Saturday, 14th December 2024

ಸಂಸಾರದ ನೊಗವನ್ನು ಹೊರುವ ಸ್ತ್ರೀ ಸ್ವಾಸ್ಥ್ಯದ ಸಾಧನೆಯತ್ತ…

ಸ್ವಾಸ್ಥ್ಯವೆಂಬ ಸ್ವಾತಂತ್ರ‍್ಯ

ಡಾ.ಸಾಧನಶ್ರೀ

ಒಂದು ಮನೆಯಲ್ಲಿ ಮಹಿಳೆಯ ಪಾತ್ರವೂ ಆಲದ ಮರದ ಹಾಗೇ! ಸದಾ ತನ್ನ ಕುಟುಂಬವನ್ನು ಪೋಷಿಸುತ್ತಾ, ರಕ್ಷಿಸುತ್ತಾ ಆರೋಗ್ಯದಿಂದ ಕಾಪಾಡುವ ಮಹತ್ಕಾರ್ಯ ಅವಳದ್ದು. ಮನೆಯಲ್ಲಿ ಮಕ್ಕಳಿಗೆ ಶಾಲೆಯ ಪಾಠ, ಜೀವನದ ಪಾಠ ಕಲಿಸುವ ಮೊದಲ ಗುರು ಅವಳೇ, ಅನಾರೋಗ್ಯ ನೀಗಿಸುವ ಮೊದಲ ವೈದ್ಯೆ ಅವಳೇ. ಅಡುಗೆ ಮನೆಯ ಅಧಿಪತಿಯೂ ಅವಳೇ. ಎಲ್ಲರಿಗೂ ಸರಿತಪ್ಪುಗಳ ವಿವೇಚನೆ ಹೇಳುವುದೂ ಅವಳದೇ ಜವಾಬ್ದಾರಿ.

ಮನುಸ್ಮೃತಿಯ ಮುತ್ತಿನಂಥ ಮಾತನ್ನು ಸ್ಮರಿಸುತ್ತಾ. ಯತ್ರ ನಾರ್ಯಾಸ್ತು ಪೂಜ್ಯಂತೆ ರಮಂತೆ ತತ್ರ ದೇವತಾಃ | ಯತ್ರೈತಾಸ್ತು ನ ಪೂಜ್ಯಂತೆ ಸರ್ವಾಸ್ತತ್ರಾ-ಲಾಃ ಕ್ರಿಯಾಃ || ಅಂದರೆ ಎಲ್ಲಿ ನಾರಿಯನ್ನು ಪೂಜನೀಯ ಭಾವದಿಂದ ನೋಡಲಾಗುತ್ತದೆಯೋ ಅಲ್ಲಿ ದೇವತೆಗಳು ನೆಲೆಸುತ್ತಾರೆ. ನಾರಿಯನ್ನು ಆ ಧನ್ಯತಾ ಭಾವದಿಂದ ನಡೆಸಿಕೊಳ್ಳದ್ದಿದ್ದಾಗ, ಅಲ್ಲಿ ಎಂತಹ ಮಹತ್ಕಾರ್ಯ ಕೂಡ ಫಲಿಸುವುದಿಲ್ಲ.

ಆಹಾ! ಎಂಥಾ ಸುಂದರ ಮಾತು ಎಂಥಾ ಆಹ್ಲಾದಕರ ಭಾವ! ಈ ಎರಡು ವಾಕ್ಯಗಳಲ್ಲಿ ಮಹಿಳೆಯ ಸಂಪೂರ್ಣ ವ್ಯಕ್ತಿತ್ವದ ಸಾರಂಶ ಅಡಗಿದೆ. ಮಹಿಳೆ ಅನೇಕ ಶಕ್ತಿಗಳ ಅಪೂರ್ವ ಸಂಗಮ. ಅವಳು ಯಶೋಧೆಯ ಮೂಲಕ ಮಮತೆಯಾಗಿ ಅರಳಿದರೆ, ವಿಶ್ಪಲೆಯ ಮೂಲಕ ವೀರದ ಪ್ರತೀಕವಾಗಿ ವಿಜೃಂಭಿಸಿದಳು. ಮೈತ್ರೇಯಿ ಜ್ಞಾನದ ಬೆಳಕಾದರೆ, ಮೀರಾಬಾಯಿ ಭಕ್ತಿಯ ಭಾವೋತ್ಕರ್ಷವಾದಳು. ದ್ರೌಪದಿ ಅಗ್ನಿಯ ಜ್ವಾಲೆಯಾದರೆ, ಸೀತೆ ಶೀಲದ, ತಾಳ್ಮೆಯ ತಂಗಾಳಿಯಾದಳು! ಅಂದರೆ, ಮಹಿಳೆಯಲ್ಲಿ ಈ ಎಲ್ಲಾ ಶಕ್ತಿಗಳು ಸೂಕ್ಷ್ಮಭಾವದಲ್ಲಿ ಸ್ವಾಭಾವಿಕವಾಗಿ ಅಂತರ್ಗತವಾಗಿದೆ.

ಹೀಗಾಗಿ ಎಷ್ಟೇ ಕ್ಲಿಷ್ಟಕರ ಪರಿಸ್ಥಿತಿಯನ್ನೂ ನಿಭಾಯಿಸಿ ಸಹಾಯಹಸ್ತ ನೀಡುವ ಅಭಯದಾತೆಯಾಗಿ ಮೆರೆಯುತ್ತಾಳೆ. ಉತ್ತಮೋತ್ತಮ ಕವಿಗಳು ಮಹಿಳೆ ಯನ್ನು ಸುಂದರ ಪುಷ್ಪಕ್ಕೆ ಹೋಲಿಸಿ ಹೊಗಳಿದ್ದಾರೆ. ತನ್ನ ಜೀವನದ ಪ್ರತಿಯೊಂದು ಘಟ್ಟದಲ್ಲೂ ಸಹ ಅವಳ ಹೃದಯ ಅರಳಿ ಅದರ ಕಂಪು ಯವುದೇ ಭೇದ ಭಾವವಿಲ್ಲದೆ, ಅಪೇಕ್ಷೆಯಿಲ್ಲದೆ ಸಂಪೂರ್ಣ ವಾತಾವರಣದಲ್ಲಿ ಬೆರೆತು ಎಲ್ಲರ ಮನಸ್ಸಿಗೆ ಮುದ ನೀಡುತ್ತದೆ. ಮಹಿಳೆ ಮನೆಯ ಮಗುವಾಗಿದ್ದಾಗ ಅವಳು ಎಲ್ಲರ ನಗುವಾಗುತ್ತಾಳೆ. ಶಾಲೆಗೆ ಹೋಗುವ ಮಗಳಾದಾಗ ಅವಳ ಅಜ್ಜ-ಅಜ್ಜಿಯ ಕಣ್ಮಣಿಯಾಗುತ್ತಾಳೆ; ಅವರ ಬದುಕಿನ ಉಸಿರೇ ಆಗಿಬಿಡು ತ್ತಾಳೆ. ಪ್ರೌಢ ಯುವತಿಯಾದಾಗ ತನ್ನ ಅಮ್ಮನ ಸ್ನೇಹಿತೆಯಾಗಿ ಅಪ್ಪನ ಪುಟ್ಟತಾಯಿಯಾಗಿ ಮೆರೆಯುತ್ತಾಳೆ; ಯಾರ ಮಾತಿಗೂ ಜಗ್ಗದ ಆ ಅಪ್ಪ ತನ್ನ ಮಗಳ ಮಾತಿಗೆ ಕರಗುತ್ತಾನೆ, ಅವಳ ನುಡಿಯೇ ಅವನಿಗೆ ವೇದವಾಕ್ಯವಾಗಿಬಿಡುತ್ತದೆ!

ಧರ್ಮಪತ್ನಿಯಾದಾಗ ತನ್ನ ಪತಿಯನ್ನು ಸದಾ ಸತ್ಪಥದಲ್ಲಿ ಮುನ್ನಡೆಸುವ ದಾರಿದೀಪವಾಗುತ್ತಾಳೆ. ಅದಕ್ಕಾಗಿಯೇ ಅಲ್ಲವೇ ಅವಳಿಗೆ ಮಾತ್ರ ಇದ್ದದ್ದು
ಸ್ವಯಂವರವೆಂಬ ಆಯ್ಕೆ. ಸೀತೆಯಿಲ್ಲದೆ ರಾಮನೆಲ್ಲಿ?! ಸಾವಿತ್ರಿಯಿಲ್ಲದೆ ಸತ್ಯವಾನನೆಲ್ಲಿ?! ಹೀಗೆ ಇಡೀ ಕೌಟುಂಬಿಕ ವ್ಯವಸ್ಥೆಯನ್ನು ತೂಗಿಸುವ
ಕುಶಲೆಯಾಗುತ್ತಾಳೆ ಮಹಿಳೆ. ನಂತರ ಒಬ್ಬ ತಾಯಿಯಾದಾಗ… ಆಹಾ! ತಾಯಿ ಎಂದಾಕ್ಷಣವೇ ಹೃದಯ ತುಂಬಿಬರುತ್ತದೆ. ಗರ್ಭಕ್ಕೆ ತನ್ನೆಲ್ಲಾ ಸತ್ತ್ವವನ್ನು ಧಾರೆ ಎರೆದು ಪೋಷಿಸಿ ಜನ್ಮ ನೀಡಿ ವಿಶ್ವಮಾತೆಯಾಗುತ್ತಾಳೆ. ಮಗುವಿಗೆ ಮೊದಲ ಪಾಠ ಹೇಳಿ ಗುರುವಾಗುತ್ತಾಳೆ.

ಜನನಿ ತಾನೇ ಮೊದಲ ಗುರುವು, ಜನನಿಯಿಂದ ಪಾಠ ಕಲಿತ ಜನರು ಧನ್ಯರು! ಹೀಗಾಗಿ ಹಿರಿಯರು ನುಡಿದರು, ‘ನ ಗೃಹಂ ಗೃಹಮಿತ್ಯಾಹುಃ ಗೃಹಿಣೀ ಗೃಹಮುಚ್ಯತೆ ||’ ಒಂದು ಕಟ್ಟಡಕ್ಕೆ ಗೃಹವೆನ್ನಲು ಸಾಧ್ಯವಿಲ್ಲ, ಒಬ್ಬ ಗೃಹಿಣೀ ಅಲ್ಲಿ ನೆಲೆಸಿದಾಗ ಮಾತ್ರ ಅದು ಗೃಹವಾಗುತ್ತದೆ. ಸ್ತ್ರೀ-ಪುರಷರು ಸಂಸಾರವೆಂಬ ರಥದ ಎರಡು ಚಕ್ರಗಳು, ಎರಡೂ ಭಿನ್ನವಾಗಿರುವುದು ಅದರ ವಿಶೇಷ. ಇಬ್ಬರ ಪಾತ್ರವೂ ಪ್ರತ್ಯೇಕ! ಅವನ ದೇಹ ಹೊರಗೆ ದುಡಿಯಲು ಸಮರ್ಥ, ಮನಸ್ಸು ವ್ಯಾವಹಾರಿಕ! ಆದರೆ ಅವಳು ಹಾಗಲ್ಲ. ತಾಯ್ತನ ಅವಳಜೀವದ/ಜೀವನದ ಉದ್ದೇಶ. ಅದರ ಮೂಲಕವೇ ಪರಮಾತ್ಮನನ್ನು ಕಾಣುವ ವರದಾನ ಅವಳಿಗಿದೆ.

ಅದಕ್ಕೆ ಬೇಕಾದಂತೆಯೇ ಅವಳ ಶರೀರ ಹಾಗೂ ಮನಸ್ಸುಗಳ ರಚನೆ. ಕೋಮಲ ಶರೀರ, ಕಷ್ಟಕ್ಕೆ ಮಿಡಿಯುವ ಮನಸ್ಸು; ನೋವಿಗೆ ಕರಗುವ ಹೃದಯ, ತನಗಾಗಿ ಏನೂ ಬಯಸದೆ ಸದಾ ತನ್ನವರಿಗೆ ಎಲ್ಲವನ್ನೂ ನೀಡುವ ಪ್ರವೃತ್ತಿ! ಇದು ಹೆಣ್ಣಿನ ವೈವಿಧ್ಯತೆ? ವಿಶೇಷತೆ. ಅವಳು ಪುರುಷರ ಜತೆ ಸಮಾನವಾಗಿ
ಸ್ಪಽಸಲು ನಿಲ್ಲದೆ, ಅವಳು ಅವನಿಗಿಂತ ಭಿನ್ನ ಹಾಗೂ ವಿಶೇಷ ಅರಿಯುವುದು ಮನಸ್ಸಿಗೆ ಉನ್ನತವಾದಂತಹ ಸ್ವಾತಂತ್ರ್ಯ ನೀಡುತ್ತದೆ. ಒಬ್ಬ ಮಹಿಳೆಯು,
ಸಹಜವಾಗಿಯೇ ತನ್ನಲ್ಲಿರುವ ಸಂಸ್ಕಾರಗಳನ್ನು ಗುರುತಿಸಿ, ಪೋಷಿಸಿ, ಸತ್ತ್ವಭರಿತವಾಗಿ ಹೊರಹೊಮ್ಮಿಸಿದಾಗ ಅದು ಆ ಸೂರ್ಯನ ರಶ್ಮಿಯಂತೆ
ಸದಾ ಕಾಲ ಮನೆಯನ್ನು ಬೆಳಗುತ್ತದೆ, ಮನಗಳನ್ನು ಉತ್ತಮ ಮೌಲ್ಯಗಳಿಂದ ಸಂಪತ್ಭರಿತವಾಗಿಸುತ್ತದೆ.

ಆಗ ಪ್ರತಿಯೊಂದು ಮನೆ ನಂದಗೋಕುಲವಾಗಿ, ಸಮಾಜ ಸ್ವಸ್ಥವಾಗುತ್ತದೆ.ಇದರಿಂದ ದೇಶ ಸಮೃದ್ಧಿ ಹೊಂದಿ ಇಡೀ ವಿಶ್ವ ನೆಮ್ಮದಿಯ ನೆಲೆಯಾಗುತ್ತದೆ. ಮತ್ತೆ ಮಾನವತೆ ಮೆರೆಯುತ್ತದೆ; ದೈವತ್ವದ ಕಡೆ ಕರೆದೊಯ್ಯುತ್ತದೆ. ಇಂತಹ ಮಹತ್ಕಾರ್ಯ ಸಿದ್ಧಿಗಾಗಿ ಸೃಷ್ಟಿಯಾಗಿರುವ ಮಹಿಳೆಗಿರುವ ಇನ್ನೊಂದು ದೊಡ್ಡ ಜವಾಬ್ದಾರಿ ಅವಳ ಆರೋಗ್ಯ. ಇಂದಿನ ಸ್ಪರ್ಧಾತ್ಮಕ ಬದುಕಿನಲ್ಲಿ ಹೊರಗೆ ಹೋಗಿ ದುಡಿಯುವುದು ಅಗತ್ಯವಾಗಿದೆ. ಆರೋಗ್ಯ ಕಾಪಾಡಿ ಕೊಳ್ಳುವುದು ದೊಡ್ಡ ಸವಾಲೇ ಸರಿ. ಹೆಣ್ಣಿಗಂತು ಇದು ಕತ್ತಿಯ ಅಲಗಿನ ಮೇಲಿನ ನಡಿಗೆ! ಜಾರದಿರಬೇಕು ಜೋಪಾನ ಅವಳು ಶಾರೀರಿಕವಾಗಿ, ಮಾನಸಿಕವಾಗಿ ಸ್ವಸ್ಥಳಾಗಿದ್ದರೆ ಮಾತ್ರ ಸಾಧ್ಯ ಮನೆಯ ಸ್ವಾಸ್ಥ್ಯ.

ಹೆಣ್ಣಿನಲ್ಲಿ ಪ್ರಾಕೃತಿಕವಾಗಿ ಆಗುವ ಏರುಪೇರಿನ ವೈಜ್ಞಾನಿಕ ತಿಳುವಳಿಕೆ ಅವಳಿಗಿದ್ದರೆ ತನ್ನ ಆರೋಗ್ಯವನ್ನು ಸಮರ್ಥವಾಗಿ ರಕ್ಷಿಸಿಕೊಳ್ಳಬಹುದು. ಅವಳು ಋತುಮತಿಯಾದಾಗ, ಗರ್ಭಿಣಿಯಾದಾಗ, ತಾಯಿಯಾದಾಗ, ಸೂತಕದಲ್ಲಿ, ಮಕ್ಕಳ ಪಾಲನೆ ಮಾಡುವಾಗ, ಮುಟ್ಟು ನಿಲ್ಲುವಾಗ ತನಗೆ ಯಾವುದು ಕ್ಷೇಮ ಯಾವುದು ಕೆಡಕು, ಎಂಬ ವಿವೇಚನೆ ಅವಳಿಗೆ ಅತ್ಯಗತ್ಯ. ಎಲ್ಲರ ಸೇವೆಯಲ್ಲಿ ನಿರತಳಾದಾಗ, ರೋಗ ಬಾರದಂತೆ ತನಗೊಂದು ರಕ್ಷಾ ಕವಚ ನಿರ್ಮಿಸಿಕೊಳ್ಳುವುದು ಹೇಗೆ ಎಂದು ಅವಳು ತಿಳಿದರೆ ಸಂಸಾರವೇ ಸ್ವರ್ಗವಾದೀತು.

ತನ್ನ ಆಂತರಿಕ ಸಂತುಲನೆಯ ಕೀಲಿಕೈ ಅವಳಿಗೆ ದೊರಕಿದಾಗ ಆ ಮನೆಯಾಗುವುದು ಮಂತ್ರಾಲಯ; ಮನಸ್ಸು ದೇವಾಲಯ! ಹೀಗೆ ಒಮ್ಮೆ ಸಂಜೆ ಉದ್ಯಾನವನದ ಕಡೆ ಹೋಗಲು ಮನ ಬಯಸಿತು. ಹಾಗೆ ಸುತ್ತಾಡಿ ಸ್ವಲ್ಪ ಸಮಯ ವಿಶ್ರಾಂತಿ ಪಡೆಯಲು ಅಲ್ಲೇ ಕುಳಿತೆ. ನನ್ನ ಎದುರಿಗೇ ಕಂಡಿತು ಒಂದು ಬೃಹತ್ತಾದ ಆಲದ ಮರ. ಆಹಾ! ಎಂಥಾ ಸೌಂದರ್ಯ. ಎಷ್ಟು ಗಾಂಭೀರ್ಯ! ತನ್ನ ಸುದೃಢ ಕಾಂಡ, ಹಚ್ಚ ಹಸಿರು ಎಲೆ ಚಿಗುರುಗಳು,
ಆಕಾಶಕ್ಕೆ ಚಪ್ಪರ ಹಾಕಿದಂತೆ ವಿಶಾಲವಾಗಿ ಹರಡಿರುವ ರೆಂಬೆ ಕೊಂಬೆಗಳು, ಅದರಿಂದ ಜೋತಾಡುವ ಬೇರುಗಳು. ಅಲ್ಲಿಗೆ ನಿಲ್ಲಲಿಲ್ಲ ಅದರ ವರ್ಣನೆ. ಆ ಆಲದ ಮರ ಸಾವಿರಾರು ಪ್ರಾಣಿ ಪಕ್ಷಿಗಳನ್ನು ತನ್ನ ಮಡಿಲಲ್ಲಿ ಹಿಡಿದು ರಕ್ಷಿಸಿತ್ತು, ಆಶ್ರಯ ನೀಡಿತ್ತು.

ಎಂಥ ಉರಿಯುವ ಬಿಸಿಲಲ್ಲೂ ಸಹ ನೂರಾರು ಮಂದಿಗೆ ತಂಪಾದ ನೆರಳನ್ನು ನೀಡಿ ಆನಂದ ತಂದಿತ್ತು. ಜೋತಾಡುವ ಬೇರುಗಳು ಅನೇಕ ಪುಟಾಣಿ ಗಳಿಗೆ ಜೋಕಾಲಿಯಾಗಿತ್ತು. ಇದು ಒಂದೆರಡು ದಿನಗಳ ಮಾತಲ್ಲ, ನೂರಾರು ವರ್ಷಗಳಿಂದ ಏನು ಪ್ರತಿ ಅಪೇಕ್ಷೆ ಇಲ್ಲದೆ ಪರರ ಹಿತಕ್ಕಾಗಿ ದೃಢವಾಗಿ ನಿಂತ ಆಲದ ಮರದ ಕಥೆ… ಸ್ನೇಹಿತರೇ, ಒಂದು ಮನೆಯಲ್ಲಿ ಮಹಿಳೆಯ ಪಾತ್ರವೂ ಆಲದ ಮರದ ಹಾಗೇ! ಸದಾ ತನ್ನ ಕುಟುಂಬವನ್ನು ಪೋಷಿಸುತ್ತಾ, ರಕ್ಷಿಸುತ್ತಾ ಆರೋಗ್ಯದಿಂದ ಕಾಪಾಡುವ ಮಹತ್ಕಾರ್ಯ ಅವಳದ್ದು. ಮನೆಯಲ್ಲಿ ಮಕ್ಕಳಿಗೆ ಶಾಲೆಯ ಪಾಠ, ಜೀವನದ ಪಾಠ ಕಲಿಸುವ ಮೊದಲ ಗುರು ಅವಳೇ, ಅನಾರೋಗ್ಯ ನೀಗಿಸುವ ಮೊದಲ ವೈದ್ಯೆ ಅವಳೇ.

ಅಡುಗೆ ಮನೆಯ ಅಧಿಪತಿಯೂ ಅವಳೇ. ಎಲ್ಲರಿಗೂ ಸರಿತಪ್ಪುಗಳ ವಿವೇಚನೆ ಹೇಳುವುದೂ ಅವಳದೇ ಜವಾಬ್ದಾರಿ. ನಮ್ಮ ಮನೆಗಳಲ್ಲಿ ಒಂದು ದಿನ ಅಮ್ಮ ಹುಷಾರು ತಪ್ಪಿ ಮಲಗಿದರೆ ಆಗುವ ಅನಾಹುತಗಳನ್ನು ನಾವು ಅನುಭವಿಸಿಯೇ ಇರುತ್ತೇವೆ. ಹಾಗಾಗಿ ಮನೆಯ ಎಲ್ಲರ ಹಿತದ ಕೀಲಿಕೈ ಹಿಡಿದಿರುವ ಮಹಿಳೆ ತನ್ನ ಸ್ವಂತ ಆರೋಗ್ಯಕ್ಕೂ ಸಹ ಅಷ್ಟೇ ಮಹತ್ವ ನೀಡಿ ಕಾಪಾಡಿಕೊಂಡಾಗ ಮಾತ್ರ ಸಾಧ್ಯ ಉಳಿಸಲು ಮನೆಯ ಸ್ವಾಸ್ಥ್ಯ. ಇದಕ್ಕೆ
ಒಬ್ಬ ಮಹಿಳೆಗೆ ಅತ್ಯಗತ್ಯ, ಸರಿತಪ್ಪುಗಳ ವಿವೇಚನೆ. ಅವಳಿಗ ಅವಶ್ಯಕ ಒಂದು ಆರೋಗ್ಯದ ರಕ್ಷಾಕವಚ.

ಆಯುರ್ವೇದ ಸದಾ ಹೇಳುತ್ತದೆ, ಒಬ್ಬ ಮಹಿಳೆಯ ಸ್ವಾಸ್ಥ್ಯವನ್ನು ರಕ್ಷಿಸುವ ರಕ್ಷಾಕವಚವೇ ಅವಳ ಆಹಾರ- ವಿಹಾರ-ವಿಚಾರ! ಹಾಗಾದರೆ, ಹೇಗಿರ
ಬೇಕು ಒಬ್ಬ ಮಹಿಳೆಯ ದಿನಚರಿ? ಬನ್ನಿ ನೋಡೋಣ… ಮಹಿಳೆಯರು ರಾತ್ರಿ ಬೇಗ ಮಲಗಿ, ಬೆಳಿಗ್ಗೆ ಬೇಗ ಏಳುವುದು ಸೂಕ್ತ. ವಿಶೇಷ ಕಾರಣವೇನೆಂದರೆ, ಮಹಿಳೆಯರ ಋತುಚಕ್ರವನ್ನು ನಿಯಂತ್ರಿಸುವ ಹಾರ್ಮೋನುಗಳು (ಅಂತಃಸ್ರಾವ) ಮಧ್ಯ ರಾತ್ರಿಯ ಗಾಢನಿದ್ರೆಯಲ್ಲಿ ಮಾತ್ರ ಸ್ರವಿಸುವುದು. ನಾವು ಆ ಸಮಯದಲ್ಲಿ ಎಚ್ಚರವಿದ್ದರೆ/ಕೆಲಸದಲ್ಲಿ ತೊಡಗಿದ್ದರೆ, ಆ ಹಾರ್ಮೋನುಗಳ ಉತ್ಪತ್ತಿಯಲ್ಲಿ /ಸ್ರಾವದಲ್ಲಿ ಏರುಪೇರಾಗಿ ಋತುಚಕ್ರದಲ್ಲಿ ತೊಂದರೆ ಉಂಟಾಗುತ್ತದೆ.

ಹಾಗಾಗಿ ರಾತ್ರಿ ಜಾಗರಣೆ ನಿಷಿದ್ಧ. ರಾತ್ರಿ ಜಾಗರಣೆಯಷ್ಟೇ ಹಾನಿಕರ ಹಗಲು ನಿದ್ದೆ ಕೂಡ. ದೇಹದ ಸ್ವಾಸ್ಥ್ಯಕ್ಕೆ ಹಾಗೂ ಗರ್ಭಾಶಯದ ಸ್ವಾಸ್ಥ್ಯಕ್ಕೆ ರಾತ್ರಿಯ ಪ್ರಾಕೃತ ನಿದ್ದೆ ಅಮೃತ ಸಮಾನ. ಬೆಳಿಗ್ಗೆ ಸರಿಯಾದ ಸಮಯಕ್ಕೆ ಎದ್ದಮೇಲೆ, ಮಲಮೂತ್ರ ವಿಸರ್ಜನೆ ಮಾಡಿಯೇ ಮುಂದಿನ ಕೆಲಸಕ್ಕೆ
ತೆರಳಬೇಕು. ಮಹಿಳೆಯ ಋತುಚಕ್ರ ಸಂಬಂಧಿತ ತೊಂದರೆಗಳಿಗೆ ಪ್ರಮುಖ ಕಾರಣಗಳಲ್ಲಿ ಒಂದು ಮಲಮೂತ್ರ ವೇಗಧಾರಣೆ. ಕೆಲಸದ ಒತ್ತಡದ ಮಧ್ಯೆ, ನಾಚಿಕೆ ಸ್ವಭಾವದಿಂದ ಮಹಿಳೆಯರು ಮಲ/ಮೂತ್ರದ ವೇಗ ಬಂದಾಗ ಅದನ್ನು ಮುಂದೂಡುವುದು ಸಹಜ.

ಇದರಿಂದ ಕ್ರಮೇಣ ಅಪಾನ ವಾತ ದುಷ್ಟಿಗೊಂಡು ಋತುಸ್ರಾವದಲ್ಲಿ ಏರುಪೇರು ಮಾಡುವುದು ಖಂಡಿತ. ಮುಟ್ಟಿನ ಸಂದರ್ಭದಲ್ಲಿ ಕಾಣಿಸುವ ಅತಿಯಾದ ಕಿಬ್ಬು ಹೊಟ್ಟೆ ನೋವು, ಸುಸ್ತು, ಅಲ್ಪ ಸ್ರಾವ, ಅಧಿಕ ಸ್ರಾವ, ಎಲ್ಲದರ ಮೂಲವೇ ವೇಗಧಾರಣೆಯ ಅಭ್ಯಾಸ. ಮಲಮೂತ್ರ ವಿಸರ್ಜನೆಯ ನಂತರ ನಿತ್ಯವೂ ಶರೀರಕ್ಕೆ ಎಣ್ಣೆ ಸವರಿಕೊಳ್ಳುವುದು(ಅಭ್ಯಂಗ) ಬಹಳ ಹಿತಕರ. ವಿಶೇಷವಾಗಿ ಸೊಂಟ, ಪೃಷ್ಠ, ಗುಹ್ಯಾಂಗ, ನಾಭಿ ಪ್ರದೇಶಕ್ಕೆ ನಿತ್ಯ ತೈಲ ಅಭ್ಯಂಗದಿಂದ ಬಹಳಷ್ಟು ತೊಂದರೆಗಳು ನಿವಾರಣೆಯಾಗಿ ಗರ್ಭಾಶಯದ ಸ್ವಾಸ್ಥ್ಯ ಸುಧಾರಿಸುವುದಲ್ಲದೆ, ಇದು ಗರ್ಭಾದಾನದಲ್ಲೂ ಹಾಗೂ ಸುಖ ಪ್ರಸವದಲ್ಲೂ ಬಹಳ ಸಹಾಯಕಾರಿ.

ಇದರಿಂದ ನಿದ್ದೆ ಸುಧಾರಿಸಿ, ಚರ್ಮದ ಕಾಂತಿಯೂ ಹೆಚ್ಚಾಗಿ, ಮೊಡವೆ ಇತ್ಯಾದಿ ತೊಂದರೆಗಳು ಕಡಿಮೆಯಾಗುತ್ತದೆ. ಎಷ್ಟು ಎಷ್ಟು ರಾಸಾಯನಿಕ
ಸೌಂದರ್ಯವರ್ಧಕಗಳಿಂದ ದೂರವಿರುತ್ತೀರೋ, ಅಷ್ಟು ಅಷ್ಟು ನಿಮ್ಮ ಸೌಂದರ್ಯವರ್ಧನೆಯಾಗುವುದು ಖಂಡಿತ. ಎಣ್ಣೆ ಸವರಿಕೊಂಡು ಮಿತವಾಗಿ ವ್ಯಾಯಾಮ ಮಾಡುವುದು ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮಹಿಳೆಯರಿಗೆ ಅತಿಯಾದ ವ್ಯಾಯಮ (ಜಿಮ್, ಏರೊಬಿಕ್ಸ್ ಇತ್ಯಾದಿ) ಸದಾ ನಿಷಿದ್ಧ. ಮುಟ್ಟಿನ ದಿನಗಳಲ್ಲಿ ಸಂಪೂರ್ಣ ವಿಶ್ರಾಂತಿ ಪಡೆಯಬೇಕು.

ಪ್ರಾಣಾಯಾಮ ಸಹಿತ ಯೋಗಾಭ್ಯಾಸ ಸರ್ವೋತ್ತಮ. ತೈಲಾಭ್ಯಂಗ ಹಾಗೂ ಮಿತ ವ್ಯಾಯಾಮದ ನಂತರ ಬಿಸಿ ನೀರಿನಲ್ಲಿ ಸ್ನಾನ ಮಾಡಿ ನಂತರ ತಮ್ಮ ದಿನನಿತ್ಯದ ಕೆಲಸವನ್ನು ಆರಂಭಿಸಬೇಕು. ಎಲ್ಲರಿಗೂ ತಿಳಿದಿರುವ ಹಾಗೆ ನಮ್ಮ ಶಾರೀರಿಕ ಹಾಗೂ ಮನಸಿಕ ಸ್ವಾಸ್ಥ್ಯ ಸಂಪೂರ್ಣವಾಗಿ ನಾವು ಸೇವಿಸುವ
ಆಹಾರದ ಮೇಲೆ ಅವಲಂಬಿತ. ಮಹಿಳೆಯರು (ಹೊರಗೆ ಹೋಗಿ ದುಡಿಯುವ ಮಹಿಳೆ ಇರಲಿ/ಗೃಹಿಣಿ ಇರಲಿ) ತಮ್ಮ ಹಸಿವನ್ನು ನಿರ್ಲಕ್ಷಿಸಿ, ಖಾಲಿ ಹೊಟ್ಟೆಯಲ್ಲಿ ಕೆಲಸ ಮಾಡಿ, ಹೊತ್ತಲ್ಲದ ಹೊತ್ತಿಗೆ ಊಟ ಮಾಡುವುದು ಸರ್ವೇಸಾಮನ್ಯವಾಗಿ ಬಿಟ್ಟಿದೆ. ಇದರಿಂದ ಅಜೀರ್ಣ, ಹುಳಿ ತೇಗು, ಹೊಟ್ಟೆ ಉಬ್ಬರ, ಎದೆ ಉರಿ, ಇತ್ಯಾದಿ ಗಾಸ್ಟ್ರಿಕ್ ತೊಂದರೆಗಳು ಶುರುವಾಗುತ್ತದೆ.

ಆದ್ದರಿಂದ ಬೆಳಿಗ್ಗೆ ಸ್ನಾನವಾದ ನಂತರ ಒಂದು ಲೋಟ ಬಿಸಿಹಾಲು, ಸಕ್ಕರೆ, ತುಪ್ಪ ಅಥವಾ ಜೀರಿಗೆ ಹಾಲುಕಷಾಯ ಕುಡಿದ ನಂತರ ಮನೆ ಕೆಲಸ ಮುಗಿಸಿ ಸರಿಯಾದ ಸಮಯಕ್ಕೆ ತಿಂಡಿ ತಿಂದರೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಮಧ್ಯೆ ಮಧ್ಯೆ ಏನೂ ಆಹಾರ ಸೇವಿಸದೇ, ಮಧ್ಯಾಹ್ನ ಹಾಗೂ ರಾತ್ರಿ ಹಸಿವೆಯಾದಾಗ ಸರಿಯಾದ ಸಮಯಕ್ಕೆ ಊಟ ಮಾಡಿ, ಜತೆಗೆ ಅರ್ಧ ಲೋಟ ಬಿಸಿಯಾದ ನೀರು ಕುಡಿಯುವುದರಿಂದ ಜೀರ್ಣ ಸುಲಭವಾಗಿ,
ವಾತಾನುಲೋಮನವಾಗುತ್ತದೆ. ಆಹಾರದ ಬಗ್ಗೆ ಕೆಲವು ಕಿವಿಮಾತುಗಳು ನೆನಪಿನಲ್ಲಿರಲಿ…

ಷಡ್ರಸದಿಂದ ಕೂಡಿದ, ಬಿಸಿಯಾದ, ಆಗಷ್ಟೇ ತಯಾರಿಸಿದ ಆಹಾರ ಸದಾ ಹಿತ. ಹಿಂದಿನ ದಿನದ ಆಹಾರ, ಫ್ರಿಡ್ಜ್‌ನಲ್ಲಿ ವಾರಗಳ ತನಕ ಪೇರಿಸುವ
ಆಹಾರ/ಮಾಂಸ, ಜಂಕ್ ಫುಡ್ ಮಹಿಳೆಯ ಸ್ವಾಸ್ಥ್ಯಕ್ಕೆ ಸದಾ ಕಂಟಕ. ಒಬ್ಬ ಮಹಿಳೆಗೆ, ಅಡುಗೆ ತಯಾರಿಸುವ ಸರಿಯಾದ ವಿಧಾನ, ಬಳಸುವ ಸಾಮಗ್ರಿ, ಅದರ ಪ್ರಮಾಣ, ನೀಡುವ ಸಂಸ್ಕಾರ, ಯಾವ ಕಾಲಕ್ಕೆ ಯಾವ ರೀತಿ ಅಡುಗೆ ಎನ್ನುವ ವಿವೇಚನೆ ಅಗತ್ಯ. ಆಹಾರ ಸೇವಿಸುವಾಗ ಯಾವುದೇ ಒತ್ತಡ,
ಗಡಿಬಿಡಿಯಿಲ್ಲದೆ ಶಾಂತಚಿತ್ತದಿಂದ, ತನ್ಮಯತೆಯಿಂದ ಮಾಡುವ ಊಟ ಅಮೃತಕ್ಕೆ ಸಮಾನ. ಮನಸ್ಸನ್ನು ಗಲಿಬಿಲಿಗೊಳಿಸುವ ಧಾರವಾಹಿಗಳಿಂದ ದೂರವಿರಿ. ಎಚ್ಚರಿಕೆ.

ಚಾಲ್ತಿಯಲ್ಲಿರುವ ಝೀರೋ ಫಿಗರ್‌ಗಾಗಿ ಝೀರೋ ಫೀಟ್ ಡಯಟ್‌ನಿಂದ ಆಗುವ ಅಡ್ದ ಪರಿಣಾಮದ ಅರಿವೇ ಇಲ್ಲದೆ ಅದನ್ನು ಪಾಲಿಸಿ
ಹಾರ್ಮೋನುಗಳ ಸ್ರಾವವೂ ಝೀರೋ ಆಗಿಬಿಟ್ಟಿದೆ. ಇದರಿಂದ ಸಂಧಿಶೂಲ, ಕೃಶತೆ, ನಿದ್ರಾಹೀನತೆ, ಮುಟ್ಟಿನ ತೊಂದರೆ, ಮಲಬದ್ಧತೆ ಎದ್ದು ನಿಂತಿವೆ. ಆದ್ದರಿಂದ ನಿತ್ಯ ಹಾಲು,ತುಪ್ಪ/ಬೆಣ್ಣೆಗಳ ಬಳಕೆ ಅತ್ಯಗತ್ಯ. ಇದೇ ಸ್ತ್ರೀಯರ ನಿಜವಾದ ರಕ್ಷಾಕವಚ. ಇಡೀ ದಿನದ ಕೆಲಸವಾದ ನಂತರ ಸಂಜೆ ಕುಟುಂಬದ ಜತೆ ಸ್ವಲ್ಪ ಸಮಯ ಆನಂದವಾಗಿ ಕಳೆದು ನಂತರ ಎಲ್ಲರೂ ಕೂಡಿ ೮-೮.೩೦ರ ಒಳಗೆ ಭೋಜನ ಮಾಡಿ ೧೦೦-೨೦೦ ಹೆಜ್ಜೆ ಹಾಕಬೇಕು.

ನಂತರ ಪಾದಗಳಿಗೆ, ನೆತ್ತಿಗೆ, ಅಂಗೈಗಳಿಗೆ ಎಣ್ಣೆಯನ್ನು ಚೆನ್ನಾಗಿ ಸವರಿಕೊಂಡು, ಮೂಗಿಗೂ ಸಹ ಎರಡು ಎರಡು ಹನಿ ಎಣ್ಣೆ ಬಿಟ್ಟುಕೊಂಡು ಮಲಗು ವುದರಿಂದ ನಿದ್ರೆಯಲ್ಲಿ ಆಗುವ ವ್ಯತ್ಯಾಸ, ಪಾದಗಳ ನೋವು, ಕಾಲು ಎಳೆತ, ಸಯಾಟಿಕ ನೋವುಗಳನ್ನು ನಿವಾರಿಸಿಕೊಳ್ಳಬಹುದು. ದಿನವಿಡೀ ಮಾಡುವ ವೃತ್ತಿಯ ಆಯ್ಕೆಯಲ್ಲಿ ಸಹ ಇರಲಿ ಎಚ್ಚರಿಕೆ. ಅತಿಯಾದ ಶ್ರಮ, ಮಾನಸಿಕ ಒತ್ತಡ, ಕಿರಿಕಿರಿ, ಅತಿಯಾದ ವಾಹನ ಯಾನ, ಸದಾ ಕುಳಿತು ಕೊಂಡು ಮಾಡುವ ಕೆಲಸ, ವಿಶೇಷವಾಗಿ ರಾತ್ರಿ ಪಾಳಿಯಿಂದ ಮಹಿಳೆಯರು ಸದಾ ದೂರವಿರಬೆಕು. ದೈಹಿಕ, ಮಾನಸಿಕ ಆರೋಗ್ಯವನ್ನು ಕೇಂದ್ರಬಿಂದು ವಾಗಿಸಿ, ಅದಕ್ಕೆ ಪೂರಕವಾಗುವ, ಸಮಾಜಮುಖಿಯಾದ ಕೆಲಸದ ಆಯ್ಕೆ ಉತ್ತಮ. ಇದರಿಂದ ನಿಮ್ಮ ಆರೋಗ್ಯ, ನಿಮ್ಮ ಕುಟುಂಬದ ಆರೋಗ್ಯ ಸದಾ ಕ್ಷೇಮ.

ಆಚಾರ್ಯ ಚರಕರು ಹೇಳುವಂತೆ ಸೌಮನಸ್ಯಂ ಗರ್ಭಧಾರಣಾನಾಂ ಶ್ರೇಷ್ಥಮ್. ಗರ್ಭಧಾರಣೆಗೆ ಶಾಂತಚಿತ್ತವಾದ, ಒಳ್ಳೆಯ ಯೋಚನೆಗಳಿಂದ  ಕೂಡಿದ ಸ್ವಸ್ಥ ಮನಸ್ಸೇ ಬೇರೆ ಎಲ್ಲದಕ್ಕಿಂತ ಅತ್ಯಗತ್ಯ. ಇದರ ವ್ಯಾಪ್ತಿ ಕೇವಲ ಗರ್ಭಧಾರಣೆಗಷ್ಟೇ ಸೀಮಿತವಲ್ಲ. ಮಹಿಳೆಯ ಸಂಪೂರ್ಣ ಆರೋಗ್ಯದ ಕೀಲಿಕೈ ಇದರಲ್ಲೇ ಅಡಗಿದೆ. ಇದೇ ಅವಳ ಆರೋಗ್ಯದ ರಹಸ್ಯ. ಉತ್ತಮ. ಋತುಮತಿಯಾಗುವುದಾಗಲಿ, ತಿಂಗಳ ಮುಟ್ಟಿರಲಿ, ಗರ್ಭಾದಾನವಿರಲಿ, ಸ್ಪೂತಿಕಾ ಚರ್ಯವಿರಲಿ, ಮಗುವಿಗೆ ಸ್ತನ್ಯಪಾನವಿರಲಿ, ಮುಟ್ಟು ನಿಲ್ಲುವುದಿರಲಿ -ಇವೆಲ್ಲವೂ ಸಹಜವಾಗಿ ನಡೆಯಬೇಕಾದರೆ – ಅಗತ್ಯ ಸೌಮನಸ್ಸು-ತೊರೆಯಿರಿ ದುಃಖ ಮುನಿಸುದರಿಂದ ಆಗಲಿ ನನಸು- ಒಂದು ಸಾರ್ಥಕ ಬದುಕಿನ ಕನಸು!