲ್ಲಿ ಕಂಡುಬಂದು ಮಿನಮಾಟದಲ್ಲಿ 600ಕ್ಕೂ ಹೆಚ್ಚು ಜನರು ಮರಣ ಹೊಂದಿದರು. 21,000ಕ್ಕೂ ಅಧಿಕ ಜನರು ಜಪಾನ್ ಸರಕಾರಕ್ಕೆ ತಮಗೆ ಪರಿಹಾರ ಕೊಡಬೇಕೆಂದು ಅರ್ಜಿ ಸಲ್ಲಿಸಲಾಗಿ 3000 ಜನರಿಗೆ ಅಧಿಕೃತ ಸರ್ಟಿಫಿಕೇಟ್ ದೊರಕಿ ಅವರಿಗೆ ಪರಿಹಾರ ದೊರಕಿತು. 22 ಗರ್ಭಿಣಿ ಮಹಿಳೆಯರಲ್ಲಿ ಕಾಯಿಲೆ ಲಕ್ಷಣ ಇಲ್ಲದಿದ್ದರೂ ಅವರಿಗೆ ಜನಿಸಿದ ಮಕ್ಕಳಲ್ಲಿ ವಿವಿಧ ವಿಕಲಾಂಗತೆ ಕಂಡು ಬಂದಿತು.

ಔದ್ಯೋಗಿಕ ಕ್ರಾಂತಿಯ ನಂತರ ಐಸ್ ಲ್ಯಾಂಡ್ ಮತ್ತು ಅಂಟಾರ್ಟಿಕಗಳಲ್ಲಿ ಭೂಮಿಯ ಹತ್ತಿರದ ಸಮುದ್ರದ ನೀರಿನಲ್ಲಿ ಪಾದರಸದ ಮಟ್ಟ 3 ಪಟ್ಟು ಜಾಸ್ತಿಯಾಗಿದೆ ಎನ್ನಲಾಗಿದೆ.

ಸೀಸ: ಬಹಳ ಹಿಂದಿನಿಂದಲೂ ಸೀಸದ ದುಷ್ಪರಿಣಾಮಗಳು ಗೊತ್ತಿತ್ತು. ಕ್ರಿ.ಪೂ. 2ನೇ ಶತಮಾನದಲ್ಲಿ ನಿಕಾಂಡರ್ ಎಂಬ ಗ್ರೀಕ್ ಸಸ್ಯಶಾಸ್ತ್ರಜ್ಞ ಹೊಟ್ಟೆನೋವು ಮತ್ತು ಪಾರ್ಶ್ವವಾಯು ಇದರಿಂದ ಉಂಟಾಗುವುದನ್ನು ವಿವರಿಸಿದ್ದ. ಜೂಲಿಯಸ್ ಸೀಸರ್‌ನ ಎಂಜಿನಿಯರ್ ವಿಟ್ರುವಿಯಸ್ ಎಂಬಾತ ಸೀಸಗಳ ಪೈಪ್‌ಗಳ ನೀರು ಕಲುಷಿತವಾಗಿ ಮಾನವನ ದೇಹಕ್ಕೆ ಅಪಾಯಕಾರಿ ಎಂದು ಗುರುತಿಸಿದ್ದ.

ಚೀನಾದಲ್ಲಿ ಕ್ರಿ. ಶ. 1271- 1368ರ ಅವಧಿಯ ಮೊಂಗಲ್ ಅವಧಿಯಲ್ಲಿ ಹಲವಾರು ಗಣಿಗಾರಿಕೆಯಿಂದ ಯುನಾನ್ ಪ್ರಾಂತದಲ್ಲಿ 4 ಪಟ್ಟು ಜಾಸ್ತಿ ಸೀಸವು ಕಂಡುಬಂದಿತ್ತು. 17 – 18ನೇ ಶತಮಾನದಲ್ಲಿ ಡೆವಾನ್ ಭಾಗದಲ್ಲಿ ಕಲುಷಿತ ಸೇಬಿನ ಹಣ್ಣಿನ ಮದ್ಯವನ್ನು ಸೇವಿಸಿ ಹಲವಾರು ಜನರಲ್ಲಿ ಹೊಟ್ಟೆ ನೋವು ಕಂಡುಬಂದಿತ್ತು. 2013ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನ ಪ್ರಕಾರ ಪ್ರತಿ ವರ್ಷ ಜಗತ್ತಿನಾದ್ಯಂತ 1,43,000 ಜನರು ಇದರಿಂದ ಮರಣ ಹೊಂದುವುದಾಗಿಯೂ ಹಾಗೆಯೇ 60,000 ಮಕ್ಕಳಲ್ಲಿ ಮೆದುಳಿಗೆ ಸಂಬಂಧಪಟ್ಟ ವಿವಿಧ ತೊಂದರೆಗಳು ಕಾಣಿಸಿಕೊಳ್ಳುತ್ತವೆ ಎನ್ನಲಾಗಿದೆ.

ಇತ್ತೀಚೆಗೆ ಎಂದರೆ 2014ರಲ್ಲಿ ಸಹಿತ ಅಮೆರಿಕದ ಮಿಚಿಗನ್ ನಗರದಲ್ಲಿ ಸೀಸದ ಪೈಪ್‌ಗಳಿಂದ ನೀರು ಕಲುಷಿತಗೊಳ್ಳುತ್ತಿದೆ ಎನ್ನಲಾಗಿದೆ. 2015ರಲ್ಲಿ ಆಸ್ಟ್ರೇಲಿಯಾದ ಟಾಸ್ಮೇನಿಯಾದಲ್ಲಿ ಕುಡಿಯುವ ನೀರಿನ ಪೈಪ್‌ಗಳು ಕಲುಷಿತಗೊಂಡ ಕಾರಣ
ನಾರ್ಮಲ್‌ಗಿಂತ 50 ಪಟ್ಟು ಜಾಸ್ತಿ ಸೀಸ ಕಂಡುಬಂದಿತ್ತು.

ಕ್ರೋಮಿಯಂ: ಇದರ ಕೆಟ್ಟ ಮತ್ತು ಕ್ಯಾನ್ಸರ್ ಉಂಟುಮಾಡುವ ಪರಿಣಾಮಗಳು 19ನೆಯ ಶತಮಾನದಲ್ಲಿ ಅರಿವಿಗೆ ಬಂದಿತು. 1890ರಲ್ಲಿ ನ್ಯೂಮನ್ ಎಂಬಾತ ಕ್ರೋಮೇಟ್ ಡೈ ಕಂಪನಿಯಲ್ಲಿ  ಕೆಲಸಗಾರರಲ್ಲಿ ಕಂಡುಬಂದ ಹೆಚ್ಚಿನ ಕ್ಯಾನ್ಸರ್ ಕಾಯಿಲೆ ಯನ್ನು ಗುರುತಿಸಿದ್ದಾನೆ. ಎರಡನೇ ಮಹಾಯುದ್ಧದ ಸಮಯದಲ್ಲಿ ಇದರಿಂದ ಉಂಟಾದ ಚರ್ಮದ ಕಾಯಿಲೆಗಳು ವಿಮಾನದ ಕೆಲಸಗಾರರಲ್ಲಿ ಕಂಡು ಬಂದವು. 1963ರಲ್ಲಿ ಇಂಗ್ಲೆಂಡಿನ ಆಟೋಮೊಬೈಲ್ ಫ್ಯಾಕ್ಟರಿಯಲ್ಲಿ ವಿವಿಧ ಚರ್ಮದ ಕಾಯಿಲೆಗಳು ಕೆಲಸಗಾರರಲ್ಲಿ ಕಂಡುಬಂದವು.

ಚಿಕಿತ್ಸೆ: ಭಾರಲೋಹದ ದುಷ್ಪರಿಣಾಮಗಳನ್ನು ಮನುಷ್ಯರಲ್ಲಿ ಚೀಲೇಟಿಂಗ್ ಔಷಧಗಳ ಮೂಲಕ ಚಿಕಿತ್ಸೆ ಮಾಡಲಾಗುತ್ತದೆ. ಅವುಗಳ ಜತೆಗೆ ಹಲವು ವಿಟಮಿನ್ ಮತ್ತು ಮಿನರಲ್‌ಗಳನ್ನು ಕೊಡಬೇಕಾಗುತ್ತದೆ. ಭಾರದ ಲೋಹಗಳಲ್ಲಿ ಕೆಲವು ತುಂಬಾ ಕಡಿಮೆ ಪ್ರಮಾಣದಲ್ಲಿ ಮನುಷ್ಯನ ಆರೋಗ್ಯಕ್ಕೆ ಅವಶ್ಯಕ. ಅವುಗಳೆಂದರೆ – ವೆನಾಡಿಯಮ್, ಮ್ಯಾಂಗನೀಸ್, ಕಬ್ಬಿಣ, ಕೋಬಾಲ್ಟ್, ತಾಮ್ರ, ಸತು, ಸೆಲೆನಿಯಮ್, ಸ್ಟ್ರಾಂಷಿಯಂ, ಮಾಲಿಬ್ಡಿಯಮ್.