Saturday, 14th December 2024

ನನ್ನ ಆರೋಗ್ಯ, ನನ್ನ ಹಕ್ಕು: ಸ್ವಾಸ್ಥ್ಯಮಯ ಜೀವನಕ್ಕೆ ಹಾದಿ

ತನ್ನಿಮಿತ್ತ

ಡಾ.ಕರವೀರಪ್ರಭು ಕ್ಯಾಲಕೊಂಡ

ಎಲ್ಲರಿಗೂ ಉತ್ತಮ ಆರೋಗ್ಯ ನೀಡುವ ನಿಟ್ಟಿನಲ್ಲಿ ಹಲವು ವ್ಯಕ್ತಿಗಳ ಪರಿಶ್ರಮದಿಂದ ವಿಶ್ವ ಆರೋಗ್ಯ ಸಂಸ್ಥೆ ೧೯೪೮ ಏ.೭ ರಂದು ಜನ್ಮ ತಾಳಿತು. ೧೯೪೮ರಲ್ಲಿ ಜಿನೇವಾದಲ್ಲಿ ನಡೆದ ವಿಶ್ವ ಆರೋಗ್ಯ ಶೃಂಗಸಭೆಯಲ್ಲಿ ವರ್ಷಕ್ಕೊಮ್ಮೆ ‘ವಿಶ್ವ ಆರೋಗ್ಯ ದಿನ’ವನ್ನು ಆಚರಿಸುವ ಮಹತ್ವದ ಬಗ್ಗೆ ಸಮಾಲೋಚಿಸಲಾಯಿತು.

ವಿಶ್ವ ಆರೋಗ್ಯ ಸಂಸ್ಥೆಯ ಸ್ಥಾಪನೆಯನ್ನು ಗುರುತಿಸಲು ವಿಶ್ವ ಆರೊಗ್ಯ ದಿನವನ್ನು ಆಚರಿಸಲಾಗುತ್ತದೆ. ಪ್ರತಿ ವರ್ಷ ಒಂದೊಂದು ವಿಷಯದ ಮೇಲ್ಪಂಕ್ತಿಯನ್ನು ಆರಿಸಿ, ಆ ವಿಷಯದ ಕುರಿತು ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ವಿಶ್ವದೆಲ್ಲಡೆ ಅನುಷ್ಠಾನಗೊಳಿಸಲು ವಿವಿಧ ಚಟುವಟಿಕೆಗಳನ್ನು ಏರ್ಪಡಿಸುತ್ತಾ ಬಂದಿದೆ.ಆರೋಗ್ಯದ ನಿಜವಾದ ಅರ್ಥ, ಕಾಳಜಿ ಹಾಗೂ ಸಮುದಾಯದ ಆರೋಗ್ಯ ಕಾಪಾಡಲು ವ್ಯಕ್ತಿ ಮಾಡಬೇಕಾದ ಕರ್ತವ್ಯದ ಬಗ್ಗೆ ಅರಿವು ಮೂಡಿದಾಗ ಮಾತ್ರ ಈ ದಿನಾಚರಣೆಯು ಸಾರ್ಥಕ ವಾಗಲು ಸಾಧ್ಯ.

ಪ್ರತಿವರ್ಷ ಸುಮಾರು ೧೪ ಮಿಲಿಯನ್ ಸಾವುಗಳು ವಾತಾವರಣದ ವೈಪರಿತ್ಯದಿಂದ ಸಂಭವಿಸುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ತಗೆದುಕೊಳ್ಳುವ ರಾಜಕೀಯ, ಸಾಮಾಜಿಕ ಮತ್ತು ವಾಣಿಜ್ಯ ನಿರ್ಧಾರಗಳು ವಾತಾವರಣ ಮತ್ತು ಆರೋಗ್ಯದ ಅವಾಂತರಗಳ ಮೇಲೆ ಸವಾರಿ ಮಾಡುವವು. ಮಾಲಿನ್ಯಗಳು ಸಮುದ್ರದ ಆಳಗಳಲ್ಲೂ, ಪರ್ವತಗಳ ತುದಿಯಲ್ಲೂ ಶೇಖರ ಗೊಂಡಿರುವುದರ ಪರಿಣಾಮವಾಗಿ, ತಿನ್ನುವ ಆಹಾರದೊಡನೆ ಬೆರೆತು ಊಟದ ತಟ್ಟೆಗೆ ನಂತರ ಹೊಟ್ಟೆಗೆ ಸೇರಿ ಬೊಜ್ಜು,
ಬೊಜ್ಜಿನಿಂದ ಬರುವ ಅಸಾಂಕ್ರಾಮಿಕ ರೋಗಗಳು, ಕ್ಯಾನ್ಸರ್, ಹೃದ್ರೋಗಗಳಿಗೆ ‘ರೆಡ್ ಕಾರ್ಪೆಟ್’ ಹಾಕಿ ಸ್ವಾಗತಿಸುವವು. ಕೋವಿಡ್- ೧೯ ಪ್ಯಾಂಡಮಿಕ್ ವಿeನಕ್ಕಿರುವ ಗುಣಪಡಿಸುವ ಶಕ್ತಿ ಎಷ್ಟಿದೆ ಎಂಬುದನ್ನು ತೋರಿಸಿಕೊಟ್ಟಿದೆ.

ನಮ್ಮ ಆರೋಗ್ಯ ವ್ಯವಸ್ಥೆಯಲ್ಲಿರುವ ಲೋಪ ದೋಷಗಳನ್ನು ಬಯಲಿಗೆಳೆದು ಬೆತ್ತಲು ಮಾಡಿದೆ. ನಮ್ಮ ಭೂಮಿ, ಕೊರೊನಾ ಕಾಲಘಟ್ಟದಲ್ಲಿ ಮಾಲಿನ್ಯಗಳ ತವರು ಮನೆಯಾಗಿದೆ. ವಾಯುಮಾಲಿನ್ಯ, ಜಲಮಾಲಿನ್ಯ, ಶಬ್ಧಮಾಲಿನ್ಯ, ಆಹಾರದಲ್ಲಿ ಕಲಬರಿಕೆ ದಿನದಿನಕ್ಕೆ ಹೆಚ್ಚು ತ್ತಿವೆ. ಜೀವನಶೈಲಿಯ ಬದಲಾವಣೆಯಿಂದ ಉಂಟಾಗಿರುವ ರಕ್ತದಏರೊತ್ತಡ, ಮಧುಮೇಹ, ಕೆಮ್ಮು, ದಮ್ಮು ಮುಂತಾದ ಸಾಂಕ್ರಾಮಿಕ ರೋಗಗಳು ಏರು ಮುಖದಲ್ಲಿವೆ.

ಸಾಂಕ್ರಾಮಿಕ ರೋಗಗಳಂತೂ ಸೈ. ಅವುಗಳ ಜೊತೆಗೆ ಅಸಾಂಕ್ರಾಮಿಕ ರೋಗಗಳೂ ಕೈ ಜೋಡಿಸಿ, ಹೆಜ್ಜೆ ಹಾಕುತ್ತಿವೆ. ಇಂದು ನೆಮ್ಮದಿ ನುಚ್ಚು ನೂರಾಗಿದೆ. ಕಂಡರಿಯದ ರೋಗಗಳ ಕಿಚ್ಚು ನಿಗಿ ನಿಗಿ ಅನ್ನುತ್ತಿದೆ. ಆತಂಕ ಅಬ್ಬರಿಸುತ್ತಿದೆ. ರೋಗ ರುಜಿನಗಳು, ನೈಸರ್ಗಿಕ ಪ್ರಕೋಪಗಳು ಜನರ ಜೀವದೊಡನೆ ಚೆಟವಾಡುತ್ತಿದ್ದು, ಸಾವು ನೋವುಗಳಿಗೆ, ವಿಕಲಚೇತನಕ್ಕೆ ಹಾದಿಮಾಡುತ್ತಿವೆ. ವಾಯುಮಾಲಿನ್ಯ ಪ್ರತಿ ೫ ಸೆಕೆಂಡುಗಳಿಗೆ ಒಂದು ಜೀವವನ್ನು ಬಲಿಪಡೆಯುತ್ತಿದೆ.

ಪ್ರಪಂಚದ ೧೪೦ ರಾಷ್ಟ್ರಗಳು ಆರೋಗ್ಯ ಪ್ರತಿಯೊಬ್ಬರ ಹಕ್ಕು ಎಂಬುದನ್ನು ಆ ರಾಷ್ಟ್ರಗಳ ಸಂವಿಧಾನ ಪರಿಗಣಿಸಿದೆ. ಪ್ರಪಂಚದ ೪.೫ ಬಿಲಿಯನ್‌ಕ್ಕಿಂತ ಹೆಚ್ಚು ಅಂದರೆ ಅರ್ಧಕ್ಕಿಂತ ಹೆಚ್ಚು ಜನ ಆರೋಗ್ಯದ ಮೂಲ ಸೌಲಭ್ಯಗಳಿಂದ ವಂಚಿತ ವಾಗಿದೆ ಎಂಬುದನ್ನು ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ೨೦೨೧ರ ಅಧ್ಯಯನ ಸಾಬೀತು ಪಡಿಸಿದೆ. ಇವೆಲ್ಲವುಗಳನ್ನು ಪರಿಗಣಿಸಿ, ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಈ ವರ್ಷ ನನ್ನ ಆರೋಗ್ಯ, ನನ್ನ ಹಕ್ಕು ಘೋಷಣೆಯೊಂದಿಗೆ ಕಾರ್ಯಕ್ರಮಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಹಮ್ಮಿಕೊಂಡಿದೆ.

ಮಹಿಳೆಯರಲ್ಲಿ ಅನೀಮಿಯಾ, ವಯಸ್ಸಿಗೆ ಬರುವ ಮೊದಲೇ ನಡೆಯುವ ಮದುವೆಯಿಂದಾಗಿ ಮಕ್ಕಳಲ್ಲಿ ಅಪೌಷ್ಟಿಕತೆ, ಕುಂಠಿತ ಬೆಳವಣಿಗೆ, ರಕ್ತಕಣಗಳ ಕೊರತೆ, ಚುಚ್ಚುಮದ್ದು ನೀಡುವ ಕಾರ್ಯಕ್ರಮದಲ್ಲಿ ಅಸಂತೃಪ್ತಿ ಹಾಗೂ ಸಾಂಕ್ರಾಮಿಕ ರೋಗಗಳ ನಿರ್ಲಕ್ಷ್ಯ ಎಲ್ಲವೂ ತಲೆ ಎತ್ತಿ ನಿಂತಿವೆ. ಸಾಮಾಜಿಕ ಹಾಗೂ ಆರ್ಥಿಕ ಕಾರಣಗಳು, ಕಿತ್ತು ತಿನ್ನುವ ಬಡತನ ಮತ್ತು ಅಶಿಕ್ಷತೆ, ಅeನ, ಮೂಢ ನಂಬಿಕೆ ಹಾಗೂ ಮೂಲಭೂತ ಸೌಕರ್ಯಗಳ ಕೊರತೆಗಳೇ ಆನಾರೋಗ್ಯಕ್ಕೆ ಅಡಿಗಗಿವೆ.

ಆರೋಗ್ಯ ಜನಾಂಗದ ಭಾಗ್ಯ : ಜಾಗತಿಕ ಆರೋಗ್ಯ ಸಂಸ್ಥೆಯ ಪ್ರಕಾರ ಆರೋಗ್ಯವೆಂದರೆ ಸಂಪೂರ್ಣ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಸುಸ್ಥಿತಿಯಾಗಿದ್ದು ಅದು ಕೇವಲ ರೋಗ ಇಲ್ಲವೆ ದೈಹಿಕ ನ್ಯೂನತೆಯಿಲ್ಲದಿರುವುದು ಎಂದಲ್ಲ. ಆರೋಗ್ಯದ ಬಹುಮುಖ್ಯ ದೃಷ್ಟಿಕೋನ ಹೊಂದಿದ ಈ ವಿವರಣೆ ನಮ್ಮ ದೇಹ ರಚನೆ ಮತ್ತು ಕಾರ್ಯವನ್ನು ಮೀರಿ ನಮ್ಮ ಅನುಭವ, ಜೀವನಮೌಲ್ಯಗಳು ಮತ್ತು ತರ್ಕ ಬದ್ಧತೆಯನ್ನು ಹಾಗೂ ಪರಸ್ಪರ ವ್ಯಕ್ತಿಗತ ಸಂಬಂಧಗಳನ್ನೊಳಗೊಂಡಿವೆ. ಅಲ್ಲದೆ, ವ್ಯಕ್ತಿ
ರೋಗ ಇಲ್ಲವೆ ದೈಹಿಕ ನ್ಯೂನತೆಯನ್ನು ಹೊಂದಿದ್ದಾಗಲೂ ಆರೋಗ್ಯದಿಂದಿರಬಹುದೆಂಬ ಅಂಶದತ್ತ ನಮ್ಮ ಗಮನವನ್ನು ಸೆಳೆಯುತ್ತದೆ.

ಸಮಗ್ರ ಆರೋಗ್ಯ ಸಕಾರಾತ್ಮಕವಾಗಿದ್ದು ಅದು ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಮುಖಗಳನ್ನಲ್ಲದೆ ಬೌದ್ಧಿಕ ಮತ್ತು ಆಧ್ಯಾತ್ಮಿಕ ಸ್ಥಿತಿಗಳನ್ನು ಒಳಗೊಂಡಿದೆ. ಸಂಪೂರ್ಣ ಆರೋಗ್ಯ ಹೊಂದಿದ ವ್ಯಕ್ತಿ ಒಟ್ಟು ಮನುಷ್ಯನಾಗಿ ಕಾರ್ಯ ನಿರ್ವಹಿಸು ತ್ತಾನೆ. ಹಾಗಾಗಿ ಸಂಪೂರ್ಣ ಆರೋಗ್ಯ ನಮ್ಮ ಆರೋಗ್ಯದ ಬೇರೆ ಬೇರೆ ಮುಖಗಳ ವ್ಯಾಪಕ ವಿವರಣೆಯೆನಿಸಿದೆ. ಥಾಮಸ್ ಕಾರ್ಲೈಲ- ಮನಸ್ಸಿನ ಅಥವಾ ಶರೀರದ ಆರೋಗ್ಯವೇ ಜಯ, ಅನಾರೋಗ್ಯವೇ ಸೋಲು ಎಂದು ಭಾವಿಸಿದ್ದ. ‘ಆರೋಗ್ಯವೇ ನಿಜವಾದ ಭಾಗ್ಯ. ಅದು ಕೇವಲ ಬೆಳ್ಳಿ ಬಂಗಾರದ ತುಣಕಲ್ಲ’ ಎಂದು ಮಹಾತ್ಮಗಾಂಧಿಯವರು ಪರಿಗಣಿಸಿದ್ದರು.

ಸಮಗ್ರ ಆರೋಗ್ಯಕ್ಕೆ ಪಂಚ ಸೂತ್ರಗಳು : ನಮ್ಮ ಆರೋಗ್ಯವನ್ನು ಕಾಯ್ದುಕೊಳ್ಳುವುದು ನಮ್ಮ ನೈತಿಕ ಮತ್ತು ಧಾರ್ಮಿಕ ಕರ್ತವ್ಯವಾಗಿದೆ. ಆರೋಗ್ಯವೇ ಎಲ್ಲ ಸಾಮಾಜಿಕ ಗುಣಧರ್ಮಕ್ಕೆ ತಳಹದಿ. ಸಮಗ್ರ ಆರೋಗ್ಯ ಸಕಾರಾತ್ಮಕವಾಗಿದ್ದು ಅದು ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಮುಖಗಳನ್ನಲ್ಲದೇ ಬೌದ್ಧಿಕ ಮತ್ತು ಆಧ್ಯಾತ್ಮಿಕ ಸ್ಥಿತಿಗಳನ್ನು ಒಳಗೊಂಡಿದೆ.’ ಪ್ರಜೆಗಳ ಸುಖ ಮತ್ತು ರಾಷ್ಟ್ರದ ಶಕ್ತಿ ಪ್ರಜೆಗಳ ಆರೋಗ್ಯವನ್ನು ಅವಲಂಭಿಸಿದೆ’ ಎಂದು ಬೆಂಜಮಿನ್ ಡಿಸ್ಟೇಲಿ ತಿಳಿದಿದ್ದ. ವೈಜ್ಞಾನಿಕ ದೃಷ್ಟಿಯಿಂದ ಇಂದು ನಾವು ಬಾಳುವ ರೀತಿ ನಮ್ಮ ಭವಿಷ್ಯತ್ತಿನ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ನಮ್ಮ ಆರೋಗ್ಯ ವನ್ನು ಕಾಪಾಡಿಕೊಳ್ಳುವಲ್ಲಿ ಕೆಲವೊಂದು ಅಂಶಗಳು ತುಂಬಾ ಮಹತ್ವದ ಪಾತ್ರ ವಹಿಸುತ್ತವೆ.

ಅವುಗಳು ಹೀಗಿವೆ: ಪೌಷ್ಟಿಕ ಆಹಾರ ಸೇವನೆ, ಕುಡಿಯುವ ಪರಿಶುದ್ಧ ನೀರು, ನಿರ್ಮಲ ಪರಿಸರ, ಸೋಂಕು ರೋಗಗಳ ವಿರುದ್ಧ ಲಸಿಕೆ, ಸೋಂಕು ರೋಗಗಳ ನಿಯಂತ್ರಣ, ಕುಟುಂಬ ಕಲ್ಯಾಣ ಸೇರಿದಂತೆ ತಾಯಿ ಮಕ್ಕಳ ಆರೋಗ್ಯ ರಕ್ಷಣೆ, ರೋಗ ಚಿಕಿತ್ಸೆ ಮತ್ತು ಆರೋಗ್ಯ ಪುನರ್ ಪ್ರತಿಷ್ಠಾಪಣೆ.’ ಜೀವನದ ಸುಖ ಅನುಭವಿಸುವುದಕ್ಕೆ ಆರೋಗ್ಯ ಜೀವ ಕೊಡುವ ಆತ್ಮವಾಗಿದ್ದು, ಅದಿಲ್ಲವಾದರೆ ಎಲ್ಲವೂ ಮಸುಕಾಗಿ ನೀರಸವಾಗಿ ಪರಿಣಮಿಸುತ್ತದೆ’ ಎಂದು ಸರ್ ಟಿಂಪಲ್ ನುಡಿದಿರುವುದು ಸಮಂಜಸವಾಗಿದೆ.

ನಮ್ಮ ದೇಹಾರೋಗ್ಯದ ರಕ್ಷಣೆ ನಮ್ಮ ಕೈಯಲ್ಲಿದೆ. ‘ಆಯುಷ್ಯ ರೇಖೆಯಿಲ್ಲವಾದರೆ ಅರ್ಥ ರೇಖೆ ಇದ್ದು ಫಲವೇನು?’ ಮಕ್ಕಳು ಆರೋಗ್ಯದಿಂದ ಸುಖಜೀವನವನ್ನು ದೀರ್ಘಕಾಲ ಮಾಡಬೇಕೆಂಬುದು ಪ್ರತಿಯೊಬ್ಬ ತಂದೆ- ತಾಯಿಗಳ ಅಪೇಕ್ಷೆ. ಅವರು ಆರೋಗ್ಯದಿಂದ ಬಲಗೊಳ್ಳುವುದರ ಬುನಾದಿ. ಆದುದರಿಂದಾಗಿಯೇ ಜೋಸೆ- ಚೌಬನರ್ ಹೇಳಿದ ಮಾತು- ಮಗುವನ್ನು ಬೆಳೆಸುವಾಗ ಅವರ ವೃದ್ಧಾಪ್ಯವನ್ನು ಗಮನಿಸು. ಇದು ಸತ್ಯ! ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕಾದ ಮಗುವಿನ ಜೀವನ, ಆರಂಭದಲ್ಲಿಯೇ ಮುಗುಚಿ ಹೋಗುವುದಕ್ಕೆ ಕಡಿವಾಣ ಹಾಕಬೇಕು.

ಮಾರಕ ರೋಗಗಳಿಂದ ಸಾಯುವುದು ಮಾತ್ರವಲ್ಲದೆ ದೊಡ್ಡ ಸಂಖ್ಯೆಯ ಮಕ್ಕಳು ಪೋಷಣೆ ಕೊರತೆ ಮತ್ತು ಅನಾರೋಗ್ಯದಿಂದ ಬದುಕಿ ಉಳಿದರೂ ಅದು ಅವರಲ್ಲಿ ಸುಪ್ತ ವಾದ ದೈಹಿಕ ಮತ್ತು ಬೌದ್ಧಿಕ ಸಾಮರ್ಥ್ಯದ ವಿಕಾಸಕ್ಕೆ ಅಡ್ಡಿಯೊಡ್ಡುವುದು. ಕಾರಣ ಮಾರಕ ರೋಗಗಳಿಂದ ಮಕ್ಕಳನ್ನು ರಕ್ಷಿಸಲು ಸಕಾಲಕ್ಕೆ ಲಸಿಕೆಗಳನ್ನು ಕೊಡಿಸಬೇಕು. ಉದ್ಯೋಗದಲ್ಲಿ ಮತ್ತು ಕೌಟುಂಬಿಕ ಜೀವನದಲ್ಲಿ ಬರುವ ತೊಂದರೆಗಳನ್ನು ಎದುರಿಸುವ ಮನೋಬಲವನ್ನು, ಶಕ್ತಿಯನ್ನು ಮತ್ತು ಜಾಣ್ಮೆಯನ್ನು ಬೆಳೆಸಿಕೊಳ್ಳಬೇಕು. ಅವುಗಳನ್ನು ಸಮಾಧಾನದಿಂದ ಎದುರಿಸಿ ಆಯುಷ್ಯವರ್ಧನೆ ಮಾಡಿಕೊಳ್ಳಬೇಕು. ನಿಡುಗಾಲ ಉಳಿಯುವ ಒತ್ತಡ ಮಿದುಳು, ಜಠರ, ಸ್ನಾಯು, ಮೂಳೆ, ಹೃದಯ ಹೀಗೆ ದೇಹದ ಅಂಗಭಾಗಗಳ ಮೇಲೆ ತನ್ನ ಪ್ರಭಾವ ಬೀರಿ ಹೃದಯಾಘಾತ, ಹೊಟ್ಟೆಹುಣ್ಣು, ರಕ್ತ ಏರೋತ್ತಡ, ಮೂಳೆ ಬಿಧುರತೆ, ಸ್ನಾಯು ಸೇದಿಕೆ, ಸೆಳೆಯುವಿಕೆ, ಖಿನ್ನತೆಗೆ ಎಡೆ ಮಾಡಿಕೊಡುತ್ತದೆ.

ಜಾನ್ ಗಾರ್ಡನ್ ಒತ್ತಡದ ಜೀವನವನ್ನು ಎದುರಿಸಲು ಶಕ್ತಿ ಸಂಜೀವಿನಿಯಾಗಿ ಆರು ಶಬ್ಧಗಳ ಅನುಪಾನ ನೀಡಿದ್ದಾನೆ. ಅವು ‘ಜೀವಿಸಿ, ಪ್ರೀತಿಸಿ, ಕಲಿಯಿರಿ, ವಿಚಾರ ಮಾಡಿ, ಪ್ರಸನ್ನಗೊಳ್ಳಿ ಮತ್ತು ಪ್ರಯತ್ನಿಸಿ’ ಈ ಆರು ಶಬ್ಧ ಸೂತ್ರಗಳು ಒತ್ತಡವನ್ನು ದೂರಮಾಡಿ ಜೀವನಕ್ಕೆ ಮೆರಗು ತಂದು ಕೊಡುತ್ತದೆ. ‘ಆರೋಗ್ಯಕರ ಜೀವನಶೈಲಿ ಅನುಸರಿಸುವುದು, ಆರೋಗ್ಯವನ್ನು ಕಾಯ್ದುಕೊಂಡು ದೇಹದಾರ್ಡ್ಯವನ್ನು ಬೆಳೆಸಿಕೊಳ್ಳುವುದು ಎಲ್ಲ ವ್ಯಕ್ತಿಗಳ ಕರ್ತವ್ಯವಾಗಿದೆ. ‘ನಿಮ್ಮ ಆರೋಗ್ಯದ ರಕ್ಷಣೆ ಮಾಡಿಕೊಳ್ಳಿ, ನೀವು ಅದನ್ನು ಅಲಕ್ಷಿಸುವ ಅಧಿಕಾರ ಪಡೆದಿಲ್ಲ.

ಹಾಗೆ ಮಾಡಿ ನಿಮಗೂ ಬಹುಶಃ ಇತರರಿಗೂ ಭಾರವಾಗಬೇಡಿ’ ಎಂದು ಇಂಗ್ಲಿಷ್ ಕವಿ ವಿಲಿಯಂ ಹಾಲ್ ಮಾಡಿದ ಸೂಚನೆಯ ಮಹತ್ವವಿಂದು ಎಲ್ಲರಿಗೂ ಮನವರಿಕೆಯಾಗಿದ್ದು, ‘ಜೀವನ ಬರೀ ಬಾಳುವುದಲ್ಲ. ಅದು ಚೆನ್ನಾಗಿ ಬಾಳುವುದಾಗಿದೆ’ ಎಂದು ತಿಳಿಯಲ್ಪಟ್ಟಿದೆ. ನಾವು ನಿಸರ್ಗಕ್ಕೆ ಸಹಕರಿಸಿ ನಮ್ಮ ದೇಹಪ್ರಕೃತಿಗೆ ಒಗ್ಗುವುದನ್ನು ಸೇವಿಸಿ ಬಲ ಪಡೆದು, ಆರೋಗ್ಯವಂತ ರಾಗೋಣ, ನನ್ನ ಆರೋಗ್ಯ, ನನ್ನ ಹಕ್ಕು ಎಂದು ಪ್ರತಿe ಮಾಡೋಣ! ಹಾಗೇ ನಡೆಯೋಣ! ಅಂದಾಗ ಮಾತ್ರ ವಿಶ್ವ ಆರೋಗ್ಯ ಸಂಸ್ಥೆಯ ಕನಸು ನನಸಾದೀತು!

( ಲೇಖಕರು : ವಿಶ್ರಾಂತ ಜಿಲ್ಲಾ ಶಸ್ತ್ರ ಚಿಕಿತ್ಸಕರು)