Saturday, 14th December 2024

c p manjula column: ಅತಿವೃಷ್ಟಿಯಿಂದ ಪ್ರಕೃತಿಯ ಶ್ರಮ ನಾಶ

heavy rain

ಕೃಷಿರಂಗ

ಡಾ.ಸಿ.ಪಿ.ಮಂಜುಳ

ಯಾವುದೇ ಪದಾರ್ಥವು ಮನುಷ್ಯನಲ್ಲಿ ಅಥವಾ ಸುತ್ತಲಿನ ವಾತಾವರಣದಲ್ಲಿ ಅತಿಯಾದರೂ ಅದು ನಂಜಾಗುವುದು. ಇತ್ತೀಚಿನ ದಿನಗಳಲ್ಲಿ ಮಳೆಯ ಪ್ರಮಾಣವು ಹೆಚ್ಚಾಗಿದೆ. ವಾರ್ಷಿಕ ಮಳೆಯ ಪ್ರಮಾಣವು ಅದೇ ಇದ್ದರೂ, ಅದರ ಹಂಚಿಕೆಯಲ್ಲಿ ವ್ಯತ್ಯಾಸವಾಗಿದೆ. ಇದರಿಂದ ಅತಿವೃಷ್ಟಿಯಾಗಿ ಅನೇಕ ತರಹದ ಬಾಧೆಗಳು ಉದ್ಭವಿಸುತ್ತಿವೆ ಮತ್ತು ಅವು ಮನುಕುಲದ ಮೇಲೆ ಪರಿಣಾಮ ಬೀರುತ್ತಿವೆ. ಇಂದಿನ ವೃತ್ತಾಂತದಲ್ಲಿ
ಪ್ರವಾಹವು ಅಧಿಕ ವಿಪತ್ತು ತಂದಿರುವುದನ್ನು ನಾವು ಎಲ್ಲೆಡೆ ನೋಡಬಹುದು. ಇತ್ತೀಚಿನ ಅತಿವೃಷ್ಟಿಯಿಂದಾಗಿ ಮನುಕುಲಕ್ಕೆ ಭಾರಿ ಆಘಾತ ಉಂಟಾಗಿದೆ ಮತ್ತು ಆರ್ಥಿಕ ನಷ್ಟವಾಗಿದೆ. ಇದೇ ಅತಿವೃಷ್ಟಿಯು ನಮ್ಮ ಉತ್ಪಾದಕ ಭೂಮಿಯ ಮೇಲೆ ಬೀರುವ ದೀರ್ಘಾವಧಿ ಪರಿಣಾಮವನ್ನು ಅವಲೋಕಿಸಿದರೆ, ಮಣ್ಣಿನ ಮೇಲ್ಪದರದ ಉತ್ಪಾದನೆಯಲ್ಲಿ ಪ್ರಕೃತಿಯು ವಿನಿಯೋಗಿಸುವ ಸಾವಿರ ವರ್ಷದ ಶ್ರಮವನ್ನು ಇದು ಕ್ಷಣಾರ್ಧದಲ್ಲಿ ನಾಶಮಾಡುತ್ತದೆ ಎಂಬ ಸಂಗತಿ ಅರಿವಿಗೆ ಬರುತ್ತದೆ.

ಹಿಂದಿನ ಕಾಲದಲ್ಲೂ ನೀರಿನ ಒಳಹರಿವು ಇದೇ ಪ್ರಮಾಣದಲ್ಲಿತ್ತು, ಆದರೆ ಈ ಪ್ರಮಾಣವನ್ನು ಹೀರಿಕೊಳ್ಳುವ ಸಾಮರ್ಥ್ಯ ಭೂಮಿಗಿತ್ತು. ಇದಕ್ಕೆ ಕಾರಣ, ಅಂದು ಇದ್ದ ಖಾಲಿ ಜಮೀನಿನ ಲಭ್ಯತೆ. ಅಂದರೆ, ಅಧಿಕ ವಿಸ್ತಾರದ ಕೃಷಿಭೂಮಿ, ಮಣ್ಣಿನ ಸಾಂದ್ರತೆ ಮತ್ತು ವ್ಯಾಪ್ತಿಯ ಜತೆಗೆ ವ್ಯವಸ್ಥಿತ ಒಳಚರಂಡಿ ಕಾಲುವೆಗಳು, ತೊರೆಗಳು, ನದಿಗಳು, ಕೊಳಗಳು ಮತ್ತು ಸರೋವರಗಳಂಥ ತೆರೆದ ಜಲಮೂಲಗಳು ಹಾಗೂ ಜೌಗುಪ್ರದೇಶ ಗಳ ಪಕ್ಕದಲ್ಲಿ ಚೆನ್ನಾಗಿ ನಿರ್ವಹಣೆಗೊಂಡ ಶಾಶ್ವತವಾದ ಸಸ್ಯವರ್ಗಗಳ ಪ್ರದೇಶ, ಸುತ್ತಮುತ್ತಲಿನ ಪ್ರದೇಶಗಳನ್ನು ರಕ್ಷಿಸಲು ನಿಯಂತ್ರಿತ ಪ್ರವಾಹ ವಲಯಗಳ ರಚನೆ, ದಿಣ್ಣೆಸಾಲು ಮಾದರಿ ಸಾಗುವಳಿ, ಪ್ರಾಕೃತಿಕ ತಡೆಗೋಡೆ, ಹೊದಿಕೆ ಬೆಳೆಗಳ ಕೃಷಿ ಇವುಗಳ ಅನುಸರಣೆಯಿಂದಾಗಿ ಅಂದು ಮಣ್ಣಿನ ಮತ್ತು ನೀರಿನ ನಿರ್ವಹಣೆಯು ಅತಿವೃಷ್ಟಿಯ ಪ್ರಭಾವವನ್ನು ನೀಗಿಸುತ್ತಿತ್ತು.

ಆದರೆ, ಇಂದು ಅತಿಯಾದ ಯಾಂತ್ರೀಕರಣದ ಕೃಷಿಯಿಂದಾಗಿ ಮೇಲೆ ಉಲ್ಲೇಖಿಸಲಾಗಿರುವ ಪರಿಪಾಠಗಳು ಮಾಯವಾಗುತ್ತಿವೆ. ಬೃಹದಾಕಾರದ ಯಂತ್ರಗಳನ್ನು ಬಳಸಿ ಗ್ರಾಮೀಣ ಅಥವಾ ಕೃಷಿ ಆಧರಿತ ಪ್ರದೇಶದಲ್ಲಿ ಕೈಗೊಳ್ಳುವ ಅಭಿವೃದ್ಧಿ ಕಾರ್ಯಕ್ರಮಗಳು ಅಲ್ಲಿನ ಮಣ್ಣಿನ ಪದರದ ರಚನೆಯನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸುತ್ತಿವೆ. ಇಲ್ಲಿ ಮಣ್ಣಿನ ಹೊದಿಕೆಯಾಗಿರುವ ಸಸ್ಯವರ್ಗಕ್ಕೆ ತೊಂದರೆಯಾಗುವುದರಿಂದ, ಮಣ್ಣಿನ ಸುವ್ಯವಸ್ಥಿತ ಸಂಘಟನೆ ಅಥವಾ ರಚನೆಯನ್ನು ಕೆದಕಿದಂತಾಗಿ ಮಣ್ಣು ಸಡಿಲವಾಗುವುದು. ಮಣ್ಣಿನ ಹೊದಿಕೆಯಂತೆ ದಟ್ಟವಾಗಿ ಬೆಳೆಯುವ ಹುಲ್ಲು, ಪೊದೆವರ್ಗಕ್ಕೆ ಸೇರಿದ ಸಸ್ಯವರ್ಗವನ್ನು, ಕ್ಷಯಿಸ ಷಚ್ಹದಾದ ಹಾಗೂ ಸಡಿಲವಾದ ಹದವಾದ ಮಣ್ಣಿನಲ್ಲಿ ನಾವು ಹೆಚ್ಚಾಗಿ ಕಾಣಬಹುದು. ಇಂಥ ಪ್ರದೇಶ ದಲ್ಲಿ ಮರದ ಬೇರು ಕೂಡ ಮಣ್ಣನ್ನು ಹಿಡಿದಿಟ್ಟುಕೊಂಡಿರುತ್ತದೆ.

ಇಲ್ಲಿ ಮರ ಮತ್ತು ಇತರೆ ಸಸ್ಯಗಳನ್ನು ತೆಗೆದಾಗ ಮಣ್ಣಿನ ಮೇಲ್ಭಾಗವು ಬೋಳಾಗಿ, ಮಳೆ ಅಥವಾ ಹಮಾವಾನದ ಇನ್ನಿತರೆ ಏರಿಳಿತಗಳಿಗೆ ಒಳಗಾಗಿ ಅದು ಸವೆಯುವುದು ಮತ್ತು ಆಳವಾದ ಬೇರುಗಳು ಇಳಿಯದೆ
ಮಣ್ಣಿನ ಮೇಲ್ಪದರವು ಕುಸಿಯುವುದು. ಅತಿವೃಷ್ಟಿಯ ವೇಳೆ ಕೃಷಿ ಆಧರಿತ ಪ್ರದೇಶದಲ್ಲಿ ಅನುಸರಿಸಬಹುದಾದ ಸಾಮಾನ್ಯ ಕ್ರಮಗಳೆಂದರೆ, ಕೃಷಿ ಪ್ರದೇಶಕ್ಕೆ ನೀರಿನ ಒಳಹರಿವನ್ನು ಕಡಿಮೆಯಾಗಿಸುವಂಥ
ಕಾಲುವೆ, ತೊರೆ, ಕೊಳಗಳ ರಚನೆ ಮತ್ತು ಅಗತ್ಯ ನಿರ್ವಹಣೆಯನ್ನು ಪ್ರದೇಶದ ಪರಿಽಯಲ್ಲಿ ಮಾಡುವುದು, ಮರ ಹಾಗೂ ಗಿಡಗಳನ್ನು ಬಳಸಿ ನೈಸರ್ಗಿಕ ತಡೆಗೋಡೆ ನಿರ್ಮಿಸುವುದು, ಮಣ್ಣಿನ ಹೊದಿಕೆಯಂತೆ ಬೆಳೆಯುವ ಬೆಳೆಗಳ ಸಾಗುವಳಿ ಮಾಡುವುದು, ಹೊದಿಕೆ ಬೇಸಾಯ ಅನುಸರಿಸುವುದು. ಜತೆಗೆ, ನೀರು/ಮಣ್ಣು ಹರಿಯುವ ದಿಕ್ಕಿಗೆ ವಿರುದ್ಧ ಸಾಲು ಮಾಡುವುದು, ಬೆಳೆ ಪರಿವರ್ತನೆ, ಪ್ರವಾಹ ವಲಯಗಳ ನಿರ್ಮಾಣ, ಮಣ್ಣಿನ ಆರೋಗ್ಯದ ನಿರ್ವಹಣೆ, ಅತಿವೃಷ್ಟಿಯನ್ನು ಸಹಿಸುವ ಲಕ್ಷಣವಿರುವ ಬೆಳೆ ಅಥವಾ ತಳಿಗಳನ್ನು ಬೆಳೆಯುವುದು, ತೀವ್ರವಾದ ಪರಿಸ್ಥಿತಿಯಲ್ಲಿ ತುರ್ತು ಕ್ರಮಗಳನ್ನು ಕೈಗೊಳ್ಳುವುದು, ಬೆಳೆವಿಮೆ ಮಾಡಿಸು ವುದು, ಉಸ್ತುವಾರಿ ಮಾಡುತ್ತಿರುವುದು ಹಾಗೂ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ.

ಇವೆಲ್ಲಕ್ಕಿಂತ ಮುಖ್ಯವಾಗಿ, ಮಳೆಯ ನಂತರ ಮಣ್ಣಿನ ಹಾಗೂ ಬೆಳೆಯ ಆರೈಕೆ ಬಹುಮುಖ್ಯ. ಆದಷ್ಟು, ನೈಸರ್ಗಿಕವಾಗಿ ನೀರು ಹರಿಯುವ ಜಾಗದಲ್ಲಿ ಯಾವುದೇ ಮಾರ್ಪಾಡು ಮಾಡದೇ ನೀರು ಹರಿದುಹೋಗಲು
ಬಿಡಬೇಕು. ಜತೆಗೆ ಹರಿಯುವ ನೀರಿನ ಸಂಗ್ರಹವನ್ನು ಕೃಷಿಭೂಮಿಯ ಇಳಿಜಾರಿಗೆ ಅನುಕ್ರಮವಾಗಿ ಮಾಡಿದ್ದು ಮಳೆನೀರು ಕೊಯ್ಲು ಮಾಡಬೇಕು. ಹೆಚ್ಚು ಮಳೆ ಬರುವ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳಲ್ಲಿ ಮಣ್ಣಿನ ಸಂರಕ್ಷಣೆಗೆ ಭೂಮಿಯ ರೂಪ ವಿಜ್ಞಾನದಲ್ಲಿ ಕೆಲವು ಬದಲಾವಣೆಯನ್ನು ಹಿಂದಿನಿಂದಲೂ ಅನುಸರಿಸಲಾಗುತ್ತಿದೆ. ಉದಾಹರಣೆಗೆ, ಕಾಫಿ ತೋಟದಲ್ಲಿ ಇಂಗು ಗುಂಡಿ, ಎತ್ತರದ ಮಡಿಗಳಲ್ಲಿ ಶುಂಠಿ ಬೆಳೆಯುವುದು, ಇಳಿಜಾರು ಪ್ರದೇಶದಲ್ಲಿ ಅಡಕೆಯೊಂದಿಗೆ ಬಾಳೆಯ ಅಂತರಬೆಳೆ ಬೆಳೆಯುವುದು ಮುಂತಾದವು.

ಪ್ರವಾಹದ ಪರಿಸ್ಥಿತಿಯನ್ನು ತಡೆಯಲು ಮಣ್ಣಿನ ಆರೋಗ್ಯವು ಚೆನ್ನಾಗಿರಬೇಕೆಂದರೆ ಮಣ್ಣಿನಲ್ಲಿ ಸಾವಯವದ ಅಂಶ ಮತ್ತು ಸಾವಯವ ಇಂಗಾಲ ಹೆಚ್ಚಿರಬೇಕು, ಮಣ್ಣು ಅತಿಯಾಗಿ ಸಚ್ಛಿದ್ರವಾಗಿರಬಾರದು. ಭೂಮಿಯಲ್ಲಿ ಮರಳು ಹೆಚ್ಚಾಗಿದ್ದರೆ ಕೆರೆಗೋಡು ಅಥವಾ ಸಾವಯವ ಅಂಶವಿರುವ ಪದಾರ್ಥವನ್ನು ಹಾಕಬೇಕು. ಮಣ್ಣು ಸವಕಳಿ ಆಗದಂತೆ ಬದುವನ್ನು ಹಾಗೂ ನೀರು ಹರಿದು ಕೊಚ್ಚಿಹೋಗುವ ಜಾಗದಲ್ಲಿ ಹುಲ್ಲನ್ನು ಬೆಳೆಯಬೇಕು. ಮಣ್ಣಿನ ಮೇಲ್ಪದರವನ್ನು ಆದಷ್ಟು ಸಂರಕ್ಷಿಸಬೇಕು. ಇಂಥ ಪ್ರದೇಶದಲ್ಲಿ ಜಲ್ಲಿ ಬೇರು ಚೆನ್ನಾಗಿ ಬಿಡುವ ತಳಿಗಳಿಗೆ ಆದ್ಯತೆ ನೀಡಬೇಕು.

ಮಳೆಯ ನಂತರ ಅಥವಾ ಬಿಟ್ಟುಬಿಟ್ಟು ಮಳೆ ಬರುವ ಪ್ರದೇಶದಲ್ಲಿ ಕೆಲವು ಕೀಟ ಹಾಗೂ ರೋಗಗಳ ಬಾಧೆ ಅಧಿಕ. ಅತಿಯಾದ ಸಾಂದ್ರತೆಯಿಂದ ಕಂಬಳಿಹುಳು, ಕೆಲವು ರಸಹೀರುವ ಕೀಟ ಮತ್ತು ಶಿಲೀಂಧ್ರದ ಬಾಧೆ ಹೆಚ್ಚಾಗಿ ಕಂಡುಬರಬಹುದು. ಇಂಥ ಪ್ರದೇಶದಲ್ಲಿ ಶಿಲೀಂಧ್ರದಿಂದ ಹೆಚ್ಚಾಗಿ ಬರುವ ರೋಗಗಳೆಂದರೆ ಕೊಳೆರೋಗ, ನೆಟೆರೋಗ, ಚುಕ್ಕೆರೋಗ, ಬೆಂಕಿರೋಗ ಹಾಗೂ ಬೂಜು ಅಥವಾ ಕೇದಿಗೆರೋಗ. ಜೈವಿಕವಾಗಿ ಅಥವಾ ರಾಸಾಯನಿಕವಾಗಿ ಸೂಕ್ತ ಪದಾರ್ಥವನ್ನು ಬಳಸಿ ಈ ರೋಗ ಮತ್ತು ಕೀಟಗಳನ್ನು ನಿರ್ವಹಣೆ ಮಾಡಬಹುದು. ಇದರೊಂದಿಗೆ ಸಾರಜನಕಯುಕ್ತ ಗೊಬ್ಬರದ ಬಳಕೆಯನ್ನು ಕಡಿಮೆ ಮಾಡಬೇಕು. ಜತೆಗೆ ರಂಜಕ ಮತ್ತು ಪೊಟ್ಯಾಷ್ ಅನ್ನು ಶಿಫಾರಿತ ಪ್ರಮಾಣದಲ್ಲಿ ನೀಡುವುದರಿಂದ, ಬೇರು ಉತ್ತಮವಾಗಿ ಬೆಳೆಯುವುದರೊಂದಿಗೆ ರೋಗ ನಿರೋಧಕತೆಯನ್ನು ಹೆಚ್ಚಿಸುತ್ತದೆ.

(ಲೇಖಕಿ ಸಹ ಪ್ರಾಧ್ಯಾಪಕಿ)