ತನ್ನಿಮಿತ್ತ
ಜಯಶ್ರೀ ಕಾಲ್ಕುಂದ್ರಿ
ಮಕ್ಕಳಿಗೆ ಎಳವೆಯಲ್ಲಿಯೇ ಕಲಿಕೆಯ ಹೆಸರಿನಲ್ಲಿ ಆವರಿಸಿಕೊಳ್ಳುವ ಒತ್ತಡವನ್ನು ಗಮನಿಸಿದಾಗ ಅವರ ಬಾಲ್ಯ, ಬಣ್ಣಗಳಿಲ್ಲದ ಕಾಮನಬಿಲ್ಲಿನಂತೆ ಕಾಣಿಸುತ್ತದೆ. ಮಕ್ಕಳಿಗೆ ಶಾಲೆಯ ಹೋಮ್ ವರ್ಕ್, ಟ್ಯೂಶನ್‌ಗಳ ನಡುವೆ ಬಾಲ್ಯದ ಬಿಡುವೂ ಮರೆಯಾ ಗಿದೆ. ಇಷ್ಟು ಮಾತ್ರವಲ್ಲ, ಪೋಷಕರ ಇಚ್ಛೆಗನುಸಾರವಾಗಿ ಪಠ್ಯೇತರ ಚಟುವಟಿಕೆಗಳು, ಹತ್ತಾರು ಸ್ಪರ್ಧೆಗಳು, ರಿಯಾಲಿಟಿ ಶೋಗಳಲ್ಲಿ ಭಾಗವಹಿಸುತ್ತಾ ಮಕ್ಕಳ ಮನಸ್ಸು ದೇಹಗಳೆರಡೂ ದಣಿಯುತ್ತವೆ.
ಸ್ವತಂತ್ರ ಭಾರತದಲ್ಲಿಯೂ ಮಕ್ಕಳು ದೈಹಿಕ, ಸಾಮಾಜಿಕ ಮತ್ತು ಮಾನಸಿಕ ಹಿಂಸೆಗಳಿಗೆ ಗುರಿಯಾಗುತ್ತಲೇ ಇರುವುದು ಕಳವಳ ಕಾರಿ. ಮುಂದಿನ ಜನಾಂಗವೆಂದೇ ಗುರುತಿಸಿಕೊಳ್ಳುವ ಮಕ್ಕಳು, ಆಹಾರ, ವಸತಿ, ಬಟ್ಟೆ, ಶುದ್ಧ ಪರಿಸರಗಳ ಜತೆಜತೆಗೆ ಮಮತೆ, ವಾತ್ಸಲ್ಯಗಳಿಂದ ವಂಚಿತರಾಗುರುತ್ತಿರುವುದು ಆರೋಗ್ಯಕರ ಸಮಾಜದ ನಿರ್ಮಾಣಕ್ಕೆ ಹಿತಕಾರಿ ಎನಿಸದು.
ಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳು ಅವರ ಬದುಕನ್ನೇ ಕಸಿಯುತ್ತವೆ. ಈಗ ತಾನೇ ಜನಿಸಿದ ಮಗುವಿನಿಂದ ಹಿಡಿದು, ಹದಿನೆಂಟು ವರ್ಷಗಳ ವರುಷಗಳ ವಯಸ್ಸಿನ ಯುವಕರೆಲ್ಲರೂ ಮಕ್ಕಳ ಗುಂಪಿಗೆ ಸೇರುತ್ತಾರೆ. ನಮ್ಮ ಸಮಾಜದಲ್ಲಿ ಬಡತನ,
ನಿರುದ್ಯೋಗ ಸಮಸ್ಯೆ, ಮೂಢನಂಬಿಕೆಗಳು ಹಲವಾರು ಸಮಸ್ಯೆಗಳನ್ನು ಹುಟ್ಟುಹಾಕಿವೆ. ಬಡಜನರ ಅಸಹಾಯಕತೆಯೇ ಅವರ ಮಕ್ಕಳ ಮೇಲೆ, ನಿರಂತರ ದೌರ್ಜನ್ಯಗಳು ನಡೆಯಲು ಕಾರಣವೆಂಬುದು ನಿರ್ವಿವಾದ. ಬಾಲ್ಯದುಡಿಮೆ, ಬಾಲ್ಯ ವಿವಾಹ. ಲೈಂಗಿಕ ದೌರ್ಜನ್ಯ, ಭಿಕ್ಷಾಟನೆ ಮತ್ತು ವೇಶ್ಯಾವೃತ್ತಿಗೆ ನೂಕುವುದು, ಅಪಹರಣ, ಮಾರಾಟ, ಅಪರಾಧ ಕೃತ್ಯಗಳಲ್ಲಿ ಜೈಲು ಪಾಲಾದ ಮಕ್ಕಳಿಗೆ ಹಿಂಸೆ ಮುಂತಾದ ದೌರ್ಜನ್ಯಗಳಿಂದ ಮಕ್ಕಳು ನಲುಗುತ್ತಿದ್ದಾರೆ.
ಬಾಲಕಾರ್ಮಿಕ ಪದ್ಧತಿಯ ಮುಂದುವರಿಕೆಯಿಂದ, ಮಕ್ಕಳ ಭವಿಷ್ಯವೇ ಅಂಧಕಾರದಲ್ಲಿ ಮುಳುಗಿ ಹೋಗುತ್ತಿದೆ. ಹದಿನಾಲ್ಕು
ವರ್ಷಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ವಾಣಿಜ್ಯ ಕ್ಷೇತ್ರ, ಮಳಿಗೆ, ಗ್ಯಾರೇಜುಗಳಲ್ಲಿ ದುಡಿಸಿಕೊಳ್ಳಬಾರದೆಂಬ ಸ್ಪಷ್ಟ ಕಾನೂನು ಜಾರಿಯಲ್ಲಿದ್ದರೂ, ಕಟ್ಟುನಿಟ್ಟಾದ ಅನುಷ್ಠಾನದ ಕೊರತೆಯಿಂದ ಅಮಾನವೀಯ ಬಾಲಕಾರ್ಮಿಕ ಪದ್ಧತಿ, ಮುಂದುವರಿಯುತ್ತಲೇ ಇರುವುದು ತೀರ ದುರದೃಷ್ಟಕರ. ಬಾಲಕಾರ್ಮಿಕರಲ್ಲಿ, ಶೇ 60ಕ್ಕಿಂತಲೂ ಹೆಚ್ಚು ಪ್ರಮಾಣದ ಮಕ್ಕಳು, ಗೃಹಸಂಬಂಧಿ ಕಾರ್ಮಿಕರಾಗಿದ್ದಾರೆ. ಹೆಚ್ಚಿನಂಶ ಮಕ್ಕಳು, ನಗರಗಳಲ್ಲಿ, ಹೊಟೇಲ್, ಕ್ಯಾಂಟೀನ್, ಗ್ಯಾರೇಜ್, ಚಿಂದಿ ಆಯುವುದು, ಚಪ್ಪಲಿ ರಿಪೇರಿ, ಚಪ್ಪಲಿ ಅಂಗಡಿಗಳು ಮುಂತಾದ ಕೆಲಸಗಳಲ್ಲಿ ದುಡಿಯುತ್ತಿದ್ದಾರೆ.
ಅಂಕಿ – ಅಂಶಗಳ ಪ್ರಕಾರ, ನಮ್ಮ ದೇಶದಲ್ಲಿ, ಸುಮಾರು ಒಂದು ಕೋಟಿಗೂ ಮಿಕ್ಕು ಬಾಲಕಾರ್ಮಿಕರಿದ್ದಾರೆ. ಎಳೆಯ ಮಕ್ಕಳನ್ನು ದುಡಿಮೆಗೆ ಕಳಿಸಲು, ಬೆಂಬಿಡದ ಬಡತನವೇ ಕಾರಣವೆಂಬುದು ಸರ್ವವಿದಿತ. ತಮಿಳು ನಾಡಿನ ಶಿವಕಾಶಿ ಪಟಾಕಿ ಕಾರ್ಖಾನೆಯಲ್ಲಿ ಸುಮಾರು 45000ಕ್ಕೂ ಮಿಕ್ಕು ಸಂಖ್ಯೆಯಲ್ಲಿ ಬಾಲ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆನ್ನಲಾಗಿದೆ. ಧೂಳು, ಅಪಾಯಕಾರಿ ಅನಿಲ, ವಾಯುಮಾಲಿನ್ಯಗಳ ಮಧ್ಯೆ ನಿರಂತರ ಕೆಲಸ ಮಾಡಬೇಕಾಗಿರುವುದರಿಂದ, ಮಕ್ಕಳು ದೈಹಿಕ ಮತ್ತು ಮಾನಸಿಕ ಒತ್ತಡಕ್ಕೆ ಸಿಲುಕುತ್ತಾರೆ. ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳು, ಕ್ಷಯ, ಅಸ್ತಮಾ, ಕಣ್ಣಿನ ತೊಂದರೆಗಳು ಮುಂತಾದ
ರೋಗಗಳಿಗೆ ಗುರಿಯಾಗುತ್ತಾರೆ.
ಇಷ್ಟು ಮಾತ್ರವಲ್ಲ, ದುಡಿಮೆ ಹೊತ್ತು ತರುವ ಕ್ಷೋಭೆ ಮತ್ತು ಇತರ ಸಂಕಟಗಳಿಗೆ ಗುರಿಯಾಗುತ್ತಾರೆ. ಕಠಿಣ ಕ್ರಮಗಳನ್ನು
ಸರಕಾರ ಜಾರಿಗೊಳಿಸಿದರೂ, ನಿರೀಕ್ಷಿತ ಫಲಿತಾಂಶ ಸಿಗದಿರುವುದಕ್ಕೆ, ಬಡತನದ ದಾರುಣತೆಯೊಂದಿಗೆ, ಸಮಾಜದಲ್ಲಿ ಮಡು ಗಟ್ಟಿದ ಜಾತಿ, ಧರ್ಮ, ಮೂಢನಂಬಿಕೆ, ಅಂತಸ್ತುಗಳೂ ಸಹ ಕಾರಣವಾಗಿವೆ. ಮಕ್ಕಳಿಗೆ, ಸರಿಯಾದ ಪ್ರಾಥಮಿಕ ಶಿಕ್ಷಣ ವ್ಯವಸ್ಥೆ ಯನ್ನು ಕಲ್ಪಿಸುವುದರ ಜತೆಜತೆಗೆ, ಶಾಲೆಗೆ ಮಕ್ಕಳನ್ನು ಕಳಿಸದಿರುವ ಹೆತ್ತವರಿಗೆ ಶಿಕ್ಷೆ ನೀಡಬೇಕು. ಉಚಿತ ಶಿಕ್ಷಣ ನೀಡುವದರ
ಜತೆಗೆ, ಶಾಲೆಗಳಲ್ಲಿ ಮೂಲಸೌಲಭ್ಯಗಳನ್ನು ಬಲಪಡಿಸಬೇಕು.
ಪ್ರಾಥಮಿಕ ಶಿಕ್ಷಣ ಕಲಿಯುವ ಹಂತದಲ್ಲಿಯೇ ಮೂಟೆಗಟ್ಟಲೆ ಪುಸ್ತಕ ಹೊರುವ, ಥಳಕು – ಬಳುಕಿನ ಶಿಕ್ಷಣಕ್ಕಿಂತ, ಮಕ್ಕಳನ್ನು ಶಾಲೆಯತ್ತ ಸೆಳೆಯುವ, ಅವರ ಕೋಮಲ ಮನಸ್ಸಿಗೆ ಅನುಗುಣವಾಗಿ ಕಲಿಸುವ ಶಿಕ್ಷಕರ ನೇಮಕಾತಿಯೂ ಅಷ್ಟೇ ಮುಖ್ಯ. ಸರಕಾರದ ಅಂಗ ಸಂಸ್ಥೆಗಳ ಜತೆಗೆ, ಸರಕಾರೇತರ ಸಂಸ್ಥೆಗಳೂ ಬಾಲಕಾರ್ಮಿಕರ ಸಮಸ್ಯೆಗಳನ್ನು ನಿರ್ವಹಿಸುವಲ್ಲಿ ಸರಕಾರದ ಜತೆ ಕೈಜೋಡಿಸ ಬೇಕಾಗಿದೆ. ಬಾಲ್ಯ ವಿವಾಹ ಸಾಮಾಜಿಕವಾಗಿ ಯೋಚಿಸಲಾಗಿ, ಮಗಳ ಇರುವಿಕೆ ಖರ್ಚಿಗೆ ದಾರಿಯೆಂಬ ಮನೋಭಾವವಿದೆ.
ಪುಟ್ಟ ಮಗುವಿನ ಬಾಲ್ಯವನ್ನೇ ಕಸಿದು, ಕಿಶೋರಾವಸ್ಥೆಯಲ್ಲಿಯೇ ಹೆಣ್ಣುಮಗುವಿಗೆ, ಅವಸರ ದಿಂದ ಮಾಡುವ ವಿವಾಹದಿಂದ, ತಾಯ್ತನದ ಹೊರೆ, ರಕ್ತಹೀನತೆ, ಶಿಶು ಮರಣ, ಸಂಸಾರದ ಜವಾಬ್ದಾರಿಗಳಂಥ ಸಮಸ್ಯೆಗಳು ಪುಟ್ಟ ಹುಡುಗಿಯನ್ನು ಕಂಗಾಲಾ ಗಿಸುತ್ತವೆ. ಅವಸರದಲ್ಲಿ ಮಾಡಿದ ಬಾಲ್ಯ ವಿವಾಹದಿಂದ, ಹೆಣ್ಣು ಮಕ್ಕಳು ವರದಕ್ಷಿಣೆ ಉಪಟಳ, ಕೌಟುಂಬಿಕ ದೌರ್ಜನ್ಯ,
ಮಾನಸಿಕ ಶೊಷಣೆಗಳಿಗೊಳಗಾದ ಸಂದರ್ಭಗಳು ಇಲ್ಲದಿಲ್ಲ. ಲೈಂಗಿಕ ದೌರ್ಜನ್ಯ ಮಕ್ಕಳು ದೇವರ ಸಮಾನವೆನ್ನುತ್ತಲೇ, ಅವರ ಮೇಲೆ ನಡೆಸಲಾಗುವ ಅಪರಾಧಗಳ ಸಂಖ್ಯೆ ಆತಂಕಕಾರಿ.
ಮಕ್ಕಳಿಗೆ ತಂದೆ – ತಾಯಿ – ತಂದೆಯ ಮಡಿಲು, ನಂತರ ಶಾಲೆಯೇ ಸುರಕ್ಷಿತ ತಾಣವೆಂಬ ನಂಬಿಕೆಯ ಬುನಾದಿ ಭದ್ರವಾಗಿಲ್ಲ ವೆನಿಸುತ್ತಲಿದೆ. ಮಕ್ಕಳಿಗೆ ರಕ್ಷಕರಾಗಬೇಕಿದ್ದವರೇ ರಾಕ್ಷಸರಂತೆ ವರ್ತಿಸುತ್ತಿರುವುದು ಕಳವಳಕಾರಿ. ಮನೆಯಾಗಲೀ, ಶಾಲೆ, ಬೀದಿ ಹಾಗೂ ವಿದ್ಯಾರ್ಥಿ ನಿಲಯಗಳಲ್ಲಿ ಮಕ್ಕಳು ಸುರಕ್ಷಿತರಲ್ಲವೆನ್ನುವದು ಆತಂಕವನ್ನು ಸೃಷ್ಟಿಸಿದೆ.
ಲೈಂಗಿಕ ದೌರ್ಜನ್ಯ ನಡೆಸುವವರಲ್ಲಿ ಶೇಕಡಾ 50ಮಂದಿ, ಮಗುವಿಗೆ ಪರಿಚಯರಸ್ಥರೇ ಆಗಿರುತ್ತಾರೆ. ತಮ್ಮ ಸುತ್ತಮುತ್ತ ಇಂಥ ಅಮಾನುಷ ಕೃತ್ಯಗಳು ನಡೆದಾಗ ಮಕ್ಕಳ ಮನಸ್ಸು ಘಾಸಿಗೊಳ್ಳುತ್ತದೆ ಮತ್ತು ಅವರ ಮನೋ ವಿಕಾಸದ ಮೇಲೆ ನಕಾರಾತ್ಮಕ
ಪರಿಣಾಮ ಬೀರುತ್ತದೆ. ಅತ್ಯಾಚಾರದಿಂದ ನೊಂದ ಮಕ್ಕಳಿಗೆ ಮಾನಸಿಕ ಸಲಹೆಗಾರರನ್ನು ಒದಗಿಸಿಕೊಡುವುದೂ ಸಹ ಅತ್ಯಗತ್ಯ. ಲೈಂಗಿಕ ಅಪರಾಧಗಳಿಂದ. ಮಕ್ಕಳ ರಕ್ಷಣೆ (ಪೋಕ್ಸೋ) ಕಾಯಿದೆಯನ್ನು ನಮ್ಮ ದೇಶದಲ್ಲಿ ಜಾರಿಗೆ ತರಲಾಗಿದೆ.
ಮಕ್ಕಳ ಮೇಲೆ ಹಲ್ಲೆ, ಲೈಂಗಿಕ ದೌರ್ಜನ್ಯ ನಡೆದಲ್ಲಿ, ಪೊಲೀಸ್ ಠಾಣೆಗೆ ಬಂದು ದೂರು ಸಲ್ಲಿಸಬೇಕಾಗಿಲ್ಲ. ಕೇವಲ ದೂರವಾಣಿ ಕರೆ ಮಾಡಿದರೆ ಸಾಕು ಎಂಬ ಅರಿವು ಜನಸಾಮಾನ್ಯರಲ್ಲಿ ಮೂಡಿಸಬೇಕಾಗಿದೆ. ಪೋಕ್ಸೋ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗುವುದು ಅತ್ಯಗತ್ಯ. ಅವಿಭಕ್ತ ಕುಟುಂಬಗಳು ಮರೆಯಾಗುತ್ತಿರುವ ಇಂದಿನ ದಿನಗಳಲ್ಲಿ, ಪತಿ – ಪತ್ನಿಯಿಬ್ಬರೂ
ದುಡಿಯಬೇಕಾದ ಅನಿವಾರ್ಯತೆಯಿಂದ ಜೀವನದ ಶೈಲಿ ಬದಲಾಗುತ್ತಿದೆ. ತಂದೆ – ತಾಯಿಗಳಿಗೆ ಕಚೇರಿ ಮತ್ತು ಮನೆಗಳಲ್ಲಿ ಕೆಲಸದ ಹೊರೆ, ಒತ್ತಡಗಳಿಂದ ಮಕ್ಕಳ ಬಾಲ್ಯದ ಮೇಲೂ ಅಡ್ಡಪರಿಣಾಮಗಳು ಬೀರುತ್ತವೆ.
ಮಕ್ಕಳ ಲಾಲನೆ – ಪಾಲನೆಯ ಹೊಣೆಯನ್ನು ಕೆಲಸದವಳಿಗೆ ಇಲ್ಲವೇ ಆಯಾಗಳಿಗೆ ವಹಿಸಲಾಗುತ್ತದೆ. ಕೆಲವೊಂದು ಬಾರಿ,
ಆಯಾಗಳು ಅಥವಾ ಪರಿಚಿತರಿಂದ ಅಪಹರಣಕ್ಕೊಳಗಾಗುವ, ಮಕ್ಕಳನ್ನು ಲೈಂಗಿಕವಾಗಿ ದುರ್ಬಳಕೆ ಮಾಡುವ ಮತ್ತು ಜೀತಕ್ಕಾಗಿ ಮಾರಲ್ಪಡುವ ಸಂಭವವೂ ಇಲ್ಲದಿಲ್ಲ. ಮಕ್ಕಳಿಗೆ ಎಳವೆಯಲ್ಲಿಯೇ ಕಲಿಕೆಯ ಹೆಸರಿನಲ್ಲಿ ಆವರಿಸಿಕೊಳ್ಳುವ ಒತ್ತಡವನ್ನು ಗಮನಿಸಿದಾಗ ಅವರ ಬಾಲ್ಯ, ಬಣ್ಣಗಳಿಲ್ಲದ ಕಾಮನಬಿಲ್ಲಿನಂತೆ ಕಾಣಿಸುತ್ತದೆ.
ಮಕ್ಕಳಿಗೆ ಶಾಲೆಯ ಹೋಮ್ ವರ್ಕ್, ಟ್ಯೂಶನ್‌ಗಳ ನಡುವೆ ಬಾಲ್ಯದ ಬಿಡುವೂ ಮರೆಯಾಗಿದೆ. ಇಷ್ಟು ಮಾತ್ರವಲ್ಲ, ಪೋಷಕರ
ಇಚ್ಚೆಗನುಸಾರವಾಗಿ ಪಠ್ಯೇತರ ಚಟುವಟಿಕೆಗಳು, ಹತ್ತಾರು ಸ್ಪರ್ಧೆಗಳು, ರಿಯಾಲಿಟಿ ಶೋಗಳಲ್ಲಿ ಭಾಗವಹಿಸುತ್ತಾ ಮಕ್ಕಳ ಮನಸ್ಸು ದೇಹಗಳೆರಡೂ ದಣಿಯುತ್ತವೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ, ಮಕ್ಕಳನ್ನು ಪೋಷಕರು ರೇಸ್ ಕೋರ್ಸ್‌ಗಳ ಕುದುರೆಗಳಂತೆ
ಭಾವಿಸದೆ, ಅವರೊಡನೆ ಗುಣಮಟ್ಟದ ಸಮಯ ಕಳೆದರೆ ಮಾತ್ರ ಮಕ್ಕಳ ನಾಳೆಗಳು ಸುಂದರವಾಗಲು ಸಾಧ್ಯ.
ರಜಾದಿನಗಳಲ್ಲೂ ಸಹ ಮಕ್ಕಳ ಸಮಯ, ಡಿಜಿಟಲ್ ಪರದೆಯ ಮನರಂಜನೆಗೆ ಸೀಮಿತವಾಗಿ ಕೌಟುಂಬಿಕ ಸಂಬಂಧಗಳು ತಮ್ಮ ಗಟ್ಟಿತನ ಕಳೆದುಕೊಳ್ಳುತ್ತಿವೆ. ಶಾಲೆಯಲ್ಲಿಯೂ ಅಮಾನವೀಯ ಎನಿಸುವ ರೀತಿಯಲ್ಲಿ ಕೆಲ ಶಿಕ್ಷಕರು, ಕಡಿಮೆ ಅಂಕ ಪಡೆದ ಮಕ್ಕಳಿಗೆ ದೈಹಿಕ ಹಿಂಸೆ ನೀಡುವುದರಿಂದ ಮಕ್ಕಳು ಶಾಲೆಯೆಂದರೆ, ಭಯಭೀತರಾಗುತ್ತಾರೆ. ಹೆತ್ತವರ ಮಧ್ಯೆ ನಡೆಯುವ
ಜಗಳ, ಕೌಟುಂಬಿಕ ಘರ್ಷಣೆಗಳು, ಸಹ ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ. ತಂದೆ – ತಾಯಂದಿರ ನಡುವೆ ವಿರಸ, ಹೆಚ್ಚಿನ ಅಂಕ ಗಳಿಸುವ ಒತ್ತಡಗಳೆ ಸೇರಿ ಕೆಲ ಮಕ್ಕಳು ಮನೆಬಿಟ್ಟು ಓಡಿ ಹೋಗುತ್ತಾರೆ.
ಮನೆಯಿಂದ ಓಡಿಹೋಗಿ ಬೇರೆ ದಾರಿಯಿಲ್ಲದೆ, ಮಿಲ್. ಬಾರ್, ಹೋಟೆಲ್‌ಗಳಲ್ಲಿ ಕೆಲಸದಲ್ಲಿ ತೊಡಗಿಕೊಂಡು ನರಳುತ್ತಾರೆ. ಮನೆ ಬಿಟ್ಟು ಹೋದ ಮಕ್ಕಳ ಅಂಗಾಂಗಳನ್ನು ತಿರುಚಿ ಬಿಕ್ಷಾಟನೆಗೆ ಹಚ್ಚುವ ಜಾಲವನ್ನು ಕುರಿತು ಮಾಧ್ಯಮಗಳಲ್ಲಿ
ಓದುತ್ತಿರುತ್ತೇವೆ. ದೇಶದಲ್ಲಿ ಪ್ರತಿ ವರ್ಷ ಸುಮಾರು ಒಂದೂವರೆ ಲಕ್ಷಕ್ಕೂ ಮಿಕ್ಕು ಮಕ್ಕಳು ಕಣ್ಮರೆಯಾಗುತ್ತಾರೆ ಎಂದು ಅಂಕಿ – ಅಂಶಗಳಿಂದ ನಿರೂಪಿತವಾಗಿದೆ.
ಮಕ್ಕಳ ಹಕ್ಕುಗಳ ಕುರಿತಂತೆ ಹೆಚ್ಚಿನ ಪ್ರಚಾರ ನೀಡುವ ಅಗತ್ಯವಿದೆ. ಅನಾಥ ಮಕ್ಕಳಿಗಾಗಿ ಇರುವ ಪುನರ್ವಸತಿ ವ್ಯವಸ್ಥೆ ಇತ್ಯಾದಿ ಅವಕಾಶಗಳ ಬಗ್ಗೆ ಸಮಾಜದ ಬಡಜನರಿಗೆ ಹೆಚ್ಚೆಚ್ಚು ಪರಿಚಯ ಆಗಬೇಕಿದೆ. 18 ವರ್ಷದೊಳಗಿನ ಮಕ್ಕಳಿಗಾಗಿ ಬಾಲ ನ್ಯಾಯ ಕಾಯಿದೆ ರೂಪುಗೊಂಡಿದೆ. ಅಶಕ್ತ ಮಕ್ಕಳಿಗಾಗಿ ಪುನರ್ವಸತಿ ಕೇಂದ್ರಗಳೂ ಇವೆ. ಯುವಜನತೆ ಇಂದು ಅಡ್ಡದಾರಿಯತ್ತ ಸಾಗುತ್ತಿದ್ದು, ಇವರಿಗೆ ನೈತಿಕ ಮೌಲ್ಯ ತುಂಬಬೇಕಾದ ಅವಶ್ಯಕತೆಯಿದೆ. ಎನ್‌ಎಸ್‌ಎಸ್ ಘಟಕಗಳು, ಸಮುದಾಯ ಸಂಘಟನೆ ಗಳು ಇತ್ತ ಹೆಚ್ಚಿನ ಗಮನಹರಿಸಬೇಕು.
ಬಾಲ್ಯಕಾಲದ ಸವಿನೆನಪುಗಳು ಜೀವಮಾನವಿಡೀ ಮನಸ್ಸಿನಲ್ಲಿ ಆಳವಾಗಿ ಬೇರೂರಿರುತ್ತವೆ. ಮಕ್ಕಳ ಮೇಲೆ ದೌರ್ಜನ್ಯಗಳ
ನಿವಾರಣೆಗೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಕಾನೂನುಗಳನ್ನು ರೂಪಿಸಲಾಗಿದೆ. ಅಂಗ ಸಂಸ್ಥೆಗಳ ಜತೆಗೆ, ಸಕಾರೇತರ ಸಂಸ್ಥೆಗಳೂ ಬಾಲಕಾರ್ಮಿಕರ ಸಮಸ್ಯೆಯನ್ನು ಕುರಿತು ಸಮಾಜದಲ್ಲಿ ತಿಳಿವಳಿಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ
ಮೂಡಿಸಬೇಕಾದ ಅಗತ್ಯವಿದೆ. ಮಕ್ಕಳ ಮೇಲಿನ ದೌರ್ಜನ್ಯ ಸಹಿಸತಕ್ಕ ವಿಷಯವಲ್ಲ. ಮಕ್ಕಳನ್ನು ಕುರಿತು ಚಿಂತನೆ – ಯೋಚನೆ ಗಳು, ಬಾಲದೌರ್ಜನ್ಯ ವಿರೋಧಿ ದಿನಾಚರಣೆಗೆ ಮಾತ್ರ ಸೀಮಿತವಾಗಿರದಿರಲಿ. ಈ ಆಚರಣೆ, ಇಡೀ ಸಮಾಜದ ಪ್ರತಿಯೊಂದು ಮನೆ ಮತ್ತು ಮನಸ್ಸುಗಳನ್ನು ಅನುಗಾಲವೂ ಆವರಿಸಲಿ.