Thursday, 12th December 2024

ಚಿಕ್ಕ ವಯಸ್ಸಲ್ಲೇ ಹೃದಯಾಘಾತ ಏಕೆ ?

ವೈದ್ಯ ವೈವಿಧ್ಯ

ಡಾ.ಎಚ್.ಎಸ್.ಮೋಹನ್

drhsmohan@gmail.com

ಕಳೆದ ಒಂದೂವರೆ ವರ್ಷಗಳಿಂದ ಜಗತ್ತನ್ನು ಕಾಡುತ್ತಿರುವ ಈ ಕೋವಿಡ್ ಕಾಯಿಲೆ ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಸಮಸ್ಯೆ ಮತ್ತಷ್ಟು ಬಿಗಡಾಯಿಸಲು ಕಾರಣವಾಗಿದೆ. ಕೋವಿಡ್ ಕಾಯಿಲೆಯು ಹೃದಯದ ರಕ್ತ ನಾಳಗಳಿಗೆ ವಿಪರೀತ ತೊಂದರೆ ಕೊಡುತ್ತದೆ.

ಪುನೀತ್ ರಾಜ್‌ಕುಮಾರ್ ಮರಣ ಜನತೆಯಲ್ಲಿ ತೀವ್ರ ದುಃಖ ಹುಟ್ಟಿಸಿದರೆ ವೈದ್ಯಕೀಯ ವಲಯ ದಲ್ಲಿ ಹಲವು ಚಿಂತನ ಮಂಥನದ ಸಂದರ್ಭ ಒದಗಿಸಿದೆ. ಕೇವಲ 46 ವರ್ಷಕ್ಕೇ ಪುನೀತ್‌ಗೆ ಇಷ್ಟು ಚಿಕ್ಕ ವಯಸ್ಸಿನಲ್ಲಿ ಹೃದಯಾಘಾತವೇ? ಹಾಗಾದರೆ ಚಿಕ್ಕ ವಯಸ್ಸಿ ನವರಲ್ಲಿ ಹೃದಯಾಘಾತ ಆಗಲು ಕಾರಣಗಳೇನು? – ಎಂಬ ಬಗ್ಗೆ ಜನಸಾಮಾನ್ಯರಲ್ಲಿ ಮೂಡಿದ ತೀವ್ರ ಸಂಶಯ ಮತ್ತು ಆತಂಕವನ್ನು ವೈದ್ಯರು ಪರಿಹರಿಸಬೇಕಿದೆ.

ಮೇಲಿನ ರೀತಿಯದ್ದೇ ಇನ್ನೊಂದು ಉದಾಹರಣೆ ಕೊಡುವುದಾದರೆ ಕಳೆದ ಸೆಪ್ಟೆಂಬರ್‌ನಲ್ಲಿ ಹಿಂದಿ ಚಿತ್ರರಂಗದ ಹೆಸರಾಂತ ನಟ ಸಿದ್ಧಾರ್ಥ ಶುಕ್ಲ ತಮ್ಮ 46ನೆಯ ವಯಸ್ಸಿನಲ್ಲಿಯೇ ಹೃದಯಾಘಾತದಿಂದ ಅಸು ನೀಗಿದರು. ಹಾಗಾಗಿ ಚಿಕ್ಕ ವಯಸ್ಸಿನವರಲ್ಲಿ ಹೃದಯಾಘಾತ – ಇದು ನಮ್ಮ ರಾಜ್ಯ, ದೇಶ ಮಾತ್ರವಲ್ಲದೆ ಜಗತ್ತಿನಾದ್ಯಂತ ಬಹು ಚರ್ಚೆಯಾಗುತ್ತಿರುವ ವಿಷಯವಾಗಿದೆ. ಆ ಬಗ್ಗೆ ಸ್ವಲ್ಪ ವಿಶ್ಲೇಷಿಸೋಣ. ಹೃದಯಾಘಾತ, ಹೃದಯ ವೈಫಲ್ಯ ಮತ್ತು ಇನ್ನಿತರ ಹೃದಯದ ಕಾಯಿಲೆಗಳು ಪ್ರಪಂಚದಾದ್ಯಂತ ತೀವ್ರ ರೀತಿಯ ಆರೋಗ್ಯ ಸಮಸ್ಯೆಗಳಾಗಿವೆ. ಆದರೆ ಇತ್ತೀಚೆಗೆ ಕೆಲವು ವರ್ಷಗಳಿಂದ ಕಡಿಮೆ ವಯಸ್ಸಿನವರು ಈ ರೀತಿಯ ಹಲವಾರು ಹೃದಯದ ಕಾಯಿಲೆಗೆ ಒಳಗಾಗುತ್ತಿದ್ದಾರೆ. ಇತ್ತೀಚೆಗೆ ವೈದ್ಯರು ಕಾರಣವನ್ನು ಭೇದಿಸಿದ್ದಾರೆ.

ಹೃದಯಾಘಾತ ಹಾಗೆಂದರೇನು ?: ಹಾರ್ಟ್ ಅಟ್ಯಾಕ್‌ನಲ್ಲಿ ಹೃದಯಕ್ಕೆ ಪೂರೈಕೆಯಾಗುವ ರಕ್ತ ನಾಳಗಳು ಕಟ್ಟಿಕೊಂಡು ಹೃದಯಕ್ಕೆ ತೀವ್ರ ರಕ್ತ ಕೊರತೆಯಾಗಿ ಅದು ಆಘಾತ ಅಥವಾ ಅಟ್ಯಾಕ್ ಗೆ ಒಳಗಾಗುತ್ತದೆ. ಈ ರೀತಿ ರಕ್ತ ನಾಳಗಳು ಕಟ್ಟಿಕೊಳ್ಳಲು ಮುಖ್ಯ ಕಾರಣ ಎಂದರೆ – ಕೊಬ್ಬಿನ ಅಂಶದ ತುಣುಕುಗಳು. ಹೆಚ್ಚಿನ ಸಂದರ್ಭಗಳಲ್ಲಿ ರಕ್ತದಲ್ಲಿನ ಕೊಲೆಸ್ಟರಾಲ್ ಅಂಶ ಹೆಚ್ಚಾದ ಕಾರಣ ಈ ರೀತಿಯ ಪ್ಲೇಕ್‌ಗಳು ನಿರ್ಮಾಣ ಗೊಂಡು ರಕ್ತನಾಳಗಳು ಮುಚ್ಚಿಕೊಂಡು ಹೃದಯಕ್ಕೆ ಅಗತ್ಯ ವಿರುವ ರಕ್ತ ಸಂಚಾರ ಸಂಪೂರ್ಣವಾಗಿ ನಿಂತುಬಿಡುತ್ತದೆ. ಪರಿಣಾಮ ಎಂದರೆ ಹೃದಯಾಘಾತವಾಗುತ್ತದೆ.

ಹೆಚ್ಚಿನ ಸಂದರ್ಭ ಹೃದಯಾಘಾತ ವ್ಯಕ್ತಿಯ ಮರಣಕ್ಕೆ ಕಾರಣವಾಗುತ್ತದೆ. ಚಿಕ್ಕವರಲ್ಲಿ ಆಗುವುದೇಕೆ? ಸಾಮಾನ್ಯವಾಗಿ ಎಲ್ಲರೂ ತಿಳಿದುಕೊಂಡಂತೆ ಹೃದಯಾಘಾತವು ವಯಸ್ಸಾದವರಲ್ಲಿ ಮತ್ತು ತೀವ್ರ ಹೃದಯ ಕಾಯಿಲೆ ಇರುವವರಲ್ಲಿ ಆಗುತ್ತದೆ. ಆದರೆ ಅದಕ್ಕೆ ವ್ಯತಿರಿಕ್ತವಾಗಿ ಚಿಕ್ಕ ವಯಸ್ಸಿನವರಲ್ಲಿ ಅಂದರೆ 30-40-45 ಈ ವಯಸ್ಸಿ ನವರಲ್ಲಿ ಆಗುತ್ತಿರುವುದು ಇತ್ತೀಚಿನ ವರ್ಷಗಳ ಬೆಳವಣಿಗೆ.

ಹೃದಯ ತಜ್ಞ ವೈದ್ಯರ ಪ್ರಕಾರ ಇಷ್ಟೇ ವಯಸ್ಸಿನಲ್ಲಿ ಹೃದಯಾಘಾತ ಆಗುತ್ತದೆ, ಆಗಬೇಕು ಎಂಬ ನಿಯಮವೇನಿಲ್ಲ. ಒಬ್ಬ ವ್ಯಕ್ತಿಯ ಜೀವನ ಶೈಲಿಯ ವಿಧಾನ, ಆಹಾರ ಕ್ರಮ, ವ್ಯಾಯಾಮ, ಆಟ ಓಟದ ಕ್ರಮಗಳು, ಹಾಗೆಯೇ ವ್ಯಕ್ತಿಗೆ ಉಂಟಾಗುವ ಮಾನಸಿಕ ಒತ್ತಡಗಳು – ಈ ಎಲ್ಲ ಅವಲಂಬಿಸಿ ಹೃದಯಾಘಾತ ಸಂಭವಿಸುತ್ತದೆ.

ಚಿಕ್ಕ ವಯಸ್ಸಿನವರು ಇತ್ತೀಚೆಗೆ ನಿಯಮಿತವಾಗಿ ಹೃದಯ ತಪಾಸಣೆ ಮಾಡಿಸುತ್ತಿಲ್ಲ. ಯಾವುದೇ ರೀತಿಯ ಹೃದಯದ ಆರೋಗ್ಯ ತಪಾಸಣೆ ಮೊದಲೇ ತೀವ್ರ ರೀತಿಯ ಜಿಮ್ನಾಸ್ಟಿಕ್ ಚಟುವಟಿಕೆಗಳಲ್ಲಿ ತೊಡಗಿ ಕೊಂಡಿರುತ್ತಾರೆ. ಹಾಗೆಯೇ ಜಿಮ್‌ನಲ್ಲಿ ಭಾರ ಎತ್ತುವ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ. ಇದು ಹೃದಯದ ಹೊರಗಿನ ಮಾಂಸಖಂಡಗಳ ದಪ್ಪವನ್ನು ಹೆಚ್ಚಿಸುತ್ತದೆ. ಈ ರೀತಿ ಚಟುವಟಿಕೆ ಗಳಲ್ಲಿ ತೊಡಗಿರುವ ಕೆಲವು ವ್ಯಕ್ತಿಗಳು ದೇಹಕ್ಕೆ ಸಪ್ಲಿಮೆಂಟ್ಸ್ ಎಂಬ ಔಷಧಗಳನ್ನು ಸೂಕ್ತ ವೈದ್ಯರ ಸಲಹೆ ಇಲ್ಲದೆ ಸೇವಿಸುತ್ತಾರೆ. ಅದು ಹೃದಯಕ್ಕೆ ನಷ್ಟ ಉಂಟು ಮಾಡುತ್ತದೆ.

ಹಾಗಾಗಿ ಹೃದಯದಲ್ಲಿ ಅರೀತ್ ಮಿಯಾ ಅಥವಾ ಹೃದಯದ ಬಡಿತದಲ್ಲಿ ತೀವ್ರವಾದ ಏರು ಪೇರು ಉಂಟಾಗುತ್ತದೆ ಎಂದು ಖ್ಯಾತ ಹೃದಯ ತಜ್ಞ ವೈದ್ಯರ ಅಭಿಪ್ರಾಯ. ಇನ್ನೊಬ್ಬ ಹೃದಯ ತಜ್ಞರ ಪ್ರಕಾರ – ಒಬ್ಬ ವ್ಯಕ್ತಿ 20- 25 ವರ್ಷದವನಾದಾಗ ದೇಹದಲ್ಲಿ ಹೆಚ್ಚಿನ ಕೊಲೆಸ್ಟರಾಲ್ ಅಂಶ ಅಥವಾ ಜೆನೆಟಿಕ್ ಕಾರಣಗಳಿಂದ ಹೃದಯದ ರಕ್ತ ನಾಳಗಳಲ್ಲಿ ಸಣ್ಣ ಪ್ರಮಾಣದ ಅಡಚಣೆ ಆರಂಭವಾಗುತ್ತದೆ. ಅದೇ ವ್ಯಕ್ತಿಗೆ ನಂತರ ಒಮ್ಮೆಗೇ ಮನಸ್ಸಿಗೆ ತೀವ್ರ ಒತ್ತಡ ತರುವ ಘಟನೆ ನಡೆದರೆ, ದೇಹವನ್ನು ಸರಿಯಾಗಿ ತಯಾರು ಮಾಡದೆ ವಿಪರೀತ ದೈಹಿಕ ಚಟುವಟಿಕೆ ಕೈಗೊಂಡರೆ ಅಥವಾ ದೇಹಕ್ಕೆ ತೀವ್ರ ಸೋಂಕು ಒಮ್ಮೆಲೇ ಬಂದರೆ ಹೃದಯ ಅತೀವ ಒತ್ತಡಕ್ಕೆ ಒಳಗಾಗುತ್ತದೆ.

ಪರಿಣಾಮ ರಕ್ತ ನಾಳಗಳ ಈಗಾಗಲೇ ಇರುವ ಸಣ್ಣ ಅಡಚಣೆಯು ತೀವ್ರವಾಗಿ ಘನೀ ಕೃತಗೊಂಡು ಹೃದಯದ ರಕ್ತ ನಾಳಗಳು ಒಮ್ಮೆಲೇ ಮುಚ್ಚಿಕೊಂಡು ತೀವ್ರ ರೀತಿಯ ಹೃದಯಾಘಾತವಾಗುತ್ತದೆ. ಇತ್ತೀಚೆಗೆ ಎಲ್ಲ ವಯಸ್ಸಿನವರಲ್ಲಿಯೂ ಹೃದಯದ ಕಾಯಿಲೆ ಹೆಚ್ಚುತ್ತಿರು ವುದು ಮತ್ತೊಂದು ಕಾರಣ. ಅಷ್ಟೇ ಅಲ್ಲದೆ ಕಳೆದ ಒಂದೂವರೆ ವರ್ಷಗಳಿಂದ ಜಗತ್ತನ್ನು ಕಾಡುತ್ತಿರುವ ಈ ಕೋವಿಡ್ ಕಾಯಿಲೆ ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಸಮಸ್ಯೆ ಮತ್ತಷ್ಟು ಬಿಗಡಾಯಿಸಲು ಕಾರಣವಾಗಿದೆ.

ಕೋವಿಡ್ ಕಾಯಿಲೆಯು ಹೃದಯದ ರಕ್ತ ನಾಳಗಳಿಗೆ ವಿಪರೀತ ತೊಂದರೆ ಕೊಡುತ್ತದೆ. ಯಾವುದೇ ಕಾರಣದಿಂದಲಾದರೂ ಹೃದಯದ ಬಡಿತ ವ್ಯತ್ಯಾವಾದರೆ ವೈದ್ಯ ಭಾಷೆಯಲ್ಲಿ ಇದನ್ನು Ventricular fibrillation ನ್ನುತ್ತಾರೆ. ಚಿಕ್ಕ ವಯಸ್ಸಿನಲ್ಲಿ ಬರುವ ಮರಣಕ್ಕೆ ಕೆಲವು ಹೃದಯ ತಜ್ಞರು ಈ ಕೆಳಗಿನ ಕಾರಣಗಳನ್ನು ಗುರುತಿಸಿದ್ದಾರೆ.

೧. ಹೈಪರ್ ಟ್ರೋಪಿಕ್ ಕಾರ್ಡಿಯೋಮಯೋ ಪತಿ(HCM): ಇದು ವ್ಯಕ್ತಿಯ ಜೆನೆಟಿಕ್ ಕಾರಣಗಳಿಂದ ಬರುತ್ತದೆ. ಇದರಲ್ಲಿ ಹೃದಯದ ಮಾಂಸಖಂಡಗಳು ದಪ್ಪಗಾಗುತ್ತವೆ. ಪರಿಣಾಮ ಎಂದರೆ ಹೃದಯದ ಎಲೆಕ್ಟ್ರಿಕಲ್ ವ್ಯವಸ್ಥೆ ಏರು ಪೇರಾಗುತ್ತದೆ. ಆಗ ಹೃದಯ ತೀವ್ರ ಗತಿಯಲ್ಲಿ ಅಥವಾ ಅನಿಯಮಿತ (arrhythmias) ಬಡಿದುಕೊಳ್ಳಲು ಆರಂಭಿಸುತ್ತದೆ. ಕೆಲವರಲ್ಲಿ ಮರಣಕ್ಕೆ ಕಾರಣವಾಗಬಹುದು. ಎಲ್ಲಾ ಸಂದರ್ಭ ಗಳಲ್ಲೂ ಮರಣ ಬರದಿರಬಹುದು.

ಆದರೆ 30 ಕ್ಕೂ ಕಡಿಮೆ ವಯಸ್ಸಿನವರಲ್ಲಿ ಮರಣ ಸಂಭವಿಸಿಲು ಇದು ಬಹಳ ಮುಖ್ಯ ಕಾರಣ ಎನ್ನಲಾಗಿದೆ. ಅದರಲ್ಲೂ ಅಥ್ಲೀಟ್ ಗಳಲ್ಲಿ ಹಾಗೂ ವಿವಿಧ ಆಟಗಳಲ್ಲಿ ತೊಡಗಿಕೊಂಡವರಲ್ಲಿ ಸಂಭವಿಸುವ ದಿಢೀರ್ ಮರಣಕ್ಕೆ ಇದೇ ಕಾರಣ. ಹೆಚ್ಚಿನ ಸಂದರ್ಭಗಳಲ್ಲಿ ಈ ಕಾಯಿಲೆ ಪತ್ತೆಯಾಗುವುದಿಲ್ಲ ಎಂಬುದು ದುರದೃಷ್ಟಕರ.

೨) ಹೃದಯದ ರಕ್ತ ನಾಳಗಳ ತೊಂದರೆಗಳು : ಅಸಹಜವಾಗಿ ಜೋಡಿಸಲ್ಪಟ್ಟ ರಕ್ತ ನಾಳಗಳು (arteries) ಕೆಲವರಲ್ಲಿ ಹುಟ್ಟಿ ನಿಂದಲೇ ಇರಬಹುದು. ತೀವ್ರ ರೀತಿಯ ವ್ಯಾಯಾಮ ಅಥವಾ ಆಟಗಳ ಸಮಯದಲ್ಲಿ ಈ ರಕ್ತ ನಾಳಗಳು ಒತ್ತಲ್ಪಡುತ್ತವೆ ಅಥವಾ ಕಿರಿದಾಗುತ್ತವೆ. ಪರಿಣಾಮ ಎಂದರೆ ಹೃದಯಕ್ಕೆ ರಕ್ತ ಪೂರೈಕೆ ದಿಢೀರ್ ಕಡಿಮೆಯಾಗಿ ಹೃದಯಾಘಾತವಾಗುತ್ತದೆ.

೩) ದೀರ್ಘವಾದ ಕ್ಯೂ ಟಿ ಸಿಂಡ್ರೋಮ್: ಮನೆತನದ ಬಳುವಳಿಯಾಗಿ ಬರುವ ಈ ಕಾಯಿಲೆಯಲ್ಲಿ ವೇಗವಾದ ಮತ್ತು ವಿಚಿತ್ರ ರೀತಿಯ ಹೃದಯದ ಬಡಿತ ವಿರುತ್ತದೆ. ಇಂತಹವರು ಆಗಾಗ ಮೂರ್ಛೆ ಹೋಗುತ್ತಾರೆ. ಈ ರೀತಿಯ ಕಾಯಿಲೆ ಇರುವ ಚಿಕ್ಕ ವಯಸ್ಸಿನವರಲ್ಲಿ ಒಮ್ಮೆಲೇ ಮರಣ ಬರುವ ಸಂಭವ ತುಂಬಾ ಜಾಸ್ತಿ. ಚಿಕ್ಕ ವಯಸ್ಸಿನಲ್ಲಿ ಹೃದಯದ ಕಾರಣದಿಂದ ಮರಣ ಹೊಂದುವ ಇನ್ನಿತರ ಕಾರಣಗಳೆಂದರೆ – ಹೃದಯದಲ್ಲಿ ಮೊದಲಿನಿಂದ ಇದ್ದು ಬಹಳ ಕಾಲದವರೆಗೆ ಗೊತ್ತಿಲ್ಲದ ಹೃದಯದ ಮೂಲ ಭೂತ ಸ್ವರೂಪದಲ್ಲಿಯೇ ಇರುವ ಸಮಸ್ಯೆ (Structural abnormalities) ಮತ್ತು ಹೃದಯದ ಮಾಂಸಖಂಡಗಳಲ್ಲಿನ ವಿವಿಧ ರೀತಿಯ ಊನಗಳು ಹಾಗೂ ವೈರಸ್ ಮತ್ತಿತರ ಕಾರಣಗಳಿಂದ ಹೃದಯದ ಮಾಂಸಖಂಡಗಳಲ್ಲಿ ಉರಿಯೂತದ (Inflammation)ಕಾಯಿಲೆಗಳು ಬಂದಾಗ.

ಅಪರೂಪಕ್ಕೆ ಕೆಲವೊಮ್ಮೆ ಹೀಗೂ ಆಗ ಬಹುದು. ಹಾಕಿ ಅಥವಾ ಇನ್ನಿತರ ಆಟಗಳಲ್ಲಿ ತೊಡಗಿಕೊಂಡಿದ್ದಾಗ ಎದೆಯ ಭಾಗಕ್ಕೆ ತೀವ್ರ ಹೊಡೆತ ಬಿದ್ದಾಗ ಹೃದಯದ ಎಲೆಕ್ಟ್ರಿಕಲ್ ಸೈಕಲ್ ನ ಒಂದು ನಿರ್ದಿಷ್ಟ ಸಮಯದಲ್ಲಿ ಏಟು ಬಿದ್ದಾಗ Ventricular fibrillation ಗೆ ತಿರುಗಿ ವ್ಯಕ್ತಿ ಕೂಡಲೇ ಮರಣ ಹೊಂದುತ್ತಾನೆ.

ಹೆಚ್ಚಿನ ಸಂದರ್ಭಗಳಲ್ಲಿ ಈ ತರಹದ ಮರಣಗಳು ಏನೂ ಪೂರ್ವ ಸೂಚನೆ ಕೊಡದೆ ಬರುತ್ತವೆ. ಆದರೆ ಕೆಲವರಲ್ಲಿ ಕೆಲವೊಮ್ಮೆ ಏನೂ ಕಾರಣವಿಲ್ಲದೆ ಎಚ್ಚರ ತಪ್ಪುವ ಲಕ್ಷಣ ಕಾಣಿಸಿಕೊಳ್ಳುತ್ತದೆ. ಯಾವುದೋ ದೈಹಿಕ ಚಟುವಟಿಕೆಯಲ್ಲಿ ತೊಡಗಿರುವಾಗ ಇದು ಸಂಭವಿಸಿದರೆ ಹೃದಯಕ್ಕೆ ತೀವ್ರವಾದ ಸಮಸ್ಯೆಯಿದೆ ಎಂದರ್ಥ.

ಹಾಗೆಯೇ ಕುಟುಂಬದಲ್ಲಿ ಯಾರಾದರೂ ೫೦ ವರ್ಷದ ಮೊದಲೇ ಕಾರಣವಿಲ್ಲದೆ ಮರಣ ಹೊಂದಿದ್ದರೆ, ಈತನಿಗೆ ಸಹಿತ ಆತರಹದ ರಿಸ್ಕ್ ನ ಸಂಭವ ಜಾಸ್ತಿ. ದೈಹಿಕ ಚಟುವಟಿಕೆಯಲ್ಲಿ ತೊಡಗಿರುವಾಗ ಒಮ್ಮೆಲೇ ಉಸಿರು ಕಟ್ಟುವುದು, ಎದೆನೋವು ಕಾಣಿಸಿಕೊಳ್ಳುವುದು ಈ ತರಹದ ಲಕ್ಷಣಗಳು ಕಂಡು ಬಂದರೆ ಹೃದಯದ ಸಮಸ್ಯೆಯಂದೇ ಅರ್ಥ.

ಚಿಕ್ಕವರಲ್ಲಿ ಹೃದಯದ ಕಾಯಿಲೆ ಕಾಣಿಸಿದಾಗ ನಿಯಮಿತ ವ್ಯಾಯಾಮ, ಆರೋಗ್ಯಯುತ ಆಹಾರ ಸೇವನೆ ಇವಿಷ್ಟೇ ಮುಖ್ಯವೇ? ಅಥವಾ ಜೆನೆಟಿಕ್ ಅಂಶಗಳ ಪಾತ್ರವಿದೆಯಾ? ಹೌದು, ವ್ಯಾಯಾಮ, ಆಹಾರವು ಕಾಯಿಲೆಗೆ ಕಾರಣವಾಗುವ ರಿಸ್ಕ್ ಅಂಶಗಳಾದ ಡಯಾಬಿಟಿಸ್, ಏರುರಕ್ತದೊತ್ತಡ, ಹೆಚ್ಚಿನ ಕೊಲೆಸ್ಟರಾಲ್ ಮಟ್ಟ, ಹೆಚ್ಚಿನ ಸಕ್ಕರೆಯ ಅಂಶ- ಇವು ಬರದಿರುವಂತೆ ಸಹಾಯ ಮಾಡು ತ್ತವೆ. ಆದರೆ ಕಡಿಮೆ ವಯಸ್ಸಿನಲ್ಲಿ ಹೃದಯ ಕಾಯಿಲೆ ಇತ್ತೀಚಿನ ವರ್ಷಗಳಲ್ಲಿ ತುಂಬಾ ಜಾಸ್ತಿಯಾಗುತ್ತಿರುವುದರಿಂದ ಇವೆಲ್ಲವನ್ನೂ ಮೀರಿದ ಅಂಶಗಳಿವೆ ಎಂದು ಹೃದಯ ತಜ್ಞ ಡಾ ಪಿಳ್ಳೈ ಅಭಿಪ್ರಾಯ ಪಡುತ್ತಾರೆ.

ಭಾರತದ ಗಮನಾರ್ಹ ಸಂಖ್ಯೆಯ ಜನರಲ್ಲಿ ಮೊದಲು ತಿಳಿಸಿದ ಹಲವಾರು ಕಾಯಿಲೆ, ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಭಲವಾದ ಜೆನೆಟಿಕ್ ಅಂಶಗಳು ಕಾರಣವಾಗುತ್ತವೆ. ನಂತರದ ಪರಿಣಾಮ ಎಂದರೆ ಹೆಚ್ಚಿನ ಪ್ರಮಾಣದ ಹೃದಯ ಮತ್ತು ರಕ್ತ ನಾಳಗಳ ಕಾಯಿಲೆ ಗಳು. ಇದು ಹೆಚ್ಚಿನ ಸಂದರ್ಭಗಳಲ್ಲಿ ವ್ಯಕ್ತಿಯ ತಾಯಿಯ ಕಡೆಗಿಂತ ತಂದೆಯ ಕಡೆಯಿಂದ ಬರುತ್ತದೆ ಎಂದು ಅವರ ಅಭಿಮತ. ಜೆನೆಟಿಕ್ ಅಂಶ ಕಾರಣವಾದಾಗ ಹಿಂದಿನ ಪೀಳಿಗೆಯಲ್ಲಿ ಕಂಡು ಬಂದ ವಯಸ್ಸಿಗಿಂತ 8-10 ವರ್ಷ ಮೊದಲು ಈ ಪೀಳಿಗೆಯಲ್ಲಿ ಅಂದರೆ ಚಿಕ್ಕ ವಯಸ್ಸಿನವರಲ್ಲಿ ಬರಲು ಕಾರಣವಾಗುತ್ತದೆ. ಹಾಗಾದಾಗ ಹೃದಯದ ಕಾಯಿಲೆ ಬರದಿರು ವಂತೆ ಮಾಡಲು ವೈದ್ಯರಿಂದ ಸಾಧ್ಯವಿಲ್ಲ. ಆದರೆ ಅದರ ಕೆಲವು ರಿಸ್ಕ್ ಅಂಶಗಳ ಬಗ್ಗೆ ಗಮನ ಹರಿಸಬಹುದು.

ಮಾನಸಿಕ ಒತ್ತಡದ ಪಾತ್ರವಿದೆಯೇ ? : ಹೆಚ್ಚಿನ ಸಂದರ್ಭಗಳಲ್ಲಿ ಹೃದಯದ ಕಾಯಿಲೆಗಳು ಮಾನಸಿಕ ಒತ್ತಡ ಮತ್ತು ಚಿಂತೆ – ಇವುಗಳೊಂದಿಗೆ ಸಂಬಂಧ ಹೊಂದಿವೆ. ಹಲವಾರು ಅಧ್ಯಯನಗಳ ಪ್ರಕಾರ ದೀರ್ಘ ಕಾಲದ ಮಾನಸಿಕ ಒತ್ತಡ ಮತ್ತು ಚಿಂತೆಯ ಪರಿಣಾಮವಾಗಿ ದೇಹದಲ್ಲಿ ಅತೀ ಹೆಚ್ಚಿನ ಪ್ರಮಾಣದ ಕಾರ್ಟಿಸೋಲ್ ಹಾರ್ಮೋನ್ ಸ್ರವಿಸಲ್ಪಡುತ್ತದೆ. ಅದು ರಕ್ತದಲ್ಲಿನ ಕೊಲೆಸ್ಟರಾಲ್ ಮತ್ತು ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ, ಏರು ರಕ್ತದೊತ್ತಡ ಬರುವ ಸಾಧ್ಯತೆ ಜಾಸ್ತಿ ಮಾಡುತ್ತದೆ. ಇವೆಲ್ಲವೂ ಹೃದಯದ ಕಾಯಿಲೆಯ ರಿಸ್ಕ್ ಅಂಶಗಳು.

ಚಿಕ್ಕ ವಯಸ್ಸಿನವರಲ್ಲಿ ತಮ್ಮ ಕೆಲಸ, ಅದರಲ್ಲಿನ ಪ್ರಾವೀಣ್ಯತೆ, ನಗರ ವಾಸದಿಂದ ಉಂಟಾಗುವ ಒತ್ತಡ, ಜೀವನ ಶೈಲಿ – ಇವೆಲ್ಲವೂ ಧೂಮಪಾನ, ಮದ್ಯಪಾನ, ಅನಾರೋಗ್ಯಕರ ಆಹಾರ ಕ್ರಮಗಳಿಗೆ ಕಾರಣವಾಗುತ್ತವೆ. ಇವೆಲ್ಲವೂ ಹೃದಯದ ಮೇಲೆ ಒತ್ತಡ ಹೇರಿ ಹೃದಯಾಘಾತ ಆಗಬಹುದು, ಹೃದಯದಲ್ಲಿ ಅರೀತ್ ಮಿಯಾಕ್ಕೆ ಕಾರಣವಾಗಬಹುದು.

ಮುಂಜಾಗ್ರತೆಯ ಕ್ರಮಗಳು : ಕುಳಿತೇ ಕೆಲಸ ಮಾಡುವ ಜೀವನ ಶೈಲಿಯನ್ನು ಬದಲಿಸುವುದು, ನಿಯಮಿತವಾದ ವ್ಯಾಯಾಮ ಮಾಡುವುದು, ಸಕ್ಕರೆ ಅಂಶವನ್ನು ಹೆಚ್ಚಾಗಿ ಸೇವಿಸದಿರುವುದು, ರಕ್ತದಲ್ಲಿ ಕೊಬ್ಬಿನ ಅಂಶ ಜಾಸ್ತಿಯಾಗದಿರುವಂತೆ ನಿಯಂತ್ರಿಸು ವುದು, ಧೂಮಪಾನ, ಮದ್ಯಪಾನ ತ್ಯಜಿಸುವುದು – ಮುಖ್ಯವಾದ ಈ ಅಂಶಗಳನ್ನು ಸರಿಯಾಗಿ ಪಾಲಿಸಿದರೆ ಹೃದಯಾಘಾತ ಬರುವ ಸಾಧ್ಯತೆ ತುಂಬಾ ಕಡಿಮೆ ಮಾಡಬಹುದು.