Sunday, 15th December 2024

ಹೃದಯದ ಕಾಯಿಲೆಗಳು: ತಪ್ಪು ಕಲ್ಪನೆಗಳು

ವೈದ್ಯ ವೈವಿಧ್ಯ

ಡಾ.ಎಚ್.ಎಸ್. ಮೋಹನ್

ಜಗತ್ತಿನಾದ್ಯಂತ ಮಾನವನ ಮರಣಕ್ಕೆ ಹೃದಯದ ಕಾಯಿಲೆಗಳು ಹೆಚ್ಚು ಕಾರಣ. ಒಂದು ಅಂದಾಜಿನ ಪ್ರಕಾರ ವರ್ಷಂಪ್ರತಿ
ಹೃದಯ ಸಂಬಂಽ ಕಾಯಿಲೆಗಳಿಂದ ೧೮ ಮಿಲಿಯನ್ ಜನರು ಮರಣಕ್ಕೆ ತುತ್ತಾಗುತ್ತಿದ್ದಾರೆ.

ಅಮೆರಿಕದ ಸಿಡಿಸಿಯ ಪ್ರಕಾರ ಹೃದಯ ಮತ್ತು ರಕ್ತ ನಾಳ ಸಂಬಂಧಿ ಕಾಯಿಲೆಗಳಿಂದ ಜಗತ್ತಿನಾದ್ಯಂತ ಪ್ರತಿ ೩೬ ಸೆಕೆಂಡಿಗೆ
ಒಬ್ಬರಂತೆ ಮರಣ ಹೊಂದುತ್ತಾರೆ. ಅಮೆರಿಕದಲ್ಲಿ ಪ್ರತಿ ಮರಣದಲ್ಲಿ ಒಂದು ಮರಣ ಈ ಕಾಯಿಲೆಯಿಂದ ಎಂದು ಹೇಳಲಾಗಿದೆ. ಅದೇ ಜಗತ್ತಿನ ಇತರೆಡೆ ಆ ಸಂಖ್ಯೆ ಪ್ರತಿ ಮರಣದಲ್ಲಿ ಒಂದು ಇರಬಹುದು ಎಂದು ಒಂದು ಅಂದಾಜು. ಈ ಹೃದಯದ ಕಾಯಿಲೆಗಳ ಬಗ್ಗೆ ಹಲವು ತಪ್ಪು ಕಲ್ಪನೆಗಳಿವೆ. ಅವುಗಳ ಬಗ್ಗೆ ಒಂದು ನೋಟ ಹರಿಸೋಣ.

ತಪ್ಪು ಕಲ್ಪನೆ – ಯುವಕ ಯುವತಿಯರು ಹೃದಯದ ಕಾಯಿಲೆಯ ಬಗ್ಗೆ ಚಿಂತಿಸುವ ಅಗತ್ಯವಿಲ್ಲ: ಹೃದಯದ ಕಾಯಿಲೆ ೬೫
ವರ್ಷದವರಿಗಿಂತ ಹೆಚ್ಚಿನ ವಯಸ್ಸಿನವರಲ್ಲಿ ಕಾಣಿಸಿಕೊಳ್ಳುವುದು ಜಾಸ್ತಿಯಾದರೂ ಶೇ.೪ – ೧೦ ಜನರಲ್ಲಿ ೪೫ ವರ್ಷದವರಿ ಗಿಂತ ಕಡಿಮೆ ವಯಸ್ಸಿನವರಲ್ಲಿ ಹೃದಯಾಘಾತವಾಗುತ್ತದೆ. ಇದರಲ್ಲಿ ಹೆಚ್ಚಿನವರು ಪುರುಷರು. ಇದಕ್ಕಿಂತ ಮುಖ್ಯವಾಗಿ ನಾವು ಮಕ್ಕಳು, ಹದಿಹರೆಯದವರು ಮತ್ತು ವಯಸ್ಕರ ಹಂತಗಳಲ್ಲಿ ಹೇಗೆ ಜೀವನ ಮಾಡಿದ್ದೇವೆ ಎಂಬುದರ ಮೇಲೆ ನಮಗೆ
ವಯಸ್ಸಾದ ಮೇಲೆ ಹೃದಯದ ಕಾಯಿಲೆ ಬರುವುದು ಅವಲಂಬಿತವಾಗಿರುತ್ತದೆ.

ಉದಾಹರಣೆಗೆ ಕೊಬ್ಬಿನ ಅಂಶ ಜಾಸ್ತಿ ಇರುವ ಆಹಾರ ಸೇವಿಸುವುದರಿಂದ, ಧೂಮಪಾನ ಮಾಡುವುದರಿಂದ ವಯಸ್ಸಾದ ಮೇಲೆ
ನಮಗೆ ಹೃದಯದ ಕಾಯಿಲೆ ಬರುವ ಸಂಭವ ಜಾಸ್ತಿ ಇರುತ್ತದೆ. ಹಾಗಾಗಿ ಚಿಕ್ಕ ವಯಸ್ಸಿನಲ್ಲಿ ಬೆಳೆಸಿಕೊಂಡ ಜೀವನ ಶೈಲಿ ಮತ್ತು ಆಹಾರ ಕ್ರಮ ಇಳಿ ವಯಸ್ಸಿನಲ್ಲಿ ನಮ್ಮ ಹೃದಯದ ಆರೋಗ್ಯಕ್ಕೆ ತುಂಬಾ ಮುಖ್ಯ ವಾಗುತ್ತದೆ.

ಕೆಲವು ಮುಂದುವರಿದ ದೇಶಗಳಲ್ಲಿ ಉದಾಹರಣೆಗೆ ಅಮೆರಿಕದಲ್ಲಿ ೧೯೭೦ರಿಂದೀಚೆಗೆ ಹೃದಯದ ಕಾಯಿಲೆಯಿಂದ ಮರಣಿಸುವವರ ಸಂಖ್ಯೆ ಕಡಿಮೆ ಆಗುತ್ತಾ ಬರುತ್ತಿದೆ. ಅಮೆರಿಕದಲ್ಲಿ ಕೈಗೊಂಡ ಒಂದು ಅಧ್ಯಯನದ ಪ್ರಕಾರ ೨೦೧೦ ಮತ್ತು ೨೦೧೫ರ ನಡುವೆ ೩೫ – ೬೪ ವರ್ಷದವರಲ್ಲಿ ಕಾಣಿಸಿಕೊಳ್ಳುವ ಹೃದಯದ ಕಾಯಿಲೆ ಶೇ.೫೦ಕ್ಕಿಂತ ಜಾಸ್ತಿಯಾಗಿದೆ.

೨: ಹೃದಯದ ಕಾಯಿಲೆ ಇದ್ದವರು ದೈಹಿಕ ವ್ಯಾಯಾಮ ಮಾಡಬಾರದು: ಇದು ತುಂಬಾ ತಪ್ಪು ಕಲ್ಪನೆ. ದೈಹಿಕ ವ್ಯಾಯಾಮವು ಹೃದಯದ ಮಾಂಸಖಂಡಗಳನ್ನು ಗಟ್ಟಿಗೊಳಿಸುತ್ತದೆ. ಹಾಗೆಯೇ ದೇಹದಲ್ಲಿ ರಕ್ತಚಲನೆ ಜಾಸ್ತಿಯಾಗಲು ಸಹಾಯ ಮಾಡುತ್ತದೆ. ೨೦೨೦ರ ಆಗಸ್ಟ್‌ನಲ್ಲಿ ಯುರೋಪಿಯನ್ ಸೊಸೈಟಿ ಆಫ್ ಕಾರ್ಡಿಯಾಲಜಿ ಹೃದಯ ಕಾಯಿಲೆ
ಇದ್ದವರಿಗೆ ದೈಹಿಕ ವ್ಯಾಯಾಮದ ಬಗ್ಗೆ ಒಂದು ಮಾರ್ಗಸೂಚಿಯನ್ನು ಪ್ರಕಟಿಸಿತು.

ಅದರ ಪ್ರಕಾರ ದೈಹಿಕ ವ್ಯಾಯಾಮವು ಇಂತಹವರಲ್ಲಿ ಹೃದಯಾಘಾತ ಅಥವಾ ಕಾರ್ಡಿಯಾಕ್ ಅರೆಸ್ಟ್ ಉಂಟು ಮಾಡುವ
ಸಾಧ್ಯತೆ ತುಂಬಾ ಕಡಿಮೆ. ಆದರೆ ಹೃದಯದ ಕಾಯಿಲೆಯ ಮುಂದುವರಿದ ಹಂತದಲ್ಲಿರುವವರು ಹಾಗೂ ಆ ಕಾಯಿಲೆಯಿಂದ ದೈಹಿಕವಾಗಿ ಚಲನೆ ಮಾಡದಿರುವವರು ತಮ್ಮ ವೈದ್ಯರ ಸಲಹೆಯ ಪ್ರಕಾರ ನಡೆದುಕೊಳ್ಳಬೇಕು.

೩ – ನಾನು ಕೊಲೆಸ್ಟರಾಲ್ ಕಡಿಮೆ ಮಾಡುವ ಔಷಧ ತೆಗೆದುಕೊಳ್ಳುತ್ತೇನೆ, ಹಾಗಾಗಿ ನಾನು ನನಗೆ ಬೇಕಾದ ಆಹಾರವನ್ನು ಸೇವಿಸಬಹುದು: ಸ್ಟಾಟಿನ್ ರೀತಿಯ ಔಷಧಗಳು ರಕ್ತದಲ್ಲಿ ಕೊಲೆಸ್ಟರಾಲ್ ಮಟ್ಟವನ್ನು ಕಡಿಮೆ ಮಾಡುತ್ತವೆ. ಹಾಗೆಂದು ಈ ಔಷಧ ತೆಗೆದುಕೊಳ್ಳುವವರು ಕೊಬ್ಬಿನಂಶ ಜಾಸ್ತಿ ಇರುವ ಆಹಾರವನ್ನು ಬೇಕಾಬಿಟ್ಟಿ ಸೇವಿಸಬಹುದು ಎಂದೇನಿಲ್ಲ. ಸಾಮಾನ್ಯವಾಗಿ ಕೊಲೆಸ್ಟರಾಲ್ ನಮ್ಮ ಆಹಾರದಿಂದ ನಮಗೆ ದೊರಕುತ್ತದೆ ಅಥವಾ ಲಿವರ್‌ನಲ್ಲಿ ಉತ್ಪನ್ನ
ವಾಗುತ್ತದೆ. ಸ್ಟಾಟಿನ್ ರೀತಿಯ ಔಷಧಗಳು ಲಿವರ್‌ನಲ್ಲಿ ಕೊಲೆಸ್ಟರಾಲ್ ಉತ್ಪಾದಿಸಲು ಅಗತ್ಯವಿರುವ ಎಂಜೈಮ್ ನ್ನು ತಡೆಹಿಡಿಯುತ್ತವೆ. ಹಾಗಾಗಿ ಒಟ್ಟಾರೆ ಕೊಲೆಸ್ಟರಾಲ್ ಮಟ್ಟ ಕಡಿಮೆಯಾಗುತ್ತದೆ. ಇದರರ್ಥ ಆಹಾರದ ಮೂಲಕ ದೇಹದೊಳಗೆ ಹೋದ ಕೊಲೆಸ್ಟರಾಲ್ ರಕ್ತದಲ್ಲಿ ಅದರ ಮಟ್ಟವನ್ನು ಹೆಚ್ಚಿಸಬಲ್ಲದು.

ಕಳಪೆ ಗುಣಮಟ್ಟದ ಆಹಾರದ ಅವಗುಣಗಳನ್ನು ಸ್ಟಾಟಿನ್‌ಗಳು ಸ್ವಲ್ಪ ಮಟ್ಟಿಗೆ ತಪ್ಪಿಸಬಹುದು. ಆದರೆ ಕಳಪೆ ಗುಣಮಟ್ಟದ ಆಹಾರವು ಸ್ಥೂಲಕಾಯ, ಏರುರಕ್ತದೊತ್ತಡ ಮತ್ತು ಡಯಾಬಿಟಿಸ್‌ಗಳಿಂದ ಬರುವ ಹೃದಯದ ಕಾಯಿಲೆಗಳ ರಿಸ್ಕ್ ಅಂಶಗಳನ್ನು
ಹೆಚ್ಚಿಸುತ್ತದೆ.

೪ – ಹೃದಯದ ಕಾಯಿಲೆ ನನ್ನ ಕುಟುಂಬದಲ್ಲಿಯೇ ಇದೆ. ಹಾಗಾಗಿ ಅದನ್ನು ತಪ್ಪಿಸಲು ನನ್ನಿಂದ ಸಾಧ್ಯವಿಲ್ಲ: ಹೌದು, ಹತ್ತಿರದ ಸಂಬಂಧಿಗಳಲ್ಲಿ ಅನೇಕರಲ್ಲಿ ಹೃದಯದ ಕಾಯಿಲೆ ಇದ್ದರೆ ನಿಮಗೂ ಹೃದಯದ ಕಾಯಿಲೆ ಬರುವ ರಿಸ್ಕ್ ಜಾಸ್ತಿ ಇರುತ್ತದೆ. ಹಾಗಿದ್ದರೂ ಆ ಕಾಯಿಲೆ ಬರದಂತೆ ತಡೆಯಲು ಹಲವಾರು ಕ್ರಮಗಳಿವೆ. ಅದರಲ್ಲಿ ಮುಖ್ಯವಾದವುಗಳೆಂದರೆ – ಆರೋಗ್ಯಯುತ ಆಹಾರ ಸೇವನೆ, ಧೂಮಪಾನ ಮಾಡದಿರುವುದು, ಏರುರಕ್ತದೊತ್ತಡವನ್ನು ಸೂಕ್ತ ವಾಗಿ ನಿಯಂತ್ರಿಸುವುದು, ನಿಯಮಿತವಾಗಿ ವ್ಯಾಯಾಮ ಮಾಡುವುದು. ಇಲ್ಲಿ ಒಂದು ಅಂಶವನ್ನು ಗಮನಿಸಬೇಕು.

ಹೃದಯದ ಕಾಯಿಲೆ ಕುಟುಂಬದ ಹಲವು ಸದಸ್ಯರಲ್ಲಿ ಇದ್ದರೆ ಜೀನ್ ಮಟ್ಟದಲ್ಲಿಯೇ ಕಾಯಿಲೆ ಇದೆ ಎಂದರ್ಥವಲ್ಲ.
ಕುಟುಂಬದ ಸದಸ್ಯರಲ್ಲಿ ಜೀವನ ಶೈಲಿಯ ಕ್ರಮಗಳು, ಆಹಾರ, ವ್ಯಾಯಾಮ ಕ್ರಮಗಳು ಒಂದೇ ರೀತಿಯವಾದ್ದರಿಂದ ಅವು ಹೃದಯದ ಕಾಯಿಲೆಯ ರಿಸ್ಕ್ ಮೇಲೆ ಪ್ರಭಾವ ಬೀರುತ್ತವೆ.

೫ – ವಿಟಮಿನ್‌ಗಳು ಹೃದಯದ ಕಾಯಿಲೆಯನ್ನು ತಪ್ಪಿಸಬಹುದು: ವಿಟಮಿನ್‌ಗಳನ್ನು ಅಗತ್ಯವಾದ ಪ್ರಮಾಣದಲ್ಲಿ
ಸೇವಿಸುವುದರಿಂದ ಹೃದಯದ ಆರೋಗ್ಯಕ್ಕೆ ಒಳ್ಳೆಯದು ಹೌದಾದರೂ ವಿಟಮಿನ್ ಗಳು ಹೃದಯದ ಕಾಯಿಲೆ ಬರದಂತೆ ತಡೆಯುತ್ತವೆ ಎಂಬುದರ ಬಗ್ಗೆ ಪುರಾವೆಗಳಿಲ್ಲ. ಇದು ಆರೋಗ್ಯವಂತ ಆಹಾರ ಮತ್ತು ನಿಯಮಿತವಾದ ವ್ಯಾಯಾಮದ ಬದಲಿಯಾಗಿ ಪ್ರಯೋಜನ ವಾಗುವುದಿಲ್ಲ. ಈ ಬಗ್ಗೆ ಒಂದು ದೊಡ್ಡ ಸಮೀಕ್ಷೆ ಯನ್ನು ಕೈಗೊಳ್ಳಲಾಗಿದೆ. ಹಲವು ವಿಟಮಿನ್
ಗಳನ್ನು ಮತ್ತು ಮಿನರಲ್ ಗಳನ್ನು ಸೇವಿಸುವುದು ಹೃದಯದ ಕಾಯಿಲೆಗಳು ಹಾಗೂ ಪಾರ್ಶ್ವವಾಯು ಬರುವ ಸಾಧ್ಯತೆ ಇವುಗಳ ಸಂಬಂಧದ ಬಗ್ಗೆ ೨೦೧೮ ರಲ್ಲಿ ಈ ಅಧ್ಯಯನ ಕೈಗೊಳ್ಳಲಾಯಿತು.

ಇದರಲ್ಲಿ ಈಗಾಗಲೇ ಇರುವ ೧೮ ಅಧ್ಯಯನಗಳ ವಿವರಗಳು ಹಾಗೂ ೨,೦೧೯೮೬೨ ವ್ಯಕ್ತಿಗಳ ವಿವರಗಳು ಇದ್ದವು. ಅವುಗಳ ಅಂತಿಮ ತೀರ್ಮಾನ – ಮಲ್ಟಿವಿಟಮಿನ್ ಮತ್ತು ಮಿನರಲ್ ಗಳ ಸೇವನೆಯಿಂದ ಎಲ್ಲ ಜನಾಂಗದಲ್ಲಿಯೂ ಹೃದಯ ಮತ್ತು ರಕ್ತ ನಾಳಗಳ ಆರೋಗ್ಯ ಸುಧಾರಿಸಿತ್ತದೆ ಎಂಬುದರ ಬಗ್ಗೆ ಯಾವ ಪುರಾವೆಯೂ ಇಲ್ಲ. ಬ್ರಿಟಿಷ್ ಹಾರ್ಟ್ ಫೌಂಡೇಶನ್ನ ವಿಕ್ಟೋರಿಯಾ ಟೈರ್ಲ ಅವರ ಪ್ರಕಾರ ವಿಟಮಿನ್ ಗಳನ್ನು ಕೊಡುವುದು ಆರೋಗ್ಯವಂತ ಆಹಾರಕ್ಕೆ ಸರಿಸಾಟಿಯಾಗಲಾರದು. ವಿಟಮಿನ್ ಗಳು ಹೃದಯದ ಆರೋಗ್ಯವನ್ನು ಸುಧಾರಿಸುತ್ತವೆ ಎಂಬುದು ಸತ್ಯವಲ್ಲ ಎಂದು ಅಭಿಪ್ರಾಯ ಪಡುತ್ತಾರೆ.

೬ – ನಾನು ಹಲವು ವರ್ಷಗಳ ಕಾಲ ಧೂಮಪಾನ ಮಾಡಿದ್ದೇನೆ, ಅದನ್ನು ಈಗ ನಿಲ್ಲಿಸುವುದರಿಂದ ಪ್ರಯೋಜನವಿಲ್ಲ: ಇದೊಂದು ದೊಡ್ಡ ತಪ್ಪು ಕಲ್ಪನೆ. ಹೃದಯದ ಕಾಯಿಲೆ ಬರಲು ಒಂದು ಮುಖ್ಯ ಕಾರಣ ಈ ಧೂಮಪಾನ. ಧೂಮಪಾನ ಮಾಡುತ್ತಿರುವ ವ್ಯಕ್ತಿ ಅದನ್ನು ನಿಲ್ಲಿಸಿದ ಕೂಡಲೇ ಆರೋಗ್ಯದ ಸುಧಾರಣೆ ಗೊತ್ತಾಗುತ್ತದೆ. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್
ಏಜಿಯಿಂಗ್ ಸಂಸ್ಥೆಯ ಪ್ರಕಾರ ನಿಮ್ಮ ವಯಸ್ಸು ಎಷ್ಟೇ ಇರಲಿ, ನೀವು ಎಷ್ಟೇ ವರ್ಷ ಧೂಮಪಾನ ಮಾಡಿರಲಿ ಧೂಮಪಾನ ನಿಲ್ಲಿಸುವುದರಿಂದ ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಖಂಡಿತಾ ಕಂಡು ಬರುತ್ತದೆ.

ಧೂಮಪಾನ ನಿಲ್ಲಿಸುವುದರಿಂದ ನಿಮ್ಮ ಆಯಸ್ಸು ಹೆಚ್ಚುತ್ತದೆ, ಸುಲಭವಾಗಿ ಉಸಿರಾಡಬಹುದು, ನಿಮ್ಮ ಶಕ್ತಿ ಜಾಸ್ತಿ ಆಗುತ್ತದೆ, ಹಣವನ್ನು ಉಳಿಸಬಹುದು. ಹೀಗೆ ಮಾಡುವುದರಿಂದ ಹೃದಯಾಘಾತ ಮತ್ತು ಪಾರ್ಶ್ವವಾಯು ಬರುವ ಸಾಧ್ಯತೆ ಕಡಿಮೆಯಾಗುತ್ತದೆ, ರಕ್ತ ನಾಳಗಳಲ್ಲಿ ರಕ್ತ ಚಲನೆ ಉತ್ತಮವಾಗುತ್ತದೆ.

೭ – ಹೃದಯದ ಕಾಯಿಲೆ ಪುರುಷರಲ್ಲಿ ಮಾತ್ರ ಕಂಡು ಬರುತ್ತದೆ: ಇದೊಂದು ಸಂಪೂರ್ಣ ತಪ್ಪು ಕಲ್ಪನೆ. ಏಕೆಂದರೆ
ಪುರುಷರಲ್ಲಿ ಮತ್ತು ಮಹಿಳೆಯರಲ್ಲಿ ಇಬ್ಬರಲ್ಲಿಯೂ ಸಾವಿಗೆ ಹೆಚ್ಚು ಕಾರಣವಾಗುವ ಕಾಯಿಲೆಯೇ ಹೃದಯದ ಕಾಯಿಲೆ. ೨೦೧೭ರಲ್ಲಿ ಅಮೆರಿಕದಲ್ಲಿ ಶೇ.೨೪.೨ ಪುರುಷರು ೨೧.೮ ಮಹಿಳೆಯರು ಹೃದಯದ ಕಾಯಿಲೆಯಿಂದ ಮರಣ ಹೊಂದಿದರು.
ಹೃದಯದ ಕಾಯಿಲೆಯ ಜತೆಗೆ ಪಾರ್ಶ್ವವಾಯು ಕಾಯಿಲೆಯ ರಿಸ್ಕ್ ಅಂಶಗಳನ್ನು ಒಟ್ಟಾಗಿ ತೆಗೆದುಕೊಂಡಾಗ ಪುರುಷರು ಮತ್ತು ಮಹಿಳೆಯರಲ್ಲಿ ಅಂತಹ ವ್ಯತ್ಯಾಸ ಕಂಡು ಬರಲಿಲ್ಲ.

ಪುರುಷರು ಶೇ.೨೮.೭ ಜನರು ಹೃದಯ ಮತ್ತು ಪಾರ್ಶ್ವವಾಯುವಿಗೆ ಈಡಾದರೆ ಅದೇ ಸಂಖ್ಯೆ ಮಹಿಳೆಯರಲ್ಲಿ ಶೇ.೨೮ ಆಗಿತ್ತು.
ಪುರುಷರಲ್ಲಿ ಮಾತ್ರ ಹೃದಯದ ಕಾಯಿಲೆ ಜಾಸ್ತಿ ಎಂಬುದು ಬಹಳ ಸಾಮಾನ್ಯ ತಪ್ಪು ತಿಳಿವಳಿಕೆ. ಪುರುಷರು ಮಹಿಳೆಯರಿಗಿಂತ ಕಡಿಮೆ ವಯಸ್ಸಿನಲ್ಲಿ ಹೃದಯದ ಕಾಯಿಲೆಗೆ ಈಡಾಗುವುದು ನಿಜ. ಆದರೆ ಮಹಿಳೆಯರಲ್ಲಿ ಪಾರ್ಶ್ವವಾಯು ಬರುವ ಸಾಧ್ಯತೆ ಜಾಸ್ತಿ.

೮ – ಕಾರ್ಡಿಯಾಕ್ ಅರೆಸ್ಟ್ ಮತ್ತು ಹೃದಯಾಘಾತ ಎರಡೂ ಒಂದೇ: ಕಾರ್ಡಿಯಾಕ್ ಅರೆಸ್ಟ್ ಮತ್ತು ಹೃದಯಾಘಾತ ಎರಡೂ ಒಂದೇ ಅಲ್ಲ. ಹೃದಯಾಘಾತವು ಹೃದಯಕ್ಕೆ ರಕ್ತದ ಪೂರೈಕೆ ಕಡಿಮೆ ಆಗುವುದರಿಂದ ಉಂಟಾಗುತ್ತದೆ. ಹೃದಯಕ್ಕೆ ರಕ್ತ ಪೂರೈಸುವ ಕಾರೋನರಿ ಆರ್ಟರಿ ಮುಚ್ಚಿಕೊಳ್ಳುವುದರಿಂದ ಇದು ಉಂಟಾಗುತ್ತದೆ. ಈ ಕಾರೋನರಿ ಆರ್ಟರಿಯೇ ಹೃದಯದ ಮಾಂಸಖಂಡ ಗಳಿಗೆ ಶುದ್ಧ ರಕ್ತವನ್ನು ಪೂರೈಸುವುದು.

ಕಾರ್ಡಿಯಾಕ್ ಅರೆಸ್ಟ್ ಎಂದರೆ ಅದೊಂದು ಎಲೆಕ್ಟ್ರಿಕಲ್ ಸಮಸ್ಯೆ. ಇದರಲ್ಲಿ ಹೃದಯವು ಪಂಪ್ ಮಾಡುವ ಕ್ರಿಯೆಯನ್ನು
ನಿಲ್ಲಿಸುತ್ತದೆ. ಪರಿಣಾಮ ಎಂದರೆ ದೇಹದ ಎಡೆ ರಕ್ತದ ಹರಿವು ಕಡಿಮೆಯಾಗುತ್ತದೆ. ಹೃದಯಾಘಾತದ ಸಂದರ್ಭದಲ್ಲಿ ಆ ವ್ಯಕ್ತಿಗೆ ಮೈಮೇಲೆ ಎಚ್ಚರವಿರುತ್ತದೆ. ಆದರೆ ಕಾರ್ಡಿಯಾಕ್ ಅರೆಸ್ಟ್ ಸಂದರ್ಭದಲ್ಲಿ ವ್ಯಕ್ತಿಗೆ ಮೈಮೇಲೆ ಎಚ್ಚರವಿರುವುದಿಲ್ಲ. ಎರಡೂ ಸಂದರ್ಭಗಳಲ್ಲಿ ನಾವು ಇದನ್ನು ವೈದ್ಯಕೀಯ ಎಮರ್ಜೆನ್ಸಿ ಎನ್ನುತ್ತೇವೆ.

೯- ಹೃದಯಾಘಾತದ ಸಂದರ್ಭದಲ್ಲಿ ಕೆಮ್ಮುವುದರಿಂದ ವ್ಯಕ್ತಿಯ ಜೀವ ಉಳಿಯುತ್ತದೆ: ಹೀಗೊಂದು ತಪ್ಪು ಕಲ್ಪನೆ ಬಹಳ ಕಾಲದಿಂದ ಇದೆ. ೪೦ ವರ್ಷಗಳ ಹಿಂದೆ ಒಂದು ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅದು ನಂತರ ಅಂತರ್ಜಾಲದಲ್ಲಿ ಬಹಳ ಪ್ರಚಲಿತವಾಯಿತು. ಆಸ್ಪತ್ರೆಯಲ್ಲಿ ಆರ್ಟಿಯೋಗ್ರಫಿ ಎಂಬ ಪರೀಕ್ಷೆ ನಡೆಸುವಾಗ ಕಾರ್ಡಿಯಾಕ್ ಅರೆಸ್ಟ್ ಆದರೆ ಅಂತಹ ವ್ಯಕ್ತಿಗಳಲ್ಲಿ ೧-೩ ಸೆಕೆಂಡುಗಳ ಕಾಲ ಕೆಮ್ಮಿದರೆ ಅವರು ೩೯-೪೦ ಸೆಕೆಂಡುಗಳಷ್ಟು ಜಾಸ್ತಿ ಎಚ್ಚರವಾಗಿರುತ್ತಾರೆ. ಆದರೆ ಇದೇ ವಿಷಯ ಹೃದಯಾಘಾತದಲ್ಲಿ ಕೆಲಸ ಮಾಡುತ್ತದೆ ಎಂಬುದಕ್ಕೆ ಸೂಕ್ತ ಪುರಾವೆಗಳಿಲ್ಲ.

೧೦ – ಹೃದಯದ ಕಾಯಿಲೆ ಇದ್ದವರು ಎಲ್ಲಾ ರೀತಿಯ ಕೊಬ್ಬಿನ ಪದಾರ್ಥಗಳನ್ನು ತ್ಯಜಿಸಬೇಕು: ಹೌದು, ಹೃದಯದ ಕಾಯಿಲೆ ಇದ್ದವರು ಕೊಬ್ಬಿನಂಶ ಇರುವ ಆಹಾರಗಳನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು. ಅದರಲ್ಲಿಯೂ ಬೆಣ್ಣೆ, ಬಿಸ್ಕತ್ತುಗಳು, ಸಾಸೇಜ್‌ಗಳು ಇತ್ಯಾದಿ. ಬೇಕರಿಯ ಆಹಾರಗಳು, ಫಿಜ್ಜಾಗಳು, ಪಾಪ್ ಕಾರ್ನ್‌ಗಳು – ಇಂತಹವುಗಳನ್ನು ದೂರ ಇಡಬೇಕು. ಆದರೆ ಅನ್ ಸ್ಯಾಚುರೇಟೆಡ್ ಕೊಬ್ಬಿನ ಅಂಶ ವ್ಯಕ್ತಿಗೆ ಒಳ್ಳೆಯದನ್ನು ಉಂಟು ಮಾಡಬಹುದು. ಒಮೇಗಾ – ಅಂಶವಿರುವ ಆಹಾರ ಹೃದಯದ ಆರೋಗ್ಯಕ್ಕೆ ಒಳ್ಳೆಯದು ಎಂಬುದರ ಬಗ್ಗೆ ಸ್ವಲ್ಪ ಪುರಾವೆಗಳಿವೆ.

ಅಮೆರಿಕದ ಹಾರ್ಟ್ ಅಸೋಸಿಯೇಷನ್ ಈ ರೀತಿಯ ಆಹಾರವನ್ನು ಸೇವಿಸಲು ತಿಳಿಸುತ್ತದೆ. ಎಲ್ಲಾ ವಯಸ್ಕರೂ ವಾರಕ್ಕೆ ಎರಡು ಬಾರಿಯಾದರೂ ಮೀನಿನ ಆಹಾರ ಸೇವಿಸಬೇಕು (ಇದನ್ನು ತಿನ್ನುವ ಅಭ್ಯಾಸ ಇರುವವರು). ಮೀನು ಒಳ್ಳೆಯ ಪ್ರಮಾಣದ ಪ್ರೋಟೀನ್ ಹೊಂದಿದೆ, ಹಾಗೆಯೇ ಅನ್ ಸ್ಯಾಚುರೇಟೆಡ್ ಕೊಬ್ಬಿನ ಅಂಶ ಹೊಂದಿದೆ.

ಇದು ಎರಡು ರೀತಿಯ ಒಮೇಗಾ – -ಟಿ ಆಸಿಡ್ಸ್ ಹೊಂದಿದೆ. ಅವು ಹೃದಯದ ಆರೋಗ್ಯಕ್ಕೆ ಒಳ್ಳೆಯದು ಎನ್ನಲಾಗಿದೆ. ಹಾಗೆಯೇ ಕೆಲವು ಸಸ್ಯಗಳಲ್ಲೂ ಒಮೇಗಾ – -ಟಿ ಆಸಿಡ್ ಗಳು ಇರುತ್ತವೆ. ಅವುಗಳನ್ನೂ ಸೇವಿಸಬಹುದು ಎಂದು ಆ
ಸಂಸ್ಥೆ ಶಿ-ರಸ್ಸು ಮಾಡುತ್ತದೆ.

೧೧- ನನಗೆ ಹೃದಯದ ಕಾಯಿಲೆಯ ಯಾವ ಲಕ್ಷಣಗಳೂ ಇಲ್ಲ: ಒಂದು ಅಂದಾಜಿನ ಪ್ರಕಾರ ಹೃದಯದ ಕಾಯಿಲೆಯಿಂದ ಮರಣ ಹೊಂದುವ ಶೇ.೬೪ರಷ್ಟು ಮಹಿಳೆಯರಲ್ಲಿ ಹೃದಯ ಕಾಯಿಲೆಯ ಯಾವ ಲಕ್ಷಣಗಳೂ ಇರಲಿಲ್ಲ. ಈ ಲಕ್ಷಣಗಳು ಪುರುಷರಲ್ಲಿ ಮತ್ತು ಮಹಿಳೆಯರಲ್ಲಿ ಬೇರೆ ಬೇರೆ ಇರಬಹುದು. ಹೆಚ್ಚಿನ ಸಂದರ್ಭದಲ್ಲಿ ಅದನ್ನು ಹೆಚ್ಚಿನವರು ತಪ್ಪು ತಿಳಿದಿದ್ದಾರೆ. ಹೃದಯದ ಕಾಯಿಲೆಯ ಮುಖ್ಯ ಲಕ್ಷಣ ಎಂದರೆ ವಿಪರೀತ ಎದೆನೋವು ಎಂದು ಮಾಧ್ಯಮದಲ್ಲಿ ವಿಪರೀತ ಪ್ರಚಾರವಾಗಿಬಿಟ್ಟಿದೆ. ಆದರೆ ಮಹಿಳೆಯರಲ್ಲಿ ಎದೆನೋವಿಗಿಂತ ಉಸಿರಾಡಲು ಕಷ್ಟವಾಗುವುದು, ವಾಂತಿ ಬರುವುದು ಅಥವಾ ಬಂದ ಹಾಗೆ ಆಗುವುದು, ಬೆನ್ನು ಅಥವಾ ದವಡೆಯಲ್ಲಿ ನೋವು ಇವು ಇರುತ್ತವೆ.

ಇನ್ನಿತರ ಲಕ್ಷಣಗಳೆಂದರೆ ತಲೆ ಸುತ್ತಿದ ಅನುಭವ, ತಲೆ ಬಹಳ ಹಗುರವಾಗಿದೆ ಅನಿಸುವುದು ಅಥವಾ ಕೆಲವೊಮ್ಮೆ ಎಚ್ಚರ ತಪ್ಪಬಹುದು, ಎದೆಯ ಕೆಳಭಾಗ ಅಥವಾ ಹೊಟ್ಟೆಯ ಮೇಲ್ಭಾಗದಲ್ಲಿ ನೋವು ಕಾಣಿಸಿಕೊಳ್ಳಬಹುದು, ಹಾಗೆಯೇ ವಿಪರೀತ ಸುಸ್ತು ಇರುತ್ತದೆ.

೧೨: ನನ್ನ ಹೃದಯ ಬಹಳ ವೇಗವಾಗಿ ಬಡಿದುಕೊಳ್ಳುತ್ತಿದೆ. ನನಗೆ ಹೃದಯಾಘಾತವೇ ಇರಬೇಕು: ಹೃದಯದ ಬಡಿತದಲ್ಲಿ ಏರುಪೇರಾಗುವುದು ಸಾಮಾನ್ಯವಾಗಿ ಬಹಳ ಜನರಲ್ಲಿ ಕಂಡು ಬರುತ್ತದೆ. ಹೃದಯದ ಗತಿಯು ವ್ಯಕ್ತಿ ಉತ್ತೇಜಿತ ನಾದಾಗ ಹೆಚ್ಚಾಗಿ ಬಡಿದುಕೊಳ್ಳುತ್ತದೆ. ವ್ಯಕ್ತಿ ಮಲಗಿದಾಗ ಹೃದಯದ ಗತಿ ಕಡಿಮೆಯಾಗುತ್ತದೆ. ಸಾಮಾನ್ಯವಾಗಿ ಹೃದಯದ ಗತಿ ಏರುಪೇರಾದಾಗ ಭಯ ಬೀಳುವ ಅಗತ್ಯ ಇಲ್ಲ. ಆದರೆ ಇದು ಕೆಲವೊಮ್ಮೆ ಹೃದಯದ ಅರೀತ್ಮಿಯಾ ಕಾಯಿಲೆಯ ಲಕ್ಷಣವೂ ಇರಬಹುದು. ಹೆಚ್ಚಿನ ಅರೀತ್ಮಿಯಾವು ಏನೂ ಅಪಾಯಕಾರಿ ಅಲ್ಲ.