ಹಣಾಹಣಿ
ಎಸ್.ಜಿ.ಹೆಗಡೆ
ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯಾದ ಭಾರತವು, ಜನತಂತ್ರದ ಹಬ್ಬವಾದ ಲೋಕಸಭಾ ಚುನಾವಣೆಗೆ ಸನ್ನದ್ಧ ವಾಗಿದೆ. ದೇಶವಿಡೀ ರಣಬಿಸಿಲಿನಲ್ಲಿ ಕುದಿಯುತ್ತಿರುವ ನಡುವೆಯೇ, ಹಲವು ಸೂಕ್ಷ್ಮ-ಸಂದಿಗ್ಧ ವಿಚಾರಗಳನ್ನು ಒರೆಗೆ ಹಚ್ಚಿರುವ ಚುನಾವಣೆಯ ಕಾವು ತೀವ್ರವಾಗಿ ಹೆಚ್ಚುತ್ತಿದೆ.
ದೇಶದ ಹಲವೆಡೆ ತಾಪಮಾನ ಮಿತಿಮೀರಿರುವುದು ಆತಂಕದ ಸಂಗತಿ. ತಂಪುನಗರಿ ಎಂಬ ಹೆಗ್ಗಳಿಕೆಯಿರುವ ಬೆಂಗಳೂರಿನಲ್ಲಿ
ಇತ್ತೀಚೆಗೆ ೩೮.೩ ಡಿಗ್ರಿ ಸೆಲ್ಸಿಯಸ್ ಉಷ್ಣತೆ ದಾಖಲಾಗಿದ್ದು, ಇದು ಕಳೆದ ೩೦ ವರ್ಷದಲ್ಲೇ ಏಪ್ರಿಲ್ ಕಂಡ ಅತಿಹೆಚ್ಚಿನ ಪ್ರಮಾಣ ವೆನ್ನಲಾಗಿದೆ. ಮಾರ್ಚ್-ಏಪ್ರಿಲ್‌ನಲ್ಲಿ ನಗರದ ಗರಿಷ್ಠ ಮತ್ತು ಕನಿಷ್ಠ ಉಷ್ಣತೆಯು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿ ದಾಗ ೨-೩ ಡಿಗ್ರಿಯಷ್ಟು ಏರಿದೆ.
ಬೆಂಗಳೂರಿನ ಸ್ಥಿತಿಯೇ ಹೀಗಿರುವಾಗ, ಸಾಮಾನ್ಯವಾಗಿ ಹೆಚ್ಚು ತಾಪವುಳ್ಳ ದೇಶದ ಮಿಕ್ಕ ಪ್ರದೇಶಗಳ ಸ್ಥಿತಿ ಇನ್ನೂ ಚಿಂತಾ ಜನಕವಾಗಿದೆ. ಮಹಾರಾಷ್ಟ್ರ, ಆಂಧ್ರಪ್ರದೇಶ, ಜಾರ್ಖಂಡ್, ತಮಿಳುನಾಡು, ತೆಲಂಗಾಣ ಮುಂತಾದ ರಾಜ್ಯಗಳ ಹಲವು ಭಾಗಗಳಲ್ಲಿ ತಾಪಮಾನವು ೪೨ ಡಿಗ್ರಿಯನ್ನೂ ದಾಟಿದೆ.
ತಾಪಮಾನದ ಏರಿಕೆಯ ಜಂಜಾಟದಿಂದ ಒಮ್ಮೆ ತಪ್ಪಿಸಿಕೊಂಡು ಚುನಾವಣಾ ಕಾವಿನತ್ತ ನೋಡೋಣ. ನಮ್ಮ ದೇಶವು ತಾಪ ಮಾನದಲ್ಲಿನ ವಿಪರೀತ ಏರಿಕೆಯನ್ನು ಎದುರಿಸುತ್ತಿರುವ ಸಂದರ್ಭದಲ್ಲೇ ಲೋಕಸಭಾ ಚುನಾವಣಾ ಪ್ರಕ್ರಿಯೆಯೂ ಚಾಲ್ತಿ ಯಲ್ಲಿರುವುದು ಸಂದಿಗ್ಧದ ಸಂಗತಿ. ತಾಪಮಾನದ ಏರಿಕೆಯು ಮಿತಿಮೀರಿದಂತೆ ಚುನಾವಣೆಯ ಬಿಸಿಯಲೆಯೂ ತೀವ್ರವಾಗಿದೆ. ಕಳೆದ ಎರಡು ಅವಧಿಗೆ ಆಡಳಿತ ನಡೆಸಿದ ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರಕಾರವು ಇನ್ನೊಮ್ಮೆ ಆಡಳಿತದ ಚುಕ್ಕಾಣಿ ಹಿಡಿಯಲು ಜನರ ಒಪ್ಪಿಗೆ ಕೇಳುತ್ತಿದೆ.
ಒಂದು ದಶಕ ಆಡಳಿತ ನಡೆಸಿದ ವ್ಯವಸ್ಥೆಯೊಂದು ಮತ್ತೆ ಐದು ವರ್ಷಗಳ ಆಡಳಿತಕ್ಕೆಂದು ಜನಮತ ಪಡೆಯುವ ನಿಟ್ಟಿನಲ್ಲಿ
ತೊಡಗಿಕೊಂಡಾಗ ತುರುಸು ಹೆಚ್ಚಿರುವುದು ಸಹಜ. ಏಕೆಂದರೆ, ಆಡಳಿತದ ಕುರಿತಾದ ಜನತೆಯ ಅನುಭವವು ಇಷ್ಟು ದೀರ್ಘಾ ವಧಿಯ ನಂತರವೂ ಪೂರಕವಾಗಿರಬೇಕು. ಅಭಿವೃದ್ಧಿಯ ಜತೆಯಲ್ಲಿ ಪ್ರಜೆಗಳನ್ನು ತೃಪ್ತಿಯಲ್ಲಿಡಬೇಕು. ದೀರ್ಘಕಾಲದ ನಂತರವೂ ಜನತೆಯ ನೆನಪು ಹಸಿರಾಗಿರಬೇಕು. ಮತ್ತೆ ಆಡಳಿತಕ್ಕೆ ಬರಲು ಬಹುಜನ ಸಮಾಜವು ಮತದ ಮೂಲಕ ಒಪ್ಪಬೇಕು. ದಶಕದ ಆಳ್ವಿಕೆಯ ನಂತರ ಮತ್ತೆ ಆಡಳಿತಕ್ಕೆ ಮರಳಲು ರಾಜಕೀಯ ಕೂಟವೊಂದು ಜನರ ಒಪ್ಪಿಗೆ ಕೇಳುತ್ತಿರುವುದು ಚುನಾ ವಣೆಯ ಕಾವೇರಲು ಸಹಜವಾದ ಕಾರಣ.
ಈ ನಡುವೆ ರಾಜಕೀಯ ರಂಗದಲ್ಲಿ ಹಲವು ನಾಟಕಗಳು ನಡೆದಿವೆ. ರಾಜಕೀಯ ಸಮೀಕರಣಗಳು ಬದಲಾಗಿವೆ. ಅನೇಕ ಬದಲಾವಣೆಗಳು ಊಹೆಗೂ ನಿಲುಕದ್ದು ಅಥವಾ ಅಪೇಕ್ಷೆಗೂ ಮೀರಿದ್ದು. ಕಳೆದ ಚುನಾವಣೆಯಲ್ಲಿ ‘ಸಂಯುಕ್ತ ಪ್ರಗತಿಶೀಲ ಘಟಬಂಧನ’ದ (ಯುಪಿಎ) ಅಡಿಯಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದ ಬಿಜೆಪಿಯೇತರ ಪಕ್ಷಗಳ ಒಕ್ಕೂಟದ ಸ್ವರೂಪವು ಮರುರೂಪು ಗೊಂಡು ಅದರ ಹೆಸರು ‘ಭಾರತೀಯ ರಾಷ್ಟ್ರೀಯ ವಿಕಾಸಾತ್ಮಕ ಸಮಾವೇಶಿ ಘಟಬಂಧನ’ (ಇಂಡಿಯನ್ ನ್ಯಾಷನಲ್ ಡೆವಲಪ್ ಮೆಂಟಲ್ ಇನ್ ಕ್ಲುಸಿವ್ ಅಲಯೆನ್ಸ್- ‘ಇಂಡಿಯ’) ಎಂದು ಬದಲಾಗಿದೆ.
ಹಿಂದಿನ ಚುನಾವಣೆಯಲ್ಲಿ ವಿರೋಧಿಗಳಾಗಿದ್ದ ಆಮ್ ಆದ್ಮಿ ಪಕ್ಷ ಮತ್ತು ಶಿವಸೇನೆ ವಿಘಟನೆಗೊಂಡು ರೂಪುಗೊಂಡ ಉದ್ಧವ್ ಠಾಕ್ರೆ ಬಣ ಈಗ ಈ ಒಕ್ಕೂಟದ ಭಾಗವಾಗಿವೆ. ಹಾಗೆಯೇ, ಎನ್‌ಡಿಎ ವಿರುದ್ಧವಿದ್ದ ಜಾತ್ಯತೀತ ಜನತಾದಳ ಮತ್ತು ತೆಲುಗುದೇಶಂ ಪಕ್ಷಗಳು ಈಗ ಎನ್‌ಡಿಎ ಒಕ್ಕೂಟದ ಭಾಗವಾಗಿವೆ.
ಧರ್ಮವಾದಿ, ಜಾತ್ಯತೀತ ಇತ್ಯಾದಿಯಾಗಿ ಗುರುತಿಸಿಕೊಂಡಿದ್ದ ರಾಜಕೀಯ ಶಕ್ತಿಗಳು ವಿಭಿನ್ನ ನಿಲುವು ತೋರಿವೆ. ಕಳೆದ ಚುನಾವಣೆಯಲ್ಲಿ ಎನ್‌ಡಿಎ ಕೂಟದಿಂದ ಚುನಾವಣೆಗಿಳಿದಿದ್ದ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷವು ತರುವಾಯ ಬಿಹಾರದಲ್ಲಿ ರಾಷ್ಟ್ರೀಯ ಜನತಾದಳದ ಜತೆಗೆ ಕೈಜೋಡಿಸಿತ್ತು. ಬದಲಾದ ರಾಜಕೀಯ ವಾತಾವರಣಕ್ಕೆ ತಕ್ಕಂತೆ ಮನಸ್ಸು ಬದಲಿಸಿರುವ ಜೆಡಿಯು ಈಗ ಮತ್ತೆ ಎನ್‌ಡಿಎ ಒಕ್ಕೂಟಕ್ಕೆ ಮರಳಿದೆ. ಕೆಲವೆಡೆ ಅನೇಕ ರಾಜಕೀಯ ಮನೆತನಗಳು ಒಡೆದು ಹೊಸ ರಾಜಕೀಯ ಮಿಶ್ರಣ ರೂಪುಗೊಂಡಿದೆ. ಮಹಾರಾಷ್ಟ್ರದಲ್ಲಿ ಶರದ್ ಪವಾರ್ ಮತ್ತು ಅಜಿತ್ ಪವಾರ್ ಬೇರೆ ಬೇರೆಯಾಗಿ,
ಎರಡು ಕೂಟದಿಂದ ಪ್ರತ್ಯೇಕ ಸ್ಪರ್ಧೆಗಿಳಿದಿದ್ದಲ್ಲದೆ, ಅಲ್ಲಿನ ಬಾರಾಮತಿಯಲ್ಲಿ ಹಿಂದಿನ ಸಂಸದೆ, ಪವಾರ್ ಅವರ ಮಗಳು ಸುಪ್ರಿಯಾ ಸುಳೆ ಮತ್ತು ಅಜಿತ್ ಪವಾರ್ ಹೆಂಡತಿ ಸುನೇತ್ರಾ ಪರಸ್ಪರ ಸೆಣಸಲಿದ್ದಾರೆ ಎನ್ನಲಾಗಿದೆ.
ರಾಜಮನೆತನದ ಹನ್ನೊಂದು ಅಭ್ಯರ್ಥಿಗಳು ಜನತಂತ್ರದ ಪ್ರಯೋಗಕ್ಕೆ ತಮ್ಮನ್ನು ಒಡ್ಡಿಕೊಂಡಿದ್ದರೆ, ಮತ್ತೊಂದೆಡೆ ವಿವಿಧ ಕ್ಷೇತ್ರಗಳ ಹಲವಾರು ಖ್ಯಾತನಾಮರು ಚುನಾವಣೆಯ ರಂಗೇರಲು ಕಾರಣರಾಗಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿಯ ಮಹಾರಥಿ ಬಿ.ಎಸ್. ಯಡಿಯೂರಪ್ಪ ಅವರ ಮಗನ ವಿರುದ್ಧ ಅದೇ ಪಕ್ಷದ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಅವರು ಸವಾಲು ಎಸೆದಿದ್ದರೆ, ಮತ್ತೊಂದೆಡೆ ಧಾರವಾಡದಿಂದ ಸ್ಪರ್ಧಿಸಿರುವ ಕೇಂದ್ರ ಮಂತ್ರಿ ಪ್ರಲ್ಹಾದ್ ಜೋಶಿಯವರ ವಿರುದ್ಧ ಶ್ರೀ ದಿಂಗಾ ಲೇಶ್ವರ ಸ್ವಾಮಿಗಳು ಸ್ಪರ್ಧಿಸುವ ವಿಚಾರವು ಚುನಾವಣಾ ರಂಗವು ಕಾವೇರುತ್ತಿರುವುದರ ಇನ್ನೊಂದು ಉದಾಹರಣೆಯಾಗಿದೆ.
ಒಟ್ಟಾರೆ ದೃಷ್ಟಿಯಲ್ಲಿ, ವಿಭಿನ್ನ ತತ್ವ-ಸಿದ್ಧಾಂತಗಳು, ಮುಖ ಮತ್ತು ಮುಖವಾಡಗಳು ಬದಲಾಗಿವೆ, ಸಮ್ಮಿಶ್ರವಾಗಿವೆ ಅಥವಾ ತೆರೆಯಲ್ಪಟ್ಟಿವೆ. ಇಲ್ಲಿಯ ತನಕ ‘ಗ್ಯಾರಂಟಿ’ ಎಂಬ ಶಬ್ದವು ಗ್ರಾಹಕರು ಖರೀದಿಸಿದ ವಸ್ತುವಿನ ಕುರಿತು ಹೆಚ್ಚು ಚಲಾವಣೆ ಯಲ್ಲಿತ್ತು. ಆದರೀಗ ಚುನಾವಣಾ ಪ್ರಣಾಳಿಕೆಗಳು ಗ್ಯಾರಂಟಿ ಪತ್ರಗಳ ರೂಪ ಪಡೆಯುತ್ತಿರುವುದು ಇನ್ನೊಂದು ವಿಶೇಷ. ಅಂಥ ಗ್ಯಾರಂಟಿ ಪತ್ರದ ಪ್ರಯೋಗವು ಕಳೆದ ವರ್ಷ ನಡೆದ ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಆದ ನಂತರ, ಎಲ್ಲ
ಚುನಾವಣೆಗಳಲ್ಲಿ ‘ಗ್ಯಾರಂಟಿ’ ಎಂಬ ಶಬ್ದ ಪ್ರಚಲಿತದಲ್ಲಿರುವುದು ವಿಶೇಷ. ಮುಖ್ಯ ಚುನಾವಣಾ ಪ್ರಣಾಳಿಕೆಯ ಜತೆಗೆ ‘ಯಾವುದೆಲ್ಲ ಗ್ಯಾರಂಟಿ’ ಎಂಬ ಆಶ್ವಾಸನೆ ಅಥವಾ ದೃಷ್ಟಿಕೋನವು ಇನ್ನೊಂದು ತಿರುವು ಕೊಟ್ಟಿದೆ.
ಜಗತ್ತಿನ ಅತಿಹೆಚ್ಚು ಜನಸಂಖ್ಯೆಯ, ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯಾದ ನಮ್ಮ ದೇಶವು, ನಮ್ಮ ಜನತಂತ್ರದ ಅತಿ ದೊಡ್ಡ ಹಬ್ಬವೆನ್ನಬಹುದಾದ ಲೋಕಸಭಾ ಚುನಾವಣೆಗೆ ಸನ್ನದ್ಧವಾಗಿದೆ. ದೇಶದ ವಿವಿಧ ಭಾಗಗಳು ರಣಬಿಸಿಲಿನಲ್ಲಿ ಕೊತ ಕೊತನೆ ಕುದಿಯುತ್ತಿರುವ ನಡುವೆಯೇ, ಹಲವು ಸಂದಿಗ್ಧ ಮತ್ತು ಸೂಕ್ಷ್ಮ ವಿಚಾರಗಳನ್ನು ಒರೆಗೆ ಹಚ್ಚಿರುವ ಲೋಕಸಭಾ ಚುನಾವಣೆಯ ಕಾವು ತೀವ್ರವಾಗಿ ಹೆಚ್ಚುತ್ತಿದೆ. ತಾಪಮಾನದಲ್ಲಿನ ಬಿಸಿ ಅಲೆಯು ಮೇ ತಿಂಗಳ ಕೊನೆಯ ತನಕ ಅಲ್ಲಲ್ಲಿ ಪ್ರಖರ ವಾಗಿರುವುದೆಂಬ ಕುರಿತು ಮುನ್ಸೂಚನೆ ಇದ್ದು, ಚುನಾವಣಾ ಪ್ರಕ್ರಿಯೆಯೂ ಮೇ ಅಂತ್ಯಕ್ಕೆ ಸಮಾಪ್ತಿಯಾಗಲಿದೆ. ಒಟ್ಟಾರೆ ಹೇಳುವುದಾದರೆ, ಬಿಸಿಲಿನ ಕಾವು ಮತ್ತು ಚುನಾವಣಾ ಪ್ರಕ್ರಿಯೆಯ ಬಿಸಿ ಜತೆಜತೆಯಾಗಿ ಸಾಗಲಿವೆ.
ತಾಪಮಾನದ ಏರಿಕೆಯು ಚುನಾವಣಾ ಪ್ರಕ್ರಿಯೆಯಲ್ಲಿ ಸಾಕಷ್ಟು ಪ್ರಭಾವ ಬೀರಲಿದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಚುನಾವಣಾ ಪ್ರಕ್ರಿಯೆಯಲ್ಲಿ ಅದೆಷ್ಟೋ ಅಂಶಗಳನ್ನು ಸಮೀಕ್ಷೆ ಮಾಡಿ, ಚುನಾವಣಾಪೂರ್ವ ಮತ್ತು ಉತ್ತರ ಭಾಗಗಳಲ್ಲಿ
ವಿಶ್ಲೇಷಿಸುವ ಮಾಧ್ಯಮಗಳು, ತಾಪಮಾನದ ಏರಿಕೆ ಮತ್ತು ಪಕ್ಷವಾರು ಅದರ ಪರಿಣಾಮದ ವಿಷಯದಲ್ಲಿ ವಿಶ್ಲೇಷಣೆ ನೀಡಿದರೆ ಅದೂ ಕುತೂಹಲಕಾರಿಯಾದೀತು. ಅಂಥ ವಿಶ್ಲೇಷಣೆ ಇನ್ನೂ ಬಂದಂತಿಲ್ಲ! ಅದೇನೇ ಇದ್ದರೂ, ತಾಪಮಾನವು ತೀವ್ರವಾಗಿ ಏರಿಕೆಯಾಗಿರುವ ಈ ಸಂದರ್ಭದಲ್ಲಿ ಚುನಾವಣಾ ಪ್ರಕ್ರಿಯೆಗಳು ಸುಸೂತ್ರವಾಗಿ ನಡೆದು, ಮುಂದಿನ ಐದು ವರ್ಷಗಳವರೆಗೆ ಜನತೆಗೆ ಪ್ರಗತಿಪರ ಆಡಳಿತದ ತಂಪು ಸಿಗಲಿ ಎಂಬುದು ಸಹೃದಯಿಗಳ ಆಶಯ.
(ಲೇಖಕರು ಮುಂಬೈನ ಲಾಸಾ ಸೂಪರ್ ಜೆನರಿಕ್ಸ್‌ನ ನಿರ್ದೇಶಕರು)